ಚಿತ್ರ ಸೆಲೆ: ನಿರಪಾರ್‍ಸ್ ಬ್ಲಾಗ್

ಕನ್ನಡ ಸಾಹಿತಿಗಳ ಪ್ರಪಂಚದಲ್ಲಿ ಆದರ್ಶದ ಭಲೇ ಜೋಡಿ ಎಂದರೆ ಕನ್ನಡ ಪ್ರಾಧ್ಯಾಪಕರಾದ ಟಿ.ಎಸ್. ವೆಂಕಣ್ಣಯ್ಯ ಮತ್ತು ಎ.ಆರ್.ಕೃ ಅವರು. ಅವರನ್ನು ಮಾಸ್ತಿ ‘ಕನ್ನಡದ ಅಶ್ವಿನಿ ದೇವತೆ’ಗಳೆಂದೇ ಕರೆದಿದ್ದಾರೆ. ಅವರಿಬ್ಬರೂ ಎರಡು ದೇಹ, ಒಂದು ಆತ್ಮ ಎಂಬಂತಿದ್ದವರು. ಈ ಮಾತಿಗೆ ನಿದರ್ಶನ ವೆಂದರೆ ಎಸ್.ವಿ. ರಂಗಣ್ಣ ನವರ ಬದುಕಿನ ಒಂದು ಅನುಭವ.

ಒಮ್ಮೆ ಎಸ್.ವಿ. ರಂಗಣ್ಣ ನವರು ತಾವು ಬರೆದ ರಂಗಯ್ಯನ ವಚನಗಳೆಂಬ ಆಧುನಿಕ ವಚನಗಳ ಹಸ್ತಪ್ರತಿಯನ್ನು ತಮ್ಮ ಗುರುಗಳಾದ ಕೃಷ್ಣಶಾಸ್ತ್ರಿ ಗಳಿಗೆ ಕೊಟ್ಟರು. ‘ದಯವಿಟ್ಟು ಓದಿ ನಿಮ್ಮ ಅಭಿಪ್ರಾಯವನ್ನು ತಿಳಿಸಿ ವಿಷಯ ಗುಟ್ಟಾಗಿರಲಿ ಯಾರಿಗೂ ಹೇಳಬೇಡಿ’ ಎಂದು ಪ್ರಾರ್ಥಿಸಿದರು. ಒಂದೆರಡು ವಾರಗಳ ನಂತರ ವೆಂಕಣ್ಣಯ್ಯನವರು, ‘ರಂಗಣ್ಣನವರೇ ನಿಮ್ಮ ಕೆಲವು ರಂಗಯ್ಯನ ವಚನಗಳನ್ನು, ಕಳಿಸಿಕೊಡಿ. ಪ್ರಬುದ್ಧ ಕರ್ನಾಟಕದಲ್ಲಿ ಪ್ರಕಟಿಸೋಣ’ ಎಂದರು. ಹೂಂ ಆಗಲಿ ಎಂದರು. ಅನಂತರ ರಂಗಣ್ಣನವರು ಕೂಡಲೇ ಕೃಷ್ಣಶಾಸ್ತ್ರಿಗಳ ಬಳಿಗೆ ಬಂದರು. ಸ್ವಲ್ಪ ಸಿಟ್ಟಿನಿಂದಲೇ ಕೇಳಿದರು. “ಏನ್ಸಾರ್ ಹೀಗೆ ಮಾಡಿದಿರಿ, ಯಾರಿಗೂ ತಿಳಿಸಬೇಡಿ ಎಂದಿರಲಿಲ್ಲವೇ? ವೆಂಕಣ್ಣಯ್ಯ ನ ವರು ಪ್ರಬುದ್ಧ ಕರ್ನಾಟಕದಲ್ಲಿ ಪ್ರಕಟಿಸುತ್ತೇವೆ. ನಿಮ್ಮ ವಚನಗಳನ್ನು ಕೊಡಿ ಎಂದರು. ಅವರಿಗೆ ತಿಳಿಸಿದ್ದು ಸರಿಯೇ?” ಎಂದರು. ಆಗ ಕೃಷ್ಣಶಾಸ್ತ್ರಿಗಳು ರಂಗಣ್ಣನವರಿಗೆ “ವೆಂಕಣ್ಣಯ್ಯನಿಗೆ ತಿಳಿಸಿದ್ದರಲ್ಲಿ ತಪ್ಪೇನಿಲ್ಲ. ಏತಕ್ಕೆಂದರೆ ನಾನು ಬೇರೆಯಲ್ಲ ವೆಂಕಣ್ಣಯ್ಯ ಬೇರೆಯಲ್ಲ ತಿಳಿಯಿತೇ?” ಎಂದರು. ಇವರಿಬ್ಬರ ಆತ್ಮೀಯ ಸ್ನೇಹಕ್ಕೆ ಇನ್ನೊಂದು ನಿದರ್ಶನವೆಂದರೆ, ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ವೆಂಕಣ್ಣಯ್ಯನವರು ಅಧ್ಯಾಪಕರಾಗಿದ್ದಾಗ ಕಂಟೋನ್ಮೆಂಟ್ ಭಾಗದಲ್ಲಿ ದೊಡ್ಡದೊಂದು ಬಂಗಲೆ ವಾಸಕ್ಕೆ ಬಾಡಿಗೆಗೆ ಸಿಕ್ಕಿತು. ಆಗ “ಮನೆ ದೊಡ್ಡದಾಗಿದೆ ಬನ್ರಯ್ಯಾ ಎಲ್ಲರೂ ಒಟ್ಟಿಗಿರೋಣ” ಅಂತ ಹೇಳಿ ಎ.ಆರ್.ಕೃ ಮತ್ತು ಎ.ಎನ್. ನರಸಿಂಹಯ್ಯನವರ ಸಂಸಾರಗಳನ್ನು ಕರೆಸಿಕೊಂಡು ಒಟ್ಟಿಗೆ ವಾಸ ಮಾಡತೊಡಗಿದರು. ಎ.ಆರ್.ಕೃ.ಜತೆ ಅವಿನಾಭಾವ ಸ್ನೇಹ ಅಷ್ಟರಮಟ್ಟಿಗಿತ್ತು. ಇಂದು ಎಷ್ಟು ಮಂದಿ ಬಂಗಲೆಗಳಲ್ಲಿ ವಾಸ ಮಾಡುತ್ತಿರುವವರು ಮನೆ ದೊಡ್ಡದಾಯಿತು ಎಂದಾಗ ಬಾಡಿಗೆಗೆ ಬೇರೆಯವರಿಗೆ ಕೊಡುತ್ತಾರೆ, ಇಲ್ಲವೇ ಭಾಗಶಃ ಮಾರುತ್ತಾರೆ. ಗೆಳೆಯರಿಗೆ ಒಟ್ಟಿಗಿರೋಣ ಅಂತ ಕರೆದ ಉದಾಹರಣೆ ಮತ್ತೆಲ್ಲೂ ಇಲ್ಲ. ವೆಂಕಣ್ಣಯ್ಯನವರೊಬ್ಬರೇ ಏಕೈಕ ನಿದರ್ಶನ.

ಇಬ್ಬರು ಜತೆಯಲ್ಲಿರುವಾಗ ಒಮ್ಮೆ ಎ.ಆರ್.ಕೃ ಅವರಿಗೆ ದಾರುಣ ಕಾಯಿಲೆ ಬಂದು ವೈದ್ಯರು ತಮ್ಮ ಕೈಮಿಂಚುತ್ತಿದೆ ಎಂದಾಗ, ಎಂದೂ ಯಾತಕ್ಕೆ ದೇವರನ್ನು ಏನೂ ಕೇಳಿಕೊಳ್ಳದ ಟಿ.ಎಸ್. ವಂಕಣ್ಣಯ್ಯನವರ “ಭಗವಂತ ನನ್ನ ಕೃಷ್ಣನನ್ನು ಉಳಿಸಿ ಕೊಡು” ಎಂದು ದೇವರಿಗೆ ಮೊರೆಯಿಟ್ಟರಂತೆ. ಎ.ಆರ್. ಕೃ ಅವರು ಗುಣಮುಖರಾದರು. ವೆಂಕಣ್ಣಯ್ಯನವರ ಪ್ರಾರ್ಥನೆ ಫಲಿಸಿತು. ಎ.ಆರ್.ಕೃ. ಅವರು ಈ ಬಗ್ಗೆ ಸದಾ ಹೇಳುತ್ತಿದ್ದರು. ‘ಅವರ ಪ್ರಾರ್ಥನೆಯನ್ನು ದೇವರು ಆಲಿಸಿದ, ಕೋರಿಕೆಯನ್ನು ಸಲ್ಲಿಸಿದ. ಅದರಿಂದ ನಾನು ಖ್ಯಾತಿ ಹೊಂದಿದೆ ಎಂದು ಇಂದಿಗೂ ನಾನು ನಂಬಿದ್ದೇನೆ” ಇಂತಹ ಅಂತರಂಗದ ಆತ್ಮೀಯ ಜೋಡಿ ಟಿ.ಎಸ್. ವೆಂಕಣ್ಣಯ್ಯ ಮತ್ತು ಎ.ಆರ್.ಕೃ. ಅವರದು.

ವೆಂಕಣ್ಣಯ್ಯನವರನ್ನು ಕುರಿತು ಮಾತನಾಡುವಾಗಲೆಲ್ಲ ತಪ್ಪದೇ ನೆನಪಾಗುವುದು ಇನ್ನೊಂದು ಗುರು-ಶಿಷ್ಯ ಸಂಬಂಧ ಜೋಡಿ ಕಥೆ, ಎಂದರೆ ಕುವೆಂಪು-ವೆಂಕಣ್ಣಯ್ಯನವರ ಅಮೃತ ಬಾಂಧವ್ಯ. ಒಬ್ಬ ಗುರು ಒಬ್ಬ ವಿದ್ಯಾರ್ಥಿ ಆದವನು ಪ್ರತಿಭಾವಂತನಾಗಿದ್ದಾಗ, ವಜ್ರವಾಗಿದ್ದಾಗ ಸಾಣೆ ಹಿಡಿಯ ಬೇಕಾಗುತ್ತದೆ. ಆ ಕೆಲಸ ಸುಲಭವಲ್ಲ. ಅಂಥ ಕಾರ್ಯ ಕೈಗೊಂಡವರು. ಶಿಷ್ಯನನ್ನು ಲೋಕೋತ್ತರ ವ್ಯಕ್ತಿಯನ್ನಾಗಿ ಮಹಾಕವಿಯನ್ನಾಗಿ ರೂಪಿಸಿದವರು ವೆಂಕಣ್ಣಯ್ಯನವರು, ಲೋಕದಲ್ಲಿ ವೆಂಕಣ್ಣಯ್ಯನವರ ಶಿಷ್ಯ ಪ್ರೇಮ ಕುವೆಂಪು ಅವರ ಗುರು ಭಕ್ತಿ ‘ನ ಭೂತೋ ನ ಭವಿಷ್ಯತಿ’ ಎಂದರೆ ತಪ್ಪಿಲ್ಲ. ಇಂಥ ಮಹಾಗುರು ವೆಂಕಣ್ಣಯ್ಯನವರ ಪರಮಶಿಷ್ಯರು ಕುವೆಂಪು ಅವರು, ತಮ್ಮ ಗುರುವಿನ ಬಗ್ಗೆ ಹೇಳಿದ ಮಾತುಗಳನ್ನು ಗಮನಿಸಿದರೆ ಟಿ.ಎಸ್. ವೆಂಕಣ್ಣಯ್ಯ ನವರ ಅಪೂರ್ವ ವ್ಯಕ್ತಿತ್ವದ ಅರಿವಾಗುತ್ತದೆ;

ಕುವೆಂಪು ಅವರು ಒಮ್ಮೆ ಹೇಳಿದರು.

“ನನ್ನ ಬಾಳಿನಲ್ಲಿ ಇತರ ಯಾವ ಪ್ರಾಧ್ಯಾಪಕರು ವೆಂಕಣ್ಣಯ್ಯ ನವರಂತೆ ನನ್ನಲ್ಲಿ ಆತ್ಮೀಯ ಭಾವವನ್ನುಂಟು ಮಾಡಲಿಲ್ಲ. ನನ್ನ ಪ್ರಶಂಸೆಗೆ, ಗೌರವಕ್ಕೆ ಪಾತ್ರರಾಗಿದ್ದ ಪ್ರಾಧ್ಯಾಪಕರಲ್ಲಿಯೂ ನಾನು ವೆಂಕಣ್ಣಯ್ಯನವರಲ್ಲಿ ಅನುಭವಿಸಿದಂತೆ ಆತ್ಮಿಯತೆಯನ್ನು ಅನುಭವಿಸಲು ಸಮರ್ಥನಾಗಲಿಲ್ಲ.”

ತಮ್ಮ ಪ್ರೀತಿ ಪಾತ್ರನಾದ ಶಿಷ್ಯನ ಬರಹಗಳನ್ನು ಮೆಚ್ಚಿಕೊಂಡಿದ್ದ ವೆಂಕಣ್ಣಯ್ಯನವರು ಎಂದು ಅಂಧಾಭಿಮಾನದಿಂದ ಶಿಷ್ಯನ ಕವಿತೆ-ಕಾವ್ಯಗಳನ್ನು ಹೊಗಳುತ್ತಿರಲಿಲ್ಲ. ಕುವೆಂಪು ಅವರ ಕೃತಿಗಳ ಟೊಳ್ಳು-ಗಟ್ಟಿಗಳನ್ನು ಚೆನ್ನಾಗಿ ಗುರುತಿಸುತ್ತಿದ್ದರು. ನಿರ್ಭಯವಾಗಿ ನಿರ್ದಾಕ್ಷಿಣ್ಯವಾಗಿ ಆದರೆ ನಯವಾಗಿ ಹೇಳುತ್ತಿದ್ದರು. ಈ ಮಧುರ ವಿಧಾನದ ಸತ್ಯಸಂಧತೆ ಕುವೆಂಪು ಅವರಿಗೆ ಪ್ರಿಯವಾಗಿತ್ತು. ಕನ್ನಡದ ವಿಮರ್ಶಕರಿಗೆ ವೆಂಕಣ್ಣಯ್ಯ ನವರ ರೀತಿ ಮಾದರಿ ಆಗುತ್ತೆ. ಇದಕ್ಕೆ ಒಂದೆರಡು ನಿದರ್ಶನಗಳನ್ನು ಹೇಳಿದರೆ ಈ ಮಾತುಗಳ ಅರ್ಥ ಸ್ಪಷ್ಟವಾಗುತ್ತದೆ.

