ಶಬರಿ – ೯

ಶಬರಿ – ೯

ಹಟ್ಟಿ ಸೇರಿದ ಮೇಲೆ ಹೆಂಗಸರಿಗೆ ಅಡಿಗೆ ಕಲಸ; ಸೂರ್ಯ, ನವಾಬ್ ಇಬ್ಬರೂ ಕಟ್ಟೆಯ ಮೇಲೆ ಕೂತರು. ದೇಶ ವಿದೇಶಗಳ ಸ್ಥಿತಿಗತಿ ಕುರಿತು ಮಾತನಾಡತೊಡಗಿದರು. ಇವರ ಮಾತುಗಳು ಪೂರ್ಣ ತಾತ್ವಿಕ ಚರ್ಚೆಯ ಸ್ವರೂಪ ಪಡೆದದ್ದರಿಂದ ಅಕ್ಕಪಕ್ಕ ಕೂತಿದ್ದ ಮೂರ್‍ನಾಲ್ಕು ಜನರು ಮಿಕಮಿಕ ನೋಡುತ್ತಿದ್ದರು. ಇವರು ಅವರನ್ನು ಉದ್ದೇಶಿಸಿ ಮಾತಾಡುತಿರಲಿಲ್ಲವಾದ್ದರಿಂದ ಮಾತಿಗೆ ಗಂಭೀರ ತಾತ್ವಿಕ ಸ್ವರೂಪ ಬಂದಿತ್ತು. ಜತೆಗೆ ಕೂತಿದ್ದವರ ಮುಖವನ್ನು ಗಮನಿಸಿದ ಸೂರ್ಯ ಕೂಡಲೇ ತನ್ನ ಮಾತಿನ ವಿಧಾನವನ್ನು ಬದಲಾಯಿಸಿದ. “ನಾವಿಬ್ರೇ ಮಾತಾಡ್ಕೊಳ್ತಾ ಇದ್ದಿ. ನಿಮಿಗ್ ಬೀಜಾರಾಯ್ತೇನೋ” ಎಂದು ಆರಂಭಿಸಿ ಅದೇ ವಿಷಯಗಳನ್ನು ಉದಾಹರಣೆಗಳ ಸಮೇತ ವಿವರಿಸಿದ. ಬೇರೆ ಬೇರೆ ಕಡೆ ಇರುವ ಸಾಮಾಜಿಕ-ಆರ್ಥಿಕ ಪದ್ಧತಿಯ ಕೆಲವಂಶಗಳನ್ನು ಸರಳವಾಗಿ ಮನವರಿಕೆ ಮಾಡಿಸಲು ಯತ್ನಿಸಿದ. ಹಾಗಂತ ಮಾತಿನ ಗಾಂಭೀರ್ಯಕ್ಕೆ ಧಕ್ಕೆ ತಂದುಕೊಳ್ಳಲಿಲ್ಲ. ವಿಷಯಕ್ಕೆ ತರಲಿಲ್ಲ. ಗಂಭೀರ ವಿಷಯವನ್ನು ಅರ್ಥಮಾಡಿಸಿ ಕೊಡುವ ಸರಳ ವಿಧಾನವನ್ನಷ್ಟೇ ಅನುಸರಿಸಿದ್ದ. ಅವರಿಗೆ ಅಷ್ಟಿಷ್ಟು ಅರ್ಥವಾಗ್ತಾ ಹೋದಂತ ‘ಆ ದೇಸ್ದಾಗೆ ನಮ್ತರ ಜನಾ ಎಂಗವ್ರೆ?… ಬ್ಯಾಸಾಯ ಎಂಗ್ ನಡೀತೈತೆ? ಅಲ್ಲೀರಾರೆಲ್ಲಾರ್‍ಗೂ ವಾದಾಕೆ ಬರ್‍ಯಾಕೆ ಬರ್‍ತೈತಾ?’- ಮುಂತಾದ ಪ್ರಶ್ನೆಗಳನ್ನು ಕೇಳಿ ಉತ್ತರ ಪಡಯುತ್ತಿದ್ದರು.

ಅಷ್ಟರಲ್ಲಿ ಶಬರಿ ಸೂರ್ಯ ಮತ್ತು ನವಾಬನನ್ನು ಊಟಕ್ಕೆ ಕರೆದಳು. “ಅದೇನಂಗೆ ಗಂಡುಸ್ರನ್ ಕುಂಡ್ರಿಸ್ಕಂಲಡು ಯೇಳ್ತಾ ಇದ್ದೀರ. ನಮ್ಗೂ ಒಸಿ ಯೇಳ್ರಿ, ರಾತ್ರಿ ಸಾಲೆ ನಡೀವಾಗ ಎಲ್ರು ಮುಂದೂ ಯೇಳಿರೆ ಚಂದಾಗಿರಾಕಿಲ್ವ?” ಎಂದು ಶಬರಿ ಕೂಗಿ ಹೇಳಿ ಜೊತಗೆ “ಇವಾಗ್ ಉಂಬಾಕ್ ಬರ್ರಿ” ಎಂದು ಕರೆದಳು. ಶಬರಿ ಹೇಳಿದ್ದರಲ್ಲೂ ಅರ್ಥವಿದೆಯೆನ್ನಿಸಿ ಸೂರ್ಯ ಹೇಳಿದ- “ನೀನ್ ಹೇಳಿದ್ದೂ ಸರ್‍ಯಾಗಿದೆ ಶಬರಿ. ಆದ್ರೆ ಇಲ್ ಮಾತಾಡಿದ್ದ ವಿಷ್ಯಾನ ಯಾವಾಗ್ಲಾದ್ರು ನಿಮ್ಗೂ ಹೇಳ್ತೀವಿ. ನಾವು ಕೂತ್ರೆ ನಿಂತ್ರೆ ಎಲ್ಲಾ ಕಡೆ ಹೀಗ್ ಮಾತಾಡ್ತ ಇರಬೇಕು ಗೊತ್ತಾ?”

“ಅಂಗಂಬ್ತ ಇಟ್ಟುಂಬಾದೆ ಮರ್‍ತು ಮಾತ್ನಾಗೇ ವೊಟ್ಟೆ ತುಂಬಿಸ್ಕಂಬ್ತೀರಾ?” ಬಿರ್ರನ್ ಬರ್ರಿ”- ಎಂದು ಶಬರಿ ಒತ್ತಾಯಿಸಿದಾಗ ಇವರು ಏಳಲು ಸಿದ್ಧರಾದರು.

ಅಪ್ಪರಲ್ಲ ಗೌರಿ ತನ್ನ ಗುಡಿಸಲಿಂದ ಹೊರಬಂದು ಬಿರಬಿರನೆ ಶಬರಿಯ ಗುಡಿಸಲಿಗೆ ಹೋದಳು.

“ಶಬರಿ, ಇವತ್ತು ನಂದೊಂದ್ ಮಾತ್ ನಡಿಸ್ಕೊಡು?- ಸರ್ರನೆ ಕೇಳಿದಳು.

“ಇದ್ಯಾತ್ರುದೆ ಇಂಗ್ ಕೇಳ್ತಿದ್ದೀಯ? ಅದೇನ್ ಯೇಳು” ಎಂದಳು ಶಬರಿ.

“ಇವತ್ತು ನವಾಬ್ ಸಾಬ್ರುನ್ನ ನನ್ ಮನೇಗ್ ಕರ್‍ದು ಉಂಬಾಕಿಕ್ಕಾನ ಅಂಬ್ತಾ ಇವ್ನಿ. ಆವ್ರಿಗೆ ಸಾಲೆತಾವ್ಲೆ ಯೇಳಿದ್ದೆ”

“ಆಟೇನಾ? ಯಾರ್ ಬ್ಯಾಡ ಅಂದ್ರು ಕರ್‍ಕಂಡೋಗು.”

“ಅವ್ರ್ ಯಾಕೊ ಸುಮ್ಕೆ ಅವ್ರೆ ನೀನೇ ಒಸಿ ಯೇಳ್ಬಿಡು”

“ಸುಮ್ಕೆ ಅವ್ರ ಅಂಬ್ತ ಯಾಕಂಬ್ತೀಯ? ನೀನ್ ಕರ್‍ದಿದ್ರೆ ಬಂದೇ ಬರ್‍ತಾರೆ ಬಿಡು.”

“ಅಂಗಲ್ಲ; ದಿನಾ ನಿನ್ ಮನ್ಯಾಗ್ ಉಂಬ್ತಾ ಇದ್ರಲ್ಲ… ಅದುಕ್ಕೆ…”

“ನವಾಬಣ್ಣಂಗ್ ಮಾಡಿರಾ ಮುದ್ದೇನ ಅಂಗೇ ಇಡ್ತೀನಿ. ವೊತ್ತಾರೆ ಎದ್ದಾಗ ತಂಗಳು ತಿನ್ನಪ್ಪ ಅಂಬ್ತ ಕೊಡ್ತೀನಿ; ಇಲ್ದಿದ್ರೆ ತಂಗಳಿಟನ್ನ ನಿನ್ ತಲೇಗ್ ಕಟ್ತೀನಿ” ಎಂದು ಮುಗುಳ್ನಗುತ್ತ ಶಬರಿ ಹೂರಬಂದು ಹೇಳಿದಳು-

“ಇವತ್ತು ನವಾಬಣ್ಣ ಉಂಬಾದು ಗೌರಿ ಮನ್ಯಾಗೆ. ಸೂರ್ಯ ಉಂಬಾದು ನಮ್ಮನ್ಯಾಗೆ.”

“ಯಾಕೆ ಇಬ್ರನ್ನೂ ಬೇರೆ ಮಾಡ್ತಿದ್ದೀರೇನು?” ಎಂದು ನಗುತ್ತ ಕೇಳಿದ ಸೂರ್ಯ.

“ನಾನ್ಯಾಕ್ ಬ್ಯಾರೆ ಮಾಡ್ಲಿ? ನಾವೇನಿದ್ರೂ ಒಂದ್ ಮಾಡಾರು” ಎಂದು ಶಬರಿ ಅದೇ ದಾಟಿಯಲ್ಲಿ “ಬರ್ ಬರ್ರಿ. ಯಾರ್‍ಯಾರ್ ಎಲ್ಲೆಲ್ ಬರ್‍ಬೇಕೊ ಅಲ್ಲಿಗ್ ಬರ್ರಿ” ಎಂದು ಹೇಳಿ ಒಳಗೆ ಹೋದಳು.

ಗೌರಿಯ ಗುಡಿಸಲಿಗೆ ನವಾಬ್ ಬಂದ.

“ಏನೋ ಬಡವರ್ ಮನೆ… ಬ್ಯಾಸ್ರ ಮಾಡ್ಕ ಬ್ಯಾಡಿ”- ಗೌರಿ ಮಾತಿಗೆ ಶುರು ಮಾಡಿದಳು.

“ಈ ಥರಾ ಮಾತಾಡಿದ್ರೆ ಬೇಸರ ಆಗುತ್ತ. ನಾನ್ ಆವತ್ತೇ ಹೇಳಿದ್ದೀನಿ. ಹೆಸರು ಮಾತ್ರ ನವಾಬ, ಆದ್ರೆ ನಾನು ಗರೀಬ-ಅಂತ”- ನವಾಬ್ ಸ್ಪಷ್ಟವಾಗಿ ನುಡಿದು “ಇಷ್ಟಕ್ಕೂ ಹೀಗೆಲ್ಲ ಪಟ್ಟಣದೋರ್ ಥರಾ ವಿನಯ ತೋರುಸ್ಬೇಡಿ” ಎಂಬ ಮಾತನ್ನೂ ಸೇರಿಸಿದ.

