ನವಿಲುಗರಿ – ೧೮

ನವಿಲುಗರಿ – ೧೮

ಪಾಳೇಗಾರರ ಮನೆಯಲ್ಲಿ ಉಗ್ರಪ್ಪ ಮೈಲಾರಿಗೆ ಮೈಯೆಲ್ಲಾ ಪುಳುಕ. ‘ಹತ್ತು ನಿಮಿಷ ಆಗೋಯ್ತಣ್ಣಾ. ಇನ್ನೂ ರಂಗ ಬದಕಿರ್ತಾನೆ ಆಂತಿಯಾ?’ ಮೈಲಾರಿಯ ಮನ ಚೆಂಡಿನಂತೆ ಪುಟಿಯಿತು.

‘ನೋ ಚಾನ್ಸ್ ಬ್ರದರ್…. ಅವನು ಯಾವಾಗಲೋ ಪಂಜರದಲ್ಲೇ ಬೈಕ್‌ನ ಅಡಿಬಿದ್ದು ಸತ್ತಿರುತ್ತಾನೆ. ನಮಗೆ ಸುದ್ದಿ ಬರಬೇಕಷ್ಟೆ’ ಉಗ್ರಪ್ಪನ ಕುಶಾಲು.

‘ರಂಗ ಸತ್ತರೆ ನಮ್ಮ ಎರಡು ಲಕ್ಷ ನಮಗೇ ಸಿಗುತ್ತೆ ಅಲ್ವೆ?’

‘ಇಲ್ಲ ಕಣ್ಲಾ ಒಂದು ಲಕ್ಷ ಕೈ ಬಿಡ್ತದೆ. ಅವನ ಅಣ್ಣಗಳು ಇದಾರಲ್ಲ’

‘ಥುತ್… ಅಣ್ಣಂದಿರಾ ಅವರು ರಾಕ್ಷಸರು. ಅವರಿಗ್ಯಾಕೆ ಲಕ್ಷ ಕೊಡೋದು? ಸೈಟ್ ಕೊಟ್ಟಿದ್ದೀವಲ್ಲ ಅಂತ ಜಾಡಿಸಿ ಒದ್ದು ಓಡಿಸಿದರಾಯ್ತಪ್ಪಾ’ ನಕ್ಕ ಮೈಲಾರಿ. ಚಪ್ಪಾಳೆ ಶಬ್ದ ಕೇಳಿ ಸೋದರರಿಬ್ಬರು ಗಕ್ಕನೆ ತಿರುಗಿದರೆ ಚಪ್ಪಾಳೆ ತಟ್ಟುತ್ತಾ ಮೆಟ್ಟಿಲಿಳಿದು ಬರುತ್ತಿದ್ದಾರೆ ಭರಮಪ್ಪ ‘ಭೇಷ್ ಪಾಳೇಗಾರರ ಮನೆತನದಲ್ಲಿ ಹುಟ್ಟಿದ್ದಕ್ಕೆ ಸಾರ್ಥಕವಾತು ಕಣ್ರಲಾ… ಥೂ ನಿಮ್ಮ ಯೋಗ್ಯತ್ಗೆ’ ಕ್ಯಾಕರಿಸಿ ಉಗಿದರು ಭರಮಪ್ಪ.

ಅಷ್ಟರಲ್ಲಿ ಆಳುಕಾಳು ಓಡಿಬಂದರು ‘ಧಣಿ, ರಂಗ ಗೆದ್ದೆಬಿಟ್ಟ ಧಣೀರಾ…’ ಒಟ್ಟಿಗೆ ಹೇಳಿದಾಗ ಆ ಗದ್ದಲಕ್ಕೆ ಒಳಗಿದ್ದ ಹೆಂಗಸರೂ ಓಡಿಬಂದರು. ಉಗ್ರಪ್ಪ ಮೈಲಾರಿ ಉಪ್ಪುತಿಂದವರಂತೆ ಮುಖ ಕೆಡಿಸಿಕೊಂಡಾಗ ಭರಮಪ್ಪ ಹಿಗ್ಗಿನಿಂದ ನಕ್ಕರು. ‘ಅವನು ಕಣ್ರಲಾ ನಿಜವಾದ ಪಾಳೇಗಾರ’ ಎಂಬ ಪ್ರಶಂಸೆ ಬೇರೆ.

‘ಆದರೆ ಒಂದು ಅನ್ಯಾಯ ನಡೆದೋತು ಒಡೆಯ’ ಧಡಿಯನೊಬ್ಬ ಮುಲುಕಿದ.

‘ಏನಾತಲೆ ಬೇವಾರ್ಸಿ ಬೊಗಳು’ ಹಲ್ಲು ಕಡಿದ ಉಗ್ರಪ್ಪ.

‘ಆ ಹುಡುಗ ಗೆಲ್ಲೋದೇನೋ ಗೆದ್ದ. ಆದರೆ ಲಾಸ್ಟ್ನಾಗೆ ಬೈಕಿಂದು ಬ್ರೇಕ್ ಐತಲ್ಲ ಅದು ಫೇಲೂರಾಗಿ ನಿಲ್ಲಿಸೋಕಾಗ್ದೆ ಪಲ್ಟಿ ಪಲ್ಟಿ ಹೊಡೆದು ಬಿದ್ದುಬಿಟ್ಟ ಧಣೇರ. ಎಲ್ಲರೂ ಅವನ್ನ ಆಸ್ಪತ್ರೆಗೆ ಹೊಯ್ದರು. ನೋಡಿದರೆ ಉಳಿಯಂಗೆ ಕಾಣಾಕಿಲ್ಲ’ ಧಡಿಯ ನೊಂದುಕೊಂಡೇ ಹೇಳುವಾಗ ನಗುವ ಸರದಿ ಉಗ್ರಪ್ಪನದು. ಅಹಂನಿಂದ ತಂದೆಯತ್ತ ಕೆಣಕು ನೋಟ ಬೀರಿದ. ‘ನಾವು ಇಟ್ಟ ಬಾಣ ಎಂದೂ ಗುರಿ ತಪ್ಪೋದಿಲ್ಲಪ್ಪಾ, ಅದೇ ಪಾಳೆಗಾರರ ಅಸಲಿ ತಾಕತ್ತು ಮತ್ತೆ ನಕ್ಕ. ಭರಮಪ್ಪನವರ ಹೃದಯ ರಂಗನಿಗಾಗಿ ಮಿಡಿಯಿತು. ಹೆಣ್ಣು ಮಕ್ಕಳೂ ಈಗ ಸಿಡಿಲಿಗೆ ಬೆಚ್ಚಿದ ಗುಬ್ಬಚ್ಚಿಗಳು. ವಿಷಯ ಚಿನ್ನುವಿಗೆ ತಿಳಿದರೇನು ಗತಿ ಎಂದು ದಿಗಿಲುಬಿದ್ದರು. ‘ಚಿನ್ನಿ, ಚಿನ್ನು ಕೋಣೆಗೆ ಈಗ್ಲೆ ಬೀಗ ಜಡಿ’ ಹಿಗ್ಗು ಹಮ್ಮು ಕ್ರೌರ್ಯ ಬೆರೆತ ಗಡಸು ದನಿ ಮೊಳಗಿತು. ಕೆಂಚಮ್ಮ ಓಡಿದಳು. ಓಡಿದಷ್ಟೇ ವೇಗವಾಗಿ ಹಿಂದಿರುಗಿಬಂದಳು. ‘ಚಿನ್ನು ಕೋಣೆನಾಗಿಲ್ಲ’ ಎಂಬ ವಾರ್ತೆಯನ್ನು ಬಿತ್ತರಿಸಿದಳು. ‘ಏನಂದೆ? ಎಲ್ಲಿ ಹೋದ್ಳು ಅವಳು?’ ಅರಚಿದ ಮೈಲಾರಿ ಹೆಂಡತಿಯ ಕೆನ್ನೆಗೆ ರಾಚಿದ. ‘ಎಲ್ಲಿ ಕಳಿಸಿದೆಯೆ ಅವಳನ್ನಾ?… ಎಲ್ಲಾ ನಿಂದೇ ಕಿತಾಪತಿ ಕಣೆ’ ಮತ್ತೆ ಮುನ್ನುಗಿದ. ಉಗ್ರಪ್ಪ ತಡೆದ. ‘ಎಲ್ಲಿ ಹೋಗಿರ್ತಾಳೆ… ನಮ್ಮ ಕಣ್ಣು ತಪ್ಪಿಸಿ ಎಕ್ಸಿಬಿಶನ್ಗೆ ಹೋಗಿದ್ದಾಳು. ಅವನ್ನ ಆಸ್ಪತ್ರೆಗೆ ಹೊಯ್ದರಲ್ಲ… ಅಲ್ಲಿದ್ದಾಳು. ಯೋಯ್ ಈಗ್ಗೆ ಹೋಗ್ರಲಾ… ಹೋಗ್ರಿ… ಅಲ್ಲಿದ್ದರೆ ಎಳ್ಕೊಂಡು ಬನ್ನಿ. ಹುಟ್ಟಿದ ದಿನ ಕಾಣಿಸಿಬಿಡ್ತೀನಿ ಅವಳಾ’ ಎಂದು ಆಳುಗಳಿಗೆ ಅಪ್ಪಣಿಸಿದ. ಅವರು ಕಂಪಿಸುತ್ತಲೇ ಅಲ್ಲಿಂದ ಕಂಬಿಕಿತ್ತರು.

