ಆಳದ ನೆಲೆಯಲ್ಲಿ ಕವಲುಗಳ
ಕುಸುರಿ ಕುಂದುವುದಿಲ್ಲ
ಅಧಿತ್ವದ ಸೊಗಸು ಜಡತ್ವ ಮೂಡದ
ಜಗಮಗಿಸುವ ಬೆಳಕು.
ಸ್ವಯಂಸ್ಪೂತರ್‍ತಿ ಸೆಲೆಯ
ಅರಗಿಸಿ ದಕ್ಕಿಸಿಕೊಳ್ಳಬೇಕು.

ಹರಳೆಣ್ಣೆ ಗಾಢವಾಗುರಿದರೆ
ಕಡುಕಪ್ಪು ಕಾಡಿಗೆ
ಚಿತ್ರ ಬರೆಯುತ್ತದೆ ಮುಚ್ಚಳದ ಅಂಚಿಗೆ.

ಹೊಸ ಸಂಕೇತಗಳಿಗೆ
ಹಳೆಯ ಸನ್ನೆಗಳೇ ಆಳಬಿಂಬಗಳು
ಕೂಡಿಕಳೆವ, ಭಾಗಿಸಿ ಗುಣಿಸುವ
ಲೆಕ್ಕಮಾಪನಗಳು
ಆಳದ ತೀವ್ರತೆಯ ಚುಕ್ಕಿಗಳು.

ಆಳದ ಹೊರಮೈ, ಒಳಮೈ
ಮೇಲೆ ಕೆಳಗೆ ಎಲ್ಲ ಕಡೆಯ
ಸಿಕ್ಕು ಬಸಿದು ನೆಕ್ಕಿ ಉಕ್ಕಬೇಕು, ಒಳಗಿನ
ವೀಣೆಯ ತಂತಿ ಮೀಟುವ ರಾಗಕ್ಕೆ
ನಿತಾಂತ ಹೊಸ ಚಿಗುರು
ಬಣ್ಣಗೂಡುತ್ತಿರಬೇಕು.

ಎದೆಗಿಳಿದ ಅಕ್ಷರಗಳು
ಶೋಕೇಸಿನ ಕಪಾಟಿನಲ್ಲಿ
ಗಾಜಿನಕೋಣೆಯಲ್ಲಿ ತಳತಳಿಸುವ
ಪದಕವಾಗಲ್ಲ..
ನೆಲಕ್ಕಿಳಿಯಬೇಕು,
ಕೆಸರ ಕೊಳದ ನೈದಿಲೆಯಾಗಬೇಕು.
ಬೆಳಕಿನ ಹಾಡ ಹೊಮ್ಮಿಸಬೇಕು.

ಆಳಕ್ಕಿಳಿದಷ್ಟು ಬಿಸಿಲ ತಣ್ಣಗೆ ಸವಿವ
ಸರಳತೆಯ ಇನಿತಿನಿತು
ಕರಗಿಸಿಕೊಳ್ಳಬೇಕು, ಅದಕ್ಕೆ ಆಳದ ಅರಿವ
ನಾನರಿತುಕೊಳ್ಳಬೇಕು.
*****