ಗುರು ಬ್ರಹ್ಮಃ ಗುರು ವಿಷ್ಣುಃ!!
ಗುರು ದೇವೋ ಮಹೇಶ್ವರಃ|
ಗುರು ಸಾಕ್ಷಾತ್ ಪರಬ್ರಹ್ಮಃ|
ತಸ್ಮೈ ಶ್ರೀ ಗುರವೇ ನಮಃ|
– ಎಂದು ಗುರುವಿಗೆ ವಂದಿಸುತ್ತಾ, ಗುರುವಿನ ಮಹತ್ವವನ್ನು ತಿಳಿಸುವ ಪ್ರಾರ್ಥನೆಯನ್ನು ಮಾಡುತ್ತೇವೆ. ಇಂಥಹ ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕ್ತಿ ಎಂದು ಹೇಳುವ ನಾವು ಗುರು ಬ್ರಹ್ಮಾಂಡದಲ್ಲಿ ಅಡಗಿದ ವಿಶ್ವಜ್ಞಾನವನ್ನು ಸದಾಕಾಲ ಸ್ಮರಿಸಿಕೊಳ್ಳುತ್ತೇವೆ.
ಇಂಥಹ ಗುರುವಿನ ಮಹಿಮೆಯನ್ನು ಇಂದು ಅರಿತವನು ನಾನು. ಈ ಗುರುವಿನ ಮಹತ್ತನ್ನು ಹೇಳಿದ ಅನೇಕ ಲೇಖನಗಳನ್ನು ಸಹ ಬರೆದವನು ನಾನು. ಆದರೆ, ಪುಟ್ಟ ವಯಸ್ಸಿನಲ್ಲಿ ಪ್ರಪಂಚದ ಜ್ಞಾನವೇ ಇಲ್ಲದಾಗ ಗುರುವಿನ ಮಹತ್ತನ್ನು ತಿಳಿಸುವ ಶಕ್ತಿಗಳು ನಮ್ಮ ಹಳ್ಳಿಗಾಡಿನಲ್ಲಿ ಇರುವುದು ಇಲ್ಲ. ಹಳ್ಳಿಯ ಬದುಕು, ಭವಣೆ, ತಾಪತ್ರಯಗಳ ನಡುವೆ ತಂದೆ ತಾಯಿಗಳು ಹೆಚ್ಚು ಜವಾಬ್ದಾರಿಯನ್ನು ಮಕ್ಕಳೆಡೆಗೆ ಕೊಡದೆ ಇದ್ದಾಗ, ಈ ಮಕ್ಕಳು ಆಟವಾಡುತ್ತಾ, ಗೆಳೆಯರ ಸಹವಾಸದಿಂದ ಪೋಲಿ ಪಟಾಲಂಗಳಾಗಿ ಬಿಡಬೇಕಾಗುತ್ತದೆ. ಪೋಕರಿ ಮನಸ್ಸು ಆವರಿಸುತ್ತದೆ. ಇಂಥಹ ಸಂದರ್ಭದಲ್ಲಿ ಗುರುವಿನ ಗುಲಾಮನಾಗಿ ಇಂದು ವಂದಿಸುವ ನಾನು ಅಂದು ೪೯ ವರ್ಷಗಳ ಹಿಂದೆ ಅಜ್ಞಾನದ ರಕ್ತ ಮಾಂಸ ಜೀವವಾಗಿದ್ದೆ. ಹಾಗಾಗಿ ಗುರುವಿನ ಬೆಲೆಯನ್ನರಿಯದೇ ಶಾಲೆಗೆ ಹೋಗುತ್ತಿರುವ ಸಂದರ್ಭಗಳವು. ಅಂದು ನಡೆದ ಒಂದು ಪ್ರಸಂಗವನ್ನು ಇಲ್ಲಿ ನೆನಪಿಸಿಕೊಳ್ಳುತ್ತೇನೆ ಹೊರತು ಗುರುವಿಗೆ ಅವಮಾನ ಮಾಡುವುದಕ್ಕಲ್ಲ.
