ಚಿತ್ರ ಸೆಲೆ: ಡಾ| ವೀರೇಂದ್ರ ಹೆಗ್ಗಡೆ ಇನ್ಸಿಟೂಟ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್
ಚಿತ್ರ ಸೆಲೆ: ಡಾ| ವೀರೇಂದ್ರ ಹೆಗ್ಗಡೆ ಇನ್ಸಿಟೂಟ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್

ಮನೆಗಿಂತ ವಿಶಾಲವಾದ ಮನೆಯ ಕಂಪೌಂಡು. ಅಲ್ಲಿ ನೆರಳು ಚೆಲ್ಲುತ್ತಾ ಕವಲೊಡೆದ ಐದಾರು ಮರ. ಹತ್ತಾರು ಜಾತಿಯ ಗಿಡ, ನಿರಾಳ ಮಲಗಿದ ಕಲ್ಲುಬಂಡೆಗಳು, ಮನೆಯ ಪ್ರವೇಶದಲ್ಲಿ ಸ್ವಾಗತ ಕೋರುತ ನಿಂತ ಯಕ್ಷನ ಪ್ರತಿಮೆ. ಇದೆಲ್ಲವನ್ನು ನೋಡುತ್ತ ತುಸು ಕಣ್ಣರಳಿಸಿ ಕೊಂಡಿರುವಾಗಲೇ ಚಿದಾನಂದಮೂರ್ತಿಗಳ ಧ್ವನಿ ಕೇಳಿಸುತ್ತದೆ, ‘ಬನ್ನಿ ಬನ್ನಿ’.

ಒಂದೇ ಎರಕದಲ್ಲಿ ಅಚ್ಚುಹೊಯ್ದಂತೆ ಕಾಣುವ ಸಿಲಿಕಾನ್ ವ್ಯಾಯಾಲಿಯ ಮನೆ ಮಳಿಗೆಗಳನ್ನು ನೋಡಿ ಜಡ್ಡುಗಟ್ಟಿದ ಕಣ್ಣುಗಳಿಗೆ ಚಿದಾನಂದಮೂರ್ತಿ ಅವರ ಮನೆ- ಅಂಗಳ ತುಸು ಭಿನ್ನವಾಗಿ, ತಂಪಾಗಿ ಕಾಣತ್ತದೆ. ಅಂಗಳದಲ್ಲಿನ ಗೋಡೆಯ ಮೇಲೆ ಜೋತುಬಿದ್ದ ಗೀಜಗನ ಗೂಡು, ಒಂದು ಮೂಲೆಯಲ್ಲಿ ಮಲಗಿದ ರಾಗಿಕಲ್ಲು. ಅಲ್ಲೇ ಇನ್ನೊಂದು ಮೂಲೆಯಲ್ಲಿನ ಸೋರೆ ಬುರುಡೆ- ಇನ್ನೂ ಏನೇನಿದೆ ಎಂದು ಕಣ್ಣುಗಳು ಮೂಲೆಮೂಲೆಗಳನ್ನು ತಡಕುವಾಗ, ‘ನೋಟಕ್ಕೆ ನಾನು ಪೇಟೆಯವನಂತೆ ಕಾಣಿಸಬಹುದು. ಆದರೆ ಅಂತರಂಗದಲ್ಲಿ ಹಳ್ಳಿಯವನು’ ಎಂದು ಚಿದಾನಂದಮೂರ್ತಿ ಹೇಳುತ್ತಾರೆ. ಕರ್ನಾಟಕ ಸರ್ಕಾರದ ಅತ್ಯುಚ್ಛ ಸಾಹಿತ್ಯ ಪ್ರಶಸ್ತಿಯಾದ ‘ಪಂಪ’ ಗೌರವ ಸಂದ ಸಂದರ್ಭದಲ್ಲಿ ಡಾ.ಎಂ.ಚಿದಾನಂದಮೂರ್ತಿ ಅವರನ್ನು ಅಭಿನಂದಿಸಲು ಅವರ ಮನೆಗೆ ಭೇಟಿ ನೀಡಿದಾಗ, ಅವರು ಮಾತನಾಡಿದ್ದು ಆಪ್ಪಟ ಹಳ್ಳಿಗರಾಗಿಯೇ. ಪಂಪ ಪೀಠಕ್ಕೇರಿದ ಬಾಲ್ಯದ ಗೆಳೆಯನ ಅಭಿನಂದಿಸಲೆಂದು ಬಂದಿದ್ದ ಹಳ್ಳಿಯ ಗೆಳೆಯರು ಅವರೊಂದಿಗಿದ್ದರು.

