ಮೋಕ್ಷ

ಬಾಳು ಆಟಕ್ಕಾಗಿ ಹೂಡಿದ್ದೆಂದೂ, ಆ ಆಟವನ್ನು ಸೊಗಸಾಗಿ ಆಡುವುದಕ್ಕೆ ಹಲವು ಉಪಾಯಗಳನ್ನು ಕಂಡುಕೊಳೃ- ಲಾಗಿದೆಯೆಂದೂ ತಿಳಿದಾಯಿತು. ಅದರೊಡನೆ ಆಟವನ್ನು ತಪ್ಪಿಸುವುದಕ್ಕಾಗಲಿ, ಅದರೊಳಗಿಂದ ಸಿಡಿದು ಕಡೆಗೋಡುವುದಕ್ಕಾಗಲಿ ಪ್ರಯತ್ನಿಸಬಾರದೆಂಬ ಮಾತೂ ತಿಳಿಯಿತು. ಆದರೆ ಮೋಕ್ಷ ಎಂಬ ಶಬ್ದದ ಪ್ರಯೋಜನ- ವೇನು ಉಳಿಯಿತು? ಯಾವ ಅರ್ಥದಲ್ಲಿ ಆ ಶಬ್ದವನ್ನು ಗ್ರಹಿಸಬೇಕು? ಬಾಳಿನಾಟದಿಂದ ಕಡೆಗಾಗಲು ಇಷ್ಟಪಡಬಾರ ದೆಂದರೆ, ಮೋಕ್ಷದ ಸಾರ್ಥಕತೆಯೇನು? ಬಾಳಿನಾಟದಲ್ಲಿಯೇ ತೊಡಗಿದ್ದರೆ ಮೋಕ್ಷದ ಪ್ರಯೋಜನವೇನು? ಇವನ್ನೆಲ್ಲ ವಿವರಿಸಿದರೆ ಕೇಳಬೇಕೆಂದು ಕುತೂಹಲಪಡುತ್ತಿದ್ದೇವೆ” ಎಂದು ಬಿನ್ನವಿಸಿಕೊಳ್ಳಲಾಯಿತು.

ಆ ವಿಷಯದಲ್ಲಿ ಪಡಿನುಡಿ ಬಂದುದೇನಂದರೆ –

“ಮೋಕ್ಷವೆಂದರೆ ಬಿಡುಗಡೆ. ಜೀವನ ಲೀಲೆಯಿಂದ ಬಿಡುಗಡೆ ಹೊಂದುವುದು; ಇಲ್ಲವೆ ಜೀವನ ಲೀಲೆಯಲ್ಲಿ ಬಿಡುಗಡೆಯಾಗಿ ಭಾಗವಹಿಸುವುದು.

ಜೀವನ ಲೀಲೆಯಿಂದ ಬಿಡುಗಡೆ ಆಗುವುದಕ್ಕೆ ಇಷ್ಟಪಡಬಾರದು. ಹಾಗೆ ಪಡುವುದೆಂದರೆ, ಓಡಲಾಗದ ಮೃಗವು ನಾಯಿಗೆ ಮಾಂಸವನ್ನು ಕರೆದು ಕೊಟ್ಟಂತೆ. ಜೀವನನಾಟಕ ಸೂತ್ರಧಾರನು ಇಷ್ಟಪಟ್ಟರೆ ಜೀವನಲೀಲೆಯಿಂದ ಕಡೆಗೆ ಕರೆಯಬಹುದು. ಅಲ್ಲಿಯ ವರೆಗೆ ಅಂಥ ಬಿಡುಗಡೆ ಬಯಸುವದರಿಂದ ದೇವದೇವನ ಉದ್ದೇಶ ಸಫಲತೆಗೆ ಭಂಗತಂದಂತಾಗುವದು.

ಇನ್ನು, ಜೀವನದ ಆಟದಲ್ಲಿಯೇ ಮೋಕ್ಷಗೊಂಡು ನಿಲ್ಲುವುದು. ಆ ದಾರಿಯಲ್ಲಿ ನಡೆದರೆ ಪರಮೇಶ್ವರನ ಉದ್ದೇಶವು ಕೈಗೂಡುತ್ತದೆ; ಮನಗೂಡುತ್ತದೆ.

