ಅನುಪಮಾ ನಿರಂಜನ

ಅನುಪಮಾ ನಿರಂಜನ

ಅನುಪಮಾ ನಿರಂಜನ ಎಂಬ ಹೆಸರು ಹೊಸದಾಗಿ ತಾಯ್ತನಕ್ಕೆ ಸಜ್ಜಾಗುವವರಿಗೆ, ಕಿಶೋರಾವಸ್ಥೆ ಮುಟ್ಟುತ್ತಿರುವವರಿಗೆ ಬಹು ಪರಿಚಿತ ಹೆಸರು. ಅವರ ‘ತಾಯಿ-ಮಗು’ ಪುಸ್ತಕ ಬಂದು ಎಷ್ಟೋ ವರ್‍ಷಗಳಾಗಿವೆ. ಪ್ರಾಯಶಃ ಪುಸ್ತಕ ಬಂದ ಹೊಸದರಲ್ಲಿದ್ದಿರಬಹುದಾದ ಎಷ್ಟೋ ಔಷಧಗಳು ಬದಲಾಗಿವೆ. ಅನೇಕ ಹೊಸ ವೈದ್ಯಕೀಯ ಪದ್ಧತಿಗಳು ಬಂದಿವೆ. ಅವುಗಳ ನಡುವೆಯೂ ಅನುಪಮಾ ಪುಸ್ತಕ ಯಾಕೆ ಪ್ರಿಯವಾಗುವುದು? ಅನುಪಮಾ ವೈದ್ಯಕೀಯ ಕ್ಷೇತ್ರವನ್ನು ತಮ್ಮ ವೃತ್ತಿಯಾಗಿ ಆರಿಸಿಕೊಂಡಿದ್ದರಾದರೂ ಅವರ ಪ್ರಿಯವಾದ ಹವ್ಯಾಸ ಬರವಣಿಗೆ. ಅದನ್ನು ತಮ್ಮ ವೃತ್ತಿಯ ಜೊತೆಗೇ ಸಾಗಿಸಿಕೊಂಡು ಹೋದವರು ಅವರು. ಹೀಗಾಗಿ ಅವರ ಕ್ಲಿನಿಕ್ ಗಳಲ್ಲಿ ಬರುತ್ತಿದ್ದ ಎಷ್ಟೋ ಜನ ಮಹಿಳೆಯರ ಕಷ್ಟ ಸುಖಗಳನ್ನು ಆಲಿಸಿ ತಮ್ಮ ಜೀವನಾನುಭವವನ್ನಾಗಿ ಮಾಡಿಕೊಂಡರು. ಅವನ್ನು ಸಾಹಿತ್ಯಕವಾಗಿ ಅಭಿವ್ಯಕ್ತಿಸಿದರು. ಇಷ್ಟಾಗಿಯೂ ಅವರಿಗೆ ಜನಸಾಮಾನ್ಯರಿಗೆ ಏನನ್ನಾದರೂ ತಿಳಿಸಿ ಹೇಳುವಂತಹ ಸಾಹಿತ್ಯದ ಅಗತ್ಯ ಇದೆ ಎಂದು ಅನ್ನಿಸಿತ್ತೇನೊ. ಆದುದರಿಂದಲೇ ವೈದ್ಯಸಾಹಿತ್ಯ ಎಂಬ ಹೊಸ ಪ್ರಕಾರವನ್ನೇ ಸೃಜಿಸಿಕೊಂಡು ಅಲ್ಲಿ ತಮ್ಮ ಡಾಕ್ಟರಿಕೆಯ ಅನುಭವಗಳನ್ನು ಜನಸಾಮಾನ್ಯರಿಗೆ ಅರ್‍ಥವಾಗುವಂತೆ ಬರೆಯತೊಡಗಿದರು. ಹೊಸದಾಗಿ ದಾಂಪತ್ಯ ಶುರು ಮಾಡುವವರಿಗೆ ಲೈಂಗಿಕ ಶಿಕ್ಷಣದ ಅವಶ್ಯಕತೆಯನ್ನು ಮನಗಂಡರು; ಹೊಸದಾಗಿ ಪ್ರಾಯಕ್ಕೆ ಬರುತ್ತಿದ್ದ ಹುಡುಗಿಯರು