ಮುಂಜಾವಿನಲ್ಲಿ

ಮುಂಜಾವಿನಲ್ಲಿ

ಸಾನ್ ಗಾಬ್ರಿಯಲ್ ಊರು ಥಂಡಿ ಕಾವಳದಿಂದ ಇಷ್ಟಿಷ್ಟೆ ಹೊರತೋರುತ್ತಿದೆ. ಜನಗಳ ಮೈ ಬಿಸಿ ತಾಕಲೆಂದು ರಾತ್ರಿಯಲ್ಲಿ ಮೋಡಗಳು ಊರಿನ ಮೇಲೆ ಕವುಚಿಕೊಂಡು ನಿದ್ದೆ ಹೋಗಿವೆ. ಸೂರ್ಯ ಇನ್ನೇನು ಕಾಣಬೇಕು ಅನ್ನುವಾಗ ಕಾವಳದ ತೆರೆಯ ಹಚ್ಚಡ ಸುರುಳಿಸುತ್ತಿಕೊಳ್ಳುತ್ತ ನಿಧಾನ ಮೇಲೇರುತ್ತ ಮನೆ ಚಾವಣಿಗಳ ಮೇಲೆ ಬಿಳಿಯ ಪಟ್ಟೆಗಳು ಉಳಿಯುತ್ತವೆ. ಕಂಡೂ ಕಾಣದಂಥ ಹೊಗೆಮಂಜು ವದ್ದೆ ನೆಲದಿಂದ, ಮರಗಳ ತುದಿಯಿಂದ ಮೋಡಗಳತ್ತ ಸಾಗುತ್ತ ತಟಕ್ಕನೆ ಕಣ್ಮರೆಯಾಗುತ್ತದೆ. ಹಾಗೇ ಅಡುಗೆ ಮನೆಗಳಿಂದ ಸುಡುತ್ತಿರುವ ಓಕ್ ಮರದ ವಾಸನೆ ಕಪ್ಪು ಹೊಗೆ ಆಕಾಶಕ್ಕೆಲ್ಲ ಬೂದಿ ಬಳಿಯುತ್ತಿದೆ.

ದೂರ ಬೆಟ್ಟಗಳು ಇನ್ನೂ ನೆರಳಿನಲ್ಲೇ ಇವೆ.

ಸ್ವಾಲೋ ಹಕ್ಕಿ ಹಾರಿ ಹೋಯಿತು. ಬೆಳಗಿನ ಮೊದಲ ಸದ್ದು ಕಿವಿ ತುಂಬುತ್ತವೆ.

ದೀಪಗಳು ಆರಿದವು. ಮಣ್ಣಿನ ಕಲೆ ಊರನ್ನೆಲ್ಲ ಆವರಿಸಿತ್ತು. ಹುಟ್ಟುವ ಸೂರ್ಯನ ಬಣ್ಣಗಳಲ್ಲಿ ಅದು ಇನ್ನೂ ಒಂದಷ್ಟು ನಿದ್ರಮಾಡುತ್ತ ಗೊರಕೆ ಹೊಡಯುತಿತ್ತು.
* * *

ಅಂಜೂರ ಮರಗಳು ಅಂಚುಕಟ್ಟಿದಂತಿದ್ದ, ಜಿಕಿಲ್ಟಾ ಊರಿಗೆ ಹೋಗುವ ದಾರಿಯಲ್ಲಿ ಮುದುಕ ಎಸ್ಟೆಬಾನ್ ಹಸುವಿನ ಬೆನ್ನಮೇಲೆ ಕೂತು, ಹಾಲು ಕರೆಯುವ ಹಸುಗಳ ಹಿಂಡು ಹೊಡೆದುಕೊಂಡು ಬರುತ್ತಾ ಇದ್ದಾನೆ. ಮಿಡತೆಗಳು ಹಾರಿ ಬಂದು ಮುಖದ ಮೇಲೆ ಕೂರದ ಹಾಗೆ, ಸೊಳ್ಳೆಗಳು ಕಾಟ ಕೊಡದ ಹಾಗೆ ಹ್ಯಾಟನ್ನು ಒಂದೇ ಸಮ ಬೀಸುತ್ತ, ಹಸುಗಳು ಹಿಂದೆಯೇ ಉಳಿಯದಿರಲೆಂದು ಹಲ್ಲಿಲ್ಲದ ಬಾಯಲ್ಲಿ ಆಗಾಗ ಸಿಳ್ಳೆ ಹಾಕುತ್ತ ಬರುತಿದ್ದಾನೆ. ಅವು ಹುಲ್ಲು ಮೇಯುತ್ತ, ನೆಲದ ಇಬ್ಬನಿ ಮೈ ಮೇಲೆ ಚಿಮುಕಿಸಿಕೊಳ್ಳುವ ಹಾಗೆ ಕಾಲು ಹಾಕುತ್ತ ಬರುತ್ತಿವೆ. ಹಗಲ ಬೆಳಕು ನಿಚ್ಚಳವಾಗುತ್ತಿದೆ. ಸಾನ್ ಗಾಬ್ರಿಯಲ್ ಚರ್ಚಿನ ಬೆಳಗಿನ ಗಂಟೆಯ ಸದ್ದು ಕೇಳಿ ಅವನು ನೆಲಕ್ಕಿಳಿದು ಮೊಳಕಾಲೂರಿ ಕೂತು, ಶಿಲುಬೆಯ ಆಕಾರದಲ್ಲಿ ಕ್ರಾಸ್ ಮಾಡಿಕೊಳ್ಳುತ್ತಾನೆ.