ಜೀವನವನ್ನೇ ಆಟವೆಂದು ತಿಳಿಯಬೇಕಾಗಿರುವದಂತೂ ದೂರವೇ ಉಳಿದು, ಆಟವನ್ನು ಸಹ ಜೀವನವೆಂದು ಭಾವಿಸಿ, ಮಿಡುಕಿ ಮರುಗಿ, ಉಸಿರುಗುಂದಿ, ನಿಟ್ಟುಸಿರಿಟ್ಟು ಅರೆಜೀವಿಯಾಗಿ ಬಿದ್ದುಕೊಂಡಿರುವುದು: ಲೋಕದ ಸ್ವಭಾವದಂತೆ ತೋರುತ್ತದೆ. ಜೀವನವನ್ನು ಆಟವೆಂಬ ಪಾಠವನ್ನು ನಾವು ಆಟಗಳಲ್ಲಿ ಕಲಿಯಬೇಕಾಗಿದೆ. ಪಂಗಡಗಟ್ಟಿ ಇಲ್ಲವೆ ಗುಂಪುಗೂಡಿ ಆಡುವ ವ್ಯಾಯಾಮದ ಆಟಗಳೂ, ನಾಟಕ-ಗೊಷ್ಠಿ-ಸಮ್ಮೇಳನ-ಕೂಟಗಳೂ ಅಂಥ ಸಾಧನಕ್ಕೆ ತಕ್ಕ ಕಣಗಳಾಗಿವೆ. ಆಟಗಳನ್ನು ಆಟಕ್ಕಾಗಿ ಆಡುವ ಬುದ್ದಿಬಂದ ಬಳಿಕವೇ ಜೀವನವನ್ನು ಆಟಕ್ಕಾಗಿ ನಡೆಯಿಸುವ ವಿಚಾರವು ತಲೆಯಲ್ಲಿ ಬರಬಹುದು; ತಲೆಯಲ್ಲಿ ಬಂದುದು,  ಹೃದಯದಲ್ಲಿಯೂ ಇಳಿಯಬಹುದು; ಕೃತಿಗೂ ಇಳಿಯಬಹುದು.

ಬಾಳು ಆಟವಲ್ಲವೆಂಬುದಿಷ್ಟೇ ಅಲ್ಲ, ಅದು ಸೆರೆಮನೆಯೂ ಆಗಿದೆಯೆಂದೂ ಅಲ್ಲಿಯ ಸಂಬಂಧಗಳೆಲ್ಲ ಸಂಕೋಲೆಗಳೇ ಆಗಿವೆಯೆಂದೂ ಭಾವಿಸಿ, ಅದರೊಳಗಿಂದ ಸಿಡಿದು ಓಡಿಹೋಗುವ ಎತ್ತುಗಡೆ ಕೆಲವೆಡೆಗಳಲ್ಲಿ ನಡೆಯುತ್ತದೆ.
ಹಾಗೆ ಓಡಿಹೋದವನು ಸಾಹಸಿ ಆಗಿರಬಹುದು. ಹೇಡಿಯಂತೂ ಆಗಿರಲಾರನು. ಆದರೆ ಆತನು ಓಡಿಹೋಗುವು- ದಾದರೂ ಎಲ್ಲಿಗೆ? ಅವನು ಸಂಸಾರವನ್ನು ಬಿಟ್ಟುಕೊಡಬಲ್ಲನಾದರೂ ಜೀವನವನ್ನು ಬಿಟ್ಟುಕೊಡಲಾರನು. ಸೆರೆ
ಮನೆಯ ಕೋಣೆಯೊಳಗಿಂದ ಹೊರಗೆ ಬಂದಂತಾದರೂ, ಸೆರೆಮನೆಯ ಆವಾರವನ್ನು ಬಿಟ್ಟು ಬಯಲಿಗೆ ಬರಲಾರನು. ನೆಲವೆಲ್ಲ ತಳವಾರನಾದರೆ ಕಳ್ಳನು ಅಡಗುವದಿನ್ನೆಲ್ಲಿ?

ಜೀವನ ಲೀಲೆಯಲ್ಲಿಯೇ ತೊಡಗಿಯೇ ಮೋಕ್ಷಗೊಳ್ಳುದು ಸರಿಯಾದ ಹಾಗೂ ಸಾರ್ಥಕವಾದ ದಾರಿ  ಜೀವನರಂಗ- ದಿಂದ ತಪ್ಪಿಸಿಹೋಗಲು ಪ್ರಯತ್ನಿಸಿದವರು ಕೆಲವರೇನೋ ಇರಬಹುದು. ಆದರೆ ಜೀವನಲೀಲೆಯನ್ನು ಅರಿಯದೆ, ಕಣ್ಣುಮುಚ್ಚಿ ಅದರಲ್ಲಿ ತಾಳತಪ್ಪಿ, ತಾಳಗೆಟ್ಟು ಕುಣಿಯುವವರೇ ಬಹು ಜನರಿದ್ದಾರೆ. ಆ ದಾರಿಯೂ ಪರಮೋದ್ದೇಶವನ್ನು ಈಡೇರಿಸಲಾರದು. ಆಟದಿಂದ ತಪ್ಪಿಸುವದಕ್ಕಿಂತ, ಆಟವನ್ನು ತಪ್ಪಿಸುವ ಈ ದಾರಿಯೂ ತೀರ ಘಾತುಕವಾದುದು. ಲೋಕದ ಮಹಾಲೀಲೆಯಲ್ಲಿ ತೆರೆಯ ಹಿಂದೆ ಕುಣಿಯುವ ನಟರಾಜನ ತಾಳಕ್ಕೆ ತಕ್ಕ ಹೆಜ್ಜೆ ಹಾಕುವ ರೂಢಿ ನಮಗಾಗ- ಬೇಕಾದರೆ ಜೀವನದಲ್ಲಿಯೇ ಮೋಕ್ಷಗೊಳ್ಳುವುದು ಅತ್ಯಾವಶ್ಯಕವಾಗಿದೆ.

