ಹೃದಯ ಒಲವಿಗೆ ಅಲ್ಲದಿನ್ನೇತಕೆ?
ಬಾನಿನಲಿ ತಾರೆಗಳ ಮಾಲೆಯೇಕೆ?

ಆ ಮೂರು ಮೋಡಗಳ ನಡುವೆ ಚೆಂಡಿನಹಾಗೆ
ಕೇಸರಿಯ ಕಿರಣಗಳ ಮಂಜಮೇಲೆ
ಹರಹುತ್ತ ಏರುತಿಹ ಚಂದಿರನ ಬೆಳ್ಳಿಯಲಿ
ನೀ ಬಾರದಿರೆ ನನ್ನ ಹಾಡಿದೇಕೆ?

ಓ ನನ್ನ ಉಷೆ, ನಿನ್ನ ‘ಓ’ ದನಿಯೆ ಕೇಳದಿದೆ,
ಎನಿತೆನಿತು ಕೂಗಿದರು ಬಾರೆಯೇಕೆ?
ನನ್ನ ನಿನ್ನೊಲವಿಂದ ಒಂದೆ ಬಾಳಿನ ಚಂದ
ಜಗಕೆ ತೋರುವ ಎನಲು, ಮುನಿವುದೇಕೆ?

ಮೋಡಗಳ ಮೈಯಿಳಿದು, ಮಳೆಯಿಳಿದು, ಮುಗಿದಾಗ,
ಹೂಗಿರಣ ಅರಳುವುದು ಜಗದೊಳೇಕೆ?
ಎಲೆಯ ಕುಣಿತದ ತಾಳ, ಮಂಜು ಹನಿಗಳ ಮೇಳ,
ಗಾಳಿಯಿಂಪಿನ ಗೀತ ಸುಳಿವುದೇಕೆ?

ಜೀವನದ ನಗೆ ನೀನು, ನಗೆಯೊಳನಗೆ ನೀನು,
ನೀ ಬಾರದಿರೆ ಎಲ್ಲ ನಗೆಯಿದೇಕೆ?
ಕಲ್ಪನೆಯ ಬಿಸಿಯಲ್ಲಿ ಸುಳಿದೊಂದು ಕನಸಂತೆ
ನೀ ತೋರದಿರೆ ನನ್ನ ಬಾಳಿದೇಕೆ?
*****