ಆರೋಪ – ೭

ಆರೋಪ – ೭

ಚಿತ್ರ: ಜೆರಾರ್‍ಡ್ ಗೆಲ್ಲಿಂಗರ್‍Kann

ಅಧ್ಯಾಯ ೧೩

ಶಾಮರಾಯರು ಟೆಂಟನ್ನು ಪ್ರವೇಶಿಸಿದಾಗ ಬಯಲಾಟದ ಯಾವುದೋ ರಸವತ್ತಾದ ಪ್ರಸಂಗ ನಡೆಯುತ್ತಿತ್ತು. ಭವ್ಯವಾದ ರಂಗಮಂಟಪ, ಡೈನಮೋ ಲೈಟು ಹಾಕಿ ಜಗಜಗಿಸುತ್ತಿತ್ತು. ಶಾಮರಾಯರು ಸುತ್ತಲೂ ನೋಡಿದರು. ಟೆಂಟು ಜನರಿಂದ ಭರ್ತಿಯಾಗಿರುವುದನ್ನು ಕಂಡು ಖುಷಿಯಾಯಿತು. ಅಧ್ಯಾಪಕ ಸ್ವಯಂಸೇವಕರೊಬ್ಬರು ಮುಂದೆ ಬಂದು ರಾಯರನ್ನು ಅವರಿಗೆಂದು ಕಾದಿರಿಸಿದ್ದ ಆಸನದಲ್ಲಿ ಕುಳ್ಳಿರಿಸಿದರು.

ಪಕ್ಕದಲ್ಲಿ ಕುಳಿತಿದ್ದ ಡಾಕ್ಟರರು ನಮಸ್ಕರಿಸಿದರು. ಶಾಮರಾಯರು ಅವರೊಂದಿಗೆ ಕುಶಲವಿಚಾರಿಸಿದರು. ನಂತರ ರಂಗಮಂಟಪದಲ್ಲಿ ನಡೆಯುತ್ತಿದ್ದ ಕಥಾಭಾಗದ ಲಕ್ಷ ಹರಿಸಿದರು. ಆದರೆ ಅವರ ಮನಸ್ಸು ಮಾತ್ರ ಅಲ್ಲಿರಲಿಲ್ಲ. ನಾಗೂರು ಹೈಸ್ಕೂಲಿನ ಸಹಾಯಾರ್ಥವಾಗಿ ಅವರು ಈ ಬಯಲಾಟ ಏರ್ಪಡಿಸಿದ್ದರು. ಜನರ ಪ್ರೋತ್ಸಾಹದಿಂದ ಅವರಿಗೆ ತೃಪ್ತಿಯಾಗಿತ್ತು. ನಾಲ್ಕಾರು ಸಾವಿರದಷ್ಟು ಹಣ ಬರಬಹುದು.

ಹೈಸ್ಕೂಲು ಅವರು ಕಂಡ ಕನಸಿನ ಬರೇ ಒಂದು ತುಂಡು. ಇದೇ ಮುಂದೆ ಕಾಲೇಜಾಗಿ ಬೆಳೆಯಬೇಕು. ಇಂತಹ ಅನೇಕ ಕನಸುಗಳಿವೆ ಅವರ ಮನಸ್ಸಿನಲ್ಲಿ.

ವಯಸ್ಕರ ಶಿಕ್ಷಣ ಶಿಬಿರಕ್ಕೆ ಹೋಗುತ್ತಿದ್ದವರನ್ನು ಕರೆದು ಅವರು ಹೇಳಿದ್ದರು, ಈ ಊರಿನ ಭವಿಷ್ಯದ ಬಗ್ಗೆ ನಾನು ಚಿಂತಿಸುತ್ತಿಲ್ಲವೆಂದುಕೊಂಡಿದ್ದೀರಾ? ಈ ಪಂಚಾಯತು, ಈ ಸೊಸೈಟಿ, ಈ ಹೈಸ್ಕೂಲು ಯಾತಕ್ಕೆ? ಇವುಗಳ ಉಪಯೋಗ ಪಡೆಯುವರು ನಿಮ್ಮ ಮಕ್ಕಳು- ನನ್ನ ಮಕ್ಕಳಲ್ಲ. ಇನ್ನು ನಿಮ್ಮ ಶಿಕ್ಷಣದ ವಿಷಯ : ಈ ಶಿಬಿರದಲ್ಲಿ ನಡೆಯುತ್ತಿರುವುದೇನೆಂದು ನನಗೆ ಗೊತ್ತಿದೆ. ಸತ್ಯಹೇಳಿ, ಈ ಶಿಬಿರದಿಂದ ನಿಮ್ಮ ಜೀವನಕ್ಕೆ ಏನಾದರೂ ಉಪಯೋಗವಿದೆಯೆಂದು ನಿಮಗೆ ಅನಿಸುತ್ತಿದೆಯೇ? ಈ ರಾಜಶೇಖರ ಎಂಬಾತ ಯಾರು? ಬಯಲು ಸೀಮೆಯ ಮನುಷ್ಯ ಇಲ್ಲಿ ಯಾಕೆ ಬಂದಿದ್ದಾನೆ? ನಿಮ್ಮ ಉದ್ದಾರ ಮಾಡುವುದಕ್ಕೆಂದು ನಂಬಿದ್ದೀರಾ? ಆತ ಇಂದು ಇದ್ದು ನಾಳೆ ಹೊರಟು ಹೋಗುವವ. ಈ ಊರಲ್ಲಿ ಉಳಿಯುವವರು ನಾವು.

