ಮುಸ್ಸಂಜೆಯ ಮಿಂಚು – ೧೫

ಮುಸ್ಸಂಜೆಯ ಮಿಂಚು – ೧೫

ಅಧ್ಯಾಯ ೧೫ ಮಿಂಚುಳ್ಳಿ ಕಥೆ

ಈವತ್ತು ಸೂರಜ್ ಬರ್ತಾ ಇದ್ದಾರೆ. ಹೇಗಿದ್ದಾರೋ ಏನೋ? ‘ಎಲ್ಲವನ್ನೂ ಸೂರಜ್‌ಗೆ ವಹಿಸಿ, ನಾನು ನಿಶ್ಚಿಂತೆಯಿಂದ ಇದ್ದುಬಿಡುತ್ತೇನೆ’ ಎನ್ನುತ್ತಿದ್ದಾರೆ ವೆಂಕಟೇಶ್ ಸರ್. ಈ ಆಶ್ರಮದ ಎಲ್ಲಾ ಜವಾಬ್ದಾರಿಯನ್ನು ವಹಿಸಿಕೊಂಡು, ಎಲ್ಲವನ್ನೂ ಸಮರ್ಪಕವಾಗಿ ತೂಗಿಸಿಕೊಂಡು ಹೋಗುವಷ್ಟು ಶಕ್ತರೇ ಆ ಸೂರಜ್ ? ಈಗಂತೂ ಹೆಚ್ಚು-ಕಡಿಮೆ ನಾನು ವೆಂಕಟೇಶ್‌ ಸರ್‌ರವರನ್ನು ಕೇಳದೆ ನಿರ್ವಹಿಸುವ ಸ್ವತಂತ್ರ ತೆಗೆದುಕೊಂಡು ಬಿಟ್ಟಿದ್ದೇನೆ. ಸರ್‌ ಕೂಡ ಅದಕ್ಕೆ ಆಕ್ಷೇಪಣೆ ಎತ್ತಿಲ್ಲ. ನನ್ನ ಮೇಲೆ ತುಂಬಾ ನಂಬಿಕೆ ಅವರಿಗೆ ಇನ್ನು ಮುಂದೆ ಹೇಗೊ? ತಾತನಂತೆ ಹೃದಯವಂತನಾದರೆ ಪರವಾಗಿಲ್ಲ. ಸರ್ವಾಧಿಕಾರಿಯಂತೆ ಆಡಿದರೆ ತಾನು ಹೇಗೆ ಇಲ್ಲಿ ಕೆಲಸ ಮಾಡುವುದು? ಯೋಚನೆ ಕಾಡಿದರೂ ಸರ್ವಾಧಿಕಾರಿಯಂತೆ ಆಡಿದರೆ ನನಗೇನು ? ಹೇಳಿದ ಕೆಲಸ ಮಾಡಿದರೆ ಆಯಿತು. ಏನಾದರೂ ಆಗಲಿ, ಇನ್ನು ಸ್ವಲ್ಪ ಕಷ್ಟವೇ ತನಗೆ, ಆತನ ಗುಣ-ಸ್ವಭಾವ ನೋಡಿಕೊಂಡು, ಅದಕ್ಕೆ ತಕ್ಕಂತೆ ನಡೆದುಕೊಳ್ಳಬೇಕಾಗುತ್ತದೆ. ಹೀಗೆ ಯೋಚನೆ ಮಾಡಿಕೊಂಡು ಬರುತ್ತಿರುವಾಗ ಎಲ್ಲೋ ಮಗು ಅಳುತ್ತಿರುವ ಶಬ್ದ. ಗಾಡಿಯನ್ನು ನಿಧಾನಗೊಳಿಸಿದಳು. ಅಳುವಿನ ಶಬ್ದ ಅಸ್ಪಷ್ಟವಾಗಿ ಕೇಳಿಬರುತ್ತಿದೆ. ತತ್‌ಕ್ಷಣವೇ ಗಾಡಿಯನ್ನು ನಿಲ್ಲಿಸಿ ಕೆಳಗಿಳಿದು ಸುತ್ತ ನೋಡಿದಳು. ಅದೊಂದು ಆಟದ ಮೈದಾನ, ಹತ್ತಿರವಾಗುವುದೆಂದು ರಸ್ತೆಯನ್ನು ಬಿಟ್ಟು ಮೈದಾನದೊಳಗಿನ ದಾರಿಯಿಂದ – ಪ್ರತಿನಿತ್ಯವೂ ಬರುತ್ತಿದ್ದಳು. ಇಂದು ಕೂಡ ಹಾಗೆಯೇ ಬಂದಿದ್ದಳು. ಮೋಡ ಬೇರೆ ಕವಿಯುತ್ತಿತ್ತು. ಜೋರಾಗಿ ಮಳೆ ಬರುವ ನಿರೀಕ್ಷೆ ಇತ್ತು. ಹಾಗಾಗಿ ಬೇಗ ಆಶ್ರಮ ಸೇರಿಕೊಳ್ಳಬೇಕು. ಸಾಲದ್ದಕ್ಕೆ ಸೂರಜ್ ಬರ್ತಾ ಇರುವುದರಿಂದ ಬೇಗನೇ ಬರಬೇಕೆಂದು ಎಂಟು ಗಂಟೆಗೇ ಮನೆ ಬಿಟ್ಟಿದ್ದಳು. ಇಲ್ಲಿ ನೋಡಿದರೆ, ಮಗುವಿನ ಅಳುವಿನ ಶಬ್ದ. ಶಬ್ದ ಬರುತ್ತಿದ್ದ ಕಡೆ ನಿಧಾನವಾಗಿ ನಡೆದು ಬಂದಳು. ಅಳು ಸ್ಪಷ್ಟವಾಗಿ ಕೇಳತೊಡಗಿತು. ಎದೆ ಗಾಬರಿಯಿಂದ ಹೊಡೆದುಕೊಳ್ಳಲು ಪ್ರಾರಂಭಿಸಿತು. ಸುತ್ತ ನೋಡಿದರೆ ಒಬ್ಬರ ಸುಳಿವೂ ಇಲ್ಲ. ಇಡೀ ಆಟದ ಮೈದಾನದೊಳಗೆ ಇವಳೊಬ್ಬಳೇ. ಧೈರ್ಯ ತಂದುಕೊಳ್ಳುತ್ತಾ ಶಬ್ದಕ್ಕೆ ಹತ್ತಿರವಾದಳು. ಕಲ್ಲುಗಳ ಮಧ್ಯೆ ಒಂದು ತಗಡು ಮುಚ್ಚಿದೆ. ಅಲ್ಲಿಂದಲೇ ಅಳು ಕೇಳಿಸುತ್ತಿರುವುದು. ಆತುರವಾಗಿ ಹತ್ತಿರ ಬಂದು ತಗಡನ್ನು ತೆಗೆದವಳೇ ದಿಗ್ಬ್ರಾಂತಳಾಗಿ ಕ್ಷಣ ನಿಂತುಬಿಟ್ಟಳು. ಬಟ್ಟೆಯನ್ನು ಸುತ್ತಿರುವ ಮಗು ಕೈ-ಕಾಲು ಜಾಡಿಸುತ್ತ ಅಳುತ್ತಿದೆ. ಅತ್ತು ಅತ್ತೂ ಸುಸ್ತಾಗಿದೆಯೇನೋ? ಆಳು ಕ್ಷೀಣವಾಗುತ್ತಿದೆ. ಕಲ್ಲುಮಣ್ಣಿನ ಮೇಲೆ ಕೈ-ಕಾಲು ಜಾಡಿಸಿದ್ದರಿಂದ ಎಳೆ ಕೈ-ಕಾಲುಗಳು ತರಚಿದಂತಾಗಿ ರಕ್ತ ಸೋರುತ್ತಿದೆ. ಬವಳಿ ಬಂದಂತಾಗಿ ಮೆಲ್ಲನೆ ಕುಸಿದಳು. ತತ್‌ಕ್ಷಣವೇ ಸಾವರಿಸಿಕೊಂಡ ರಿತು ಮೊಬೈಲ್ ತೆಗೆದು ಆಶ್ರಮಕ್ಕೆ ಫೋನ್ ಮಾಡಿ, ತತ್‌ಕ್ಷಣವೇ ಯಾರಾದರೂ ಆಟದ ಮೈದಾನಕ್ಕೆ ಬರಬೇಕೆಂದು ಹೇಳಿದಳು. ಆಟದ ಮೈದಾನಕ್ಕೂ ಆಶ್ರಮಕ್ಕೂ ಕೆಲವೇ ನಿಮಿಷಗಳ ಹಾದಿ. ಹಾಗಾಗಿ ವಾಸು ಓಡಿ ಬಂದ. ಆಟದ ಮೈದಾನವಲ್ಲ ಹುಡುಕಿ, ಮೂಲೆಯಲ್ಲಿ ನೋಡಿದರೆ ರಿತು, ಅವಳ ಮುಂದೆ ಮಗು, ಮಗುವಿನ ಅಳು ನಿಂತಿದೆ. ಮಲಗಿದೆಯೋ ಮತ್ತೇನೋ ತಿಳಿಯದ ಕಂಗಾಲಾಗಿದ್ದಾಳೆ. ವಾಸುವನ್ನು ಕಂಡೊಡನೆ ಧೈರ್ಯ ಬಂದಂತಾಗಿ ಮಗುವನ್ನು ಮೆಲ್ಲನೆ ಎತ್ತಿಕೊಂಡಳು. ಆ ಗಳಿಗೆಯಲ್ಲಿ ಫಳಾರನೇ ಮಿಂಚು ಆಕಾಶದಲ್ಲಿ ಹೊಳೆಯಿತು. ಹಿಂದೆ ಗುಡುಗಿನ ಜೋರಾದ ಶಬ್ದ ‘ವಾಸು, ಡಾಕ್ಟರ್ ಬಂದಿದ್ದಾರಾ? ತತ್‌ಕ್ಷಣವೇ ಮಗುನಾ ಅವರಿಗೆ ತೋರಿಸಬೇಕು. ನಾನು ಮಗುನ ಹಿಡ್ಕೊಂಡು ಕೂತ್ಕೋತೀನಿ, ನೀನು ಗಾಡಿ ಓಡಿಸು, ತಗೊ ಕೀನಾ’ ಎನ್ನುತ್ತಾ ಕೀ ನೀಡಿದಳು. ವಾಸುವಿಗೂ ದಿಗ್ಬ್ರಾಂತಿಯಾಗಿತ್ತು. ಮರು ಮಾತಾಡದೆ ಗಾಡಿ ಓಡಿಸುತ್ತ ಆಶ್ರಮಕ್ಕೆ ಕರೆತಂದ.