೧೯೨೪ರಲ್ಲಿ ಕುವೆಂಪು ಅವರ ಗೋವಿನ ಕಥೆಯ ಮಟ್ಟಿನಲ್ಲಿ ‘ಅಮಲನ ಕಥೆ’ಯನ್ನು ಬರೆದಿದ್ದರು. ವೆಂಕಣ್ಣಯ್ಯನವರು ಅದನ್ನು ಆಮೂಲಾಗ್ರವಾಗಿ ಓದಿದಾಗ ವಸುದೇವ ಭೂಪಾಲಂ ಅವರ, ಅಮಲನ ಕಥೆ ಓದಿದಿರಾ ಸಾರ್ ಎಂದು ಕೇಳಿದಾಗ ಹೇಳಿದರು: “ಅಯ್ಯೊ ಬಿಡಿ ಅಪ್ಪಾ ಎಲ್ಲರೂ ಪದ್ಯ ಬರೆಯುವವರೇ!”

ಆದರೆ ಅದೇ ಕುವೆಂಪು ‘ಫಾಲ್ಗುಣ ಸೂರ್‍ಯೋದಯ’ ಕವಿತೆ ಬರೆದ ವೆಂಕಣ್ಣಯ್ಯನವರ ಬಳಿ ಭಾವಪೂರ್ಣವಾಗಿ ವಾಚಿಸಿದರು. ಅವರು ವಾಚಿಸಿದಾಗ ಕೇಳುತ್ತಿದ್ದ ವೆಂಕಣ್ಣಯ್ಯನವರು ದಿಢೀರನೆ ಕುಳಿತಿದ್ದ ಕುರ್ಚಿ ಯಿಂದ ನೆಗೆದೆದ್ದು ಮೂಗಿಗೆ ನಶ್ಯ ಏರಿಸುತ್ತಾ ಕುವೆಂಪು ಅವರೇ ಎದುರಾಳಿ ಎಂಬಂತೆ. “ಹೇ, ಹೇಳೋ ಎಲ್ಲಿದೆ ಇಂಥ ಕಾವ್ಯ. ಹಿಂದಿನವರಲ್ಲಾಗಲೀ ಇಂದಿನವರಲ್ಲಾಗಲೀ?” ಎಂದಿದ್ದರು. ಹೀಗೆ ಯಾರದೇ ಕಾವ್ಯ-ಕವಿತೆ ಬರಹವನ್ನು ಬರೆದವರು ಮನ ನೋಯದಂತೆ ಆದರೆ ಸತ್ಯಕ್ಕೆ ಅಪಚಾರ ವಾಗದಂತೆ ವಿಮರ್ಶಿಸುತ್ತಿದ್ದವರು ವೆಂಕಣ್ಣಯ್ಯನವರು.

ವೆಂಕಣ್ಣಯ್ಯ ನವರಿಗೆ ಕುವೆಂಪು ಅವರಲ್ಲಿ ಒಂದು ರೀತಿಯಲ್ಲಿ ಶಿಷ್ಯ ಭಾವಕ್ಕಿಂತ ಪುತ್ರ ವಾತ್ಸಲ್ಯವಿತ್ತು ಎಂದರೆ ತಪ್ಪಾಗಿದೆ. ಕುವೆಂಪು ಅವರು ಶ್ರೀರಂಗಪಟ್ಟಣದಲ್ಲಿ “ಯುವಕರು ನಿರಂಕುಶಮತಿಗಳಾಗಬೇಕು” ಎಂಬ ವಿಷಯವಾಗಿ ಬಾಷಣ ಮಾಡಿದರು. ಆ ಬಗ್ಗೆ ಅವರ ಕಾಲದ ಪ್ರಸಿದ್ಧ ಸಾಹಿತಿ, ವಿದ್ವಾಂಸರಿಂದ ಉಗ್ರ ಟೀಕೆಗಳು ಆ ಭಾಷಣದ ಬಗ್ಗೆ ಬಂದು ವಿಶ್ವವಿದ್ಯಾನಿಲಯಕ್ಕೆ ಆ ಬಗ್ಗೆ ದೂರು ಹೋಯಿತು. ಆ ಬಗ್ಗೆ ವಿಶ್ವವಿದ್ಯಾನಿಲಯ, ವಿಚಾರಣೆ ಮಾಡಿ ವರದಿ ನೀಡಲು ವೆಂಕಣ್ಣಯ್ಯನವರಿಗೆ ತಿಳಿಸಿತು. ವೆಂಕಣ್ಣಯ್ಯನವರು ಭಾಷಣ ತರಿಸಿಕೊಂಡು ಓದಿದರು, ವಿಶ್ವವಿದ್ಯಾನಿಲಯಕ್ಕೆ ಅವರು ತಿಳಿಸಿದ ಮಾತಿದು: “ನನ್ನ ಮಗನಿಗೆ ನಾನು ಬುದ್ಧಿ ಹೇಳಬೇಕಾದರೆ ಇದಕ್ಕಿಂತಲೂ ಉತ್ತಮವಾಗಿ ಮತ್ತು ಸಮರ್ಥವಾಗಿ ನಾನು ಏನನ್ನೂ ಹೇಳಲಾರೆ” ಹಾಗಿದೆ ಈ ಭಾಷಣ. ಇದು ವೆಂಕಣ್ಣನವರಿಗೆ ಇದ್ದ ಶಿಷ್ಯ ಪ್ರೇಮವಾದರೆ ಕುವೆಂಪು ಅವರಿಗೆ ವೆಂಕಣ್ಣಯ್ಯ ನವರ ಬಗ್ಗೆ ಇದ್ದ ಗುರುಭಕ್ತಿ ಇನ್ನೂ ಅಸದೃಶವಾದುದು. ಕುವೆಂಪು ಅವರು ತಮ್ಮ ಕಥೆ, ಕಾವ್ಯ, ನಾಟಕ, ಕಾದಂಬರಿ ಏನೇ ಬರೆದರೂ, ಮೊದಲು ಅದನ್ನು ವೆಂಕಣ್ಣಯ್ಯ ನವರಿಗೆ ಓದಿ ತೋರಿಸುತ್ತಿದ್ದರು. ಅವರ ಮೆಚ್ಚುಗೆ ಟೀಕೆಗಳನ್ನು ಹೃತೂರ್ವಕವಾಗಿ ಸ್ವೀಕರಿಸಿ ತಮ್ಮ ರಚನೆಗಳಲ್ಲಿ ತಿದ್ದುಪಡಿ ಮಾಡುತ್ತಿದ್ದರು. ರಾಮಾಯಣ ದರ್ಶನವನ್ನು ಕೇಳಲು ಬರುತ್ತೇನೆ ಎಂದು ಹೋದವರು ಅನಾರೋಗ್ಯದಿಂದ ಹಾಸಿಗೆ ಹಿಡಿದು ಕೇಳಲು ಬರಲಾಗಲಿಲ್ಲ. ರಾಮಾಯಣ ಕೇಳದೆಯೆ, ವೆಂಕಣ್ಣಯ್ಯನವರು ದೇಹ ತ್ಯಾಗ ಮಾಡಿದಾಗ, ಶ್ರೀ ರಾಮಾಯಣ ದರ್ಶನಂ ಇನ್ನೂ ಕಾಲು ಪಾಲು ಮುಗಿದಿರಲಿಲ್ಲ. ಆದರೆ ಅದನ್ನು ಪೂರ್ಣ ಕೃತಿಯಾಗಿ ಮುಗಿಸಿದಾಗ ವೆಂಕಣ್ಣಯ್ಯ ನವರಿಗೆ ಅರ್ಪಿಸುವ ರೀತಿಯಲ್ಲಿ ಆ ಪೂರ್ಣಕೃತಿಯನು “ಶ್ರೀ ವೆಂಕಣ್ಣಯ್ಯ ನವರಿಗೆ” ಎಂಬ ಶೀರ್ಷಿಕೆಯಲ್ಲಿ ಭಕ್ತಿ ಪುರಸ್ಕರವಾಗಿ ಅರ್ಪಿಸಿದ್ದಾರೆ.

“ಇದೊ ಮುಗಿಸಿ ತಂದಿಹೆನ್, ಈ ಬೃಹದ್‌ಗಾನಮಂ ನಿಮ್ಮ ಸಿರಿಯಡಿಗೊಪ್ಪಿಸಿ, ಓ ಪ್ರಿಯ ಗುರುವೆ, ಪಿಂತೆ ವಾಲ್ಮೀಕಿಯುಲಿದ ಕಥೆಯಾದೊಡಂ. ಕನ್ನಡದಲ್ಲಿ ಬೇರೆ ಕಥೆಯೆಂಬಂತೆ, ಬೇರೆ ಮೈ ಅಂತಂತೆ ಮರುವುಟ್ಟುವಡೆದಂತೆ ಮೂಡಿದೆ ಕಾವ್ಯಮಂ ವಿಶ್ವವಾಣಿಗೆ ಮುಡಿಯ ಮಣಿ ಮಾಡಿಹೆನ್, ನಿಮ್ಮ ಕೃಪೆಯಿಂದೆ.” ಗುರುವಿನ ಪರಮಾನುಗ್ರಹವಾಯಿತು ಎಂಬಂತೆ ಶ್ರೀ ರಾಮಾಯಣ ದರ್ಶನಂ ಲೋಕೋತ್ತರ ಮಹಾಕಾವ್ಯವಾಯಿತು; ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿ ತಂದಿತು. ಮೂವತ್ತುಕ್ಕೂ ಹೆಚ್ಚು ಮಹಾಕಾವ್ಯಗಳು ಕನ್ನಡದಲ್ಲಿ ೨೦ನೇ ಶತಮಾನದಲ್ಲಿ ಬರಲು ಈ ಕಾವ್ಯ ನಾಂದಿಯಾಯಿತು.

ನನ್ನಂತಹ ಅನೇಕ ಸಾಹಿತಿಗಳನ್ನು ಸೃಷ್ಟಿ ಮಾಡಿ ಹೋಗಿದ್ದಾರೆ ಎಂಬ ಕುವೆಂಪು ಮಾತಿಗೆ ಸಾಕ್ಷಿಯೆಂಬಂತೆ, ವೆಂಕಣ್ಣಯ್ಯನವರು ಒಮ್ಮೆ ಹೇಳಿದರು “ಕನ್ನಡ ಸಾಹಿತ್ಯದ ನಂದನವನದಲ್ಲಿ ಕವಿಗಳನ್ನು ಬೆಳೆಸುವ (ಅರ್ಥಾತ್ ಕವಿ ವಿದ್ವಾಂಸರ ಸೃಷ್ಟಿಗೆ ಕಾರಣಕರ್ತರು) ಕನ್ನಡ ತೋಟದ ಮಾಲಿ ನಾನು ಅಷ್ಟೇ. ನಾನೇ ಮಹಾವೃಕ್ಷ ಅಲ್ಲ.”

ಹೀಗೆ ಅಪೂರ್ವಸ್ನೇಹಿ ಅಪೂರ್ವಗುರು ಆದ ಕನ್ನಡ ಕಣ್ಮಣಿ ವೆಂಕಣ್ಣಯ್ಯ ನವರು ಜನಿಸಿದ್ದು ೧೮೮೫ ರ ಅಕ್ಟೋಬರ್ ಒಂದರಂದು, ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ತಳುಕು ಗ್ರಾಮದಲ್ಲಿ. ತಂದೆ ಸುಬ್ಬಣ್ಣನವರು ಆಶು ಕವಿಗಳು ನಾಟಕಕಾರರು ವಿದ್ವಾಂಸರು ಆಗಿದ್ದರು. ತಾಯಿ ಲಕ್ಷ್ಮೀದೇವಮ್ಮ ಕಾವ್ಯಾರ್ಥ ಮಾಡಬಲ್ಲಂಥ ವಿದ್ಯಾವಂತೆಯಾಗಿದ್ದರು. ಇಂಥವರ ಮನೆಗೆ ಹಿರಿಯ ಮಗನಾಗಿ ಹುಟ್ಟಿದರು ವೆಂಕಣ್ಣಯ್ಯನವರು.