‘ಪ್ರಶಸ್ತಿ ಬಂದುದು ನನಗೆ ಸಂತೋಷ ತಂದಿದೆ. ಆದರೆ ಇದೆಲ್ಲಾ ಆಕಸ್ಮಿಕ. ನಾನು ಪ್ರಶಸ್ತಿಯನ್ನು ನಿರೀಕ್ಷಿಸಿರಲಿಲ್ಲ ಎಂದರು ಚಿಮೂ. ತಮ್ಮ ಪಾಡಿಗೆ ತಾವು ಸದ್ದಿಲ್ಲದೆ ಸಂಶೋಧನೆಯಲ್ಲಿ ತೊಡಗಿಕೊಂಡಿದ್ದ ಚಿಮೂ ಪ್ರಶಸ್ತಿಯ ರೇಸಿನಲ್ಲಿರಲಿಲ್ಲ. ಲಾಬಿ ಮಾಡುವುದು ಅವರ ಜನ್ಮಕ್ಕೆ ಬಂದುದಲ್ಲ. ಆದರೂ ಪ್ರಶಸ್ತಿ ಆವರಿಗೆ ದೊರೆಯಿತು. ಪಂಪ ಪ್ರಶಸ್ತಿ ಅರ್ಹರಿಗಷ್ಟೇ ಸಲ್ಲುತ್ತದೆ ಅನ್ನುವ ಮಾತು ಮತ್ತೊಮ್ಮೆ ನಿಜವಾಯಿತು. (ಕನ್ನಡ ಸಾರಸ್ವತ ಲೋಕದಲ್ಲಿ ಇಂಥ ಅಚ್ಚಿರಿಗಳೂ ಆಗಾಗ ನಡೆಯುತ್ತವೆ!).

ಪ್ರಶಸ್ತಿ ಬಂದದ್ದೇ ತಡ; ಚಿಮೂ ಅವರ ಶಾಂತಿಕುಟೀರದಲ್ಲಿ ಫೋನ್ ರಿಂಗಣಿಸತೊಡಗಿದೆ. ಅಭಿಮಾನಿಗಳು, ಗೆಳೆಯರು, ವಿದ್ಯಾರ್ಥಿಗಳು ಅಭಿನಂದನೆ ಹೇಳಲು ಮನೆಗೆ ಬರತೊಡಗಿದ್ದಾರೆ. ಈ ನಡುವೆ ಅಭಿನಂದನಾ ಕಾರ್ಯಕ್ರಮಗಳು ಬೇರೆ. ಇಂಥ ಸಂಭ್ರಮದ ಸಂದರ್ಭದಲ್ಲೂ ಚಿಮೂ ಅವರು ಮೊದಲು ನೆನಪಿಸಿಕೊಂಡಿದ್ದು ಹಳೆಯ ದಿನಗಳನ್ನು; ಹಳ್ಳಿಯ ದಿನಗಳನ್ನು.

ಕೆರೆ, ಬಾವಿಗಳಲ್ಲಿನ ಈಜು, ತೋಟಗಳಲ್ಲಿನ ಸುತ್ತಾಟ ಹಾಗೂ ಮರಕೋತಿಯಾಟ, ಊರ ಹೊರಗಿನ ಹಳ್ಳದ ಪೊದೆಗಳಲ್ಲಿ ಜೇನು ಕೀಳುತ್ತಿದ್ದುದು ಮುಂತಾದ ಬಾಲ್ಯದ ನೆನಪುಗಳನ್ನು ಎಪ್ಪತ್ತೆರಡರ ವಯಸ್ಸಿನಲ್ಲೂ ಹಸಿರಾಗಿಸಿಕೊಂಡಿರುವ ಚಿದಾನಂದಮೂರ್ತಿಗಳ ಹುಟ್ಟೂರು ಹಿರೇಕೋಗಲೂರು ಗ್ರಾಮ (ಜನನ- ಮೇ ೧೦, ೧೯೩೧). ಶಿವಮೊಗ್ಗ ಜಿಲ್ಲೆಯಲ್ಲಿದ್ದ ಹಿರೇಕೋಗಲೂರು ಈಗ ದಾವಣಗೆರೆ ಜಿಲ್ಲೆಯ ನಕ್ಷೆಯಲ್ಲಿದೆ.