ಬೀಡಿ ಕಾರ್ಮಿಕರು ತಿರುಗಿ ಹೇಳಿದರು : ಈ ಊರಲ್ಲಿ ಯಾರಿಗೆ ಆಪತ್ತು ಬಂದರೂ ನನಗೆ ಬಂದಹಾಗೆಯೇ, ನೀವು ಮುಷ್ಕರ ಹೂಡಿದ, ಕೈಗೆ ಬರುವ ಕೂಲಿ ತಪ್ಪಿತು. ಆಗ ನಿಮ್ಮ ಯೋಗಕ್ಷೇಮ ನೋಡಿಕೊಂಡವರು ಪರವೂರವರಲ್ಲ. ಇದೇ ಊರವರು, ಅವರ ಔದಾರ್ಯದಿಂದ ನೀವು ಬದುಕಿದಿರಿ. ನಾನನ್ನುವುದನ್ನು ಕೇಳಿ, ನಿಮ್ಮ ನಿಮ್ಮ ಕೆಲಸಗಳಿಗೆ ಹಿಂತಿರುಗಿ, ನಿಮ್ಮ ಮಕ್ಕಳು ಮರಿಗಳ ವಿದ್ಯಾಭ್ಯಾಸದ ಬಗ್ಗೆ ಚಿಂತಿಸಿರಿ.

ತಮ್ಮ ಆಪತ್ಕಾಲ ನಿಧಿಗೆ ಹಿಂದೆ ಮುಂದೆ ನೋಡದೆ ನೂರು ರೂಪಾಯಿ ಚಂದಾ ನೀಡಿದ್ದ ರಾಯರ ಎದುರು ಅವರು ತಲೆತಗ್ಗಿಸಿದರು. ಮಾತು ನಾಟಿತ್ತು. ಮರುದಿನ ಶಿಬಿರ ಮುಚ್ಚಿತು. ಇನ್ನು ಮುಂದೆ ಇಂತಹ ಸಂಗತಿಗಳಿಗೆ ಎಡೆಯೇ ಕೊಡಬಾರದು ಎಂದು ರಾಯರು ನಿರ್ಧರಿಸಿದರು.