“ಯಾಕೆ ನಾವೂ ಪಟಣ್ದೋರ್ ಥರ ಆಗಬಾರ್‍ದ? ಮತ್ತೆ ಓದುಬರಾ ಅಂಬ್ತ ಯಾಕ್ ಕಲುಸ್ತೀರಿ?”- ಗೌರಿ ಮುಗ್ಧವಾಗಿ, ದೃಢವಾಗಿ ಕೇಳಿದಳು.

“ಹಾಗಲ್ಲ ಗೌರಿ ನಾನ್ ಹೇಳಿದ್ದು. ಪಟ್ಟಣದ ವಿದ್ಯಾವಂತ್ರು, ಅನೇಕ್ರು ಎಲ್ಲದಕ್ಕೂ ಹೀಗೆ ನಯವಾದ ಮಾತಾಡೋದನ್ನ ಅಭ್ಯಾಸ ಮಾಡ್ಕೂಂಡು, ಅದನ್ನ ‘ಮ್ಯಾನರ್‍ಸು ಗೆಸ್ಚರು’ ಅಂತ ಏನೇನೊ ಕರೀತಾರೆ. ಹೊರಗಡೆ ಹೀಗೆಲ್ಲ ಒಂದು ನಯ ವಿನಯದ ಮಾತುಗಳನ್ನೇ ನಿಜ ಮಾಡ್ಕೊಂಡು ಒಳಗೆ ಇಷ್ಟಿಷ್ಟೇ ಖಾಲಿ ಆಗ್ತಾರೆ. ಇದು ನಮ್ಗಿಂತ ವಿದೇಶದಲ್ಲಿ ಜಾಸ್ತಿ…” ಹೀಗೆ ನವಾಬ ವಿವರಣೆ ಕೊಡಲು ಆರಂಭಿಸಿದಾಗ ಗೌರಿ ಮಧ್ಯದಲ್ಲೇ ಬಾಯಿ ಹಾಕಿ “ಉಂಬಾಕ್ ಬಂದಾಗ್ಲೂ ಈಟೊಂದ್ ಬಿಗಿಯಾಗ್ ಮಾತಾಡಿದ್ರೆ ನಾವ್ಯಂಗ್ ಸಲಿಗೇನಾಗ್ ಮಾತಾಡಾಕಾಯ್ತದೆ? ಒಸಿ ನಮ್ತರಾ ಆಗಿ” ಎಂದು ಛೇಡಿಸಿದಳು.

“ನಾನು ನಿಮ್ತರಾ ಆಗ್ತಾ ಇರ್‍ವಾಗ ನೀವು ನಮ್ತರಾ ಆಗ್ಬಿಟ್ರೆ?”- ನವಾಬ ತುಂಟತನದಿಂದ ಕೇಳಿದ.

“ಆವಾಗ್ ಸರ್‍ಯಾತಲ್ಲ? ಇಬ್ರೂ ಒಂದೇ ಥರಾ ಆದಂಗಾತಲ್ಲ?” ಎಂದಳು ಗೌರಿ.

“ನಿಜ ನಿಜ, ನೀವು ನಮಗೆ ಹತ್ರಾ, ನಾವು ನಿಮಗೆ ಹತ್ರಾ ಆಗ್ತಾ ಹೋದ್ರೆ ಇಬ್ರಿಗೂ ಒಂದು ಮೀಟಿಂಗ್ ಪಾಯಿಂಟ್ ಇರುತ್ತೆ. ಆಗ ಒಂದೇ ಆಗ್ತೀವಿ”- ನವಾಬ ಹೀಗೆ ಹೇಳಿದಾಗ “ಅದೇನೊ ಟಿಂಗ್ ಟಿಂಗ್ ಅಂಬ್ತ ಯೇಳ್‍ಬ್ಯಾಡ್ರಿ ನಮಿಗ್ ತಿಳ್ಯಂಗೇಳ್ರಿ” ಎಂದು ಮುಖ ಸಿಂಡರಿಸಿಕೊಂಡು ಕೇಳಿದಳು.

“ನೀನ್ ಕೇಳಿದ್ದು ಸರ್‍ಯಾಗಿದೆ. ನಾನ್ ಹೇಳಿದ ಅರ್ಥ. ನಾವು ನಿಮಗೆ ಒಂದು ವಿಷ್ಯಾನ ಅರ್ಥ ಮಾಡ್ಕೊಡೋಕೆ ನಿಮ್ಮ ಮಟ್ಟಕ್ಕೆ ಬರ್‍ತಾ ಇರ್‍ಬೇಕು. ನೀವು ತಿಳುವಳಿಕೆ ಪಡೀತಾ ನಮ್ಮ ಮಟ್ಟಕ್ಕೆ ಬರ್‍ತಾ ಇರ್‍ಬೇಕು. ಆಗ ಇಬ್ಬರೂ ಒಂದು ಜಾಗ್ದಲ್ಲಿ ಸೇರ್‍ತೀವಿ. ಅಂದ್ರೆ ಒಂದೇ ಥರಾ ಆಗ್ತೀವಿ. ಇದು ನಾನ್ ಹೇಳಿದ್ದು”- ನವಾಬ ವಿವರಿಸಿದ.

“ಆಯ್ತು ನವಾಬ್ರೆ ಆಯ್ತು. ನೀವೂ ಸೂರ್ಯವಪ್ನಂಗೆ ಮಾತಾಡ್ತೀರ. ಕುಂತ್ರೆ ನಿಂತ್ರೆ ಅದೇ ಕುಣಿತ. ಇವಾಗ ಅದೆಲ್ಲ ಗಂಟು ಮೂಟೆ ಕಟ್ಟಿ ನಗ್ ನಗ್ತಾ ಉಂಬಾನ ಬರ್ರಿ.” ಎಂದು ಹೇಳಿದ ಗೌರಿ ಗಂಗಳವನ್ನು ತಂದಿಟ್ಟಳು. ತನಗಾಗಿ ಇನ್ನೊಂದು ಗಂಗಳವನ್ನು ಇಟ್ಟುಕೊಂಡಳು.

“ಇಲ್ಲಿ ಗಂಡುಸ್ರಿಗ್ ಉಂಬಾಕಿಕ್ವಾಗ್ ಯೆಂಗುಸ್ರು ಜತ್ಯಾಗ್ ಕುಂತ್ಕಂಬಂಗಿಲ್ಲ. ಬ್ಯಾರೆ ಗಂಡುಸ್ರು ಜತೇಗಂತೂ ಉಂಬಂಗೇ ಇಲ್ಲ. ಇವತ್ತದೇನಾಯ್ತದೊ ನೋಡೇಬಿಡ್ತೀನಿ. ನಿಮ್ ಜತ್ಯಾಗ್ ಉಂಡೇಬಿಡ್ತೀನಿ. ನಿಮ್ ಜತ್ಯಾಗುಣ್ಬೇಕು ಅಂಬ್ತ ಆವತ್ನಿಂದ ಬರೀ ಕನಸ್ನಾಗೇ ಉಂಡಿದ್ದೆ. ಇವತ್ತು ನಿಜವಾಗ್ಲೂ ಉಂಡ್ ಬಿಡ್ತೀನಿ” ಎಂದು ಸಂಭ್ರಮದಿಂದ ಹೇಳುತ್ತಲೇ ಅನ್ನ ತಂದು ಬಡಿಸಿದಳು. ತಾನೂ ಬಡಿಸಿಕೊಂಡಳು.

“ಇದೇನು ಅನ್ನ”- ನವಾಬ ಅಚ್ಚರಿಯಿಂದ ಕೇಳಿದ.

“ಮನೇಗ್ ನೆಂಟ್ರು ತರಾ ಕರ್‍ದು ಅದೆ ರಾಗಿ ಇಟ್ ಇಡಾಕಾಯ್ತದ? ನಾನೇ ಊರಾಕೋಗಿ ಅಕ್ಕಿ ತಗಂಡ್ ಬಂದು ಬಚ್ಚಿಟ್ಕಂಡಿದ್ದೆ. ಬಿರ್‌ಬಿರ್‍ನ ತಿನ್ನು”- ಗೌರಿ ಸಡಗರ ಸಂತೋಷಗಳಿಂದ ಹೇಳಿದಳು.

ನವಾಬನಿಗೆ ಭಾವವುಕ್ಕಿ ಬಂತು. ಎಂಥ ಮುಗ್ಧ ಪ್ರೀತಿ ಎಂದುಕೊಂಡ ಕ್ಷಣಕಾಲ ಅನ್ನಕ್ಕೆ ಕೈ ಹಾಕದೆ ಆಕೆಯನ್ನೇ ನೋಡಿದ.

“ಯೇ ಯಾಕಂಗ್ ನುಂಗಾ ತರಾ ನೋಡ್ತೀಯ? ನನ್ನ ಮಕದಾಗೇನ್ ದೆವ್ವ ಕುಣಿತೈತ?”- ಗೌರಿ ಕೆಣಕಿದಳು.

“ಇಲ್ಲ, ಹಕ್ಕಿ ಹಾರ್‍ತಾ ಇದೆ.”

“ಇದೊಳ್ಳೆ ಚಂದಾಗಾತು. ನನ್ ಮಕ ನೋಡಿರೆ ವೊಟ್ಟೆ ತುಂಬಾಕಿಲ್ಲ. ಬಿರ್‌ಬಿರ್‍ನ ತಿನ್ನು. ಆಮ್ಯಾಕ್ ನಮ್ಮಪ್ಪ ಬಂದ್ಬಿಟ್ಟಾನು.”

“ನಿಮ್ಮಪ್ಪ ಬಂದ್ರೇನ್ ಮಾಡ್ತಾನೆ?”

“ಏನ್ ಮಾಡ್ತಾನೆ? ಯೇಳ್ದೆ ಕೇಳ್ದೆ ನಿನ್ನ ಯಾಕ್ ಕರ್‍ದಿದ್ದು ಅಂಬ್ತ ಮಕಮಾರೆ ನೋಡ್ದೆ ಜಾಡುಸ್ತಾನೆ. ಅದ್ಕೇ ಬ್ಯಾಗುಂಬಾನ. ಈಟಕ್ಕೂ ನಮ್ಮಪ್ಪಂಗೆ ಅನ್ನ ಮಾಡೇ ಇಲ್ಲ. ನಿಂಗೇ ಅಂಬ್ತಾನೇ ಮಾಡಿವ್ನಿ” ಎಂದು ಒಂದೇ ಸಮ ಹೇಳಿದಳು.

ಬಹುವಚನದ ಬಟ್ಟೆ ಕಳಚಿದ ಏಕವಚನದ ಬೆತ್ತಲು;
ನಾಚಿದ ಮುಖದಲ್ಲಿ ಹೊಳೆದ ಕಣ್ಣುಗಳು,
ಮಾತಿಗೆ ಹತ್ತಾರು ಬಣ್ಣಗಳು.

ನವಾಬ್ ಮೌನವಾದ. ಊಟ ಮಾಡತೊಡಗಿದ. ಆಗ ಗೌರಿ ಕೆಣಕಿದಳು-
“ಇದೇನು ಮೂಗ್ ಬಸವಣ್ಣನ್ ತರಾ ಉಂಬ್ತಾ ಕುಂತೆ. ಒಸಿ ಮಾತಾಡು. ಏನಾರ ಮಾತಾಡು.”

