ಬಾಗಲೋಡಿ ದೇವರಾಯ

ಬಾಗಲೋಡಿ ದೇವರಾಯ

ಸ್ನಿಗ್ಧ ಸೌಂದರ್‍ಯವುಳ್ಳ ಮಾನವೀಯ ಬರೆವಣಿಗೆಯನ್ನು ಮಾಡಿಕೊಂಡು ಬಂದ ಎಷ್ಟೋ ಜನ ಕನ್ನಡದ ಲೇಖಕರನ್ನು ಇಂದು ನೆನೆಯುವವರು ಕೂಡ ಇಲ್ಲದಂತಾಗಿದೆ. ಟಾಪ್ ಟೆನ್‌ಗಳ ಕಾಲದಲ್ಲಿ ಈ ಒತ್ತರಿಸುವಿಕೆ ಕೂಡ ಸಾಮಾನ್ಯವೇನೊ. ಈ ಸಾಲಿನಲ್ಲಿ ಥಟ್ಟನೆ ನೆನಪಾಗುವ ಹೆಸರು ಬಾಗಲೋಡಿ ದೇವರಾಯ. ಸುಮಾರು ಸ್ವಾತಂತ್ರ್ಯ ಚಳವಳಿಯ ಮಧ್ಯಭಾಗದಲ್ಲಿ ಹುಟ್ಟಿದ ಈ ಕತೆಗಾರ ಇಪ್ಪತ್ತನೆಯ ಶತಮಾನದ ಕೊನೆಯಂಚಿನವರೆಗು ಇದ್ದು ಹೋದವರು (೧೯೨೭-೧೯೮೫). ಒಟ್ಟು ಇಪ್ಪತ್ತಾರು ಕತೆಗಳನ್ನು ಬರೆದ ಬಾಗಲೋಡಿ ತಮ್ಮ ಜೀವಿತಾವಧಿಯಲ್ಲಿ ಕಡಿಮೆ ಬರೆದೂ ಪ್ರಖ್ಯಾತರಾದವರ ಸಾಲಿಗೆ ಸೇರಿಹೋದರು.

ಬಾಗಲೋಡಿ ಕತೆಗಳನ್ನು ಬರೆಯುವಾಗ ಉಚ್ಪ್ರಾಯ ಸ್ಥಿತಿಯಲ್ಲಿದ್ದ ಮಾಸ್ತಿ ಎಂಬ ಕತೆಗಾರ ಬಾಗಲೋಡಿಯಂತಹ ಕತೆಗಾರರಿಗೆ ಒಂದು ರೀತಿ ಸವಾಲು ಮತ್ತು ನಿರಾಕರಣೆಗೆ ತಕ್ಕ ಹಾಗಿದ್ದರು. ತತ್ವಾದರ್‍ಶಗಳನ್ನು ಕೋದು ಜೀವನಕ್ಕೆ ಒಂದು ವಿಶ್ಲೇಷಣಾತ್ಮಕ ಆಯಾಮವನ್ನು ತಂದು ಕೊಡಬೇಕೆಂದು ಬಯಸಿದಂತೆ ಬರೆಯುತ್ತಿದ್ದ ಮಾಸ್ತಿ ಹೊರನೋಟಕ್ಕೆ ಯಾವುದೇ ತಂತ್ರಗಾರಿಕೆಯನ್ನು ಅನುಸರಿಸದಂತೆ ಕಂಡರೂ ಕತೆಯನ್ನು ಹೆಣೆಯುವಾಗ ಜಾಗರೂಕತೆಯನ್ನು ಮೆರೆಯುತ್ತಿದ್ದರು. ಸ್ವತಃ ಮಾಸ್ತಿ ಬರೆಯುತ್ತಿದ್ದ ಕತೆಗಳನ್ನೇ ‘ಸೌತೇಕಾಯಿ ಬುಟ್ಟಿಗೆ ಹಾಕಿದಂತೆ’ ಎಂದು ಜರೆದ ನವ್ಯರು ಬಿಗಿ ತಂತ್ರಗಾರಿಕೆಯನ್ನು ನೆಚ್ಚಿದರು. ಇವರ ಮಧ್ಯೆ ಬರೆಯುತ್ತಿದ್ದ ಅರೆಪಾಲು ವಿದೇಶವಾಸಿಯಾದ ಬಾಗಲೋಡಿ ತಮ್ಮ ಕತೆಗಳನ್ನು ಇಂಗ್ಲಿಷ್ ಅಥವಾ ಬೇರಾವುದೋ ಭಾಷೆಯ ಕತೆಗಾರರನ್ನಾಗಲೀ ಕತೆಗಳ ತಂತ್ರಗಾರಿಕೆಯನ್ನಾಗಲೀ ನೆಚ್ಚಲಿಲ್ಲ. ಅವರು ಕಂಡು ಕೇಳಿದ ತಮ್ಮ ನೆಲದ ಕತೆಗಳಿಗೆ ಮಾನವೀಯ ಸ್ಪರ್‍ಶ ಕೊಡುವುದರಲ್ಲಿ ಅವರಿಗೆ ಆಸಕ್ತಿಯಿತ್ತು. ಹೀಗೆಂದು ಈ ಕತೆಗಾರ ತೆಳು ಉದಾರವಾದಿಯೇನೂ ಆಗಿರಲಿಲ್ಲ.