ರಿತುವಿನ ಕೈಯಲ್ಲಿದ್ದ ಮಗುವನ್ನು ಕಂಡು ಅಲ್ಲಿದ್ದವರಿಗೆಲ್ಲ ಅಚ್ಚರಿ, ಏನು, ಎತ್ತ ಒಂದೂ ಮಾತಾಡದೆ ಮಗುವನ್ನು ಪರೀಕ್ಷಿಸುತ್ತಿದ್ದ ಡಾಕ್ಟರನ್ನೇ ಕಾತರದಿಂದ ರಿತು ದಿಟ್ಟಿಸುತ್ತಿದ್ದಾಳೆ. ದೇವರೇ ಮಗುವಿಗೇನೂ ಆಗದೆ ಇರಲಿ, ಮಗು ಜೀವಂತವಾಗಿರಲಿ ಎಂದು ಮೌನವಾಗಿ ಮೊರೆ ಇಡುತ್ತಿದ್ದಾಳೆ.

“ಡಾಕ್ಟರ್, ಮಗು ಬದುಕಿದೆಯೇ?” ಕಂಪಿಸುತ್ತ ಕೇಳಿದಳು.

“ಜೀವವಿದೆ. ಆದರೆ ಕೆ-ಕಾಲುಗಳಿಗೆಲ್ಲ ಕಲುಮಣ್ಣು ಸೇರಿ ಸೆಪ್ಟಿಕ್ ಆಗಿದೆ. ತತ್ಕ್ಷಣವೇ ಮಕ್ಕಳ ಡಾಕ್ಟರ್‌ನಾ ಕನ್ಸಲ್ಟ್ ಮಾಡಬೇಕು. ಅಥವಾ ಅಲ್ಲಿಗೇ ಮಗೂನಾ ಕರ್ಕೊಂಡು ಹೋಗಬೇಕು. ಟೌನ್ ಒಳಗೆ ಮಕ್ಕಳ ಆಸ್ಪತ್ರೆ ಇರುವುದು. ಆದಷ್ಟು ಬೇಗ ಕರ್ಕೊಂಡು ಹೋಗಬೇಕು” ಆಗ್ರಹಿಸಿದರು.

ಎಲ್ಲವನ್ನೂ ನೋಡುತ್ತ ನಿಂತಿದ್ದ ಆಗಷ್ಟೇ ಬಂದಿದ್ದ ಸೂರಜ್, “ಬನ್ನಿ ಸಾರ್, ನನ್ನ ಕಾರಿನಲ್ಲಿಯೇ ಹೋಗೋಣ, ಬನ್ನಿ ಮೇಡಮ್, ಮಗುನಾ ಎತ್ತಿಕೊಳ್ಳಿ, ಬಿ ಕ್ವಿಕ್” ಎಂದು ಅವಸರಿಸಿ ಕಾರನ್ನು ಸ್ಟಾರ್ಟ್ ಮಾಡಿದ.

ಮಗುವನ್ನು ಎತ್ತಿಕೊಂಡು ಕಾರು ಹತ್ತಿದ ರಿತು, ಮಗು ಏನಾಗುತ್ತದೋ ಆತಂಕದಿಂದ ಕಂಗೆಟ್ಟಿದ್ದಳು. ಕಾರು ಯಾರದು? ಕಾರು ನಡೆಸುತ್ತಿರುವವರು ಯಾರು? ಯಾರ್ಯಾರು ಕಾರು ಹತ್ತಿದರು? ತಾನೇಕೆ ಹೀಗೆ ಕಂಗೆಟ್ಟಿದ್ದೇನೆ ಎಂಬ ಪರಿವೆಯೇ ಇಲ್ಲದೆ ಒಂದೇ ಸಮನೆ ಮಗುವಿನ ಮೊಗವನ್ನೇ ನೋಡುತ್ತಿದ್ದಾಳೆ. ಮಗು ಹೆಣ್ಣೋ? ಗಂಡೋ ಎಂಬುದೇ ಮುಖ್ಯವಾಗಿ ತಿಳಿದಿರಲಿಲ್ಲ. ಕಂಪಿಸುತ್ತಿದ್ದ ಕೈಗಳಿಂದ ಮೆಲ್ಲನೆ ಬಟ್ಟೆ ಸರಿಸಿದಳು. ಹೆಣ್ಣು ಮಗು. ಅದಕ್ಕೇ ಇದು ಬೀದಿಗೆ ಬಿದ್ದಿದೆ. ಯಾವ ಪುಣ್ಯವತಿ ಹೆತ್ತ ಮಗಳೊ? ಹೃದಯ ದ್ರವಿಸಿ ಹೋಯಿತು.

ಆಸ್ಪತ್ರೆ ಮುಂದೆ ಕಾರು ನಿಂತಿತು. ಡಾಕ್ಟರ್ ರಾಮದಾಸರು, “ರಿತು, ಬಾಮ್ಮ ಬೇಗ” ಎಂದವರೇ ಒಳಗೆ ನುಗ್ಗಿದರು. ಮಗುವನ್ನು ಒಳಗೆ ಕರೆದೊಯ್ದರು. ಕಪ್ಪಿಟ್ಟ ಮೊಗ ಹೊತ್ತು ನಿಂತಿದ್ದ ರಿತುವನ್ನು ಕಂಡು ಕನಿಕರದಿಂದ ಸೂರಜ್, “ಏನೂ ಆಗಲ್ಲ ನಿಮ್ಮ ಮಗೂಗೆ, ಧೈರ್ಯವಾಗಿರಿ” ಎಂದಾಗ ಸರ್ರನೇ ಅವನತ್ತ ತಿರುಗಿದಳು.

ಹತ್ತಿರ ಬಂದ ವೆಂಕಟೇಶ್‌ರವರು, “ರಿತು, ಯಾರದು ಮಗು?” ಎಂದು ಕೇಳಿದರು. ‘ಗೊತ್ತಿಲ್ಲ ಸರ್’ ಎಂದಳು. ಅರೆ! ಗೊತ್ತಿಲ್ಲ ಅನ್ನುತ್ತ ಇದ್ದಾಳೆ. ಆದರೆ ಅದೆಷ್ಟು ಕಂಗೆಟ್ಟಿದ್ದಾಳೆ. ಮಗು ಇವಳದಲ್ಲವೇ? ಛೇ, ತಾನು ನಿನ್ನ ಮಗು ಅಂದೆನಲ್ಲ. ಮನಸ್ಸಿನಲ್ಲಿಯೇ ಸೂರಜ್ ಪೇಚಾಡಿಕೊಂಡ.

ಅಷ್ಟರಲ್ಲಿ ವಾಸು, “ಸರ್, ಈ ಮಗು ಆಟದ ಮೈದಾನದಲ್ಲಿತ್ತು. ಯಾರೋ ಹೆತ್ತು ಮಲಗಿಸಿ ಹೋಗಿದ್ದಾರೆ. ಪಾಪ, ರಾತ್ರಿ ಎಲ್ಲಾ ಅತ್ತು ಅತ್ತೂ ಸುಸ್ತಾಗಿದೆ. ಕೈ-ಕಾಲು ಆಡಿಸಿ, ಕೈ-ಕಾಲಿಗೆ ಕಲ್ಲುಮಣ್ಣು ಚುಚಿಕೊಂಡಿದೆ. ಎಂಥ ಪಾಪಿಗಳು ಸರ್, ಇಂಥ ಹಸುಕಂದನ ಅನಾಥವಾಗಿ ಮಲಗಿಸಿ ಹೊಗೋಕೆ ಹೇಗೆ ಮನಸ್ಸು ಬಂತೊ? ಮನುಷ್ಯತ್ವ ಇಲ್ಲದ ಜನ ಸಾರ್” ನೊಂದುಕೊಂಡೇ ಹೇಳಿದ.

