ನಂಬಬಾರದುದ ನೋಡಿದ ಜೀವದ
ನೋವಿಗೆ ಸಮವಿದಯೇ?
ಹುಸಿದು ಬೀಳಲು ಪ್ರೇಮದ ಚಪ್ಪರ
ಕುಸಿಯದ ಎದೆಯಿದೆಯೇ

ಒಲಿದು ಪೂಜಿಸಿದ ಕಲ್ಪವಲ್ಲಿ ಇದು
ಒಣಗಿತೇಕೆ ಹೀಗೆ?
ಬಯಸಿ ನೆಮ್ಮಿದಾ ಕಾಮಧೇನುವೇ
ಬರಡಾಯಿತೆ ಹೇಗೆ?

ತೀರಿಹೋಯಿತೇ ಅರೆಚಣದಲ್ಲೇ
ಅಪ್ಸರೆಯಲಿ ಪ್ರೇಮ?
ಆರಿಹೋಯಿತೇ ನಂದಾದೀಪ
ಆರಿಸಿದನೆ ಕಾಮ?

ಕಣ್ಣೇ ಕಂಡಿತು ಮೋಸದ ವೇಷ
ಆಸೆಗಳಿನ್ನೆಲ್ಲಿ?
ಕಿವಿಗೇ ಹರಿಯಿತು ಕಾಸಿದ ಸೀಸ
ಭಾಷೆಗೆ ಬೆಲೆಯೆಲ್ಲಿ?

ಸ್ವರ್ಗಕೆ ಮಿಗಿಲು ನಲ್ಲನ ಮಡಿಲು
ಎಂದವಳೀಗೆಲ್ಲಿ?
ಅಗ್ಗದ ಸರಕಿಗೆ ಹಿಗ್ಗಿದ ಹೆಣ್ಣು
ಬಾವಿಯ ತಳದಲ್ಲಿ
*****

ಪುಸ್ತಕ: ನಿನಗಾಗೇ ಈ ಹಾಡುಗಳು