ಹೋದವರು ಬರುವವರೆಗೂ ಉಗ್ರಪ್ಪ, ಮೈಲಾರಿ ಚಡಪಡಿಸಿದ್ದನ್ನು ಕಂಡ ಭರಮಪ್ಪ ಅಂದರು. ‘ಮಾಡಬಾರದ್ದು ಮಾಡಿದರೆ ಆಗಬಾರದ್ದು ಆಗುತ್ತೆ’ ವಿಷಾದದ ನಗೆ ಬೀರಿದರು.

‘ಏನೂ ಅಗಲ್ಲ. ಅವನು ಸಾಯ್ತಾ ಮಲಗಿದಾನೆ. ಇವಳನ್ನ ಎಳ್ಕೊಂಡು ಬಂದು ಹದ್ಬಸ್ತ್‌ನಲ್ಲಿ ಇಟ್ಟುಕೊಂಡ್ರಾಯ್ತು. ಅವನು ಸತ್ತ ಸುದ್ದಿ ಕೇಳಿ ನಾಕುದಿನ ಅತ್ತುಕರೆದು ರಂಪ ಮಾಡ್ತಾಳೆ. ಎಷ್ಟು ದಿನ ಅತ್ತಾಳು ಅನ್ನ ನೀರು ಬಿಟ್ಟಾಳು ವಯಸ್ಸು ಕೇಳ್ತದಾ? ಕಾಲ ಅಂಬೋದು ಎಲ್ಲಾನೂ ಮರಸ್ತೇತಿ. ಆಮೇಲೆ ನಮ್ಮ ಯೋಗ್ಯತೆಗೆ ತಕ್ಕ ಕಡೆ ಲಗ್ನ ಮಾಡಿದ್ರಾತು…’ ಠೇಂಕರಿಸಿದ ಉಗ್ರಪ್ಪ. ಹೋದವರು ಬರುವವರೆಗೂ ಯಾರಿಗೂ ಸಮಾಧಾನವಿಲ್ಲ. ಯಾರ ಬಾಯಲ್ಲೂ ಮಾತೇ ಹೊರಡದು. ಹೋದವರು ಬಂದರು. ತಂದ ಸುದ್ದಿಯಿಂದಾಗಿ ಮತ್ತಷ್ಟು ಕಂಗೆಡುವಂತಾಯಿತು ಪಾಳೇಗಾರರಿಗೆ. ಚಿನ್ನು ಆಸ್ಪತ್ರೆಯಲ್ಲಿ ಇಲ್ಲ. ಎಕ್ಸಿಬಿಶನ್ಗೂ ಬಂದಿಲ್ಲ ಬಂದಿದ್ದರೆ ನಮ್ಮ ಕಣ್ಣು ತಪ್ಪಿಸೋಕೆ ಸಾಧ್ಯವೆ ಎಂದಾಡಿ ಉಗ್ರಪ್ಪನಿಂದ ಏಟು ತಿಂದರು. ಹಾಗಾದರೆ ಚಿನ್ನು ಎಲ್ಲಿ ಹೋದಳು? ಮನೆಯವರ ಎದೆ ಬಡಿತ ಲಯತಪ್ಪಿತು.

‘ರಂಗ ಹೆಂಗಿದಾನ್ರಲೆ?’ ಕೇಳಿದವರು ಭರಮಪ್ಪ.

‘ಅವರವರ ಗದ್ದಲದಾಗೆ ಅವರಿದ್ದರು ಒಡೆಯ. ಅವನು ಹೆಂಗವೆ ಅಂತ ನಾವಾರಾ ಯಾಕೆ ಕೇಳೋಕೆ ಹೋಗೋನ್ರಿ, ಬಾಯ್ಯಾಗೆ ಎಂತದೋ ಪೈಪ್ಗಳ ಏರಿಸ್ತಾ ಇದ್ದರು. ಆ ಹುಡುಗನ ತಾಯಿ ತಂಗಿ ಇದ್ದರು… ಅಣ್ಣಗಳೂ ಕಂಡರು. ಹಂಗೆ ಪೈಲ್ವಾನ್ ಸಾಬು, ಮೇಷ್ಟ್ರು ಇದ್ದಂಗಿತ್ರಿ’ ವರದಿ ಒಪ್ಪಿಸಿದನೊಬ್ಬ, ಭರಮಪ್ಪನವರಿಗೂ ಈಗ ಸಣ್ಣಗೆ ನಡುಕ.

‘ಹಂಗಾರೆ ನಮ್ಮ ಕೂಸು ಎಲ್ಲಿ ಹೋತಲೆ ಉಗ್ರಾ?’ ಅರಚಿದರು.

‘ನಮಗಾರ ಏನ್ ಗೊತೈತೆ ನಿನ್ಗೆ ಹೇಳೋಕೆ’ ಸಿಡುಕಿದ ಉಗ್ರಪ್ಪ

‘ನಿಂದೆ ಕಣೆ ಇದೆಲ್ಲಾ ತಿಟಾವಣೆ… ಎಲ್ಲಿಗೇ ಕಳಿಸ್ದೆ?’ ಮತ್ತೆ ಕೆಂಚಮ್ಮನಿಗೆ ರಾಚಿದ ಮೈಲಾರಿ. ‘ಅಯ್ಯೋ ನಿನ್ನ ಕೈ ಸೇದಿಹೋಗಾ… ರಂಗ ಹಾರಿಸಿಕೊಂಡು ಹೋದ ಅನ್ನೋಕೆ ಅವನೇ ಸಾಯ್ತಾ ಬಿದ್ದಿದಾನೆ ಅಂತಿರಾ. ಅವಳು ಇನ್ನೆಲ್ಲಿಗೆ ಹೋದಾಳ್ರಿ? ನಿಜಕ್ಕೂ ಕೆಂಚಮ್ಮ ತಬ್ಬಿಬ್ಬುಗೊಂಡಳು. ಚಿನ್ನಮ್ಮನದೀಗ ಕಣ್ಣೀರಿಡುವ ಸರದಿ.

‘ಹುಡುಗಿ ಎಲ್ಲೋಗಿದ್ದಿತಪ್ಪಾ?’ ಎಂಬ ಪ್ರಶ್ನೆಗೆ ಯಾರಲ್ಲೂ ಉತ್ತರವಿರಲಿಲ್ಲ.’