ಚಿಮೂ ಅವರ ತಂದೆ ಕೆ.ಕೊಟ್ಟೂರಯ್ಯ ವೃತ್ತಿಯಿಂದ ಪ್ರಾಥಮಿಕ ಶಾಲೆ ಶಿಕ್ಷಕರು. ಬಾಲ್ಯದಲ್ಲಿ ಅನಾಥನಾಗಿ ಊರಿಂದೂರು ಅಲೆಯತ್ತ ಭಿಕ್ಷಾನ್ನ ಬೇಡುತ್ತಿದ್ದ ಕೊಟ್ಟೂರಯ್ಯ ತಮ್ಮ ಕಹಿ ನೆನಪುಗಳು ಮಕ್ಕಳಿಗೆ ಬಾರದಿರಲೆಂದು ಪಟ್ಟ ಪಾಡು ಒಂದೆರಡಲ್ಲ. ಚಿಮೂ ಅವರ ಬಾಲ್ಯವನ್ನು ರೂಪಿಸಿದ ಇನ್ನೊಂದು ಶಕ್ತಿ, ಅವರ ತಾಯಿ ಪಾರ್ವತವ್ವ.

ನೀತಿಗೆರೆಯಲ್ಲಿ ಪ್ರಾಥಕ ಶಿಕ್ಷಣ, ಹಿರೇಕೋಗಲೂರಿನಲ್ಲಿ ಮಾಧ್ಯಮಿಕ ಶಿಕ್ಷಣ, ದಾವಣಗೆರೆಯಲ್ಲಿ ಹೈಸ್ಕೂಲು ಹಾಗೂ ಇಂಟರ್‍ಮೀಡಿಯೇಟ್ ಕಲಿಕೆ, ಮೈಸೂರಿನಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾಭ್ಯಾಸ- ಇದು ಚಿಮೂ ಅವರ ವಿದ್ಯಾರ್ಥಿ ದೆಸೆಯ ಜಾತಕ. ಇಂಟರ್‍ಮೀಡಿಯೇಟ್‍ನಲ್ಲಿ ವಿಜ್ಞಾನ ವಿಷಯದಲ್ಲಿ ಮೈಸೂರು ರಾಜ್ಯಕ್ಕೆ ೧೦ ನೇ ರ್‍ಯಾಂಕ್ ಪಡೆದ ಅವರು, ಬಯಸಿದ್ದರೆ ಇಂಜಿನಿಯರಿಂಗ್ ಅಥವಾ ಮೆಡಿಕಲ್ ಸೇರಬಹುದಿತ್ತು. ಆದರೆ ಆ ವೇಳೆಗಾಗಲೇ ಕನ್ನಡ ಸಾಹಿತ್ಯದ ಸೆಳೆತ ಜೋರಾಗಿತ್ತು; ಕಲಾ ವಿಷಯದಲ್ಲಿ ಪದವಿಯ ವ್ಯಾಸಂಗವನ್ನು ಮೈಸೂರಿನಲ್ಲಿ ಮುಂದುವರಿಸಿದರು. ಚಿಮೂ ಅವರಿಗೆ ದೊರೆತ ಗುರುಶ್ರೇಷ್ಟರ ಪಟ್ಟಿಯನ್ನು ನೋಡಿದರೆ ಅಸೂಯೆಯಾಗುತ್ತದೆ. ಇಂಟರ್‍ಮೀಡಿಯೇಟ್ನಲ್ಲಿ ಎಲ್.ಬಸವರಾಜು, ಜಿ.ಎಸ್.ಶಿವರುದ್ರಪ್ಪ ಹಾಗೂ ತೀ.ನಂ.ಶ್ರೀಕಂಠಯ್ಯ ಪಾಠ ಹೇಳಿದರೆ, ಪದವಿ ತರಗತಿಯಲ್ಲಿ ಚಿಮೂ ಅವರಿಗೆ ಕುವೆಂಪು ಹಾಗೂ ಡಿ.ಎಲ್.ನರಸಿಂಹಾಚಾರ್ ಮೇಷ್ಟ್ರು. ಎಷ್ಟು ವಿದ್ಯಾರ್ಥಿಗಳಿಗಿದ್ದೀತು ಈ ಭಾಗ್ಯ?

ಪದವಿ ಮುಗಿಸಿದ ನಂತರ ೧೯೫೩ರಲ್ಲಿ ಶಿಕ್ಷಕರಾಗಿ- ಬೆಂಗಳೂರು, ಕೋಲಾರ, ತುಮಕೂರು ಸುತ್ತಿದರು. ಆದರೆ, ಓದುವ ಆಸಕ್ತಿ ಕುಗ್ಗಿರಲಿಲ್ಲ. ಮೈಸೂರಿಗೆ ಮರಳಿ ಎಂ.ಎ.ತರಗತಿಗೆ ಸೇರಿಕೊಂಡರು. ಅಲ್ಲಿ ಮತ್ತೆ ತೀ.ನಂ.ಶ್ರೀ ಅವರಿಂದ ಪಾಠ ಕೇಳುವ ಸುಖ. ೧೯೫೭ರಲ್ಲಿ ಪ್ರಥಮ ರ್‍ಯಾಂಕ್‍ನೊಂದಿಗೆ ಎಂ.ಎ. ಮುಗಿಸಿದ ಚಿಮೂ, ಅನಂತರ ಮೈಸೂರಿನ ಯುವರಾಜ ಕಾಲೇಜಿನಲ್ಲಿ ಅಧ್ಯಾಪಕರಾಗಿ ಸೇರಿಕೊಂಡರು. ೧೯೬೪ರಲ್ಲಿ ‘ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯ’ ವಿಷಯದಲ್ಲಿ ಡಾಕ್ಟರೇಟ್ ಗಳಿಸಿದರು. ಚಿಮೂ ಬೆಂಗಳೂರು ವಿಶ್ವ ವಿದ್ಯಾಲಯಕ್ಕೆ ಬಂದದ್ದು ೧೯೬೯ ರಲ್ಲಿ. ಬೆಂಗಳೂರಿನಲ್ಲಿ ಅರಳಿದ್ದು ಅವರ ಚಳವಳಿಯ ಬದುಕು.