ಅಷ್ಟರಲ್ಲಿ ಸುಧಾರಿಸಿಕೊಂಡಿದ್ದ ರಿತು, “ಆಶ್ರಮಕ್ಕೆ ಅಂತ ಅದೇ ದಾರೀಲಿ ಬರ್ತಾ ಇದ್ದೆ ಸರ್, ಮಗುವಿನ ಅಳು ಕೇಳಿ ಗಾಬರಿ ಆಯ್ತು. ವಾಸುಗೆ ಫೋನ್ ಮಾಡಿ ಕರೆಸಿದೆ” ಮೆಲ್ಲನೆ ಹೇಳಿದಳು.

“ಮಗು ಚೇತರಿಸಿಕೊಳ್ತಾ ಇದೆ. ಇಂಟೆನ್ಸಿವ್ ಕೇರ್‌ನಲ್ಲಿ ಇಟ್ಟಿದ್ದಾರೆ. ನಾವೇನೂ ಇಲ್ಲಿಯೇ ಇರಬೇಕಾಗಿಲ್ಲ. ಸಂಜೆ ಬಂದು ನೋಡಿಕೊಂಡು ಹೋದ್ರೆ ಸಾಕು. ಈಗ ಆಶ್ರಮಕ್ಕೆ ಹೋಗೋಣ ನಡೆಯಿರಿ” ಎಂದು ರಾಮದಾಸರು ಹೊರಬಂದು ಎಲ್ಲರನ್ನೂ ಹೊರಡಿಸಿದರು.

“ನಾನೊಂದು ಸಲ ಮಗುನಾ ನೋಡಬಹುದೇ ಡಾಕ್ಟರ್?” ಎಂದು ರಿತು ಡಾಕ್ಟರ್ ಕೇಳಿಕೊಂಡಳು.

“ಇಲ್ಲಮ್ಮ ಈಗ ನೋಡೋಕೆ ಬಿಡಲ್ಲ, ಸಂಜೆ ಬರೋಣ ಬಾ. ಆಗ ನೋಡುವಿಯಂತೆ” ಎಂದರು.

ಎಲ್ಲರೂ ಕಾರಿನಲ್ಲಿಯೇ ಆಶ್ರಮಕ್ಕೆ ಬಂದರು. ರಿತು ಅಂತೂ ಮೌನವಾಗಿದ್ದುಬಿಟ್ಟಿದ್ದಾಳೆ. ಮಗು ಕೈ-ಕಾಲು ಬಡಿಯುತ್ತ ಅನಾಥವಾಗಿ ಮಲಗಿ ಅಳುತ್ತಿರುವ ದೃಶ್ಯವೇ ಅವಳ ಕಣ್ಮುಂದೆ ನಿಂತುಬಿಟ್ಟಿದೆ. ಒಂದು ರೀತಿಯ ಶಾಕ್ ಅನುಭವಿಸುತ್ತಿದ್ದಾಳೆ. ಮಗು ಸತ್ತುಬಿಟ್ಟರೆ? ಛೆ, ಹಾಗಾಗದಿರಲಿ, ಮಗು ಬದುಕಿ ಬರಲಿ, ಮಗುವಿಗೇನೂ ಆಗದಿರಲಿ, ಸದಾ ಮನಸ್ಸು ನುಡಿಯತೊಡಗಿತ್ತು.

ಅವಳ ಸ್ಥಿತಿ ಗಮನಿಸಿದ ವೆಂಕಟೇಶ್‌ರವರು, “ರಿತು ಮಗುವಿಗೆ ಏನೂ ಆಗುವುದಿಲ್ಲ ಅಂತ ರಾಮದಾಸರು ಹೇಳಿದ್ದಾರೆ ಅಲ್ಲವೇ, ಧೈರ್ಯವಾಗಿರು. ನೀನು ಹೀಗೆ ಕಂಗೆಟ್ಟರೆ ಹೇಗೆ? ನೋಡು, ಸೂರಜ್ ಬಂದಿದ್ದಾನೆ. ಪಾಪ, ಅವನೂ ಈಗ ತಾನೇ ಬಂದಿದ್ದಾನೆ. ಅವನಿಗೆ ಸ್ನಾನಕ್ಕೆ ತಿಂಡಿಗೆ ವ್ಯವಸ್ಥೆ ಮಾಡು” ಕೆಲಸ ವಹಿಸಿದರೆ ಅವಳ ಗಮನ ಬೇರೆಡೆ ಹರಿಸಬಹುದೆಂದು ಬಗೆದು ಸೂರಜ್ನ ಕೆಲಸ ಹೇಳಿದರು.

“ಸೂರಜ್, ಇವಳು ರಿತು ಅಂತ, ಈ ಆಶ್ರಮದಲ್ಲಿ ಕೆಲಸ ಮಾಡ್ತಾ ಇದ್ದಾಳೆ, ಇವಳಿಂದಲೇ ನಮ್ಮ ಮನೆಗೆ ಹೊಸ ಚೇತನ ಬಂದಿದೆ. ಇಲ್ಲಿರುವ ಎಲ್ಲಾ ಸದಸ್ಯರಿಗೂ ರಿತು ಅಂದ್ರೆ ಅಚ್ಚುಮೆಚ್ಚು.” ಮೆಚ್ಚುಗೆಯಿಂದ ರಿತುವನ್ನು ಸೂರಜ್‌ಗೆ ಪರಿಚಯಿಸಿದರು.

“ರಿತು, ಇವನೇ ಕಣಮ್ಮ ನನ್ನ ಮೊಮ್ಮಗ ಸೂರಜ್, ಬೆಳಗ್ಗೆ ತಾನೇ ಬಂದ. ಅವನು ಬರೋಕೂ, ನೀನು ಮಗು ಎತ್ಕಂಡು ಗಾಬರಿಯಿಂದ ಬರೋಕೂ ಸರಿ ಹೋಯ್ತು. ಮಗುಗೇನಾಗಿದೆಯೋ ಅನ್ನೋ ಆತಂಕದಿಂದ ಸೂರಜ್ ತತ್‌ಕ್ಷಣವೇ ಆಸ್ಪತ್ರೆಗೆ ಹೊರಟು ನಿಂತ, ನಂಗೂ ಆ ಗಲಾಟೆಯಲ್ಲಿ ನಿಮ್ಮಿಬ್ಬರನ್ನು ಪರಿಚಯ ಮಾಡಿಕೊಡೋಕೆ ಮರೆತುಹೋಯ್ತು.”

ಬೆಳಗ್ಗೆ ಆ ಮಗುವನ್ನು ನೋಡಿದಾಗಿನಿಂದ ಅವಳು ಅವಳಾಗಿರಲಿಲ್ಲ. ಎಲ್ಲಿಯೋ ಕಳೆದು ಹೋಗಿಬಿಟ್ಟಿದ್ದಳು. ಮಗು, ಅದರ ಅಳು, ರಕ್ತಸಿಕ್ತವಾದ ಆ ಪುಟ್ಟ ಕೈ-ಕಾಲುಗಳು, ಆಸ್ಪತ್ರೆ ಇನ್ಸೆಂಟಿವ್ ಕೇರ್‌ ಇವಿಷ್ಟೇ ಅವಳ ಸುತ್ತ ಸುತ್ತುತ್ತಿದ್ದವು. ಆಶ್ರಮ, ಮನೆ, ತನ್ನ ಕೆಲಸ, ಈ ದಿನ ಬರಲಿರುವ ಈ ಆಶ್ರಮದ ಭಾವಿ ಒಡೆಯ ಎಲ್ಲವೂ ಮರೆತಂತಾಗಿತ್ತು.