ಮರಗಳ ನಡುವೆ ಗೂಬೆಯ ಕೂಗು. ಎಸ್ಟೆಬಾನ್ ಮತ್ತೆ ಹಸುವಿನ ಮೇಲೆ ಎಗರಿ ಕೂತು, ಭಯದ ಬತ್ತಿಯನ್ನು ಆರಿಸಲಿ ಅನ್ನುವ ಹಾಗೆ ಅಂಗಿ ಬಿಚ್ಚಿ ಗಾಳಿ ಬೀಸಿಕೊಳ್ಳುತ್ತಾನೆ.

ಊರು ಗಡಿ ದಾಟುವ ಜಾಗ ಬಂದಾಗ ‘ಒಂದು, ಎರಡು… ಹತ್ತು.’ ಎಣಿಸಿ, ಹಸುವೊಂದರ ಕಿವಿ ಹಿಡಿದು, ಅದರ ಮೂತಿಯನ್ನು ತನ್ನತ್ತ ಎಳೆದುಕೊಂಡು ‘ನಿನ್ನ ಕರುವನ್ನು ಕರಕೊಂಡು ಹೋಗತಾರೆ ಕಣೇ ಈಗ ಪೆದ್ದಿ. ಅಳು ಬಂದರೆ ಅತ್ತುಬಿಡು, ಇನ್ನು ಮೇಲೆ ನಿನ್ನ ಕರು ಕಣ್ಣಿಗೇ ಬೀಳಲ್ಲ,’ ಅನ್ನುತ್ತಾನೆ. ಹಸು ಶಾಂತವಾಗಿ ಅವನನ್ನು ನೋಡಿ, ಬಾಲದಲ್ಲಿ ಅವನನ್ನೊಮ್ಮೆ ಕೊಡವಿ ಮುಂದೆ ಸಾಗುತ್ತದೆ.

ಮುಂಜಾವಿನ ಕೊನೆಯ ಗಂಟೆ ಬಾರಿಸುತಿದ್ದಾರೆ.

ಸ್ವಾಲೋ ಹಕ್ಕಿಗಳು ಜಿಕಿಲ್ಪಾದಿಂದ ಇಲ್ಲಿಗೆ ಬರುತ್ತವೋ, ಇಲ್ಲಾ ಸಾನ್ ಗಾಬ್ರಿಯಲ್ ಬಿಟ್ಟು ಹಾರಿಹೋಗುತ್ತವೋ ಯಾರೂ ಅರಿಯರು. ಗೊತ್ತಿರುವುದು ಇಷ್ಪೇ-ವಕ್ರ ರೇಖಗಳ ವಿನ್ಯಾಸದಲ್ಲಿ ಹಾರುತ್ತಾ ಕೆಳಗಿಳಿದು, ಕೆಸರು ನೀರಿನಲ್ಲಿ ಎದೆ ಮುಳುಗಿಸಿ, ಹಾರುವುದು ನಿಲ್ಲಿಸದೆ ಮತ್ತೆ ಮೇಲೇರುತ್ತವೆ; ಒಂದೊಂದು ಹಕ್ಕಿ ಕೊಕ್ಕಿನಲ್ಲಿ ಏನೋ ಕಚ್ಚಿಕೊಂಡಿರುತ್ತದ; ಪುಕ್ಕಕ್ಕೆಲ್ಲ ಕೆಸರು ಮೆತ್ತಿಕೊಂಡು ಹಕ್ಕಿಗಳೆಲ್ಲ ಒಟ್ಟಾಗಿ ಹಾರುತ್ತ ಮಬ್ಬು ದಿಗಂತದಲ್ಲಿ ಕಣ್ಮರೆಯಾಗುತ್ತವೆ.

ಮೋಡಗಳು ಆಗಲೇ ಬೆಟ್ಟವನ್ನು ಮುತ್ತಿವೆ, ಬೆಟ್ಟಗಳ ನೀಲಿ ಲಂಗದ ಅಂಚಿಗೆ ಹಾಕಿರುವ ಕಪ್ಪು ತೇಪೆಗಳ ಹಾಗೆ ಕಾಣುತ್ತಿವೆ.