ವಿದ್ಯಾರ್ಥಿ ವೃಂದ, ವಿದ್ವತ್ ಗೋಷ್ಟಿ ಗ್ರಂಥಾಲಯ. ಸಂಶೋಧನೆ, ಪುಸ್ತಕ ಪ್ರಕಟಣೆಗಳ ನಡುವೆ ಹಂಚಿಹೋಗಿದ್ದ ಚಿಮೂ ಅವರ ಬದುಕು ಕನ್ನಡ ಚಳವಳಿಯತ್ತ ಹೊರಳಿದ್ದಾದರೂ ಹೇಗೆ? ಚಿಮೂ ಆ ಘಟನೆಯನ್ನು ನೆನಪಿಸಿಕೊಳ್ಳುವುದು ಹೀಗೆ:

‘೪ಟಿಕೆಟ್ ಕೊಡಿ’
ಅಷ್ಟೇ ಕೇಳಿದ್ದು ೧೯೭೯-೮೦ನೇ ಇಸವಿ ಇರಬೇಕು. ದಂಡು ಪ್ರದೇಶದಲ್ಲಿ ಮಕ್ಕಳ ಒಳ್ಳೆಯ ಸಿನಿಮಾ ಬಂದಿದೆ ಅನ್ನುವ ಸಂಗತಿ ತಿಳಿಯಿತು. ಮಕ್ಕಳಿಗೆ ಸಿನಿಮಾ
ತೋರಿಸೋಣ ಎಂದು ಮುಂಗಡ ಟಿಕೇಟು ತರಲು ಹೋಗಿದ್ದೆ. ಟಿಕೇಟು ಕೊಡಿ ಎಂದು ಕನ್ನಡದಲ್ಲಿ ಕೇಳಿದ್ದೇ ತಪ್ಪಾಯಿತು. ಟಿಕೇಟ್ ಕೊಡುವವನು ಉರಿದು ಬಿದ್ದ. ಗಲಾಟೆ ಕೇಳಿ ಅಲ್ಲಿಗೆ ಬಂದ ಮೆನೇಜರ್ ಕೂಡ ದಬಾಯಿಸಿದ. ಸುಮ್ಮನೆ ಹೋಗದಿದ್ದಲ್ಲಿ ಅಲ್ಲಿಂದ ನೂಕಿಸುವುದಾಗಿ ಗದರಿಸಿದ. ಕರ್ನಾಟಕದ ರಾಜಧಾನಿ ಬೆಂಗಳೂರಲ್ಲಿ ಕನ್ನಡಕ್ಕೆ ಒದಗಿದ ದುರವಸ್ಥೆ ಕಂಡು ತುಂಬಾ ನೋವಾಯಿತು. ಅಂದೇ ತೀರ್ಮಾನಿಸಿದೆ: ಭಾಷೆ ಇದ್ದರೆ ತಾನೇ ಸಂಶೋಧನೆ-ಸಾಹಿತ್ಯ. ಭಾಷೆಗೇ ಕುತ್ತು ಬಂದಿರುವಾಗ ಸಂಶೋಧನೆ, ಸಾಹಿತ್ಯ ಕಟ್ಟಿಕೊಂಡು ಏನಾಗಬೇಕು? ಈ ಘಟನೆ ಕನ್ನಡ ಚಳವಳಿಯಲ್ಲಿ ತೊಡಗಲು ನನಗೆ ಪ್ರೇರಕವಾಯಿತು.’