ವ್ಯಾಪಕವಾದ ಭಿತ್ತಿಗಳಲ್ಲಿ ಚರಿತ್ರೆ, ಪುರಾಣ, ಸಮಕಾಲೀನ ಬದುಕುಗಳನ್ನು ಮಾಸ್ತಿಯವರಂತೆಯೇ ಇಟ್ಟು ನೋಡಿದವರು ಬಾಗಲೋಡಿಯವರು. ಆದರೆ ಬಾಗಲೋಡಿ ಕತೆಗಳು ತಮ್ಮ ವೈನೋದಿಕ ಗುಣದಿಂದ ಸಾಮಾಜಿಕವಾಗಿ ತಟ್ಟಬಲ್ಲ ವ್ಯಂಗ್ಯದಿಂದ ಆಧುನಿಕ ಪ್ರಜ್ಞೆಯನ್ನು ಒರೆಹಚ್ಚಲು ನೋಡಿದವು.

ಬಾಗಲೋಡಿ ಅವರ ವಿಶಿಷ್ಟ ಕಥನಗಾರಿಕೆಯನ್ನು ಅರಿಯಬೇಕೆಂದರೆ ಅವರ ಕೆಲವು ಪ್ರಾತಿನಿಧಿಕ ಎನ್ನಿಸುವ ಕಥೆಗಳನ್ನು ನೋಡಬೇಕು. ಅವುಗಳಲ್ಲಿ ‘ಪವಾಡ ಪುರುಷ’ ಕತೆಯನ್ನು ನೋಡಿದರೆ, ಭಿಕ್ಕು ಸರ್‍ವಾರ್‍ಥ ಸಿದ್ಧಿಯು ಸಾಯುವ ಸ್ಥಿತಿಯಲ್ಲಿ ಹೇಳುವ ನಿಜ ಎಷ್ಟು ಆಘಾತಕಾರಿಯಾದುದೆಂದರೆ ಭಿಕ್ಕುವಿನ ಸಾರ್‍ವಜನಿಕ ವ್ಯಕ್ತಿತ್ವಕ್ಕೂ ಅವನ ಕಾಮನ್ ಸೆನ್ಸ್‌ಗೂ ತಾಳೆ ಹಾಕಿ ನೋಡುವಂತೆಯೇ ಇಲ್ಲ. ಬೌದ್ಧ ಭಿಕ್ಕುವಿನ ಮರಣವೆಂದರೆ ಮಹಾನವಮಿ ಎಂದು ಆ ಅಪೂರ್‍ವ ಗಳಿಗೆಗೆ ಸಾಕ್ಷಿಯಾಗ ಬಂದ ಭಿಕ್ಕುವು ಜೀವನದ ಕೊಟ್ಟಕೊನೆಯಲ್ಲಿ ಬೆಳಗುವ ಸತ್ಯದ ಆಯಾಮವನ್ನು ಕಂಡು ಬೆರಗಾಗುತ್ತಾನೆ. ಭಿಕ್ಕುಣಿ ಅಪರಾಜಿತೆಯನ್ನು ಬಯಸಿ ಶೋಣಿತಕೇತು ಒಬ್ಬಂಟಿಗನಾಗಿ ಬಂದಾಗ ‘ಏಕಾಕಿಯಾಗಿ ಬಂದ ಆ ದುರಾತ್ಮನನ್ನು ಇದೇ ನನ್ನೀ ಕೈಗಳಿಂದ ನಾನು ಕತ್ತು ಹಿಸುಕಿ ಕೊಂದೆನು. ಪಾಪಭೋಗದಿಂದ ಶಿಥಿಲವಾಗಿದ್ದ ಆ ದೇಹ ನನ್ನ ಕೈಗಳಲ್ಲಿ ಸುಲಭವಾಗಿಯೇ ಮುರಿಯಿತು…. ನಾನೀ ಕಥೆಯನ್ನು ನಿನಗೆ ಹೇಳಿದುದು ಪಶ್ಚತ್ತಾಪದಿಂದಲ್ಲ, ಆತ್ಮಲಾಂಛನದಿಂದಲ್ಲ. ಸರ್‍ವಥಾ ಅಲ್ಲ…. ನಿನಗೆ ಕರ್‍ತವ್ಯಜ್ಞಾನಕ್ಕಾಗಿರಲಿ ಎಂದು ಹೇಳಿದ್ದೇನೆ. ನೀನು ನನ್ನ ಉತ್ತರಾಧಿಕಾರಿ, ನಾಳೆ ಸಂಘದ ಧರ್‍ಮದ ಭಾರವನ್ನು ಹೊರತಕ್ಕವನು. ನಿನಗೆ ಕರ್‍ತವ್ಯಜ್ಞಾನಕ್ಕಿರಲಿ ಎಂದು ಹೇಳಿದೆ. ತಿಳಿದಿರಲಿ.. ..ಮುಗಿಯಿತು.. ..ಓಂ ಮಣಿ ಪದ್ಮೇ ಹೂಂ’ ಎಂದು ಪೂಜ್ಯಪಾದನೂ ಅಹಿಂಸಾಧರ್‍ಮ ಪ್ರದೀಪನೂ ಪವಾಡಪುರುಷನೂ ಆದ ಭಿಕ್ಕು ಸರ್‍ವಾರ್‍ಥ ಸಿದ್ಧಿ ನಿರ್‍ವಾಣವನ್ನೈದಿದನು ಎಂಬಲ್ಲಿಗೆ ಕತೆ ಕೊನೆಯಾಗುತ್ತದೆ. ಭಿಕ್ಕುವನ್ನು ನೋಡುವ ಸಾಮಾನ್ಯ ದೃಷ್ಟಿಯನ್ನು ಇಲ್ಲಿ ಬದಲಾಯಿಸಲಾಗಿದೆ. ಅಹಿಂಸಾಧರ್‍ಮವನ್ನು ಪಾಲಿಸುವವ ಎಂದು ಒತ್ತಿ ಒತ್ತಿ ಹೇಳುವ ಒಬ್ಬ ಭಿಕ್ಕು ತನ್ನ ಪೂರ್‍ವಾಶ್ರಮದ ವಾಸನೆಯನ್ನು ಬಿಟ್ಟುಕೊಟ್ಟಿಲ್ಲ. ಕ್ಷತ್ರಿಯನಾಗಿ ಕ್ಷತ್ರಿಯ ಕುಲದ ಹೆಣ್ಣಿನ ಮೇಲೆ ಕಣ್ಣು ಹಾಕಿದ ಇನ್ನೊಬ್ಬ ಕ್ಷತ್ರಿಯನನ್ನು ಅವನು ಕ್ಷಮಿಸುತ್ತಲೂ ಇಲ್ಲ. ಇಲ್ಲಿ ಜಿಜ್ಞಾಸೆಗೆ ಬೀಳುವುದು ಬೌದ್ಧಧರ್‍ಮ ಧಾರೆಯಾದ ಅಹಿಂಸೆಯು ಹೊಸ ವ್ಯಾಖ್ಯಾನ ಪಡೆದುಕೊಂಡಿದೆ ಎಂಬ ಅಂಶದಲ್ಲಿ. ಕತೆಯ ಆಂತರ್‍ಯವು ಯಾವುದಿರಬಹುದು? ಸಾಂಸ್ಥಿಕವಾದ ಅರ್‍ಥಛೇದವೋ ಅಥವಾ ಬೌದ್ಧಧರ್‍ಮ ತಾಳಿಬಾಳುವುದಕ್ಕೆ ಬೇಕಾದ ಲೋಕಜ್ಞಾನವನ್ನೋ?

