ಮಫ್ಲರ ಗೌಡನ ಮೃತ್ಯುಪತ್ರ

ಮಫ್ಲರ ಗೌಡನ ಮೃತ್ಯುಪತ್ರ


ಬಿರುದಿನ ಬರಗಾಲ

ಮಹಾನಾಜ ರಾ|| ರಾ|| ಸಂಪಾದಕ ಕರ್ನಾಟಕ ವೈಭವ ಇವರಿಗೆ- ಕೃತಾನೇಕ ಶರಣ ಶರಣಾರ್ಥಿ ವಿನಂತಿ ವಿಶೇಷ. ವಿಜಾಪೂರ ಜಿಲ್ಹೆಯೊಳಗಿನ ಜನರ ಸುಖದುಃಖಗಳನ್ನೆಲ್ಲ ಸರಕಾರದ ಮುಂದೆ ಮಂಡಿಸಿ ಮತ್ತು ಅವುಗಳನ್ನು ದಾದ ಮಾಡಿಸಿ ಕೊಡಬೇಕೆಂದು ತಾವು ಕಂಕಣಬದ್ಧರಾಗಿರುವಿರೆಂದು ತಿಳಕೊಂಡು ನಿಮ್ಮ ಕಡೆಗೆ ಈ ಪತ್ರವನ್ನು ಲೋಕಮಾನ್ಯವಾದ ತಮ್ಮ ಪತ್ರದಲ್ಲಿ ಪ್ರಸಿದ್ಧಿಸುವಿರೆಂದು ಆಶೆಗೊಂಡು ಕಳಿಸಿರುನೆನು.

ಯೇಸುಕ್ರಿಸ್ತನ ಪ್ರತಿಯೊಂದು ವರ್ಷದ ಆರಂಭಕ್ಕೆ ಅಂದರೆ ಜಾನೇವಾರಿಯ ಒಂದನೇ ತಾರೀಖಿಗೆ ನಮ್ಮ ದಯಾಳು ತಾಯಿತಂದೆ ಸರಕಾರವು ನಮ್ಮಲ್ಲಿಯ ಎಷ್ಟೋ ಪ್ರಮುಖ ಜನರಿಗೆ ಪದವಿದಾನಗಳನ್ನು ಮಾಡುವದು. ಆ ಪ್ರಕಾರ ಈ ವರ್ಷವೂ ಕೂಡ ಹಿಂದುಸ್ಥಾನದಲ್ಲಿಯ ಸಾವಿರಗಟ್ಲೆ ಜನರಿಗೆ ಪದವಿಗಳು ದೊರೆತಿರುವವು. ಇದರಿಂದ ನನಗೆ ಎಷ್ಟೋ ಆನಂದವು. ಆದರೆ ಈ ಸಾವಿರಾರು ಪದವಿಗಳಲ್ಲಿ ಒಂದಾದರೂ ಕೂಡ ನಮ್ಮ ವಿಜಾಪೂರ ಜಿಲ್ಲೆಯ ಪಾಲಿಗೆ ದೊರೆಯಲಿಲ್ಲೆಂದು ನನಗೆ ಬಹಳ ಖೇದವೆನಿಸುತ್ತದೆ. ವಿಜಾಪೂರ ಜಿಲ್ಲೆಯಲ್ಲಿ ನಾಲ್ಕೈದು ವರ್ಷ ಒಂದೇ ಸವನೇ ಬರವು ಬಿದ್ದರೇನಾಯಿತು? ವಿಜಾಪೂರ ಜಿಲ್ಲೆಯು ನಿರ್ಜನವಾಯಿತೋ ಹೇಗೆ?

ಒಂಬತ್ತು ಲಕ್ಷ ಎಪ್ಪತ್ತು ಸಾವಿರ ಜನಸಂಖ್ಯೆಯಲ್ಲಿ ಸಾವಿರಾರು ಜನರು ಮುಳಸೀಪೇಠೆ ಮುಂಬಯಿ ಮೈಸೂರ ಮತ್ತು ಆಸಾಮಗಳಲ್ಲಿ ಕೂಲಿಯ ದೆಶೆಯಿಂದ ಹೋದರೂ ಕೂಡ ಸಣ್ಣ ರಾವಸಾಹೇಬ ಪದವಿಗೆ ಯೋಗ್ಯವಿದ್ದವನು ವಿಜಾಪೂರ ಜಿಲ್ಹೆಯಲ್ಲಿ ಉಳಿದಿಲ್ಲವೇನು?