ನವಾಬ “ಮಾತಾಡ್ತ ಊಟ ಮಾಡಾದ್ ತಡ ಆಗಿ ನಿಮ್ಮಪ್ಪ ಬಂದ್ರೆ?” ಎಂದ.

ಗೌರಿ “ಅಂಗಾರ್ ಮದ್ಲು ಉಂಡ್‍ಬಿಡಾನ; ಆಮ್ಯಾಕ್ ಮಾತುಗೀತು” ಎನ್ನುತ್ತಾ ಗಬಗಬನೆ ತಿನ್ನತೊಡಗಿದಳು. ನವಾಬ ಮುಗುಳ್ನಗುತ್ತ ಆಕೆಯನ್ನು ನೋಡುತ್ತ ಊಟ ಮಾಡಿದ.

ನೋಟವೇ ಊಟವಾದ ಸನ್ನಿವೇಶ.
ರಾತ್ರಿಗೆ ಹೊದಿಸಿದ ಹಗಲು ವೇಷ.
ಹೂರಗೆ ಕತ್ತಲು, ಒಳಗೆ ಹಗಲು.

ಇಲ್ಲಿ ಶಬರಿಯ ಮನೆಯಲ್ಲಿ ಊಟ ಮಾಡುತ್ತಲೇ ಆರಂಭವಾದ ಮಾತು. ಊಟವಾದ ಮೇಲೂ ಮುಗಿದಿರಲಿಲ್ಲ; ಮುಂದುವರೆದಿತ್ತು ಕಟ್ಟೆ ಮೇಲೆ ಕೂತು ಆಡುತ್ತಿದ್ದ ಮಾತುಗಳನ್ನು ಮುಂದುವರೆಸಿದ್ದ-ಸೂರ್ಯ.

“ನೋಡು ಶಬರಿ, ನೀವು ಪ್ರಪಂಚದ ಇದ್ಯಾವುದೋ ಮೂಲೇಲಿ ವಾಸಮಾಡ್ತ ಇದ್ದೀರ. ಆದ್ರೆ ನಿಮ್ ಬಾಳುವೆ ಮೇಲೆ ಈ ದೇಶದೋರಷ್ಟೇ ಅಲ್ಲ, ಬೇರೆ ದೇಶದವರೂ ಪರಿಣಾಮ ಉಂಟುಮಾಡ್ತಾರೆ. ನಮ್ಮ ಸರ್ಕಾರಕ್ಕೆ. ಈ ದೇಶದಲ್ಲಿರೊ ಶ್ರೀಮಂತರಿಗೆ ಸಹಾಯ ಮಾಡ್ತಾರೆ ಆ ದೇಶದವರು. ಇಲ್ಲೆಲ್ಲ ಬಂಡವಾಳ ಹಾಕ್ತೀವಿ ಅಂತ ಹಣ ಸುರೀತಾರೆ. ಸರ್ಕಾರ ತಾವು ಹೇಳೊ ಹಾಗೆ ಕೇಳ್ಬೇಕು, ಹಾಗ್ ಮಾಡ್ಕೂತಾರೆ. ಇನ್ನು ಇಲ್ಲಿದಾರಲ್ಲ ಈ ಒಡೆಯರು, ಜೋಯಿಸ್ರು- ಇವ್ರು ತಂತಮ್ಮ ಸ್ವಾರ್‍ಥ ನೋಡ್ಕೋತಾರೆ. ಸಂಪತ್ತು ಎಲ್ಲಾ ಅವ್ರ್ ಹತ್ರಾನೇ ಇರ್‍ಬೇಕು, ನೀವೆಲ್ಲ ಹೀಗೇ ಕಷ್ಟದಲ್ಲೇ ಬದುಕಬೇಕು. ಒಡೆಯನಿಗೆ ಭೂಮಿ, ಜೋಯಿಸನಿಗೆ ಬುದ್ಧಿ, ಭೂಮಿ ಬುದ್ಧಿ ಎರಡೂ ಅವ್ರಿಗೆ ಬಲ ನೀಡುತ್ವೆ. ಅವರು ನಿಮ್ ಮೇಲೆ ಸವಾರಿ ಮಾಡ್ತಾರೆ”- ಹೀಗೆ ಸೂರ್ಯ ಉತ್ಕಟವಾಗಿ ವಿವರಿಸಿತೊಡಗಿದ.

“ಅಲ್ಲ, ನಂದೊಂದ್ ಅನ್ಮಾನ”- ಶಬರಿ ಮಾತು ಆರಂಭಿಸಿದಳು.
“ಏನು? ಏನದು ಕೇಳು”- ಸೂರ್ಯ ಅದಕ್ಕಾಗಿ ಕಾದವನಂತೆ ಹೇಳಿದ.
“ಅವಾಗ-ನಮ್ ಶಬರಜ್ಜಿ, ಕಾಡ್ನಾಗೆ ಗುಡಿಸ್ಲು ಕಟ್ಕಂಡು ರಾಮ್‍ದ್ಯಾವ್ರನ್ನ ಕಾಯ್ದಾಗ-ಅವ್ಳು ಅಣ್ಣು ಅಂಪ್ಲ ಬೆಳೀತಿದ್ಲು. ರಾಮಂಗೆ ಅಂಬ್ತ ಇಟ್ಕಂಡ್ ಕಾಯ್ತಾ ಇದ್ಲು- ಅಂಬ್ತ ಯೇಳ್ತಾರೆ. ಶಬರಜ್ಜೀಗೆ ಬೆಳೆ ಬೆಳ್ಯಾಕೆ ಬೂಮಿ ಇತ್ತು. ಆ ಬೂಮಿ ತಾಯಿ ಶಬರಜ್ಜೀಗೆ ವರ ಕೊಡ್ತಿದ್ಲು. ಅಣ್ಣು ಅಂಪ್ಲು, ಗೆಡ್ಡ, ಗೆಣಸು, ಎಲ್ಲಾ ಕೊಡ್ತಿದ್ದು. ಇವಾಗ ನಮಗೆ ನಮ್ದೇ ಅಂಬ್ತ ಒಂದಂಗೈ ಅಗ್ಲಾನೂ ಬೂಮಿ ಇಲ್ಲ; ಬೆವರು ಮಾತ್ರ ಐತೆ. ಯಾಕಿಂಗ್ ಅಂಬ್ತ”- ನೋವನ್ನು ಕುದಿಸಿ ಮಾತಿನ ಮುದ್ದೆ ಮಾಡುವಂತೆ ಕೇಳಿದಳು, ಶಬರಿ.

ಸೂರ್ಯ ಉತ್ತೇಜಿತನಾದ; ಹೇಳತೊಡಗಿದ.

“ನೋಡು ಶಬರಿ, ಹಿಂದೆ, ಅದೇ ನಿಮ್ಮ ಶಬರಜ್ಜಿ ಕಾಲ ಬೇರೆ ಥರಾ ಇತ್ತು. ಒಂದ್ ಕಾಲ್ದಲ್ಲಿ ಭೂಮಿ ಯಾರ್‍ಗೂ ಸೇರಿರ್‍ಲಿಲ್ಲ ಅಥವಾ ಎಲ್ರಿಗೂ ಸೇರಿತ್ತು. ಕಾಡುಗಳಲ್ಲಿ, ಬೆಟ್ಟಗುಡ್ಡಗಳಲ್ಲಿ ಬಾಳ್ವೆ ಮಾಡ್ತಿದ್ದ ಮನುಷ್ಯರು ಎಲ್ರೂ ತಮತಮಗೆ ಬೇಕಾದಂತೆ ಭೂಮೀನ ಬಳಸ್ಕೋತಿದ್ರು. ಭೂಮೀನ ಹದಮಾಡ್ತಾ ಇದ್ರು. ಆದ್ರೆ ಬರ್‍ತಾ ಬರ್‍ತಾ ಬಲ ಇರೋರು ಬುದ್ಧಿ ಇರೋರು ಮಾಲೀಕರಾದ್ರು; ಬೆವರು ಬಸಿಯೋ ಜನರನ್ನ ಗುಲಾಮರ ಥರಾ ಮಾಡ್ಕೊಂಡ್ರು. ಬಲ ಇದ್ದೋರ್‍ಗೆ ಬುದ್ಧಿ ಇದ್ದೋರ್‍ಗೆ ಬಂಬಲ ಸಿಗ್ತಾ ಹೊಯ್ತು. ಅವ್ರು ರಾಜರಾದ್ರು; ಮಂತ್ರಿಗಳಾದ್ರು. ಅವರೇ ಒಡೆಯರು. ಉಳಿದೋರು ಹೇಳಿದಂತೆ ಕೇಳೋರು. ಇವರ ಬೆಂಬಲಿಗರಿಗೆ-ಸಣ್ಣಪುಟ್ಟ ಬಲಶಾಲಿಗಳಿಗೆ, ಬುದ್ಧಿಶಾಲಿಗಳಿಗೆ ಇದೇ ಒಡೆಯರಿಂದ ಅಷ್ಟು ಇಷ್ಟು ಭೂಮಿ ಸಿಗ್ತು. ಬರ್‍ತಾ ಬರ್‍ತಾ ಏನಾಯ್ತಪ್ಪ ಅಂದ್ರೆ-ರಾಜರ ಕಾಲ ಮುಗೀತು; ರಾಜಕಾರಣಿಗಳ ಕಾಲ ಬಂತು. ಇವ್ರಲ್ಲೂ ಬಲ-ಬುದ್ಧಿ ಇರೋರೆ ಭೂಮಾಲೀಕರಾದ್ರು ಪಟೇಲರಾದ್ರು, ಶಾನುಭೋಗರಾದ್ರು. ಉಳಿದವರು ಅವ್ರವ್ರ ಕುಲಕಸುಬು ಅಂತ ಇದ್ದಲ್ಲೇ ಇದ್ರು. ಬಲಶಾಲಿಗಳಿಗೆ ಬುದ್ದಿಶಾಲಿಗಳಿಗೆ ಬೆವರು ಕೊಟ್ರು. ಆದ್ರೆ ಆರಂಭದಲ್ಲಿ ಈ ಬೆವರು ಕೊಟ್ಟೋರ್‍ಗೆ ಅವರು ಭೂಮೀನೂ ಕೊಡ್ಲಿಲ್ಲ. ಬುದ್ಧೀನೂ ಕೊಡ್ಲಿಲ್ಲ. ಆದ್ರೆ ಈಗ ಕಾಲ ಬದಲಾಗ್ತಿದೆ. ಭೂಮಿ, ಬುದ್ಧಿ, ಯಾರೊಬ್ಬರ ಸೊತ್ತೂ ಅಲ್ಲ ಅಂತ ಗೊತ್ತಾಗ್ತಾ ಇದೆ. ಯಾರು ಭೂಮೀಗೆ ಬೆವರು ಕೊಟ್ಟು ಬೆಳೆ ಬೆಳ್ಯೋಹಾಗ್ ಮಾಡ್ತಾರೊ ಅವ್ರಿಗೂ ಭೂಮಿ ಸಿಗ್ಬೇಕು ಅಂತ ಕೆಲವು ಕಾನೂನುಗಳೂ ಇವೆ. ಅಂದ್ರೆ ‘ಉಳೋನೆ ಹೂಲದೊಡೆಯ’ ಅನ್ನೊ ಮಾತಿಗೆ ಬೆಲೆ ಬಂದಿದೆ. ಆದ್ರೆ ನೀವೆಲ್ಲ ಒಟ್ಟಿಗೇ ಸೇರಿ ಜಗ್ಗಿಸಿ ಕೇಳ್ದಿದ್ರೆ ಕೆಲ್ಸ ಆಗೊಲ್ಲ…..”

