Home / ಕವನ / ಕವಿತೆ / ಸ್ತ್ರಾಂಬೋಲಿ

ಸ್ತ್ರಾಂಬೋಲಿ

ಕಾಲು ಚಾಚಿ ಕುಳಿತಿಹುದಿಟಲಿ ಭೂಮಧ್ಯ ಸಮುದ್ರದ ನಡುವೆ
ಸಿಸಲಿಯೊಡನೆ ಕದನವೆಸಗಿ ಪಾದಧೂಲಿಯನದಣಕೆರಚುವಂತೆ:
ಇಟಲಿಯ ಹೆಬ್ಬೊಟ್ಟಿನುಗುರಿನ ಹೊಗರ ನೋಡು! ಶೋಭಿಸುತಿಹವು ಪುರಗಳಲ್ಲಿ

ನಿಡಿದಾದ ಪರ್ವತಾವಳಿಯನೇರಲು ಹವಣಿಸುವ ಸಾಹಸಿಗಳಂತೆ
ಮತ್ತೆ ನಿದ್ರಿಸುತಿಹವು ಕೆಲವು ಹೊಳೆದು ಬೆಂಗದಿರನ ಹೊಂಬೆಳಕಿನಲ್ಲಿ.
ಸಿಸಿಲಿಯ ದಂಡೆಗುಂಟ ಹರವಿಹುದು ಮೆಸಿನಾನಗರವು ತನ್ನ ಚೆಲುವನ್ನೆಲ್ಲ.

ದಾಟುತೀ ನೀರಿನೊತ್ತನು ಮುನ್ನಡೆಯೆ ಕಂಡಿತಾಗ ಸಮುದ್ರ
ನೀಲಗನ್ನಡಿಯಂತೆ: ತೆರೆಯಿಲ್ಲ, ಸುಳಿಯಿಲ್ಲ!
ಅಖಂಡವಾಗಿ ನಿದ್ರಿಸುತಿತ್ತು ನಭೋಮಂಡಲದ ಪಡಿನೆಳಲಾಗಿ,
ಬಿಂಬಿಸಿತು ನಿರಾಳವಾದ ಶಾಂತಿಯನು: ಬರುತಿರಲಲ್ಲಿ
ದಾರಿಯಲಿ ನೀನವಿತು ಕುಳಿತಿದ್ದೆ ಸ್ತ್ರಾ೦ಬೋಲಿ!

ಮುಚ್ಚಿತ್ತು ಕರ್ಮೋಡ ಕೆಂಡವನುಗುಳ್ವ ನಿನ್ನ ರುದ್ರಮುಖವ.
ಜ್ವಾಲಾಮುಖಿಯೆ! ನಿನ್ನ ಶಿಖಿಯಡಗಿತ್ತು, ನಿಂತ ಹೊಗೆಮೋಡದಲಿ:
ಜಾರಿತ್ತು ನಿನ್ನ ಮೈಮೇಲೆ ಗಂಧಕದ ರಸ,-ಹೆಪ್ಪುಗಟ್ಟಿ ಹಸಿರಾಗುತ್ತ:
ಆರಿತ್ತು ನಿನ್ನೆದೆಯ ಮೇಲೆ ಕಬ್ಬಿಣದ ಕಸ,-ಕಾಡಿಗೆಯ ಕಪ್ಪಿನಂತೆ.
ನೆಲದ ಬಸಿರನು ಬಗೆದು ನೀ ಕಿತ್ತು ತಂದಿರುವ ಮಣ್ಣಿನ ಬಣ್ಣ
ಹರವಿತ್ತು ತಿಳಿನೀಲಿಯಾಗಿ ನಿನ್ನ೦ಗಾಂಗಳ ಮೇಲೆ:
ಪಾರಿಜಾತವ ತರಲು ವಾರಿಧಿಯ ದಾಟಿ ಮುನ್ನಡೆದ ಹಸುಳರನು
ಹೆದರಿಸಲೆನಲು ಮುಸುಕನು ಹೊತ್ತು ಕುಳಿತಿರುವೆ ಮುದಿ ರಾಕ್ಷಸನಂತೆ,-ಸ್ತ್ರಾಂಬೋಲಿ!