ಮುಂಬಯಿ ಇಲಾಖೆಯಲ್ಲಿಯ ಪ್ರತಿಯೊಂದು ಜಿಲ್ಹೆಗೆ ಒಬ್ಬಿಬ್ಬರು ರಾವಸಾಹೇಬರು ಆಗೇ ಆಗಿರುವರು. ಆದರೆ ವಿಜಾಪೂರ ಜಿಲ್ಹೆಯೊಂದೇ ಅಂಥವೇನು ಪಾತಕ ಮಾಡಿರುವದು? ಈ ಜಿಳ್ಹೆಯಲ್ಲಿ ತಮ್ಮ ಮನೆಯ ಕೆಲಸಕ್ಕಿಂತ ಸರಕಾರೀ ಕೆಲಸವನ್ನು ಅತ್ಯಂತ ದಕ್ಷತೆಯಿಂದ ಮಾಡಿದಂಥ ಸರಕಾರಿ ವಕೀಲರಿರುವರು; ಅವರಂತೆ ಮುನಸಿಪಾಲಟಿ ಮತ್ತು ಲೋಕಲ ಬೋರ್ಡಗಳ ಹಿಂದಿನ ಮತ್ತು ಈಗಿನ ಅಧ್ಯಕ್ಷರಿರುವರು; ಸರಕಾರದ ದೊಡ್ಡ ದೊಡ್ಡ ಕಂತ್ರಾಟದ ಕೆಲಸಗಳನ್ನು ಹಿಡಿಯುವಂಥ ಕಂತ್ರಾಟದಾರರಿರುವರು; ಮತ್ತು ಪೆನ್ಶನ್‌ ತಕ್ಕೊಂಡಮೇಲಾದರೂ ಕೂಡ ಒಣ ಪಗಾರಿಯಿಂದ ಸರಕಾರದ ಕೆಲಸಗಳನ್ನು ಮಾಡಲಿಕ್ಕೆ ಯಾವಾಗಲೂ ಟೊಂಕ ಕಟ್ಟಿ ನಿಂತಂಥ ಮತ್ತು ವಾರ್ಧಕ್ಯದಿಂದ ಬಾಗಿದಂಥ ಅನುಭವದಿಂದ ಮುದುಕರಾದಂಥ ಎಷ್ಟೋ ಪೆನ್ಶನರ ಜನರು ಇಲ್ಲಿ ವಾಸ ಮಾಡಿರುವರು. ಹತ್ತು ವರ್ಷಗಳವರೆಗೆ ಒಂದೂ ದಿವಸ ಕೂಡ ತಪ್ಪದೆ ಏಕನಿಷ್ಠೆಯಿಂದ ಕೆಲಸ ಮಾಡಿದಂಥ ಬೆಂಚ ಮ್ಯಾಜಿಸ್ಟ್ರೇಟರಿರುವರು; ಅದರಂತೆ ಪ್ರತಿಯೊಂದು ವರ್ಷಕ್ಕೆ ಸರಕಾರದ ಬೊಕ್ಸಸಿಗೆ ಸಾವಿರಾರು ರೂಪಾಯಿಗಳನ್ನು ಭರಣ ಮಾಡುವಂಥ ಶಿಂದಿಯ ಮಕ್ತೇದಾರರಿರುವರು; ವಿಜಾಪೂರ ಜಿಲ್ಹೆಯಲ್ಲಿ ದುಷ್ಕಾಳವಿದ್ದರೂ ಸಹಿತ ಬಡರೈತರ ಹೊಟ್ಟೆಯ ಮೇಲೆ ಕಾಲ ಕೊಟ್ಬು ಅವರ ಮಾನಮರ್ಯಾದೆಯನ್ನು ಬದಿಗೊತ್ತಿ ಜುಲುಮೆಯಿಂದ ಕರವನ್ನು ವಸೂಲ ಮಾಡುವಂಥ ಬಹಾದ್ದೂರ ಮಾಮಲೇದಾರರಿರುವರು ಕೇವಲ ವರಿಷ್ಠ ಅಮಲದಾರರಿಗೆ ಸರಬರಾಯಿಗಳನ್ನು ಮಾಡುವದರಲ್ಲಿಯೇ ನಿಷ್ಣಾತರಿದ್ದಂಥ ಪೋಲೀಸ ಅಮಲದಾರರು ಕೂಡ ಇರುವರು. ಎಷ್ಟೋ ಸಹಕಾರಿಸ೦ಘಗಳ ಅಧ್ಯಕ್ಷರೂ ಕೂಡ ಇರುವರು. ಮತ್ತು ಹೊತ್ತೊತ್ತಿಗೆ ಏನಾದರೊಂದು ಮಾತಾಡಿ ಜಾತಿದ್ವೇಷಗಳನ್ನು ಬೆಳಿಸುವಂಥ ದೊಡ್ಡ ಭಾಷಣಕಾರರಾದರೂ ಇರುವರು. ಈ ಎಲ್ಲ ಜನಗಳಲ್ಲಿ ಒಬ್ಬನೂ ಕೂಡ ಸರಕಾರದ ಮನಸ್ಸಿಗೆ ಬರಲಿಲ್ಲೆಂದರೆ ಬಹಳ ಆಶ್ಚರ್ಯಕಾರಕವಾದ ಸಂಗತಿಯು. ವಿಜಾಪೂರದ ಪೇಟೆ ಸಣ್ಣ ಪುಟ್ಟದಲ್ಲ. ದೊಡ್ಡ ದೊಡ್ಡ ಪರದೇಶಿ ಅರಿವೆಗಳ ಅಂಗಡಿಗಳ ಮಾಲಕರಿಂದಲೂ, ಕಿರಾಣಿ ವ್ಯಾಪಾರಸ್ಥರಿಂದಲೂ, ಅಡತಿ ಜನರಿಂದಲೂ, ಮನೆಮನೆಗೆ ೫-೬ ಗಾಣಗಳಿದ್ದಂಥ ಗಾಣಿಗರಿಂದಲೂ, ಹತ್ತು ಪೌಂಡದವರಿಗೆ ಚಹಾವನ್ನು ಮಾರುವ ಚಹಾದ ಅಂಗಡಿಗಳಿಂದಲೂ ಮತ್ತು ೧೦,೦೦೦ ಬೀಡಿಗಳನ್ನು ಮಾರುವಂಥ ಬೀಡಿ ಅಂಗಡಿಕಾರರಿಂದಲೂ ಮತ್ತು ಇಂಥ ಎಷ್ಟೋ ತರದ ಜನರಿಂದಲೂ ಕೂಡಿ ಈ ವಿಜಾಪೂರ ಪೇಟೆಗೆ ಶೋಭೆಯುಂಟಾಗಿರುವದು. ಆದರೆ ಇವುಗಳಲ್ಲಿ ಒಬ್ಬನಾದರೂ ಗೃಹಸ್ಥನು ಸರಕಾರದ ಕಣ್ಣಿಗೆ ಬೀಳಲಿಲ್ಲೆಂಬದು ನಮ್ಮ ದುರ್ದೈವವಲ್ಲವೋ? ಪುಣೆ ಮುಂಬಯಿಗಳಲ್ಲಿಯ ಸೇವಾಸದನದಲ್ಲಿದ್ದ ಸ್ರೀಯರಿಗೂ ಕೂಡ ಪದವಿಗಳು ದೊರೆತಿರುವವು. ಆದರೆ ವಿಜಾಪೂರದಲ್ಲಿಯ ಉದ್ದುದ್ದ ಮೀಸೆಯನ್ನು ಹೊತ್ತಂಥ ಮತ್ತು ಬಣ್ಣದ ಗಡ್ಡಗಳನ್ನು ಬೆಳಸಿದಂಥ ಪುರುಷರಿಗೆ ಒಂದಾದರೂ ಪದವಿಯು ದೊರೆಯಬಾರದೆಂದರೆ ಇದಕ್ಕಿಂತ ನಾಚಿಕೆಗೇಡಿತನವು ಎರಡನೆಯದು ಯಾವದು? ಸತ್ಯವಾಗಿ ಹೇಳುವವಾದರೆ ಈ ವರ್ಷ ಒಂದಾದರೂ ಪದವಿಯು ಸಿಗುವದಿಂದು ನನಗೆ ಬಹಳ ಆಶೆಯಿತ್ತು. ಜಾನೇವಾರಿ ೨ನೇ ತಾರೀಖಿನ ವರ್ತಮಾನ ಪತ್ರವನ್ನು ನೋಡಲಿಕ್ಕೆ ನಾನು ಬಹಳೇ ಆತುರನಾಗಿದ್ದೆನು. ವರ್ತಮಾನ ಪತ್ರವು ಕೈಯಲ್ಲಿ ಬಂದ ಕೂಡಲೇ ಮ್ಯಾಟ್ರಿಕ ಕುಳಿತ ವಿದ್ಯಾರ್ಥಿಯಂತೆ ನಾನು ಪದವಿಯನ್ನು ಓದಲಿಕ್ಕೆ, ಸುರು ಮಾಡಿದೆನು. ಯಾದಿಯು ಮೆಟ್ರೀಕ ಪರೀಕ್ಷೆಯ ಪರಿಣಾಮದಷ್ಟೇ ದೊಡ್ಡದಿದ್ದರೂ ಕೂಡ, ಅದರಲ್ಲಿ ನನ್ನ ಹೆಸರು ದೊರೆಯಲಿಲ್ಲ. ಆ ದಿವಸ ನಾನು ಅಷ್ಟೇನು ನಿರಾಶೆಯಾಗಲಿಲ್ಲ. ಯಾಕಂದರೆ ಒಂದು ವೇಳೆ ನನ್ನ ಹೆಸರು ಪುರವಣಿಯ ಯಾದಿಯಲ್ಲಿಯಾದರೂ ಬರಬಹುದೆಂದು ನನಗೆ ಅನಿಸಿತ್ತು. ಆದರೆ ಮೂರು ನಾಲ್ಕು ದಿವಸಗಳಾದರೂ ಕೂಡ ಪುರವಣಿಯ ಯಾದಿಯು ಬರಲಿಲ್ಲವೆಂದು ತಿಳಕೊಂಡು ಮೆ|| ಗವ್ಹರ್ನರ ಸಾಹೇಬರ ಕಡೆಗೆ ಒಂದು ತಂತಿಯನ್ನು ಕಳುಹಿಸಿಕೊಟ್ಟೆನು. ಅದರ ಉತ್ತರ ತೀವ್ರವಾಗಿ ಬರಬೇಕೆಂಬುವದರ ದೆಶೆಯಿಂದ ೧॥ ರೂಪಾಯನ್ನಾದರೂ ನಾನೇ ತುಂಬಿದೆನು. ಆ ತಂತಿಗೆ ಅವರ ಉತ್ತರವು ಬಂದದ್ದೇನೆಂದರೆ “ನೀವು ಯಾರು ಇದ್ದೀರೆಂದು ನಮಗೇನೂ ಗೊತ್ತಿಲ್ಲ ಇದರ ದೆಶೆಯಿಂದ ನನಗೆ ಬಹಳ ಖೇದ ವೆನಿಸುತ್ತದೆ” ಈ ತಂತಿಯನ್ನು ಓದಿದ ಕೂಡಲೇ ನನ್ನ ಸಿಟ್ಟು ನೆತ್ತಿಗೇರಿ ಸಹಿಸಲಾರದೆ ಈ ಇತಿವೃತ್ತವನ್ನು ಬರೆಯಲು ಅರ್ಹ‌ನಾದೆನು. ಒಂದು ಪದನಿಯನ್ನಾದರೂ ದೊರಕಿಸುನ ಸಲುವಾಗಿ ನನ್ನ ಯೋಗ್ಯತೆಯು ಎಷ್ಟು ಅದೆ ಎಂಬದನ್ನು ಮುಂದಿನ ಪತ್ರದಲ್ಲಿ ಬರೆಯುವೆನು. ನೀವು ಈ ಪತ್ರವನ್ನು ಪ್ರಸಿದ್ಧಿಸಿದರೆ ಸರಕಾರವು ಜನರನ್ನು ಯಾವ ಪ್ರಕಾರ ಮೋಸ ಮಾಡುತ್ತದೆಂಬ ಮಾತು ತನ್ನಷ್ಪಕ್ಕೆ ತಾನೇ ಹೊರಬೀಳುವದು.