ವೆಂಕಣ್ಣಯ್ಯನವರು ಹುಟ್ಟಿದಾಗ ಜೋಯಿಸರು ಜಾತಕ ಗುಣಿಸುತ್ತಾ “ಈತನ ಜಾತಕದಲ್ಲಿ ೪ ಗ್ರಹಗಳು ಉಚ್ಚವಾಗಿವೆ. ಈತ ತುಂಬ ವಿದ್ಯಾವಂತರಾಗಿ ಬುದ್ಧಿವಂತನಾಗಿ ದೊಡ್ಡ ಹುದ್ದೆಗೇರಿ ಕೀರ್ತಿಶಾಲಿಯಾಗುತ್ತಾನೆ” ಎಂದರಂತೆ. ಊರಿನ ಹಿರಿಯ ಮುತ್ತೈದೆಯೊಬ್ಬಳು ಮಗುವಿನ ನಾಮಕರಣದ ದಿನ ಆಶೀರ್ವದಿಸಲು ಬಂದವರು ಮರದಲ್ಲಿ ಮಲಗಿದ್ದ ಮುದ್ದು ಮಗುವನ್ನು ಕೈಗೆತ್ತಿಕೊಂಡು, ವೆಂಕಣ್ಣಯ್ಯನವರ ತಾಯಿಗೆ ಹೇಳಿದಳು. “ಲಕ್ಷ್ಮೀದೇವಮ್ಮ ನಿನ್ನಂಥ ಪುಣ್ಯ ಶಾಲಿ ಯಾರಿದ್ದಾರಮ್ಮ, ಸಾಕ್ಷಾತ್ ವೆಂಕಟರಮಣಸ್ವಾಮಿಯೇ ನಿನ್ನ ಮಗನಾಗಿ ಹುಟ್ಟಿದ್ದಾನೆ. ಈ ನಿನ್ನ ಮಗ ಮನೆಯ ಮುದ್ದಿನ ಮಗನಷ್ಟೇ ಅಲ್ಲಮ್ಮ, ಊರಿನ ಮುದ್ದಿನ ಮಗ, ನಾಡಿನ ಮುದ್ದಿನ ಮಗ, ಜನರ ಮುದ್ದಿನ ಮಗ ಎಂದು ಹೇಳಿ ಲೊಚ ಲೊಚ ಲೊಚ ಅಂತ ಮುದ್ದಿಟ್ಟು ಹರಸಿದಳಂತೆ. ವೆಂಕಣ್ಣಯ್ಯನವರಿಗೆ ಇಟ್ಟ ಹೆಸರು ಅವರ ತಾತನ ಹೆಸರಾದರೂ ಅವರಜ್ಜಿ ಕರೆಯುತ್ತಿದ್ದುದು, ಪುಟನೆಂದೇ. ಏಕೆಂದರೆ ಅಜ್ಜಿಯ ಗಂಡನ ಹೆಸರನ್ನು ಮೊಮ್ಮಗಳಿಗೆ ಇಟ್ಟಿತ್ತಲ್ಲಾ ಅದಕ್ಕೆ ಗಂಡನ ಹೆಸರನ್ನು ಹಿಡಿದು ಕರೆಯುವ ಕಾಲ ಆ ಕಾಲ ಆಗಿರಲಿಲ್ಲ. ಈ ಕಾಲ… ಬಿಡಿ ಆ ವಿಚಾರ.

ಬಾಲ್ಯದಿಂದಲೂ ವಿಶಿಷ್ಟ ವ್ಯಕ್ತಿಗಳಾಗಿಯೇ ಬೆಳೆದವರು ವೆಂಕಣ್ಣಯ್ಯನವರು. ಅವರು ವಿದ್ಯಾರ್ಥಿ ಆಗಿದ್ದಾಗ ಕನ್ನಡ ಲೋಯರ್ ಸೆಕೆಂಡರಿ ಪರೀಕ್ಷೆಗಾಗಿ ಚಳ್ಳಕೆರೆಯಿಂದ ಚಿತ್ರದುರ್ಗಕ್ಕೆ ಪರೀಕ್ಷಾ ಕೇಂದ್ರಕ್ಕೆ ಹೋಗಬೇಕಿತ್ತು. ಅವರ ಉಪಾಧ್ಯಾಯರು ಶಾಲೆಯಲ್ಲಿ ವಿದ್ಯಾರ್ಥಿಗಳನ್ನೆಲ್ಲ ಪರೀಕ್ಷೆಗೆ ಕರೆದೊಯ್ಯುವಾಗ ದಾರಿಯಲ್ಲಿದ್ದ ಹನುಮಂತರಾಯನ ಗುಡಿಯಲ್ಲಿ ಹಣ್ಣು ಕಾಯಿ ಅರ್ಪಿಸಿ, ವಿದ್ಯಾರ್ಥಿಗಳು ‘ಸ್ವಾಮಿ ನನಗೆ ಪರೀಕ್ಷೆಯಲ್ಲಿ ಪಾಸು ಮಾಡಿಸು’ ಎಂದು ಕೇಳಿ ಕೊಂಡರು. ಆದರೆ ವೆಂಕಣ್ಣಯ್ಯನವರು ಹಾಗೆ ಮಾಡಲಿಲ್ಲ. ಹತ್ತಿರ ಕೆರೆ ಕಾಲುವೆ ದಂಡೆಯಲ್ಲಿ ಕುಳಿತಿದ್ದಾರೆ. ಆಂಜನೇಯನಿಗೆ ಒಡಿಸಬೇಕಾದ ತೆಂಗಿನ ಕಾಯಿಯನ್ನು ಒಡೆದುಕೊಂಡು ತಿನ್ನುತ್ತಾ ಕುಳಿತಿದ್ದಾರೆ.

ಉಪಾಧ್ಯಾಯರು ಅದನ್ನು ಕಂಡು ‘ಇದೇನು ನಿನ್ನ ಅವತಾರ’ ಎಂದರು. ಆಗ ವೆಂಕಣ್ಣಯ್ಯ ಹೇಳಿದರು “ಕ್ಷಮಿಸಿ ಸಾರ್! ಫಲಾಪೇಕ್ಷೆಯಿಂದ ದೇವರ ಪೂಜೆ ಮಾಡಬಾರದು ಎಂದು ನನ್ನ ತಂದೆ ಪದೇ ಪದೇ ಹೇಳುತ್ತಿರುತ್ತಾರೆ. ಹೀಗಿರುವಾಗ ನಾನು ದೇವರ ಬಳಿ ಹೋಗಿ ಸ್ವಾಮಿ ನಾನು ನನಗೊಂದು ತೆಂಗಿನಕಾಯಿ ಕೊಡುತ್ತೇನೆ, ನೀನು ನನಗೆ ಪಾಸ್ ಮಾಡಿಸುವ ಎಂದು ಹೇಗೆ ಕೇಳಲಿ? ಅದಕ್ಕೆ ನಾನು ತೆಂಗಿನಕಾಯಿಯನ್ನು ಒಡೆದುಕೊಂಡು ತಿಂದೆ” ಎಂದರು. “ನೀನೊಬ್ಬ ಪಿತೃವಾಕ್ಯ ಪರಿಪಾಲನೆ ಧುರಂಧರ” ಎಂದು ಅಣಕವಾಡಿ ಸುಮ್ಮನಾದರು ಉಪಾಧ್ಯಾಯರು.

ಹಿಂದೆ ರಾಜನೊಬ್ಬನ ಆಸ್ಥಾನದಲ್ಲಿ ಏಕದಂಡಿ ದ್ವಿದಂಡಿ ತ್ರಿದಂಡಿ ಎಂಬ ವಿದ್ವಾಂಸರಿದ್ದರಂತೆ. ಅವರಲ್ಲಿ ಕ್ರಮವಾಗಿ ಒಂದು ಸಲ ಕೇಳಿ ಬಿಟ್ಟರೆ ಎಲ್ಲವನ್ನೂ ಗ್ರಹಿಸುತ್ತಿದ್ದವನು ಏಕದಂಡಿ, ಎರಡು ಸಲ ಕೇಳಿದರೆ ಪಾರಂಗತನಾಗುತ್ತಿದ್ದವನು ದ್ವಿದಂಡಿ, ಮೂರು ಸಲ ಕೇಳಿಸಿಕೊಂಡರೆ ಗ್ರಹಿಸುತ್ತಿದ್ದ ವ್ಯಕ್ತಿ! ತ್ರಿದಂಡಿಯಂತೆ ವೆಂಕಣ್ಣಯ್ಯನವರು ವಿದ್ಯಾಭ್ಯಾಸ ಕಾಲದಲ್ಲಿ ಏಕದಂಡಿಗಳಾಗಿದ್ದರು. ಒಮ್ಮೆ ಕೇಳಿದರೆ ಸಾಕು ನೆನಪಿಟ್ಟುಕೊಳ್ಳುತ್ತಿದ್ದ ಪಟು ಅವರು, ಶಾಲಾ ವ್ಯಾಸಂಗ ಕಾಲದಲ್ಲಿ ಕಥೆ ಕಾದಂಬರಿ ಹಾಳುಮೂಳು ಓದಿಕೊಂಡು ಕಾಲಹರಣ ಮಾಡುತ್ತಾರೆ. ಶಾಲಾ ಪಾಠಗಳಿಗೆ ಗಮನಕೊಡುವುದಿಲ್ಲವೆಂದು ತಿಳಿದು ಮನೆಯವರು ಅವರನ್ನು ಭಾವನ ಮನೆಯಲ್ಲಿ ಭಾವನ ಜತೆ ಓದಿಕೊಳ್ಳಲು ಬಿಟ್ಟರು. ಭಾವನಿಗೆ ವೆಂಕಣ್ಣಯ್ಯ ಹೇಳಿದರು. “ಭಾವ, ಗಟ್ಟಿಯಾಗಿ ಓದುತ್ತಾ ಹೋಗಿ ನಾನು ಕೇಳುತ್ತಾ ಹೋಗುತ್ತೇನೆ. ನಾನು ಓದುವುದಕ್ಕಿಂತ ನೀನು ಓದುವುದನ್ನು ಕೇಳಿದರೆ ನನ್ನ ತಲೆಗೆ ಚೆನ್ನಾಗಿ ಹಿಡಿಸುತ್ತದೆ” ಎಂದಾಗ ಮೈದುನ ಹೇಳಿದಂತೆ ಅವನು ಓದುತ್ತಿದ್ದ. ಅವನು ಚೆನ್ನಾಗಿ ಓದುವ ಹುಡುಗ ಎಂದು ವಂಕಣ್ಣಯ್ಯನನ್ನು ತಂದು ಅವನೊಟ್ಟಿಗೆ ಹಾಕಿದರು. ಪಬ್ಲಿಕ್ ಪರೀಕ್ಷೆ ಬಂದಾಗ, ಓದಿ ಓದಿ ಕೂಚುಭಟ್ಟನಾಗಿದ್ದು ಭಾವ ಫೇಲಾಗಿದ್ದ ಶ್ರವಣ ಕಥನವೀರ ವೆಂಕಣ್ಣಯ್ಯನವರು ಪಾಸಾಗಿದ್ದರು.

ವೆಂಕಣ್ಣಯ್ಯ ಶಾಲಾವಿದ್ಯಾಭ್ಯಾಸಾನಂತರ ಮೈಸೂರಿನ ಕಾಲೇಜಿನಲ್ಲಿ ಬಿ.ಎ ಗೆ ಸೇರಿದರು. ಅಲ್ಲಿಯೂ ಅವರ ಸ್ಮೃತಿಶಕ್ತಿ ಪ್ರಸಿದ್ಧಿ ಪಡೆದಿತ್ತು. ಕಾಲೇಜಿನಲ್ಲಿ ಗುರು ಥಾಮಸ್‌ ಡೇನ್ ಹ್ಯಾಂ ಒತ್ತಾಯದ ಮೇರೆಗೆ ವಿವಿಧ ವಸ್ತುಗಳ ಪರೀಕ್ಷಾ ಸ್ಪರ್ಧೆಯಲ್ಲಿ ಭಾಗವಹಿಸಿದರು. ಕೆಲವೇ ನಿಮಿಷಗಳಲ್ಲಿ ಅಲ್ಲಿರುವ ನೂರಾರು ವಸ್ತುಗಳನ್ನು ವೀಕ್ಷಿಸಿ ಅವುಗಳ ಹೆಸರುಗಳನ್ನು ತಿಳಿಸಬೇಕು. ಈ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನಗಳಿಸಿದವರು ವೆಂಕಣ್ಣಯ್ಯನವರು. ವೆಂಕಣ್ಣಯ್ಯ ಬಿ.ಎ. ಮಾಡಿದರೆ ಇಡೀ ಮೈಸೂರು ಸಂಸ್ಥಾನದಲ್ಲಿ ೧೯೦೮ರಲ್ಲಿ ಇದ್ದವರು ಕೈ ಬೆರಳಲ್ಲಿ ಎನ್ನಿಸುವಷ್ಟು ಜನ ಎಂಬುದನ್ನು ಇಲ್ಲಿ ನನಯಬೇಕು. ೧೯೧೪ರಲ್ಲಿ ಎಂ.ಎ. ಮುಗಿಸಿದ ಮೇಲೆ ಅವರು ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜ್, ದೊಡ್ಡಬಳ್ಳಾಪುರದ ಕನ್ನಡ ಹೈಸ್ಕೂಲ್ ಮೊದಲಾದ ಕಡೆ ಉಪಾಧ್ಯಾಯರಾಗಿ ಸೇವೆ ಸಲ್ಲಿಸಿ ೧೯೨೭ರಲ್ಲಿ ಮಹಾರಾಜ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾದರು. ವೆಂಕಣ್ಣಯ್ಯನವರ ಮುಖ್ಯ ಕಾರಕ್ಷೇತ್ರ ಬೆಂಗಳೂರು, ಮೈಸೂರು, ಸೆಂಟ್ರಲ್ ಕಾಲೇಜು ಮತ್ತು ಮಹಾರಾಜ ಕಾಲೇಜು ಎಂದರೆ ತಪ್ಪಿಲ್ಲ. ಕರ್ನಾಟಕ ಸಂಘ, ಪ್ರಬುದ್ಧ ಕರ್ನಾಟಕ ಇವುಗಳ ಎರಡು ಕಣ್ಣುಗಳು ವೆಂಕಣ್ಣಯ್ಯ, ಕೃಷ್ಣಶಾಸ್ತ್ರಿಗಳು. ವೆಂಕಣ್ಣಯ್ಯನವರು ಕೇವಲ ಗಿಳಿ ಪಾಠ ಹೇಳುವ, ಸಂಬಳಕ್ಕೆ ತರಗತಿ ತೆಗೆದುಕೊಳ್ಳುವ ಕಾಲೇಜು ಮೇಷ್ಟ್ರು ಆಗಿರಲಿಲ್ಲ, ನಿಜವಾದ ಆದರ್ಶ ಅಧ್ಯಾಪಕರಾಗಿದ್ದರು. ನಡೆ ನುಡಿ ಎರಡರಲ್ಲೂ ಶಿಷ್ಯರಿಗೆ ಮಾದರಿ ಆಗಿದ್ದರು. ಸ್ಫೂರ್ತಿ ಆಗಿದ್ದು, ಅವರ ವಿದ್ಯಾರ್ಥಿ ಪ್ರೇಮ ಹೇಗಿತ್ತು ಅಂದರೆ, ಅವರ ವಿದ್ಯಾರ್ಥಿ ಎಸ್.ವಿ. ಪರಮೇಶ್ವರ ಭಟ್ಟರ ಮಾತುಗಳಲ್ಲಿ ಕಾಣಬಹುದು.