ರಂಗನಿಗೆ ಸಿಕ್ಕಾಪಟ್ಟೆ ಏಟು ಬಿದ್ದಿದ್ದಿತಾದರೂ ಮೂಳೆ ಮುರಿತವಾಗಿಲ್ಲದ್ದು ಸಮಾಧಾನ ತಂದಿತ್ತು. ಹೆಲ್ಮೆಟ್ ಕಳಚಿ ಹೋಗಿದ್ದರಿಂದ ತಲೆಗೆ ಒಂದಿಷ್ಟು ಏಟಾಗಿತ್ತು. ಅವನಿಗೆ ಅದೆಲ್ಲಾ ಅಂತಹ ನೋವೇ ಅಲ್ಲ. ಎರಡು ಲಕ್ಷ ಗೆದ್ದ ಆ ಖುಷಿಯಲ್ಲಿ ಅವನಿಗೆಲ್ಲಿಯ ನೋವು, ಸೋಹನಲಾಲ ಕೊಟ್ಟ ಎರಡು ಲಕ್ಷ ತಾಯಿಯ ಮಡಿಲಿಗೆ ಹಾಕಿದ. ‘ನನ್ನ ತಂಗಿ ಮದುವೆನಾ ಚೆನ್ನಾಗಿ ಮಾಡೋಣಮ್ಮ’ ಅಂದು ನೋವಿನಲ್ಲೂ ನಕ್ಕೆ. ನಡೆದ ಸ್ಪರ್ಧೆ ನೋಡಲೆಂದು ಬಂದ ಶಂಕರನೂ ಆಸ್ಪತ್ರೆಗೆ ಬಂದಿದ್ದ. ಅವನನ್ನು ಅಲ್ಲಿ ಕಂಡಾಗ ರಂಗ ನೋವನ್ನು ಮರೆತುಹೋದ. ‘ವರಮಹಾಶಯರು ಇಲ್ಲೇ ಇದಾರೆ!’ ಎಂದಾಗಲೇ ಎಲ್ಲರಿಗೂ ಅವನತ್ತ ಗಮನ. ಕಾವೇರಿಯತ್ತ ಅವನು ನೋಡಿದಾಗ ಅವಳು ನಿಂತಲ್ಲೇ ನಾಚಿ ನೀರಾದಳು. ‘ತಂಗಿ ಮದುವೆ ಚೆನ್ನಾಗಿ ಮಾಡೊಣಯ್ಯಾ… ನೀನು ಬೇಗ ಗುಣವಾಗು’ ಅಂತ ಮಾತಿಗೆ ಮಾತು ಸೇರಿಸಿದ ಸೋದರರ ಮುಖದಲ್ಲೀಗ ನೋವು ನಾಚಿಕೆ ಪಶ್ಚಾತ್ತಾಪಭಾವ ಉಂಟಾದುದನ್ನು ಮಾತ್ರ ಯಾರೂ ವಿಶೇಷವಾಗಿ ಗಮನಿಸಲೇ ಇಲ್ಲ. ‘ನಥಿಂಗ್ ಟು ವರಿ, ರಂಗ ಬೇಗ ಚೇತರಿಸ್ಕೋತಾರೆ. ಅವರಿಗೀಗ ರೆಸ್ಟ್ ಅಗತ್ಯ ಇದೆ. ಸುಮ್ಮೆ ಡಿಸ್ಟರ್ಬ್ ಮಾಡ್ಬೇಡಿ…. ಎಲ್ಲಾ ಪ್ಲೀಸ್ ಹೋಗಿ…’ ಡಾಕ್ಟರ್ ರಿಕ್ವೆಸ್ಟ್ ಮಾಡಿಕೊಂಡ.

ಮಧ್ಯರಾತ್ರಿಯಾಯಿತು ಬೆಳಗೂ ಆಯಿತು ಪಾಳೇಗಾರರ ಮನೆಯಲ್ಲಿ ಯಾರಿಗೂ ನಿದ್ರೆಯಿಲ್ಲ. ಎಲ್ಲಾ ಬಸವಳಿದು ಕುಂತಲ್ಲೇ ಕುಂತಿದ್ದರು. ಆಳು ಕಾಳುಗಳಿಗೂ ಸಮಾಧಾನವಿಲ್ಲ. ಚಿನ್ನು ಎಲ್ಲಿ? ಎಲ್ಲಿಗೆ ಹೋದಳು? ಜೀವಕ್ಕೇನಾದರೂ ಮಾಡಿಕೊಂಡಳೆ? ಕೊನೆಗೆ ಎಲ್ಲರ ಯೋಚನೆಯ ದಾರಿಗಳು ಬಂದು ನಿಂತಿದ್ದು ಅಲ್ಲಿಗೇ, ಭರಮಪ್ಪನವರಿಗೆ ತಮ್ಮಿಬ್ಬರ ಮಕ್ಕಳನ್ನು ಸಿಗಿದು ತೋರಣಕಟ್ಟುವಷ್ಟು ಕೋಪ. ಆದರೆ ಅವರ ಮುಖದಲ್ಲೂ ಈಗ ಮೊದಲಿನ ಮೊಗರು ಪೊಗರೂ ಬತ್ತಿ ಹೋಗಿತ್ತು. ‘ತಿಮ್ಮ ಸಾಯ್ಲಿ ಸಾಯ್ಲಿ ಅಂದ್ರೆ ಬೊಮ್ಮ ಸತ್ತನಂತೆ’ ಲೋಕಾರೂಢಿ ಮಾತಾಡಿದ ಭರಮಪ್ಪ ತಕ್ಷಣವೆ, ‘ಹಂಗಾಗದಿರಲಪ್ಪ ತಂದೆ’ ಎಂದು ಮಂತ್ರಾಲಯ ಗುರುವರರ ಪೋಟೋದತ್ತ ಕಣ್ಣು ನೆಟ್ಟರು.

‘ಅಯ್ಯಯ್ಯೋ ಬೆಳಗಾದ್ರೂ ನನ್ನ ಮಗು ಬರಲಿಲ್ವೆ. ನನ್ನ ಮಗೀನ ಇವರೇ ಕೊಂದುಬಿಟ್ಟರವ್ವ’ ಎಂದು ಬೋರೆಂದು ಅಳುವ ಚಿನ್ನಮ್ಮನನ್ನು ಸಂತೈಸುವ ತಾಳ್ಮೆ ತಾಕತ್ತು ಯಾರಲ್ಲೂ ಇರಲಿಲ್ಲ. ಎಲ್ಲರಲ್ಲೂ ಅಪರಾಧೀಭಾವ. ಅಷ್ಟರಲ್ಲಿ ಫೋನ್ ರಿಂಗ್ ಆಯಿತು. ಎದ್ದು ಹೋಗಿ ಸರಕ್ಕನೆ ಎತ್ತಿಕೊಂಡದ್ದು ಉಗ್ರಪ್ಪ. ಆ ಕಡೆಯಿಂದ ದುರ್ಗಸಿಂಹ ಮಾತನಾಡುತ್ತಿದ್ದ.

‘ಚಿನ್ನು ಸಿಕ್ಕಳೆ ಉಗ್ರಪ್ಪಾ…? ಎಲ್ಲಿದಾಳೆ ಗೊತ್ತಾಯಿತೆ?’

‘ಇಲ್ಲ ದುರ್ಗಣ್ಣ. ಅವಳು ನಿನ್ನೆ ರಾತ್ರಿಯಿಂದ ಕಾಣ್ತಾಯಿಲ್ಲ. ಈ ವಿಷಯ ನಿಮಗೆ ಹೆಂಗೆ ಗೊತ್ತಾಯಿತಣ್ಣಾ?’ ಮಾತಲ್ಲಿ ನಯವಿನಯ ತೋರಿದ.

‘ಹುಂ…. ಅವಳನ್ನ ಯಾರಾದ್ರೂ ಕಿಡ್ನಾಪ್ ಮಾಡಿರಬಹುದೆ?’ ಸಿಂಹನೇ ಅನುಮಾನ ಮುಂದಿಟ್ಟ.