ಚಿಮೂ ಅವರು ಬೆಂಗಳೂರಿಗೆ ಬಂದಾಗ ರಾಜಧಾನಿಯಲ್ಲಿನ ಕನ್ನಡ ತುರ್ತು ನಿಗಾ ಘಟಕದಲ್ಲಿತ್ತು. ಅ.ನ.ಕೃಷ್ಣರಾಯರು, ಮ.ರಾಮಮೂತಿ೯ ಅವರು ರೂಪಿಸಿದ್ದ ಕನ್ನಡ ಚಳವಳಿ ಕಸುವುಗುಂದಿತ್ತು. ಇಂಥ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಕನ್ನಡ ಚಳವಳಿಯನ್ನು ಪುನರ್ ಜೀವಗೊಳಿಸಿದ ಚಿಮೂ, ಚಳವಳಿಯನ್ನು ವೇದಿಕೆಯಿಂದ ಸಮುದಾಯದ ಹಂತಕ್ಕೆ ಕೊಂಡೊಯ್ದರು. ಕನ್ನಡ ಚಳವಳಿಗೆ ಗೌರವ ಹಾಗೂ ಬೌದ್ಧಿಕ ಸ್ಪರ್ಶವನ್ನು ನೀಡಿದ್ದು ಅವರ ಪ್ರಮುಖ ಸಾಧನೆ. ಇವತ್ತು ಬೆಂಗಳೂರಿನಲ್ಲಿ ತಕ್ಕ ಮಟ್ಟಿಗೆ ಕನ್ನಡ ಉಳಿದುಕೊಂಡಿದ್ದರೆ, ಕಾರ್ಖಾನೆಗಳಲ್ಲಿ ಕಾರ್ಮಿಕರು ಅಳುಕಿಲ್ಲದೆ ಕನ್ನಡ ಬಳೆಸುತ್ತಿದ್ದರೆ-ಅದರ ಖ್ಯಾತಿಯ ಒಂದು ಪಾಲು ಚಿಮೂ ಅವರಿಗೆ ಸಲ್ಲಬೇಕು. ಪ್ರಾರಂಭದಲ್ಲಿ ಬೆಂಗಳೂರಿಗೆ ಮಾತ್ರ ಸೀಮಿತವಾಗಿದ್ದ ಕನ್ನಡ ಚಳುವಳಿಯನ್ನು ‘ಸಾಹಿತಿಗಳ ಕಲಾವಿದರ ಬಳಗ’, ಅನಂತರ  ‘ಕನ್ನಡ ಶಕ್ತಿ ಕೇಂದ್ರ’ದ ಮೂಲಕ ಚಿಮೂ ರಾಜ್ಯವ್ಯಾಪಿಯಾಗಿಸಿದರು. ಗೋಕಾಕ್ ಚಳುವಳಿಯಲ್ಲಿ ಚಿಮೂ ಹಾಗೂ ಅವರ ಸಂಗಾತಿಗಳು ಪ್ರಮುಖ ಪಾತ್ರ ವಹಿಸಿದರು. ಚಳವಳಿ ಎಂದರೆ ಮಾರು ದೊರವಿರುವ ಸಾಹಿತಿಗಳು ಕೂಡ ಚಳವಳಿಯನ್ನು ಕೂಡಿಕೊಂಡರು. ಪಿ.ವಿ.ನಾರಾಯಣ, ಜಿ.ಎಸ್.ಶಿವರುದ್ರಪ್ಪ, ಜಿ.ಕೆ.ಸತ್ಯ, ಅಶೋಕ್, ಗೊರೂರು, ಶ್ರೀರಂಗ, ಸಿದ್ದಯ್ಯ ಪುರಾಣಿಕ, ಅಡಿಗ, ಲಂಕೇಶ್, ಎಚ್.ಎಸ್.ಪಾರ್ವತಿ ಮುಂತಾದವರು ಚಿಮೂ ಅವರ್‍ಅ ಚಳವಳಿಯ ಸಂಗಾತಿಗಳು. ಅದು ಕನ್ನಡ ಚಳವಳಿಯ ಸಾತ್ವಿಕ ಕಾಲ.