“ಪ್ರೊ. ವೆಂಕಣ್ಣಯ್ಯನವರು ತರಗತಿಗೆ ಬಂದೊಡನೆ ವಿದ್ಯಾರ್ಥಿಯ ಯೋಗಕ್ಷೇಮ ವಿಚಾರಿಸುವರು. ಕಾಫಿ ತಿಂಡಿ ತರಿಸಿಕೊಟ್ಟು ವಿದ್ಯಾರ್ಥಿಯ ಜೀವವನ್ನು ತಂಪು ಮಾಡಿದ ಮೇಲೆಯೇ ಪಾಠದ ಮಾತು, ಮೊಳಕೆಗಳನ್ನು ಹಿಸುಕಿ ಹಾಕುವ ಪ್ರವೃತ್ತಿ ಅವರಿಂದ ಸಾವಿರ ಮೈಲಿ ಆಚೆ. ಅವರೇನಿದ್ದರೂ ಕಾಲ ಕಾಲಕ್ಕೆ ನೀರು, ಗೊಬ್ಬರ ಕಾಣಿಸಿ ತೋಟಗಾರನಂತೆ ಕೆಲಸ ಮಾಡುವವರು. ಮೊಳಕೆಯನ್ನು ಬೆಳೆಯಿಸಿ ಅದು ಗಿಡವಾಗಿ ಬಳ್ಳಿಯಾಗಿ ಬೆಳೆದು ಹೂ, ಹಣ್ಣು ನೆರಳು ಕೊಟ್ಟು ತಾನು ಸುಖವಾಗಿ ಅಂದವಾಗಿ ಚಂದವಾಗಿ ಬಾಳಿ ತನ್ನನ್ನು ಆಶ್ರಯಿಸಿದವರಿಗೂ ಸುಖ, ಅಂದ, ಚಂದಗಳನ್ನು ಈಯುವಂತಾಗಲಿ ಎಂಬುದು ಅವರ ಪ್ರವೃತ್ತಿ.” ಗುರುವಿನ ಈ ಪ್ರವೃತ್ತಿ ಶಿಷ್ಯ ಪರಮೇಶ್ವರ ಭಟ್ಟರಿಗೂ ಅಂಟಿಕೊಂಡಿತ್ತು.

ವಿದ್ಯಾರ್ಥಿಗಳನ್ನು ಸೂಜಿಗಲ್ಲಿನಂತೆ ಆಕರ್ಷಿಸುವ ವ್ಯಕ್ತಿತ್ವ ವೆಂಕಣ್ಣಯ್ಯನವರದು. ಪ್ರಬುದ್ಧ ಕರ್ನಾಟಕದ ಸಂಚಿಕೆಯನ್ನು ಅಂಚೆ ಹಾಕಲು ಮತ್ತು ಖುದ್ದಾಗಿ ಮನೆಗಳಿಗೆ ಕೊಡಲು ಸಿದ್ದಪಡಿಸುತ್ತಿದ್ದ ದೃಶ್ಯವೊಂದನ್ನು ಕೃಷ್ಣಶಾಸ್ತ್ರಿಗಳು ಹೀಗೆ ಬಣ್ಣಿಸಿದ್ದಾರೆ. “ಒಮ್ಮೆ ಮೈಸೂರಿನಿಂದ ಬೆಂಗಳೂರಿಗೆ ವೆಂಕಣ್ಣಯ್ಯ ನವರನ್ನು ನೋಡಲು ಅವರ ಮನೆಗೆ ಹೋದೆ. ಆಗ ವೆಂಕಣ್ಣಯ್ಯನವರ ಮನೆ ಪ್ರಬುದ್ಧ ಕರ್ನಾಟಕ ಕಚೇರಿ ಆಗಿತ್ತು. ಸಂಚಿಕೆಯನ್ನು ಕಾಗದದಲ್ಲಿ ಸುತ್ತುವವರು ಎಷ್ಟು ಜನ, ಸ್ಟಾಂಪು ಅಂಟಿಸುವರು ಎಷ್ಟು ಜನ, ಬರೆದು ಕೊಳ್ಳುವರು ಎಷ್ಟು ಜನ, ಜೋಡಿಸುವರು ಎಷ್ಟು ಜನ, ಅಷ್ಟು ಜನ ಅವಶ್ಯಕವಾ ಅಲ್ಲವೋ ಅಂತು ಆ ಮನೆ ಒಂದು ಇರುವೆಗೂಡಿನಂತಿತ್ತು. ಹೀಗೆ ವಿದ್ಯಾರ್ಥಿಗಳು ಮುಕ್ಕುರಿ ಗೊಂಡಿದ್ದರು. ಆ ವಿದ್ಯಾರ್ಥಿಗಳಲ್ಲಿ ನಿಟ್ಟೂರು ಶ್ರೀನಿವಾಸರಾವ್, ನಿಜಲಿಂಗಪ್ಪ, ಭೀಮಪ್ಪನಾಯಕ ಮೊದಲಾದವರು ಇದ್ದರು. ಕೇವಲ ವಿದ್ಯಾರ್ಥಿ ಜನಪ್ರಿಯ ನಾಯಕರಷ್ಟೇ ವೆಂಕಣ್ಣಯ್ಯನವರಾಗಿರಲಿಲ್ಲ. ಅಧ್ಯಾಪಕರ ವಶೀಕರಣಯಂತ್ರ ವಾಗಿದ್ದರು. ಮಹಾರಾಜ ಕಾಲೇಜಿನಲ್ಲಿ ವೆಂಕಣ್ಣಯ್ಯನವರು ಕೇವಲ ಕನ್ನಡ ಅಧ್ಯಾಪಕರ ಮೇಲಷ್ಟೇ ಅಲ್ಲ ಇತರ ಅಧ್ಯಾಪಕರ ಮೇಲೆ ಎಂಥ ಪ್ರಭಾವ ಬೀರಿದ್ದರು ಎಂದರೆ ಅವರನ್ನೆಲ್ಲ ಕನ್ನಡ ಪುತ್ರರನ್ನಾಗಿ ಮಾಡಿದ ಪರಿಯನ್ನು ಎ.ಎನ್. ಮೂರ್ತಿರಾಯರು ಚೆನ್ನಾಗಿ ಹೇಳಿದ್ದಾರೆ. “ಮಹಾರಾಜ ಕಾಲೇಜು ಕಾಮನ್‌ರೂಮಿನಲ್ಲಿ ಅವರು ಬೀರಿದ ಪ್ರಭಾವ ಹೇಗಿತ್ತು ಎಂದರೆ ನಾವೆಲ್ಲರೂ (ಇತರ ಭಾಷೆ ಅಧ್ಯಾಪಕರು) ಕನ್ನಡದಲ್ಲಿ ಭಾಷಣ ಮಾಡಲು ಆರಂಭಿಸಿದವರು. ಕನ್ನಡದಲ್ಲಿ ಲೇಖನ ಬರೆದೆವು; ಕನ್ನಡದ ಸ್ಥಾನಮಾನ ಹೆಚ್ಚಿಸಲು ಸಭೆಗಳನ್ನು ಏರ್ಪಡಿಸಿದೆವು. ಜೊತೆಗೆ ಕನ್ನಡ ಜೊತೆಗೆ ಇಂಗ್ಲಿಷ್ ಪದಗಳನ್ನು ಬೆರೆಸಿದ್ದಕ್ಕಾಗಿ ನಮಗೆ ನಾವೇ ಜುಲ್ಮಾನೆ ಹಾಕಿಕೊಂಡೆವು. ಸಂಜೆ ವಾಕಿಂಗ್‌ನಲ್ಲಿ ತರುಣರ ತಂಡ, ಮನೆಯಲ್ಲಿ ವಿದ್ವತ್‌ಗೋಷ್ಠಿ, ಕಾಲೇಜಿನಲ್ಲಿ ಅಧ್ಯಾಪಕರ ಆತ್ಮೀಯ ಕೂಟದ ಕೇಂದ್ರ ಬಿಂದು ವೆಂಕಣ್ಣಯ್ಯ ಆಗಿದ್ದರು.

ವೆಂಕಣ್ಣಯ್ಯನವರು ವಿದ್ಯಾರ್ಥಿಗಳನ್ನು ಅಧ್ಯಾಪಕರನ್ನಷ್ಟೇ ಕನ್ನಡ ಸೇವೆಗೆ ಸಿದ್ಧಗೊಳಿಸಲಿಲ್ಲ. ಕನ್ನಡ ಜನತೆಯನ್ನು ಕನ್ನಡ ಪ್ರೇಮಿಗಳನ್ನಾಗಿ ನಿಜ ಕನ್ನಡಿಗನಾಗಿ ಮಾಡಿದರು. ಯೂನಿವರ್ಸಿಟಿ ಟೀಚರ್ ಅಸೋಸಿಯೇಷನ್ ಸ್ಥಾಪಿಸಿ ಪ್ರಚಾರೋಪನ್ಯಾಸಗಳನ್ನು ಏರ್ಪಡಿಸಿ, ಆ ಉಪನ್ಯಾಸಗಳನ್ನು ಪುಸ್ತಕ ರೂಪದಲ್ಲಿ ತಂದು ನಾಡಿಗೆ ಮಾದರಿ ಆದರು. ಪಾಶ್ಚಾತ್ಯ ದೇಶದಲ್ಲೂ ಮೈಸೂರು ದೇಶದ ಆದರ್ಶ ಪ್ರಯೋಗವೆಂಬ ಈ ಕಾರ್ಯಕ್ರಮ ಮಾಲೆ ಪ್ರಸಿದ್ದಿ ಪಡೆಯಿತು. ಇಂದು ಕರ್ನಾಟಕದ ಎಲ್ಲ ವಿಶ್ವವಿದ್ಯಾನಿಲಯಗಳಲ್ಲೂ ಜ್ಞಾನ ಜನಸಾಮಾನ್ಯರ ಮನೆಬಾಗಿಲಿಗೆ ತಲುಪಬೇಕು. ಅವರ ಹೃದಯದಂಗಳದಲ್ಲಿ ಗ್ರಾಮಾಂತರ ನಿವಾಸಗಳಲ್ಲಿ ತಳವೂರಬೇಕು ಎಂದು ಪ್ರಚಾರ ಪುಸ್ತಕ ಮಾಲೆಗಳನ್ನು ಪ್ರಾರಂಭಿಸಿದೆ. ಅದಕ್ಕೆ ಆಚಾರಪುರುಷರಾಗಿ ಮಾರ್ಗ ನಿರ್ಮಿಸಿದವರು ಟಿ.ಎಸ್. ವೆಂಕಣ್ಣಯ್ಯನವರು.

ವೆಂಕಣ್ಣಯ್ಯನವರು ಸಾಹಿತ್ಯ ನಿರ್ಮಾಣಕ್ಕಿಂತ ಸಾಹಿತಿಗಳ ನಿರ್ಮಾಣ ಮಾಡಿದ್ದು ಹೆಚ್ಚು. ಅವರು ಬರೆದದ್ದು ಕಡಿಮೆ ಆದರೆ ಗಾತ್ರದಲ್ಲಿ ಗುಣದಲ್ಲಿ ಸತ್ಯದಲ್ಲಿ ಹಿರಿದು, ಸ್ಫೂರ್ತಿದಾಯಕವಾದದ್ದು. ಕನ್ನಡದಲ್ಲಿ ಮೊದಲ ಬಾರಿಗೆ ಶ್ರೀರಾಮ ಕೃಷ್ಣ ಲೀಲಾ ಪ್ರಸಂಗವನ್ನು ಎ.ಆರ್.ಕೃ. ಜತೆಗೂಡಿ ಬಂಗಾಳಿ ಯಿಂದ ಕನ್ನಡಕ್ಕೆ ತಂದರು, ರಾಮಕೃಷ್ಣ ಪರಮಹಂಸರ ಜೀವನ ಚರಿತ್ರೆ ರಚಿಸಿದರು, ರವೀಂದ್ರನಾಥ ಠಾಕೂರರ ಪ್ರಬಂಧಗಳನ್ನು ಪ್ರಾಚೀನ ಸಾಹಿತ್ಯ ಎಂಬ ಗ್ರಂಥದಲ್ಲಿ ಅನುವಾದಿಸಿ ಪ್ರಕಟಿಸಿದರು, ರವೀಂದ್ರರ ಕಾವ್ಯ ಶೈಲಿ ಗದ್ಯವನ್ನು ಕನ್ನಡದಲ್ಲಿ ತರುವುದು ಸಾಮಾನ್ಯ ಸಂಗತಿ ಆಗಿರಲಿಲ್ಲ. ಆದರೆ ಆ ಪ್ರಯತ್ನವನ್ನು ಯಶಸ್ವಿ ಯಾಗಿಸಿದವರು ವೆಂಕಣ್ಣಯ್ಯನವರು. ವಿಷಯ ನಿರೂಪಣೆ ಮತ್ತು ಶೈಲಿಯಲ್ಲಿ ವಿನೂತನತೆಯನ್ನು ಅನುವಾದದಲ್ಲಿ ವೆಂಕಣ್ಣಯ್ಯ ತಂದಿದ್ದಾರೆ. ‘ಕಾವ್ಯದ ಅನಾದರ’ ಎಂಬ ಪ್ರಬಂಧದಲ್ಲಿ ಊರ್ಮಿಳೆಯನ್ನು ಕುರಿತು ಈ ಭಾಗ ಗಮನಿಸಿ.