ಬಾಗಲೋಡಿಯವರ ಇನ್ನೊಂದು ಮುಖ್ಯ ಕಥೆ-ಶುಕ್ರಾಚಾರ್‍ಯ. ಈ ಕತೆಯ ನಾಯಕ ಅಶ್ವತ್ಥಾಮನ ಗುಣವೇ ಲೋಕವಿರೋಧಿಯಾಗಿದೆ. ಬ್ರಾಹ್ಮಣಜಾತಿಯಲ್ಲಿ ಹುಟ್ಟಿದ ಈತನ ನಡವಳಿಕೆಗಳು ಸಾಂಪ್ರದಾಯಿಕ ಬ್ರಾಹ್ಮಣಕುಲಕ್ಕೆ ಹೊರತಾದವು. ಕಾಶಿಗೆ ಹೋಗಿ ತರ್‍ಕ, ಶಾಸ್ತ್ರಗಳನ್ನೆಲ್ಲ ಕಲಿತು ಬಂದರೂ ಮಾಡತೊಡಗಿದ್ದು ಕಾಡುಮೂಲದ ಮಣಸ ಮತ್ತು ಹೊಲೆಯರೊಡನೆ ಸೇರಿಕೊಂಡು ಕಾಡಿನ ಉತ್ಪನ್ನಗಳಾದ ಕೃಷ್ಣಾಜಿನ, ಹುಲಿಚರ್‍ಮ, ಪುನುಗು, ಔಷಧ ಮೂಲಿಕೆ ಇತ್ಯಾದಿ ಕಾಡು ಉತ್ಪತ್ತಿಯ ವ್ಯಾಪಾರವನ್ನು. ಒಮ್ಮೆ ತಾನು ಪ್ರೀತಿಸಿ, ಈಗ ವಿಧವೆಯಾಗಿದ್ದ ಸುನೀತಿಯೊಡನೆ ಮದುವೆಯಾಗಿ ಅದನ್ನು ಸಮಾಜದಲ್ಲಿ ಸರಿ ಎಂದು ಬಾಳಿ ತೋರಿಸಿದ್ದು, ಹೊಲೆಯರೊಡನೆ ಪ್ರೀತಿ ಸಂಬಂಧ ಇತ್ಯಾದಿಗಳನ್ನು ಕಂಡ ಜನ ಇವನನ್ನು ‘ಹೊಲೆಯರ ಶುಕ್ರಾಚಾರ್‍ಯ’ ಎಂದು ಕರೆಯುತ್ತಿದ್ದರಂತೆ! ಅದಕ್ಕೆ ತಕ್ಕನಾಗಿ ಈ ಬ್ರಾಹ್ಮಣ ಶುಕ್ರಾಚಾರ್‍ಯನಾಗಿಯೇ ಬಾಳಿದವನು. ಇವನಂತೆ ಇವನ ಮಗಳು ಶಾಕಂಭರಿ ಗಂಡುಬೀರಿ! ಕುದುರೆ ಸವಾರಿಯಿಂದ ಹಿಡಿದಿದ್ದು ಬಿಲ್ಲುಬಾಣದ ಪ್ರಯೋಗವನ್ನೆಲ್ಲ ಕರತಲಾಮಲಕ ಮಾಡಿಕೊಂಡವಳು. ತಂದೆಯಿಂದ ಯಜ್ಞೋಪವೀತ ಹಾಕಿಸಿಕೊಂಡು ಗಾಯತ್ರೀ ಮಂತ್ರ ಕಲಿತವಳು. ಇವಳು ಮುಂದೆ ಹೊಲೆಯರ ನದ್ದನೊಡನೆ ಮೆಚ್ಚಿ ವಿವಾಹವಾಗುತ್ತಾಳೆ. ಅವಳ ಕೈ ಹಿಡಿದ ನದ್ದನು ಕದಂಬರಾಜನೊಡನೆ ಯುದ್ಧ ಮಾಡಿ ನಂದರಾಜನಾಗಿ ತೌಳವ ದೇಶವನ್ನು ಉತ್ತರದಿಕ್ಕಿನಿಂದ ಹಿಡಿದು ಮಂಜೇಶ್ವರದವರೆಗೆ ಆಳುತ್ತಾನಂತೆ, ಅವನ ಹೆಸರಿನ ರಾಜ್ಯ ನಂದಾವರವಾಯಿತಂತೆ. ಈ ಕತೆಯ ಪಲ್ಲಟಗಳನ್ನು ಗಮನಿಸಬೇಕು. ಕತೆಯ ಓಟದಲ್ಲಿ ಬಾಗಲೋಡಿ ಯಾವುದೇ ನಿಲುಗಡೆ ಕೊಡದೆ ಯಾವುದೋ ಕ್ರಾಂತಿ ಆಗುತ್ತಿದೆಯೆಂಬ ಭ್ರಾಂತಿ ಹುಟ್ಟಿಸದೆ ನಿರಾಯಾಸವಾಗಿ ಸಾಮಾಜಿಕವಾದ ಕ್ರಾಂತಿಯನ್ನು ವಿಕಾಸ ಕ್ರಮದಲ್ಲಿ ಕಟ್ಟಿಕೊಡುತ್ತಾರೆ. ಇತಿಹಾಸದ ಚಕ್ರಗತಿಯನ್ನು ಬಲ್ಲವರಿಗೆ ಅದು ಸನಾತನ ಧರ್‍ಮ ಹೇಳುವಂತೆ ವೃತ್ತಾಕಾರವಾಗಿಲ್ಲ ಎಂಬುದು ಸರ್‍ವವಿದಿತ. ಅದರ ಗತಿ ನೇರವಾಗಿ ಬದಲಾವಣೆಗಳನ್ನು ಇಟ್ಟುಕೊಂಡ ಮುಂಚಾಚು.