ಮುದುಕ ಎಸ್ಟೊಬಾರ್ ಆಕಾಶದಲ್ಲೆಲ್ಲ ಹಾವಿನ ಹಾಗೆ ವಕ್ರವಾಗಿ ಸಾಗಿರುವ ಕೆಂಪು, ಕಿತ್ತಳೆ, ಹಳದಿ ಬಣ್ಣಗಳ ಪಟ್ಟಿ ನೋಡುತ್ತಾನೆ. ನಕ್ಷತ್ರ ಬಿಳುಪೇರುತ್ತಿವೆ. ಕೊನೆಯ ಕಿಡಿಗಳು ಆರುತ್ತಿವೆ. ಗರಿಕೆ ತುದಿಯ ಮೇಲೆ ಹರಳಿನ ಹನಿಗಳನ್ನು ಇರಿಸುತ್ತಾ ದುಂಡನೆಯ ಸೂರ್ಯ ಹೊಮ್ಮುತ್ತಾನೆ.
* * *

‘ಚಳಿಗೆ ನನ್ನ ಹೊಕ್ಕುಳ ತಣ್ಣಗಾಗಿತ್ತು. ಯಾಕೋ, ನೆನಪಿಲ್ಲ. ಕೊಟ್ಟಿಗೆಯ ಬಾಗಿಲಿಗೆ ಬ್ಂದೆ. ಬಾಗಿಲು ಯಾರೂ ತೆಗೆಯಲಿಲ್ಲ. ಕಲ್ಲು ತೆಗೆದುಕೊಂಡು ಬಾಗಿಲು ತಟ್ಟಿದೆ. ಕಲ್ಲು ಮುರಿಯಿತು, ಯಾರೂ ಬರಲಿಲ್ಲ. ನನ್ನ ದಣಿ ಡಾನ್ ಜಸ್ಟೋ ನಿದ್ದೆ ಮಾಡುತ್ತಿರಬೇಕು ಇನ್ನೂ ಅಂದುಕೊಂಡೆ. ಹಸುಗಳನ್ನ ಮಾತಾಡಿಸಲಿಲ್ಲ, ನನ್ನ ಹಿಂಂಬಾಲಿಸದಿರಲಿ ಅಂತ ಅವುಗಳ ಕಣ್ಣಿಗೆ ಬೀಳದ ಹಾಗೆ ಬಂದುಬಿಟ್ಟೆ. ಬೇಲಿ ತಗ್ಗಾಗಿರುವ ಜಾಗ ನೋಡಿ, ಹತ್ತಿ, ಆ ಕಡೆಗೆ ಬಿದ್ದ. ಅಲ್ಲಿ ಕರುಗಳಿದ್ದವು ಒಂದಷ್ಟು. ಬೇಲಿಯ ತಡಿಕೆ ಬಾಗಿಲು ತೆಗೆಯುತೆದ್ದೆ. ದಣಿ ಜಸ್ಟೋ ಬರುತ್ತಿರುವುದು ಕಾಣಿಸಿತು. ಮಾರ್ಗರೀಟಾಳನ್ನ ಎತ್ತಿಕೊಂಡು ಬರುತ್ತಿದ್ದ. ಅವನ ತೋಳಲ್ಲೇ ನಿದ್ರೆ ಹೋಗಿದ್ದಳು. ನನ್ನನ್ನು ನೋಡದೆ ಹಾಗೇ ಕೊಟ್ಟಿಗೆ ದಾಟಿ ಹೋಗುತಿದ್ದ. ಅವನು ಹೋಗುವವರೆಗೂ ನಾನು ಮಾಯವೇ ಆಗಿಬಿಟ್ಟ ಹಾಗೆ ಗೋಡೆಗೆ ಒತ್ತಿಕೊಂಡು ನಿಂತೆ. ಅವನು ನನ್ನ ನೋಡಲಿಲ್ಲ. ನೋಡಲಿಲ್ಲ ಅಂತ ನಾನು ಅಂದುಕೊಂಡೆ’
* * *

ಮುದುಕ ಎಸ್ಟೆಬಾನ್ ಹಾಲು ಕರೆಯುತ್ತಾ ಇದ್ದ. ಒಂದೇ ಸಮ ಅಂಬಾಗರೆಯುತಿದ್ದ ಕರುವಿಲ್ಲದ ಹಸು ಕಂಡು ಅಯ್ಯೋ ಪಾಪ ಅನ್ನಿಸಿ ಕೊನೆಗೆ ಅದನ್ನು ಬಿಟ್ಟ. ‘ಕೊನೇ ಸಾರಿ ಕರು ನೆಕ್ಕು. ನಿನಗೆ ಇನ್ನೊಂದು ಕರು ಆಗುವುದಕ್ಕೆ ಬಂದರೂ ಆ ದೊಡ್ಡದರ ಮೇಲೆ ಎಂಥಾ ಮೋಹಾನೋ. ಇದೇ ಕೊನೆ, ಇನ್ನ ಇದಕ್ಕೆ ನಿನ್ನ ಹಾಲು ಇಲ್ಲ. ಏನಿದ್ದರೂ ನೀನು ಹಾಕುವ ಹೊಸ ಕರುವಿಗೆ ಅದು.’ ಅಂದ. ನಾಲ್ಕೂ ಕೆಚ್ಚಲಿನ ಹಾಲು ಕುಡಿಯುತ್ತಿರುವುದು ಕಂಡು ಕರುವನ್ನು ‘ಹಾಕತೀನಿ ನೋಡು.’ ಅಂತ ಗದರಿಸಿ ಎಳೆದುಕೊಂಡ.
* * *

