ಒಂದೂರಿನಲ್ಲಿ ಒಬ್ಬ ರಾಜ, ಅವನಿಗೊಬ್ಬ ಪ್ರಧಾನಿ ಹಾಗೂ ಒಬ್ಬ ಸೇವಕ ಇದ್ದರು. ಸೇವಕನು ತನ್ನನ್ನು ಪ್ರಧಾನಿಯೊಡನೆ ಹೋಲಿಸಿಕೊಂಡು ಹಲವು ಬಗೆಯಾಗಿ ಚಿಂತಿಸುತ್ತಿದ್ದನು – “ತನ್ನ ಸಂಬಳ ಹತ್ತೆಂಟು ರೂಪಾಯಿ ಮಾತ್ರ. ಪ್ರಧಾನಿಯ ಸಂಬಳ ಬೊಗಸೆ ಬೊಗಸೆ. ತನ್ನ ಕೆಲಸ ಓಡಾಟದ್ದು, ಪ್ರಧಾನಿಯದು ಸ್ವಸ್ಥ ಕುಳಿತುಕೊಳ್ಳುವುದು. ಈ ಭೇದಭಾವವೇಕೆ ?”

ರಾಜನನ್ನು ಕೇಳಿಯೇಬಿಟ್ಟನು ಸೇವಕನು – “ಹಗುರು ಕೆಲಸಮಾಡುವ ಪ್ರಧಾನಿಯ ಸಂಬಳ ಲೆಕ್ಕ ತಪ್ಪಿ; ಶ್ರಮದ ಕೆಲಸಮಾಡುವ ನನ್ನ ಸಂಬಳ ಹತ್ತೆಂಟು ಟಿಗಳಿ. ಹೀಗೇಕೆ?”

“ನಿನ್ನ ಕೆಲಸ ಶ್ರಮದ್ದು. ಪ್ರಧಾನಿಯ ಕೆಲಸ ಹಗುರು. ಆದರೂ ಅಷ್ಟು ಸಂಬಳ ಅವನಿಗೆ ಕೊಡಲೇಬೇಕಾಗುತ್ತದೆ. ಶ್ರಮದ ಕೆಲಸವಾದರೂ ನಿನ್ನ ಸಂಬಳ ಕಡಿಮೆ ಅಲ್ಲ- ಆದರೂ ನಿನಗೆ ಅಸಮಾಧಾನವೆನಿಸುತ್ತಿದ್ದರೆ ಇನ್ನೂ ನಾಲ್ಕು ರೂಪಾಯಿ ಹೆಚ್ಚಿಗೆ ಕೊಡಿಸುತ್ತೇನೆ. ಆಯಿತೇ” ಎಂದನು ರಾಜ.

ಸೇವಕನ ತಲೆಯೊಳಗಿನ ಗುಂಗೇ ಇಳಿಯಲೊಲ್ಲದು. ಅಷ್ಟು ದೊಡ್ಡ ಸಂಬಳ ಪ್ರಧಾನಿಗೇಕೆ ?

ರಾಜನು ಒಂದು ದಿನ ಬೇಟೆಗೆ ಹೊರಟನು. ಜೊತೆಗೆ ಪ್ರಧಾನಿ ಹಾಗೂ ಸೇವಕ ಇರತಕ್ಕವರೇ. ಬೇಟೆಯನ್ನರಸುತ್ತ ಹೋದೇ ಹೋದರು. ಒಂದು ಹೊಳೆ ಕಾಣಿಸಿತು. ಕೈಕಾಲು ತೊಳಕೊಂಡು ಹೊಳೆಯ ದಂಡೆಯಲ್ಲಿರುವ ಒಂದು ಮರದ ನೆರಳಿಗೆ ಕುಳಿತು ಕೊಂಡರು.