ಜೀವನದಲ್ಲಿಯೇ ಮೋಕ್ಷ! ಅಹುದು. ಈ ಮಾತು ಸಹ ಅಶ್ಲ್ಯಾಘ್ಯವೆನಿಸುತ್ತದೆ. ಹೇಗೆಂದರೆ-ಬಂಧಿತರಾದವರಿಗಲ್ಲವೇ ಮೋಕ್ಷ? ಯಾರು ಬಂಧಿತರಾಗಿದಾರೆ? ಯಾರಾರೂ ಬಂಧಿತರಾಗಿಲ್ಲ; ಎಂದೆಂದೂ ಬಂಧಿತರಾಗಿಲ್ಲ. ಬಂಧಿತ- ರಾಗಿವೆವೆಂಬ ತಿಳುವಳಿಕೆ ಮಾಡಿಕೊಂಡಿದ್ದಾರೆ ಮಾತ್ರ. ತಿಳುವಳಿಕೆಯ ಬಂಧನವೇ ಲೋಗರನ್ನು ಇಷ್ಟೊಂದು ಬಲುಹಾಗಿ, ಬಿಗಿಯಾಗಿ ಕಟ್ಟಿ ಹಾಕಿರುವದು. ನಿಜವಾಗಿಯೂ ಲೋಗರು ಬಂಧಿತರಾಗಿದ್ದರೆ ಅವರ ಸಂಕ
ಟವು ಅದೆಷ್ಟು ಅಸದಳವಾಗಿತ್ತಿತ್ತೋ, ಅದೆಷ್ಟು ದುರ್ವಿನಿಯೋಗವಾಗುತ್ತಿತ್ತೋ ತಿಳಿಯದು.

ಕಾಲ್ಪನಿಕವಾದ ಬಂಧನವನ್ನು ಬಿಡಿಸುವದಕ್ಕೆ ಕಾಲ್ಪನಿಕ ಉಪಾಯವೇ ಪ್ರಯೋಜನಕರವಾಗಬಲ್ಲದು. ಬಂಧಿತ- ರಾಗಿರುವೆನೆಂಬ ಕಲ್ಪನೆಯ ಕಟ್ಟನ್ನೇ ಮೊಟ್ಟಮೊದಲು ಕತ್ತರಿಸಿ  ಹಾಕತಕ್ಕದ್ದು. ‘ನಾನು ಬಂಧಿತನಲ್ಲ, ಯಾವ ಬಂಧನಕ್ಕೂ  ನಾನು ಒಳಗಾಗಿಲ್ಲ; ನಾನು ನಿತ್ಯ ಮುಕ್ತನು. ಬಂಧನಕ್ಕೆ ಒಳಗಾಗಿದ್ದರೆ ಮಾತ್ರ ನನಗೆ ಮೋಕ್ಷಬೇಕಿತ್ತು. ಬಂಧನವೇ ಇಲ್ಲದ ನನಗೆ ಮೋಕ್ಷ ತಾನಾಗಿಯೇ ಇದೆ. ನಾನು ಮುಕ್ತನೇ ಇದ್ದೇನೆ.’

ಸತಿ-ಪತಿ, ತಂದೆ-ಮಗ, ಮಿತ್ರ-ಶತ್ರುಗಳ ಪಾತ್ರವಹಿಸಿದ ಮಾತ್ರಕ್ಕೆ ಮಾತಿನಿಂದ ಮಮತೆ ತೋರುವುದಾಗಲಿ, ಅಭಿನಯದಿಂದ ಅಕ್ಕರೆ ತೋರುವ ದಾಗಲಿ ಸಾಕಾಗದೇ? ಆಭಿನಯಕ್ಕೆ ಹೊಂದಿಕೆಯಾಗುವಷ್ಟು ಮಾತು, ನಟನೆ
ಇದ್ದರೆ ಸಾಕು. ರಂಗಭೂಮಿಯ ಮೇಲೆ ಮೋಹಪಟ್ಟಂತೆ, ವ್ಯಾಕುಲ ಗೊಂಡಂತೆ ಬಣ್ಣದ ಕೋಣೆಗೆ ಬಂದ ಮೇಲೆ ಸಹ, ನನ್ನ ಹೆಂಡಿರು-ಮಕ್ಕಳು, ಸ್ನೇಹಿತ-ವೈರಿಯೆಂದು ಮೋಹಗೊಳೃಹತ್ತಿದರೆ ಮಂಡಲದೊಡೆಯನು ಛೀ ಹಾಕದಿರುವನೇ? ಸೂತ್ರಧಾರನು ಶಿಕ್ಷೆವಿಧಿಸದಿರುವನೇ? ಈ ನಾಟಕದಲ್ಲಿ ತಂದೆ-ಮಕ್ಕಳಾದವರು, ಇನ್ನೊಂದರಲ್ಲಿ ಎದುರಾಳಿಗಳಾಗ- ಬಲ್ಲರೆಂಬುದನ್ನು ಹೇಳಿಕೊಡದಿರುವನೇ?