“ಲಕ್ಷಣನು ರಾಮಚಂದ್ರನಿಗಾಗಿ ಸರ್ವವಿಧಗಳಲ್ಲಿಯೂ ಸ್ವಾರ್ಥತ್ಯಾಗ ಮಾಡಿದನು. ಆ ಕೀರ್ತಿ ಈಗಲು ಭರತಖಂಡದಲ್ಲಿ ಮನೆ ಮನೆಯಲ್ಲೂ ಕೇಳಿ ಬರುತ್ತದೆ. ಆದರೆ ಸೀತಾದೇವಿಗಾಗಿ ಊರ್ಮಿಳಾದೇವಿ ಮಾಡಿದ ಸ್ವಾರ್ಥತ್ಯಾಗವು ಜಗತ್ತಿನಲ್ಲಿ ಮಾತ್ರವೇ ಅಲ್ಲ, ಕಾವ್ಯದಲ್ಲಿಯೂ ಕೂಡ ಕಂಡು ಬರುವುದಿಲ್ಲ. ಲಕ್ಷ್ಮಣನು ದೇವತಾ ಸ್ವರೂಪನಾದ ಸೀತಾರಾಮರಿಗಾಗಿ ಸ್ವಾರ್ಥವನ್ನು ತ್ಯಾಗ ಮಾಡಿದನು. ಊರ್ಮಿಳಾದೇವಿ ಯಾರು ಸ್ವಾರ್ಥಕ್ಕಿಂತಲೂ ಹೆಚ್ಚಾದ ತನ್ನ ಸ್ವಾಮಿಯನ್ನೇ ದಾನ ಮಾಡಿದಳು, ಕಾವ್ಯವು ಆ ಮಾತನ್ನು ಎತ್ತುವುದಿಲ್ಲ. ಸೀತಾದೇವಿಯ ಕಣ್ಣೀರಿನಲ್ಲಿ ಊರ್ಮಿಳಾದೇವಿ ಸಂಪೂರ್ಣವಾಗಿ ಕೊಚ್ಚಿಕೊಂಡು ಹೋದಳು” ವೆಂಕಣ್ಣಯ್ಯನವರ ಈ ಲೇಖನ ದಿಂದ ಕನ್ನಡದಲ್ಲಿ ಕುವೆಂಪು ಅವರ ರಾಮಾಯಣ ದರ್ಶನಂ, ತಿರುಮಲೆ ರಾಜಮ್ಮನವರ ತಪಸ್ವಿನಿ ನಾಟಕ, ಕುರ್ತುಕೋಟಿ ಅವರ ಊರ್ಮಿಳೆ ನೀಳ್ಗವನ, ಹೀಗೆ ಊರ್ಮಿಳಾ ಸಾಹಿತ್ಯವೇ ನಿರ್ಮಾಣವಾಗಿದೆ.

ಈ ಸಂದರ್ಭದಲ್ಲಿ ರಾಮಾಯಣದ ನಿರ್ಲಕ್ಷಿತ ಪಾತ್ರಗಳನ್ನು ಕುರಿತ ಬೇಂದ್ರೆ ಅವರ ಸಾಲುಗಳು ನೆನಪಾಗುತ್ತದೆ.

“ರಾಮ ಸೀತಾ ವಿಲಾಪದಿಂದ ತುಂಬಿದ ರಾಮಾಯಣಾ
ಉಳಿದ ಬಂಧುಗಳು ಹೆಂಡಿರ ಗತಿಯೇನೆಂದು, ಕೇಳಿತೇಜನಾ
ಊರ್ಮಿಳೆ ಹೆಸರನ್ನೆತ್ತಿ ಅತ್ತಿಹುದು ಇತ್ತೀಚಿನ ಕವಿಗಣಾ
ಮಾಂಡವಿ ಶ್ರುತಕೀರ್ತಿಯು ಹೋ, ಇದ್ದರು ಅವರ ಆರ್ತಸ್ವರ
ಕೇಳುವವರೇ ಇಲ್ಲಾದರು, ಬೋರ್ಗೆರೆಯುತ್ತಿದೆ ರಾಮಾಯಣ”

ಅನುವಾದಗಳಂತೆ ವೆಂಕಣ್ಣಯ್ಯ ನವರ ಲೇಖನಗಳು ಗ್ರಂಥ ಸಂಪಾದನೆಗಳು ಅವರ ವಿದ್ವತ್ತಿಗೆ ಹಿಡಿದ ಕನ್ನಡಿಗಳಾಗಿವೆ.

ವೆಂಕಣ್ಣಯ್ಯನವರ ವಿಶಿಷ್ಟ ವ್ಯಕ್ತಿತ್ವದ ಮೇಲೆ ಬೆಳಕು ಚೆಲ್ಲುವ ಅನೇಕ ಸಂಗತಿಗಳು ಬೆಳಕಿಗೆ ಬಂದಿಲ್ಲ ಎಂದರೂ ತಪ್ಪಾಗದು. ಏಕೆಂದರೆ ವೆಂಕಣ್ಣಯ್ಯ ನವರು ಗುಪ್ತದಾನಿಗಳಾಗಿದ್ದರು. ಕೀರ್ತಿ ಕಾಮ ಇರಲಿಲ್ಲ. ಅವರ ಶಿಷ್ಯ ಮಿತ್ರರು ಹೇಳಿದ ಸಂಗತಿಗಳನ್ನು ಕೇಳಿದರೆ ಆಶ್ಚರ್ಯವಾಗುತ್ತದೆ, ಅದ್ಭುತವೆನಿಸುತ್ತದೆ. ಈ ಕಲಿಕಾಲದಲ್ಲೂ ಇಂಥಾ ದೇವತಾ ಮನುಷ್ಯನೊಬ್ಬ ಇದ್ದನು ಎನ್ನಿಸುತ್ತದೆ. ಪಾಂಡಿತ್ಯದಲ್ಲಿ ಶಿಕ್ಷಕ ವೃತ್ತಿಯಲ್ಲಿ ವಿದ್ಯಾರ್ಥಿ ಜನಪ್ರಿಯತೆಯಲ್ಲಿ ವೆಂಕಣ್ಣಯ್ಯನವರನ್ನು ಸರಿಗಟ್ಟುವವರು ಸಿಗಬಹುದು ಆದರೆ ಕನ್ನಡ ಸಾಹಿತಿಗಳನ್ನು ಬೆಳೆಸುವಲ್ಲಿ, ಮಾನವೀಯ ಗುಣಗಳನ್ನು ಮೆರೆಸುವಲ್ಲಿ ಅವರಂತೆ ಯಾರೂ ಇಲ್ಲ. ವೆಂಕಣ್ಣಯ್ಯನವರು ವಿಶೇಷ ವಾಗ್ಮಿಗಳಾಗಿದ್ದರು. ಅವರು ಮಾತಾಡಿದರೆ, ಮಾತಿನ ಶೈಲಿ ಮನಮೋಹಕ; ಆಕರ್ಷಣೀಯ; ಪ್ರಶಾಂತ ನದಿ ಹರಿದಂತೆ, ಬೆಳದಿಂಗಳು ಪ್ರಸರಿಸಿದಂತೆ, ಮಲ್ಲಿಗೆ ತೋಟದಲ್ಲಿ ಬೀಸಿದ ತಂಗಾಳಿಯಂತೆ, ತಾಯಿ ಮಗುವನ್ನು ಮುದ್ದಿಸಿದಂತೆ, ಆಹ್ಲಾದಕರ. ಕಾವ್ಯದ ಬಗ್ಗೆ ಮಾತನಾಡುತ್ತಿದ್ದರೆ ಕವಿ ಕಾವ್ಯದಲ್ಲಿ ಬರೆದ ರೀತಿ, ಬಳಸಿದ ಪದ, ಛಂದೋವೈವಿಧ್ಯ ಕಿವಿಗೆ ಹೇಗೆ ಸೊಗಸು, ಉಚ್ಛಾರಣೆಗೆ ಹೇಗೆ ಚಂದ, ವ್ಯಂಗ್ಯಾರ್ಥ ಪ್ರತೀತಿಗೆ ಹೇಗೆ ಚೆಲ್ವು, ವಾಚ್ಯಾರ್ಥಕ್ಕೆ ಎಷ್ಟು ಸುಂದರ ಎಂದೆಲ್ಲಾ ವಿವರಿಸುತ್ತಿದ್ದರು. ಪಂಪಭಾರತ ಸಂಪಾದನೆ ಸಮಯದಲ್ಲಿ ಅದರ ಕೆಲಸ ತುಂಬಾ ತಡವಾಯಿತೆಂದು ಬೆಳ್ಳಾವೆ ವೆಂಕಟನಾರಾಯಣಪ್ಪನವರು ಒಂದು ಬೆಲ್ ಇಟ್ಟುಕೊಂಡು ನೋಡಿ ಈ ಪದದ ಬಗ್ಗೆ ೫ ನಿಮಿಷ ಚರ್ಚಿಸಿ ಮುಂದಕ್ಕೆ ಹೋಗಿ ಮುಂದಿನ ಪದ್ಯ ತೆಗೆದುಕೊಳ್ಳಿ ಎಂದೆಲ್ಲಾ ಕಟ್ಟುನಿಟ್ಟಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದರು. ಪಂಪ ಭಾರತದ ಪಾಠನಿರ್ಣಯ, ಛಂದೋರೂಪ ನಿರ್ಣಯ ಪದದ ಅರ್ಥ, ನಿಷ್ಕರ್ಷೆ ಇತ್ಯಾದಿಗಳಿಂದ ಕಾರ್ಯ ತುಂಬ ವಿಳಂಬವಾಗಿದೆ ಎಂದು ಈ ಬೆಲ್ ಕಾರ್ಯವನ್ನು ಕೈಗೊಂಡರಂತೆ, ಆದರೆ ವೆಂಕಣ್ಣಯ್ಯನವರು ಕಾವ್ಯದ ಬಗ್ಗೆ ಮಾತನಾಡುತ್ತಿದ್ದಾರೆ ಅದನ್ನು ಕೇಳಿ ಮೈಮರೆತು ತಮ್ಮ ಬೆಲ್ ನಿಯಮವನ್ನು ಮರೆಯುತ್ತಿದ್ದರಂತೆ. ಅವರ ಮಾತಿನ ಮೋಡಿಯಲ್ಲಿ ಇವರ ಬೆಲ ಬಾರಿಸುವ ಕಾಯಕ ಮರತೇ ಹೋಗುತ್ತಿತ್ತು. ಡಿವಿಜಿ ಹೇಳಿದಂತೆ ಬೆಳಗಾವಿಯಲ್ಲಿ ಡಿ ವಿ ಜಿ, ಕೃಷ್ಣಶಾಸ್ತ್ರಿ, ವೆಂಕಣ್ಣಯ್ಯ ಇವರು ಮಾತುಕತೆ ಆಡುತ್ತಾ ಕುಳಿತಿದ್ದಾಗ ದಾರಿಯಲ್ಲಿ ಹೋಗುತ್ತಿದ್ದವರೆಲ್ಲ ಗುಂಪು ಕಟ್ಟಿ ನಿಂತು ಕೇಳ ತೊಡಗಿದರಂತೆ. ಇವರು ಮಾತು ನಿಲ್ಲಿಸಿದಾಗ, “ಯಾಕ್ರಪ್ಪ ನಿಲ್ಲಿಸಿ ಬಿಟ್ಟಿರಿ, ಇನ್ನೂ ಮಾತಾಡ್ರಲ್ಲ ಕೇಳಾನಿ” ಅಂದರಂತೆ ವೆಂಕಣ್ಣಯ್ಯನವರಿಗೆ.

ಒಮ್ಮೆ ಕೈಲಾಸಂ ಮೈಸೂರಿನಲ್ಲಿ ವೆಂಕಣ್ಣಯ್ಯನವರನ್ನು ರಸ್ತೆಯಲ್ಲಿ ಭೇಟಿಯಾದಾಗ ವಾಮನ ಕೈಲಾಸಂ ತ್ರಿವಿಕ್ರಮ ವೆಂಕಣ್ಣಯ್ಯನವರನ್ನು ಕುರಿತು, “ಸ್ವರ್ಗದಲ್ಲಿ ನಮ್ಮ ತಾಯಿ ತಂದೆ ಏನು ಮಾಡುತ್ತಿದ್ದಾರೆ ಸಾರ್ ಅಂತ ಕೇಳಿದರಂತೆ. ಅವರ ಎತ್ತರವನ್ನು ಕುರಿತು ವ್ಯಂಗ್ಯ ಮಾಡಿದ ಮಾತು, ಅದು ಅರ್ಥವಾದರೂ ತೋರಿಸಿಕೊಳ್ಳದ ಸಹಜವಾದ ರೀತಿಯಲ್ಲಿ ವೆಂಕಣ್ಣಯ್ಯ ನವರು ಹೇಳಿದರಂತೆ. “ನನ್ಮಗ ಮೈಸೂರಿನಲ್ಲಿ ಏನ್ ಮಾಡ್ತಾ ಇದ್ದಾನೆ ಅಂತ ನಿಮ್ಮಪ್ಪ ಅಮ್ಮ ಕೇಳಿದರಪ್ಪಾ” ಎಂದು ಆಕಾಶದ ಕಡೆ ತಲೆಯೆತ್ತಿ ಸ್ವಲ್ಪ ಹೊತ್ತು ನೋಡಿದ ಮೇಲೆ ಕೈಲಾಸಂ ಕಡೆ ತಿರುಗಿ ಹೇಳಿದರಂತೆ.