“ಒಂದ್ ಮಾತು”- ಶಬರಿ ಮಧ್ಯದಲ್ಲೇ ತಡೆದಳು.
“ಅದೇನೊ ಅಂದೆಲ್ಲ ಉಳೋನೇ….”
“ಹೊಲದೊಡೆಯ”
“ಸರ್‍ಯಪ್ಪ, ಉಳೋನೇ ಹೊಲದೊಡೆಯ ಅನ್ನಾದ್ ಬ್ಯಾಡ ಅಂಬಲ್ಲ ನಾನು. ಗಂಡುಸ್ರು ಉಳ್ತಾರೆ; ನಾವ್ ಯೆಣ್ ಯೆಂಗುಸ್ರು ಹೂಲ ಉಳಾಕಿಲ್ಲ. ಆದ್ರೆ ನಾವು ಬೀಜ ಬಿತ್ತನೆ ಮಾಡ್ತೀವಿ; ಸಸಿ ಆಕ್ತೀವಿ; ಕಳೆ ತಗೀತೀವಿ; ಫಸಲು ಬಂದಾಗ ಕೊಯ್ಲು ಮಾಡ್ತೀವಿ. ಈಟೆಲ್ಲ ಮಾಡೀರು ನವ್ ಒಡೇರಾಗಂಗಿಲ್ವ?” ಶಬರಿ ತೀರ ಸಹಜವಾಗಿ ಪ್ರಶ್ನಿಸಿದಳು.

ಸೂರ್ಯನಿಗೆ ಅಚ್ಚರಿಯಾಯಿತು; ಸಂತೋಷವೂ ಆಯಿತು.

“ಸರ್‍ಯಾದ ಪ್ರಶ್ನೆ ಕೇಳ್ದೆ ಶಬರಿ. ಇದೇ ನೋಡು ನಮ್ಮ ಸಮಾಜದಲ್ಲರೊ ದೋಷ. ಗಂಡುಸ್ರಿಗೆ ಆಸ್ತಿ ಒಡೆತನ ಕೊಡ್ತಾ ಬಂದಿದಾರೆ. ಸಂಸಾರದಲ್ಲಿ ಗಂಡಸರೇ ಒಡೆಯರು. ಹೀಗಾಗಿ ಹೆಂಗಸರಿಗೆ ಅನ್ಯಾಯ ಆಗ್ತಾ ಬಂದಿದೆ…” ಎಂದು ಸೂರ್ಯ ಹೇಳುತ್ತಿದ್ದಾಗ ಶಬರಿ ಥಟ್ಟನೆ- “ನಮ್ಮ ಶಬರಜ್ಜೀಗೆ ಯಾವ್ ಗಂಡುಸ್ರು ಯಾಕ್ ಎದರಾಡ್ಲಿಲ್ಲ. ಅವ್ಳ್ ಬೆಳೀತಿದ್ದ ಬೂಮೀನ ಯಾಕ್ ಕಿತ್ಕಂಬ್ಲಿಲ್ಲ? ಕಾಡ್ನಾಗೆ ಯೆಣ್ಣೆಂಗ್ಸು ಒಬ್ಬಳೇ ಒಂಟಿ ಜೀವ್ನ ಮಾಡಿದ್ಲಲ್ಲ. ಇವಾಗಿದೆಲ್ಲ ಯಾಕಿಲ್ಲ?” ಎಂದು ಪ್ರಶ್ನಿಸಿದಳು.

“ಶಬರಜ್ಜಿ ಕತೆ ಇದ್ಯಲ್ಲ, ಆ ಕಾಲ್ದಲ್ಲಿ, ಆಗ ಆಸ್ತಿ ಅನ್ನೋದು ಇವತ್ತಿನ ಥರಾ ಇರ್‍ಲಿಲ್ಲ. ಕಾಡು ಅನ್ನೋದು ಆಳೋರಿಗೆ ಸೇರಿರ್‍ಲಿಲ್ಲ ಅಂತ ಕಾಣ್ಸುತ್ತೆ. ಅದು ಸರ್‍ಯೋ ತಪ್ಪೊ ಈಗ ಬೇಡ. ಆದ್ರೆ ನಾನ್ ಆಗ್ಲೆ ಹೇಳ್ದಾಗೆ ಬರ್ ಬರ್‍ತಾ ಬಲಶಾಲಿಗಳು ಬುದ್ಧಿಶಾಲಿಗಳು…” ಎಂದು ಸೂರ್ಯ ಹೇಳುತ್ತಿರುವಾಗಲೇ ಶಬರಿ “ಅದು ನಂಗೊತ್ತಾತು ನಾನ್ ಕೇಳಾದು ಅದಲ್ಲ; ಆ ಶಬರಜ್ಜೀಗೆ ಬೂಮಿ ಇತ್ತು; ನಂಗ್ಯಾಕಿಲ್ಲ? ಉಳೋನೇ ವೊಲದೊಡ್ಯ ಅಂಬಾದು ಸರಿ ಅಂದ್ಕಮಾನ, ಆದ್ರೆ ವೊಲ್ದಾಗೆ ಆಟಂದೆಲ್ಲ ಕೆಲ್ಸ ಮಾಡ್ತೀವಲ್ಲ ಯಂಗುಸ್ರು ನಮಗ್ಯಾಕ್ ಒಡೆತನ ಕೊಡಾಕಿಲ್ಲ?” ಎಂದು ಹೇಳುತ್ತಿರುವಾಗಲೇ ಸೂರ್ಯ “ಅದನ್ನೇ ನಾನ್ ಹೇಳೋಕ್ ಹೊರಟಿದ್ದು” ಎಂದು ಮಾತಾಡಲು ಹೋದಾಗ ಶಬರಿ ಬಿಡಲಲ್ಲ.

“ನನ್ ಮಾತ್ ಕೇಳು. ನಂಗೆಲ್ಲಾ ಕೇಳಿದ್‍ಮ್ಯಾಗೆ ಏನನ್ನುಸ್ತುತೆ ಗೊತ್ತಾ? ಬೂಮ್ತಾಯಿ ನಮ್ ಗಂಡುಸ್ರಿಗ್ ಸಿಕ್ಕಿದ ಮ್ಯಾಗೂ ಯೆಣ್ಣೆಂಗುಸ್ರಿಗ ಸುಕ ಏನ್ ಸಿಗಾಕಿಲ್ವೇನೊ ಅನ್ನುಸ್ತೈತೆ. ನಿಂಗಂಗನ್ಸಾಕಿಲ್ವ”- ಎಂದು ಕೇಳಿದಳು.

“ಯಾಕ್ ಅನ್ಸೊಲ್ವ? ನನ್ ಪ್ರಶ್ನೇನೂ ಅದೇ. ಆಸ್ತಿ, ಅಧಿಕಾರ ಎಲ್ಲದ್ರಲ್ಲೂ ಹೆಂಗಸರು-ಗಂಡಸರು ಸಮಾನ ಅಂತ ಆಗ್ಬೇಕು”- ಸೂರ್ಯ ನಿರ್ಧಾರಕವಾಗಿ ಹೇಳಿದ. ಆಗ ಶಬರಿ ದೃಢವಾಗಿ ಹೇಳಿದಳು- “ಅದುಕ್ಕೆ ನಾನ್ ಏನ್ ಯೇಳ್ತೀನಿ ಗೊತ್ತ? ಇನ್ಮ್ಯಾಕೆ ‘ಉಳೋನೇ ವೊಲ್ದೊಡ್ಯ’ ಅನ್ನಾ ಬದ್ಲು ‘ದುಡ್ಯೋರೇ ಒಡೇರು’ ಅಂಬ್ತ ಯೇಳ್ಬೇಕು.”

ಶಬರಿಯ ಈ ಮಾತಿನಿಂದ ರೋಮಾಂಚಿತನಾದ. “ನವಾಬ್, ನವಾಬ್, ಬಾ ಇಲ್ಲಿ. ಬೇಗ ಬೇಗ…” ಎಂದು ಕೂಗುತ್ತ ಹೊರಬಂದ.

ಗೌರಿ ಗುಡಿಸಲಿನಲ್ಲಿದ್ದ ನವಾಬ್ ಏನಾಯಿತೂ ಎಂಬಂತೆ ದಡಬಡನೆ ಬಂದ. “ಏನಾಯ್ತು, ಏನಾಯ್ತು ಸೂರ್ಯ” ಎಂದು ಕೇಳಿದ. ಆ ವೇಳೆಗೆ ಶಬರಿಯೂ ಹೂರಬಂದಿದ್ದಳು. ಇತರರೂ ಗುಡಿಸಲಿನಿಂದ ಹೂರಬಂದರು. ಸೂರ್ಯ ಬಂದವರ ಕಡೆ ನೋಡುತ್ತಿದ್ದ. ನವಾಬ್ ಮತ್ತೆ ಕೇಳಿದ- “ಯಾಕಂಗ್ ಕೂಗ್ದೆ? ಏನಾಯ್ತು?”

ಸೂರ್ಯ ಸಮಸ್ಥಿತಿಗೆ ಬಂದು ಹೇಳಿದ- “ಶಬರಿ ಎಂಥಾ ಒಳ್ಳೆ ಮಾತ್ ಹೇಳಿದ್ಲು ಗೊತ್ತ? ನಾನು ‘ಉಳುವವನೇ ಹೊಲದೊಡೆಯ’ ಅನ್ನೊ ವಿಷ್ಯ ವಿವರಿಸ್ತಾ ಇದ್ದೆ. ಆಕೆ ಎಲ್ಲಾ ಕೇಳಿ ಒಂದು ಪ್ರಶ್ನೆ ಹಾಕಿದ್ಲು. ಇದನ್ನ ಎಲ್ರೂ ಹಾಕ್ಬೇಕು. ಶಬರಿ ಕೇಳಿದ್ಲು-ಅಲ್ಲ ಹೂಲದಲ್ಲಿ ದುಡ್ಯೋರು ಬರೀ ಗಂಡುಸ್ರಲ್ಲ; ಹೆಂಗಸ್ರು ಇನ್ನೂ ಹೆಚ್ಚು ಕೆಲ್ಸ ಮಾಡ್ತೀವಿ. ಆದ್ರೆ ನಮಗ್ಯಾಕೆ ಒಡೆಯರು ಅಂತ ಹೇಳಿಲ್ಲ ಅಂತ ಕೇಳಿದ್ಲು…”