ಯೋಗ್ಯತಾ ದಿಗ್ದರ್ಶನ

ಈ ಪತ್ರದಲ್ಲಿ ರಾವಸಾಹೇಬ ಇಲ್ಲವೆ ರಾವಬಹಾದ್ದೂರ ಆಗಲಿಕ್ಕೆ ನನ್ನ ಯೋಗ್ಯತೆಯು ಎಲ್ಲಿಯವರೆಗೆ ಇದೆ ಎಂಬುದನ್ನು ಸ್ವಲ್ಪದರಲ್ಲಿ ದಿಗ್ಬರ್ಶನ ಮಾಡಬೇಕೆಂದು ನಾನು ವಿಚಾರಿಸಿರುವೆನು.

ಸ್ವಲ್ಪದರಲ್ಲಿ ಹೇಳುವದಿಂದರೆ ಅದು ನನ್ನ ಅತ್ಮ ಚರಿತ್ರವೇ ಇರುವದು. ದೊಡ್ಡ ದೊಡ್ಡ ಪ್ರಮುಖ ಜನರು ತಮ್ಮ ಆತ್ಮ ಚರಿತ್ರೆಯನ್ನು ಬರೆಯುವರು ಅಂದ ಮೇಲೆ ನಾನು ಸಹಿತ ಯಾಕೆ ಬರೆಯಬಾರದು? ಸರಕಾರೀ ಪದವಿಗಳಿಗೆ ನಾನು ಯೋಗ್ಯನಿದ್ದೇನೆಂದು ನಿಮಗೆ ತಿಳಿಸಬೇಕಾದರೆ ನನ್ನ ಪೂರ್ವದ ಚರಿತ್ರೆಯನ್ನು ಹೇಳುವದು ಅತ್ಯಂತ ಅವಶ್ಯವಿರುವದು.

ಡೋಗಿಬರದ ನಂತರ ೪-೫ ವರ್ಷಗಳ ಮೇಲೆ ವಿಜಾಪೂರ ಜಿಲ್ಹೆಯಲ್ಲಿಯ ಒಂದು ಸಣ್ಣ ಹಳ್ಳಿಯಲ್ಲಿ ನಾನು ಜನಿಸಿದೆನು. ರಾಗೀಬರದಲ್ಲಿ ನನಗೆ ಮೊಗಮಮೀಸೆಗಳು ಒಡೆಯುತ್ತಿದ್ದವು. ನಾವು ಪಾಟೀಲ ಮನೆತನದವರಿದ್ದರೂ ಕೂಡ ನಮ್ಮ ಕಡೆಗೆ ಗೌಡಿಕೆ ಇದ್ದಿದ್ದಿಲ್ಲ. ನಾವು ಬಿದಾರ ಪಾಟೀಲರು. ನಾವು ಮನೆಯಲ್ಲಿ ಎರಡು ಎತ್ತುಗಳನ್ನಿಟ್ಟು ಹೇಗಾದರೂ ಮಾಡಿ ಸಂಸಾರದ ಚಕ್ರನನ್ನು ಸಾಗಿಸುತ್ತಿದ್ದೆವು. ನಾನು ಸಣ್ಣ ವಯಸ್ಸಿನಲ್ಲಿದ್ದಾಗ್ಗೆ ಶಿಕ್ಷಣದ ಪ್ರಸಾರವು ಅಷ್ಟು ಇದ್ದಿದ್ದಿಲ್ಲ. ಆದ್ದರಿಂದ ನಾನು ಕನ್ನಡ ೪ ನೇ ಇಯತ್ತೆಯಲ್ಲಿ ತೇರ್ಗಡೆ ಹೊಂದಿದೆನು. ಇಂಗ್ರೇಜಿ ಸಹಿಯನ್ನು ಈಗ ಇತ್ತಿತ್ತಲಾಗಿ ಕಲಿತಿರುವನು.