ಹೀಗೆ ಮಧುರವಾಗಿ ಮಾರ್ಮಿಕವಾಗಿ ಮೃದುವಾಗಿ ಸ್ವಾರಸ್ಯಕರವಾಗಿ ಮಾತಾಡುತ್ತಿದ್ದವರು ವೆಂಕಣ್ಣಯ್ಯನವರು.

ವೆಂಕಣ್ಣಯ್ಯನವರ ಕನ್ನಡ ಪ್ರೇಮ ಗಾಢ ಪ್ರೇಮ ಮತ್ತು ಅಂತರಂಗನಿಷ್ಠ ಪ್ರೇಮ. ವೆಂಕಣ್ಣಯ್ಯನವರನ್ನು ಚೆನ್ನಾಗಿ ಬಲ್ಲ ಆತ್ಮೀಯರೊಬ್ಬರು ಹೇಳಿದ ಸಂಗತಿಯಿದು. ವೆಂಕಣ್ಣಯ್ಯನವರ ಕನ್ನಡ ಪ್ರೇಮ ಎಷ್ಟಿತ್ತು ಅಂದರೆ ಅವರು ರಾಮಾಯಣ ಪಾರಾಯಣ ಮಾಡುತ್ತಿದ್ದರು. ದೈವಭಕ್ತರಾಗಿದ್ದರು. ಅಗಡಿ ಸ್ವಾಮಿಗಳ ಆರಾಧಕರಾಗಿದ್ದರು. ದೇವರ ಮನೆಯಲ್ಲಿ ದೇವರ ಪೂಜೆ ಮಾಡುತ್ತಿದ್ದರು. ಅವರ ಮನೆಗೆ ಬಂದು ಹೋಗುವವರು, ಅವರ ಸನ್ನಿಧಿಯಲ್ಲಿ ಧನ್ಯರಾಗುವ, ಅವರಿಂದ ಉಪಕೃತರಾದವರ ಸಂಖ್ಯೆಗೆ ಗೊತ್ತು ಗುರಿ ಇರಲಿಲ್ಲ. ಅವರಿಗೆ ಅಧ್ಯಯನಕ್ಕೆ ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ ಲೇಖನಗಳು ಪರಿಶೀಲನೆಗೆ ವೇಳೆಯೇ ಸಿಗದೆ ಸಕಾಲದಲ್ಲಿ ಅವುಗಳನ್ನು ಪೂರೈಸುವ ಸನ್ನಿವೇಶ ಬರುತ್ತಿತ್ತು. ಅವರು ದೇವರ ಮನೆಯಲ್ಲಿದ್ದಾಗ ಯಾರೂ ಅವರನ್ನು ತೊಂದರೆ ಮಾಡುತ್ತಿರಲಿಲ್ಲ. ದೇವರ ಮನೆ ಬಾಗಿಲು ಹಾಕಿಕೊಂಡು ಧ್ಯಾನಸ್ಥರಾಗಿದ್ದು, ಹೊರಗೆ ಬರುತ್ತಿದ್ದರು. ಆದರೆ ಅವರು ದೇವರ ಕೋಣೆಯಲ್ಲಿ ಪಾರಾಯಣ ಪೂಜೆ, ಧ್ಯಾನ ಮಾಡುತ್ತಿದ್ದರೆ? ಹೌದು ಮಾಡುತ್ತಿದ್ದರು. ಅದರ ಜತೆಗೂ ಇನ್ನೊಂದು ಕೆಲಸ ಕನ್ನಡದ ಕೆಲಸ, ಉತ್ತರ ಪತ್ರಿಕೆ ಮೌಲ್ಯಮಾಪನ, ಗ್ರಂಥ ಅಧ್ಯಯನ ಮಾಡುತ್ತಿದ್ದಂತೆ. ಇದು ಅತ್ಯಂತ ಆಪ್ತರಿಗೆ ಬಿಟ್ಟು ಇತರರಾರಿಗೂ ತಿಳಿದಿರಲಿಲ್ಲವಂತೆ. ಆತ್ಮೀಯರು ಕೇಳಿದರಂತೆ. ದೇವರ ಕೋಣೆಯಲ್ಲಿ ದೇವರ ಕೆಲಸಕ್ಕೆ ಹೋಗಿ ಕನ್ನಡದ ಕೆಲಸ ಮಾಡಬಹುದೇ? ಎಂದು. ಆಗ ವೆಂಕಣ್ಣಯ್ಯ ಹೇಳಿದಂತೆ, ದೇವರು ಎಂದರೆ ಯಾರು? ಕನ್ನಡವೇ ದೇವರು. ಕನ್ನಡ ಕೆಲಸವೇ ದೇವರ ಕೆಲಸ ಎಂದ ಮೇಲೆ ದೇವರ ಮನೆಯಲ್ಲಿ ಕನ್ನಡ ಕೆಲಸ ಮಾಡಿದರೆ ಅದು ದೇವರ ಸೇವೆ ಅಲ್ಲವೇ? ಎಂದರಂತೆ. ನನಗೆ ಕನ್ನಡ ಬೇರೆ ಅಲ್ಲ, ದೇವರು ಬೇರೆ ಅಲ್ಲ ಎಂದರಂತೆ. ವೆಂಕಣ್ಣಯ್ಯನವರ ಕನ್ನಡ ಪ್ರೀತಿ ಹೇಗಿತ್ತು ಎಂಬುದನ್ನು ಈ ಆತ್ಮೀಯ ಮಾತು ಹೇಳುತ್ತದೆ.

ಯಾವುದೇ ವಿಚಾರದಲ್ಲಿ ವೆಂಕಣ್ಣಯ್ಯನವರ ಪ್ರತಿಕ್ರಿಯೆ ಕಂಡಾಗ ನಾವು ಆಶ್ಚರ್ಯಚಕಿತರಾಗುತ್ತೇವೆ, ಅವರ ಮಾನವೀಯ ಅನುಕಂಪ ಕಂಡಾಗ, ಹಾ! ಹಾ! ಅನ್ನುತ್ತೇವೆ. ನಮ್ಮಿಂದ ಭಿನ್ನರಾಗಿ ಮೇಲಿನವರಾಗಿ ಕಾಣುವುದು ಅವರ ಮಾನವೀಯ ವರ್ತನೆಗಳಿಂದ ಪ್ರೊಫೆಸರ್ ಮರಿಯಪ್ಪ ಭಟ್ಟರು ಮದ್ರಾಸ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದರು. ವೆಂಕಣ್ಣಯ್ಯನವರಿಗೆ ಬೇಕಾದವರು. ಒಮ್ಮೆ ಮೈಸೂರಿನಲ್ಲಿ ವಿಶ್ವವಿದ್ಯಾಲಯದ ಕಾರಾರ್ಥವಾಗಿ ಬಂದವರು ವೆಂಕಣ್ಣಯ್ಯನವರ ಮನೆಗೆ ಬಂದರು. “ಹೇಗಿತ್ತು ಪ್ರಯಾಣ ಎಂದು ವೆಂಕಣ್ಣಯ್ಯನವರು ಸಹಜವಾಗಿ ಕೇಳಿದರು” ಪ್ರಯಾಣ ಚನ್ನಾಗಿಯೇ ಇತ್ತು ಆದರೆ ಕೊಂಚ ಮೈ ಕೈ ನೋವು ಉಳಿದಿದೆ ಅಷ್ಟೇ ಎಂದರು ಭಟ್ಟರು. ಹಾಗಾದರೆ ಸ್ವಲ್ಪ ವಿಶ್ರಮಿಸಿಕೊಳ್ಳಿ ಎನ್ನಲಿಲ್ಲ ವೆಂಕಣ್ಣಯ್ಯನವರು, ತಕ್ಷಣವೇ ಎದ್ದು ಮನೆಯೊಳಗೆ ಹೋಗಿ ಒಂದು ಡಬ್ಬಿ ಹಿಡಿದುಕೊಂಡು ಬಂದರು. ಅಂಜನ ಡಬ್ಬಿ ಮುಚ್ಚಳ ತೆಗೆದು, “ಎಲ್ಲಿ ಸ್ವಲ್ಪ ನಿಮ್ಮ ತೋಳಿನ ಬಟ್ಟೆ ಸೇರಿಸಿ ತೋಳನ್ನು ಸರಿ ಮಾಡಿ ಕೊಳ್ಳಿ” ಎಂದರು. ಇದೆಲ್ಲ ಏನು ನಾಳೆಗೆ ಸರಿ ಹೋಗುತ್ತದೆ ಬಿಡಿ ಏನೂ ಅಗತ್ಯವಿಲ್ಲ ಎಂದರು ಮರಿಯಪ್ಪ ಭಟ್ಟರು. ಎಲ್ಲಾದರೂ ಉಂಟೇ ಎಂದು ಹೇಳಿ, ಅವರ ಕೈ ಮೈಗಳಿಗೆ ಬಿಡದೆ ಮೃದುವಾಗಿ ಅಂಜನ ಹಚ್ಚಿದರು. ಕೊಂಚ ಹೊತ್ತು ಮಲಗಿ ಸುಧಾರಿಸಿಕೊಳ್ಳಿ ಎಂದರು. ಇದು ವೆಂಕಣ್ಣಯ್ಯ!

ವೆಂಕಣ್ಣಯ್ಯನವರ ತೀಕ್ಷ್ಣಬುದ್ದಿ, ಸಮಯ ಸ್ಫೂರ್ತಿ ಜಾಣತನ ಮತ್ತು ಮೌಲ್ಯಮಾಪನ ಚಾತುರ್‍ಯವನ್ನು ಗೊರೂರು ತಮ್ಮ ಅನುಭವವೊಂದರಲ್ಲಿ ನಿರೂಪಿಸಿದ ಬಗೆ ಹೀಗೆ:

ಸಾಹಿತಿ ದೇಶಪ್ರೇಮಿ ಗೊರೂರು ಅವರ ಬದನವಾಳು ಕೇಂದ್ರದ ಖಾದಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಜರಿ ರುಮಾಲು ಧರಿಸುತ್ತಿದ್ದ ವೆಂಕಣ್ಣಯ್ಯನವರು ರುಮಾಲು ಬೇಕೆಂದು, ಖಾದಿ ಅಂಗಡಿಗೆ ಬಂದರು. ಹತ್ತು ಮೊಳದ ಉದ್ದಕ್ಕೂ ಅರ್ಧ ಅಂಗುಲ ಜರಿ ಇದ್ದ ರುಮಾಲಿಗೆ ೧೦ ರೂಪಾಯಿ ಆಗುತ್ತಿತ್ತು. ಆ ಕಾಲಕ್ಕೆ ಅದು ಸಾಮಾನ್ಯರಿಗೆ ಮಧ್ಯಮ ವರ್ಗದವರಿಗೆ ಅತಿ ದುಬಾರಿ ಬೆಲೆ ಆಗಿತ್ತು. ೧೦ ಮೊಳಕ್ಕೂ ಜರಿ ಹಾಕುತ್ತಿದ್ದುದರಿಂದ ಅಷ್ಟು ಬೆಲೆ ಆಗುತ್ತಿತ್ತು. ಆಗ ರುಮಾಲನ್ನು ಉದ್ದಕ್ಕೂ ನೋಡಿ ವೆಂಕಣ್ಣಯ್ಯ ಹೇಳಿದರು. ನೋಡಿ ರುಮಾಲು ಸುತ್ತಿಕೊಂಡಾಗ ಹೊರಗೆ ಕಾಣುವುದು ಎರಡು ಮೊಳದಷ್ಟು ಮಾತ್ರ ಅಂಚು. ಆದ್ದರಿಂದ ಹೊರಸುತ್ತಿಗೆ ಬರುವ ಭಾಗಕ್ಕೆ ೨ ಮೊಳಕ್ಕೆ ಜರಿ ಹಾಕಿ ಉಳಿದ ೮ ಮೊಳಕ್ಕೇಕೆ ಜರಿ, ಅದರಿಂದ ರುಮಾಲಿನ ಬೆಲೆ ಅರ್ಧಕ್ಕರ್ಧ ಕಡಿಮೆ ಆಗುತ್ತದೆ ಎಂದರು. “ಖಾದಿ ಉದ್ಯೋಗದಲ್ಲಿ ಇದು ನೂರಾರು ರುಮಾಲು ಮಾರಿದ್ದೇನೆ ನಮಗೆ ಇದು ಹೊಳೆಯಲೇ ಇಲ್ಲವಲ್ಲ” ಎಂದರು ಗೊರೂರು. ಆಗ ವೆಂಕಣ್ಣಯ್ಯ ಹೇಳಿದರು, “ನೀವು ನೂರಾರು ರುಮಾಲು ಮಾರಿದ್ದೀರಿ ನೀಜ ನಿಮಗೆ ಹೊಳೆಯಲಿಲ್ಲ. ನನ್ನ ಹಾಗೆ ನೀವು ಕೊಂಡು ಕೊಳ್ಳುವವರಾಗಿದ್ದರೆ ಹೊಳೆಯುತ್ತಿತ್ತು. ಕೊಳ್ಳುವವರು ಯಾವಾಗಲೂ ಖರ್ಚು ಕಡಿಮೆ ಆಗುವುದನ್ನು ಯೋಚಿಸುತ್ತಾರೆ” ಎಂದರು. ಆಮೇಲೆ ಕಾಲು ಭಾಗ ಜರಿ ಹಾಕಿ ರುಮಾಲು ಬೆಲೆ ಇಳಿಸಿದ್ದು, ಆ ರುಮಾಲು ಗಳಿಗೆ ವೆಂಕಣ್ಣಯ್ಯ ರುಮಾಲು ಎಂದು ಹೆಸರಿಟ್ಟರಂತೆ. ಒಂದೇ ಸಮನೆ ರುಮಾಲುಗಳು ಖರ್ಚಾಗತೊಡಗಿದವು ಎನ್ನುತ್ತಾರೆ ಗೊರೂರು. ಸರಳ ಜೀವಿಗಳಿಗೆ ತಾನೇ ಸರಳೋಪಾಯಗಳು ಹೂಳೆಯುವುದು!