ಈ ನಿಲವನ್ನು ಸಂವಾದಿಸುವುದಕ್ಕೆ ಯಾವ ಯೋಗಬೇಕು ? ಇನ್ನಾವ ಸಮಾಧಿಬೇಕು ? ಇಡಿಯ ಜೀವನವೇ ಯೋಗ- ವಾಗಬೇಕಾಗಿದೆ; ಅಂತರ್ಮುಖತೆಯೇ ಸಮಾಧಿಯಾಗಬೇಕಾಗಿದೆ. ಅದಕ್ಕೆ ಸಹಜಸಮಾಧಿಯೆನ್ನೋಣ.

ನಾರು ಬೇರಿನ ಕುಟಿಲಕುಹಕದ
ಕಪಟಯೋಗದಲ್ಲಿದು ನಿಲ್ಲಿರೋ.
ಕಾಯಸಮಾಧಿ ಕರಣಸಮಾಧಿ ಜೀವಸಮಾಧಿ
ಯೋಗವಲ್ಲಿದು ನಿಲ್ಲಿರೋ..
ನಿಜ ಸಹಜ ಸಮಾಧಿ ಗುಹೇಶ್ವರಾ..

ಸತ್ತಬಳಿಕ ಸಿಗಬೇಕಾದ ಕಾಲ್ಪನಿಕ ಮೋಕ್ಷವನ್ನು ಬೆಂಬಳಿಸಿ, ಸತ್ತಂತೇ ಬದುಕುವ ಪರಿಶ್ರಮ ವ್ಯರ್ಥ ಅಸಹ್ಯ; ಅಕ್ಷಮ್ಯ. ಜೀವವಿರುವಾಗಲೇ ಗಳಿಸುವ ಜೀವಿತಮೋಕ್ಷಬೇಕಾಗಿದೆ. ಜೀವವುಳ್ಳವರಂತೆ ಬದುಕುವ ಜೀವಂತ ಸಮಾಧಿ ಬೇಕಾಗಿದೆ. ಸಾಯದ ಮುನ್ನ ಸ್ವಂಯವನರಿಯಲು ಸಾಧ್ಯವಿದೆ. ಅದೇ ವಾಸ್ತವಿಕ, ಸ್ವಾಭಾವಿಕ. ಅದಕ್ಕೇ ದೇವನೊಲಿ- ಯುವನು.

ಸತ್ತಬಳಿಕ ಮುಕ್ತಿಯ ಹಡೆದಿಹೆನೆಂದು ಪೂಜಿಸಹೋದರೆ
ಆ ದೇವರೇನ ಕೊಡುವನೋ?
ಸಾಯದೆ ನೋಯದೆ ಸ್ವತಂತ್ರನಾಗಿ ಸಂದುಭೇದವಿಲ್ಲದಿರ್ಪ
ಗುಹೇಶ್ವರಾ ನಿಮ್ಮ ಶರಣ.

ಮೋಕ್ಷವು ಸತ್ತಬಳಿಕವೇ ಸಿಗತಕ್ಕ ವಸ್ತುವಾದರೆ, ಬದುಕಿರುವಾಗ ಅದನ್ನು ಆಶಿಸಲೇಕೆ? ಬದುಕಿರುವಾಗ ಚೆನ್ನಾಗಿ ಬದುಕುವ ಆಶೆಯನ್ನೇ ತಳಿಯುವುದು ಸರಿಯಲ್ಲವೇ? ಚೆನ್ನಾಗಿ ಬದುಕುವುದಕ್ಕೆ, ಬದುಕಿರುವಾಗ ಗಳಿಸಿದ ಮುಕ್ತಿಯೇ ಬುತ್ತಿಯಾಗಬಲ್ಲದು. “ನನಗೆ ಬಂಧನವೇ ಇಲ್ಲ; ನಾನು ನಿತ್ಯಮುಕ್ತನು.” ಎಂಬುದನ್ನು ಸಾಧಿಸಬೇಕಾಗಿದೆ. ಲೋಗರು
ಕಾಯದಿಂದ  ಬಂಧಿತರಾಗಿದ್ದಾರೆ; ಪ್ರಾಣದಿಂದ ಬಂಧಿತರಾಗಿದ್ದಾರೆ; ಮನದಿಂದ ಬಂಧಿತರಾಗಿದ್ದಾರೆ. ಬಂಧಿತರಾಗಿ- ಲ್ಲದವರೂ ಬಂಧಿತರೆಂದು ತಿಳಕೊಂಡ ಕಾರಣ, ಔಪಚಾರಿಕ ಉಪಾಯಗಳನ್ನು ಮಾಡದೆ ಗತ್ಯಂತರವೇ ಇಲ್ಲ,
ಆಚಾರವಂಗಲೋಪವಾಗಿ ಕಾಯಮುಕ್ತನು
ನೀನು ನೋಡಯ್ಯ.
ಅರಿವು ಆಂತರಂಗದಲ್ಲಿ ಭರಿತವಾಗಿಪ್ಪುದಾಗಿ
ಮನೋಮುಕ್ತನು ನೀನು  ನೋಡಯ್ಯ
ಅರ್ಪಿತ ಪರಿಣಾಮದಲ್ಲಿ ಅವಿಗಳಾಗಿಪ್ಪುದಾಗಿ
ಸರ್ವಾಂಗ ಲಿಂಗೈಕ್ಯ ನೋಡಾ-
ಮುಕ್ತನಲ್ಲೆಂಬ ಬಳಕೆಯ ಮಾತಂತಿರಲಿ,
ಬಯಲ ಭ್ರಮೆಯನೆ ಕಳೆದು ಭವದ ಬಟ್ಟೆಯ
ಹರಿದಿಪ್ಪುದ ನಮ್ಮ ಗುಹೇಶ್ವರ ಲಿಂಗ ಬಲ್ಲನು.
ನೀನು ಮರೆಯಾಗಿ ನುಡಿವರೆ ಸಂಗನಬಸವಣ್ಣ?