‘ಅದರ ಮೂತಿಗೆ ಗುದ್ದಿರುತಿದ್ದೆ. ಧಣಿ ಜಸ್ಟೋ ತಟಕ್ಕನೆ ಬಂದು ನನಗೆ ಒದ್ದು ಕೋಪ ತಣ್ಣಗಾಗುವ ಹಾಗೆ ಮಾಡಿರದಿದ್ದರೆ. ನನ್ನನ್ನು ಹೇಗೆ ಗುದ್ದಿ ಹಾಕಿದ ಅಂದರೆ ನನ್ನ ಕೀಲುಗಳೆಲ್ಲ ಸಂದು ತಪ್ಪಿ ಬಂಡೆ ಮೇಲೆ ಬಿದ್ದು ನಿದ್ದೆ ಹೋಗಿಬಿಟ್ಜೆ, ಮೈ ನೋಯುತ್ತ, ಮೈ ಊದಿಕೊಂಡು, ಇಡೀ ದಿನ ಅಲ್ಲಾಡುವುದಕ್ಕೆ ಆಗದೆ ಹಾಗೇ ಬಿದ್ದಿದ್ದೆ. ದಿನವೆಲ್ಲಾ ನೋವಿತ್ತು, ಈಗಲೂ ಇದೆ.

“ಆಮೇಲೆ ಏನಾಯಿತು? ನನಗೇನೇನೂ ಗೊತ್ತಿಲ್ಲ. ಅವನ ಹತ್ತಿರ ಮತ್ತೆ ಕೆಲಸಕ್ಕೆ ಹೋಗಲಿಲ್ಲ. ನಾನೂ ಹೋಗಲಿಲ್ಲ, ಯಾರೂ ಹೋಗಲಿಲ್ಲ. ಯಾಕೆ ಅಂದರೆ ಸತ್ತು ಹೋದ, ಅವತ್ತೇ. ಗೊತ್ತಿಲ್ಲವಾ? ನಮ್ಮ ಮನೆಗೆ ಬಂದು ಹೇಳಿದರು. ಮಂಚದ ಮೇಲೆ ಮಲಗಿದ್ದೆ. ಹೆಂಡತಿ ಪಕ್ಕದಲ್ಲಿ ಕೂತು ಬಿಸಿನೀರಲ್ಲಿ ಬಟ್ಟೆ ಅದ್ದಿ ಕಾವು ಕೊಡುತಿದ್ದಳು. ನಾನೇ ಅವನನ್ನ ಕೊಂದಿದೇನೆ ಅಂದರು. ಮಾತಾಡತಾ ಹಾಗಂದರು. ಇರಬಹುದೇನೋ. ನನಗಂತೂ ಜ್ಞಾಪಕ ಇಲ್ಲ. ನೆರೆಯವನನ್ನು ಕೊಂದರೆ ಏನಾದರೂ ಸುಳಿವು ಉಳಿಯುವುದಿಲ್ಲವಾ? ಅದರಲ್ಲು ನೆರೆಯವನ ಹತ್ತಿರ ಕೆಲಸಕ್ಕೆ ಹೋಗತಾ ಇದ್ದರೆ ಸುಳಿವು ಉಳಿಯಲೇಬೇಕು. ಏನಾದರೂ ಕಾರಣ ಕೊಟ್ಟು ಅವರು ನನ್ನ ಜೈಲಿಗೆ ಹಾಕಬೇಕಲ್ಲಾ? ನಾನು ಕರುವಿನ ಮೂತಿಗೆ ಗುದ್ದಿದ್ದು, ದಣಿ ಬಂದು ನನ್ನ ಮೇಲೆ ಬಿದ್ದು ಒದ್ದದ್ದು ನೆನಪಿದೆ. ಅಲ್ಲೀವರೆಗೂ ಚೆನ್ನಾಗಿ ಜ್ಞಾಪಕ ಇದೆ. ಆಮೇಲೆ ಎಲ್ಲಾ ಮಂಜು ಮಂಜು. ಇದ್ದಕಿದ್ದ ಹಾಗೆ ನಿದ್ರೆ ಬಂತು ಅನ್ನುವ ಹಾಗೆ. ಎಚ್ಚರ ಆದಾಗ ಹಂಡತಿ ಪಕ್ಕದಲ್ಲಿದ್ದಳು, ನಾನು ಸಣ್ಣ ಮಗು ಅನ್ನುವ ಹಾಗೆ ಸಮಾಧಾನ ಹೇಳುತ್ತಾ ಉಪಚಾರ ಮಾಡುತಾ ಇದ್ದಳು. ಅವಳಿಗೂ ಹೇಳಿದೆ. ‘ಬಾಯಿ ಮುಚ್ಚಿಕೊಂಡಿರು,’ ಅಂದಿದ್ದು ಜ್ಞಾಪಕ ಇದೆ. ಅಂಂದಮೇಲೆ ಯಾರನ್ನಾದರೂ ಕೊಂದಿದ್ದರೆ ನನಗೆ ಜ್ಞಾಪಕ ಇರುತ್ತಿರಲಿಲ್ಲವಾ? ಆದರೂ ನಾನು ಧಣಿ ಜಸ್ಟೋನನ್ನು ಕೊಂದೆ ಅನ್ನುತ್ತಾರೆ? ಹೇಗೆ ಕೊಂದೆ? ಕಲ್ಲಿನಲ್ಲಿ ಹೊಡೆದು, ಅನ್ನತಾರೆ ಅಲ್ಲವಾ? ಸರಿ, ಸರಿ. ನಾನೇನಾದರೂ ಚಾಕುವಿನಲ್ಲಿ ಚುಚ್ಚಿ ಸಾಯಿಸಿದೆ ಅಂದರೆ ಅವರ ತಲೆ ಕೆಟ್ಟಿದೆ ಅನ್ನುತಿದ್ದೆ. ಹುಡುಗನಾಗಿದ್ದಾಗನಿಂದ ಚಾಕು ಇಲ್ಲವೇ ಇಲ್ಲ ನನ್ನ ಹತ್ತಿರ. ಹುಡುಗ ಆಗಿದ್ದಿದ್ದು ಯಾವ ಕಾಲದಲ್ಲಿ.’
* * *