ಒಮ್ಮೆ ವೆಂಕಣ್ಣಯ್ಯನವರ ಮನೇಲಿ ಕಳ್ಳತನವಾಯಿತು. ಮಿತ್ರರು ಅಯ್ಯೋ ಪಾಪ ಕಳ್ಳತನವಾಗಿ ನಿಮಗೆ ನಷ್ಟ ಕಷ್ಟವಾಗಿದೆ ಎಂದು ಸಹಾನುಭೂತಿ ತೋರಿಸಿದರು. ಆಗ ವೆಂಕಣ್ಣಯ್ಯನವರು ಹೇಳಿದರು, “ನೀವು ಸಹಾನುಭೂತಿ ಹೇಳಬೇಕಾದ್ದು ನನಗಲ್ಲ ಕಳ್ಳನಿಗೆ, ಪಾಪ ಕನ್ನಡ ಮೇಷ್ಟ್ರ ಮನೆ ಎಂದು ತಿಳಿಯದೆ ಕಷ್ಟ ಪಟ್ಟು ನುಗ್ಗಿ ಏನೂ ಹೆಚ್ಚಿಗೆ ಸಿಗದೆ ಹೋಗಿದ್ದಾನೆ” ಎಂದರು. ಕಾರುಣ್ಯ ಭಾವ ಅದರಲ್ಲಿ ಹೀಗೆ ವಿಶಿಷ್ಟವಾಗಿ ಚಿಮ್ಮುತ್ತಿತ್ತು. ನಮಗೆ ಹಾಗನ್ನಿಸೀತೇ ಎಂದಾದರೂ?

ವೆಂಕಣ್ಣಯ್ಯನವರು ಹಳೆಯ ಮೈಸೂರಿನವರಾದರೂ ಅಖಿಲ ಕರ್ನಾಟಕ ವ್ಯಾಪ್ತಿಯಲ್ಲಿ ಸೇವೆ ಸಲ್ಲಿಸಿದವರು ಎಂದರೆ ತಪ್ಪಾಗದು. ಹೈದರಾಬಾದಿನಿಂದ ಓದಲು ಬಂದ ಡಿ.ಕೆ. ಭೀಮಸೇನರಾವ್, ಮಾನ್ವಿ ನರಸಿಂಗರಾವ್, ಪಿ. ರಾಮ ಚಂದ್ರರಾವ್ ಬಿ.ರಾಮಸ್ವಾಮಿ ಮೊದಲಾದ ಕನ್ನಡ ವಿದ್ವಾಂಸರು ವೆಂಕಣ್ಣಯ್ಯ ನವರ ಶಿಷ್ಯರಾಗಿದ್ದು ಅವರಿಂದ ಪ್ರಭಾವಿತರಾಗಿ ಹೈದರಾಬಾದ್ ಕರ್ನಾಟಕದಲ್ಲಿ ಕನ್ನಡ ಉಳಿಸಿ ಬೆಳೆಸಲು ಕಾರಣರಾದರು, ಹೈದ್ರಾಬಾದ್ ಕರ್ನಾಟಕಕ್ಕೆ ನ್ಯಾಯ ಒದಗಿಸಿದ್ದು ಆ ಕಾಲದಲ್ಲಿ. ವೆಂಕಣ್ಣಯ್ಯನವರು ಸ್ವಂತ ಜೀವನದಲ್ಲಿ ಮೌಲ್ಯಗಳನ್ನು ಆದರ್ಶಗಳನ್ನು ಕಾಪಾಡಿಕೊಳ್ಳುವುದು ಸಾಮಾನ್ಯ ಸಂಗತಿ ಅಲ್ಲಿ ನಮ್ಮಲ್ಲಿ ಅನೇಕ ಅಧ್ಯಾಪಕ ವರ್ಗದವರು ಅದ್ಭುತವಾಗಿ ಅತಿಶಯವಾಗಿ ಮೌಲ್ಯಾಧಾರಿತ ಜೀವನವನ್ನು ಕುರಿತು ಆದರ್ಶ ತತ್ವಗಳನ್ನು ಪುಂಖಾನು ಪುಂಖವಾಗಿ ರಂಜನೀಯ ಶೈಲಿಯಲ್ಲಿ ಭಾಷಣ ಬಿಗಿಯಬಲ್ಲರು. ಬರಹ ಬರೆಯ ಬಲ್ಲರು, ಆದರೆ ತಮ್ಮ ಸ್ವಂತ ಜೀವನದಲ್ಲಿ ಅದನ್ನು ಅಳವಡಿಸಿ ಕೊಂಡಿರುವುದಿಲ್ಲ. ಇದು ಲೋಕರೂಢಿ. ಆದರೆ ವೆಂಕಣ್ಣಯ್ಯನವರು ಇದಕ್ಕೆ ಅಪವಾದವಾಗಿದ್ದರು. ಇದಕ್ಕೆ ಅನೇಕ ನಿದರ್ಶನಗಳನ್ನು ಉಲ್ಲೇಖಿಸಬಹುದು. ಈ ಪೈಕಿ ಒಂದು ನಿದರ್ಶನವೆಂದರೆ, ವೆಂಕಣ್ಣಯ್ಯನವರ ತಮ್ಮ ಶಾಮರಾಯರಿಗೆ ಬಿ.ಎ. ಆನರ್ಸ್‌ನಲ್ಲಿ ಹೆಚ್ಚು ಅಂಕಗಳಿಸಿದ್ದಕ್ಕೆ ವಿಶೇಷ ವಿದ್ಯಾರ್ಥಿ ವೇತನ ಸಿಕ್ಕಿತ್ತು. ಅವರ ಸ್ವಸಾಮರ್ಥ್ಯ ಅಧ್ಯಯನದಿಂದ ದೊರಕಿತ್ತು. ಅವರಿಗೆ ಬಂದುದನ್ನು ತಿಳಿದ ವೆಂಕಣ್ಣಯ್ಯನವರು ಅದನ್ನು ಅವರಿಂದ ಕಿತ್ತು ಬಡತನದಲ್ಲಿದ್ದು, ಆ ವರ್ಷದ ವಿದ್ಯಾಭ್ಯಾಸ ಮುಂದುವರಿಸಲಾಗದೆ ಊರಿಗೆ ಮರಳುತ್ತಿದ್ದ ವಿದ್ಯಾರ್ಥಿಗೆ ನೀಡಿದರು. ಆಗ ವ್ಯಥೆಗೊಂಡ ಅವರ ತಮ್ಮ ಶಾಮರಾಯರು ಅಣ್ಣ ವೆಂಕಣ್ಣನಿಗೆ ಹೇಳಿದರು. ನನ್ನ ಸಾಮರ್ಥ್ಯದಿಂದ ಪಡೆದುದನ್ನು ಬೇರೆಯವರಿಗೆ ನನ್ನಿಂದ ಕಿತ್ತುಕೊಟ್ಟಿದ್ದು ಅನ್ಯಾಯ. ಹೇಗೆ ಮಾಡಬಹುದು? ಎಂದರು. ಆಗಿ ವೆಂಕಣ್ಣಯ್ಯ ಹೇಳಿದರು. “ಅಯ್ಯಾ ನಿನಗೆ ಬೇಜಾರಾಗಿದೆ ನಿಜ, ಆದರೆ ನಾನು ನಿನ್ನ ಸ್ಕಾಲರ್‌ಷಿಪ್ಪನ್ನು ಯಾರಿಗೆ ಕೊಟ್ಟಿದ್ದೇನೆ ಅದನ್ನು ನೋಡು. ಅತಿ ದೊಡ್ಡ ಸಂಸಾರಿ, ದೂರದ ಊರಿನಿಂದ ಬಂದಿದ್ದಾನೆ. ಬಾಡಿಗೆ ಮನೆಯಲ್ಲಿ ವಾಸ, ಸಂಸಾರ ನಡೆಸುವುದು ಕಷ್ಟ. ನಿನಗಿಂತ ಹೆಚ್ಚು ಅಗತ್ಯ ಅವನಿಗೆ, ಅವನಿಗೆ ಇನ್ನಾರೂ ದಾತರಿಲ್ಲ. ಅಷ್ಟೇ ಅಲ್ಲ ಈ ವಿದ್ಯಾರ್ಥಿವೇತನ ಇಲ್ಲದಿದ್ದರೆ ಅವನ ಓದೇ ಮುಗಿಯುತ್ತದೆ. ನಿನಗಾದರೋ ನಾನಿದ್ದೇನೆ. ಅವನಿಗಾರಿದ್ದಾರೆ? ಎಂದರು. ಅಣ್ಣ ನೀನು ಮಾಡಿದ್ದು ಸರಿ ಎಂದನಂತೆ ತಮ್ಮ. ವೆಂಕಣ್ಣಯ್ಯನವರ ದೃಷ್ಟಿಕೋನ ಎಂದರೆ ಹೇಗೆ ಇರುತ್ತಿತ್ತು. ಇಂಥ ಪ್ರಸಂಗಗಳು ಹತ್ತಾರು ಇದೊಂದೇ ಅಲ್ಲ.

ವೆಂಕಣ್ಣಯ್ಯನವರ ವ್ಯಕ್ತಿತ್ವದ ವಿಶೇಷಗಳಲ್ಲಿ ಒಂದೆಂದರೆ ದುಃಖದಲ್ಲಿರುವವರಿಗೆ, ಬಾಳಿನಲ್ಲಿ ನಿರಾಶರಾಗಿ ದಿಕ್ಕೆಟ್ಟವರಿಗೆ ಸಾಂತ್ವನ ಸಮಾಧಾನ ಹೇಳುತ್ತಿದ್ದ ರೀತಿ. ಅವರಿಗೆ ನೆಮ್ಮದಿ ತರುತ್ತಿದ್ದ ರೀತಿ, ಆದ ಕಾರಣ ಅವರು ಕೇವಲ ಕಾಲೇಜು ಗುರು ಆಗಿರಲಿಲ್ಲ ಜೀವನ ಗುರು ಆಗಿದ್ದರು. ಇದಕ್ಕೊಂದು ನಿದರ್ಶನವೆಂದರೆ ಎ.ಎನ್. ಮೂರ್ತಿರಾಯರ ಪ್ರಸಂಗ.

ಒಮ್ಮೆ ಎ.ಎನ್. ಮೂರ್ತಿರಾಯರು ಗೃಹ ಕೃತ್ಯದ ಯಾವುದೋ ಒಂದು ಘಟನೆಯಿಂದ ರೋಸಿ ಹೋಗಿ ವಿಷಣ್ಣವದನರಾಗಿ ಮನಸ್ಸು ಬಹಳ ಪ್ರಕ್ಷುಬ್ಧಗೊಂಡು ಕುಕ್ಕನಹಳ್ಳಿ ಕೆರೆ ದಂಡೆ ಮೇಲಿನ ಕಲ್ಲು ಬೆಂಚೊಂದರಲ್ಲಿ ಕುಳಿತು ಚಿಂತಾಕ್ರಾಂತರಾಗಿದ್ದರು. ಅತ್ತ ಕಡೆ ಗಾಳಿಸವಾರಿ ಬಂದ ವೆಂಕಣ್ಣಯ್ಯನವರು ಮೂರ್ತಿರಾಯರ ವಿಷ್ಣುವದನ ಕಂಡು ಹೆಗಲ ಮೇಲೆ ಕೈ ಹಾಕಿ ಆತ್ಮೀಯತೆಯಿಂದ ಅದನ್ನು ಹೇಳಿ ಎಂದು ಕೇಳಿದರು. ಏನೂ ಇಲ್ಲವಲ್ಲ ಎಂದರು ಮೂರ್ತಿಯವರು. ಆಗ ವೆಂಕಣ್ಣಯ್ಯ ಹೇಳಿದರು: ಹಾಗಲ್ಲಪ್ಪಾ ಸಂಕೋಚ ಬೇಡಿ, ನಿಮ್ಮ ಮುಖದಲ್ಲಿ ಉದ್ವೇಗ ತೇಲುತ್ತಾ ಇದೆ, ಆತ್ಮೀಯರಲ್ಲಿ ದುಃಖ ಹೇಳಿಕೊಂಡರೆ ಮನಸ್ಸು ಹಗುರವಾಗುತ್ತದೆ ಎಂದರು. ಅವರ ಸರಳತೆ, ಸಹಜ ವಿಶ್ವಾಸ ಕಂಡು ತಮ್ಮ ದುಗುಡವನ್ನೆಲ್ಲಾ ಹೇಳಿಕೊಂಡರು. ಆಗ ವೆಂಕಣ್ಣಯ್ಯ ತಮ್ಮ ಜೀವನದ ಕಹಿ ಅನುಭವಗಳನ್ನು ಉದಾಹರಣೆ ಹೇಳುತ್ತಾ ಸಮಾದಾನ ಹೇಳಿ ಕೊನೆಗೊಂದು ಮಾತು ಹೇಳಿದರು. “ಮೂರ್ತಿರಾವ್ ನಿಮ್ಮನ್ನು ಸದಾ ಸುಖವಾಗಿಟ್ಟಿರುತ್ತೇನೆ ಅಂತ ದೇವರೇನಾದರೂ ಬಾಂಡ್ ಬರೆದು ಕೊಟ್ಟಿದ್ದಾನೇನು! ಭ್ರಾಂತಿ-ಭ್ರಾಂತಿ! ಏಳಿ, ನಡೀರಿ ಹೋಗೋಣ” ಎಂದು. ಆ ವೇಳೆಗೆ ಅವರ ಮಾತುಗಳಿಂದ ಮೂರ್ತಿರಾಯರ ಮನಸ್ಸು ಪ್ರಶಾಂತ ಗೊಂಡಿತ್ತು.