ಮಧ್ಯರಾತ್ರಿಯ ಸುಮಾರಿಗೆ ಹೆಡ್‌ಮಾಸ್ತರರು ಬಂದು ಅವರ ಕಿವಿಯಲ್ಲಿ ಕಲೆಕ್ಷನಿನ ವಿವರಗಳನ್ನು ಪಿಸುಗುಟ್ಟಿದರು.
“ನಾಳೆ ಮಾತಾಡೋಣ,” ಎಂದರು ಶಾಮರಾಯರು.
“ಹಣ?” ಹೆಡ್‌ಮಾಸ್ತರರು ತಮ್ಮ ಕೈಯಲ್ಲಿದ್ದ ಬ್ಯಾಗನ್ನು ತೋರಿಸುತ್ತ ಕೇಳಿದರು.
“ನಿಮ್ಮಲ್ಲೇ ಇರಲಿ.”
“ನಾಳೆ ಸಿಗುತ್ತೇನೆ,” ಎಂದು ಹೇಳಿ ಹೆಡ್ಮಾಸ್ತರರು ಹೊರಗೆ ಹೋದರು. ಒಂದು ಗಂಟೆಯ ಸುಮಾರಿಗೆ ರಾಯರೂ ಆಕಳಿಸುತ್ತ ಎದ್ದರು.
“ಹೊರಟಿರ?” ಎಂದರು ಡಾಕ್ಟರರು.
“ಹೂಂ, ಸ್ವಲ್ಪ ನಿದ್ದೆ ತೆಗಿಯಬೇಕು.”
ರಾಯರು ಹೊರಗೆ ಬಂದು ನೋಡಿದರು.
ಕಡಲೆ, ಸಿಗರೇಟು, ಸೋಡ ಮಾರುವವರು ಕುಳಿತಿದ್ದರು. ಪಕ್ಕದಲ್ಲಿ ಹೆಬ್ಬಾರರು ಒಂದು ಚಪ್ಪರ ಹಾಕಿ ಕಾಫಿ ಚಹಾ ವ್ಯಾಪಾರ ಇಟ್ಟಿದ್ದರು. ಹೆಬ್ಬಾರರಲ್ಲಿಗೆ ಹೋಗಿ, “ಹೇಗೆ ನಡೆದಿದೆ ವ್ಯಾಪಾರ?” ಎಂದು ವಿಚಾರಿಸಿದರು.
“ಸುಮಾರಾಗಿ ನಡೆದಿದೆ,” ಎಂದರು ಹೆದ್ದಾರರು.
ಒಂದು ಹತ್ತು ಮಂದಿ ಕುಳಿತು ಈರುಳ್ಳಿ ಭಜಿಯನ್ನು ಬಾಯಿಗೆ ಹಾಕಿ ಜಗಿಯುತ್ತ ಚಹಾಕ್ಕೆ ಕಾಯುತ್ತಿದ್ದರು.
“ಚಹಾ?” ಹೆಬ್ಬಾರರು ಕೇಳಿದರು.
“ಬೇಡ, ಮನೆಗೆ ಹೋಗುತ್ತಿದ್ದೇನೆ. ನಿದ್ದೆ ಮಾಡಬೇಕು.”
ಆಚೆಗೆ ನಿಲ್ಲಿಸಿದ್ದ ಜೀಪನ್ನು ಹತ್ತಿ ರಾಯರು ಹೊರಟು ಹೋದರು.
ಹೆಬ್ಬಾರರು ಅಂದುಕೊಂಡರು-ಈ ಮನುಷ್ಯ ಇಷ್ಟು ವರ್ಷಗಳಲ್ಲಿ ಒಂದೇ ಒಂದು ಬಾರಿ ಕೂಡ ತನ್ನಲ್ಲಿಂದ ಕಾಫಿಯೋ ಚಹಾವೋ ಕುಡಿದಿಲ್ಲವಲ್ಲ! ಎಂಥ ಮನುಷ್ಯ! ಎಂದು.

ಮರುದಿನ ಬೆಳಿಗ್ಗೆ ಕಣ್ಣೊರೆಸಿಕೊಳ್ಳುತ್ತ ಮನೆದಾರಿ ಹಿಡಿದವರಿಗೆ ಮಾತ್ರ ಜೊಂಪಿನಿಂದ ಬಡಿದೆಬ್ಬಿಸುವಂಥ ದೃಶ್ಯವೊಂದು ಕಾದಿತ್ತು. ರಾಯರ ಮನೆಗೆ ಹೋಗುವ ಮಾರ್ಗದ ತಿರುವೊಂದರಲ್ಲಿ ಜೀಪು ಮಾರ್ಗದಿಂದ ಸರಿದು ಕೆಳಗಿನ ಕಣಿವೆಯಲ್ಲಿ ಬಿದ್ದಿತ್ತು, ಬಿದ್ದ ಕೂಡಲೆ ಬೆಂಕಿ ಹತ್ತಿರಬೇಕು. ಜೀಪಿನ ಉಕ್ಕಿನ ಮೈ ಅಸ್ತಿಪಂಜರದಂತಾಗಿತ್ತು. ಅದರ ಕೆಳಗೆ ಅರ್ಧ ಕಮರಿದ ಹೆಣ ಶಾಮರಾಯರದೆಂದು ತಿಳಿಯಲು ಜನರಿಗೆ ಹೆಚ್ಚು ಸಮಯ ಬೇಕಾಗಲಿಲ್ಲ.

ಶಾಮರಾಯರು ಇನ್ನಿಲ್ಲ! ಜನರಿಗೆ ನಂಬುವುದೇ ಕಷ್ಟವಾಗಿತ್ತು. ದೊಡ್ಡ ಆಲದ ಮರದಂತೆ ಊರವರ ಮನಸ್ಸನ್ನು ಆಕ್ರಮಿಸಿಕೊಂಡಿದ್ದ ವ್ಯಕ್ತಿಗೆ ಇಂಥ ಮರಣವೆ ಎಂದುಕೊಂಡರು.

ಆದರೆ ಮುಂದೆ ನಡೆದುದು ಮಾತ್ರ ಭಯಂಕರವಾಗಿತ್ತು.

ಪೋಲೀಸು ಪಡೆಯೇ ನಾಗೂರಿನಲ್ಲಿ ಬಂದಿಳಿಯಿತು. ಅವರು ನೂರಾರು ಮಂದಿಯನ್ನು ಭೇಟಿಯಾಗಿ ವಿಚಿತ್ರವಾದ ಪ್ರಶ್ನೆಗಳನ್ನು ಕೇಳತೊಡಗಿದರು. ತಮಗೆ ಹಿಡಿಸದವರಿಗೆ ಸಾರ್ವಜನಿಕವಾಗಿ ಥಳಿಸಿದರು. ಹೋಟೆಲುಗಳಲ್ಲಿ ಫ್ರೀಯಾಗಿ ಕಾಫಿ ತಿಂಡಿ ತಿಂದರು. ಜನರಿಗೆ ಇದೊಂದೂ ಯಾಕೆಂದು ಅರ್ಥವಾಗಲಿಲ್ಲ.