ಅನುಭವಿಸುತ್ತಿದ್ದ ಅನೇಕ ಮನೋದೈಹಿಕ ಕ್ಲೇಶಗಳಿಗೆ ಉತ್ತರ ಹೇಳಬೇಕೆಂದುಕೊಂಡರು; ಕ್ಯಾನ್ಸರ್ ರೋಗದ ಲಕ್ಷಣಗಳನ್ನು ತಿಳಿಸಿಕೊಟ್ಟು ಬೇನೆಯನ್ನು ಧೈರ್‍ಯವಾಗಿ ಎದುರಿಸುವ ರೀತಿಯನ್ನು ಹಂಚಿಕೊಳ್ಳಬೇಕೆಂಬ ಅಪೇಕ್ಷೆಯಿಟ್ಟುಕೊಂಡರು. ಅವಕ್ಕೆಲ್ಲಾ ಉತ್ತರವಾಗಿ ಅನುಪಮಾ ಅವರಿಗೆ ಹೊಳೆದಿದ್ದು ಸಾಹಿತ್ಯದ ಮಾಧ್ಯಮವೆ. ಅದನ್ನು ಸಮರ್‍ಥವಾಗಿ ಬಳಸಿಕೊಂಡರು. ಸ್ವತಃ ಅನುಪಮ ಅವರು ಕ್ಯಾನ್ಸರ್ ಪೀಡಿತರಾಗಿದ್ದು ಅದರಿಂದ ಅನುಭವಿಸಿದ ಕಷ್ಟವನ್ನು ಕತೆ ಮಾಡಿ ಹೇಳುವಾಗ ಕನ್ನಡ ಓದುಗ ಜಗತ್ತು ಹೊಸತೊಂದು ಅನುಭವಲೋಕಕ್ಕೆ ತೆರೆದುಕೊಂಡಿತು. ಅಷ್ಟೇ ಅಲ್ಲ, ವರ್‍ತಮಾನದಲ್ಲಿ ಬರುತ್ತಿರುವ ನಾನ್-ಫಿಕ್ಷನ್ ಮಾದರಿಗಳನ್ನು ಅಂದೇ ನಿರೀಕ್ಷಿಸಿದಂತೆ ಬರೆದ ಬರವಣಿಗೆಯನ್ನು ಆಸ್ವಾದಿಸಿತು. ಮಕ್ಕಳಿಗೆಂದೇ ಮುನ್ನೂರ ಅರವತ್ತೈದು ಕತೆಗಳನ್ನು ಬರೆದರು. ಅದೂ ಕೂಡ ಅವರ ಸ್ವಂತ ಅನುಭವ, ಕಲ್ಪನೆಗಳು, ಪುರಾಣಗಳನ್ನಾಧರಿಸಿ ತಮ್ಮ ಮಕ್ಕಳಿಗೆ ಕತೆ ಹೇಳಬೇಕಾದ ಅನಿವಾರ್‍ಯತೆಯನ್ನು ಅನುಭವಿಸಿ ಬರೆದಿದ್ದು. ಇದರಿಂದ ಕನ್ನಡ ನಾಡಿನ ಮಕ್ಕಳಿಗೆಲ್ಲ ದಿನಕ್ಕೊಂದು ಕಥೆ ಸಿಗುವಂತಾಯ್ತು. ಹೀಗೆ ತಮಗೆ ಅಪರಿಚಿತವೆನ್ನಿಸಿಕೊಂಡ ಪ್ರಕಾರಗಳಲ್ಲೆಲ್ಲಾ ಕೈಯಾಡಿಸಿ ವಿಕ್ರಮವನ್ನೇ ಸಾಧಿಸಿದರು. ಅವರ ಹೆಸರಿನಲ್ಲಿರುವ ನಿರಂಜನರನ್ನು ಬಿಟ್ಟರೂ ಅನುಪಮಾ ಸ್ವಂತಶಕ್ತಿಯ ಮೇಲೆ ನಿಲ್ಲಬಲ್ಲವರೆಂದು ಸಾಧಿಸಿ ತೋರಿಸಿದರು. ಅವರ ಸಾಹಸಗಳಿಗೆ ಹ್ಯಾಟ್ಸಾಫ್ ಹೇಳಲೇಬೇಕು.