ಈಗಷ್ಟೇ ಅವೆಲ್ಲವೂ ನೆನಪಿಗೆ ಬಂದು ಸಂಕೋಚಿಸಿದಳು. ತಾನು ತನ್ನ ಲೋಕದಲ್ಲಿ ಮುಳುಗಿ ಹೋಗಿ ತನ್ನ ಕರ್ತವ್ಯವನ್ನು, ತನ್ನ ಜವಾಬ್ದಾರಿಯನ್ನು ಮರೆತುಬಿಡುವುದೇ? ಛೇ, ಎಂಥ ಕೆಲಸವಾಯಿತು. ತನ್ನನ್ನು ಅದೆಂಥ ಬೇಜವಾಬ್ದಾರಿಯ ಹೆಣ್ಣು ಎಂದುಕೊಳ್ಳುವುದಿಲ್ಲವೇ ತಾನೆಂಥ ಅವಿವೇಕಿ, ಬೆಳಗ್ಗೆ ಆಸ್ಪತ್ರೆಗೆ ಹೊರಟಾಗ, ಕಾರು ಯಾರದು ? ಆ ಸಮಯದಲ್ಲಿ ಕಾರು ಇಲ್ಲಿಗೇಕೆ ಬಂದಿದೆ? ಅದು ಯಾರದಿರಬಹುದು ಎಂದು ಸ್ವಲ್ಪವಾದರೂ ಆಲೋಚಿಸಬಾರದೆ? ಹೋಗಲಿ, ಕಾರಿನಲ್ಲಿಯೇ ಹೋಗೋಣವೆಂದಾಗಲಾದರೂ, ತಾನು ಗಮನಿಸಬಾರದೆ?ಕಾರು ಓಡಿಸುತ್ತಿರುವವರಾರು ಎಂದು ನೋಡದೆ, ತನ್ನ ಆತಂಕದಲ್ಲಿ ಅವೆಲ್ಲ ಗಮನಕ್ಕೆ ಬರಲೇ ಇಲ್ಲ. ಅಲ್ಲದೇ ಇವತ್ತು ಸೂರಜ್ ಬರುತ್ತಾರೆ ಎಂದಲ್ಲವೇ ಬೇಗ ಮನೆ ಬಿಟ್ಟದ್ದು. ಆದರೆ, ಮಗುವಿನ ಗಾಬರಿಯಲ್ಲಿ ಸೂರಜ್ ಬರುವುದೇ ಮರೆತುಹೋಯಿತು. ಅವರು ಬಂದದ್ದು ಆಗಿದೆ. ಇಷ್ಟು ಹೊತ್ತು ಅವರ ಜತೆಯಲ್ಲಿಯೇ ಇದ್ದದ್ದು ಆಗಿದೆ. ಅವರು ಯಾರು ಎಂದು ತಿಳಿಯದೆ, ಬಂದ ಮೊದಲ ದಿನವೇ ನನ್ನ ಅವಿವೇಕ ಅವರ ಕಣ್ಣಿಗೆ ಬೀಳಬೇಕೇ? ನನ್ನನ್ನು ಏನೆಂದು ತಿಳಿದುಕೊಂಡರೋ? ಸರ್ ಬೇರೆ ತುಂಬ ಉತ್ಪ್ರೇಕ್ಷೆಯಾಗಿ ಪರಿಚಯಿಸಿಕೊಟ್ಟರು. ತಲೆತಗ್ಗಿಸಿಯೇ ಕುಳಿತಿದ್ದ ರಿತುವಿನೆಡೆ ಬಂದ ಸೂರಜ್.

“ತುಂಬಾ ಅಪ್‌ಸೆಟ್ ಆಗಿಬಿಟ್ಟಿದ್ದೀರಾ. ಏನೂ ಆಗೋಲ್ಲ. ಧೈರ್ಯ ತಂದುಕೊಳ್ಳಿ. ನಿಮ್ಮ ಜಾಗದಲ್ಲಿ ಯಾರು ಇದ್ದಿದ್ದರೂ ಹೀಗೆ ಆಗಿರುತ್ತಿತ್ತು. ರಿಯಲಿ ಐ ಅಪ್ರಿಶಿಯೇಟ್ ಯೂ. ಅನಾಥವಾಗಿ ಅಳುತ್ತಿದ್ದ ಆ ಮಗು ಬಗ್ಗೆ ನೀವು ತೋರಿದ ಕಾಳಜಿ, ಸಮಯಪ್ರಜ್ಞೆ ನಿಜಕ್ಕೂ ಮೆಚ್ಚುವಂಥದ್ದು. ನಿಮ್ಮಂಥ ಹೃದಯ ಇರೋ ವ್ಯಕ್ತಿ ಈ ಆಶ್ರಮದಲ್ಲಿ ಕೆಲಸ ಮಾಡ್ತಾ ಇರೋದು ಈ ಆಶ್ರಮದಲ್ಲಿರುವವರ ಪುಣ್ಯ. ಇವತ್ತು ಬೇಕಾದ್ರೆ ರಜಾ ತಗೊಂಡು ಮನೆಗೆ ಹೋಗಿ ರೆಸ್ಟ್ ತಗೊಳ್ಳಿ.”

ಅಯ್ಯೋ, ನಾನು ಅಂದುಕೊಂಡದ್ದೇ ಒಂದು, ಸೂರಜ್ ತಿಳಿದುಕೊಂಡಿರುವುದೇ ಮತ್ತೊಂದು, ತನ್ನ ಬಗ್ಗೆ ಅದೆಷ್ಟು ಬೇಗ ಒಳ್ಳೆಯ ಅಭಿಪ್ರಾಯ ಮೂಡಿದೆ. ಥ್ಯಾಂಕ್ಸ್ ಗಾಡ್.

“ತುಂಬಾ ಥ್ಯಾಂಕ್ಸ್ ಸರ್‌. ರಜಾ ಏನೂ ಬೇಡ. ನಾನು ನನ್ನ ಕೆಲಸ ಮಾಡಬಲ್ಲೆ. ಬೆಳಗ್ಗೆ ಅನಿರೀಕ್ಷಿತವಾಗಿ ನಡೆದ ಘಟನೆಯಿಂದ ಕೊಂಚ ಮನಸ್ಸು ಕೆಟ್ಟದ್ದು ನಿಜ. ಆದರೆ, ಈಗ ನಾನು ಸರಿಯಾಗಿದ್ದೇನೆ. ಬನ್ನಿ ಸಾರ್, ನಿಮ್ಮ ಸ್ನಾನಕ್ಕೆ ತಿಂಡಿಗೆ ಏರ್ಪಾಡು ಮಾಡುತ್ತೇನೆ” ಎಂದವಳೇ ಎದ್ದು ನಿಂತಳು.

“ಸರ್, ತಿಂಡಿಗೆ ಡೈನಿಂಗ್ ಹಾಲ್‌ಗೆ ಬರುತ್ತೀರೋ ಅಥವಾ ಮನೆಗೇ ಕಳುಹಿಸಿಕೊಡಲೋ?” ಕೇಳಿದಳು.

“ಅಲ್ಲಿಗೆ ಬರುತ್ತೇನೆ. ಎಲ್ಲರನ್ನೂ ಭೇಟಿ ಮಾಡಿದ ಹಾಗೂ ಆಗುತ್ತದೆ. ತಾತ, ನೀನು ಏನು ಮಾಡುತ್ತೀಯಾ?”

“ನೀನು ಹೇಗೆ ಹೇಳಿದ್ರೆ ಹಾಗೆ. ರಿತು ಈರಜನ್ನ ಮನೆಗೆ ಕಳುಹಿಸು. ಸೂರಜ್ ಮನೆಯಲ್ಲಿಯೇ ಸ್ನಾನ ಮುಗಿಸಿ ಬರುತ್ತಾನೆ. ನಾನು ಇಲ್ಲೇ ಸ್ನಾನ ಮಾಡುತ್ತೇನೆ. ನನ್ನ ಬಟ್ಟೆ ತರೋಕೆ ಹೇಳಿ, ಬಾಯ್ಲರ್ ತೊಳೆದು, ನೀರು ಹಾಕಿ, ಸ್ವಿಚ್ ಹಾಕೋಕೆ ಹೇಳು. ಎಷ್ಟು ದಿನ ಆಗಿದೆಯೋ ಅದನ್ನ ಉಪಯೋಗಿಸಿ.”

“ಸರ್, ಇಲ್ಲಿಂದಲೇ ಬಿಸಿ ನೀರು ತಗೊಂಡು ಇಡೊಕೆ ಹೇಳೀನಿ. ನಾಳೆಯಿಂದ ಬೇಕಾದರೆ ಅಲ್ಲೇ ನೀರು ಕಾಯಿಸಿದರೆ ಆಯಿತು. ಹೇಗಿದ್ರೂ ಇಲ್ಲಿ ನೀರು ಕಾದಿರುತ್ತೆ.”

“ಸರಿನಮ್ಮ ಹಾಗೇ ಮಾಡು. ಸೂರಜ್, ನೀನು ಈರಜ್ಜನ ಜತೆ ಹೋಗಿ ಸ್ನಾನ ಮುಗಿಸಿ ಬಾ, ತಿಂಡಿಗೆ ಕಾಯ್ತಾ ಇರ್ತಿನಿ” ಎಂದು ಹೇಳಿ ರಿತುವನ್ನು ಹಿಂಬಾಲಿಸಿದರು ವೆಂಕಟೇಶ್.