ಸಕ್ರಿಯ ಕನ್ನಡ ಚಳವಳಿಯಿಂದ ಚಿದಾನಂದಮೂರ್ತಿ ಈಗ ನಿವೃತ್ತರು. ‘ನನಗೂ ವಯಸ್ಸಾಯಿತು. ಈವರೆಗೆ ಮಾಡಿದ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ. ನಿರ್ಭೀತ, ಮತ್ತು ಹಾಗೂ ನ್ಯಾಯಪರ ವಾತಾವರಣದಲ್ಲಿ ಚಳವಳಿ ನಡೆಸಿದ್ದೇನೆ. ಈ ಚಳವಳಿಯನ್ನು ಇತರರು ಮುಂದುವರಿಸಲಿ’ ಎನ್ನುತ್ತಾರೆ ಚಿಮೂ. ಆದರೆ, ಅವರು ರೂಡಿಸಿದ ಸಾತ್ವಿಕ ಚಳವಳಿ ಮುಂದುವರಿಯುತ್ತಿದೆಯಾ? ಉಹ್ಞುಂ, ಚಿಮೂ ಅವರಿಗೆ ಇವತ್ತಿನ ಕನ್ನಡ ಚಳವಳಿಯ ಕುರಿತು ಪೂರ್ಣ ಸಮಾಧಾನವಿಲ್ಲ ಅವರದು ಆರೋಗ್ಯಕರ ಅತೃಪ್ತಿ. ‘ಘೋಷಣೆ ಕೂಗುವುದರಿಂದ, ಸಭೆ ಮೆರವಣಿಗೆ ನಡೆಸುವುದರಿಂದ ಕನ್ನಡದ ಕೆಲಸ ಆಗೊಲ್ಲ. ಒಳಗಿನ ಕೆಲಸದಿಂದ ಕನ್ನಡ ಗಟ್ಟಿಯಾಗಬೇಕು. ಆ ಒಳಗಿನ ಕೆಲಸ ಅಷ್ಟು ಪ್ರಿಯವಾದುದಲ್ಲ. ಅದು ಪತ್ರಿಕೆಗಳಲ್ಲಿ ಸುದ್ದಿಯಾಗೊಲ್ಲ, ತ್ಯಾಗವನ್ನು ಬಯಸುವಂಥ ಅನುಸರಣ ಕಾರ್ಯ ಅಷ್ಟಾಗಿ ಕಾಣಿಸುತ್ತಿಲ್ಲ’ ಎಂದು ಚಿಮೂ ಮಾತು ನಿಲ್ಲಿಸುತ್ತಾರೆ.

ತಮ್ಮ ಈವರೆಗಿನ ಕನ್ನಡ ಚಳುವಳಿಯ ಬಗೆಗೆ ಚಿಮೂ ಅವರಿಗೆ ಪೂರ್ಣ ತೃಪ್ತಿಯಿಲ್ಲದಿದ್ದರೂ, ನಿರಾಶೆಯಂತೂ ಇಲ್ಲ. ‘ಕನ್ನಡ ಚಳವಳಿ ತಕ್ಕಮಟ್ಟಿಗೆ ಫಲ ಕೊಟ್ಟಿದೆ’ ಎನ್ನುತ್ತಾರೆ ಚಿಮೂ. ಅವರ ಕನ್ನಡ ಚಳವಳಿಯ ಮಾತು, ಹಂಪೆಯಲ್ಲಿನ ಭಾವೋದ್ರೇಕ ಘಟನೆಯ ಪ್ರಸ್ತಾಪವಿಲ್ಲದೆ ಅಪೂರ್ಣಗೊಳ್ಳುತ್ತದೆ-

‘ಕನ್ನಡಿಗರಲ್ಲಿ ಕನ್ನಡದ ಕುರಿತ ಜಾಗೃತಿ ಮೂಡಿಸುತ್ತೇನೆ. ಈ ಪ್ರಯತ್ನದಲ್ಲಿ ವಿಫಲನಾದರೆ ಹಂಪೆಯ ತುಂಗಭದ್ರೆಯಲ್ಲಿ ಜಲ ಪ್ರವೇಶ ಮಾಡುವುದಾಗಿ ಪ್ರತಿಜ್ಞೆ  ಮಾಡಿದ್ದೆ. ನನ್ನ ಪ್ರಯತ್ನ ಕೈಗೂಡಲಿಲ್ಲ ಅನ್ನಿಸಿದ್ದರಿಂದಲೇ, ಜಲ ಪ್ರವೇಶ ಮಾಡುವ ಮೂಲಕ ಆತ್ಮಾಹುತಿ ಪ್ರಯತ್ನ ನಡೆಸಿದೆ. ಆದರೆ, ಜನರ ಮೂಲಕ ದೈವ ನನ್ನನ್ನು ಉಳಿಸಿತು. ಇದರಲ್ಲಿ ಮುಚ್ಚುಮರೆಯೇನೂ ಇಲ್ಲ’ ಎಂದು ಹಳೆಯ ಫಟನೆಯನ್ನು ಚಿಮೂ ನೆನಪಿಸಿಕೊಳ್ಳುತ್ತಾರೆ.