ನನ್ನ ಹಿರಿಯರು ನಾನು ಸಾಲೆಯನ್ನು ಬಿಟ್ಟಿ ಕೂಡಲೇ ಓಕ್ಕಲತನದ ಕೆಲಸವನ್ನು ಮಾಡಲಿಕ್ಕೆ ಹೇಳಿದರು, ಅದರೆ ಕೆಲಸವೆಂದರೆ ನನಗೆ ಮೊದಲಿನಿಂದ ಬೇಸರಿಕೆ ಮತ್ತು ನಮ್ಮ ಹಳ್ಳಿಯಲ್ಲಿ ಶಾಲೆಯು ಕೂಡ ಇದ್ದಿದ್ದಿಲ್ಲ ಈ ಎರಡು ಕಾರಣಗಳ ದೆಶೆಯಿಂದ ನಾನು ಅಲ್ಲಿಯೇ ಒಂದು ಶಾಲೆಯನ್ನು ಸ್ಥಾಪಿಸಿ ಅದರಲ್ಲಿಯೇ ಶಿಕ್ಷಕನಾದೆನು. ಮುಂದೆ ಕೆಲವುಕಾಲ ಗತಿಸಿದ ನಂತರ ನನ್ನ ಪ್ರಯತ್ನದಿಂದ ವತನದಾರ ಪಾಟೀಲನು ಬರತರ್ಫನಾದನು. ಮತ್ತು ಗೌಡಕಿಯ ಕೆಲಸದ ಮೇಲೆ ಸರಕಾರದ ವತಿಯಿಂದ ನನ್ನ ನೇಮಣೂಕವಾಯಿತು. ನಾನು ಗೌಡಿಕೆಯ ಕೆಲಸವನ್ನು ಮಾಡುವ ಕಾಲಕ್ಕೆ ನಮ್ಮ ತಾಲೂಕದಲ್ಲಿಯ ಘೌಜದಾರ ಮತ್ತು ಮಾಮಲೀದಾರ ಇವರ ಗುರ್ತು ನನಗೆ ಆಯಿತು. ಮತ್ತು ಅಮಲದಾರಿಗೆ ನಾನು ಮಿತ್ರತ್ವದ ನಾತೆಯಿಂದ ಬೆಣ್ಣಿ, ಕಣಿಕಿ ಮತ್ತು ಕಟ್ಟಿಗೆಗಳನ್ನು ಮೇಲಿಂದ ಮೇಲೆ ಕಳಿಸಹತ್ತಿದೆನು. ನಾನು ಅಮಲದಾರರ ಮನೆಗೆ ಹೋದಾಗೆ, ಅವರು ಸಹಿತ ತಾವು ಚಹವನ್ನು ಕುಡಿದ ನಂತರ ನನಗಾದರೂ ಕುಡಿಯಲಿಕ್ಕೆ ಕೊಡುತ್ತಿದ್ದರು ಈ ವ್ಯವಹಾರದಲ್ಲಿ ನನಗೂ ಲಾಭವಾಗುತ್ತಿತ್ತು. ಮತ್ತು ಅಮುಲದಾರರಿಗೂ ಕೂಡ ಲಾಭವಾಯಿತು. ಮುಂದೆ ಕೆಲವು ದಿವಸಗಳ ನಂತರ ನಾನು ಗೌಡಿಕೆಯನ್ನು ಬಿಟ್ಟರೂ ಕೂಡ ನಾನು ಮೊದಲಿನಂತೆ ಅಮಲದಾರರ ಕಡಿಗೆ ಬೆಣ್ಣಿ ಮೊದಲಾದವುಗಳನ್ನು ಕಳಿಸಿ ಕೊಡಲಿಕ್ಕೆ ಎಂದೂ ತಪ್ಪಲಿಲ್ಲ. ಇದರಂತೆ ಹಳ್ಳಿಯಲ್ಲಿ ದಿವಾಣಿ ಅಥವಾ ಫೌಜದಾರಿ ತಂಟಿಗಳಾದರೆ ನಾನು ವಾದಿ ಅಥವಾ ಪ್ರತಿವಾದಿ ತರ್ಫೆ ಸಾಕ್ಷಿ ಪುರಾವೆಗಳ ಸಹಾಯದ ಸಲವಾಗಿ ಕೋರ್ಟು ಕಚೇರಿಗಳಿಗೆ ಹೋಗಲಿಕ್ಕೆ ಪ್ರಾರಂಭಿಸಿದನು. ಆದ್ದರಿಂದ ಬಡ ಜನರಿಗೆ ಸಹಾಯ ಮಾಡಿದ ಬಗ್ಗೆ ನನಗೆ ಪುಣ್ಯವು ದೊರಕುತ್ತಿತ್ತು. ಮತ್ತು ಹಣದ ದೃಷ್ಟಿಯಿಂದಾದರೂ ವಿಶೇಷ ನನಗೆ ಲಾಭವಾಗುತ್ತಿತ್ತು. ಈ ಪ್ರಕಾರ ಪ್ರಾಮಾಣಿಕ ರೀತಿಯಿಂದ ಸಂಸಾರ ಮಾಡುವ ನನ್ನ ಮೇಲೆ ಪ್ರಾಂತ ಸಾಹೇಬರ ಕೃಪಾ ದೃಷ್ಟಿಯು ಬಿತ್ತು. ಮತ್ತು ಸಾಹೇಬರ ಅನುಗ್ರಹದಿಂದ
ನಮ್ಮ ತಾಲೂಕ ಬೋರ್ಡಿಗೆ ಸರಕಾರ ವತಿಯಿಂದ ನಾನು ಸಭಾಸದನಾದೆನು ಆ ದಿವಸವು ನನ್ನ ಆಯುಷ್ಯದಲ್ಲಿ ಸುವರ್ಣ ಅಕ್ಷರದಿಂದ ಬರೆಯತಕ್ಕಂಧದಿರುವದು. ನಾನು ತಾಲೂಕಾ ಲೋಕಲ್‌ಬೋರ್ಡದ ಸಭೆಗೆ ನನ್ನ ಗಾಡಿಯಲ್ಲಿ ಕೂತು ಹೋಗುವಾಗ್ಗೆ ಪ್ರಕಿಯೊಬ್ಬ ಮನುಶ್ಯನು ನನಗೆ “ಪಾಟೀಲ ಪಾಟೀಲ” ಎಂದು ಆದರ ಪೂರ್ವಕವಾಗಿ ಮಾತಾಡಲಿಕ್ಕೆ ಹತ್ತಿದರು. ನನ್ನ ಅನಂದವು ಆಕಾಶದಲ್ಲಿಯೂ ಕೂಡ ಹಿಡಿಸಲಾರದಷ್ಟಾಯಿತು. ಈ ಕೆಲಸದಲ್ಲಿ ನನಗೆ ಒಂದು ಎಮ್ಮೆ ನಾಲ್ಕು ಗಾಡಿ ಕಣಕಿ ಮತ್ತು ಎಂಟು ಕುಂಬಳಕಾಯಿ; ಇಷ್ಟು ಖರ್ಚು