ಹೆಬ್ಬಾರರು ಒಂದು ದಿನ ಗಲ್ಲಾದಲ್ಲಿ ಕುಳಿತು ತೂಕಡಿಸುತ್ತಿದ್ದಾಗ ಇಬ್ಬರು ಧಡಿಯರು ಬಂದರು. “ಹೆಬ್ಬಾರರೆಂದರೆ ನೀವೇನು?” ಒಬ್ಬ ಕೇಳಿದ.

“ಹೌದು”
“ನಿಂತುಕೊಂಡು ಉತ್ತರ ಹೇಳಿ!”
ಸಬ್ ಇನ್ಸ್‌ಪೆಕ್ಟರ್‌ ಗದರಿಸಿದ.
ಹೆಬ್ಬಾರರು ಎದ್ದು ನಿಂತರು.
“ಆಟದ ಟೆಂಟಿನ ಹೊರಗೆ ನಿಮ್ಮದು ಹೋಟೆಲಿತ್ತೆ?”
“ಇತ್ತು”
“ರಾಯರು ಬಂದಿದ್ದರೆ?”
“ಬಂದಿದ್ದರು.”
“ಎಷ್ಟು ಗಂಟೆಗೆ?”
“ಮಧ್ಯ ರಾತ್ರಿ ಕಳೆದಿರಬಹುದು.”
“ನೀವವರಿಗೆ ಏನು ಕೊಟ್ಟಿರಿ?”
“ಏನೂ ಕೊಡಲಿಲ್ಲ.”
“ಹಾಗಿದ್ದರೆ ಅವರು ಬಂದುದು ಯಾಕೆ?
“ಸುಮ್ಮಗೆ, ವ್ಯಾಪಾರ ಹೇಗೆ ನಡೆಯುತ್ತಿದೆ ಎಂದು ವಿಚಾರಿಸಿದರು.”
“ನೀವೇನಂದಿರಿ?” ಸುಮಾರಾಗಿ ಅಂದೆ.”
“ಇನ್ನೇನಾದರೂ ಹೇಳಿದರೆ?”
“ಮನೆಗೆ ಹೊರಟಿದ್ದೇನೆ. ನಿದ್ದೆ ಮಾಡಬೇಕು ಅಂದರು.”
“ಅವರ ಜತೆ ಯಾರಾದರೂ ಇದ್ದರೆ?”
“ಇರಲಿಲ್ಲ.”
“ನೀವು ಮಾತಾಡುತ್ತಿರುವಾಗ ಯಾರಾದರೂ ಇದ್ದರೆ?”
“ಕೆಲವು ಮಂದಿ ಇದ್ದರು?”
“ಯಾರು ಯಾರು ಇದ್ದರು?”
“ಈಗ ನೆನಪಿಲ್ಲ.”
“ನೆನಪು ಮಾಡಿ!”
ಹೆಬ್ಬಾರರ ಮುಖ ಕಳೆಗುಂದಿತು.
“ನೀವು ಸ್ಟೇಷನಿಗೆ ಬರಬೇಕಾಗುತ್ತದೆ.”
ಹೆಬ್ಬಾರರನ್ನು ಪೊಲೀಸರು ಸ್ಟೇಷನಿಗೆ ಕರೆದುಕೊಂಡು ಹೋದ ಸುದ್ದಿ ಪೇಟೆಯಲ್ಲೆಲ್ಲ ಕಿಚ್ಚಿನಂತೆ ಹಬ್ಬಿತು. ಸಂಜೆ ಅವರು ಮರಳಿದಾಗ ಎಲ್ಲರೂ ಅವರನ್ನು ಯಾಕೆ ಏನೆಂದು ವಿಚಾರಿಸುವವರೆ. ಹೆಬ್ಬಾರರು ಯಾವುದಕ್ಕೂ ಸರಿಯಾಗಿ ಉತ್ತರಿಸಲಿಲ್ಲ. ಇಡೀ ಗ್ರಾಮದ ವಿಷಾದ ಮತ್ತು ಭಯಗಳ ಪ್ರತೀಕದಂತಿತ್ತು ಅವರ ಮೌನ.
*****