ವೆಂಕಣ್ಣಯ್ಯನವರು ವೈಯಕ್ತಿಕವಾಗಿ ವ್ಯಕ್ತಿಗಳ ಬಾಳಿನಲ್ಲಷ್ಟೆ ಕದಡಿದ ಮನಗಳಿಗೆ ನೆಮ್ಮದಿ ತರುತ್ತಿದ್ದಾರೆ ಎಂದಲ್ಲ. ಜನ ಸಮೂಹವನ್ನು ಹತೋಟಿಗೆ ತರುವ ಶಕ್ತಿ ಅವರ ವ್ಯಕ್ತಿತ್ವಕ್ಕೆ ಇತ್ತು. ಅವರ ಮಾತು, ಕಣ್ಣೋಟ, ರೀತಿ ನೀತಿ, ಮೃದುತ್ವ, ಆತ್ಮೀಯತೆ ನಿಲವು, ಎತ್ತರ ಬಾಗು ವಿನಯ ಅಂತರಂಗ ಶುದ್ಧಿ, ಆದರ್ಶ ಗುರಿ ಎಲ್ಲವೂ ಕಂಡವರ ಮೇಲೆ ಅಗಾಧ ಪರಿಣಾಮ ಉಂಟು ಮಾಡುತ್ತಿತ್ತು. ಒಂದು ರೀತಿಯಲ್ಲಿ ಗಾಂಧೀ ಪ್ರಭಾವದ ರೀತಿ ಎನ್ನಬಹುದು. ಹಿಂಸೆಯನ್ನು ಅಹಿಂಸೆಯಿಂದ ತಡೆಯುವ ವಿಧಾನವದು. ಒಮ್ಮೆ ಸೆಂಟ್ರಲ್ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಮುಷ್ಕರ ಹೂಡಿದರು. ಆಗ ಸತ್ಯಾಗ್ರಹದ ಕಾಲ, ತರಗತಿಗಳನ್ನು ಬಹಿಷ್ಕರಿಸಿ ವಿದ್ಯಾರ್ಥಿಗಳು ಘೋಷಣೆ ಹಾಕುತ್ತಿದ್ದರು. ಪ್ರಿನ್ಸಿಪಾಲರಾದ ಮೆಟ್ಕಾಫ್‌ರಿಗೆ ಏನೂ ತೋಚಲಿಲ್ಲ. ಅವರನ್ನು ಸುಧಾರಿಸಲು ತಮ್ಮಿಂದಾಗದು ಅನ್ನಿಸಿತು ಅವರಿಗೆ. ಆಗ ಅವರು ವೆಂಕಣ್ಣಯ್ಯನವರ ಬಳಿ ಬಂದರು. ಹುಡುಗರಿಗೆ ನಾಲ್ಕು ಬುದ್ದಿಮಾತು ಹೇಳಿ ತರಗತಿಗಳಿಗೆ ಹೋಗುವಂತೆ ಮಾಡುತ್ತೀರಾ ಎಂದು ಕೇಳಿಕೊಂಡರು. ನೀವು ಒಬ್ಬರೇ ಈ ಕೆಲಸ ಮಾಡಲು ಸಮರ್ಥರು ಎಂದರು. ವೆಂಕಣ್ಣಯ್ಯನವರು ಹೋಗಿ ವಿದ್ಯಾರ್ಥಿಗಳ ಜೊತೆ ಮಾತಾಡಿದರು. ಏನು ಹೇಳಿದರೂ ಆಡಿದರೋ ತಿಳಿಯದು. ಆದರೆ ಅವರಾಡಿದ ಮಾತು ರೀತಿ, ನಯ ವಿನಯಗಳು ಎಷ್ಟು ಮೋಡಿ ಮಾಡಿತು ಎಂದರೆ ಕೆಲವೇ ನಿಮಿಷಗಳಲ್ಲಿ ಸದ್ದಿಲ್ಲದೆ ಎಲ್ಲಾ ವಿದ್ಯಾರ್ಥಿಗಳು ತರಗತಿಗಳಿಗೆ ಹಿಂದಿರುಗಿದ್ದರು. ಕನ್ನಡ ಪ್ರೊಫೆಸರ್ ಕೇವಲ ಕನ್ನಡ ಪ್ರೊಫೆಸರ್ ಆಗಿರಲಿಲ್ಲ ಕಾಲೇಜ್ ಪ್ರೊಫೆಸರ್ ಆಗಿದ್ದರು. ವಿದ್ಯಾರ್ಥಿಗಳ ಪಾಲಿಗೆ ಆತ್ಮೀಯ ಮಾರ್ಗದರ್ಶಿ ಆಗಿದ್ದರು.

ವೆಂಕಣ್ಣಯ್ಯನವರ ಒಳನೋಟ ಹೊರನೋಟಗಳ ಪ್ರಭಾವವನ್ನು ಡಿವಿಜಿ ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ. ವೆಂಕಣ್ಣಯ್ಯ ನವರ ಆಕಾರ ವ್ಯಕ್ತಿತ್ವ ಪ್ರಭಾವಕಾರಿಯಾದುದು. ಆಳು ಆರಡಿಗೂ ಮೀರಿದ ಎತ್ತರ, ಮೈ ತೆಳುವು, ಕೈ ಬೆರಳುಗಳು ತುಂಬಾ ಉದ್ದ, ನನ್ನ ಕೈಯ ಒಂದು ಗೇಣು ಅವರ ಕೈಗೆ ಒಂದು ಚೋಟು, ಮುಖವು ಆಕರ್ಷಣೀಯ, ತೇಜಸ್ವಿಯಾದ ಕಣ್ಣುಗಳು, ಮಾತು ಅವಸರವಿಲ್ಲದೆ ಸಾವಧಾನವಾಗಿ ಹರಿದು ಬರುವುದು. ಕಂಠ ಧ್ವನಿ ತುಂಬಾ ಗಟ್ಟಿ ಅಲ್ಲದೆ, ತುಂಬ ಮೆಲ್ಲಗೆ ಅಲ್ಲದೆ ಮಧ್ಯಮಸ್ಥಾಯಿಯಲ್ಲಿ ಬರುವುದು. ಸಂಗೀತಕ್ಕೆ ಒಪ್ಪುವ ಕಂಠ, ಉಡುಗೆ ತೊಡುಗೆಗಳಲ್ಲಿ ಅಚ್ಚುಕಟ್ಟು, ತಲೆಯ ಮೇಲೆ ಇರುತ್ತಿದ್ದುದು ರುಮಾಲು; ಸಣ್ಣ ಸರಿಗೆಯಂಚಿನ ರುಮಾಲು ಸೊಗಸಾಗಿ ಸುತ್ತಿದ್ದು, ಇದು ಡಿವಿಜಿ ಕಂಡ ವೆಂಕಣ್ಣಯ್ಯನವರ ಹೊರ ನೋಟ.

ಇನ್ನು ಅವರ ಒಳನೋಟ ಪ್ರಭಾವವನ್ನು ಅವರು ಚಿತ್ರಿಸಿದ್ದು ಹೀಗೆ “ಮನುಷ್ಯ ಜೀವನದಲ್ಲಿ ಎಷ್ಟೋ ಸ್ನೇಹಗಳು ಷರಟು ಕೋಟುಗಳಂತೆ ಹೊರವಸ್ತುಗಳಾಗಿ ನಮ್ಮ ಮೈಗೆ ಅಂಟಿಕೊಂಡಿರುತ್ತವೆ. ಆದರೆ ಒಂದೋ ಎರಡೂ ಸ್ನೇಹಗಳು ಮಾತ್ರ ಮೈಯ ಚರ್ಮವಾಗಿ ಮಾಂಸ ಮೂಳೆಗಳಾಗಿ ಜೀವನ ಆಶ್ರಯ ವಸ್ತುಗಳಾಗುತ್ತವೆ. ವೆಂಕಣ್ಣಯ್ಯ ಹಾಗೆ ನನ್ನ ಜೀವ ಅಂತರ್‌ದ್ರವವಾದವರು, ಹೊರಗಣ ಪದಾರ್ಥವಲ್ಲ.”

ವೆಂಕಣ್ಣಯ್ಯನವರು ಎಷ್ಟರ ಮಟ್ಟಿಗೆ ಎಂಥೆಂಥವರಿಗೂ ಅಂತರ್‌ದ್ರವರಾಗಿದ್ದರು ಎಂಬುದಕ್ಕೆ ಅವರ ಶಿಷ್ಯರಲ್ಲೊಬ್ಬರಾದ ಎಚ್.ಎಂ. ಶಂಕರ ನಾರಾಯಣರಾಯರು ತಿಳಿಸಿದ ಸಂಗತಿ ಸಾಕ್ಷಿ ಆಗಿದೆ. ೨೪-೨-೧೯೩೧ರಲ್ಲಿ ವೆಂಕಣ್ಣಯ್ಯನವರು ನಿಧನರಾದರು. ಅವರನ್ನು ಶಂಕರನಾರಾಯಣ ರಾಯರು ಸ್ಮಶಾನಕ್ಕೆ ಹೋಗಿ ಅಂತ್ಯ ದರ್ಶನ ಪಡೆದರು ತಂದೆಯವರಿಗೆ ವೆಂಕಣ್ಣಯ್ಯನವರು ನಿಧನರಾದ ಸುದ್ದಿಯನ್ನು ಸ್ಮಶಾನದಲ್ಲಿ ಅಂತ್ಯ ದರ್ಶನ ಪಡೆದ ಸಂಗತಿ ಅವರು ಹೇಳಿದರು. ಆಗ ಅವರ ತಾಯಿ “ಅಪ್ಪ ಅಮ್ಮ ಇದ್ದವರು ಸ್ಮಶಾನಕ್ಕೆ ಹೋಗುವುದುಂಟೋ ಅಷ್ಟು ತಿಳಿಯಲಿಲ್ಲವೇ?” ಅಂತ ಆಕ್ಷೇಪಿಸಿದರು. ಆಗ ಶುದ್ಧ ವೈದಿಕರಾದ ಶಂಕರನಾರಾಯಣ ರಾಯರು ತಂದೆ ಹೇಳಿದರು. ಹುಚ್ಚಾ ಎಂಥ ಕೆಲಸ ಮಾಡಿದೆ. ವೆಂಕಣ್ಣಯ್ಯನವರು ನಿನಗೆ ಅನ್ನವಿಟ್ಟು ವಿದ್ಯೆ ಹೇಳಿ ಕೊಟ್ಟ ತಂದೆ; ಗುರು, ನೀನು ಒಂದು ಹೆಗಲು ಕೊಡದೆ ತಪ್ಪು ಮಾಡಿದೆ ಎಂದು ಚೀಮಾರಿ ಹಾಕಿದರು. ತಾಯಿ ಅವರ ಆಕ್ಷೇಪವನ್ನು ಖಂಡಿಸಿದರು. ಅವರ ಕಣ್ಣಲ್ಲಿ ಶೋಕಧಾರೆ ಹರಿಯುತ್ತಿತ್ತು.

ವೆಂಕಣ್ಣಯ್ಯನವರನ್ನು ಅವರ ಜೀವನ ಸಾಧನೆ ವ್ಯಕ್ತಿತ್ವಗಳನ್ನು ನೆನಪಾದಾಗಲೆಲ್ಲ ಅವರು ಹೇಳಿದ ಮಾತು ನೆನಪಾಗುತ್ತೇ ಹೆಸರಿನ ಶಾಶ್ವತತೆಗಿಂತಲೂ ಹಿರಿದಾದುದು. ಇದೆಯಯ್ಯಾ ಬದುಕು ಸಾಧಿಸುವುದಕ್ಕೆ “ಅದನ್ನು ಸಾಧಿಸಿದ ಸಾಧಕರು ವೆಂಕಣ್ಣಯ್ಯನವರು. ವಿ.ಸೀ, ಹೇಳಿದಂತೆ: ಅವರದು ಒಂದು ಮನುಷ್ಯ ದೇಹವಲ್ಲ, ಒಂದು ಉಸಿರು ಒಂದು ಜೀವಗುಣ, ಒಂದು ಬೆಳಕು, ಒಂದು ಪರಿಮಳ, ದೇವತಾ ಮನುಷ್ಯರು.

ಚಿತ್ತದಲ್ಲಿ ಕನ್ನಡದ ಜ್ಯೋತಿಗಳ ಹತ್ತಿಸುತ್ತ
ಒಲವಿನವನು ಎನಿಸಿದ್ದಾ ಕನ್ನಡದ ಹಕ್ಕಿ

ವೆಂಕಣ್ಣಯ್ಯನವರು ನಮ್ಮ ನಾಡಿಗೆ ಸದಾ ಮಾರ್ಗದರ್ಶಿ ನಂದಾದೀಪ ಅವರ ಸ್ಮರಣೆ ಪುಣ್ಯಸ್ಮರಣೆ, ಧನ್ಯಸ್ಮರಣೆ.
*****