ಬಂದಿತು. ಆದರೆ ಈ ಕೆಲಸದ ಸಲುವಾಗಿ ನಾನು ಇನ್ನೂ ೪ ಎಮ್ಮೆಗಳನ್ನು ಕೊಡಲಿಕ್ಕೆ ಸಿದ್ದನಿದ್ದೆನು. ತಾಲೂಕಾ ಲೋಕಲ ಬೋರ್ಡಿಗೆ ಹೋದನಂತರ ನನ್ನ ಭರಭಾಟಿಯು ಬಹಳೇ ಜೋರಿನಿಂದ ಪ್ರಾರಂಭವಾಯಿತು. ಇದೇ ಸಂಧಿಗೆ ಜರ್ಮನ್‌ ಯುದ್ಧವು ಸುರುವಾಯಿತು. ಮತ್ತು ವಾರಫಂಡನ್ನು ಕೂಡಿಸಲಿಕ್ಕ ಸರಕಾರದವರು ಆರಂಭಿಸಿದರು. ನನ್ನ ತಾಲೂಕಿನಲ್ಲಿ ಜನರು ಫಂಡನ್ನು ಕೂಡಲಿಕ್ಕೆ ತಯಾರಿದ್ದಿದ್ದಿಲ್ಲ. ಎಷ್ಟು ಪ್ರಯತ್ನ ಪಟ್ಟರೂ ಫಂಡು ಕೊಡಲೊಲ್ಲರು. ಕಟ್ಟಕಡೆಗೆ ಕಲೆಕ್ಟರರು ಮತ್ತು ಮಾಮಲೇದಾರ ಮೊದಲಾದವರೆಲ್ಲರೂ ಕಲೆತು ನಮ್ಮ ತಾಲೂಕಿನಲ್ಲಿ ಒಂದು ದೊಡ್ಡ ಸಭೆಯನ್ನು ಮಾಡಿದರು. ಈ ಸಭೆಯಲ್ಲಿ ನಾನು ಭಾಷಣ ಮಾಡಿ ವಾರಲೋನಿಗೆ ೧೦೦೦ ರೂಪಾಯಿ ಕೂಡುತ್ತೇನೆಂದು ವಚನವನ್ನು ಕೊಟ್ಟೆನು.
ಈ ಯುಕ್ತಿಯನ್ನು ಸಾಧಿಸಿ ನನ್ಮು ತಾಲೂಕಿನಲ್ಲಿ ಒಂದು ಕಮೀಟಿಯನ್ನು ವಾರಲೋನ ವಸೂಲ ಮಾಡಲಿಕ್ಕೆ ಸ್ಥಾಪಿಸಿ ಅದಕ್ಕೆ ನಾನು ಅಧ್ಯಕ್ಷನಾದೆನು. ಆ ಮೇಲೆ ಏನು ವಿಚಾರಿಸುವದು? ಹಳ್ಳಿಯಲ್ಲಿ ನನ್ನ ವಿರುದ್ಧ ಇದ್ದ ಎಲ್ಲ ಜನರ ಸಮಾಚಾರವನ್ನು ನಾನು ತಕ್ಕೊಂಡೆನು. ಸರಕಾರಕ್ಕೆ ೧೫-೨೦ಸಾವಿರ ರೂಪಾಯಿಗಳು ಕೂಡಿದವು. ಮತ್ತು ಅವರ ಕೃಪೆಯಿಂದ ನನಗಾದರೂ ೩-೪ ಸಾವಿರ ರೂಪಾಯಿಗಳು ದೊರತವು. ಈ ಸಂಧಿಯನ್ನು ಸಾಧಿಸಿ ನನ್ನನ್ನು ಗೌಡಿಕೆಯಿಂದ ತೆಗೆಯಬೇಕೆಂದು ಪ್ರಯತ್ನ ಪಟ್ಟ ಜನರೆಲ್ಲರ ಸಮಾಚಾರವನ್ನು ನಾನು ಚನ್ನಾಗಿ ತಕ್ಕೊಂಡೆನು. ಭರತಿಯ ಸಲುವಾಗಿಯೂ ಕೂಡ ನಾನು ಮನಃಪೂರ್ವಕ ಸರಕಾರದ ಕೆಲಸ ಮಾಡಿದೆನು. ಅದರಲ್ಲಿ ನನ್ನ ಊರಲ್ಲಿಯ ಕೆಲವು ದಷ್ಟಪುಟ್ಟ ಜನರನ್ನು ಫೌಜದಾರ ಖಾತೆಯಲ್ಲಿ ತೆಗೆದುಕೊಂಡು ಸೈನ್ಯದಲ್ಲಿ ಭರತಿ ಮಾಡಿಸಿದರು. ಅವರು ಹತ್ತು ಜನರಿದ್ದರು. ಆದರೆ ಯುದ್ಧದಲ್ಲಿ ಅವರೆಲ್ಲರೂ ಮರಣ ಹೊಂದಲಿಲ್ಲ. ಅವರಲ್ಲಿ ಮೂವರು ಮಾತ್ರ ತಿರುಗಿ ಬಂದರು. ಅವರು ತಮ್ಮ ಜೀವದಾಸೆಯನ್ನು ಬಿಟ್ಟು ಯುದ್ಧಕ್ಕೆ ಹೋದ್ದರಿಂದ ಅವರಿಗೆ ಈಗ ಯಾವ ತರದ್ದೂ ಭಯವಿರುವದಿಲ್ಲ. ಹಿಂದಿನ ದಾವೆಗಳನ್ನು ನನ್ನ ಮೇಲೆ ತೆಗೆಸುವರು. ಬೇಕಾದ ಹಾಗೆ ನನ್ನ ಮೇಲೇರಿ ಬರುವರು ಮತ್ತು ವಾರಲೋನದ ಸಲುವಾಗಿ ಎಷ್ಟೋ ಜನರು ನನ್ನ ಮೇಲೆ ಸಿಟ್ಟಾಗಿದ್ದರು. ಇನ್ನು ಮೇಲೆ ಊರಲ್ಲಿರುವದು ನೆಟ್ಟಗಲ್ಲೆಂದು ತಿಳಕೊಂಡು ಹೊಲ ಮನೆಗಳ ಯೋಗ್ಯವ್ಯವಸ್ಥೆ ಮಾಡಿ ನಾನು ಹೆಂಡರು ಮಕ್ಕಳನ್ನು ಕಟ್ಟಿ ಕೊಂಡು ವಿಜಾಪೂರಕ್ಕೆ ಬಂದೆನು. ಇನ್ನು ವಿಜಾಪೂರಕ್ಕೆ ಬಂದ ಮೇಲೆ ನನ್ನ ದೈವವು ಹೇಗೆ ತೆರೆಯಿತು? ನಾನು ರಾವಸಾಹೇಬ ಪದವಿಗೆ ಹೇಗೆ ಯೋಗ್ಯನಾದೆ ಎಂಬುದನ್ನು ಇನ್ನು ಮುಂದೆ ಹೇಳುವೆ.