ಧಣಿ ಜಸ್ಟಿನ್ ಬ್ರಂಬಿಲ ಸೋದರ ಸೊಸೆ ಮಾರ್ಗರಿಟಳನ್ನು ಹಾಗೇ ನಿದ್ರೆ ಮಾಡಲು ಬಿಟ್ಟು ಸದ್ದು ಮಾಡದೆ ಹೊರಗೆ ಬಂದಿದ್ದ. ಅವನ ಅಕ್ಕ ಅಲ್ಲೇ ಪಕ್ಕದ ಕೋಣೆಯಲ್ಲಿ ಮಲಗಿದ್ದಳು. ಎರಡು ವರ್ಷದಿಂದ ಚಿಂದಿ ಬಟ್ಟೆಯ ತುಂಡಿನ ಹಾಗೆ ಅಲ್ಲೇ ಬಿದ್ದುಕೊಂಡಿದ್ದಳು. ಅವಳ ಕಾಲು ಹೋಗಿದ್ದವು. ಯಾವಾಗಲೂ ಎಚ್ಚರವಾಗಿರುತಿದ್ದಳು. ಬೆಳಗಿನ ಜಾವ ಸ್ವಲ್ಪ ಹೊತ್ತು ಕಣ್ಣು ಹತ್ತುತಿದ್ದವು. ಆಗ ಸಾವಿಗೆ ಶರಣಾಗುವ ಹಾಗೆ ನಿದ್ರೆ ಹೋಗುತಿದ್ದಳು.

ಸೂರ್ಯ ಮೇಲೆ ಬಂದಾಗ, ಈಗ, ಅವಳು ಏಳುತ್ತಾಳೆ. ಮಲಗಿದ್ದ ಮಾರ್ಗರಿಟಾಳನ್ನನ ಹಾಸಿಗೆಯ ಮೇಲೆ ಬಿಟ್ಟು ಅವನು ಹೋಗುತ್ತಿರುವಾಗ ಕಣ್ಣುಬಿಡುತಿದ್ದಾಳೆ. ಮಗಳ ಉಸಿರಾಟದ ಸದ್ದು ಕೇಳಿ ‘ರಾತ್ರಿ ಎಲ್ಲಿದ್ದ ಮಾರ್ಗರಿಟಾ?’ ಅನ್ನುತ್ತಾಳೆ. ಅವಳು ಕಿರುಚುವುದಕ್ಕೆ ಶುರುಮಾಡಿ ಅವಳು ಎಚ್ಚರವಾಗುವುದರೊಳಗೆ ಜಸ್ಟಿನೊ ಬ್ರಂಬಿಲ ಸದ್ದಿಲ್ಲದೆ ಕೋಣೆ ಬಿಟ್ಟು ಹೊರಟಿದ್ದ.