ಅನುಪಮಾ ಸಾಹಸಿ. ಅವರ ಜೀವನವೇ ಒಂದು ಸಾಹಸಗಾಥೆ. ಅವರ ತಂದೆ ಮನೆಯ ಬಡತನದ ದಿನಗಳಿಂದ ವೈದ್ಯಕೀಯ ಶಿಕ್ಷಣ ಪಡೆದದ್ದು ಒಂದು ಹಂತದ ಸಾಹಸವಾದರೆ ತಾವು ಪ್ರೇಮಿಸಿದ ನಿರಂಜನರನ್ನು ಅಂತರ್‍ಜಾತೀಯ ವಿವಾಹವಾಗಿದ್ದು ಎರಡನೇ ಹಂತದ ಸಾಹಸ. ಜೀವನದ ಪ್ರತಿ ಹಂತದಲ್ಲಿಯೂ ಸವಾಲುಗಳನ್ನು ಎದುರಿಸಿದ ಅನುಪಮಾ ಅವರೊಳಗೆ ಒಬ್ಬ ಲೇಖಕಿ ಅಡಗಿ ಕುಳಿತಿದ್ದಳು. ಅವಳನ್ನು ಅವರು ಸದಾ ಪ್ರೋತ್ಸಾಹಿಸುತ್ತಲೇ ಇದ್ದರು. ಬರವಣಿಗೆ ಹೊರಬರುತ್ತಲೂ ಇತ್ತು. ಆದರೇನು ಅವು ಸಾಧಾರಣ ದರ್‍ಜೆಯವಾಗಿದ್ದವು. ಅವರಿಗೇ ಸಮಾಧಾನವಾಯಿತೋ ಇಲ್ಲವೋ ಅವರ ಪತಿ ನಿರಂಜನರು ಒಮ್ಮೆ ಬಾಯಿಬಿಟ್ಟು ಹೇಳಿದರು; ಅವರ ಸಾಹಿತ್ಯಕ್ಕೆ ಪೂರಕ ಓದು, ಧ್ಯಾನ ಅಗತ್ಯ ಎಂಬುದನ್ನು ಕಿವಿ ಮೇಲೆ ಹಾಕಿದರು. ಇಷ್ಟು ಹೊತ್ತಿಗೆ ಅನುಪಮಾ ಅವರ ಮಗಳೇ ಓದಿನಲ್ಲಿ ತೊಡಗಿಕೊಂಡು ಬಿಟ್ಟಿದ್ದಳು. ಅದನ್ನು ನೋಡಿದ ಮೇಲೆ ಅನುಪಮಾ ತಾವೇ ಕ್ರಿಯಾಶೀಲರಾದರು. ಸಾಕಷ್ಟು ಓದಿಕೊಂಡರು, ಬೆಳೆದರು. ಇದೂ ಕೂಡ ಒಂದು ರೀತಿಯಲ್ಲಿ ಸಾಹಸವೇ. ಏಕೆಂದರೆ ಹೆಣ್ಣಿಗೆ ಬೇಕಾದ ವಿರಾಮ ಎಂದಿಗೂ ಸಿಗದ ಸಂಗತಿ, ಮನೆಗೆಲಸ, ಜೈವಿಕ ಜವಾಬ್ದಾರಿಗಳನ್ನು ನಿಭಾಯಿಸುತ್ತಾ ತಮಗೆ ಬೇಕಾದ ವಿರಾಮವನ್ನು ದಕ್ಕಿಸಿಕೊಳ್ಳುವುದು ಎಷ್ಟು ಕಷ್ಟ ಎಂಬ ಹೊಳಹು ಅವರಿಗೆ ವರ್‍ಜೀನಿಯಾ ವೂಲ್ಫಳಿಂದ ಸಿಕ್ಕಿತು. ವೂಲ್ಫಳ ‘ಎ ರೂಮ್ ಆಫ್ ಒನ್ಸ್ ಓನ್’ ಎಂಬ ಕೃತಿ ಅವರಿಗೆ ಸ್ತ್ರೀ ಸ್ವಾತಂತ್ರದ ಹೊಸ ಅರ್‍ಥವನ್ನೇ ಮಾಡಿಸಿತು. ಪುಸ್ತಕದ ಅನುಭವಗಳನ್ನು ತಮ್ಮ ಬದುಕಿಗೆ, ಭಾರತೀಯ ಮಹಿಳೆಯ ಬದುಕಿಗೆ ತಾಳೆ ಹಾಕಿ ನೋಡಿದಾಗ ಅವರಿಗೆ ವೂಲ್ಫಳ ಮಾತು ಸತ್ಯವೆನಿಸಿತು. ಅದನ್ನು ಅವರು ಎಲ್ಲೆಡೆ ಪ್ರಚುರ ಪಡಿಸಲು ಅನುವಾದರು. ಸ್ತ್ರೀವಾದಿ ಓದಿನಿಂದ ಅನುಪಮಾ ಅವರ ಅನುಭವಗಳಿಗೆ ಖಚಿತತೆ ಬರತೊಡಗಿತು. ಅವರ ಸ್ತ್ರೀದೃಷ್ಟಿಕೋನ ಹಿರಿದಾಯಿತು. ಮಹಿಳೆಯ ಶಿಕ್ಷಣ, ಅವರ ಉದ್ಯೋಗದ ಅವಕಾಶಗಳನ್ನು ಒಣ ವೇದಾಂತವಾಗಿ ಗ್ರಹಿಸದೆ, ಆ ವಸ್ತುಗಳನ್ನು ಇಟ್ಟುಕೊಂಡು ಕಾದಂಬರಿಗಳನ್ನು ಬರೆದರು. ಸಮಾಜದಲ್ಲಿನ ಸ್ತ್ರೀ ಪುರುಷರ ಅನುಭವಗಳು ಜೆಂಡರ್ ದೃಷ್ಟಿಕೋನಗಳಲ್ಲಿ ನಲುಗುತ್ತಲಿವೆ ಎನ್ನುವುದನ್ನು ಕಂಡುಕೊಂಡ ಅನುಪಮಾ ಅವುಗಳನ್ನು ಹೋಗಲಾಡಿಸುವ ಬಗೆಗೆ ಆಲೋಚಿಸಲಾರಂಭಿಸದರು. ಅವರ ಒಂದು ಅನುಭವ-ಒಮ್ಮೆ ಅವರು ನಿರಂಜನ ಅವರ ಜೊತೆಗೆ ಅವರ ಗೆಳೆಯರ ಮನೆಗೆ ಹೋದರು. ಅಲ್ಲಿ ಪಡಸಾಲೆಯಲ್ಲಿ ಗಂಡಸರು ಮಾತನಾಡಲಾರಂಭಿಸಿದರು. ಮನೆಯಾಕೆ ಇವರನ್ನು ‘ಬನ್ನಿ’ ಎಂದು ಒಳಗೆ ಚಾಪೆ ಹಾಕಿ ಕೂರಿಸಿದರು. ಅನುಪಮಾಗೆ ಚಡಪಡಿಕೆ, ಸಾಹಿತ್ಯಕ್ಕೆ ಸಂಬಂಧಪಟ್ಟ ಚರ್‍ಚೆಗಳನ್ನು ತಾನೂ ಕೇಳಿಕೊಳ್ಳಬಹುದಿತ್ತು ಎಂಬ ಕಾತುರ. ಆದರೆ ಹೆಣ್ಣಾದ ಕಾರಣಕ್ಕೆ ತನ್ನನ್ನು ಒಳಗೆ ಕರೆತಂದ ವ್ಯವಸ್ಥೆಯ ಬಗೆಗೆ ಬೇಸರ. ಇಂತಹ ಅನೇಕ ಅನುಭವಗಳು ಅವರೊಳಗಿನ ಸ್ತ್ರೀಯನ್ನು ಪೋಷಿಸಿದವು, ತನ್ನತನವನ್ನು ಕಂಡುಕೊಳ್ಳುವುದಕ್ಕೆ ಸಹಾಯ ಮಾಡಿದವು.