ಏರಿಕೆಯ ರೂಪಾಂತರ

ನಾನು ಹಿಂದಿನ ಪತ್ರದಲ್ಲಿ ಹೇಳಿದಂತೆ ವಿಜಾಪೂರಕ್ಕೆ ಬಂದ ಮೇಲೆ ಹೇಗೆ ಘನತೆಗೇರುತ್ತಾ ಹೋದನೆಂಬುದನ್ನು ಹೇಳುವೆ.

ವಿಜಾಪೂರಕ್ಕ ಬಂದಮೇಲೆ ಸುಮ್ಮನೆ ಕೂಡುವದು ಎಂದೂ ಯೋಗ್ಯವಾಗಲಾರದೆಂದು ವಿಚಾರಿಸಿ ನನ್ನ ಹತ್ತಿರವಿದ್ದ ಎಲ್ಲ ಭಾಂಡವಲ ಹಾಕಿ ಒಂದು ಅಡತಿ ಅಂಗಡಿ ಸ್ಥಾಪನೆ ಮಾಡಿದೆ. ಮತ್ತು ನಮ್ಮ ಊರ ಕಡೆಯ ಎಲ್ಲ ಮಾಲಿನ ಗಾಡಿಗಳನ್ನು ನಮ್ಮಲ್ಲಿಗೆ ಬರುವಂತೆ ಏರ್ಪಾಡು ಮಾಡಿದೆ. ಈ ಅಡತಿ ಅಂಗಡಿಯಿಂದ ಲಾಭವಾಗಬೇಕೆಂದು ಕಾಯಿದೇಶೀರ ಮತ್ತು ಬೇಕಾಯದೇ ಶೀರದಿಂದ ಎಷ್ಟು ಪ್ರಯತ್ನಪಟ್ಟರೂ ವ್ಯರ್ಥವಾಯಿತು. ಎಷ್ಟೋ ತರದ ಉಪಾಯಗಳನ್ನು ಯೋಚಿಸಿದರೂ ಸಹಿತ ಅಂಗಡಿಯು ಹಾನಿಯಲ್ಲಿಯೇ ಬಂದಿತು. ಈ ಕೆಲಸದಲ್ಲಿ ನನಗೆ ಯಶವು ದೊರಕಲಾರದೆಂದು ಶ್ರೀಚನ್ನ ಬಸವೇಶ್ಚರರ ಇಚ್ಛೆಯಿದ್ದಂತೆ ತೋರುತ್ತದೆ. ಅದರೆ ಎರಡನೇ ವಿಷಯದಲ್ಲಿ ನನಗೆ ತೀವ್ರವೇ ಯಶವು ದೊರೆಯಹತ್ತಿತು.

ವಿಜಾಪೂರ ನಗರದಲ್ಲಿ ಎಷ್ಟೋ ಜನರು ಸರಕಾರಿ ಅಧಿಕಾರಿಗಳಿರುವರು. ನಾನು ವಿಜಾಪೂರಕ್ಕೆ ಬಂದ ಮೇಲೆ ದೊಡ್ಡ ದೊಡ್ಡ ಅಮಲದಾರರ ಮನೆಗಳಿಗೆ ಹೋಗಿಬರುವ ಪರಿಪಾಠವನ್ನಿಟ್ಟೆನು. ಏನಾದರೂ ಕೆಲಸವಿರಲಿ ವಿಲ್ಲದಿರಲಿ ಅಮಲದಾರರ ಭೆಟ್ಟಿಯು ನನಗೆ ದಿನಾಲು ಆಗತಕ್ಕದು. ಮುಂಜಾವಿನಲ್ಲಿ ಒಮ್ಮೆ ಯಾರಾದರೊಬ್ಬ ಸರಕಾರಿ ಅಮಲದಾರರ ಭೆಟ್ಟಿ ತೆಗೆದುಕೊಂಡು ಅವರಿಗೆ ನೆಲಮುಟ್ಟಿ ನಮಸ್ಕಾರ ಮಾಡದ ಹೊರತು ನನಗೆ ಊಟವು ರುಚಿ ಹತ್ತುತ್ತಿದಿಲ್ಲ. ಅಮಲದಾರರ ಮನೆಯಲ್ಲಿ ಒಂದು ಶುಭಕಾರ್ಯವಿದ್ದರೆ ಸಾಕು. ಅವರ ಕೆಲಸ ಮಾಡುವದರಲ್ಲಿ ನನಗೆ ಎರಡನೇ ಕಡೆಗೆ ನೇಳೆಯು ಕೂಡ ಸಿಗುತ್ತಿದ್ದಿಲ್ಲ. ಅಮಲದಾರರಿಗೆ ಬೇನೆ ಅಧವಾ ಉರಿ ಬಂದರೆ ನನಗಾದರೂ ಧಂಡಿ ಅದಂತಾಗಿ ನನ್ನದೂ ಮತ್ತು ಅಮಲದಾರರದೂ ತನ್ಮಯವಾದಂತಾಗುವದು. ಒಬ್ಬ ಅಮಲದಾರನು ತನ್ನ ಮನೆಯನ್ನು ಕಟ್ಟಿಸಲಿಕ್ಕೆ ಆರಂಭಿಸಿದರೆ ಅನನಿಗೆ ನಮ್ಮೂರಿಂದ ಕಲ್ಲುಗಳನ್ನು ತೀರ ಅಗ್ಗ ರೀತಿಯಿಂದ ಪೂರೈಸಿದೆನು. ಈ ನನ್ನ ಕನಿಷ್ಟ ಸೇವೆಯು ಪ್ರತಿಫಲವಿಲ್ಲದೆ ಹೋಗಲಿಲ್ಲ. ಕೆಲವು ಅಮಲದಾರರ ಸಹಾಯದಿಂದ ವಿಜಾಪೂರ ನಗರದಲ್ಲಿ ನನಗೆ ಒಂದು ಬೆಂಚೆ ಮ್ಯಾಜಿಸ್ಟ್ರೇಟ ಜಾಗೆಯು ಲಭಿಸಿತು. ಈ ಕೆಲಸದ ಸಲುವಾಗಿ ನನಗೆ ಸರಕಾರದ ಕಡೆಯಿಂದ ಏನೂ ಸಂಬಳ ಸಿಗದಿದ್ದರೂ ಅನ್ಯರೀತಿಯಿಂದ ನನಗೆ ಬಹಳ ಲಾಭವಾಗುತ್ತಿತ್ತು. ಇರಲಿ. ನಾನು ಬೆಂಚ ಮ್ಯಾಜಿಸ್ಟ್ರೇಟನಾದುದರಿಂದ ನನ್ನ ಸಂಸಾರದ ಖರ್ಚು ಅತ್ಯಂತ ಸುರಳೀತ ರೀತಿಯಿಂದ ಸಾಗಿರುವದು. ಮತ್ತು ಪೋಲೀಸ ಶಿಪಾಯಿಗಳು ಕೂಡ ಹೋಗು ಬರುವ ಕಾಲಕ್ಎಕ ನನಗೆ ನಮಸ್ಕಾರ ಮಾಡಲಿಕ್ಕೆ ಹತ್ತಿದರು.

ನಾನು ಬೆಂಚ ಮ್ಯಾಜಿಕ್ಟ್ರೀಟಿನಾದರೂ ನನಗೆ ಸಮಾಧಾನವಾಗಲೊಲ್ಲದು. ಇನ್ನು ಇದಕ್ಕೂ ಹೆಚ್ಚಿನ ಅಧಿಕ ಹುದ್ದೆಯನ್ನು ದೊರಕಿಸಬೇಕೆಂದು ನನ್ನ ಮನಸ್ಸಿನಲ್ಲಿ ಮಹಾತ್ವಾಕಾಂಕ್ಷೆಯು ಉತ್ಪನ್ನವಾಯಿತು. ನಮ್ಮ ಜಿಲ್ಲೆಯಲ್ಲಿ ಸಹಕಾರಿ ಸಂಸ್ಥೆಗಳು co-operative ಬಹಳ ಸ್ವಲ್ಪು ಇರುವವು. ಆ ಸಂಸ್ಥೆಗಳನ್ನು ಇನ್ನಿಷ್ಟು ಹೆಚ್ಚಿಗೆ ಬೆಳಿಸಬೇಕೆಂದು ಸರಕಾರಿ ಅಧಿಕಾರಿಗಳು ಪ್ರಯತ್ನಿಸುತ್ತಿದ್ದರು. ಈ ಸುಸಂಧಿಯನ್ನು ಸಾಧಿಸಿ ಬಿನ್‌ ಪಗಾರಿ ಕಲನ ಮಾಡಲಿಕ್ಕೆ ನಾನು ಸಿದ್ಧನಾದೆನು. ಮತ್ತು ಸಹಕಾರಿ ಸಂಘಗಳ ಸಂಬಳವಿಲ್ಲದ ಸಂಸ್ಥಾಪಕನಾದೆನು. ಇದರಿಂದ ನನ್ನ ಪ್ರತಿಷ್ಠೆಯು ಜಿಲ್ಹೆಯಲ್ಲಿ ಬೆಳೆಯಹತ್ತಿತು.