ಅಧ್ಯಾಯ ೧೪

ಅರವಿಂದ ಯಾವುದೋ ಒಂದು ಪುಸ್ತಕವನ್ನು ಕೈಗೆತ್ತಿಕೊಂಡು ಅದರ ಧೂಳು ಕೊಡವಿದ. ಯಾವ ಪುಸ್ತಕವೆಂದು ತೆರೆದು ನೋಡಿದ. ಲ್ಯಾಟಿನ್ ಅಮೇರಿಕೆಯ ಇತಿಹಾಸ, ಯಾವುದೋ ಸೆಕೆಂಡ್ ಹ್ಯಾಂಡ್ ಪುಸ್ತಕದಂಗಡಿಯಿಂದ ಕೊಂಡು ಕೊಂಡುದು, ಹೊರ ಮೈ ಹರಿದಿತ್ತು. ಕಾಗದಗಳು ಹಳದಿಯಾಗಿದ್ದವು. ಪುಸ್ತಕದ ಮೊದಲನೆ ಒಡೆಯ ಎನ್. ಎನ್. ರಾವ್ ಎಂಬಾತ. ಅಲ್ಲಲ್ಲಿ ಪರಿಮಳ, ಪ್ರಮೀಳ ಎಂದು ತನ್ನದೇ ಕೈಬರೆಹದಲ್ಲಿ ಬರೆದಿದ್ದ. ಇದು ಒಂದೇ ಹೆಂಗಸಿನ ಹೆಸರುಗಳಾಗಿರಬಹುದು. ರಾವಿನ ಅಭಿರುಚಿಯ ಪ್ರತೀಕದಂತೆ ಪ್ರತಿಯೊಂದು ಅಧ್ಯಾಯದ ಕೆಳಗೂ ಸ್ಥಳವಿದ್ದಲ್ಲಿ ಸ್ತ್ರೀ ಜನನಾಂಗದ ಚಿತ್ರಗಳು-ಆತನ ಕಲ್ಪನೆಗೆ ಎಟುಕಿದಂತೆ.

ಮೈಸೂರಲ್ಲಿದ್ದಾಗ ಅರವಿಂದನಿಗೆ ಸೆಕೆಂಡ್ ಹ್ಯಾಂಡ್ ಪುಸ್ತಕದಂಗಡಿಗಳು ಪ್ರಿಯವಾದ ತಾಣಗಳಾಗಿದ್ದುವು. ಸೆಕೆಂಡ್ ಹ್ಯಾಂಡ್ ಪುಸ್ತಕಗಳೆಂದರೆ ಬಹಳ ವಿಚಿತ್ರವಾದ ವಸ್ತುಗಳು. ಹಲವು ಮಳೆ ಬಿಸಿಲುಗಳನ್ನು ಕಂಡು ವಯಸ್ಸಿಗೆ ಬಂದುವು. ಜನ ಯಾಕೆ ಇವುಗಳನ್ನು ಕೊಂಡರು, ಯಾಕೆ ಮಾರಿವರು ಎಂಬುದೇ ಅರ್ಥವಾಗಿಲ್ಲದಂತಹ ವಿಚಿತ್ರ ವಿಷಯಗಳಿಗೆ ಸಂಬಂಧಿಸಿದುವು. ಇವುಗಳ ರಾಸಿಯ ಮಧ್ಯೆ ಇತಿಹಾಸಕ್ಕೆ ಸಂಬಂಧಿಸಿದ ಪುಸ್ತಕಗಳಿಗಾಗಿ ಹುಡುಕುತ್ತ ಕುಳಿತು ಕೊಳ್ಳುತ್ತಿದ್ದ.
ಹಾಗೆ ಸಂಗ್ರಹಿಸಿದ ಪುಸ್ತಕಗಳು ಮಾತ್ರ ಈಗ ನಂಟು. ಅಗತ್ಯವಿದ್ದರೆ ಮಾತ್ರ ಹೊರಗೆ ಹೋಗುತ್ತಿದ್ದ. ಉಳಿದ ಸಮಯ ಕೋಣೆಯೊಳಗೇ ಉಳಿದು ಬಿಡುತ್ತಿದ್ದ. ಅವನು ಬಯಲಾಟಕ್ಕೂ ಹೋಗಲಿಲ್ಲ. ಶಾಮರಾಯರ ಅಪ ಘಾತದ ದೃಶ್ಯವನ್ನು ನೋಡುವುದಕ್ಕೂ ಹೋಗಲಿಲ್ಲ. ನಂತರ ನಡೆದ ಪೋಲೀಸ್ ದೌರ್ಜನ್ಯವನ್ನು ದೂರದಿಂದಲೆ ಗಮನಿಸಿದ್ದ. ಹೆಬ್ಬಾರರ ಅಪಮಾನ ಹೊತ್ತ ಮುಖವನ್ನು ನೋಡಿದ್ದ. ಎಲ್ಲವನ್ನೂ ನೋಡುತ್ತಿದ್ದಂತೆ ಬದುಕಿನ ಮೇಲಿನ ವಿಶ್ವಾಸ ಕುಂದುತ್ತಲೇ ಹೋಗುತ್ತಿತ್ತು.

