ದಿನವಿಡೀ
ಮೈಮನಗಳನ್ನು ದುಡಿಸಿ
ಗೋಲಾಕಾರದ ಶೂನ್ಯದೊಂದಿಗೆ
ಹೊರಲಾಗದ ಬೇಗುದಿಯನ್ನು
ಹೊರುತ್ತ
ಮನೆ ಮುಟ್ಟುವಾಗ
ಮನ ಮುಟ್ಟುವ ನಿನ್ನ
ಸ್ವಾಗತದ ಮುಸಿ ನಗೆಯಲಿ
ಪ್ರೇಯಸಿಯ ಕಾತುರವನ್ನು ಕಂಡು
ರಿಕ್ತ ಕರವನ್ನು ನಿನ್ನ ನಡುವಿನ ಸುತ್ತ ಬಳಸಿ
ಹತ್ತಿರಕ್ಕೆ ಎಳೆಯುತ್ತ
ಸೋಫಾಗೆ ಒರಗಿ ಕಾಲು ಚಾಚಿ
ನಿನ್ನ ಸುಂದರ ನಯವಾದ
ಘನ ಹೆರಳನ್ನು ಬಿಡಿಸಿ ಹರಡಿ
ಅದರ ಮೇಲೆ ಕದಪನಿರಿಸಿ
ದುಮ್ಮಾನವನ್ನು ಹೊರಹಾಕುವ
ನಿನ್ನ ನಾಜೂಕು ಬೆರಳುಗಳಲ್ಲಿ
ನನ್ನ ತತ್ವರ ಬೆರಳುಗಳು ಸೇರಿಕೊಂಡು
ತುಸು ಹೊತ್ತು ಕ್ರೀಡಿಸುವಾಗ
‘ಇಂದಿನ ಸುದ್ದಿಯೇನೆಂದು’
ನೀನು ಕೇಳುತ್ತಿ, ನಾನು
ದಾದರಿನವರೆಗೂ ನನ್ನ ಜೊತೆ
ಬಸ್ಸಿನಲ್ಲಿ ಕುಳಿತ
ಸುಂದರ ನೀರೆಯ
ತುಂಟ ವಿವರಗಳ ಜಾಲದಲ್ಲಿ ಮರೆತು
ಆಟದಲ್ಲಿ ಮಗ್ನ ಕರಗಳನ್ನು
ಎದೆಗೊತ್ತಿ
ಮನಸ್ಸನ್ನು ಹಗುರವಾಗಿಸುವ
ಉಸಿರನ್ನು ಬಿಡುತ್ತ
ಕಣ್ಣು ತೆರೆವಾಗ
ಎದುರಿನ ಕಿಟಕಿಯ ಜಾಲಿಯಿಂದ
ದೂರಕ್ಕೆ ಹರಡಿರುವ ಆಕಾಶ
ಕಾಣಿಸುತ್ತದೆ.
ಆಗ ಒಮ್ಮೆಲೆ ನೆಲ ಮುಗಿಲುಗಳ
ದಟ್ಟ ಅಂತರದ ಅರಿವಾಗಿ
ಮನಸ್ಸು ಒಳಗೆಳೆದುಕೊಂಡು
ಅಂತರವನ್ನು ಅಳೆಯುವ
ಸೀಮಾ ರೇಖೆಯನ್ನು
ಹುಡುಕ ತೊಡಗುತ್ತದೆ.
*****