ನವಾಬ ಥಟ್ಟನೆ “ಆಸ್ತಿ ಹಕ್ಕು ಹೆಂಗಸರಿಗೂ ಇದೆಯಲ್ಲ” ಎಂದ. “ಅದು ಬೇರೆ ವಿಷ್ಯ ಕಣಯ್ಯ. ಶಬರಿ ಕೇಳಿದ್ದು ಅದಲ್ಲ. ಈಗ ಭೂಮೀನೇ ಇಲ್ಲ. ಬೇರೆಯವರ ಭೂಮೀನ್ ಉಳೋರ್‍ಗೆ ಒಡೆತನ ಕೊಡ್ಬೇಕು ಅಂತ ಗೇಣಿದಾರರ ಪರವಾಗಿ ಕಾನೂನಿದೆ. ಇದು ಮೊದಲನೇ ಹಂತ. ಹೆಂಗಸರಿಗೂ ಆಸ್ತಿ ಹಕ್ಕು ಇದೆ. ಇದೆ ಅಂದ್ರೆ ಅದು ಒಬ್ಬ ಪ್ರಜೆಯಾಗಿ ಇರೊ ಹಕ್ಕು. ಆದ್ರೆ ಶಬರಿ ಪ್ರಶ್ನೆ- ಹೊಲದಲ್ಲಿ ಕೆಲ್ಸ ಮಾಡೋ ಗಂಡುಸ್ರು-ಹೆಂಗಸ್ರು ಇಬ್ಬರು ಇಬ್ಬರು ಗೇಣಿದಾರರಲ್ವೆ?- ಅಂತ. ಆಕೆ ಮಾತಿನ ಆಳ್ದಲ್ಲಿ ಈ ಅಂಶ ಅಡಗಿದೆ. ಅದಷ್ಟೇ ಅಲ್ಲ; ಈ ತತ್ವಕ್ಕೆ ಒಂದು ಘೋಷಣೆನೂ ಕೂಟ್ಟಿದಾಳೆ. ತೀರಾ ಸಹಜವಾಗಿ ಆಕೆ ಅದನ್ನ ಹೇಳ್ದಾಗ ಎಷ್ಟು ಸಂತೋಷ ಆಯ್ತು ಗೊತ್ತಾ? ಅದಕ್ಕೇ ನಿನ್ನನ್ನ ಕರ್‍ದಿದ್ದು….” ಎಂದು ಸೂರ್ಯ ವಿವರಿಸಿದ.

“ಸರ್‍ಯಪ್ಪ. ಅದೇನ್ ಘೋಷಣೆ ಅದನ್ ಹೇಳು”- ನವಾಬ ಒತ್ತಾಯದಿಂದ ಕೇಳಿದ.

“ಉಳುವವನೇ ಹೊಲದೊಡೆಯ ಅನ್ನೋದು ಆಗ ಸರಿ. ಆದ್ರೆ ಈಗ ‘ದುಡಿಯೋರೇ ಒಡೆಯರು’ ಅನ್ಬೇಕು ಅನ್ನೋದು ಶಬರಿ ಕೊಟ್ಟಿರೊ ಘೋಷಣೆ. ಹೇಗಿದಿ?”- ಸೂರ್ಯ ಸಡಗರದಿಂದ ಹೇಳಿದ.

ನವಾಬ್ ಪ್ರತಿಕ್ರಿಯಿಸುವುದಕ್ಕೆ ಮುಂಚೆಯೇ ಗೌರಿ “ತುಂಬಾ ಚಂದಾಗೈತೆ” ಎಂದಳು.

‘ಯಾಕ್ ಚನ್ನಾಗಿದೆ?’- ಸೂರ್ಯ ಕೇಳಿದ.

“ಯಾಕೆ ಅಂದ್ರೆ? ದುಡ್ಯೋರು ಗಂಡಸ್ರಾನ ಆಗ್ಲಿ ಯಂಗುಸ್ರಾನ ಆಗ್ಲಿ ಒಡೆತನ ಬರಾದಾದ್ರೆ ಇಬ್ರಿಗೂ ಬರ್‍ಲಿ. ಒಂದ್ ಕಣ್ಣಿಗ್ ಸುಣ್ಣ, ಒಂದ್ ಕಣ್ಣಿಗ್ ಬೆಣ್ಣೆ ಯಾಕ?”- ಗೌರಿ ಹಿಂಜರಿಯದೆ ಉತ್ತರಿಸಿದಳು. ಆಗ ಶಬರಿ ಉತ್ಸಾಹಿತಳಾದಳು. “ಹ್ಞೂ ಮತ್ತೆ. ನಾನದುಕ್ಕೇ ಯೇಳಿದ್ದು. ಮದ್ಲು ನೋಡಿರೇ ಒಡೇರೇ ಎಲ್ಲಾ ಬೂಮಿ ಇಟ್ಕಂಡು ನಮ್ ಗಂಡುಸ್ರಿಗೂ ಸಿಗ್ದಂಗ್ ಮಾಡಿದ್ರು; ಯೆಂಗುಸ್ರೀಗೂ ಸಿಗ್ದಂಗ್ ಮಾಡಿದ್ರು. ಉಳೋರೇ ಒಡೇರಾಗ್ವಾಗ ನಮ್ಮಂತೋರು -ಬೂಮ್ತಾಯೀಗೆ ಅಂಬ್ತ ಬೆವರು ಸುರಿಸ್ದೋರು ಯಣ್ಣೆಂಗುಸ್ರು-ಏನ್ ತೆಪ್ ಮಾಡಿದ್ರು ಕಣ್ಣಿಗ್ ಸುಣ್ಣ ಅಚ್ಚಿಸ್ಕಮಾಕೆ? ಆಟೇ ಅಲ್ಲ. ಯಾರೆಲ್ಲಾನ ದುಡ್ಮೆ ಮಾಡ್ಲಿ. ದುಡಿಮೆ ಮಾಡಿದ್ಕೆಲ್ಲ ಅವ್ರೇ ಒಡೇರಾಗ್ಬೇಕು ಅಲ್ವಾ? ಯೇಳ್ರಿ ಮತ್ತೆ ಎಲ್ಲಾ?” ಎಂದು ಶಬರಿ ಸ್ಪಷ್ಟವಾಗಿ ಹೇಳಿದಾಗ ಸೂರ್ಯನಿಗೆ ಇಮ್ಮಡಿಸಿದ ಸಂತೋಷ-ಸಡಗರ.

“ಮಾತು ಅಂದ್ರೆ ಇದು. ಒಬ್ರೇ ಕೂತ್ಕಂಡು ಯೋಚ್ನೆ ಮಾಡ್ತಾ ಹೋದ್ರೆ, ಇದೆಲ್ಲ ಹೊಳಿಯುತ್ತ ಯೋಚ್ನೆ ಮಾಡಿ. ಎಲ್ರೂ ಚನ್ನಾಗ್ ಯೋಚ್ನೆ ಮಾಡಿ” ಎಂದು ಪ್ರೇರೇಪಿಸಿತೂಡಗಿದ.

“ಇನ್ನೇನ್ ಕುಂತ್ಕಂಡ್ ಯೋಚ್ನೆ ಮಾಡಾದು. ಈಗ ನಿಂತ್ಕಂಡಂಗೇ ಸತ್ತೈವ್ ಗೊತ್ತಾತಲ್ಲ”- ಎಂದಳು ಗೌರಿ.

ಆಗ ನವಾಬ ಉತ್ಸಾಹದಿಂದ – “ಏನ್ರಮ್ಮ ನಿಮ್ಗೇನನ್ಸುತ್ತೆ? ಏನಪ್ಪ ಗಂಡುಸ್ರು ನೀವೂ ಹೇಳ್ರಿ ಶಬರಿ ಹೇಳಿದ್ದು ಸರ್‍ಯಾಗಿದೆ ಅಲ್ವಾ?” ಎಂದು ಕೇಳಿದ.

ಆಗ ಸೂರ್ಯ “ನಿಂತ ನಿಲುವಿಗೆ ಒತ್ತಾಯ ಮಾಡೋದ್ ಬೇಡ ಗೆಳೆಯ. ಅವ್ರ ಮನಸ್ಸಿಗೆ – ಇದು ನಿಜ ಅನ್ನುಸ್ಬೇಕು” ಎಂದ. ಜೊತೆಗೆ “ಒಂದು ಮಾತ್ ಹೇಳ್ತೀನಿ. ಹೆಂಗಸರ ಪರ ಮಾತಾಡ್ತಿದಾರೆ ಅಂತ ಗಂಡಸ್ರು ತಿಳ್ಕೋಬಾರ್‍ಬು. ಇಡಿಯಾಗಿ ಬುಡಕಟ್ನೋರ್ ಪರ, ಬಡವರ ಪರ ನಾವ್ ಹೀಗಂತ ಹೇಳ್ತಿರೋದು?” ಎಂದು ಸ್ಪಷ್ಟಪಡಿಸಿದ.

“ಯೇ ಅದ್ಯಾಕಪ್ಪ ಅಂಗಂಬ್ತೀಯ?” ಒಬ್ಬ ಗಂಡಸು ಹೇಳಿದ – “ಇವಾಗೇನ್ ನಮಿಗೆ ಬೂಮಿ ಐತಾ? ಬೆಳೆ ಐತಾ? ಬರಂಗಿದ್ರೆ ಗಂಡುಸ್ರಿಗಾನ ಬರ್‍ಲಿ, ಯೆಂಗುಸ್ರಿಗಾನ ಬರ್‍ಲಿ. ಒಟ್ಗೇ ಇಬ್ರಿಗಾನ ಬರ್‍ಲಿ.

ಇನ್ನೊಬ್ಬ “ಸರ್‍ಯಾಗೇಳ್ದೆ ಕಣಯ್ಯ” ಎಂದ ಮೆತ್ತಗೆ.

ಆಗ ಸೂರ್ಯ ಹೇಳಿದ- “ನಿಜ; ಈಗ ನಿಮಿಗೆ ಭೂಮಿ ಇಲ್ಲ. ಬರೋದಕ್ಕೆ ಬೇಕಾದ ಕೆಲ್ಸಾನೂ ಆಗಿಲ್ಲ. ಆದ್ರೆ ಮುಂದೆ ಭೂಮಿ ಬಂದ್ರೆ ನಿಮ್ ನಿಮ್ಮಲ್ಲೇ ವ್ಯತ್ಯಾಸ ಇರಬಾರದು ಅಲ್ವಾ?”

ಆಗ ಮೊದಲು ಮಾತನಾಡಿದವ ಹೇಳಿದ- “ವೆತ್ತಾಸ ಏನಿದ್ರು ಇರೋರ್‍ಗೆ ಕಣಪ್ಪ. ಇಲ್ದೋರ್‍ಗಲ್ಲ.”

ಎಂಥ ಸೊಗಸಾದ ಮಾತು ಎನ್ನಿಸಿತು ಸೂರ್ಯನಿಗೆ. ನವಾಬನಲ್ಲೂ ಮಂದಹಾಸ ಮೂಡಿತು.

ಈ ವೇಳೆಗೆ ಹೆಂಗಸರಲೂ ದನಿ ಮೂಡತೊಡಗಿತು. ಒಬ್ಬ ಹಂಗಸು “ಸ್ಯಬರಿ ಯೇಳಾದು ಸರ್‍ಯಾಗೇ ಐತೆ. ಅಂಗೇನೆ ನಮ್ ಗಂಡುಸ್ರು ಯೇಳಾದೂ ಚಂದಾಗೆ ಐತೆ. ಯೆಂಗಾರ ನಮ್ಗೂ ಒಸಿ ಬೂಮಿಕಾಣಿ ಬರಂಗ್ ಮಾಡಪ್ಪ ಮಾರಾಯ” ಎಂದಳು.

ಸೂರ್ಯ ಮತ್ತು ನವಾಬ ಒಟ್ಟಿಗೇ “ಖಂಡಿತ ಮಾಡ್ತೀವಿ” ಎಂದರು.