ಅನುಪಮಾ ಅವರ ಆತ್ಮ ಚರಿತ್ರೆ ಓದಿದವರಿಗೆ ಅವರ ಬಿಚ್ಚು ಮಾತಿನ ಅರಿವಾಗಿರುತ್ತದೆ. ಅವರ ಇಬ್ಬರು ಹೆಣ್ಣುಮಕ್ಕಳ ಬಗ್ಗೆ ಅವರು ಬರೆಯುವಾಗ ಅತಿಭಾವುಕತೆಯಿಂದ ಬರೆಯುವುದಿಲ್ಲ. ಮಗಳ ಮದುವೆಯ ವಿಷಯದಲ್ಲಿ ಅವರಿಗಾದ ನೋವನ್ನು ಅವರು ಯಾವುದೇ ಹಿಂಜರಿಕೆಯಿಲ್ಲದೆ ದಾಖಲಿಸುತ್ತಾರೆ. ವೈಚಾರಿಕವಾಗಿ ಬದುಕನ್ನು ನೋಡುವ ಗುಣ ಅನುಪಮಾ ರೂಢಿಸಿಕೊಂಡಿದ್ದರು. ತಮ್ಮ ಕಷ್ಟಗಳನ್ನು ಹೇಳಿಕೊಂಡರೂ ಅವರು ಗೆಲ್ಲಬಹುದಾದ ಆಶಾವಾದವನ್ನು ಪ್ರತಿಪಾದಿಸಿದರು. ಆದ್ದರಿಂದಲೇ ಹಲವಾರು ಬಗೆಯ ಕ್ಯಾನ್ಸರ್‌ಗೆ ತುತ್ತಾದರೂ ಅವರ ಆತ್ಮವಿಶ್ವಾಸವು ಕುಂದಿರಲೇ ಇಲ್ಲ.