‘ಮಾಡೋ ಹಲ್ಕಟ್ ನನ್ನಗ ಇದ್ದರೆ ಅವನು ರಂಗ. ಅವನೇ ಆಸ್ಪತ್ರೆ ವಾರ್ಡ್‍ನಾಗೆ ಅಂಗಾತ್ಲೆ ಬಿದ್ಕೊಂಡವ್ನೆ… ನಮ್ಮ ವಿರೋಧಿ ಅಂದ್ರೆ ಅವನೆಯಾ’

‘ಇನ್ನು ಯಾರೂ ವಿರೊಧಿಗಳೇ ಇಲ್ಲವೆ ನಿಮ್ಗೆ?’ ಆ ಕಡೆಯಿಂದ ನಕ್ಕ ಸಿಂಹ ಉಗ್ರಪ್ಪ ಕ್ಷಣ ಯೋಚಿಸಿದವನೆ ಬೆಚ್ಚಿಬಿದ್ದ ‘ನೀವು ಏನಾದ್ರೂ…?’ ಎಂದು ತಡವರಿಸಿದ. ‘ಕರೆಕ್ಟ್… ಅವಳು ನಿನ್ನ ಚಿನ್ನು ನಮ್ಮ ಹತ್ತಿರ ಇದ್ದಾಳೆ…’

‘ಅದು ಹೆಂಗಯ್ಯ ಸಾಧ್ಯ?’ ಸೀಳುದನಿ ಹೊರಡಿಸಿದ ಉಗ್ರಪ್ಪ.

‘ಮಫ್ ನನ್ಮಕ್ಳು ನೀವು. ನಿಮ್ಮ ಮಗಳು ಅಮರಪ್ರೇಮಿಯಲ್ವೆ, ತನ್ನ ಪ್ರೇಮಿ ಡೇಂಜರಸ್ ಗೇಮ್ ಆಡ್ತಾ ಇದಾನೆ ಅಂದಾಗ ನೀವು ಕೂಡಿ ಹಾಕಿಬಿಟ್ಟರೆ ಸುಮ್ಮೆ ಇರ್ತಾಳಾ? ಸುಮ್ಮೆ ಇದ್ದರೆ ಅವಳು ಅದ್ಹೆಂಗೆ ಪ್ರೇಮಿ ಅನ್ನಿಸ್ಕೋತಾಳೋ ಹಳ್ಳಿ ಗಮಾರ್, ನಿನ್ನ ಪಂಜರದಿಂದ ತಪ್ಪಿಸಿಕೊಂಡು ಮೃತ್ಯುಪಂಜರದ ಆಟ ನೋಡ್ಲಿಕ್ಕೆ ಕತ್ತಲಲ್ಲಿ ಬರ್ತಾ‌ಇದ್ಳು, ಮದುವೆಯಾದ ಹೆಣ್ಣು ಹೊಸ್ತಿಲು ದಾಟಿದರೆ ಗಂಡನಮನೆ. ಆಗದವಳು ದಾಟಿದರೆ ಅವಳಿಗೆ ನಾನಾ ನಮೂನಿ ಮನೆ… ಕಡೆಗೆ ಸೂಳಿಮನಿ’ ಗಹಗಹಿಸಿ ಥೇಟ್ ವಿಲನ್ ಟೈಪ್ ನಕ್ಕ ರಾಜಕಾರಣಿ.

‘ಅಲೆ… ದುರ್ಗಸಿಂಹ’ ಸೂರು ಹಾರಿ ಹೋಗುವಂತೆ ಉಗ್ರಪ್ಪ ಅರಚಿದಾಗ ಅಲ್ಲಿದ್ದವರಿಗೆಲ್ಲಾ ವಿಷಯದ ಗಂಭೀರತೆಯ ಅರಿವಾಗಿತ್ತು.

‘ಚೀರಬೇಡಲೆ ಮಗನೆ. ಇನ್ನೂ ಸೂಳಿಮನಿಗೆ ಆಕೀನ ಮುಟ್ಟಿಸಿಲ್ಲ. ಪಾಪ ನಮ್ಮಲ್ಲೇ ಅದಾಳೆ ಕಣಯ್ಯ. ಗಲ್ಲಿ ಮೀಸೆ ತೀಡಿದಂಗಲ್ಲಲೆ ಪಾಳೇಗಾರ. ಮಗಳು ಬೇಕಾ? ನೀನು ನಿನ್ನ ತಮ್ಮ ಮೈಲಾರಿ ಇಬ್ಬರೆ. ಇಬ್ಬರೆ ಬರ್‍ಬೇಕು… ಪೋಲೀಸು ಗಿಲೀಸು ಅಂತ ಹೋದರೆ ನಡೆಯಂಗಿಲ್ಲ. ನಮ್ಮ ತಂಟೆ ಯಾವ ಖಾಕಿನೂ ಉಸಿರೆತ್ತಂಗಿಲ್ಲ ಅದು ನಿನ್ಗೂ ಗೊತ್ತಿದೆ’ ಹರಿತವಾಗಂದ ದುರ್ಗಸಿಂಹ.

‘ಸರಿಸರಿ… ಎಷ್ಟು ದುಡ್ಡು ತರಬೇಕು. ಎಲ್ಲಿಗೆ ಬರಬೇಕಪ್ಪಾ?’ ಸೋತುಹೋಗಿದ್ದ ಉಗ್ರಪ್ಪ.

‘ದುಡ್ಡು… ನಾವೇ ಕೋಡ್ತೀವಲೆ ಉಗ್ರಿ… ನೀನು ನಿನ್ನ ತಮ್ಮನ ಸಂಗಡ ಬಾ. ಇಲ್ಲೇ ಚುಕ್ತಾ ಮಾಡೋಣವಂತೆ… ನಮ್ಮ ಸಿಕ್ರೇಟ್ ಜಾಗ ಗೊತ್ತಲ್ಲ’ ಎಂದವನೆ ಮುಂದೆ ಮಾತನಾಡಲು ಅವಕಾಶ ಕೊಡದಂತೆ ಫೋನ್ ಕುಕ್ಕಿದ ಸೌಂಡ್ ಕೇಳಿತು. ಉಗ್ರಪ್ಪನಿಗೆ ಕ್ಷಣ ಕೈಕಾಲೇ ಆಡಲಿಲ್ಲ. ‘ಏನ್ಲಾ ಏನಂತೆ ಆ ಗ್ರಾಮಸಿಂಹಂದು?’ ಭರಮಪ್ಪ ಗುಡುಗಿದರಾದರೂ ವಿಷಯ ತಿಳಿದಾಗ ಕಕ್ಕಾಬಿಕ್ಕಿಯಾದರು. ಹೆಣ್ಣುಮಕ್ಕಳ ಜೀವ ತಲ್ಲಣಿಸಿತು. ದುರ್ಗಸಿಂಹನಿಗಿರುವ ರಾಜಕೀಯ ಶಕ್ತಿ, ಧನಬಲ, ಜನಬಲದ ಅಂದಾಜು ಭರಮಪ್ಪನವರಿಗಿತ್ತು. ‘ಏನಂತೆ ಅವಂದು?’ ಕೇಳಿದರು. ‘ಅವನೇನೂ ಹೇಳಿಲ್ಲ. ದುಡ್ಡುಕಾಸೂನೂ ಕೇಳ್ತಿಲ್ಲ… ಮಗಳು ಬೇಕಂದ್ರೆ ಬಾ ಅಂತಿದಾನೆ ನನ್ಗೂ ಮೈಲಾರಿಗೂ’ ಬೆವರತೊಡಗಿದ್ದ.

