ಬರುತಾರೆಂದರೆ ಬೇಂಡಿನವರು
ಎಲ್ಲರೆದೆಯು ಢುಂ ಢುಂ
ಮದುವೆಯಾದರು ಮುಂಜಿಯಾದರು
ಬಾರಿಸುವರು ಢಂ ಢಂ

ಜರಿ ರುಮಾಲು ತಲೆಯ ಮೇಲೆ
ಗರಿ ಗರಿಯ ತುರಾಯಿ
ನೋಡುತಾರೆ ನೋಡುವವರು
ಬಿಟ್ಟು ಬಾಯಿ ಬಾಯಿ

ಜಗ ಜಗಿಸುವ ಕೆಂಪು ಕೋಟು
ಹಿತ್ತಾಳಿಯ ಗುಂಡಿ
ಮಹಾರಾಜರಂಥದರ
ಇನ್ನೆಲ್ಲಿ ಕಂಡಿ

ಮಂಡಿ ಹರಿದ ಪ್ಯಾಂಟು ನಿಜ
ಕಾಲಿಗಿಲ್ಲ ಚಪ್ಪಲಿ
ಆದರೇನು ಸದ್ದಿನ ಮಜ
ಯಾರು ಬಿಡಲಿ ಒಪ್ಪಲಿ

ಬಂದು ಮನೆಗೆ ಬಂದು ಬೀದಿಗೆ
ಬೆಳಗಿನಿಂದಲು ಹೀಗೆ
ಊದುತಾರೆ ಹೊಡೆಯುತಾರೆ
ಆಕಾಶವೆ ಹರಿದ ಹಾಗೆ!

ಬರುತಾರೆಂದರೆ ಬೇಂಡಿನವರು
*****

ತಿರುಮಲೇಶ್ ಕೆ ವಿ
Latest posts by ತಿರುಮಲೇಶ್ ಕೆ ವಿ (see all)