ಸೂರಜ್ ಹೇಗೋ ಏನೋ ಅಂದುಕೊಂಡಿದ್ದ ರಿತುವಿಗೆ ಅವನ ನಡೆ-ನುಡಿ, ಸರಳತೆ ಇಷ್ಟವಾಯಿತು. ತಾತನಿಗೆ ತಕ್ಕ ಮೊಮ್ಮಗ, ತಾತ ಹೇಗೆ ಸರಳರೋ ಸೂರಜ್ ಕೂಡ ಅದೇ ಸರಳತೆ ಹೊಂದಿದ್ದಾರೆ. ಯಾವ ಬಿಗುಮಾನವಿಲ್ಲದೆ, ‘ಅಹಂ’ ಇಲ್ಲದೆ ಎಲ್ಲರ ಜಡೆ ತಿಂಡಿ ತೆಗೆದುಕೊಳ್ಳುವುದಾಗಿ ಹೇಳಿದರು. ಪ್ರಯಾಣದ ಆಯಾಸವನ್ನೂ ಮರೆತು ಮಗುವಿನ ಗಂಭೀರ ಪರಿಸ್ಥಿತಿ ಗಮನಿಸಿ, ತಾವೇ ಸ್ವತಃ ಕಾರು ಚಲಾಯಿಸಿ ಆಸ್ಪತ್ರೆಗೆ ಕರೆದೊಯ್ದು, ಇಷ್ಟು ಹೊತ್ತಿನ ತನಕ ಅಲ್ಲಿಯೇ ಇದ್ದು ಮತ್ತೆ ಎಲ್ಲರನ್ನೂ ಕರೆತರುವ ಸೌಜನ್ಯ ಅದೆಷ್ಟು ಜನರಿಗಿದ್ದೀತು? ಮಾನವೀಯತೆಗೆ ಮಿಡಿಯುವ ಹೃದಯ ಸೂರಜ್‌ನದು. ಮೆಚ್ಚುಗೆಯ ಮಹಾಪೂರವೇ ಹರಿಯಿತು ರಿತುವಿನಲ್ಲಿ.

ಸಂಜೆ ಮಗುವನ್ನು ನೋಡುವ ತನಕ ರಿತುವಿಗೆ ಸಮಾಧಾನವಿರಲಿಲ್ಲ. ಮಗು ಚೇತರಿಸಿಕೊಂಡಿದೆ, ಪ್ರಾಣಾಪಾಯವಿಲ್ಲ ಎಂದ ಮೇಲೆಯೇ ನೆಮ್ಮದಿಯಿಂದ ಉಸಿರಾಡಿದ್ದು, ಮನೆಗೆ ಬಂದವಳೇ ಎಲ್ಲವನ್ನೂ ಹೇಳಿಕೊಂಡು ಆ ಸ್ಥಿತಿಯಲ್ಲಿ ಬಿಟ್ಟುಹೋದ ನಿರ್ದಯಿ ಹೆಣ್ಣಿನ ಬಗ್ಗೆ ಹೇಸಿಕೊಂಡಳು.

“ಏನಮ್ಮಾ, ಈ ಕಾಲದಲ್ಲೂ ಹೆಣ್ಣು ಮಗು ಅಂದ್ರೆ ಅಷ್ಟೊಂದು ಅಸಡ್ಡೆನಾ? ಹೆತ್ತ ಮಗುನಾ ಹಾಗೆ ಬೀದಿಯಲ್ಲಿ ಎಸೆಯೋಕೆ ಹ್ಯಾಗಮ್ಮ ಮನಸ್ಸು ಬಂತು? ಆ ಸ್ಥಿತೀಲಿ ಮಗುನಾ ನೋಡಿದ ನಂಗೆ ಅದೆಷ್ಟು ನೋವಾಗ್ತಾ ಇದೆ ಗೊತ್ತಾ ಅಮ್ಮಾ? ಆ ಮಹಾತಾಯಿ ಅದು ಹೇಗೆ ನಿರ್ದಯಳಾದಳೋ?”

“ಕಾಲ ಬದಲಾದರೂ ಮನುಷ್ಯ ಬದಲಾಗಲ್ಲ ಅನ್ನೋಕೆ ಇದೇ ಉದಾಹರಣೆ ನೋಡು. ಪಾಪ, ಅವಳ ಸ್ಥಿತಿ ಹೇಗಿತ್ತೋ
ಏನೋ? ಮದ್ದೆ ಆಗಿತ್ತೋ ಇಲ್ಲೋ ? ಅವಳೇ ಜಾರಿದ್ದಳೋ ಅಥವಾ ಯಾರೋ ಜಾರಿಸಿದ್ದರೋ? ಏನೇ ಆದ್ರೂ ಪರಿಣಾಮ ಮಾತ್ರ ಹೆಣ್ಣಿನ ಮೇಲೆ ತಾನೇ? ಅವಳೇ ತಾನೇ ಎಲ್ಲವನ್ನೂ ಫೇಸ್ ಮಾಡಬೇಕು. ಹೋಗ್ಲಿಬಿಡು ಆ ವಿಷಯ ಬೇಡ. ಮುಂದೆ ಆ ಮಗುನಾ ಏನು ಮಾಡಬೇಕು ಅಂತ ಇದ್ದೀರಿ? ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಮೇಲೆ ಮಗುನಾ ಎಲ್ಲಿ ಬಿಡ್ತೀರಿ?” ತನುಜಾ ಪ್ರಶ್ನಿಸಿದಳು.

“ಹೌದಲ್ವ! ಅದೆಲ್ಲ ನಂಗೆ ಹೊಳೆದೇ ಇರಲಿಲ್ಲ. ಮಗು ಬದುಕಿಬಿಟ್ಟರೆ ಸಾಕು ಅನ್ನಿಸಿತ್ತು ಅಷ್ಟೇ. ಪಾಪ, ಆ ಎಳೆಮಗು ಹೆತ್ತವರಿಗೆ ಬೇಡವಾಗಿ, ಅನಾಥವಾಗಿ ಬೀದಿಗೆ ಬಿದ್ದಿದೆ. ಯಾರಾದರೂ ಸಾಕಿಕೊಳ್ಳುವವರು ಬಂದರೆ ಕೊಟ್ಟುಬಿಟ್ಟರಾಯಿತು. ನೋಡೋಣ, ಸರ್‌ ಏನು ಹೇಳುತ್ತಾರೆ ಅಂತ ಅವರ ಮೊಮ್ಮಗ ಸೂರಜ್ ತುಂಬಾ ಒಳ್ಳೆಯವರು ಕಣಮ್ಮ ಒಳ್ಳೆಯ ಹೃದಯ, ಅಂತಃಕರಣ ಇದೆ. ಇನ್ನು ಮೇಲೆ ಅವರದೇ ಜವಾಬ್ದಾರಿ ಈ ಆಶ್ರಮದ್ದು. ಹೇಗಿರುತ್ತಾರೋ ಏನೋ ಅಂತ ಭಯ ಆಗುತ್ತಾ ಇತ್ತು. ತಾತನಿಗೆ ತಕ್ಕ ಮೊಮ್ಮಗ.”

“ಹೋಗ್ಲಿ ಬಿಡು. ಮಗ ಅಂತೂ ಇತ್ತ ಕಡೆ ಬರೋಲ್ಲ. ಕೊನೆಗಾಲದಲ್ಲಿ ತಾತನಿಗೆ ಆಸರೆಯಾಗಿ ಮೊಮ್ಮಗನಾದ್ರೂ ಬಂದನಲ್ಲ, ಆಶ್ರಮದ ಚಿಂತೆನೂ ಕಡಿಮೆ ಆಯ್ತು ವೆಂಕಟೇಶರಾಯರಿಗೆ” ಎಂದನು ಮನು.