ಹೊಳೆಯ ಆಚೆಯಲ್ಲಿ ಜನರ ಗುಂಪು ಕೂಡಿದಂತೆ ಕಾಣಿಸಲು, ರಾಜನಲ್ಲಿ ಕುತೂಹಲ ಹುಟ್ಟಿತು. ಸೇವಕನಿಗೆ ಹೇಳಿದನು – “ಆಚೆಯ ದಡಕ್ಕೆ ಹೋಗಿ ಅವರಾರು, ತಿಳಕೊಂಡು ಬಾ”.

ಸೇವಕನು ಹೊಳೆದಾಟಿ ಆಚೆಯ ತೀರವನ್ನು ಸೇರಿ, ಆ ಜನರ ಗುಂಪಿನ ಬಳಿ ಹೋಗಿ ಮಾತನಾಡಿಸಿ ಬಂದು ರಾಜನಿಗೆ ಹೇಳಿದನು – “ಅವರು ವೇಷಗಾರರಂತೆ.” “ಅವರ ಊರು ಯಾವುದಂತೆ ?” ರಾಜ ಕೇಳಿದನು. “ಅದನ್ನು ಕೇಳಲಿಲ್ಲ ದೊರೆಗಳೇ. ಓಡುತ್ತ ಹೋಗಿ ಕೇಳಿಕೊಂಡು ಬರುವೆ” ಎಂದವನೇ ಅತ್ತ ಓಡಿದನು ಸೇವಕ. ಮರಳಿ ಬಂದ ರಾಜನಿಗೆ ತಿಳಿಸಿದನು – “ಅವರು ಶ್ರೀಶೈಲ ಕಡೆಯವರಂತೆ.” “ಹೀಗೋ ? ಇಲ್ಲಿ ಇನ್ನೂ ಎಷ್ಟು ದಿವಸ ಇರುವರಂತೆ ?” ರಾಜನ ಪ್ರಶ್ನೆ. ಅದನ್ನು ಕೇಳುವುದಕ್ಕೆ ಸೇವಕನು ಮತ್ತೆ ಹೊಳೆದಾಟಿದನು. ಇನ್ನೂ ನಾಲ್ಕಾರುದಿನ ಇಲ್ಲಿಯೇ ಇರುವರೆಂಬ ಸಮಾಚಾರ ತಂದನು.

“ನಮ್ಮ ಊರಿಗೆ ಬರುವರೇ ?” ಮತ್ತೊಂದು ಪ್ರಶ್ನೆ ರಾಜನದು. ಅದನ್ನು ತಿಳಿಯಲು ಸೇವಕನು ಹೋಗಿ ಬಂದನು. “ರಾಜನ ಅಪ್ಪಣೆಯಾದರೆ ಬರುವರಂತೆ” ಎಂದು ಸೇವಕನು ಬಿನ್ನಯಿಸಿದನು.

“ಅವರು ಯಾವ ಸೋಗು ಹಾಕುತ್ತಾರೆ ? ಅವರು ಅಪೇಕ್ಷಿಸುವ ಪ್ರತಿಫಲ ಎಂಥದು ? ನಮ್ಮ ರಾಜಧಾನಿಯಲ್ಲಿಯೇ ಅವರು ನೆಲಸಬೇಕಾದರೆ ನಾವು ಯಾವ ಸೌಕರ್ಯ ಒದಗಿಸಬೇಕು ?” – ಮೊದಲಾದ ಸಂಗತಿಗಳನ್ನು ತಿಳಕೊಳ್ಳುವ ಸಲುವಾಗಿ ಸೇವಕನು ಹಲವು ಸಾರೆ ಓಡಾಡಬೇಕಾಯಿತು. ಆತನು ದಣಿದುಹೋದನೇ ಹೊರತು ರಾಜನಿಗೆ ಬೇಕಾದ ಸಂಪೂರ್ಣ ಮಾಹಿತಿ ತರಲಿಲ್ಲ.