ವಿಶೇಷ ಯೋಗವೊಂದನ್ನು ಸಾಧಿಸಿದರೆ ಒಂದು ಪ್ರಕೃತಿಯಿಂದ ಮುಕ್ತ ರಾಗಬಹುದು. ಕಾಯಕದಿಂದ ಮುಕ್ತರಾಗಿ ಬಿಟ್ಟರೆ ತೀರಲಿಲ್ಲ; ಜೀವದಿಂದ ಮುಕ್ತರಾದರೆ ಸಾಕಾಗಲಿಲ್ಲ. ಸುರ್ವಾಂಗಮುಕ್ತಿಯು ಪ್ರಾಪ್ತವಾಗುವದಕ್ಕೆ ಸುರ್ವಾಂಗ- ಯೋಗವೇ ದಾರಿ.

ಕಾಮಾನುಭಾವಿಗಳು ಕಾಯದಲ್ಲಿಯೇ ಮುಕ್ತರು.
ಜೀವಾನುಭಾವಿಗಳು ಜೀವದಲ್ಲಿಯೇ ಮುಕ್ತರು.
ಪವನಾಮಭಾವಿಗಳೆಲ್ಲ ಪವನದಲ್ಡಿಯೇ ಮುಕ್ತರು.
ಇವರನೆಂತು ಸರಿಯೆಂಬೆನಯ್ಯ ಲಿಂಗಾನುಭಾವಿಗಳಿಗೆ?
ಶಿವಲಿಂಗ ಪ್ರಕಾಶದಲ್ಲಿ ಸದಾಸನ್ನಿಹಿತರು
ನಮ್ಮ ಶರಣರು ಕೂಡಲಸಂಗಮದೇವಾ.

ಮುಕ್ತನಾದನನಿಗೆ ಕುರುಹುಗಳೇನಾದರೂ ಉಂಟೇ? ಎಂಬುವ ಬಟ್ಟಲು, ನೋಡುವ ಕನ್ನಡಿ ಬೇರೆ ಬೇರೆ ಅಲ್ಲವಾದರೂ ಅವುಗಳ ಪರಿಯೇ ಬೇರೆ ಬೇರೆ. ಸೃಷ್ಟಿಯನ್ನು ನೋಡುವ ದೃಷ್ಟಿಯೇ ಬೇರೆಯಾಗಲು ಆ ದೃಷ್ಟಿಗೆ ಕಾಣುವ ಸೃಷ್ಟಿಯೇ ಬೇರೆಯಾಗಿಠುವಂತೆ ತೋರುವುದರಲ್ಲಿ ಅರಿದೇನು ?

ಆರುಣೋದಯಕ್ಕೆ ಕತ್ತಲೆಹರಿದು, ಬೆಳಕು ಪಸರಿಸಿದಂತೆ
ಸಮ್ಯಕ್ ಜ್ಞಾನೋದಯವಾಗಿ,
ಆಜ್ಞಾನಬೀಜ ಮಲಸಂಸಾರ ತೊಲಗಿ ಪರಮಾತ್ಮ-
ತಾನೆಂದರಿದು
ಆ ಅರಿದರಿವು ಕರಿಗೊಂಡು ಪರಶಿವನೊಡನೆ
ಸುಮಭಾವಿಯಾದಾತನೇ ಮುಕ್ತ ನಯ್ಯಾ
ನಿಜಗುರು ಸ್ವತಂತ್ರ ಸಿದ್ದಲಿಂಗೇಶ್ವರಾ.