ಇದೇ ಕಾಲಕ್ಕೆ ಅಂದರೆ ಇನ್‌ಪ್ಲು ಎಂಝಾ ಸುರುವಾಗುವದಕ್ಕಿಂತ ಒಂದು ವರ್ಷ ಮೊದಲು ವಿಲಾಯತಿಯಿಂದ ಮಾಂಟೆಗೂ ಎಂಬ ಹೆಸರಿನ ಸಾಹೇಬರು ಬಂದಿದ್ದರು. ಆ ಕಾಲಕ್ಕೆ ಬ್ರಾಹ್ಮಣೇತರರು, ಬಹಳ ಹಿಂದುಳಿದ ಜನರಲ್ಲಿ ಎಷ್ಟು ಪ್ರಯತ್ನ ಬಟ್ಟರೂ ಅವರು ಕಲಿಯಲೊಲ್ಲರು. ಅವರಿಗೆ ದೊಡ್ಡ ದೊಡ್ಡ ಅಧಿಕಾರದ ಜಾಗೆಗಳನ್ನು ಮತ್ತು ಕೌನ್ಸಿಲದಲ್ಲಿ ಕೆಲವು ಜಾಗೆಗಳನ್ನು ಅವರ ದೆಸೆಯಿಂದ ಇಟ್ಟರೆ ಆ ಆಶೆಯಿಂದಾದರೂ ಅವರು ಶಿಕ್ಷಣವನ್ನು ಪಡಯುವರೆಂದು ಒಂದು ಅರ್ಜಿಯನ್ನು ಮಾಂಟೆಗೂ ಸಾಹೇಬರ ಕಡೆಗೆ ಕೊಟ್ಟರು. ಮಾಂಟೆಗೂ ಸಾಹೇಬರು ಈ ಅರ್ಜಿಯನ್ನು ಮಂಜೂರ ಮಾಡಿ ಆರ್ಜದಾರರಿಗೆ ಶಹಾಬಾಸಕಿಯನ್ನು ಕೊಟ್ಟರು. ಆ ಮೇಲೆ ಕೆಲವು ಶಿಕ್ಷಿತ ಬ್ರಾಹ್ಮಣೇತರರಿಗೆ ಮಾಮಲೇದಾರ ಮುಂತಾದ ದೊಡ್ಡ ದೊಡ್ಮ ಅಧಿಕಾರದ ಸ್ಥಳಗಳು ಸಿಕ್ಕವು. ನನ್ನ ಮನಸ್ಸಿನಲ್ಲಿ ಆಶೆಯು ಹುಟ್ಟಿತು. ಆದರೆ ದುರ್ದೈವದಿಂದ ನಾನು ಎನೂ ಶಿಕ್ಷಣವನ್ನು ಪಡೆದಿದ್ದಿಲ್ಲಾದರೂ ಸಹಿತ ನನ್ನ ಮಗನಾದರೂ ಮಾಮಲೇದಾರನಾಗಬೇಕೆಂದು ನನ್ನ ಪ್ರಯತ್ನಗಳು ಸುರುವಾದವವು.

ಆದರೆ ಇದಕ್ಕೆ ಗಂಡಾಂತರಗಳು ಬಹಳವಿದ್ದವು. ಬ್ರಾಹ್ಮಣೇತರರಲ್ಲಿ ಬ್ರಾಹ್ಮಣರ ಹೊರ್ತಾಗಿ ಉಳಿದ ಎಲ್ಲ ಜಾತಿಗಳು, ಅಂದರೆ ಲಿಂಗಾಯತ ರಡ್ಡಿ, ಬಡಿಗೇರ, ಕ್ರಿಶ್ಚನ್‌, ಮುಸಲ್ಮಾನ, ಹೊಲೇರ, ಮಾದಿಗ ಮರಾಠಾ ರಜಪೂತ ಮೊದಲಾದ ಜಾತಿಗಳ ಸಮಾವೇಶವಾಗಿದ್ದಿತು. ನಮ್ಮ ಪ್ರಾಂತದ ಚಳವಳಿ ಮಾಡುವ ಬಹುಜನ ಮುಖಂಡರು ಲಿಂಗಾಯತರಿದ್ದುದರಿಂದ ಬ್ರಾಹ್ಮಣೇತರ ಇದರ ಅರ್ಧವನ್ನು ಕೇವಲ ಲಿಂಗಾಯತ ಎಂದು ಮಾಡುವದು ನನ್ನ ದೃಷ್ಟಿಗೆ ಬಿದ್ದಿತು. ಇದು ಅಸ್ವಾಭಾವಿಕವೂ ಇದ್ದಿಲ್ಲ. ಯಾಕಂದರೆ ನೋಕರಿ ಮೊದಲಾದ ಕೆಲಸಕ್ಕ ಅರ್ಜಿಯನ್ನು ಮಾಡಿದ ವಸೀಲಿ ಹಚ್ಚಿದ ಲಿಂಗಾಯತ ಜನರಿಗಷ್ಟೇ ನೌಕರಿಯನ್ನು ಕೊಡಲಿಕ್ಕೆ ಹತ್ತಿದರು. ಇದರಿಂದ ನಾನು ಗಾಬರಿಯಾದೆನು. ಯಾಕಂದರೆ ನಾನು ಜನ್ಮತಃ ರೆಡ್ಡೀ ಇರುವೆನು, ಇನ್ನು ಹೇಗೆ ಮಾಡಬೇಕೆಂದು ನಾನು ಗೊಂದಲದಲ್ಲಿ ಬಿದ್ದೆನು. ಕಟ್ಟ ಕಡೆಗೆ ನನ್ನ ಸುದೈವದಿಂದ ಒಂದು ‘ಸರಳ ಮಾರ್ಗವು ಹೊಳೆಯಿತು. ನಾನೂ ಲಿಂಗರಡ್ಡಿ ಯಲ್ಲವೇ ಎಂದುಕೊಂಡೆ ನನ್ನ ಮಗನು ಮಾಮಲೇದಾರನಾಗಲಿಕ್ಕೆ ಯಾವ ತರದ ಅಡಚಣಿಯೂ ಇದ್ದಿದ್ದಿಲ್ಲ. ಕೇವಲ ಅವನು ಮ್ಯಾಟ್ರಿಕ್‌ ಪಾಸಾಗಿ ಬಿ.ಎ ದಲ್ಲಿ ತೇರ್ಗಡೆ ಹೊಂದತಕ್ಕದೊಂದೇ ಉಳಿಯಿತು. ನಾನು ಲಿಂಗ ರಡ್ಡಿಯಾದುದು ನನಗೆ ಬಹಳೇ ಲಾಭವಾಯಿತು.