‘ಅವನಿಗೆ ನಾವಿಲ್ಲಿ ಅವಮಾನ ಮಾಡಿ ನಾಯಿಗೆ ಓಡಿಸ್ದಂಗೆ ಓಡಿಸಿದೀವಿ. ಅದರ ಸೇಡು ತೀರಿಸಿಕೊಳ್ಳೋಕೆ ಈ ಸಮಯ ಉಪಯೋಗಿಸ್ಕೋತಿದಾನೇನೋ… ನೀವು ಹಮ್ಮುಮಾಡಿದರೆ ಭೂಗತವಾಗಿ ಬಿಡ್ತೀರಿ. ಸೋತರೂ ಸರಿ ಅವನ್ತಾವ ಇರೋ ಕೂಸಿನ್ನ ಮನೆಗೆ ಕರ್‍ಕೊಂಡು ಬನ್ನಿ. ಅವಳ ಕ್ಷೇಮಕ್ಕಿಂತ ನಮ್ಮ ಪ್ರತಿಷ್ಠೆ ಮುಖ್ಯವಲ್ಲ. ಮಗು ಮನೆಗೆ ಬಂದು ಸೇರಿ ಈ ಭರಮಪ್ಪ ಏನು? ಇವನಿಗೂ ರಾಜಕೀಯದಲ್ಲಿ ಎಷ್ಟು ಪವರ್ ಇದೆ ಅಂತ ಖುದ್ ತೋರಿಸಿಕೊಡ್ತೀನಿ ಆ ಬೇಕಾರ್‌ನಾಯಿಗಳಿಗೆ’ ಏದುಸಿರುಬಿಟ್ಟರು.

‘ಸರಿ ನಡಿಯಲಾ ಹೊಗೋಣ’ ಮುಖ ಕೂಡ ತೊಳೆಯದೆ ಉಗ್ರಪ್ಪ, ಮೈಲಾರಿ ಕಾರು ಏರಿದರು. ‘ಹುಷಾರಿ ಕಣ್ರಲಾ, ಕೋಪ ನುಂಗಿಕೊಳ್ಳಿ ನಮ್ಮ ಮನೆ ಚಿನ್ನ ಅವನ ಕೈ ನಾಗೈತೆ… ಸೋತು ಗೆಲ್ಲಬೇಕ್ರಲಾ’ ಭರಮಪ್ಪ ಅನುಭವದ ಮಾತುಗಳನ್ನಾಡಿ ಬೀಳ್ಕೊಟ್ಟರು. ಕೆಂಚಮ್ಮ ಚಿನ್ನಮ್ಮರಂತೂ ಉಸಿರಿಲ್ಲದವರಂತೆ ಮನೆಯ ಒಳಗೆ ಹೆಜ್ಜೆಯಿಡದೆ ಮೆಟ್ಟಿಲುಗಳ ಮೇಲೆ ಕುಸಿದು ಕುಳಿತರು.

ಮರುದಿನ ಬೆಳಿಗ್ಗೆಯೇ ಅವಿನಾಶ್ ಆಡ್ ಕಂಪನಿಯವರು ಆಸ್ಪತ್ರೆಗೆ ಬಂದು ರಂಗನನ್ನು ಭೇಟಿಯಾಗಿ ತಮ್ಮ ಆಡ್‍ಕಂಪನಿಗೆ ಫಸ್ಟ್‍ಗ್ರೇಡ್ ಮಾಡಲ್ ಆಗಿ ಸೇರುವಂತೆ ಬೇಡಿಕೆ ಮುಂದಿಟ್ಟರು. ಎಲ್ಲಾ ಪತ್ರಿಕೆಗಳೂ ಟಿವಿ ಮಾಧ್ಯಮಗಳಲ್ಲಾಗಲೆ ನಿನ್ನೆಯ ಡೇಂಜರಸ್‌ ಗೇಮ್‌ನಲ್ಲಿ ಗೆದ್ದು ಎರಡು ಲಕ್ಷ ಬಹುಮಾನ ಪಡೆದ ರಂಗನ ಸಾಹಸದ ವರದಿಯನ್ನು ಮಾಡುತ್ತಿದ್ದವು. ಕನ್ನಡ ಇಂಗ್ಲೀಷ್ ಪತ್ರಿಕೆಗಳ ಮುಖಪುಟದಲ್ಲೂ ರಂಗನ ಬಣ್ಣ ಬಣ್ಣದ ಫೋಟೋಗಳ ಮೆರವಣಿಗೆ, ಕೆಲವು ಮಾಧ್ಯಮದವರಾಗಲೆ ಸಂದರ್ಶಿಸಲೂ ಬಂದು ಕೂತಿದ್ದರು. ಡಾಕ್ಟರ್‌ಗೆ ಇರುಸುಮುರುಸಾಗಿತ್ತು. ಯಾರನ್ನಂತ ಅವಾಯ್ಡ್ ಮಾಡೋದು. ಊರಿನ ಜನವೂ ಅಭಿಮಾನದಿಂದ ಬರುತ್ತಿದ್ದಾರೆ. ಆಡ್ ಕಂಪನಿಯ ಆಫರ್ ರಂಗನಿಗೆ ಇಷ್ಟವಾದರೂ ಓದುವ ಹಂಬಲವಿತ್ತು. ಈ ಕೆಲಸ ಮಾಡಿಕೊಂಡು ನೀವು ಹಣವನ್ನೂ ಸಂಪಾದಿಸಬಹುದು ಓದನ್ನೂ ಮುಂದುವರೆಸಲು ಅಡ್ಡಿಯಿಲ್ಲ. ಅದಕ್ಕೆಲ್ಲಾ ವ್ಯವಸ್ಥೆ ಮಾಡುತ್ತೇವೆ ಎಂದು ಅವರು ಕನ್ವಿನ್ಸ್ ಮಾಡಿದರು. ‘ನಿನ್ಗೆ ಶುಕ್ರದೆಸೆ ತಿರುಗೇತೆ ಅಗ್ರಿಮೆಂಟ್ ರುಜು ಮಾಡು ಬೇಟಾ ಎಲ್ಲಾ ಅವಂದು ಮೆಹರಬಾನಿ’ ಅಂತ ಚಮನ್ ಮೇಲೆ ತೋರಿದರು. ತಾಯಿ ತಂಗಿಗೂ ಸಡಗರ ಅಣ್ಣ ಅತ್ತಿಗೆಯರ ಕಾಟದಿಂದ ಪಾರಾದರೆ ಸಾಕೆನಿಸಿತ್ತು. ರಂಗ ಅಗ್ರಿಮೆಂಟ್ ಪೇಪರ್‌ಗಳಿಗೆ ರುಜು ಮಾಡುವಾಗಲೇ ಭರಮಪ್ಪನವರೂ ಧಾವಿಸಿಬಂದಾಗ ಎಲ್ಲರಿಗೂ ಅಚ್ಚರಿ. ಮತ್ತೆ ಯಾವ ಹೊಸ ತಲೆನೋವು ತಂದರಪ್ಪಾ ಎಂದೆ ಕಮಲಮ್ಮ ಒಳಗೆ ವಿಲಿವಿಲಿಗುಟ್ಟಿದಳು. ಚಮನ್‌ಸಾಬಿಗೂ ಅವರ ಬರುವು ಹಿತವೆನ್ನಿಸಲಿಲ್ಲ. ದಾಕ್ಷಿಣ್ಯಕ್ಕೆ ನಗುನಗುತ್ತಲೇ ಬರಮಾಡಿಕೊಂಡರು. ಆದರೆ ನಡೆದ ವಿಷಯವನ್ನೆಲ್ಲಾ ಭರಮಪ್ಪ ಹೇಳಿದಾಗ ಎಲ್ಲರ ಮನಸ್ಸೂ ಆತಂಕಗೊಂಡವು. ‘ಈಗ ನಾನು ಹೆಚ್ಚು ಮಾತಾಡೋಕೆ ಟೈಮಿಲ್ಲ ರಂಗ, ನಮ್ಮಿಂದ ನಿನಗೆ ಅಪಮಾನವಾಗಿದೆ ತೊಂದರೆಯಾಗಿದೆ… ದಯವಿಟ್ಟು ಕ್ಷಮಿಸಿಬಿಡಯ್ಯಾ’ ದೊಡ್ಡವರು ಕೈಜೋಡಿಸಿದಾಗ ಕೆಡುಕೆನಿಸಿತು.