ಅದೇ ಮಾತನ್ನು ಬೇರೊಂದು ಬಗೆಯಲ್ಲಿ ಹೇಳಬಹುದು. ಬೆಳಗು ಕತ್ತಲೆಯ ನುಂಗಿದಂತೆ ಆಯಿತೆನ್ನಬಹುದು, ಒಳಗೆ ನಾನೊಬ್ಬನೇ ಉಳಿದೆನೆನ್ನಬಹುದು; ಕಾಂಬ ಕತ್ತಲೆಯ ಕಳೆದುಳಿದು ನಿಮಗಾನು ಗುರಿಯಾದೆ ಎನ್ನಲೂ ಬಹುದು. ಆತನ ಕಣ್ಣಿಗೆ ಮನನೆಲ್ಲ ನೀವೇ-ಯೆಂದು ತೋರುವದು. ವನದೊಳಗಿಣ ದೇವತರುವೆಲ್ಲ ನೀನೇ-ಎಂದು ಗೋಚರ- ವಾಗುವದು. ತರುವಿನೊಳಗಾಡುವ ಖಗಮೃಗವೆಲ್ಲ ನೀವೇ-ಎಂದು ಮನವರಿಕೆಯಾಗುವದು. ಚೆನ್ನ ಮಲ್ಲಿಕಾರ್ಜುನನೇ ಸರ್ವಭರಿತನಾಗಿ ಎನಗೆ…… ಮುಖದೋರುತ್ತಿರುವನೆಂಬ ಪ್ರಜ್ಞೆಯು ಅಚ್ಚಳಿಯದೆ ನಿಂತುಬಿಡುವದು.

ಆ ಮಹಾ ಅವಸ್ಥೆ ಬಂದಾಗ ಬರಲಿ , ಮನವು ಮಹದಲ್ಲಿ ನಿಲ್ಲುವ ಮುಕ್ತಾವಸ್ಥೆ ಬರುವುದಕ್ಕೆ ಕಾಲಾವಧಿ ಬೇಕಾದೀತು, ಬೇಕಾಗಲಿ. ಮಾಯಾ ಪ್ರಪಂಚಿಯ ಮನಸ್ಸು ಬಹಿರ್ಮುಖಿಯಾಗಿರುತ್ತದೆ ಅವಿರಳ ಜ್ಞಾನಿಯ ಮನಸ್ಸು ಅಂತರ್ಮುಖಿ- ಯಾಗಿರುತ್ತದೆ. ಮನಸ್ಸು ಒಳಮುಖಿಯಾವುದಕ್ಕೆ ಇಂದ್ರಿಯಗಳಲ್ಲಿ ವಿಕಾರಗೊಳ್ಳುವ ಮನವನ್ನು ಸೆಳೆದು ನಿಲ್ಲಬೇಕು; ಅವನೇ ಸುಖಿ. ಇಂದ್ರಿಯಗಳ ಇಚ್ಛೆಯಲ್ಲಿ ಕೀಳುಮನಗೊಂಡು ನಿಂತವನು ದುಃಖಿ. ಸುಖಬೇಕೆಂದರೆ ದುಃಖವೂ ಬರತಕ್ಯುದೇ. ದುಃಖವಿಲ್ಲದ ಸುಖಸಾಧ್ಯವಿಲ್ಲ. ಆದಕಾರಣ ಮನವನ್ನು ಮಹದಲ್ಲಿ ನಿಲ್ಲಿಸುವವನೇ ಮುಕ್ತನು.

ನಿನ್ನರಿಕೆಯ ನರಕವೇ ಮೋಕ್ಷವಯ್ಯ.
ನಿನ್ನನರಿಯರ ಮುಕ್ತಿಯೇ ನರಕ ಕಂಡಯ್ಯ.
ನೀನೊಲಿದ ಸುಖವೇ ದುಃಖ ಕಂಡಯ್ಯ.
ನೀನೊಲಿದ ದುಃಖವೇ ಪರಮಸುಖ ಕಂಡಯ್ಯ.
ಚೆನ್ನಮಲ್ಲಿಕಾರ್ಜುನಯ್ಯ, ನೀ ಕಟ್ಟಿ ಕೆದಹಿದ
ಬಂಧನವೇ ನಿರ್ಬಂಧನವೆಂದಿಪ್ಪೆನು.

ಈ ದಾರಿಯನ್ನು ಬಿಟ್ಟುಕೊಟ್ಟು ಅನ್ನದಾನಮಾಡುವುದರಿಂದಾಗಲಿ, ಅರವಟ್ಟಿಗೆಯನ್ನಿಡುವುದರಿಂದಾಗಲಿ ಮೋಕ್ಷ ಸಿಗಲಾರದು. ಕೆರೆಕಟ್ಟಿಗೂ ಮುಕ್ತಿಗೂ ಏನೂ ಸಂಬಂಧವಿಲ್ಲ. ದೇಗುಲಗಳನ್ನು ನಿರ್ಮಿಸುವುದರಿಂದ ಯಾವ ಬಂಧನವೂ ಹರಿಯದು. ಅವುಗಳಿಂದ   ಬಹಳವಾದರೆ ಸ್ವರ್ಗಪ್ರಾಪ್ತಿಯಾಗಬಹುದು; ಭವ ತಪ್ಪಲರಿಯದು. ಅದರಂತೆ ನೀತಿ ಮಾರ್ಗವೂ ಮೋಕ್ಷದ ದಾರಿಯಲ್ಲ. ಇನ್ನುಳಿದ ಯಾವ ಕರ್ಮಕಾಂಡಯೋಗವೂ ಬಿಡುಗಡೆ ಸಾಧನವಾಗ- ಲರಿಯದು.