ಅನುಪಮಾ ಲೇಖಕಿಯಾಗಿ ನೋಡುವಾಗ ಕೆಲವು ಓರೆಕೋರೆಗಳು ಕಾಣುತ್ತವೆ. ಅನುಪಮಾ ಬರೆದದ್ದೆಲ್ಲಾ ಚಿನ್ನವಲ್ಲ. ಅಂದಿನ ಲೇಖಕಿಯರು ಬರೆಯುತ್ತಿದ್ದ ಜನಪ್ರಿಯ ಮಾದರಿಯಲ್ಲೇ ಅವರ ಕಾದಂಬರಿಗಳೂ ಸಾಗುತ್ತಿದ್ದವು. ಅವುಗಳಿಗೆ ಒಳನೋಟ ಇರಲಿಲ್ಲ. ವಿಮರ್‍ಶಾತ್ಮಕ ಆಯಾಮಗಳೂ ಇರಲಿಲ್ಲ. ಆದರೆ ಕಾದಂಬರಿಯೊಂದನ್ನು ವೈಚಾರಿಕವಾಗಿ ಹೇಗೆ ಸೃಷ್ಟಿಸಬಹುದೆಂಬುದು ಅವರಿಗೆ ತಿಳಿದಿತ್ತು. ಅವರ ‘ಮಾಧವಿ’ ಕಾದಂಬರಿಯು ಸ್ತ್ರೀವಾದಕ್ಕೆ ಹೊಸ ದಿಕ್ಕನ್ನೆ ತೋರಿಸಿತು. ಕನ್ನಡದಲ್ಲಿ ಬಂದ ಸ್ತ್ರೀವಾದಿ ಪಠ್ಯಗಳಲ್ಲಿ ಈ ಕಾದಂಬರಿ ಕೂಡ ಒಂದು. ಅವರ ಕಾದಂಬರಿಗಳಲ್ಲಿ ಹೆಚ್ಚಾಗಿ ಸ್ತ್ರೀಯರೇ ಇದ್ದವರು. ಅವರು ಭಾವುಕರೂ, ಸೆಂಟಿಮೆಂಟಲ್‌ಗಳೂ ಆಗಿ ಉಳಿಯದೆ ವೈದ್ಯೆ, ಸಂಶೋಧಕಿ, ಉತ್ಖನನ ಮಾಡುವ ಇತಿಹಾಸಜ್ಞೆ ಎಲ್ಲವೂ ಆದರು. ಈ ಪಾತ್ರಗಳಿಗೆ ಬೇಕಾದ ಪರಿಸರಕ್ಕಾಗಿ ಅನುಪಮಾ ಸಾಕಷ್ಟು ಅಭ್ಯಾಸ ನಡೆಸುತ್ತಿದ್ದರು. ಇಷ್ಟಾದರೂ ಅನುಪಮಾ ಕ್ಲಾಸಿಕ್ ಎನ್ನುವ ಕೃತಿಯನ್ನು ಕೊಡಲು ವಿಫಲರಾದಂತೆ ತೋರುತ್ತದೆ.

ಅನುಪಮಾ ಅವರ ಯಶಸ್ಸು ಅವರ ಗದ್ಯ ಬರಹಗಳಲ್ಲಿದೆ. ಸುಲಲಿತವಾದ ಕನ್ನಡದಲ್ಲಿ ಎಲ್ಲರಿಗು ತಿಳಿಯುವಂತೆ ಬರೆಯಬಲ್ಲ ಅನುಪಮಾ ಈ ದಿಸೆಯಲ್ಲಿ ಹೊಸಹಾದಿಯನ್ನೇ ಸೃಷ್ಟಿಸಿದರು. ಜೊತೆಗೆ ಲೇಖಕಿಯರಿಗೆ ಆತ್ಮವಿಶ್ವಾಸವನ್ನು ಗಳಿಸಿಕೊಟ್ಟರು. ಈ ಲೇಖನ ಕೊನೆ ಮಾಡುವ ಹೊತ್ತಿಗೆ ಒಂದು ಸಂಗತಿ ಹೇಳಲೇಬೇಕಿದೆ. ಈ ಲೇಖಕಿಯ ಹುಟ್ಟುಹಬ್ಬ ಮೇ ತಿಂಗಳಿನ ೧೭ ನೆ ತಾರೀಖಿನಂದು, ಲೇಖಕರನ್ನು ನೆನೆಯುವಂತೆ ಲೇಖಕಿಯರನ್ನು ಯಾರೂ ನೆನೆಯುವುದಿಲ್ಲ. ಎಷ್ಟೇ ಆಗಲಿ ಇವರು ಮಹತ್ವದ ಲೇಖಕರಲ್ಲವಲ್ಲ ಎಂಬ ಭಾವನೆ ಈ ಮರೆವಿನ ಹಿಂದೆ ಕೆಲಸ ಮಾಡುತ್ತದೆಯೇನೊ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಡೇ ಆಡು
Next post ತನ್ನತಾನೆ ಚಂದ

ಸಣ್ಣ ಕತೆ

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…