ಪ್ರಧಾನಿಯನ್ನು ಕರೆಯಿಸಿ ರಾಜನು ಹೇಳಿದನು – “ಹೊಳೆಯಾಚೆಗೆ ಕಾಣಿಸುವ ಗುಂಪು ಏತಕ್ಕಾಗಿ ನೆರೆದಿದೆ ? ಅವರಾರು ? ಅವರ ಉದ್ದೇಶವೇನು, ತಿಳಕೊಂಡು ಬರಬೇಕು.”

“ಆಗಲಿ ದೊರೆಗಳೇ” ಎಂದು ವಂದಿಸಿ ಪ್ರಧಾನಿಯು ಹೊಳೆಯಾಚೆಗಿನ ತೀರಕ್ಕೆ ತೆರಳಿದನು. ಒಂದೆರಡು ಗಳಿಗೆಯಲ್ಲಿ ಬಂದು ತಾನು ತಂದ ಸಮಾಚಾರವನ್ನೆಲ್ಲ ರಾಜನಿಗೆ ಬಿನ್ನಯಿಸಿದನು –

“ಅವರು ಶ್ರೀಶೈಲಕಡೆಯವರು. ವೇಷಗಾರರು. ಹೆಣ್ಣು ಗಂಡು ಕೂಡಿ ಹನ್ನೊಂದು ಜನರಿದ್ದಾರೆ. ಈ ಊರಲ್ಲಿ ನಾಲ್ಕಾರು ದಿನವಿದ್ದು ಮುಂದಿನೂರಿಗೆ
ಹೊರಡುವದರಲ್ಲಿದ್ದರು. ನಮ್ಮೂರಿಗೆ ಬರಲು ತಿಳಿಸಿದ್ದೇನೆ. ದಶಾವತಾರಗಳ ಸೋಗು ಹಾಕುವರಂತೆ. ನಾಲ್ಕು ಕೂರಿಗೆ ಹೊಲ, ಹನ್ನೆರಡು ಅಂಕಣದ ಮನೆ ಕೊಟ್ಟರೆ, ನಮ್ಮೂರವರಾಗಿಯೇ ಉಳಿಯುತ್ತೇವೆಂದು ಹೇಳಿದರು. ಅಪ್ಪಣೆಯಾದರೆ ಈಗಲೇ ಬಂದು ದೊರೆಗಳನ್ನು ಕಾಣುವರಂತೆ.

ಪ್ರಧಾನಿಯು ಒದಗಿಸಿದ ಸಂಗತಿಗಳನ್ನು ಕೇಳಿಕೊಂಡ ಬಳಿಕ, ರಾಜನಿಗೆ ಹೆಚ್ಚು ತಿಳುಕೊಳ್ಳುವ ಅಗತ್ಯವೇ ಉಳಿಯಲಿಲ್ಲ. ಸೇವಕನನ್ನು ಕರೆದು ರಾಜನು ಹೇಳಿದನು –

“ನೋಡಿದೆಯಾ ? ನೀನು ಹತ್ತೆಂಟು ಸಾರೆ ಎಡತಾಕಿ ಮಾಹಿತಿ ತಂದರೂ ಅಪೂರ್ಣವಾಗಿಯೇ ಉಳಿಯಿತು. ಪ್ರಧಾನಿಯು ಒಂದೇ ಸಾರೆ ಹೋಗಿ ಬಂದರೆ, ಯಾವ ಸಂಗತಿಯನ್ನೂ ಉಳಿಸಿಕೊಂಡು ಬರಲಿಲ್ಲ. ಅದಕ್ಕಾಗಿಯೇ ಆತನ ಸಂಬಳ ಅಷ್ಟು, ನಿನ್ನ ಸಂಬಳ ಇಷ್ಟೇ.
*****

ಪುಸ್ತಕ: ಉತ್ತರ ಕರ್ನಾಟಕದ ಜನಪದ ಕಥೆಗಳು

ಸಿಂಪಿ ಲಿಂಗಣ್ಣ
Latest posts by ಸಿಂಪಿ ಲಿಂಗಣ್ಣ (see all)