ಬೆಳಗ್ಗೆ ಆರು ಗಂಟೆಯಾಗಿತ್ತು.

ಮುದುಕ ಎಸ್ಟೆಬಾನ್‍ಗಾಗಿ ಕೊಟ್ಟಿಗೆಯ ಬಾಗಿಲು ತೆಗೆಯುವುದಕ್ಕೆ ಹೋದ. ನೇಗಿಲು, ಮಿಣಿ ಸರಂಜಾಮು ಇರುವ ಕೋಣೆಗೆ ಮೊದಲು ಹೋಗಿ, ರಾತ್ರಿ ತಾನು ಮತ್ತು ಮಾರ್ಗರಿಟಾ ಮಲಗಿದ್ದ ಹಾಸಿಗೆ ಸರಿಮಾಡಿ ಬರಬೇಕು ಅಂದುಕೊಂಡ. ‘ಪಾದ್ರಿ ಒಪ್ಪಿಕೊಂಡರೆ ಅವಳನ್ನ ಮದುವೆ ಆಗಬಹುದು. ಅವನನ್ನ ಕೇಳಿದರೆ ಗುಲ್ಲು ಮಾಡತಾನೆ. ಇದು ಹಾದರದ ಸಂಬಂಧ ಅನ್ನತಾನೆ. ನಮ್ಮಿಬ್ಬರಿಗೂ ಬಹಿಷ್ಕಾರ ಹಾಕತಾನೆ. ಇದನ್ನ ಗುಟ್ಟಾಗಿಡುವುದೇ ಒಳ್ಳೆಯದು,’ ಅಂತ ಯೋಚನೆ ಮಾಡಿಕೊಂಡು ಬರುತಿರುವಾಗ ಮುದುಕ ಎಸ್ಟೆಬಾನ್ ಕರುವನ್ನು ಗುದ್ದುತಿರುವುದು ನೋಡಿದ. ಅದರ ಬಾಯಿ ಮೇಲೆ ಹೊಡೆದು ತಲೆಯ ಮೇಲೆ ಗುದ್ಗುತಿದ್ದ. ಕರು ನೆಲದ ಮೇಲೆ ಬಿದ್ದು ಮೇಲೇಳಲಾರದೆ ಕಾಲು ಜಾಡಿಸುತಿತ್ತು. ಅದರ ಕತೆ ಮುಗಿದ ಹಾಗೇ.

ಅವನು ಓಡಿ ಹೋಗಿ ಮುದುಕನ ಕತ್ತು ಹಿಡಿದು ಎಳೆದ, ಕಲ್ಲಿನ ಮೇಲೆ ದೂಡಿದ. ಅವನನ್ನು ಒದೆಯುತ್ತ ಬಾಯಿಗೆ ಬಂದ ಹಾಗೆ ಬೈದ. ಮಾತು ಮಿತಿ ಮೀರಿತ್ತು. ಎಲ್ಲಾ ಮಂಜು ಮಂಜಾದ ಹಾಗೆ, ಕೊಟ್ಟಿಗೆಯ ನೆಲಕ್ಕೆ ಹಾಕಿದ್ದ ಕಲ್ಲು ಚಪಡಿಯ ಮೇಲೆ ಬೀಳುತಿದ್ದೇನೆ ಅನ್ನಿಸಿತು. ನಿಲ್ಲುವುದಕ್ಕೆ ಹೋಗಿ ಬಿದ್ದ. ಮೂರನೆಯ ಬಾರಿ ಪ್ರಯತ್ನ ಪಟ್ಟ, ನಿಶ್ಚಲವಾಗಿಬಿಟ್ಟ, ಕಣ್ಣು ತೆರೆದರೆ ನೋಟಕ್ಕೆ ಅಡ್ಡವಾಗಿ ದೊಡ್ಡದೊಂದು ಕರಿಯ ಮೋಡ ಬಂದು ನಿಂತ ಹಾಗಿತ್ತು. ಅವನಿಗೆ ನೋವಿರಲಿಲ್ಲ. ಕಪ್ಪು ಕವಿಯುತ್ತಿತ್ತು. ಮನಸ್ಸು ಕಪ್ಪಾಗುತಿತ್ತು, ಪೂರಾ ಕಪ್ಪಾಯಿತು.
* * *