ಮಧ್ಯಾಹ್ನ ಪೋಸ್ಟಾಫೀಸಿನಲ್ಲಿ ಚಟುವಟಿಕೆಯ ಸಮಯ. ಪೋಸ್ಟು ಬರುವುದೂ ಹೋಗುವುದೂ ಅದೇ ಸಮಯದಲ್ಲಿ, ಪತ್ರಗಳನ್ನು ಕಾಯುವ ಮಂದಿ ಎಡತಾಕುವುದೂ ಆಗಲೇ. ಅರವಿಂದ ಪೋಸ್ಟನ್ನು ಕಾಯುವ ಪರಿಪಾಠಿಯನ್ನು ಎಂದೋ ಕೈಬಿಟ್ಟಿದ್ದ. ನಾಗೂರಿಗೆ ಬಂದ ಹೊಸತಿನಲ್ಲಿ ಅನೇಕ ಮಿತ್ರರಿಗೆ ತನ್ನ ಹೊಸ ವಿಳಾಸವನ್ನು ತಿಳಿಸಿ ಪತ್ರ ಬರೆದಿದ್ದ. ಅದಕ್ಕೆ ಉತ್ತರಿಸಿದವನು ಜೋಷಿಯೊಬ್ಬನೇ. ಉಳಿದವರೆಲ್ಲ ಬಹುಶಃ ತಂತಮ್ಮ ಹೊಸ ಉದ್ಯೋಗಗಳಲ್ಲಿ ನಿರತರಾಗಿದ್ದಿರಬೇಕು. ರಿಸರ್ಚ್ ಮಾಡುತ್ತಿದ್ದೇನೆಂದು ಬರೆದಿದ್ದ ಜೋಷಿ. ಅವನ ಅದೃಷ್ಟ.

ಶಾಮರಾಯರನ್ನು ಮೊದಲು ಭೇಟಿಮಾಡಲು ಹೋಗಿದ್ದಾಗ ಅಲ್ಲಿ ಯಾರೋ ಒಬ್ಬರು ತನಗೆ ಹೇಳಿದ ಮಾತು ನೆನಪಾಯಿತು. ಅಧ್ಯಾಪಕನಾಗಿದ್ದು ಕೊಂಡು ಇಲ್ಲೇ ಹೊಲ ಮನೆಮಾಡಿಕೊಂಡಿರಿ ಎಂದು ಉಪದೇಶಿಸಿದ್ದರು ಅವರು. ತಾನು ಇಲ್ಲಿದ್ದರೂ ಇಲ್ಲಿನವನಾಗಲಿಲ್ಲ. ಈ ಊರನ್ನು ಬಿಡಲೂ ಇಲ್ಲ. ಉದಾಸೀನ ಯೋಗವೆಂದರೆ ಇದೇ ಏನು ಎಂದುಕೊಂಡ.

“ಸಾರ್!”
ಅರವಿಂದ ತಲೆಯೆತ್ತಿ ನೋಡಿದ. ಪೋಸ್ಟ್ ಮಾಸ್ಟರ್ ಪೈ.
“ಏನೋ ಗಂಭೀರವಾಗಿ ಓದುತ್ತಿದ್ದೀರಿ!”
ಪೈಯ ಕೈಯಲ್ಲಿ ಒಂದು ಲಕೋಟೆಯಿತ್ತು. “ನಿಮಗೆ,” ಎಂದು ನೀಡಿದರು.
“ಥ್ಯಾಂಕ್ಸ್,”
ಫ್ರಾಂಕಿಂಗ್ ಮೆಶೀನ್‌ನ ಮುದ್ರೆ ಹಾಕಿದ ಪತ್ರ, ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ಹಿಸ್ಟಾರಿಕಲ್ ರಿಸರ್ಚ್ ಹೈದರಾಬಾದ್‌ನಿಂದ ಬಂದಿತ್ತು. ಒಡೆದು ನೋಡಿದ, ಪಿ‌ಎಚ್. ಡಿ.ಗೆ ಸೀಟು ಕೋರಿ ಬರೆದ ಅರ್ಜಿಗೆ ಉತ್ತರವಾಗಿತ್ತು.
ಇಂಟರ್ವ್ಯೂಗೆ ಬರಲು ಕರೆ!