ಮಗು ಈಗ ಸಂಪೂರ್ಣವಾಗಿ ಚೇತರಿಸಿಕೊಂಡಿತ್ತು. ಆಸ್ಪತ್ರೆಯಿಂದ ಆಶ್ರಮಕ್ಕೆ ಕರೆತಂದಾಗಿತ್ತು. ಚೆನ್ನಾಗಿ ಹಾಲು ಕುಡಿದು, ಸದಾ ಮಲಗಿರೋದೇ ಅದರ ಕೆಲಸವಾಗಿತ್ತು. ಮಗುವನ್ನು ಯಾವ ಹೆಸರಲ್ಲಿ ಕರೆಯೋದು ಅಂತ ಒಂದಿಷ್ಟು ಚರ್ಚೆ ಆಗಿತ್ತು. ಮಗುವನ್ನು ಎತ್ತಿಕೊಂಡ ಕೂಡಲೇ ಆಕಾಶದಲ್ಲಿ ಮಿಂಚು ಹೊಳೆದಿತ್ತು. ಹಾಗಾಗಿ ಅವಳಿಗೆ ಮಿಂಚು ಎನ್ನುವುದೇ ಸೂಕ್ತ ಎಂದು ರಿತು ‘ಮಿಂಚು’ ಎಂದು ನಾಮಕರಣ ಮಾಡಿಯೇಬಿಟ್ಟಳು. ದಿನದಿನಕ್ಕೆ ಮಿಂಚು ಆಶ್ರಮದವರ ಪಾಲಿನ ಆಕರ್ಷಣೀಯ ವಸ್ತುವಾದಳು. ವಾಸುವಿನ ಹೆಂಡತಿ ರುಕ್ಕು ಅದರ ನಿಗಾ ನೋಡಿಕೊಳ್ಳುತ್ತಿದ್ದಳು. ಸಾಕಿಕೊಳ್ಳುವವರು ಯಾರೂ ಮುಂದೆ ಬಾರದಿದ್ದಾಗ ಮುಂದಿನ ಬೆಳವಣಿಗೆ ಏನು ಎಂಬುದೇ ರಿತುವಿಗೆ ಚಿಂತೆಯಾಗತೊಡಗಿತ್ತು. ದಿನದಿಂದ ದಿನಕ್ಕೆ ರಿತು ಮಿಂಚುವನ್ನು ಅತಿಯಾಗಿ ಹಚ್ಚಿಕೊಳ್ಳತೊಡಗಿದಳು. ಬೆಳಗ್ಗೆ ಬಂದ ಕೂಡಲೇ ಮಿಂಚುವನ್ನು ನೋಡಬೇಕು. ಈಗ ಆಶ್ರಮದ ಕೆಲಸದ ನಡುವೆಯೂ ಯೋಗಕ್ಷೇಮ ನೋಡಿಕೊಳ್ಳುವ ಹೊಣೆಯನ್ನೂ ತಾನೇ ವಹಿಸಿಕೊಂಡುಬಿಟ್ಟಳು. ರಾತ್ರಿ ಅದು ಹೇಗೆ ಮಿಂಚುವನ್ನು ಬಿಟ್ಟಿರುತ್ತಿದ್ದಳೋ ಏನೋ? ಬೆಳಗಾಗುತ್ತಿದ್ದಂತೆ ಓಡಿಬರುತ್ತಿದ್ದಳು. ಅವಳಿಗಾಗಿ ತಾನೇ ಸ್ವತಃ ತೊಟ್ಟಿಲು, ಹಾಸಿಗೆ ಎಲ್ಲವನ್ನೂ ತಂದಿದ್ದಳು. ಬಣ್ಣಬಣ್ಣದ ಫ್ರಾಕ್ ಹಾಕಿಸಿ ಖುಷಿಪಡುತ್ತಿದ್ದಳು. ಒಮ್ಮೊಮ್ಮೆ ಇದು ಅತಿರೇಕವೆನಿಸುತ್ತಿತ್ತು ಅಲ್ಲಿದ್ದವರಿಗೆ, ಅವಳನ್ನು ಮುದ್ದಾಡುವವರೇ. ಆದರೆ ರಿತುವಿನಷ್ಟು ಯಾರೂ ಹಚ್ಚಿಕೊಂಡಿರಲಿಲ್ಲ.

ದಿನಗಳು ಕಳೆದಂತೆ ಮಿಂಚು ಆಶ್ರಮದ ಎಲ್ಲರ ಕಣ್ಮಣಿಯಾಗಿಬಿಟ್ಟಳು. ಒಬ್ಬರ ಕೈಯಿಂದ ಮತ್ತೊಬ್ಬರ ತೆಕ್ಕೆಗೆ ಜಾರುತ್ತಿದ್ದ ಮಿಂಚುವನ್ನು ಎತ್ತಿಕೊಳ್ಳಲು ಎಲ್ಲಾ ಮುದಿ ಜೀವಗಳೂ ಹಾತೊರೆಯುತ್ತಿದ್ದವು. ಅವಳನ್ನು ಮುದ್ದುಗರೆಯುತ್ತಾ ಆಡಿಸುತ್ತಾ ಅತ್ತಾಗ ಸಮಾಧಾನಿಸುತ್ತಾ ತಮ್ಮ ಮೊಮ್ಮಕ್ಕಳ ಪ್ರೀತಿಯನ್ನು ಅವಳಲ್ಲಿ ಕಾಣುತ್ತಿದ್ದರು. ಈಗಂತೂ ಮಿಂಚುವನ್ನು ಯಾರಿಗಾದರೂ ಕೊಡಬೇಕೆಂದರೆ ಒಬ್ಬರೂ ಇಷ್ಟಪಡುತ್ತಿರಲಿಲ್ಲ. ವಯಸ್ಸಾದ ಆ ಜೀವಗಳಿಗೆ ಮುದ್ದು ಮಗು ಸಂಜೀವಿನಿಯಾಗಿತ್ತು. ರಿತುವನ್ನು ಕಂಡರಂತೂ ಮಿಂಚುವಿಗೆ ಎಲ್ಲಿಲ್ಲದ ಹಿಗ್ಗು. ಅವಳ ತೋಳು ಸೇರಿದ ಮೇಲೆ ಯಾರಲ್ಲಿಗೂ ಹೋಗುತ್ತಿರಲಿಲ್ಲ. ಅವಳಿಗೂ ಅದು ಇಷ್ಟವೇ. ಆದರೆ ಕೆಲಸದ ಸಮಯದಲ್ಲೆಲ್ಲ ಎತ್ತಿಕೊಂಡಿರಲು ಸಾಧ್ಯವೇ? ಹಾಗೆ ಕಳಿಸುವಾಗ ಆರ್ಭಟವನ್ನೇ ಮಾಡುತ್ತಿದ್ದಳು. ಅತ್ತು ಅತ್ತು ಸುಸ್ತಾದ ಮಿಂಚುವನ್ನು ರಿತುವೇ ಸಮಾಧಾನಿಸಬೇಕಿತ್ತು. ಮಿಂಚುವಿಗೀಗ ಮೂರು ತಿಂಗಳು. ಮೂರು ತಿಂಗಳು ಕಳೆದದ್ದೇ ತಿಳಿಯಲಿಲ್ಲ. ಮಿಂಚುವಿನ ಭವಿಷ್ಯದ ಬಗ್ಗೆ ಯೋಚನೆ ಮಾಡಬೇಕಿತ್ತು.

ಹಾಗೆಂದೇ ವೆಂಕಟೇಶ್ ಒಂದು ಮೀಟಿಂಗ್ ಕರೆದಿದ್ದರು. ಆ ಮೀಟಿಂಗ್‌ನಲ್ಲಿ ಮಿಂಚುವಿನದೇ ಮುಖ್ಯ ವಿಷಯವಾಗಿತ್ತು. ಡಾ. ರಾಮದಾಸರು, ಸೂರಜ್, ವೆಂಕಟೇಶ್, ರಿತು, ವಾಸು, ರುಕ್ಕು, ಪಾಂಡು, ಈರಜ ಎಲ್ಲರೂ ಸೇರಿದ್ದರು.

“ಮಗುವನ್ನು ಇನ್ನೆಷ್ಟು ದಿನ ಇಲ್ಲಿ ಇಟ್ಟುಕೊಂಡಿರಲು ಸಾಧ್ಯ? ಅವಳನ್ನು ಸಾಕಿಕೊಳ್ಳಲು ಯಾರೂ ಮುಂದೆ ಬಂದಿಲ್ಲ. ಮಗುವನ್ನು ಇಲ್ಲಿ ಇಟ್ಟುಕೊಳ್ಳುವ ಹಾಗಿಲ್ಲ. ಮುಂದೆ ಏನು ಮಾಡುವುದು?” ಎಂಬ ಪ್ರಶ್ನೆಯನ್ನು ವೆಂಕಟೇಶ್ ಮುಂದಿಟ್ಟರು.

ಡಾ. ರಾಮದಾಸರು, “ಮಗುವನ್ನು ಅನಾಥಾಶ್ರಮಕ್ಕೆ ಸೇರಿಸಿದರೆ ಒಳ್ಳೆಯದು. ಅಲ್ಲಿ ಅದರ ಭವಿಷ್ಯ ನಿರ್ಧಾರವಾಗುತ್ತದೆ. ಮುಂದೆ ಯಾರಾದರೂ ದತ್ತು ತೆಗೆದುಕೊಳ್ಳುವವರು ಬಂದರೆ ಅದರ ಅದೃಷ್ಟ. ಇಲ್ಲದೆ ಇದ್ದರೆ ಎಲ್ಲಾ ಅನಾಥ ಮಕ್ಕಳಂತೆ ಅದೂ ಅಲ್ಲಿ ಬೆಳೆಯುತ್ತದೆ” ಎಂದರು.