ಆಗ ಶಬರಿ ಹೇಳಿದಳು- “ಮಾತಾಡಿದ್ವಿ ಅಂದ್ರೆ ಮನೆ ಬಾಗ್ಲಿಗ್ ಬಂದೇ ಬಿಡ್ತಾಳ ಬೂಮ್‍ತಾಯಿ. ಅದ್ಕೂ ಏನೇನ್ ಮಾಡ್ಬೇಕೊ ಏನ್ಕತೆಯೊ.”

ಗಂಡಸೊಬ್ಬ- “ಸರ್‍ಯಾಗೇ ಯೇಳ್ದೆ ಕಣವ್ವ. ಆ ಒಡೇರ್‍ತಾವಿರಾ ಬೂಮಿ ನಮಿಗ್ ಬರಾದೆಲ್ಲಾನ ಉಂಟಾ! ಏಟಾದ್ರೂ ಅವ್ರ್ ಒಡೇರು” ಎಂದು ರಾಗ ಎಳೆದ.

ಈಗ ಮೂಡಿದ ಭಾವನೆಗಳ ದಿಕ್ಕು ಬದಲಾಗಬಾರದೆಂದು ಬುದ್ಧಿಪೂರ್ವಕವಾಗಿ ಯೋಚಿಸಿದ ಸೂರ್ಯ “ಅದೆಲ್ಲ ಒಂದೇ ದಿನದಲ್ಲ್ ಆಗೋದಿಲ್ಲ. ಯಾರು ಯಾರ್‍ನೂ ತುಳಿದು ಜೀವನ ಮಾಡ್ಬಾರದು ಅನ್ನೊ ತಿಳುವಳಿಕೆ ನಿಮಿಗ್ ಬಂದ್ರೆ ಮುಂದೆ ಏನ್ ಮಾಡ್ಬೇಕು ಅಂತ ಗೊತ್ತಾಗ್ತ ಹೋಗುತ್ತೆ. ಈ ಭೂಮಿತಾಯಿ ಮೇಲೆ ನಿಮಿಗೆ ಎಷ್ಟೊಂದು ಭಯಭಕ್ತಿ ಎಲ್ಲಾ ಇದೆ. ಇಂಥಾ ಭೂಮಿತಾಯೀನ ಒಬ್ರೇ ಗುತ್ತಿಗೆ ಹಿಡ್ಕೊಂಡು ಅವ್ರ್ ಸಂಸಾರ ಸಾಕೋಕೆ ಸೇವಕಿ ಥರ-ಅಂದ್ರೆ ಮನೆ ಆಳಿನ ಥರಾ ನಡಿಸ್ಕೂಳ್ಳೋದು ಸರ್‍ಯಾ? ನೀವ್ ನೀವೇ ಕೂತ್ಕೊಂಡು ಯೋಚ್ನೆ ಮಾಡ್ತಾ ಹೋಗಿ. ಆಮೇಲ್ ಒಂದು ದಿನ ಎಲ್ಲಾ ಸೇರಿ ಯಾವ್ದಾದ್ರೂ ದಾರಿ ಕಂಡ್ಕೊಂಡ್ರಾಯ್ತು. ಒಟ್ನಲ್ಲಿ ಇವತ್ತು ಶಬರಿ ಹೇಳಿದ್ದು ಸರಿ. ಅದ್ರ ಬಗ್ಗೆ ತಕರಾರಿಲ್ಲ ಅಲ್ವಾ?” ಎಂದು ಮತ್ತಷ್ಟು ಮಾತು ಹೇಳಿದಾಗ ಅನೇಕರು “ತಕರಾರೇನೈತಪ್ಪ ನಿನ್ ದರ್‍ಮ, ಒಳ್ಳೆ ಮಾತ್ಯಾರೇಳೀರೇನು?” ಎಂದರು. ಕೆಲವರು “ಸ್ಯಬರಿ, ನಮ್ ಹುಡುಗಿ ಏನೇಳೀರು ಚೆಂದ” ಎಂದರು. ಆಗ ಸೂರ್ಯ “ಆಯ್ತು ಹೋಗಿ” ಎಂದು ಕೈಮುಗಿದ. ಆಗ “ನೀನ್ಯಾತಕ್ ನಮಿಗ್ ಕೈಮುಗೀತೀಯ? ಎದೆ ಸೀಳೀರ್ ಒಂದಕ್ಸರ ಬರಾಕಿಲ್ಲ ಇನ್ನೂವೇ” ಎಂದಳು ಒಬ್ಬ ಹೆಂಗಸು. ಇತರರೂ ಹೌದೆಂಬಂತೆ ನೋಡಿದರು.

“ಹಾಗೆಲ್ಲ ಹೇಳ್ಬೇಡಿ. ನೀವೆಲ್ಲ ನನ್ನ ಅಕ್ಕಂದ್ರು, ಅಣ್ಣಂದ್ರು ಇದ್‍ಹಾಗೆ. ಒಂದ್ ಮಾತ್ ಹೇಳ್ತೀನಿ- ವಿದ್ಯಾವಂತರೆಲ್ಲ ವಿವೇಕಿಗಳಲ್ಲ; ಅವಿದ್ಯಾವಂತರೆಲ್ಲ ಅವಿವೇಕಿಗಳಲ್ಲ- ನಿಮ್ಮನ್ನ ನೋಡ್ದಾಗ ಈ ಸತ್ಯ ಗೊತ್ತಾಗುತ್ತೆ”- ಸೂರ್ಯ ಎದೆಯಾಳದಿಂದ ಹೇಳಿದ. “ದೊಡ್ಮನ್ಸ ದೊಡ್ ಮನ್ಸು” ಎಂದು ತಂತಮಲ್ಲೇ ಮಾತಾಡ್ತಾ ತಂತಮ್ಮ ಗುಡಿಸಲುಗಳಿಗೆ ಹೋದರು.

ಸೂರ್ಯ, ನವಾಬನನ್ನು ಕರೆದುಕೊಂಡು ಹೂರಗಡೆ ಹೊರಟ. ಶಬರಿ ಆಶ್ಚರ್ಯದಿಂದ ಕೇಳಿದಳು- “ಈಟೋತ್ನಾಗ್ ಎಲ್ಲಿಗೋಯ್ತೀರ?” ಸೂರ್ಯ- “ಬೆಳದಿಂಗಳೈತಲ್ಲ ಶಬರಿ. ಹೀಗೆ ಅಡ್ಡಾಡ್ಕಂಡ್ ಬರ್‍ತೀವಿ” ಎಂದು ಹೇಳಿ “ಬಾರೊ ಗೆಳೆಯ?” ಎಂದು ಕರದೊಯ್ದ.

ಬೆಟ್ಟ ಗುಡ್ಡ ಬಯಲು ತುಂಬ ಬೆಳದಿಂಗಳು.
ಅದು ಹೂರಗಿನ ಬೆಳದಿಂಗಳಷ್ಟೆ ಅಲ್ಲ;
ಭಾವದ ಬೆಳದಿಂಗಳು.

ಇಲ್ಲಿ ಶಬರಿ ಗುಡಿಸಲು ಮುಂದೆ ನಿಂತು ಆಕಾಶದತ್ತ ನೋಡಿದಳು. ಮೇಲೆ ಬೆಳಗುವ ಚಂದ್ರ. ಬೆಳದಿಂಗಳೆಂದು ಹೂರಟ ಸೂರ್ಯ.

ಚಂದ್ರನ ಬೆಳಕಲ್ಲಿ ಸೂರ್ಯನ ಪಯಣ.

ಹಟ್ಟಿ ತುಂಬಿದ ತಿಂಗಳ ಬೆಳಕಲ್ಲಿ ಶಬರಿ ನಿಂತಿದ್ದಳು. ಇಲ್ಲೀವರೆಗೆ ನಡೆದ ಘಟನೆ ಅವಳಲ್ಲಿ ಹೇಳಲಾಗದ ಅನುಭವವನ್ನು ತುಂಬಿಕೊಟ್ಟಿತ್ತು. ಎಲ್ಲವೂ ತಾನೇತಾನಾಗಿ ನಡೆದಂತೆ; ಮನಸ್ಸಿಗೆ ಮಾತು ಬಂದಂತೆ.

ತಿಂಗಳ ಬೆಳಕನ್ನು ತುಂಬಿಕೊಳ್ಳುತ್ತ ಒಳಗೆ ಹೋದಳು. ತನ್ನಲ್ಲೇ ಇಟ್ಟುಕೊಂಡಿದ್ದ ಚಂದ್ರನ ಫೋಟೋವನ್ನು ನೋಡತೊಡಗಿದಳು. ಇದು ಹರಿದುಕೊಂಡ ಫೋಟೋ. ಅಂದು ಸೂರ್ಯ ಚಂದ್ರರಿಬ್ಬರೂ ಇದ್ದ ಚಿತ್ರವನ್ನು ಅರ್ಧಕ್ಕೆ ಹರಿದದ್ದು, ಇದನ್ನು ತನ್ನಲ್ಲೇ ಇಟ್ಟುಕೂಂಡದ್ದು, ಆಗಾಗ್ಗೆ ನೋಡಿಕೊಂಡದ್ದು- ಎಲ್ಲ ಭಗ್ಗೆಂದು ತುಂಬಿ ಬರುತ್ತದೆ.

ಬೆಳದಿಂಗಳಿಗೆ ಲಗ್ಗೆಯಿಟ್ಟ ಉರಿ ಬಿಸಿಲು!
ತಿಂಗಳ ಹಾದಿಯಲ್ಲಿ ಬಿಸಿಲು ಬಂಡಿಯ ಪಯಣ.

ಹಿಡಿದುಕೊಂಡಿದ್ದ ಚಂದ್ರನ ಚಿತ್ರ ಸುಡುತ್ತಿರುವ ಸಂಕಟ. ಸೂರ್ಯನ ಚಿತ್ರ ಹೇಗಿದೆಯೊ?

ಬಗಲು ಚೀಲದ ಬಳಿಗೆ ಬಂದಳು. ಪುಸ್ತಕವೊಂದು ಹೂರಗೇ ಇತ್ತು. ಅದು ಕೆಂಪು ಪುಸ್ತಕ ಪುಸ್ತಕವನ್ನು ತೆಗೆದುಕೂಂಡು ತಿರುವಿ ಹಾಕಿದಳು. ಸೂರ್ಯನ ಚಿತ್ರ ಸಿಕ್ಕಿತು. ಅದನ್ನು ತಗೆದುಕೊಂಡು ಚಂದ್ರನ ಚಿತ್ರದ ಪಕ್ಕದಲ್ಲಿಟ್ಟಳು. ಯಾಕೊ ಸರಿಬರಲಿಲ್ಲ. ಸೂರ್ಯನ ಚಿತ್ರವನ್ನು ಕೈಗೆತ್ತಿಕೊಂಡಳು.

ಸೂರ್ಯನ ಚಿತ್ರಕ್ಕೆ ಬಿಸಿಲಿನ ಬೇಗೆಯಿಲ್ಲ; ಬಳದಿಂಗಳ ತಂಪು.