ಹಳ್ಳಿಯನು ಕಟ್ಟಿ ಗಿರಣಿಯೊಂದನು ಹೂಡಿಹನು ನಿನ್ನಡಿಯಲ್ಲಿ ಮಾನವನು
ಅನುದಿನವು ನೀನುಗುಳ್ವ ಲಾಳರಸವ ಲೆಕ್ಕಿಸದೆ,
ನಿನ್ನ ಪ್ರಳಯಾಗ್ನಿಯಲಿ ಬೆಂದುಬಿಡಬಹುದೆಂಬುದನು ನೆನೆದು ಸಹ!
ಕಾಯಿಲೆಯಿರಲು, ಕೆಂಗಿಡಿಗಳನುಗುಳಲು ನೀನು, ನಿನ್ನಾ ವಾಂತಿಭೇದಿಯಿಂದ
ಅಣಿಗೊಳಿಸುವನು ತನಗೆಂದು ಹಲವೌಷಧಿಗಳನು.
ಸುಮ್ಮನಿಹೆ ನೀನು ಮೂಗುಮುರಿದು, ವ್ಯಂಗ್ಯವಾದ ನಗೆಯೊಂದ ನಕ್ಕು!
ಹೇಸಿಗೆಯ ತಿನ್ನಲು ಬಂದ ನಾಯಿಯನು
ಬೀಸಿ ಹೊಡೆದರೇನು ಬಿರುದು ಬಂತೆ?

ರೋಮರಾಜ್ಯದ ತಲೆ ತಗ್ಗಿತು, ಸಿಸಿಲಿಯ ಸುಸಿಲು ತಲೆಕೆಳಗಾಯಿತು:
ಬೇರೊಂದು ರಾಜ್ಯವೆದ್ದಿರುವದಿಂದಿಟಲಿಯಲ್ಲಿ.
ಬೇರೆ ನೌಕೆಗಳಾಳುತಿಹವಿಂದು ಸಪ್ತಸಮುದ್ರಗಳನ್ನು!
ನೀ ಮಾತ್ರ ನಿಂತಿರುವೆ-ಧೂಮಧಾಮವಾಗಿ,
ಭೂಮಧ್ಯಸಮುದ್ರದ ದೀಪಸ್ತಂಭವಾಗಿ!
ಹೊಗೆ ಬಿಡುತಿರುವೆ ಎಂದಿನಂತೆ: ರಾಜ್ಯಗಳಳಿದರೇನು,
ಉದ್ಬುದ್ಧವಿರಲೇನು,-ಮತ್ತೆ ನೆಲಸಮವಾದರೇನು,-
ಎಲ್ಲ ಸಮವೆನುತಿರುವೆ! ಎಂದಿನೊಲು ಸುರಿಸುತ್ತ
ಕಡಲ ಮಡಿಲಲಿ ನಿನ್ನ ಕಾರೊಡಲ ಕೆಂಡವನು!

ನಿನ್ನ ತಲೆಮೇಲೆ ನಿಂತಿಹನು ನೋಡು ಪಡುವಣಕೆ ನಡೆದ ಸೂರ್ಯ:
ನೀನು ಜ್ವಾಲಾಮುಖಿ,-ಅವನು ಜ್ವಾಲೆಯ ಜಗತ್ತು!
ಅವನ ಸ್ವಯಂಪ್ರಶಾಶಕ್ಕೆ ತಾಕಿಲ್ಲವಿನ್ನೂ ಹೊಗೆ:
ಅಚ್ಚಳಿಯದಿದೆಯಿಂದಿಗೂ ಆವನ ನಗೆ.
ನೀನು ಕಾಲದಷ್ಟು ಹಳಬನಾದರೆ ಅವನು ಪ್ರಾಣಕ್ಕಿಂತ ಪ್ರಾಚೀನನಹುದು-.
ಕಳೆಯುವದಿದು ಸ್ತ್ರಾಂಬೂಲಿ ಹಳ್ಳಿ,-ಇಲ್ಲದಿರಲು ನಿನ್ನ ಬೆಂಕಿಯ ಮಳೆ.
ಸೂರ್ಯನು ತಣ್ಣಗಾಗಲು,-ಮುಳುಗುವದು ಮೂಜಗವೆಲ್ಲ!
*****

Tagged:

Leave a Reply

Your email address will not be published. Required fields are marked *

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...

ಪೆಟ್ರೋಲ್ ವಾಸ್ನೆ ಮೂಗಿಗೆ “ಗಫ್” ಅಂತಾ ಬಡೀತು! ಐದಾರು ಕ್ಯಾನ್‌ಗಟ್ಟಲೆ ಮನೆ ಸುತ್ತಮುತ್ತ ಉಗ್ಗಿ ಬಾಗಿಲು ಕಿಟಕಿ ಸಂಧಿನಿಂದ ಧುಭುಧುಭು – ಪೆಟ್ರೋಲ್ ಸುರಿವಿದ ತೀರಿಗೆ ಅದು ಹಳ್ಳ ಕೊಳ್ಳವಾಗಿ ಮನೆಯೊಳಕ್ಕೆ ಜಗ್ಗಿ ಹರಿದು ಬಂತು! ಮಲಗಿದ್ದ ಹಾಸಿಗೆ, ದಿಂಬು, ಹೊ...

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...