ಎಲ್ಲಾ ಅನಾಥ ಮಕ್ಕಳಂತೆ ಬೆಳೆಯುತ್ತದೆ ಎಂದ ಮಾತು ರಿತುವಿನ ಮನಸ್ಸಿನಲ್ಲಿ ಚೂರಿಯಂತೆ ಇಳಿಯಿತು. ನೋವಿನಿಂದ ಮುಖ ಹಿಂಡಿದಳು. ಎದುರಿನಲ್ಲಿಯೇ ಕುಳಿತಿದ್ದ ಸೂರಜ್ ಅದನ್ನು ಗಮನಿಸಿದ. ಅವನಿಗೂ ‘ಮಿಂಚು’ ಸೆಳೆಯುವ ಮಿಂಚೇ ಆಗಿದ್ದಳು. ಪುಟ್ಟ ಮಕ್ಕಳೆಂದರೆ, ಬಹುವಾಗಿ ಇಷ್ಟಪಡುತ್ತಿದ್ದ ಸೂರಜ್‌ಗೆ ಇಲ್ಲಿಗೆ ಬಂದ ಕೂಡಲೇ ಮಿಂಚುವಿನ ಒಡನಾಟ ಸಿಕ್ಕಿತ್ತು. ಹೂವಿನಂತೆ ಬಿರಿಯುವ ಆ ನಗುವೇ ಅವನನ್ನು ಮಿಂಚುವಿನತ್ತ ಸೆಳೆದಿತ್ತು. ಮಿಂಚುವನ್ನು ಅನಾಥಾಶ್ರಮಕ್ಕೆ ಕಳಿಸಿಬಿಡಲು ಅವನ ಮನವೂ ಒಪ್ಪದಾಗಿತ್ತು. ಆದರೆ ಆ ಮಗುವನ್ನು ಇಲ್ಲಿ ಇಟ್ಟುಕೊಂಡು ಮಾಡುವುದಾದರೂ ಏನನ್ನು? ಮಿಂಚು ದೊಡ್ಡವಳಾಗುತ್ತಾ ಹೋದಂತೆ ಸಮಸ್ಯೆಗಳು ಹುಟ್ಟಿಕೊಳ್ಳುತ್ತ ಹೋಗುತ್ತವೆ. ಅವಳ ವಿದ್ಯಾಭ್ಯಾಸ, ಅವಳ ಭವಿಷ್ಯ, ಉದ್ಯೋಗ, ಮದುವೆ… ಹೀಗೆ ಸಮಸ್ಯೆಗಳ ನಡೆಸಿಕೊಂಡು ಮಿಂಚುವಿನ ಜವಾಬ್ದಾರಿಯನ್ನು ಹೊರುವುದು ಅಷ್ಟು ಸುಲಭವಲ್ಲ ಎಂದು ಅನ್ನಿಸಿತ್ತು. ಹಾಗಾಗಿಯೇ ತೀರ್ಮಾನವನ್ನು ತಾತನಿಗೆ ಬಿಟ್ಟುಬಿಟ್ಟರು. ಆದರೀಗ ರಿತು ಮಿಂಚುವಿಗಾಗಿ ಮಿಡಿಯುತ್ತಿರುವುದು ಅರಿವಾಗಿ ಸುಮನಿದ್ದು ಬಿಡುವುದು ಅವನಿಂದ ಅಸಾಧ್ಯವಾಗಿತ್ತು. ಒಂದು ಒಳ್ಳೆಯ ಹೃದಯವನ್ನು ನೋಯಿಸುವುದು ಸರಿಯಲ್ಲವೆನಿಸಿತು.

‘ಡಾಕ್ಟರ್, ಮಗು ಇಲ್ಲಿಯೇ ಇದ್ದುಬಿಡಲಿ ಬಿಡಿ. ಹೇಗೂ ವಾಸು ಹೆಂಡತಿ-ಮಗುವನ್ನು ನೋಡಿಕೊಳ್ಳುತ್ತ ಇದ್ದಾಳೆ. ಅವಳಿಗೆ ಒಂದಿಷ್ಟು ಸಂಬಳ ಗೊತ್ತು ಮಾಡಿಬಿಡೋಣ. ಮಗುವನ್ನು ಕಳಿಸಲು ಇಲ್ಲಿ ಯಾರಿಗೂ ಮನಸ್ಸಿಲ್ಲ’ ಎದ್ದು ನಿಂತು ಹೇಳಿದ.

“ಅದೂ ಅಷ್ಟು ಸುಲಭವಲ್ಲ ಸೂರಜ್, ಇವತ್ತು ನಾವು ಸೆಂಟಿಮೆಂಟ್ಸ್ ನೋಡಿದರೆ, ನಾಳೆ ಅದರ ಭವಿಷ್ಯ ಹಾಳಾಗಬಾರದಲ್ಲ. ಈ ಒತ್ತಡಗಳ ನಡುವೆಯೂ ಅದರ ಜವಾಬ್ದಾರಿ ತೆಗೆದುಕೊಳ್ಳುವವರು ಯಾರು ? ಅದು ಬೆಳೆದಂತ ಸ್ಕೂಲಿಗೆ ಸೇರಿಸಬೇಕು, ಅದನ್ನು ಪ್ರತಿದಿನ ಸಿದ್ದಪಡಿಸಿ ಕಳಿಸಬೇಕು. ರಾತ್ರಿ ಓದಿಸಬೇಕು. ಅದನ್ನೆಲ್ಲ ಮಾಡುವವರು ಯಾರು? ಮುಂದೆ ಅದಕ್ಕೆ ಉದ್ಯೋಗವೋ? ಮದುವೆಯೋ ಮಾಡಬೇಕು. ಅದೆಲ್ಲ ಹೇಗೆ ಸಾಧ್ಯ ಸೂರಜ್ ? ಅನಾಥಾಶ್ರಮದಲ್ಲಾದರೆ ಅವೆಲ್ಲವನ್ನೂ ಮಾಡುವವರಿದ್ದಾರೆ. ಶಾಲೆಗೆ ಕಳುಹಿಸುತ್ತಾರೆ. ಭವಿಷ್ಯವನ್ನು ರೂಪಿಸುತ್ತಾರೆ” ರಾಮದಾಸರು ನಾಟುವಂತೆ ಹೇಳಿದರು.

ಏನನ್ನೋ ನಿರ್ಧರಿಸಿಕೊಂಡ ರಿತು, “ಸಾರ್, ಮಿಂಚವನ್ನು ನಾನು ದತ್ತು ತೆಗೆದುಕೊಳ್ಳುತ್ತೇನೆ. ಮನೆಯಲ್ಲಿ ಒಪ್ಪಿಸುವ ತನಕ ಇಲ್ಲಿರಲು ಅವಕಾಶ ಮಾಡಿಕೊಡಿ, ಆ ಮಗುವನ್ನು ಅನಾಥವಾಗಿಸಲು ನನಗಿಷ್ಟವಿಲ್ಲ. ಅದರ ಖರ್ಚು-ವೆಚ್ಚ ಜವಾಬ್ದಾರಿಯಲ್ಲ ನನ್ನದು. ಇಲ್ಲಿರಲು ಜಾಗ ಮಾತ್ರ ಕೊಡಿ” ಎಂದಾಗ ಎಲ್ಲರೂ ಅವಾಕ್ಕಾಗಿ ಅವಳನ್ನೇ ನೋಡತೊಡಗಿದರು, ವಂಕಟೇಶ್ ತಲೆ ಅಲ್ಲಾಡಿಸುತ್ತಾ, “ಬೇಡ ರಿತು. ಆತುರದಿಂದ ತೀರ್ಮಾನ ತೆಗೆದುಕೊಳ್ಳಬೇಡ. ನೀನಿನ್ನೂ ಚಿಕ್ಕ ಹುಡುಗಿ. ಮುಂದೆ ಮದುವೆಯಾಗಬೇಕಾದವಳು, ನಿನ್ನದೇ ಮಕ್ಕಳಾಗುವ ಅವಕಾಶ ನಿನಗಿರುವಾಗ ಈ ಮಗುವಿನ ಗೊಡವ್ರ್ ಏಕೆ? ನಾಳೆ ನಿನ್ನ ಮದುವೆಗೆ ಇದೇ ಮಗು ತೊಡಕಾಗಬಹುದು. ನಾನಂತೂ ಇದಕ್ಕೆ ಒತ್ತುವುದಿಲ್ಲ, ನಿಮ್ಮ ತಂದೆ-ತಾಯಿಯ ಮೇಲೆ ಇದು ಯಾವ ಪರಿಣಾಮ ಬೀರಬಹುದೆಂದು ಊಹಿಸಿದೆಯಾ? ಮುಂದೆ ನಿನ್ನದೇ ಮಕ್ಕಳಾದಾಗ ಈ ಮಗುವಿನ ಗತಿ ಏನು? ಅದೆಲ್ಲ ಬೇಡವೇ ಬೇಡ” ಖಡಾಖಂಡಿತವಾಗಿ ನುಡಿದಾಗ ರಿತು ಗಂಭೀರಳಾದಳು.

‘ಹೌದು ಹೌದು’ ಎನ್ನುವಂತೆ ರಾಮದಾಸರು ತಲೆಯಾಡಿಸಿಬಿಟ್ಟರು.