‘ದೊಡ್ಡವರು ಹಾಗೆಲ್ಲ ಕೈ ಮುಗಿಬಾರ್‍ದು ಸಣ್ಣವರಿಗೆ ಶ್ರೇಯಸ್ಸಲ್ಲ’ ಅಂದ ರಂಗ.

‘ದೊಡ್ಡ ಮನಸ್ಸು ನಿಂದಪ್ಪ, ಈಗ ನೀನೇ ಚಿನ್ನುನ ಕಾಪಾಡಬೇಕಪ್ಪಾ, ನಮ್ಮ ಮನೆಮಾನ ಮರ್ಯಾದೆನ ಉಳಿಸಬೇಕು ಕಣೋ ರಂಗ’ ಗದ್ಗದಿತರಾದರು ಭರಮಪ್ಪ. ಡಾಕ್ಟರ್ ಹೋಗಲು ಅನುಮತಿ ಕೊಡದಿದ್ದರೂ ರಂಗ ಮರು ಆಲೋಚನೆ ಮಾಡದೆ ಹೊರಟೇಬಿಟ್ಟ. ಕುತೂಹಲದ ಸಂಗತಿ ಪ್ರೇಮ ಪ್ರಕರಣ ಜೊತೆಗೆ ಪೊಲಿಟೀಶಿಯನ್ಸ್ ಇನ್‌ವಾಲ್ಮೆಂಟ್ ಅಂದಾಗ ಸುಮ್ಮನಿದ್ದಾರೆಯೆ ಸುದ್ದಿ ಮಾಧ್ಯಮದವರು ಅವರೂ ಹೊರಟರು. ‘ಸಾರೋಟಿದೆ ನೀನು ಹೋಗು… ನಾವು ಹಿಂದೆಯೇ ಬರ್ತಿವಿ’.

ಎಂದ ಭರಮಪ್ಪ ಅವನು ಹೋಗಬೇಕಾದ ರಹಸ್ಯ ಸ್ಥಳವನ್ನು ಅರುಹಿದರು. ರಂಗ ಸಾರೋಟನ್ನು ಹತ್ತಿ ಕುದುರೆಗಳಿಗೆ ಚಾವಟಿ ಏಟು ಕೊಟ್ಟು ಲಗಾಮು ಸಡಿಲಿಸಿದ. ಅವುಗಳದು ಮಿಂಚಿನ ಓಟ, ಭರಮಪ್ಪನವರ ಜೊತೆ ಚಮನ್ ಹೊರಟಾಗ ಮಾಧ್ಯಮದವರು ನಮ್ಮ ಕಾರಲ್ಲೇ ಬನ್ನಿ ಎಂದು ಆಹ್ವಾನಿಸಿದರು.

ರಹಸ್ಯ ಭವನಕ್ಕೆ ಉಗ್ರಪ್ಪ ಮೈಲಾರಿ ತಡಮಾಡದೆ ಬಂದರು. ಚಿನ್ನುವನ್ನು ಕೋಣೆಯೊಂದರಲ್ಲಿ ಬಂಧಿಸಿಡಲಾಗಿತ್ತು. ಬಂದವರೆ ಆಕ್ರೋಶಭರಿತರಾದ ಉಗ್ರಪ್ಪ ಮೈಲಾರಿ ದುರ್ಗಸಿಂಹ ಮತ್ತವನ ಮಗನ ಮೇಲೆ ಚಿರತೆಗಳಂತೆಯೇ ಹಾರಿದರು. ಅದೆಲ್ಲಿದ್ದರೋ ಹತ್ತಾರು ರೌಡಿಗಳು ಪ್ರತ್ಯಕ್ಷರಾದರು. ಉಗ್ರಪ್ಪ ಮತ್ತು ಮೈಲಾರಿ ಅಂಜದೆ ಬಡಿದಾಟಕ್ಕೆ ನಿಂತರು. ಚಿನ್ನು ಎಲ್ಲವನ್ನೂ ಅವಕ್ಕಾಗಿ ನೋಡುತ್ತಿದ್ದಳು, ಬಡಿದಾಟದಲ್ಲಿ ರೌಡಿಗಳ ಕೈ ಮೇಲಾಯಿತು. ವಿಶಾಲವಾದ ಹಜಾರದಲ್ಲಿದ್ದ ಭಾರಿಗಾತ್ರದ ಕಂಬಗಳಿಗೆ ಮೈಲಾರಿ ಮತ್ತು ಉಗ್ರಪ್ಪನನ್ನು ಹಗ್ಗದಿಂದ ಬಿಗಿದು ಕಟ್ಟಿದರು. ತಾನಿನ್ನು ಪಾರಾದೆ ಎಂದುಕೊಂಡಿದ್ದ ಚಿನ್ನುಗೆ ನಡುಕ ಶುರುವಾಯಿತು. ತಂದೆ ಮಗನ ಬೆತ್ತಲೆ ನೋಟಕ್ಕೆ ಅವಳಾಗಲೆ ಮೆತ್ತಗಾಗಿದ್ದಳು. ಮೈಲಾರಿ ಉಗ್ರಪ್ಪನ ಬಳಿ ಬಂದ ದುರ್ಗಸಿಂಹ ಇಬ್ಬರ ಕೆನ್ನೆಗೂ ರಪರಪನೆ ಬಾರಿಸಿದ. ‘ಅಹಂಕಾರಿಗಳಾ, ನಮ್ಮಿಂದ ಗಂಟು ಮಾಡ್ಕೊಂಡು ನಮ್ಮ ನೆಂಟಸ್ತನವನ್ನೇ ತಿರಸ್ಕರಿಸ್ತಿರಾ? ಅಷ್ಟು ಪೊಗರಾ? ಏನಲೆ ಉಗ್ರ ನಿನ್ನ ಮಗಳ ಮೈ ಮುಟ್ಟಿದೋರ ಕೈ ಕತ್ತರಿಸ್ತೀರಲ್ವೆ ನೀವು? ನನ್ನ ಮಗನ ಮೇಲೆ ಹಲ್ಲೆ ಮಾಡೋವಷ್ಟು ಹಮ್ಮಾ ನಿಮಗೆ. ಈಗ, ಈಗ ನೋಡುವಿರಂತೆ… ನಿಮ್ಮಗಳ ಎದುರೇ ನನ್ನ ಮಗ ಇವಳನ್ನು ರೇಪ್ ಮಾಡ್ತಾನೆ… ನಮ್ಮ ಎಲ್ಲರ ಮುಂದೂ…’ ಅಸಹ್ಯವಾಗಿ ನಕ್ಕು ಚಿನ್ನುವನ್ನು ಹಜಾರಕ್ಕೆ ದೂಡಿದ.