ತಾನು ಅರ್ಜಿ ಹಾಕಿದ್ದಾದರೂ ಯಾವಾಗ? ಸರಿಯಾಗಿ ನೆನಪಿಲ್ಲ. ಅನೇಕ ಕಡೆಗಳಿಗೆ ಅರ್ಜಿಗಳನ್ನು ಕಳಿಸಿದ್ದ. ಹೈದರಾಬಾದ್ ಸಂಸ್ಥೆಯ ಬಗ್ಗೆ ಮೈಸೂರಲ್ಲಿ ಯಾರೋ ಹೇಳಿದ್ದರು. ವಿಳಾಸವೂ ಸರಿಯಾಗಿ ಗೊತ್ತಿರಲಿಲ್ಲ. ಅಂದಾಜಿನ ಮೇಲೆ ಬರೆದು ಹಾಕಿದ್ದ.

ಅರವಿಂದ ಪತ್ರವನ್ನು ಇನ್ನೊಮ್ಮೆ ಓದಿ ನೋಡಿದೆ. ಒಂದು ವಾರದ ಬಿಡವಿತ್ತು.

ಮನಸ್ಸು ತಿಳಿಯದೆಯೆ ಉತ್ಸಾಹಗೊಂಡಿತು. ಊಟಕ್ಕೆ ಹೋದ. ಹೆಬ್ಬಾರರಿಂದ ಇನ್ನಷ್ಟು ಅನ್ನ ಹಾಕಿಸಿಕೊಂಡು ಊಟಮಾಡಿದ. ಪೈಯ ಸ್ಟೋರಿಗೆ ಹೋಗಿ ಸಿಗರೇಟು ಕೊಂಡು ಕೊಂಡ.

“ನನ್ನ ಪೋಸ್ಟ್ ಆಫೀಸ್ ಸೇವಿಂಗ್ಸ್ ಅಕೌಂಟ್ ನಾಳೆ ಕ್ಲೋಸ್ ಮಾಡುವುದಕ್ಕಾಗುತ್ತದೆಯೇ?” ಎಂದು ಪೈಗಳನ್ನು ವಿಚಾರಿಸಿದ.
ಪೈಗಳಿಗೆ ಅಚ್ಚರಿಯಾಯಿತು.
“ನಾಳೆಯೆ?” ಎಂದರು. ಅರವಿಂದ ಇಂಟರ್ವ್ಯೂ ಸಂಗತಿ ಹೇಳಿದ.
“ಕ್ಲೋಸ್ ಮಾಡಬೇಕೇ?” ಎಂದರು ಪೈ.
“ಹೌದು.”
“ಅಂದರೆ ನೀವು ಮತ್ತೆ ಈ ಕಡೆ ಬರೋದಿಲ್ವ?”
“ಗೊತ್ತಿಲ್ಲ. ಕ್ಲೋಸ್ ಮಾಡಿಬಿಡಿ.”
“ನಾಳೆ ಅರ್ಜಿ ಬರೆದುಕೊಡಿ, ನಾಡಿದ್ದು ಹಣಸಿಗುವ ಹಾಗೆ ಮಾಡುತ್ತೇನೆ.”
ಮರಳುವಾಗ ಅರವಿಂದನ ಮನಸ್ಸು ಒಂದು ನಿರ್ಧಾರಕ್ಕೆ ಬಂದಿತ್ತು. ಸೀಟು ಸಿಗಲಿ, ಸಿಗದಿರಲಿ, ನಾಗೂರನ್ನಂತೂ ಬಿಡುವುದೇ ಸರಿ, ನಾಗೂರಿನೊಂದಿಗೆ ಅದಕ್ಕೆ ಸಂಬಂಧಿಸಿದ ನೆನಪುಗಳನ್ನೂ.

ಪುಸ್ತಕಗಳನ್ನೆಲ್ಲ ವೆಂಕಟರಮಣ ಮೂರ್ತಿಗೆ ದಾನ ಮಾಡಿದ.

“ಎಲ್ಲವನ್ನೂ ಕೊಂಡು ಹೋಗು ಎನ್ನುತ್ತೀರ?” ಮೂರ್ತಿ ತುಸು ಆಶ್ಚರ್ಯದಿಂದ ಕೇಳಿದರು.
“ನೀವು ಫೈನಲ್ ಪರೀಕ್ಷೆಗೆ ಕೂಡುವವರು, ಅನುಕೂಲವಾಗುತ್ತದೆ.”
“ಆದರೂ….” ಎಂದು ಸಂಶಯದಿಂದಲೇ ಮೂರ್ತಿ ಪುಸ್ತಕಗಳನ್ನು ಕಟ್ಟಿದರು.
ಶಾಲೆಗೆ ರಾಜಿನಾಮೆ ಕೊಟ್ಟಾಗ ಹೆಡ್‌ಮಾಸ್ಟರ್ ಕಮ್ತಿ ಯಾವ ಆಶ್ಚರ್ಯವನ್ನೂ ತೋರಿಸಲಿಲ್ಲ. ಅವರೀಗ ತಮ್ಮದೇ ಸಮಸ್ಯೆಗಳಲ್ಲಿ ಮುಳುಗಿದ್ದರು.
“ರಜೆಯ ಸಂಬಳ ಸಿಗುವುದಿಲ್ಲ,” ಎಂದರು.