ಆನ್ನವನಿಕ್ಕಿ ನನ್ನಿಯ ನುಡಿದು,
ಆರವಟ್ಟಿಗೆಯನಿಕ್ಕಿ ಕೆರೆಯ ಕಟ್ಟಿಸಿದರೆ
ಮರಣದಿಂದ ಮೇಲೆ ಸ್ವರ್ಗವುಂಟಲ್ಲದೆ
ಶಿವನ ನಿಜವು ಸಾಧ್ಯವಾಗದು.
ಗುಹೇಶ್ವರನ ಅರಿದ ಶರಣಂಗೆ ಆವ ಫಲವೂ ಇಲ್ಲ.
+     +       +
ಕೆರೆದೇಗುಲಂಗಳೆಲ್ಲವೂ ಹಿಂದಣ ಅಡಿವಜ್ಜೆಯೊಳಗು.
ಕರ್ಮಕಾಂಡ ಯೋಗಂಗಳೆಲ್ಲವೂ ಭವದ ತೆಕ್ಕೆಗೆ ಒಳಗು.
ಹಿಂದಣಮುಂದಣ ಸಂದನಳಿದು ಗುಹೇಶ್ವರಲಿಂಗದಲ್ಲಿ
ಸಂದಿರಬೇಕು ಸಿದ್ದರಾಮಯ್ಯ.

ನಿಜವನರಿದ ಸಾಧನದಿಂದ ಲೋಕದ ಶಿಕ್ಷಣ ಮುಗಿಯುತ್ತದೆ. ಆಗ ಮಾತ್ರ ಹುಟ್ಟುವ ಕಾರಣವೂ ಇಲ್ಲ; ಸಾಯುವ ಕಾರಣವೂ ಇಲ್ಲ. ತೇರ್ಗಡೆ ಹೊಂದಿದ ವಿದ್ಯಾರ್ಥಿಯು ಅದೇ ವರ್ಗದಲ್ಲುಳಿದು ಕಲಿಯುವದೇನು ? ಕಲಿಯುವ ವಿಷಯವೇ ಇಲ್ಲದಾದರೆ ಈ ಭವಪಾಠಶಾಲೆಯ ದಾರಿಯೇ ಮುಗಿಯುವದು.

ಹುಟ್ಟುವಾತ ನಾನಲ್ಲಯ್ಯ ! ಹೊಂದುವಾತ ನಾನಲ್ಲಯ್ಯ !
ಏನೆಂಬೆನಯ್ಯ ! ಅದೆಂತೆಂಬೆನಯ್ಯ!
ನಿಜವನರಿದ ಬಳಿಕ ಮರಳಿ ಹುಟ್ಟಲುಂಟೆ ಗುಹೇಶ್ವರಾ?

ಆ ನಿಜವನರಿಯುವುದಕ್ಕೆ ದಾರಿ ಯಾವುದು? ಯೋಗವೆಂಥದು? ಧ್ಯಾನದ ರೀತಿಯೇನು ? ಸಾಧನೆಯ ಕ್ರಮವೆಲ್ಲಿದೆ? ಅದನ್ನು ಕೇಳಿ-

ಹೃದಯಕಮಲದಲ್ಲಿ ಲಕ್ಷ್ಯವಿಟ್ಟ ನೋಡುವ ದೇವರು ದೇವರಲ್ಲ.
ಭ್ರೂಮಧ್ಯದಲ್ಲಿ ಲಕ್ಷ್ಯವಿಟ್ಟು ನೋಡುವ ದೇವರು ದೇವರಲ್ಲ.
ನಾಶಿಕಾಗ್ರದಲ್ಲಿ ಲಕ್ಷ್ಯವಿಟ್ಟು ನೋಡುವ ದೇವರು ದೇವರಲ್ಲ.
ಅಖಂಡಗೋಳವಾಗಿಹ  ಲಿಂಗವು ತಾನೆಂದರಿದಡೆ
ತಾನೇ ದೇವ ಅಪ್ರಮಾಣ ಕೂಡಲಸಂಗಮದೇವಾ.

ಇದೆಲ್ಲ ಜೀವನಲೀಲೆಯಲ್ಲಿ ಅರಿದು ಆಚರಿಸುವುದಕ್ಕೆ ಬೇಕಾದ ಮುಕ್ತಿಯ ವಿವರವಾಯಿತು. ಆಟದಿಂದ ತೊಲಗುನ ಮೋಕ್ಷದ ವಿಚಾರವೇ    ಸಲ್ಲದ್ದು. ಆಟದಿಂದ ಕಡೆಗಾಗುವ ಮೋಕ್ಷ ಬೇಕಾದರೆ  ಶಿವನೇ ದಯಪಾಲಿಸುವನು. ಯಾವಾಗ? ಆಟ ಸಾಕೆಂದೆನಿಸಿದಾಗ.