ನೋಡುತ್ತಲೇ ಇದ್ದ ಶಬರಿಗೆ ಬಗಲು ಚೀಲದ ಬಗ್ಗೆ ಕುತೂಹಲ ಕೆರಳಿತು. ತನ್ನನ್ನು ನೋಡಿದ ಕೂಡಲೇ ಚೀಲವನ್ನು ಸೂರ್ಯ ಮರಿಮಾಡಿದ್ದು ನೆನಪಿಗೆ ಬಂದು ಕುತೂಹಲ ಮತ್ತಷ್ಟು ಹೆಚ್ಚಿತು. ಸೂರ್ಯನ ಚಿತ್ರವನ್ನು ಪುಸ್ತಕದ ಒಳಗಿಟ್ಟು ಚೀಲದೂಳಗೆ ಕೈ ಇಟ್ಟಳು. ಅದರಲ್ಲೂ ಪುಸ್ತಕಗಳಿದ್ದವು. ತೆಗೆದುನೋಡಿದಳು. ಕೆಂಪು ರಟ್ಟಿನ ಎರಡು ಪುಸ್ತಕಗಳು. ಎರಡು ಸಾದಾ ಪುಸ್ತಕಗಳು; ಒಂದೆರಡು ಬಟ್ಟೆ ಇಷ್ಟೆಲ್ಲ ಈ ಬಗಲು ಚೀಲದಲ್ಲಿ. ಮತ್ತೆ ಒಳಗೆ ಕೈ ಇಟ್ಟ ಶಬರಿಯ ಮುಖದಲ್ಲಿ ಆಶ್ಚರ್ಯ, ಕುತೂಹಲ ಹೆಚ್ಚುತ್ತ ಹೋದಂತೆ ಕೈ ಹೊರತೆಗೆದಳು.

ಪಿಸ್ತೂಲು!

ಎಂದೊ ಪೋಲಿಸರ ಕೈಯ್ಯಲ್ಲಿ ಕಂಡಿದ್ದಳು. ಈಗ ಸೂರ್ಯನ ಬಗಲು ಚೀಲದಲ್ಲಿ! ಹಾಗಾದರೆ ಸೂರ್ಯ ಯಾರು? ಸರಿಯಾಗಿ ತಿಳಿಯದ ಪಿಸ್ತೂಲು ಸಮೇತ ನಿಂತುಕೊಂಡಳು. ಯೋಚಿಸತೊಡಗಿದಳು.

ಬಿಸಿಲು ಬಡಿದು ಬೆಳದಿಂಗಳು ಚೂರಾಗುವ ಅನುಭವ.
ಬಿಸಿಲೇ ಬೆಳದಿಂಗಳಾಗುವುದೊ ಬೆಳದಿಂಗಳು ಬಿಸಿಲಾಗುವುದೊ!
ಸರಸರನೆ ಹರಿವ ತಳಮಳ.

ಅಷ್ಟರಲ್ಲಿ ಸೂರ್ಯ ‘ಶಬರಿ’ ಎಂದು ಕೂಗುತ್ತ ಬಂದ.

ಶಬರಿ ತಕ್ಷಣ ಪಿಸ್ತೂಲನ್ನು ಚಂದ್ರನ ಚಿತ್ರ ಸಮೇತ ಸರಗಿನಲ್ಲಿ ಮುಚ್ಚಿಕೊಂಡಳು.

ಸೂರ್ಯ “ಇವತ್ತು ತುಂಬಾ ಆನಂದವಾಯ್ತು ಶಬರಿ. ನೀನು ನಿಜಕ್ಕೂ ಒಂದು ಶಕ್ತಿ ಆಗ್ತೀಯ; ಉಳಿದೋರಲ್ಲೂ ಶಕ್ತಿ ತುಂಬ್ತೀಯ. ಇಷ್ಟು ಹೊತ್ತೂ ಗೆಳೆಯನ ಹತ್ರ ಇದೇ ಮಾತಾಡ್ತಾ ಇದ್ದೆ” ಎಂದು ಹೇಳತೊಡಗಿದ. ಶಬರಿ ಮಾತಾಡದೆ ನಿಂತಿದ್ದಳು. ಸೂರ್ಯ ಮಾತು ನಿಲ್ಲಿಸಲಿಲ್ಲ. “ಬೆಳದಿಂಗಳು ತುಂಬಾ ಹಾಯಾಗಿತ್ತು. ತೋಪಿನ ಹತ್ರ ಹೋದ್ವಿ, ಮರಗಳ ಮಧ್ಯೆ ತೂರ್ ಬಂದು ಭೂಮಿ ಮೇಲೆ ಬಿದ್ದಿರೊ ಬೆಳದಿಂಗಳು ನೋಡೋದೇ ಒಂದು ಅಂದ; ಅಲ್ಲಿ ನಿನ್ ವಿಷ್ಯ ಮಾತಾಡೋದೇ ಒಂದ್ ಆನಂದ. ಒಳ್ಳೇ ಅನುಭವ?”- ಸೂರ್ಯ ಹೇಳುತ್ತಲೇ ಇದ್ದ. ಶಬರಿಗೆ ಏನು ಹೇಳಬೇಕೆಂದು ತೋಚಲಿಲ್ಲ.

ಬಿಸಿಲಿನ ಬಾಯಲ್ಲಿ ಬೆಳದಿಂಗಳ ಮಾತು!
ಯಾವುದು ಬೆಳದಿಂಗಳು, ಯಾವುದು ಬಿಸಿಲು?
ಸೂರ್ಯನ ಜರಡಿಯಲ್ಲಿ ಬೆಳದಿಂಗಳ ಬೆಳಕು!
ಯಾವುದು ದಿಟ? ಯಾವುದು ಅಲ್ಲ?

ಪಿಸ್ತೂಲು ಸೆರಗಿನಲ್ಲಿ ಸಿಡಿಮಿಡಿಯೆನ್ನತೊಡಗಿತು. ಶಬರಿ ಸೆರಗನ್ನು ಬಿಗಿಯಾಗಿ ಹಿಡಿದುಕೊಂಡಳು. ನಕ್ಕಂತೆ ಮಾಡಿ ಅಲ್ಲಿಂದ ಹೊರಟಳು.

ಸೂರ್ಯನಿಗೆ ಅರ್‍ಥವಾಗಲಿಲ್ಲ. ಹಾಗಂತ ಅಪಾರ್‍ಥವನ್ನೂ ಮಾಡಿಕೊಳ್ಳಲಿಲ್ಲ. ಹೊಗಳಿಕೆಯಿಂದ ನಾಚಿಕೆಯಾಗಿರಬೆಕು ಎಂದುಕೊಂಡು ತನ್ನ ಜಾಗಕ್ಕೆ ಬಂದ; ಕೂತ.

ಪುಸ್ತಕಗಳನ್ನು ನೋಡಿದಾಗ ಏನೋ ವ್ಯತ್ಯಾಸ ಕಾಣಿಸಿತು. ಬಗಲು ಚೀಲ ಅಸ್ತವ್ಯಸ್ತವಾಗಿ ಬಿದ್ದಿತ್ತು. ಸೂರ್ಯ ತೆಗೆದುಕೊಂಡ. ಒಳಗೆ ಕೈ ಇಟ್ಟು ನೋಡಿದ.

ಪಿಸ್ತೂಲು ಇಲ್ಲ!

ಕಿಟ್‌ಬ್ಯಾಗಿನಲ್ಲಿ ಹುಡುಕಿದ. ಅಲ್ಲೂ ಇರಲಿಲ್ಲ. ತಲೆದಿಂಬಿನ ಕೆಳಗೂ ಇಲ್ಲ. ಗಾಬರಿಗೊಂಡ. ಆದರೂ ಆತುರಪಡದೆ ಸ್ವಲ್ಪ ಹೊತ್ತು ಸುಮ್ಮನೆ ಕೂತ. ಆದರೆ ಚಡಪಡಿಕೆ ನಿಲ್ಲಲಿಲ್ಲ. “ಶಬರಿ” ಎಂದು ಕೂಗಿದ.

ಶಬರಿ ಬಂದಳು. ಮಾತಾಡದೆ ನಿಂತಳು. “ಯಾಕಂಗ್ ಸುಮ್ನೆ ನಿಂತ್ಕಂಡೆ?” ಎಂದು ಕೇಳಿದ. “ಕರ್‍ದಿದ್ದು ನೀನಲ್ವ? ಅದೇನ್ ಕೇಳು” ಎಂದು ಶಬರಿ ನೇರವಾಗಿ ಹೇಳಿದಳು. ಅವಳಲ್ಲಿ ಮೊದಲಿನ ತಳಮಳ ಇದ್ದಂತಿರಲಿಲ್ಲ.

“ನನ್ ಚೀಲ್ದೊಳ್ಗೆ ಕೈ ಹಾಕಿದ್ಯ ನೀನು?”- ಸೂರ್ಯ ಅಷ್ಟೇ ನೇರವಾಗಿ ಕೇಳಿದ.

“ಯಾಕೆ? ಅದ್ರಾಗೇನಾರ ದುಡ್‍ಗಿಡ್ ಮಡಗಿದ್ಯ?”

“ದುಡ್ ಕಳ್ದೋಗಿದ್ರೆ ನಾನ್ ಚಿಂತೇನೆ ಮಾಡ್ತಿರ್‍ಲಿಲ್ಲ. ಪೀಡೆ ತೊಲಗ್ತು ಅಂದ್ಕೋತಿದ್ದೆ.”

“ಅಂಗಾರದೇನಪ್ಪ ಅಂತಾ ಸಾಮಾನು ಕಳ್ದೋಗಿರಾದು? ಚಿನ್ನ ಬೆಳ್ಳಿ ಏನಾರ ಬಚ್ಚಿಟ್ಕಂಡಿದ್ದಾ?”

“ನಿನ್ನ ತಲೆ? ಚಿನ್ನಾನೂ ಇಲ್ಲ, ಬೆಳ್ಳೀನೂ ಇಲ್ಲ… ಅದೆಲ್ಲ ನಂಗೆ ಕಂಡ್ರೆ ಆಗೋದಿಲ್ಲ”- ಸೂರ್ಯ ಸಿಡಿಮಿಡಿಗೊಂಡು ಹೇಳಿದ.

ಮೌನವಾಗಿ ಶಬರಿ ಸೂರ್ಯನ ಹತ್ತಿರ ಬಂದು ಸೆರಗಿನಿಂದ ಪಿಸ್ತೂಲು ತೆಗೆದು “ತಗಾ” ಎಂದು ಕೊಡ ಹೋದಳು. ಸೂರ್ಯ ದಿಟ್ಟಿಸಿದ.

“ಯಾಕಂಗ್ ನುಂಗಾ ತರಾ ನೋಡ್ತೀಯಾ? ನೀನೇ ಯೇಳ್ದಲ್ಲ ವೊರಗೆ ಬೆಳದಿಂಗಳು ಚಂದಾಗಿತ್ತು ಅಂಬ್ತ. ಇಲ್ಲಿ ಒಳ್ಗೆ ಬಿಸ್ಲು ಬಡೀತಾ ಇತ್ತು. ಅದ್ಕೇ ನಿನ್ ಪಟ ನೋಡಾನಾಂಬ್ತ ಚೀಲ್ದಾಗ್ ಕೈ ಇಟ್ರೇ- ಮಿಡಿನಾಗರ ಸಿಕ್ದಂಗೆ ಇದು ಸಿಕ್ ಬಿಡ್ತು. ತಗಾ” ಎಂದು ಹೇಳುತ್ತ ಕೊಟ್ಟಳು.