‘ಬೇಡ ದುರ್ಗಣ್ಣ. ದಯವಿಟ್ಟು ಮಗೀನ ಏನೂ ಮಾಡ್ಬೇಡಿ ನಿಮ್ಮ ದಮ್ಮಯ್ಯ’ ಉಗ್ರಪ್ಪ ಬಡಬಡಿಸಿದ. ‘ನನ್ನ ಮಗ ಇಷ್ಟು ಹೊತ್ತು ಅವಳ್ನ ತಿನ್ನದೇ ಬಿಟ್ಟದ್ದೇ ಹೆಚ್ಚು… ಯಾಕೆ ಗೊತ್ತಾ? ಅವನು ಇಷ್ಟಿಷ್ಟೆ ತಿನೋದನ್ನ ನೀವು ನೋಡಬೇಕು… ಸಂತೋಷಪಡಬೇಕು. ಅದು ನನ್ನಾಸೆ’ ದುರ್ಗಸಿಂಹನ ಮಾತು ಮುಗಿಯುವುದರಲ್ಲೇ ರೌಡಿಯೊಬ್ಬ ಎತ್ತು ತಂದು ಎಲ್ಲರ ಮುಂದೂ ಉರುಳಿಸಿದ. ಹಸಿಮಾಂಸಕ್ಕೆ ಕಾದ ಹದ್ದಿನಂತೆ ಸಂಗ್ರಾಮ ಅವಳ ಮೇಲೆರಗಿದ. ಅವಳು ತನ್ನ ಮೈನ ಶಕ್ತಿಯನ್ನೆಲ್ಲಾ ಒಟ್ಟುಗೂಡಿಸಿಕೊಂಡು ಮೇಲೆದ್ದು ಅವನ ಕೈ ಸಿಗದೆ ಹಜಾರದ ತುಂಬಾ ಓಡಿದಳು. ಸಂಗ್ರಾಮ ಜಿಂಕೆಯನ್ನು ಬೆನ್ನಟ್ಟಿದ ಹುಲಿಯಂತಾದ. ಅದನ್ನೊಬ್ಬ ವಿಡಿಯೊ ಕ್ಯಾಮರಾದಲ್ಲಿ ಸೆರೆಹಿಡಿಯುವುದನ್ನು ಕಂಡು ಮೈಲಾರಿ ಉಗ್ರಪ್ಪ ಕಂಗೆಟ್ಟರು. ‘ಏನ್ ಮಾಡ್ತಿದಿರಲೆ… ಇದನ್ನೆಲ್ಲಾ ಯಾಕ್ರೋ ಶೂಟ್ ಮಾಡ್ತಿದೀರಿ’ ಮೈಲಾರಿ ಅಬ್ಬರಿಸಿದ.

‘ಇಲ್ಲಿ ನಡೆದದ್ದನ್ನು ಯಾರಲ್ಲಾದರೂ ಬಾಯಿಬಿಟ್ಟರೆ ಟೇಪನ್ನು ಸಿಡಿ ಮಾಡಿಸಿ ಬಿಡುಗಡೆ ಮಾಡ್ತೀವಯ್ಯ, ಅವಳು ನಮ್ಮ ಮನೆಗೂ ಸೊಸೆಯಾಗೋಲ್ಲ ಅಷ್ಟೇ ಅಲ್ಲ ಯಾರ ಮನೆಗೂ ಸೊಸೆಯಾಗಲ್ಲ ತಮಾಷೆ ಮಾಡಿ ನಕ್ಕ ಸಿಂಹ. ಸಂಗ್ರಾಮ ಮತ್ತು ಚಿನ್ನುವಿನ ಮಧ್ಯೆ ಮಾನ ಉಳಿಸಿಕೊಳ್ಳಲು, ಮಾನ ತೆಗೆಯಲು ಸ್ಪರ್ಧೆ ನಡೆದಿದ್ದಂತೆ ಕಂಡಿತು. ಅವಳ ಮೈಮೇಲಿನ ಬಟ್ಟೆಗಳಾಗಲೆ ಚಿಂದಿ ಚಿಂದಿಯಾಗ ಹತ್ತಿದ್ದವು. ನವಿಲುಗರಿಯ ಒಂದೊಂದು ಎಳೆ ಕಳಚಿಬಿದ್ದಾಗಲೂ ನವಿಲುಗರಿಯ ಅಂದ ಕೆಡುತ್ತಿತ್ತು. ನೋಡಲಾರದೆ ಸೋದರರಿಬ್ಬರೂ ಶರಣಾದರು. ‘ನಮ್ಮ ಆಸ್ತಿಯನ್ನೆಲ್ಲಾ ಬರೆದುಕೊಡ್ತೀವಿ. ಈ ರಾಜ್ಯಾನೇ ಬಿಟ್ಟು ಎಲ್ಲಾದರೂ ಹೊರಟು ಹೋಗ್ತಿವಿ… ನಮ್ಮ ಮಗೀನ ಮಾನವಾಗಿ ಬಿಟ್ಟುಬಿಡಯ್ಯಾ’ ಉಗ್ರಪ್ಪ ಅಸಹಾಯಕನಾಗಿ ಗಳಗಳನೆ ಅತ್ತ. ಮೈಲಾರಿಯೂ ಅಂಗಲಾಚಿದ. ಆದರೆ ದುರ್ಗಸಿಂಹನ ಮನಸ್ಸು ಕರಗಲಿಲ್ಲ. ಚಿನ್ನು ಈಗ ಹುಲಿಯ ಬಾಯಿಗೆ ಸಿಕ್ಕಿಬಿದ್ದ ಚಿಗರೆಯಂತಾಗಿ ನೆಲಕ್ಕುರುಳಿದಳು. ಉಗ್ರಪ್ಪ ಮತ್ತು ಮೈಲಾರಿ ‘ದೇವ್ರೇ’ ಎಂದರಚುತ್ತಾ ಕಣ್ಣು ಮುಚ್ಚಿಕೊಂಡರು. ಸಿಡಿಲು ಎರಗಿದಂತಹ ಶಬ್ದಕ್ಕೆ ಅಲ್ಲಿದ್ದವರ ಜೀವಗಳೆಲ್ಲಾ ಕ್ಷಣ ನಡುಗಿದವು. ರಹಸ್ಯ ಭವನದ ದೊಡ್ಡ ಬಾಗಿಲು ಧಡಾರನೆ ಕುಸಿದುಬಿತ್ತು. ಒಳನುಗ್ಗಿ ಬಂದ ರಂಗ, ಸಂಗ್ರಾಮನಿಂದ ಚಿನ್ನುವನ್ನು ಪಾರುಮಾಡಿದವನೆ ತನ್ನ ಶರ್ಟನ್ನು ಅವಳಿಗೆ ತೊಟ್ಟುಕೊಳ್ಳಲು ನೀಡಿದ, ಮತ್ಸರದಿಂದ ನುಗ್ಗಿ ಬಂದವರನ್ನೆಲ್ಲಾ ತದಕಿ ನೆಲಸಮ ಮಾಡಿದ. ಕ್ಯಾಮರಾವನ್ನು ಕಿತ್ತುಕೊಂಡು ಕಾಲಲ್ಲಿ ತುಳಿದು ನಾಶಗೊಳಿಸಿದಂತೆಯೇ ದುರ್ಗಸಿಂಹ ಮತ್ತು ಅವನ ಮಗನನ್ನು ಹಿಡಿದು ಈಡಾಡಿ ಒದ್ದ. ಕಾಲಲ್ಲಿ ತುಳಿದು ಒಸಕಿದ. ಗುಂಡಿನ ಕಾಳಗವೂ ನಡೆಯಿತು. ರಂಗ ಗುಂಡೇಟಿನಿಂದ ತಪ್ಪಿಸಿಕೊಳ್ಳುತ್ತಲೇ ಬಡಿದಾಡಿದ. ದೊಡ್ಡ ಬಡಿದಾಟ ನಡೆದಿರುವಾಗಲೆ ಇನ್ಸ್‌ಪೆಕ್ಟರ್‌ ತಮ್ಮ ಸಿಬ್ಬಂದಿಯೊಂದಿಗೆ ಹಾಜರಾದರು. ಜೊತೆಗೆ ಭರಮಪ್ಪ, ಪೈಲ್ವಾನ್, ಚಮನ್ಸಾಬಿ ಕಂಡರು ಅದಕ್ಕಿಂತಲೂ ಮಾಧ್ಯಮದ ಮಂದಿ, ಅವರ ಕ್ಯಾಮರಾಗಳ ಮಿಂಚನ್ನು ಕಂಡ ದುರ್ಗಸಿಂಹ ಅವನ ಮಗ ನಿಂತಲ್ಲೇ ಬೆವರಿನ ಮುದ್ದೆಯಾದರು. ಅವರಿಗೆ ನಿಲ್ಲಲೂ ಆಗದಷ್ಟು ಸಮ ಏಟುಗಳು ಬಿದ್ದಿದ್ದವು. ಮಾಧ್ಯಮದ ಮಂದಿಗೆ ಉಲ್ಟಾ ಹೊಡೆಯುವುದು ಹೇಗೆ ಎಂಬುದೂ ಹೊಳೆಯಲಿಲ್ಲ. ತಕ್ಷಣ ಇನ್ಸ್‌ಪೆಕ್ಟರ್‌ ತಂದೆ ಮಗನನ್ನು ರೌಡಿಗಳನ್ನು ಬಂಧಿಸಿದರು. ಇನ್ಸ್‌ಪೆಕ್ಟರ್ ಬಂಧಿಸಿ ಎಳೆದೊಯ್ದು ಜೀಪ್ ಹತ್ತಿಸುವಾಗ ಮಾಧ್ಯಮದವರೂ ಅವರುಗಳ ಹಿಂದೆಯೇ ಓಡಿದರು.