ಚಿಮೂ ಅವರಿಗೆ ವಿವಾದಗಳು ಹೊಸತೇನಲ್ಲ. ೧೯೬೨ರಲ್ಲಿ ಅವರ ಮೊದಲ ಕೃತಿ ‘ಶೂನ್ಯ ಸಂಪಾದನೆಯನ್ನು ಕುರಿತು’  ಪ್ರಕಟವಾಗಿದಾಗಿನಿಂದ ಈವರೆಗೂ ಚಿಮೂ ವಿವಾದಗಳೊಂದಿಗೇ ಬೆಳೆದಿದ್ದಾರೆ. ಇತ್ತೀಚೆಗೆ ಟೀಕೆಗೆ ತುತ್ತಾದುದು ಚಿಮೂ ಅವರ ‘ಹಿಂದೂ’ ವ್ಯಾಖ್ಯಾನಗಳು. ಚಿಮೂ ಬಿಜೆಪಿ, ಚಿಮೂ ಆರೆಸ್ಸೆಸ್ ಎಂದವರುಂಟು. ‘ತಾವು ಹಿಂದೂವಾಗಿದ್ದರೂ, ಹಿಂದುಗಳ ವಿರುದ್ದ ಮಾತನಾಡುವ ಮೂಲಕ ಉದಾರಿಗಳೆಂದು ತೋರಿಸಿಕೊಳ್ಳುವ ಚಪಲ’ ಎನ್ನುವುದು ಸೋಗಲಾಡಿ ಬುದ್ಧಿಜೀವಿಗಳ ಬಗ್ಗೆ ಚಿಮೂ ಪ್ರತಿಕ್ರಿಯೆ.

‘ನಾನು ಹಿಂದೂ ಅನ್ನುವುದರಲ್ಲಿ ಅನುಮಾನ ಇಲ್ಲ; ಹಿಂದೂ ಎಂದು ಹೇಳಿಕೊಳ್ಳಲು ನನಗೆ ಸಂಕೋಚವೂ ಇಲ್ಲ. ಹಿಂದೂ ಎಂದು ಹೇಳಿಕೊಳ್ಳಲು ನನಗೆ ಹೆಮ್ಮೆ‌ಇದೆ ಎಂದು ವಿವೇಕಾನಂದರು ಕಾಂಗ್ರೆಸ್, ಬಿಜೆಪಿ, ಜನತಾದಳ ಯಾವುದೂ ಇಲ್ಲದ ಕಾಲದಲ್ಲಿಯೇ ಹೇಳಿದ್ದರು. ವಿವಿಧ ಆಮಿಷಗಳನ್ನೊಡ್ಡಿ ನಡೆಸುವ ಮತಾಂತರವನ್ನು ವಿವೇಕಾನಂದರು ಶತಾಯಗತಾಯ ವಿರೋಧಿಸಿದ್ದರು. ನನಗೆ ಅಧಿಕಾರ ಇದ್ದಿದ್ದರೆ ಕಾನೂನು ಮಾಡಿ ಮತಾಂತರ ನಿಲ್ಲಿಸುತ್ತಿದ್ದೆ ಎಂದು ಮಹಾತ್ಮ ಗಾಂಧೀಜಿ ಹೇಳಿದ್ದರು. ಹಿಂದೂ ಧರ್ಮದ ಕೊರತೆಗಳು ವಿವೇಕಾನಂದರಿಗೂ ಗೊತ್ತಿದ್ದವು. ಗಾಂಧೀಜಿಗೂ ಗೊತ್ತಿದ್ದವು’ ಎನ್ನುವ ಚಿಮೂ, ‘ನಮ್ಮ ಮನೆಯಲ್ಲಿ ಕೊಳಕು ಇದ್ದರೆ  ತೆಗೆದು ಹಾಕಬೇಕು. ಮನೆ ನಾಶ ಮಾಡುತ್ತೇನೆ ಎನ್ನುವುದು ಹಾಸ್ಯಾಸ್ಪದ’ ಎನ್ನುವ ಮೂಲಕ ಧರ್ಮದ ಕುರಿತ ತಮ್ಮ ನಿಲುವನ್ನು ಸ್ಪಷ್ಟಪಡಿಸುತ್ತಾರೆ.