ಆಗ ನಾನು ನಾಲ್ಕನೇ ಕ್ಲಾಸ್‌ನಲ್ಲಿ ಓದುತ್ತಿದ್ದೆ. ನಮ್ಮ ಶಾಲೆಯಲ್ಲಿ ನಾವು ನಾಲ್ಕು ಹುಡುಗರು ಪೋಲಿ ಪುಂಡರಾಗಿದ್ವಿ, ಅವರಲ್ಲಿ ನಾನೊಬ್ಬ ಮಾಸ್ತರ್ ಜತೆ, ಹುಡುಗರ ಜತೆ ಏನಾದರೂ ಒಂದೊಂದು ಕಿತಾಪತಿ ಮಾಡಿ, ಹೂಲಿ ತರುತ್ತಿದ್ದೆ. ಮನೆಯಲ್ಲಿ ನಮ್ಮ ತಾಯಿ ಬೆತ್ತದ ಏಟಿನಿಂದ ಬಾರಿಸುತ್ತಿದ್ದರು.
ಗಣಿತವೆಂದರೆ ಆವತ್ತು ಕಬ್ಬಿಣದ ಕಡಲೆ ಯಾಗಿತ್ತು. ಪ್ರತಿ ದಿನ ಗಣಿತ ಹೇಳುವ ಮಾಸ್ಟರ್ ಬಂದು ಬಡಗಿ (ಕೋಲು) ತಕ್ಕೊಂಡು, ಹುಡುಗರಾದ ನಮಗೆ ಆರ್ಭಟಿಸುತ್ತಿದ್ರು, ಮಗ್ಗಿ ಬಾಯಿಪಾಠ ಹೇಳೋ..? ಎಂದಾಗ ೩ x ೩= ೯ ಎನ್ನುವುದರ ಬದಲು ೧೯ ಎನ್ನುತ್ತಿದ್ದೆ. ಆಗ ಮಾಸ್ತರ್ ರಾವಣನಂತೆ ಆರ್ಭಟಿಸುತ್ತಿದ್ದರು. ನಾವಲ್ಲೆ ಮುದುಡಿ ಹೋಗಿ ಅವರ ಬೆತ್ತದ ಏಟಿಗೆ ಹೆದರಿ ಒಂದಾ ಮಾಡಿಕೊಳ್ಳುತಿದ್ದೆವು. ಅದಕ್ಕಾಗಿ ಗಣಿತದ ಮಾಸ್ಟರ್ ಎಂದರೆ ನಾವು ನಾಲ್ಕು ಜನಕ್ಕೆ ಕೋಪ, ಆವತ್ತೊಂದಿನ ಮಾಸ್ತರ್ ಗಣಿತದ ಪಾಠ ಮಾಡಿ, ೧೭, ೧೮ ರ ಮಗ್ಗಿ ಯನ್ನೂ ಕೇಳ್ತೀನಿ, ಬಾಯಿಪಾಠ ಮಾಡಿ ನಾಳೆ ಹೇಳಬೇಕು ಗೊತ್ತಾಯ್ತಾ… ಎಂದು ಹೇಳಿ ಗದರಿಸಿ ಹೋದರು. ನಾವು ಎನ್ ಮಾಡೋದು? ಎಂದು ಚಿಂತೆ ಗಿಟ್ಟುಕೊಂಡೆವು. ಒಬ್ಬೊಬ್ಬರು ಒಂದೊಂದು ತರಾವರಿ ಲೆಕ್ಕ ಹಾಕಿದರು. ಒಬ್ಬ ಹುಡುಗ ಊರು ಬಿಟ್ಟು ಹೋಗಬೇಕೆಂದರೆ, ಇನ್ನೊಬ್ಬ ನಮ್ಮ ಆಯಿಗೆ ಮೈಯಾಗ ಹುಷಾರಿಲ್ಲ ಅದಕ್ಕೆ ಬರಲಿಲ್ಲ ಸಾ… ಎಂದು ಯೋಚಿಸಿದರೆ, ಇನ್ನೊಬ್ಬ ಇನ್ನೊಂದು ತರಹ ಯೋಚಿಸಿದ. ಹೀಗೆ ಏನೇನೋ ಕ್ಲಾಸ್‌ಗೆ ಚಕ್ಕರ್ ಕೊಡುವ ದುರಾಲೋಚನೆಯನ್ನು ಹಾಕಿಕೊಂಡೆವು.