ತನ್ನ ವಿನೋದಕ್ಕೆ ತಾನೇ ಸೃಷ್ಟಿಸಿದ ಸಕಲಪ್ರಪಂಚವನು.
ತನ್ನ ವಿನೋದಕ್ಕೆ ತಾನೇ ತಿರುಗಿಸಿದ ಅನಂತದುಃಖಗಳಲ್ಲಿ
ಇಂತೆನ್ನ ಚೆನ್ನಮಲ್ಲಿಕಾರ್ಜುನನೆಂಬ ಪರಶಿವನು
ಜಗದ್ವಿಲಾಸ ಸಾಕಾದರೆ ಮತ್ತೆ ಪರಿವನಾ ಮಾಯಾಪಾಶವನು.’’

ಜಗನ್ಮಾತೆಯು, ಕೇಳುವುದರಲ್ಲಿ ತಲ್ಲೀನರಾದ ಜೀವಜಂಗುಳಿಯನ್ನು ಕಂಡು ಹರ್ಷಿತಳಾಗಿ ಮುಗುಳು ನಗೆಸೂಸಿ ತನ್ನವೇ ಆದ ಒಂದೆರಡು ನುಡಿಗಳಿಂದ ಸಮಾರೋಪವನ್ನು ಮಾಡಿದ್ದು ಹೇಗೆಂದರೆ-

” ನನಗಾಗಿ ಯಾರು ಶುದ್ಧಾಂತಃಕರಣದಿಂದ ಕೆಲಸ ಮಾಡುವರೋ ಅವರು ಧ್ಯಾನಕ್ಕೆಂದು ಕುಳಿತಿರದಿದ್ದರೂ, ಯಾವ ನಿರ್ದಿಷ್ಟಯೋಗ ಪದ್ದತಿ ಯನ್ನು ಅನುಸರಿಸುದಿದ್ಧರೂ ಕೇವಲ ಆ ಕೆಲಸದ ಮೂಲಕವೇ ಸರಿಯಾದ ಪ್ರಜ್ಞೆಗೆ ಪಾತ್ರರಾಗುವರು. ಹೇಗೆ ಧ್ಯಾನ ಮಾಡಬೇಕೆಂಬುದನ್ನು ನಿಮಗೆ ಹೇಳುವುದು ಅಗತ್ಯವಿಲ್ಲ. ನಿಮ್ಮ ಕೆಲಸದಲ್ಲಿ ತೊಡಗಿ ಮತ್ತು ಸದಾ ನೀವು ನಿಷ್ಟೆಯಿಂದ ಕೂಡಿ ನನಗೆ ನಿಮ್ಮನ್ನು ತೆರೆದಿರಿಸಿದರೆ ಏನು ಅನಶ್ಯವಿದೆಯೋ ಅದು ತಾನಾಗಿಯೇ ಒದಗಿಬರುವದು.”

ಆಡೋಣ, ಸೊಗಸಾಗಿ ಆಡೋಣ. ಆಡಿ ನಲಿಯೋಣ. ಒಮ್ಮೆ ನಗುವುದು, ಇನ್ನೊಮ್ಮೆ ಅಳುವುದು ಇಲ್ಲದಿದ್ದರೆ ಆಟವೇ ಆಗಲಾರದು. ನಿಮಗೆ ಬಿಗಿಯೆನಿಸಿದಾಗ ನನ್ನನ್ನು ಕರೆಯಿರಿ. ನಾನು ನಿಮ್ಮ ತೊಂದರೆಗೆ ಪರಿಹಾರ ನೀಡುವೆನು. ಬಾಳಿ ಬದುಕು ಮಾಡುವ ಹೂಣಿಕೆ ತೊಡಿರಿ. ಬಾಳುವದಕ್ಯಾಗಿ ಬದುಕಿರಿ; ಬದುಕುವುವಕ್ಕಾಗಿ ಬಾಳಿರಿ! ನಿಮಗೆ ಸೋಲಿಲ್ಲ.
ಗೆಲುವು ನನ್ನ ಮಕ್ಕಳಿಗೆ ಹುಟ್ಟಾ ಕೊಡಮಾಡಿದ ಕೊಡುಗೆ. ಈ ನುಡಿ ಸುಳ್ಳಾಗಲಾರದು !!”

ಜೀವಜಂಗುಳಿಯು ಒಕ್ಕೊರಲಿನಿಂದ ಮಹಾಮಾತೆಯ ಜಯಘೋಷ ಮಾಡಿತು.

***

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಲಹಿದ ಸಸಿ
Next post ನಗೆ ಡಂಗುರ-೧೫೨

ಸಣ್ಣ ಕತೆ

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ಒಂಟಿ ತೆಪ್ಪ

    ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…

cheap jordans|wholesale air max|wholesale jordans|wholesale jewelry|wholesale jerseys