ಮುಸ್ಲಿಂ ಅಥವಾ ಕ್ರೈಸ್ತರ ಬಗೆಗೆ ಅಸಹನೆ ಇಲ್ಲ, ಆದರೆ ಹಣದ ಆಮಿಷ ತೋರಿ ಮತಾಂತರ ಮಾಡುವ ಬಗ್ಗೆ ಅಸಹನೆ ಇದೆ ಎನ್ನುವ ಚಿಮೂ, ಏಕರೂಪ ನಾಗರಿಕ ಸಂಹಿತೆಯ ಅಗತ್ಯವನ್ನು ಬಲವಾಗಿ ಪ್ರತಿಪಾದಿಸುತ್ತಾರೆ. ‘ಭಾರತ ಇರುವುದು ಹಿಂದೂಗಳಿಗೆ ಮಾತ್ರವಲ್ಲ. ಇಲ್ಲಿ ಎಲ್ಲರಿಗೂ ಸಮಾನ ಅವಕಾಶವಿದೆ. ಇಂಥ ಸನ್ನಿವೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಅಗತ್ಯ. ಈ ರೀತಿ ಮಾತನಾಡಿದರೆ ನನನ್ನು ಬ್ರಾಂಡ್ ಮಾಡುತ್ತಾರೆ. ವೀರಶೈವರು ಹಿಂದೂಗಳು ಅಂದಾಗಲೂ ನನ್ನನ್ನು ಬಿಜೆಪಿ ಆಂದರು. ಆದರೆ ನಾನು ಬಿಜೆಪಿ ಅಥವಾ ಆರೆಸ್ಸೆಸ್ ಅಲ್ಲ. ನನ್ನ ಹಾಗೂ ಅವರ ವಿಚಾರಗಳಿಗೆ ಸಾಮ್ಯತೆ ಇದ್ದಲ್ಲಿ ಅದಕ್ಕೆ ನಾನು ಜವಾಬ್ದಾರನಲ್ಲ. ಸತ್ಯ ಇರುವ ಕಡೆಗೆ ನಾನು ನಿಲ್ಲುತ್ತೇನೆ. ಹಿಂದೂಗಳಿಗೆ ಅನ್ಯಾಯವಾದಾಗ ದನಿ ಎತ್ತುವುದಾದರೂ ಯಾರು? ಬಿಜೆಪಿ, ಆರೆಸ್ಸೆಸ್‌ಗಳನ್ನು ಬಿಟ್ಟರೆ ಇತರ ರಾಜಕೀಯ ಪಕ್ಷಗಳು. ಸಾಹಿತಿಗಳು ಮೌನವಾಗಿರುತ್ತಾರೆ. ಹೀಗಾಗಿ, ಕೆಲವೊಮ್ಮೆ ಬಿಜೆಪಿ, ಆರೆಸ್ಸೆಸ್‍ಗಳ ಪ್ರತಿಭಟನೆ ಆತ್ಮರಕ್ಷಣೆಯ ಧ್ವನಿ ಅಂತಲೂ ನನಗನ್ನಿಸಿದೆ’. ಎಂದು ಚಿಮೂ ತಮ್ಮ ವಿಚಾರ ಸರಣಿ ಮುಂದಿಡುತ್ತಾರೆ.

ಚಿಮೂ ಅವರೀಗ ಬರಹ-ಸಂಶೋಧನೆ ಹಾಗೂ ಪ್ರಕಟಣೆಗಳಲ್ಲಿ ಸಂಪೂರ್ಣ ವ್ಯಸ್ತರು. ಕಳೆದ ಸೆಪ್ಟಂಬರ್ನಲ್ಲಷ್ಟೇ ‘ನೇಪಾಳ ಹಾಗೊ ಕರ್ನಾಟಕಕ್ಕೆ ಇರುವ ಸಂಬಂಧದ ಕುರಿತು ನೇಪಾಳದಲ್ಲಿ ಸಂಶೋಧನೆ ನಡೆಸಿ ಬಂದಿದ್ದಾರೆ.  ಹಿರೇಕೋಗಲೂರಿನ ದಿನಗಳಿಂದ ಪಂಪ ಪೀಠವೇರಿದ ಇವತ್ತಿನವರೆಗೆ ಸಾಗಿ ಬಂದ ಹಾದಿಯನ್ನು ಜೀವನ ಚರಿತ್ರೆಯ ರೂಪದಲ್ಲಿ ಬರೆಯುವ ಆಸೆಯೂ ಚಿಮೂ ಅವರಿಗಿದೆ. ಬರವಣಿಗೆ ನಡೆಯುತ್ತಿದೆ.

‘ಶ್ರಮ, ಶ್ರದ್ಧೆ, ಪ್ರಾಮಾಣಿಕತೆ, ದೊಡ್ಡ ಧ್ಯೇಯ- ಇವು ಎಂದೆಂದಿಗೂ ನಮಗೆ ಶಾಶ್ವತ ಫಲ ತಂದುಕೊಡುವ ಮಾರ್ಗಗಳು. ಹಿಂದಿನ ಪರಂಪರೆ ಬಗ್ಗೆ
ಜಾಗೃತರಾಗೋಣ. ಪರಂಪರೆ ಅರಿವು ಇಲ್ಲದವನು ಯಾವ ದೊಡ್ಡ ಕೆಲಸವನ್ನೂ ಮಾಡಲಾರ. ನಿನ್ನೆ ಮರೆತವರು ನಾಳೆಯನ್ನು ಕಟ್ಟಲಾರರು’.

ಚಿಮೂ ಮಾತು ಮುಗಿಸಿದರು.
*****