ಆದರೆ ಒಬ್ಬ ಹುಡುಗ ಮಾತ್ರ ಹೀಗೆ ಮಾಡಿದ್ರೆ ಮಾಸ್ತರ್‌ಗೆ ಸರ್‍ಯಾಗಿ ಚಳ್ಳೆ ಹಣ್ಣು ತಿನಿಸಬಹುದು ಅಂತ ಲೆಕ್ಕ ಹಾಕಿ ನಮ್ಮುಂದೆ ಬಿಡಿಸಿಟ್ಟ. ಈ ಆಟ ಪಸಂದಾಗದಿದ್ರೆ ಬಾಳ ಕಷ್ಟ, ಎಂದು ಹೆದರಿದೆವು. ಅವನು ಹುಂಬು ಧೈರ್ಯ ತುಂಬಿದೆ. ಅಂತೂ ಮರುದಿನ ಮುಂಜಾನೆ ಶಾಲೆ ಪ್ರಾರಂಭ ಆಗಬೇಕು. ನಾವು ನಾಲ್ಕು ಜನ ಮೊದಲು ಹೋಗಿ ಬಾಗಿಲು ತೆಗೆದು ಕಸ ಗುಡಿಸಿ, ಮಾಸ್ತರ್ ಕೂರೋ ಕುರ್‍ಚಿ ಮ್ಯಾಲೆ ಚೀಲ ಹಾಸಿದೆವು, ನಮ್ಮೊಳಗೆ ಮುಸಿ ಮುಸಿ ನಗು ತರಿಸಿಕೊಂಡು ಬರುತ್ತಿತ್ತು. ಉಳಿದಂತೆ ಹುಡುಗರಿಗೆ ನಮ್ಮ ತಂತ್ರಗಾರಿಕೆ ಅರಿವಿರಲಿಲ್ಲ. ಎಕ್‍ಧಮ್ ಮಾಸ್ತರ್ ಹೊರಗಡೆಯಿಂದ ಬಂದು “ಎನ್ರಪ್ಪಾ ತಮ್ಮಗಳ್ರ… ಎಲ್ಲಾ ಬಾಯಿಪಾಠ ಮಾಡಿಕೊಂಡು ಬಂದೀರಾ..?! ಎಂದು ಹೇಳುತ್ತಾ ಕುರ್ಚಿ ಮೇಲೆ ಕುಳಿತು ಕೊಳ್ಳಲು ಅನುವಾಗುತ್ತಿರುವಾಗ ನನಗೆ ಹೆದರಿಕೆಯಗಿ ಮಾಸ್ತರ್ ಕುಳಿತುಕೊಂಡರೆ ತಳಭಾಗಕ್ಕೆ ಮುಳ್ಳು ಚುಚ್ಚಿ, ದವಾಖಾನೆಗೆ ಹೊಗ್ತಾರೆ. ಆಮೇಲೆ, ನಮ್ಮನ್ನೆಲ್ಲಾ ಬಡಿದು, ಪೋಲೀಸ್‌ನವರ್‍ಗೆ ಕೋಟ್ರೆ ಏನ್ ಮಾಡೋದು? ಎಂದು ಹೆದರಿಕೊಂಡೆ. ಮಾಸ್ಟರ್ ಕುಳಿತು ಕೊಳ್ಳಲು ಅನುವಾದಾಗ ನನಗೆ ತಡೆದುಕೊಳ್ಳಲಿಕ್ಕಾಗದೆ “ಸರಾ… ಕುಂತ್ಕೋಬ್ಯಾಡ್ರಿ….. ಯಾರೋ ಆ ಕುರ್ಚಿ ಮ್ಯಾಲಾ, ಚೀಲದ ಕೆಳಗೆ ಡಬಗೊಳ್ಳಿ ಮುಳ್ಳು ಇಟ್ಟಾರ…” ಎಂದು ಬಾಯಿ ಬಡ್ಕೊಂಡು ನಾ ಓಡಿ ಹೋದೆ. ಆ ಮೂರು ಹುಡುಗರು ಹೆದರಿ ಕೊಂಡು ಹೊರಗೆ ಓಡಿ ಹೋದೆವು. ಆ ಚೀಲವನ್ನು ತೆಗೆದು ನೋಡಿ ದಾಗ ನಿಜಕ್ಕೂ ಅಲ್ಲಿ ಮುಳ್ಳು ಇದ್ದವು. ಮಾಸ್ತರ್ ಕುಳಿತುಕೊಂಡಿದ್ರೆ ತಳಭಾಗಕ್ಕೆ ಡಬ್ಬಣದಿಂದ ಇಂಜೆಕ್ಷನ್ ಕೊಟ್ಟಂಗೆ ಆಗ್ತಿತ್ತು.
