ಹೃದಯದೊಳಗುನ್ಮಾದ ತುಂಬಿದೆ ಕಾಲಿನೊಳಗುರಿಯೆದ್ದಿದೆ
ಮರಣ ಮೂರ್ಛಿತ ಮನವು ಹರಣದ ಬಲಿತ ಗರಿಗಳ ಪಡೆದಿದೆ
ಕಟ್ಟುಗಳ ಕಿರಿಗೂಡಗೋರಿಯ ಮುರಿದು ಮೇಲಕೆ ನೆಗೆಯುವೆ
ಇನ್ನು ನಿಲ್ಲೆನು ನಾನು ಇಲ್ಲಿಗೆ ಬಾನಿನಂಚನೆ ಮುಟ್ಟುವೆ
ಯಾರು ತಡೆವರು ನನ್ನನು? ಯಾರು ಕಟ್ಟುವರೆನ್ನನು?
ಕಿರಣಗಳು ಕೊರೆದಿರುವ ದಾರಿಯ ಹಿಡಿದು ನಾ ಮುನ್ನಡೆವೆನು.
ನೂರು ಜನುಮದ ನೋವದಿಂದಿಗೆ ಮನಕೆ ಕಾವನು ಕೊಟ್ಟಿದೆ
ನೂರು ಬಾಳಿನ ಬೇವದೀಗಳೆ ಎದೆಗೆ ಕಸುವನ್ನೂಡಿದೆ.
ನೋಡುಮನದಲಿ ಬೇಗೆ ಎದ್ದಿದೆ ಕುಣಿವ ಕಡಲೇನೊಳಗಿದೆ
ಸಾವ ಭಯವನು ಬಿಟ್ಟಿದೆ, ವೀರರೋಜವ ತೊಟ್ಟಿದೆ
ಸಪ್ತಸಾಗರ ದಾಟುವಾ ಗೌರಿಶಂಕರ ಮೆಟ್ಟುವಾ
ತೊವಲು ದಿಟ್ಟಿಯು ತಟ್ಟದಾಕಿರುಚಿಕ್ಕೆನಾಡನು ಮುಟ್ಟುವಾ
ಬಯಕೆ ಬಲಿತಿರೆ ನಿಲ್ಲಬಹುದೆ ನಿಂತ ನೆಲವನು ನಂಬುತ
ತಡೆಯಬಹುದೆ ಸಂದ ದುಃಖದ ಇರಿತವನ್ನೇ ನೆನೆಯುತ
ಜನದ ಸಂದಣಿ ತೊರೆವೆನು, ಜಗದ ಗದ್ದಲ ಮರೆವೆನು
ಬಾನ ಹೊಳೆಯಲಿ ತೇಲಲೆನ್ನಯ ಕಿರಿಯ ನಾವೆಯ ಬಿಡುವೆನು.
ಇರುಳು ಕಳೆಯಲಿ ಹಗಲು ಅಳಿಯಲಿ ಕಾಲಜಾರಲಿ ಸವೆಯುತ
ಕಾಣದಂತಹದನ್ನೆ ಅರಸುವೆ ಕಾಲನನ್ನೇ ಮೆಟ್ಟುತ.
ಅಳಿವ ಗಳಿಗೆಗಳಿಂದಲೂ ಎಳೆಯುವೆನು ಅಮರರ ಸಿರಿಯನು
ಬೆಳೆದು ಮುಟ್ಟುವೆ ಮುಗಿಲಿನೇರನು ಬಯಸಿ ನಾಕದ ನೆರೆಯನು
ಅದರ ಕರೆಯೇ ತಲೆಯ ಕೆಣಕಿದೆ ಹೃದಯ ಗುಹೆಯನು ತುಂಬಿದೆ
ಒಡಲಿನಲಿ ದಳ್ಳುರಿಯ ಬಳ್ಳಿಯ ಹರಡಿ ನನ್ನನು ನೋಂತಿದೆ.
*****



