ಇದೇ ನೀತಿ ಹೇಗೆ ತಿರುವು ಮುರುವಾಗಬಲ್ಲುದು ಎನ್ನುವುದನ್ನು ಸಹ ಬಾಗಲೋಡಿ ಹೇಳಬಲ್ಲವರಾಗಿದ್ದರು. ‘ಘಟಭಾಂಡೇಶ್ವರ’ ಕತೆಯು ವ್ಯಂಗ್ಯವಾಗಿ ನಿರೂಪಿಸುವ ಆಳುವವರ ಗುಣವನ್ನು ಧಾರಣೆ ಮಾಡಿದ ಸಾಮಾನ್ಯ ಕುಂಬಾರನ ಮಗ ತನ್ನ ಹುಟ್ಟು, ಮೂಲಗಳನ್ನೇ ಮರೆತು(ಅಥವಾ ಮರೆತಂತೆ ನಟಿಸಿ) ತಾನು ಉದ್ಧಾರವಾದ ದಾರಿಯಲ್ಲಿ ಇನ್ನೊಬ್ಬರು ಬರಬಾರದು ಎಂದು ಮುಚ್ಚಿಹಾಕುವ ಯತ್ನ ಮಾಡುತ್ತಾನೆ. ಕುಂಬಾರನ ಮಗನಾಗಿದ್ದ ಐತನ ಕೈಯಲ್ಲಿ ರಾಜಯೋಗವಿದೆ ಎಂಬ ಕಾರಣದಿಂದ ಅವನನ್ನು ಶಾಸ್ತ್ರ ಮತ್ತು ಶಸ್ತ್ರಗಳಿಂದ ತರಭೇತಿ ಕೊಟ್ಟ ಬ್ರಾಹ್ಮಣನ ಉದಾಹರಣೆಯನ್ನು ಮರೆತು ಮುಂದೆ ರಾಜನಾದಾಗ ತನ್ನ ರಾಜ್ಯದಲ್ಲಿ ಅಂಬಿಗರು ವಿದ್ಯಾಭ್ಯಾಸ ಮಾಡುವುದನ್ನು ಸಹಿಸದೇ ಅವರನ್ನು ಮರಣದಂಡನೆಗೆ ಗುರಿ ಮಾಡುವುದಕ್ಕೆ ಹೊರಟ ಹೊಸ ವಂಶದ ರಾಜನೇ ಇತಿಹಾಸದ ಒಂದು ವ್ಯಂಗ್ಯ. ಇವನನ್ನು ರಾಜ ಮಾಡುವ ಮುನ್ನ ಬ್ರಾಹ್ಮಣ ಹೇಳುವ ಮಾತುಗಳು ಹೀಗಿವೆ; “ರಾಜವಂಶಗಳ ಮೂಲ ನನಗೆ ಗೊತ್ತು. ಮಹಾನದಿಗಳ ಮೂಲ ಸಣ್ಣ ಹಳ್ಳ; ಗುಡ್ಡೆಯ ಬದಿಯ ಕಲ್ಲೊಳಗಿಂದ ಜಿನುಗುವ ನೀರು. ಋಷಿಯಾಗುವುದು ಜನ್ಮಮಾತ್ರದಿಂದಲ್ಲ, ಯೋಗ್ಯತೆ, ಪ್ರತಿಭೆ, ಸಾಧನೆ, ಪರಿಶ್ರಮ, ಆತ್ಮಬಲ, ಮೇಧೋಬಲಗಳಿಂದ. ರಾಜನಾಗುವುದೂ ಜನ್ಮಮಾತ್ರದಿಂದಲ್ಲ. ಪ್ರತಿಭೆ, ಸಾಹಸ, ಪರಿಶ್ರಮ, ವಿವೇಕಗಳಿಂದ.” ಮಾರ್ಕ್ಸ್‌ವಾದ ಕೊಟ್ಟ ದೊಡ್ಡ ತಿಳಿವಳಿಕೆ ಎಂದರೆ ಹುಟ್ಟು ಎನ್ನುವುದು ಸಂಬಂಧಗಳನ್ನು ನಿರ್‍ಧರಿಸಲಾರದು; ಅದೇನಿದ್ದರೂ ಪರಿಸರದ ಮಾತು ಎಂಬುದು. ಬ್ರೆಕ್ಟ್ ಕವಿ ಹೇಳುವಂತೆ ಸಂಬಂಧಗಳು ನೈಸರ್‍ಗಿಕವಲ್ಲವೇ ಅಲ್ಲ, ಅವು ಸಾಮಾಜಿಕವಾದವು. ಈ ತಿಳಿವಳಿಕೆಯನ್ನು ಅಡಕಗೊಳಿಸಿಕೊಟ್ಟ ಕನ್ನಡದ ಈ ಪುಟ್ಟ ಕತೆ ಆಳುವ ವರ್‍ಗದ ಆನಂತರದ ಧೋರಣೆಗಳನ್ನೂ ಎತ್ತಿಹಿಡಿಯುತ್ತಿದೆ. ಇತಿಹಾಸದಿಂದ ಮನುಷ್ಯ ಪಾಠ ಕಲಿಯುವ ಬದಲು, ಸುಳ್ಳು ಇತಿಹಾಸವನ್ನು ಸೃಷ್ಟಿಸುತ್ತಾನೆ. ಆ ಮೂಲಕ ತನ್ನ ಅಹಂಕಾರವನ್ನು ಬೆಳೆಸಿಕೊಳ್ಳುತ್ತಾನೆ. ತನಗೆ ಅನುಕೂಲವಾಗುವ ಹಾಗೆ ಸಾಮಾಜಿಕ ನ್ಯಾಯಗಳನ್ನು ಬದಲಾಯಿಸಿಕೊಂಡು ಅವನ್ನೇ ಶಾಸನಬದ್ಧಗೊಳಿಸುತ್ತಾನೆ. ಸ್ಟಾಲಿನ್ ರಷ್ಯಾದ ಕ್ರಾಂತಿಯ ನಂತರ ಹುಟ್ಟಿದ ನಾಯಕ; ಕ್ರಾಂತಿಯ ಆಶಯಗಳನ್ನು ಜಾಗೃತವಿಡುವಂತೆ ಮಾಡಿ ಅದೇ ಹೆಸರಿನಲ್ಲಿ ಝಾರ್ ದೊರೆಗಳಿಗಿಂತ ಹಿಂಸಕ ಸನ್ನಿವೇಶವನ್ನು ಸೃಷ್ಟಿ ಮಾಡಿದ. ಘಟಭಾಂಡೇಶ್ವರನಾದರೋ ತನ್ನ ಕುಂಬಾರ ಕುಲದವರ ನೆನಪಿಗೆ ಕಟ್ಟಿಸಿದ್ದ ಘಟ(=ಮಡಿಕೆ)ಕ್ಕೆ ಹೊಸ ಇತಿಹಾಸವನ್ನು ಅಂಟಿಸಿ ತನ್ನ ಕುಲವನ್ನು ಸಂಸ್ಕೃತೀಕರಣಗೊಳಿಸಿಕೊಂಡ. ಆದರೆ ಆ ದಾರಿಯಲ್ಲಿ ಬೇರಾರೂ ಬಾರದಂತೆ ಬಿಗಿ ಮಾಡಿದ.