ಕೊನೆಗೆ ಎದ್ದು ನಿಂತ ಪಾಂಡುರಂಗರವರು, “ಸಾರ್, ಈ ಮಗು ಈ ಆಶ್ರಮಕ್ಕೆ ಭಾರವಲ್ಲ, ಈ ಮಗು ಇಲ್ಲಿಗೆ ಬಂದಾಗಿನಿಂದ ನಮ್ಮೆಲ್ಲರಿಗೂ ಯಾವುದೋ ಬಂಧ ಬೆಳೆದುಬಿಟ್ಟಿದೆ. ಮಿಂಚುವನ್ನು ನೋಡಲಾರದೆ ಇರಲಾರೆವು ಅನ್ನುವ ಮಟ್ಟಕ್ಕೆ ನಾವೆಲ್ಲರೂ ಬಂದುಬಿಟ್ಟಿದ್ದೇವೆ. ಇಲ್ಲಿನ ಎಲ್ಲರ ಅಭಿಪ್ರಾಯವೂ ಅದೇ ಆಗಿದೆ. ಎಷ್ಟೇ
ಕಷ್ಟವಾದರೂ ಸರಿ, ಮಗು ಇಲ್ಲಿಯೇ ಇರಲಿ, ಎಲ್ಲರೂ ಸೇರಿ ಅದನ್ನು ಬೆಳೆಸೋಣ ಎಂಬ ತೀರ್ಮಾನಕ್ಕೆ ಬಂದಿದ್ದೇವೆ. ಅದಕ್ಕೆ ನಿಮ್ಮ ಅನುಮತಿ ಬೇಕಷ್ಟೇ. ಬದುಕಿನ ಸಂಧ್ಯಾವಸ್ಥೆಯಲ್ಲಿರೋ ನಮ್ಮೆಲ್ಲರ ಬದುಕಿನಲ್ಲಿ ಕಿರಣವಾಗಿ ಮಿಂಚು ಬಂದಿದ್ದಾಳೆ. ಅವಳ ಆಟ, ಪಾಠ ಎಲ್ಲವನ್ನೂ ನೋಡಿ ನಮ್ಮ ಬದುಕಿನ ನೋವು ಮರೆಯುತ್ತ, ನಮಗೆ ಸಿಗದಿರುವ ಮೊಮ್ಮಕ್ಕಳ ಪ್ರೀತಿಯ ಕೊರತೆಯನ್ನು ತುಂಬಿಸಿಕೊಳ್ಳುತ್ತಿದ್ದೇವೆ. ಆ ಮಗು ನಮ್ಮೆಲ್ಲರ ಮಗುವಾಗಿ ಇಲ್ಲಿಯೇ ಬೆಳೆಯಲಿ, ಆಗುವುದೇ ಇಲ್ಲ, ಮಿಂಚುವನ್ನು ಸಾಕುವುದು ಅಸಾಧ್ಯ ಎಂದಾಗ ಬೇರೆ ವ್ಯವಸ್ಥೆ ಮಾಡಿದರಾಯಿತು. ಮುದ್ದು ಮಗುವಿನ ಪ್ರೀತಿಯಿಂದ ನಮ್ಮನ್ನು ವಂಚಿತರಾಗಿ ಮಾಡಬೇಡಿ. ಮಿಂಚು ನಮ್ಮ ಮನೆಯ ಮಗು. ಅವಳನ್ನು ದೂರ ಕಳಿಸುವ ಪ್ರಯತ್ನ ಮಾಡಬೇಡಿ. ನಿಮ್ಮ ಕೈಮುಗಿದು ಬೇಡಿಕೊಳ್ಳುತ್ತೇನೆ” ಎಂದು ಭಾವೋದ್ವೇಗದಿಂದ ಗದ್ಗದಿತರಾಗಿ ನುಡಿದಾಗ ವೆಂಕಟೇಶ್ ಸುಮ್ಮನೆ ಕುಳಿತುಬಿಟ್ಟರು. ಅವರ ಬಾಯಿಂದ ಯಾವ ಪದವೂ ಹೊರಬರದಂತೆ ಮುಷ್ಕರ ಹೂಡಿತು. ಈ ಮಗುವಿನ ಅನುಬಂಧ ಇಷ್ಟೊಂದು ತೀವ್ರವಾಗಿ ಈ ಮನಸ್ಸುಗಳ ಮೇಲೆ ಬೆಳೆದುಬಿಟ್ಟಿದೆ ಎಂದು ನಂಬಲೇ ಅಸಾಧ್ಯವೆನಿಸಿತು.

ಡಾ. ರಾಮದಾಸರಿಗೂ ಮತ್ತೇನೂ ಮಾತನಾಡಲು ಸಾಧ್ಯವಾಗದೆ ಸೂರಜ್‌ನ ಮುಖ ನೋಡಿದರು. ಇನ್ನು ತಾನು ಸುಮ್ಮನಿದ್ದರೆ ಸರಿಯಾಗದೆಂದು ಬಗೆದು, ತಾತನ ಪರವಾಗಿ ತಾನೇ ತೀರ್ಮಾನ ಕೈಗೊಳ್ಳಲು ನಿರ್ಧರಿಸಿದರು.

“ಸರಿ, ನೀವೆಲ್ಲ ಇಷ್ಟು ಹೇಳುತ್ತಿರುವಾಗ ನಾವು ಕಟುಕರಂತೆ ಮಗುವನ್ನು ಹೊರಗಟ್ಟಲು ಮನಸ್ಸು ಬರುತ್ತಿಲ್ಲ. ನಾನಾಗಲೀ ತಾತ ಆಗಲೀ ಅಷ್ಟೊಂದು ನಿರ್ದಯರಲ್ಲ. ಮಿಂಚು ಇಲ್ಲಿಯೇ ಬೆಳೆಯಲಿ, ಎಲ್ಲರ ಪ್ರೀತಿ ಪಡೆಯುವ ಯೋಗ ಅವಳದು. ಇಷ್ಟೊಂದು ಅಜ್ಜ-ಅಜ್ಜಿಯರ ಪ್ರೀತಿ-ಪ್ರೇಮ ಪಡೆದು, ಅವರೆಲ್ಲರ ಆರೈಕೆಯಲ್ಲಿ ಬೆಳೆಯುವ ಪುಣ್ಯ ಮಿಂಚುವಿನದಾದರೆ ಅದನ್ನು ತಪ್ಪಿಸಲು ನಾವು ಯಾರು? ಮಿಂಚು ಇನ್ನು ಮುಂದೆ ನಮ್ಮ ಮನೆಯ ಬೆಳಕು. ಆ ಬೆಳಕು ಆರದಂತೆ, ಪ್ರಕಾಶಮಾನವಾಗಿ ಬೆಳೆಯುವಂತೆ ಮಾಡುವುದೇ ನಮ್ಮ ನಿಮ್ಮೆಲ್ಲರ ಗುರಿಯಾಗಿರಲಿ” ಎಂದೊಡನೆ ರಿತುವಿನ ಮುಖ ಅರಳಿ, ಕೃತಜ್ಞತೆಯಿಂದ ಅವನ ಮುಖ ನೋಡಿ ಹೂ ಬಿರಿದಂತೆ ನಕ್ಕಳು. ಹೊರಗಿನಿಂದ ಇತ್ತಲೇ ಕಿವಿಗೊಟ್ಟು ಕೇಳಿಸಿಕೊಳ್ಳುತ್ತಿದ್ದ ಎಲ್ಲರೂ ‘ಹೋ’ ಎಂದು ಕೂಗುತ್ತ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು.

“ಥ್ಯಾಂಕ್ಸ್, ತುಂಬಾ ಥ್ಯಾಂಕ್ಸ್ ಸೂರಜ್ ಸರ್, ನಮ್ಮೆಲ್ಲರನ್ನೂ ಉಳಿಸಿಬಿಟ್ಟಿರಿ. ನಮ್ಮನಗು ಅಳಿಸದಂತೆ ಮಾಡಿಬಿಟ್ಟಿರಿ” ಹನಿಗಣ್ಣಾಗಿ ಪಾಂಡುರಂಗರವರು ಸೂರಜ್‌ನ ಕೈಹಿಡಿದು ಎದೆಗೊತ್ತಿಕೊಂಡರು. ಇಡೀ ಆಶ್ರಮದಲ್ಲಿ ಈಗ ಮಿಂಚುವಿನ ನಗು, ಅಳು, ಕೇಕೆಯಿಂದ ತುಂಬಿಹೋಗುತ್ತಿತ್ತು. ಅವಳನ್ನು ಎತ್ತಿಕೊಳ್ಳಲು ಅವರವರಲ್ಲಿಯೇ ಪೈಪೋಟಿ. ಯಾರ ತೋಳುಗಳಲ್ಲಿ ಹುದುಗಿದ್ದರೂ ರಿತುವನ್ನು ಕಂಡ ಕೂಡಲೇ ಹಾರಿಬರುತ್ತಿದ್ದಳು. ಮಿಂಚು ರಿತುವಿನ ಮಾನಸಪುತ್ರಿಯೇ ಆಗಿಬಿಟ್ಟಿದ್ದಳು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗೂಸಬಮ್ಸ ನಿರೀಕ್ಷೆಯಲ್ಲಿ
Next post ದೇವರ ಹೂವು

ಸಣ್ಣ ಕತೆ

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

cheap jordans|wholesale air max|wholesale jordans|wholesale jewelry|wholesale jerseys