ಸೂರ್ಯ ಪಿಸ್ತೂಲನ್ನು ತೆಗೆದುಕೊಳ್ಳುತ್ತ “ಸದ್ಯ ಇಲ್ಲೇ ಇತ್ತಲ್ಲ. ಎಲ್ಲಾದ್ರು ಕಳ್ಕಂಡ್ ಬಂದ್ನೇನೊ ಅಂದ್ಕೊಂಡಿದ್ದೆ” ಎಂದು ಸಮಾಧಾನದಿಂದ ನುಡಿದ.

ಸ್ವಲ್ಪ ಹೊತ್ತು ಮೌನ.
ಎರಡು ದಡಗಳ ನಡುವೆ ಹರಿವ ನದಿ
ತೇಲಿ ಮುಳುಗುವ ಹತ್ತಾರು ತುಂಡು ಗಿಡಗಳು

ಗಂಟಲು ಸರಿಪಡಿಸಿಕೊಂಡ ಶಬರಿ ಕೇಳಿಯೇಬಿಟ್ಟಳು-ಗಂಭೀರ ಗಡಸು ದನಿಯಲ್ಲಿ.

“ನಂಗೊಂದ್ ದಿಟ ಗೊತ್ತಾಗ್ಬೇಕು.”
“ಏನು?”
“ನೀನು ಯಾರು? ದಿಟವಾಗಿ ನೀನ್ ಯಾರು?”
“ಯಾಕಿಂಗ್ ಕೇಳ್ತಿದ್ದೀಯ?”
“ಗುಬ್ಬಚ್ಚಿ ಗೂಡ್ನಾಗೆ ಗಿಡುಗ ಇರ್‍‍ಬಾರ್‍ದಲ್ಲ; ಅದುಕ್ಕೆ”
“ಅಂಗಂದ್ರೆ?”
“ಸುತ್ತೇಳಳ್ಳಿ ನೀರ್ ಕುಡ್ದಿರಾ ನಿಂಗೆ ಬಿಡ್ಸೇಳ್ ಬೇಕಾ?”
“ಇವತ್ತು ಹಾಗೇ ಅನ್ನುಸ್ತಾ ಇದೆ”
“ಅಂಗಾರೆ ಯೇಳ್ತೀನ್ ಕೇಳು. ನೀನು ಇದುನ್ನೆಲ್ಲ ಇಟ್ಕಂಡಿರ್ ಬೇಕಾರೆ ಪೋಲಿಸ್ನಾನಿರ್‍ಬೇಕು ಇಲ್ದಿದ್ರೆ ಕಳ್ಳ ಇರ್‍ಬೇಕು…?- ಶಬರಿ ಅನ್ನಿಸಿದ್ದನ್ನು ಹಾಗೇ ಹೇಳಿಬಿಟ್ಟಳು.
“ಪೋಲಿಸು, ಕಳ್ಳ ಬಿಟ್ರೆ ಬೇರೆ ಯಾರೂ ಪಿಸ್ತೂಲು ಇಟ್ಕೊಳ್ಳೋದಿಲ್ವ? – ಎಂದು ಸೂರ್ಯ ಕೇಳಿದಾಗ ಶಬರಿ ಕ್ಷಣಕಾಲ ಯೋಚಿಸಿದಳು.
“ಕೂಲೆ ಮಾಡಾರು…. ಅವ್ರ್ ಇಟ್ಕಂಬ್ತಾರೆ.”
ಸೂರ್ಯನಿಗೆ ಗಾಬರಿಯಾಯಿತು. ಇದೇನಿವಳು ಹೀಗೆ ಮಾತಾಡುತ್ತಿದ್ದಾಳೆ? ಕೇಳಿದ-
“ಯಾಕೆ? ಊರ್ ಒಡೆಯರು ಪಿಸ್ತೂಲು, ಬಂದೂಕು ಎಲ್ಲಾ ಇಟ್ಕೊಂಡಿಲ್ವ?”
“ಅದ್‍ಬ್ಯಾರೆ ವಿಸ್ಯ. ಅಂಗಂಬ್ತ ನಾವೆಲ್ಲ ಇಟ್ಕಮಾಕಾಯ್ತದ?”
“ಯಾಕಿಟ್ಕೂಬಾರ್‍ದು?” ಸೂರ್ಯ ಪ್ರಶ್ನಾರ್ಥಕವಾಗಿ ಕೇಳುತ್ತಲೇ ಉತ್ತರ ಕೊಟ್ಟಿದ್ದ. ಅದನ್ನೇ ವಿವರಿಸಿದ- “ಬೇರೆಯವರು ನಮ್ ಮೇಲೆ ಬಿದ್ರೆ ನಮ್ ಪ್ರಾಣ ಉಳಿಸ್ಕೋಬೇಕೊ ಇಲ್ವೊ ಹೇಳು. ಅದಕ್ಕಾಗಿ ಇದನ್ನ ಇಟ್ಕೂಂಡಿದ್ದೀನಿ.”

“ಇವಾಗ್ ನಿನ್ ಮೇಲೆ ಯಾರ್ ಬೀಳ್ತಾರೆ? ಅಂತಾದ್ದೇನ್ ಮಾಡಿದ್ದೀಯ ನೀನು? ನಂಗೇನೊ ಅನ್ಮಾನಪ್ಪ”

“ಯಾಕಿಂಗ್ ಮಾತಾಡ್ತೀಯ ಶಬರಿ? ಈಗ ನೋಡು, ನಿಮ್ಗೆಲ್ಲ ಭೂಮಿ ಕೊಡ್ಸೋಕೆ ನಾನ್ ಪ್ರಯತ್ನ ಮಾಡ್ತೀನಿ ಅಂತಿಟ್ಕೊ. ಆಗ ಭೂಮಿ ಇಟ್ಕೊಂಡಿರೋರು ನನ್ ಮೇಲೆ ಹಗೆ ಸಾಧಿಸ್‍ಬಹುದು. ಕೊಲ್ಲೋದಕ್ಕೂ ಪ್ರಯತ್ನ ಮಾಡ್‍ಬಹುದು…” -ಹೀಗೆ ಸೂರ್ಯ ಹೇಳುತ್ತಿರುವಾಗಲೇ ಶಬರಿ ಥಟಕ್ಕನೆ ಕೇಳಿದಳು- “ಅಂಗೆಲ್ಲ ಆಗಾದುಂಟಾ? ನಿನ್ ಜೀವಾನೇ ತಗುದ್ ಬಿಡ್ತಾರ? ಆಮ್ಯಾಕ್ ನಮ್ ಗತಿ?” ಸೂರ್ಯನಿಗೆ ಇಷ್ಟು ಸಾಕಾಗಿತ್ತು. ತಕ್ಷಣವೇ ಅದೇ ಭಾವವನ್ನು ಮುಂದುವರಿಸಿ ಹೇಳಿದ- “ಅದಕ್ಕೇ ನಾನ್ ಹೇಳೋದು. ನಿಮ್ ಜೊತೆ ನಾನಿರಬೇಕು ಅನ್ನೊ ಹಾಗಿದ್ರೆ ಇದೂ ನನ್ ಜೊತೆ ಇರ್‍ಬೇಕು.”

“ಇದ್ರಾಗ್ ನೀನ್ ಯಾರ್‍ನೂ ಕೊಂದಾಕಾಕಿಲ್ಲ, ಅಲ್ವಾ?”

“ಇದು ಕೊಲ್ಲೋಕಲ್ಲ. ಕೂಲ್ಲೋಕ್ ಬಂದೋರಿಂದ ಬದುಕೋಕೆ. ನಿಂಗ್ ಯಾವ ಭಯಾನೂ ಬೇಡ ಶಬರಿ”

“ನಾನ್ಯಾಕ್ ಬಯ ಪಡ್ಲಿ? ನಂಗ್ ಬಯ ಇರಾದು ನಿಂಗೇನಾರ ಆಗ್ಬಿಟ್ರೆ ಅಂಬ್ತ?”

“ನಂಗೇನೂ ಆಗಲ್ಲ. ನೀನ್ ಇರೋವರ್‍ಗೂ ನಂಗೇನೂ ಆಗಲ್ಲ ಯಾಕ್ ಗೊತ್ತಾ ಶಬರಿ? ಈ ಪಿಸ್ತೂಲ್ಗಿಂತ ನಿನ್ ಶಕ್ತಿ ದೂಡ್ಡದು” ಎಂದು ಸೂರ್ಯ ಹೇಳಿದಾಗ ಹೇಗೆ ಪ್ರತಿಕ್ರಿಯಿಸಬೇಕೆಂದು ಗೊತ್ತಾಗದೆ ಸ್ವಲ್ಪ ಭಾವುಕವಾಗತೂಡಗಿದಳು ಶಬರಿ. ಸೂರ್ಯ ಶಬರಿಯ ಭಾವ ವಲಯವನ್ನು ಮತ್ತಷ್ಟು ಗಟ್ಟಿಗೊಳಿಸುವಂತೆ ಮಾತು ಮುಂದುವರೆಸಿದ.

“ಆ ಶಬರಜ್ಜಿ ಅಷ್ಟು ವರ್ಷ ಒಬ್ಬಳೇ ಕಾಡ್ನಲ್ ಕಾಯ್ಬೇಕಾದ್ರೆ ಎಷ್ಟು ಶಕ್ತಿ ಇರ್‍ಬೇಕು, ಎಷ್ಟು ಸ್ಥೈರ್‍ಯ ಇರ್‍ಬೇಕು, ಯೋಚ್ನೆ ಮಾಡು. ಚನ್ನಾಗ್ ತಿಳ್ಕೊ. ನನ್ ದೃಷ್ಟೀಲಿ ಶಬರಿ- ಒಂದು ಶಕ್ತಿ. ಈ ಶಕ್ತಿ ನಿನಗೆ ಅರ್ಥವಾಗ್ತಾ ಹೋಗ್ಬೇಕು.”

ಶಬರಿ ಸಹಜವಾಗಿ “ಅದುಕ್ಕೆಲ್ಲ ನೀನಿದ್ದೀಯಲ್ಲ” ಎಂದು ಮುಗುಳ್ನಕ್ಕಳು.

ಸೂರ್ಯ ಉತ್ಸಾಹಿತನಾಗಿ ಅವಳ ಕೈ ಹಿಡಿದು ಅದುಮಿದ. ಅಷ್ಟರಲ್ಲಿ ತಿಮ್ಮರಾಯಿ ‘ಶಬರಿ’ ಎನ್ನುತ್ತಾ ಬಂದ. “ಬಾ ಅಪ್ಪಯ್ಯ ಉಂಬಾಕಿಕ್ತೀನಿ” ಎಂದು ಶಬರಿ ಅಡುಗೆ ಮನೆಗೆ ಹೋದಳು.

ತಿಮ್ಮರಾಯಿ ಮಾತನಾಡಲಿಲ್ಲ. ಕುಡಿದು ಬಂದದ್ದರಿಂದ ಸೂರ್ಯನ ಎದುರು ಸಂಕೋಚ ಉಂಟಾಗಿತ್ತು. ಸೂರ್ಯ ತಾನಾಗಿ ಹೂರಗೆ ಬಂದು ಕೂತ.

ಆತನೊಳಗೆ-ನಡೆದ ಘಟನೆಗಳ ಮರು ಸಂಯೋಜನೆ ಸಾಗಿತ್ತು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಕ್ಕರೆ ನೋವಾಗುವುದು
Next post ಸೇತುವೆ ಕುಸಿದಿದೆ

ಸಣ್ಣ ಕತೆ

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ವಲಯ

    ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

    ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

cheap jordans|wholesale air max|wholesale jordans|wholesale jewelry|wholesale jerseys