ಹೀಗೆ ಬದಲಾವಣೆಗಳ ಗತಿಯೇ ಬಾಗಲೋಡಿಯವರ ಕತೆಗಳಲ್ಲಿ ಅಡಗಿದೆ. ಸಮಾಜ ಮತ್ತು ಸಮುದಾಯವನ್ನು ಬದಲಾಯಿಸಬಲ್ಲ ಪಲ್ಲಟಗಳನ್ನು ಬಾಗಲೋಡಿ ಶೋಧಿಸಿಕೊಂಡಂತೆ ಆ ಕಾಲದ ಮಾಸ್ತಿಯವರೂ ಬಹುಶಃ ಸಾಧಿಸಲಿಲ್ಲವೇನೊ. ನವ್ಯ ಮತ್ತು ನವೋದಯ ಕಥಾಜಗತ್ತುಗಳ ಆಳ ಅಗಲಗಳನ್ನು ಅಳೆದ ವಿಮರ್‍ಶಕ ವರ್‍ಗ ಬಾಗಲೋಡಿ ಕತೆಗಳ ಜಿಗಿತವನ್ನು ಸರಿಯಾದ ಸಮಯದಲ್ಲಿ ಸರಿಯಾಗಿ ಗುರುತಿಸಲಿಲ್ಲ. ಹೀಗಾಗಿ ಅವರ ಕತೆಗಳು ‘ಓದಿಸಿಕೊಂಡು’ ಹೋಗುವ ಕತೆಗಳಾಗಿ ಮಾತ್ರ ಉಳಿದವು. ಬಾಗಲೋಡಿ ನಿರ್‍ಮಿಸಿದ ಅಹಂನ ನಿರ್‍ಮಾಣವು ಚರಿತ್ರೆಗೇ ಒಂದು ಸವಾಲಿನಂತಿತ್ತು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಿನ್ನ ನಾನರಿಯೆನೈ
Next post ಉಮರನ ಒಸಗೆ – ೬

ಸಣ್ಣ ಕತೆ

 • ನಂಬಿಕೆ

  ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

 • ಬಲಿ

  ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

 • ಇರುವುದೆಲ್ಲವ ಬಿಟ್ಟು

  ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

 • ಕಳ್ಳನ ಹೃದಯಸ್ಪಂದನ

  ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

 • ಮತ್ತೆ ಬಂದ ವಸಂತ

  ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

cheap jordans|wholesale air max|wholesale jordans|wholesale jewelry|wholesale jerseys