ಚಿನ್ನು ಓಡಿ ಬಂದು ರಂಗನನ್ನು ಬಾಚಿತಬ್ಬಿಕೊಂಡಳು ಆಗಲೂ ಅವಳು ಬಿರುಮಳೆಯಲ್ಲಿ ಸಿಕ್ಕ ಹಕ್ಕಿಯಂತೆ ತರತರನೆ ನಡುಗುತ್ತಿದ್ದಳು. ಭರಮಪ್ಪ ಪೈಲ್ವಾನ್ ಸೇರಿ ಮೈಲಾರಿ ಮತ್ತು ಉಗ್ರಪ್ಪನನ್ನು ಬಂಧನದಿಂದ ವಿಮುಕ್ತಗೊಳಿಸಿದರು. ಚಿನ್ನು ರಂಗನ ತಬ್ಬಿಗೆಯಲ್ಲಿರುವುದನ್ನವರು ನೋಡಿದರು. ಆ ನೋಟದಲ್ಲಿ ಅಸಹನೆಯಾಗಲಿ ಆಕ್ರೋಶವಾಗಲಿ ಇರಲಿಲ್ಲ.

‘ಕ್ಷಮಿಸಿ. ನಿಮ್ಮ ಮನೆ ಹುಡುಗಿನಾ ಮುಟ್ಟಿದ್ದೇನೆ. ಬೇಕಾದರೆ ನೀವು ನನ್ನ ಕೈ ಕತ್ತರಿಸಬಹುದು. ಅದಲ್ವೆ ಪಾಳೇಗಾರಿಕೆ ಅಂದ್ರೆ’ ಅವನ ಮಾತಿನಲ್ಲಿ ವ್ಯಂಗ್ಯಕ್ಕಿಂತ ಮಿಗಿಲಾದ ನೋವಿತ್ತು.

‘ರಂಗಾ, ನಮ್ಮ ಮನೆ ಹುಡ್ಗಿನೇ ಬಂದು ನಿನ್ನನ್ನು ತಬ್ಬೋಂಡಿದಾಳೆ… ಅದರಲ್ಲಿ ನಿನ್ನ ತಪ್ಪಿಲ್ಲವಯ್ಯ’ ಅಂದರು ಮೀಸೆಯಡಿಯಲ್ಲೇ ನಗುತ್ತಾ ಭರಮಪ್ಪ.

‘ಹಾಗಾದ್ರೆ ನನ್ನ ಕೈಗಳನ್ನೇ ಕತ್ತರಿಸಿಬಿಡಿ’ ತಬ್ಬಿಗೆಯನ್ನು ಸಡಿಲಿಸದೆ ಅಂದಳು ಚಿನ್ನು.

‘ನಿಮ್ಮ ಕೈಗಳನ್ನು ಕತ್ತರಿಸೋ ಅಗತ್ಯವಿಲ್ಲ… ಕೂಡಿಸುವ ಕಾರ್‍ಯ ಈಗ ಆಗಬೇಕಾಗಿರೋದು. ನಮ್ಮ ಕೂಸು ನವಿಲುಗರಿ ಇದ್ದಂಗೆ. ಅದು ಕೃಷ್ಣನ ಹತ್ತಿರ ಇದ್ದರೇನೆ ಶೋಭೆ…. ಅಲ್ವೇನಯ್ಯ?’ ಮಕ್ಕಳ ಮುಖವನ್ನು ಹಿಗ್ಗಿನಿಂದ ನೋಡಿದರು ಭರಮಪ್ಪ. ‘ಅಪ್ಪಾಜಿ ಹೇಳ್ತಿರೋದು ಸತ್ಯವಾದ ಮಾತು ನಮ್ಮಿಂದ ತಪ್ಪಾಗಿದೆ ರಂಗ… ಕ್ಷಮಿಸುಬಿಡಪ್ಪಾ. ಚಿನ್ನು ನಮ್ಮತಾವ ಇರೋದ್ಕಿಂತ ನಿಂತಾವ ಇದ್ದರೇನೇ ಹೆಚ್ಚು ಸಂತೋಷವಾಗಿರ್‍ತಾಳೆ ಅನ್ನೋ ಅರಿವು ನಮಗಾಗೈತೆ. ಆಸ್ತಿ ಅಂತಸ್ತಗಿಂತ ಮನುಷ್ಯನಿಗೆ ಒಳ್ಳೆತನ ಇರ್‍ಬೇಕು.. ಒಳ್ಳೆತನವೇ ಎಲ್ಲಕ್ಕಿಂತ ದೊಡ್ಡ ಆಸ್ತಿ’ ಉಗ್ರಪ್ಪ ಮೈಲಾರಿ ಇಬ್ಬರೂ ಕ್ಷಮೆಯಾಚಿಸಿದರು. ಮಾಡಿದ ದುಷ್ಕೃತ್ಯಗಳನ್ನು ನೆನೆದು ನಾಚಿದರು. ತಲೆ‌ಎತ್ತಿ ಅವನನ್ನು ನೋಡುವ ತಕತ್ತೂ ಅವರಲ್ಲಿರಲಿಲ್ಲ. ರಂಗ ಮತ್ತು ಚಿನ್ನುವಿನ ಅಪರೂಪದ ತಬ್ಬುಗೆಯ ಫೋಟೋಗಳನ್ನು ಆಡ್‌ಕಂಪನಿಯವರು ಬಿಡುವಿಲ್ಲದೆ ಸೆರೆಹಿಡಿದಾಗ ರಂಗ ನಾಚಿದನಾದರೂ ಚಿನ್ನು ಮಾತ್ರ ನಾಚಲಿಲ್ಲ. ಅಪ್ಪಿಗೆಯನ್ನೂ ಸಡಿಲಿಸಲಿಲ್ಲ. ಯಾರಾದರೂ ತಮ್ಮನ್ನೆಲ್ಲಿ ಬೇರ್‍ಪಡಿಸುವರೋ ಎಂಬ ಭಯದಿಂದ ಅವನನ್ನು ಮತ್ತಷ್ಟು ಬಿಗಿಯಾಗಿ ತಬ್ಬಿಕೊಂಡಳು. ಅವರ ಮನೆಯವರ ಮೇಲೆ ಅವಳಿಗೆ ಈಗಲೂ ನಂಬಿಕೆಯಿರಲಿಲ್ಲ. ಅವಳು ನಂಬಿದ್ದು ನೆಚ್ಚಿದ್ದು ರಂಗನನ್ನು ಮಾತ್ರ.
*****
ಮುಗಿಯಿತು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೊಯಿಸಳ
Next post ನಾದಿನಿ ಬಂದು ಹೋದಳು

ಸಣ್ಣ ಕತೆ

 • ಗಂಗೆ ಅಳೆದ ಗಂಗಮ್ಮ

  ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

 • ಕರಿ ನಾಗರಗಳು

  ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

 • ಮೌನರಾಗ

  ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

 • ಉರಿವ ಮಹಡಿಯ ಒಳಗೆ

  ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

 • ದಾರಿ ಯಾವುದಯ್ಯಾ?

  ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

cheap jordans|wholesale air max|wholesale jordans|wholesale jewelry|wholesale jerseys