ಓಡಿ ಹೋದ ನಮ್ಮ ನಾಲ್ಕು ಜನರನ್ನು ಗುರುತಿಸಿಕೊಂಡು, ನಡೆದ ಹಕಿ ಕಥಿಯನ್ನು ಮನೆಯವರಿಗೆ ಹೇಳಿ, ಜಬರ್‌ದಸ್ತ್ ಮಾಡಿದರು. ನಾವು ಆಗಲೇ ಊರು ಬಿಟ್ಟು ಓಡಿ ಬಂದಿದ್ವಿ. ಮಾಸ್ತರ್ ಊರ ಜನ ಪಂಚಾಯಿತಿ ಸೇರಿಸಿ, ನಮ್ಮನೆಗಳಿಗೆ ದಂಡ ಹಾಕಿಸಿದ್ರಂತ. ಆಗ ನಮ್ಮ ಮನೆಯವರ ಹುಡುಕಾಟ ಪ್ರಾರಂಭವಾಯಿತು. ಕದ್ದು-ಮುಚ್ಚಿ ಕೂಡಿಟ್ಟ ರೊಕ್ಕ(ಹಣ) ನಮ್ಹತ್ರಾನೂ ತೀರಿ ಹೋಗಿತ್ತು. ಏನ್ ಮಾಡೋದು? ಅಂತ ಯೋಚನೆ ಮಾಡ್ತಾ, ತಾಳಿಕೋಟೆ ಬಸ್ ಸ್ಟ್ಯಾಂಡ್ ನಲ್ಲಿ ಕೂತಾಗ ನಮ್ಮನ್ನು ಬೇಟೆಯಾಡಿ, ನಾಯಿಗೆ ಹೊಡದಂಗೆ ಹೊಡೆದು, ಚಕ್ಕಡಿ ಮೇಲೆ ಹಾಕೊಂಡು ಎಳೆದುಕೊಂಡು ಹೋದ್ರು, ಊರಿನವರು ಮತ್ತೆ ಪಂಚಾಯ್ತಿ ಸೇರಿಸಿ, ನಮ್ಮೆಲ್ಲರ ಮನೆ ಹಿರಿಯರಿಗೆ ಝಾಡಿಸಿ ಬಿಟ್ರು ಮತ್ತು ಗುರುವಿನ ಮಹತ್ವವನ್ನು ಹೇಳಿದರು. ನಮಗೆ ಇದರಿಂದ ಬಾಳ ಅವಮಾನ ಆತು. ಅಷ್ಟಕ್ಕೆ ಊರ ಜನ ನಮ್ಮನ್ನ ಹಂಗ ಬಿಡಲಿಲ್ಲ. ಊರಲ್ಲಿರೋ ಸಿದ್ದರಾಮೇಶ್ವರ ದೇವಸ್ಥಾನಕ್ಕೆ ಸಂಜೆ ಹೊತ್ತಲ್ಲಿ ಕರ್ಕೊಂಡ್ ಹೋದ್ರು. ಊಟ-ಗೀಟ ಏನು ಕೊಡ್ಲಿಲ್ಲ. ದೇವಸ್ಥಾನದಲ್ಲಿರೋ ನಾಲ್ಕು ಡೊಳ್ಳುಗಳನ್ನ ನಮ್ಮ ನಾಲ್ಕು ಜನರ ಹೆಗಲಿಗೆ ಏರಿಸಿ, ಒಂದು ಹನಿ ನೀರು ಕೊಡ್ದಾ, ಬೆಳಗಾಗುವರೆಗೂ ಡೊಳ್ಳು ಹೊಡ್ಕೊಂಡಿರಿ.. ಅವಾಗ್ ನಿಮ್‍ಗಾ ಪಶ್ಚಾತ್ತಾಪ ಆದೀತು” ಎಂದು ಹೇಳಿ ನಾಲ್ಕಾರು ಜನ ಅಲ್ಲಿ ಕುಳಿತುಕೊಂಡ್ರು. ನಮಗೆ ಡೊಳ್ಳು ಹೊಡೆಯುವ ಅಭ್ಯಾಸ ಇದ್ದುದರಿಂದ ಶುರು ಹಚ್ಚಿಕೊಂಡ್ವಿ. ಎರಡು ತಾಸಿನೊಳಗೆ ಕೈ ಸೋತು ಬಿದ್ದು ಹೋದ್ವು, ಸುಸ್ತು ಆವರಿಸಿತು. ಮೈಮರಗೆಡ್ತು. ಕೈಕಾಲು ನಿಗಿರ್‌ಕೊಂಡ್ವು. ಕಾಲಿನ ನರ ಸತ್ತೋದ್ವು, ಬೆರಳು ನಡುಗಾಕತ್ತಿದ್ವು, ಕೊನೆಗೆ ಹೊಡೆದು, ಹೊಡೆದು ದಿಕ್ಕು ತಪ್ಪಿ ನಾವು ನಾಲ್ಕು ಜನ ಬಿದ್ದು ಬಿಟ್ವಿ. ಆ ಡೊಳ್ಳು ಹೊಡೆಯುವ ನೋವಿನಲ್ಲಿ ಒಂದೊಂದು ಏಟಿನಲ್ಲಿಯೂ ಗುರುವಿನ ಮಹತ್ವ ಏನೆಂದು ಅರಿವಾಗಲಾರಂಭಿಸಿತು. ಬೆಳಿಗ್ಗೆ ಬಿದ್ದುಕೊಂಡಿದ್ದ ನಮ್ಮನ್ನು ಮುಳ್ಳು ಚುಚ್ಚಿಸಿಕೊಳ್ಳುತ್ತಿದ್ದ ಗುರುಗಳೇ ಬಂದು ಏಳಿಸಿ ಆಶೀರ್ವದಿಸಿ, ನಮ್ಮ ನಮ್ಮ ಮನೆಗಳಿಗೆ ಬಿಟ್ಟೋದ್ರು.
ಅವತ್ತಿನಿಂದ ಇವತ್ತಿನವರೆಗೆ ಗುರುವಿನ ಗುರುತರವಾದ ಬ್ರಹ್ಮಾಂಡದ ಶಕ್ತಿಯನ್ನು ಅರಿತುಕೊಂಡಿದ್ದೇವೆ. ನನ್ನ ಜೊತೆ ಇದ್ದ ಮೂರು ಜನ ಟಿ.ಸಿ.ಹೆಚ್ ಮುಗಿಸಿಕೊಂಡು ಮಾಸ್ತರ್‌ಗಳೆ ಆದರೆ, ನಾನು ಸಾಹಿತಿಯಾಗಿ ನಿಮ್ಮುಂದೆ ಈ ಲೇಖನ ಬರಿತಿದೀನಿ ನೋಡ್ರೀ…!
*****
ಬದುಕು ಶಾಶ್ವತವಲ್ಲ, ಅನುಭವಗಳು ಶಾಶ್ವತ. ಶಾಶ್ವತವಾದ ಅನುಭವಗಳಲ್ಲಿ ಚಿರಂತನ ಸತ್ಯಗಳು ಅಡಗಿರುತ್ತವೆ.