ಸೂರ್ಯ ತುಂಬ ಮೇಲೆ ಬಂದಮೇಲೆ ಮುದುಕ ಎಸ್ಟೆಬಾನ್ ಎಚ್ಚರಗೊಂಡ. ತಡವರಿಸುತ್ತ, ನರಳುತ್ತಾ ಹೆಜ್ಜೆ ಹಾಕಿದ. ಗೇಟು ಹೇಗೆ ತೆಗೆದೆ, ರಸ್ತೆಗೆ ಹೇಗೆ ಬಂದ ಅವರಿಗೆ ಗೊತ್ತಾಗಲಿಲ್ಲ. ಕಣ್ಣು ಮುಚ್ಚಿಕೊಂಡು, ದಾರಿ ಉದ್ದಕ್ಕೂ ರಕ್ತದ ಕಲೆ ಮಾಡಿಕೊಂಡು ಅದು ಹೇಗೆ ಮನೆಗೆ ಬಂದ ಅವರಿಗೆ ಗೊತ್ತಾಗಲಿಲ್ಲ. ಮನೆಗೆ ಬಂದ. ಮಂಚದ ಮೇಲೆ ಮಲಗಿದ. ನಿದ್ದೆ ಹೋದ.
* * *

ಮಾರ್ಗರೀಟಾಗೆ ಎಚ್ಚರವಾದಾಗ ಹನ್ನೊಂದು ಗಂಟೆಯಾಗಿರಬೇಕು. ಜಸ್ಟಿನೋ ಬ್ರಾಂಬಿಲೋನನ್ನು ಹುಡುಕಿಕೊಂಡು ಕೊಟ್ಟಿಗೆಗೆ ಬಂದಳು. ಅಳುತ್ತಾ ಇದ್ದಳು. ಯಾಕೆಂದರೆ ಅವಳಮ್ಮ ಗಂಟೆಗಟ್ಟಲೆ ಉಪದೇಶಮಾಡಿ ಅವಳನ್ನ ಸೂಳೆ ಅಂತ ಕರೆದಿದ್ದಳು.

ಜಸ್ಟಿನೋ ಬ್ರಾಂಬಿಲೋ ಸತ್ತಿರುವುದನ್ನು ನೋಡಿದಳು.
* * *

‘ಸರಿ. ನಾನು ಅವನನ್ನು ಕೊಂದೆ ಅನ್ನುತ್ತಾರೆ. ಕೋಪಕ್ಕೇ ಸತ್ತಿರಬಹುದು ಅವನು. ಅವನಿಗೆ ಸಿಟ್ಟು ಜಾಸ್ತಿ. ಎಲ್ಲಾನೂ ತಪ್ಪಾಗಿ, ಕೆಟ್ಟದಾಗಿ ಕಾಣುತಿತ್ತು ಅವನಿಗೆ. ಕೊಟ್ಟಿಗೆ ಗಲೀಜು; ಬಾನಿಯಲ್ಲಿ ನೀರಿಲ್ಲ; ಹಸು ಬಡಕಲಾಗಿವೆ; ಎಲ್ಲಾನೂ ಕೆಟ್ಟದಾಗೇ ಕಾಣುತಿತ್ತು ಅವನಿಗೆ. ನಾನು ತೆಳ್ಳಗಿರುವುದೂ ಸಿಟ್ಟು ತರಿಸುತಾ ಇತ್ತು. ತಿನ್ನುವುದಕ್ಕೆ ಏನೂ ಇಲ್ಲದೆ ಇರುವಾಗ ತೆಳ್ಳಗಾಗದೆ ಹೇಗಿರಲಿ, ಇಡೀ ದಿನ ಹಸುಗಳನ್ನು ಮೇಯಿಸಿಕೊಂಡು ಇರುತಿದ್ದೆ. ಜಿಕ್ವಿಲ್ಪದಲ್ಲಿ ಅವನೊಂದು ಹುಲ್ಲುಗಾವಲು ಖರೀದಿಮಾಡಿದ್ದ. ಹಸುಗಳನ್ನು ಅಲ್ಲಿಗೆ ಕರೆದುಕೊಂಡು ಹೋಗಿ ಹೊಟ್ಟೆ ತುಂಬ ಮೇಯಿಸಿಕೊಂಡು ಮತ್ತೆ ಕರಕೊಂಡು ಬರುತಿದ್ದೆ. ಶಾಶ್ವತವಾದ ಯಾತ್ರೆಯ ಹಾಗಿತ್ತು ಇದು.