“ಬೇಡ,” ಎಂದ ಅರವಿಂದ. ಅಲ್ಲಿಗೆ ಶಾಲೆಯ ಋಣ ಹರಿಯಿತು. ಇನ್ನೊಂದೆರಡು ವಾರಗಳಲ್ಲಿ ಶಾಲೆಯ ಹೊಸ ವರ್ಷ ಮೊದಲಾಗುತ್ತದೆ. ಮತ್ತೆ ಮಕ್ಕಳು, ಅಧ್ಯಾಪಕರು ಬಂದು ಸೇರುತ್ತಾರೆ. ತಾನು ಮಾತ್ರ ಇರುವುದಿಲ್ಲ. ಈ ಊರು, ಈ ಶಾಲೆ, ಈ ಬದುಕು ಹೀಗೆಯೇ ಸಾಗುತ್ತಿರುತ್ತದೆ.

ಶಾಲೆಯಿಂದ ಮರಳಬೇಕಾದರೆ ಮರೀನಾ ಸ್ಲೋಗನುಗಳನ್ನು ಬರೆದು ನೋಡಿದ. ಅವನ್ನೆಲ್ಲ ಯಾರೋ ಉಜ್ಜಿದ್ದರಿಂದ ಗೋಡೆಯಲ್ಲಿ ಅಷ್ಟಗಲಕ್ಕೆ ಬಣ್ಣ ಹರಡಿತ್ತು, ಇನ್ನೊಮ್ಮೆ ಸುಣ್ಣ ಬಳಿಯುವ ತನಕ ಅದು ಮಾಯುವುದಿಲ್ಲ.

ಶಾಲೆಯ ಅಂಗಳದಲ್ಲಿದ್ದ ಚಿಕ್ಕು ಗಿಡದಲ್ಲಿ ಕಾಯಿಗಳು ಮಾಗಿದ್ದುವು. ಬೀಡಿ ಡಿಪೊಗೆ ಹೋಗಿ ಲಕ್ಷ್ಮಿಯನ್ನು ಬರಹೇಳಿದ. “ಹೋಗುತ್ತೀರಂತೆ?” ಎಂದು ಕೇಳಿದಳು ಮೋರೆ ಸಣ್ಣದು ಮಾಡುತ್ತ, ಅರವಿಂದ ತುಸು ಚಕಿತನಾಗಿ ಅವಳತ್ತ ನೋಡಿದ.
“ಯಾರು ಹೇಳಿದರು?”
“ಎಲ್ಲರೂ ಹೇಳುತ್ತಿದ್ದಾರೆ.”
“ಹೌದು, ಆದಕ್ಕೆಂದೇ ನಿನ್ನನ್ನು ಕರೆದದ್ದು.”
ರೂಮಿನಲ್ಲಿದ್ದ ಪಾತ್ರೆ ಪಗಡೆ ಸ್ಟವ್‌ಗಳನ್ನು ತೆಗೆದುಕೊಳ್ಳುವಂತೆ ಅವಳಿಗೆ ಹೇಳಿದ.
“ಇನ್ನೆಂದೂ ಈ ಕಡೆ ಬರುವುದಿಲ್ಲವೆ?” ಅವಳು ಆತಂಕದಿಂದ ಕೇಳಿದಳು.
“ಇಲ್ಲ,” ಎಂದ.
ನಾಗೂರಿನಿಂದ ಹೊರಟಾಗ ಅವನ ಬಳಿ ಇದ್ದುದು ಒಂದು ಸೂಟ್ ಕೇಸ್ ಮಾತ್ರ. ಅದರಲ್ಲಿ ಅತ್ಯಗತ್ಯದ ಬಟ್ಟೆಬರೆಗಳನ್ನು ಕಾಗದ ಪತ್ರಗಳನ್ನು ತುಂಬಿಕೊಂಡಿದ್ದ.
ಧೂಳೆಬ್ಬಿಸುತ್ತ ಬಸ್ಸು ಬಂದಾಗ ಅವನನ್ನು ಕಳಿಸಿಕೊಡುವುದಕ್ಕೆ ಯಾರೂ ಇರಲಿಲ್ಲ. ಆಗಮನದಂತೆ ನಿರ್ಗಮನವೂ ಒಂಟಿಯಾಗಿತ್ತು,
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಧೋಗತಿಗೆ ಕನ್ನಡ
Next post ಹೃದಯ ಒಲವಿಗೆ ಅಲ್ಲದಿನ್ನೇತಕೆ?

ಸಣ್ಣ ಕತೆ

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

cheap jordans|wholesale air max|wholesale jordans|wholesale jewelry|wholesale jerseys