‘ಈಗ ನನ್ನ ಜೈಲಿಗೆ ಹಾಕಿದ್ದಾರೆ. ಧಣಿ ಜಸ್ಟೋಗೆ ನನ್ನಿಂದ ಅನ್ಯಾಯವಾಯಿತು ಅಂತ ಮುಂದಿನ ವಾರ ವಿಚಾರಣೆ ಮಾಡತಾರೆ. ನನಗೆ ಜ್ಞಾಪಕ ಇಲ್ಲ. ಮಾಡಿದ್ದರೂ ಮಾಡಿರಬಹುದು. ನಾವಿಬ್ಬರೂ ಕುರುಡಾಗಿದ್ದೆವು, ಒಬ್ಬರನ್ನೊಬ್ಬರು ಕೊಲ್ಲುತಾ ಇದ್ದೇವೆ ಅನ್ನುವುದು ನಮಗೆ ಗೊತ್ತೇ ಆಗಲಿಲ್ಲ ಅಂತ ಕಾಣತ್ತೆ. ನನ್ನಷ್ಟು ವಯಸ್ಸಾದಾಗ ನೆನಪು ಏನೇನೋ ಆಟ ಕಟ್ಟುತ್ತದೆ. ದೇವರಿಗೆ ದೊಡ್ಡ ನಮಸ್ಕಾರ. ನನ್ನ ದೇಹದ ಎಲ್ಲಾ ಶಕ್ತಿಗಳನ್ನೂ ದೇವರು ವಾಪಸ್ಸು ತಗೊಂಡರೂ ನನಗೇನೂ ನಷ್ಪವಿಲ್ಲ. ನನ್ನ ಶಕ್ತಿ ಎಲ್ಲಾ ಉಡುಗಿ ಹೋಗಿವೆ. ದೇವರಿಗೆ ದೊಡ್ಡ ನಮಸ್ಕಾರ ಹಾಕುತೇನೆ. ನನ್ನ ಆತ್ಮವಂತೂ ದೇವರಿಗೇ ಸೇರಿದ್ದು.’
* * *

ಸಾನ್ ಗಾಬ್ರಿಯೆಲ್ ಊರಿನ ಮೇಲೆ ಮತ್ತೆ ಕಾವಳ ಇಳಿಯುತಿತ್ತು. ನೀಲಿ ಬೆಟ್ಟಗಳ ಮೇಲೆ ಇನ್ನೂ ಬಿಸಿಲಿತ್ತು. ಇಡೀ ಊರಿಗೆ ಮಣ್ಣಿನ ಬಣ್ಣ ಮೆತ್ತಿಕೊಂಡಿತ್ತು. ಕತ್ತಲಿಳಿಯಿತು. ಅವತ್ತು ರಾತ್ರಿ ಯಾರ ಮನೆಯಲ್ಲೂ ದೀಪ ಹಚ್ಚಿರಲಿಲ್ಲ. ದೀಪಗಳ ಒಡೆಯ ಡಾನ್ ಜಸ್ಟೋ ಸಾವಿಗೆ ಎಲ್ಲರೂ ಶೋಕ ಮಾಡುತಿದ್ದರು. ಬೆಳಗಿನ ಜಾವದವರೆಗೂ ನಾಯಿ ಬೊಗಳುತಿದ್ದವು. ಚರ್ಚಿನ ಬೆಳಕು ಕಿಟಕಿಗಳ ಬಣ್ಣದ ಗಾಜನ್ನು ಹಾದು ಬರುತಿತ್ತು. ಸತ್ತ ಮನುಷ್ಯನ ಶವ ಇಟ್ಟುಕೊಂಡು ಜಾಗರಣೆ ಮಾಡುತಿದ್ದರು. ಹೆಂಗಸರು ‘ನರಳುವ ಜೀವಗಳೇ ಬನ್ನಿ,’ ಎಂದು ಕೀಚಲು ದನಿಯಲ್ಲಿ ಹಾಡುತಿದ್ದರು. ಸತ್ತವನಿಗಾಗಿ ಇಡೀ ರಾತ್ರಿ, ಬೆಳಗಿನ ಜಾವದ ಮೊಳಗಿನವರೆಗೂ ಚರ್ಚೆನ ಗಂಟೆ ಮೊಳಗುತಿತ್ತು.
*****
ಸ್ಪಾನಿಷ್ ಮೂಲ: ಹ್ವಾನ್ ರುಲ್ಫೋ Juan Rulfo
ಕಥೆ ಹೆಸರು : En la madrugada / At daybreak

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪಕ್ಕವಾದ್ಯ
Next post ನನ್ನೂರ ಬಾಲೆ

ಸಣ್ಣ ಕತೆ

 • ಹಳ್ಳಿ…

  ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…

 • ಮಿಂಚಿನ ದೀಪ

  ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

 • ಕೊಳಲು ಉಳಿದಿದೆ

  ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

 • ಯಿದು ನಿಜದಿ ಕತೀ…

  ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

 • ತಿಮ್ಮರಯಪ್ಪನ ಕಥೆ

  ರಂಗಣ್ಣ ಎರಡು ತಿಂಗಳು ಕಾಲ ರಜ ತೆಗೆದು ಕೊಂಡು ಬೆಂಗಳೂರಿಗೆ ಬಂದು ವಾಸಮಾಡುತ್ತಿದ್ದನು. ಶಿವಮೊಗ್ಗದಲ್ಲಿ ಪಿತ್ತವೇರಿಸುವ ತುಂಗಾಪಾನವನ್ನು ನಿತ್ಯವೂ ಮಾಡಿ, ಕಿವಿ ಮೂಗು ಬಾಯಿಗಳಿಗೆಲ್ಲ ಮುಸುರುವ ಸೊಳ್ಳೆಗಳ… Read more…