ನಂತರ ನಾನು ದೊಡ್ಡ ದೊಡ್ಡ ಪ್ರಮುಖ ಜನರಲ್ಲಿ ಸುಳಿದಾಡ ಹತ್ತಿದೆನು. ಮತ್ತು ನನ್ನ ಮುಖದಿಂದ ಸಭಾ ಕಮೀಟಿ, ಸೊಸಾಯಿಟಿ ವಗೈರೆ ಶಬ್ಧಗಳು ಯಾವಾಗಲೂ ಹೊರಬೀಳುತ್ತಿದ್ದವು. ಬ್ರಾಹ್ಮಣೇತರ ಜನರ ಪ್ರತಿಯೊಂದು ಸಣ್ಣ ದೊಡ್ಡ ಮತ್ತು ಚಲೋ ಕೆಟ್ಟ ಚಳವಳಿಗಳಲ್ಲಿ ನಾನು ಮುಂದೆ. ಸ್ವಲ್ಪದರಲ್ಲಿ ಹೇಳುವದೆಂದರೆ ನಾನು ಬ್ರಾಹ್ಮಣೇತರ ಜನರ ಮುಂದಾಳು ಆದೆನು. ಕಾಲಕಾಲಕ್ಕೆ ಬ್ರಾಹ್ಮಣರಿಗೆ ಬಯ್ಯುವದು ಬ್ರಾಹ್ಮಣ ಕುಲಕರ್ಣಿಯರು ಮತ್ತು ಬ್ರಾಹ್ಮಣ ಅಮಲವಾರರು ಲಂಚವನ್ನು ತೆಕ್ಕೊಳ್ಳುವರು, ರೈತ ಜನರನ್ನು ಪೀಡಿಸುವರು, ಮತ್ತು ಬ್ರಾಹ್ಮಣೇತರ ಅಮಲದಾರರು ಬೇಕು ಮೊದಲಾದ ಭಾಷಣಗಳನ್ನು ಮಾಡಿ ಸ್ವಲ್ಪ ದಿನಸಗಳಲ್ಲಿ ಲೋಕಪ್ರಿಯನಾದೆನು. ಬ್ರಾಹ್ಮಣರಿಗೆ ಬೈಗಳನ್ನು ಬೈದರು ಕೂಡ ಬ್ರಾಹ್ಮಣ ಅಮುಲದಾರರ ಕಡೆಗೆ ಹೋಗಿ ಅವರ ಬಾಲಾ ಬಡಿಯುವದನ್ನು ಸರ್ವಥಾ ಬಿಡಲಿಲ್ಲ… ಪ್ರಸಂಗ ಬಂದರೆ ಅಮಲದಾರರ ಮುಂದೆ ಬ್ರಾಹ್ಮಣರ ಸ್ತುತಿಯನ್ನು ಮಾಡಿ ಹಿಂದೆ ಬ್ರಾಹ್ಮಣೇತರರನ್ನು ನಿಂದಿಸಿನನ್ನ ಕಾರ್ಯವನ್ನು ಸಾಧಿಸುತ್ತಿದ್ದೆನು.

ಇನ್‌ಪ್ಲುಯಂಝಾ ಬಂದ ವರ್ಷ ಎಪ್ರಿಲ ತಿಂಗಳಲ್ಲಿ ನಮ್ಮ ನಗರದಲ್ಲಿಯ ಬ್ರಾಹ್ಮಣ ವಕೀಲರು ಕೂಡಿ ಒಂದು ಜಾಹೀರ ಸಭೆಯನ್ನು ಕರೆದರು. ಆ ಸಭೆಗೆ ಪುಣೆ ಮುಂಬಯಿ ಕಡೆಯ ಪ್ರಮುಖ ಜನರು ಬಂದಿದ್ದರು. ಅದಕೂ ಮೊದಲು ಪುಣೆಯ ಟಿಳಕರಾದರೂ ಕೂಡ ಬಂದಿದ್ದರು. ಆ ಜನರು ಬ್ರಾಹ್ಮಣ ಬ್ರಾಹ್ಮಣೇತರಲ್ಲಿ ಒಕ್ಕಟ್ಟನ್ನು ಮಾಡಬೇಕೆಂದು ಎಷ್ಟು ಪ್ರಯತ್ನಿಸಿದರೂ ಕೂಡ ನಾವು ಅದಕ್ಕೆ ಅಡ್ಡಗಾಲನ್ನು ಹೊಡೆದೆವು. ಯಾಕಂದರೆ ಒಟ್ಟಾದ ಮೇಲೆ ನಮ್ಮಂಥವರನ್ನು ಯಾರು ವಿಚಾರಿಸುವರು? ಅವರೂ ಒಂದು ಸಭೆಯನ್ನು ಕೂಡಿಸಿದರು. ಮತ್ತು ನಾವು ಒಂದು ಬ್ರಾಹ್ಮಣೇತರರ ಸಭೆಯನ್ನು ಕರೆದೆವು. ಮತ್ತು ದೊಡ್ಡ ಸಮಾರಂಭವನ್ನು ಮಾಡಿದೆವು ನಮ್ಮ ಸಮಾರಂಭದಿಂದ ಸರಕಾರಕ್ಕೆ ಸಂತೋಷವಾಗಿದೆಯೆಂದು ಅನಿಸಿತು.

ಆ ಮೇಲೆ ಕೆಲವು ದಿವಸಗಳ ನಂತರ ಗಾಂಧಿ ಚಳವಳಿಯು ಪ್ರಾರಂಭವಾಯಿತು. ನನ್ನ ಕೆಲಸವನ್ನು ನಿರೀಕ್ಷಿಸಿದರೆ ನಾನು ರಾವಸಾಹೇಬನಾಗಲಿಕ್ಕೆ ಯೋಗ್ಯನಿರುವೆನು. ಆದರೆ ನನ್ನ ಕಾರ್ಯವು ಗವ್ಹರ್ನರ ಸಾಹೇಬರ ನಿರೀಕ್ಷಣೆಗೆ ಯಾಕೆ ಬರಲೊಲ್ಲದಿಂಬದು ನನಗೆ ಹೊಳೆಯಲೊಲ್ಲದು.


ಆಯುಷ್ಯದ ಆಯಕಟ್ಟು

ಈ ಪತ್ರದಲ್ಲಿ ನನ್ನ ಆಯುಷ್ಯದಲ್ಲಿಯ ಅತ್ಯಂತ ಆಯಕಟ್ಟಿನ ಪ್ರಸಂಗದ ವರ್ಣನೆಯನ್ನು ಮಾಡಲಿರುವೆನು.

ಮಹಾತ್ಮಾ ಗಾಂಧಿಯವರ ಚಳವಳಿಯು ಇಡೀ ದೇಶದಲ್ಲೆಲ್ಲ ಪ್ರಾರಂಭವಾದಂತೆ ನಮ್ಮ ಜಿಲ್ಲೆಯಲ್ಲಿಯೂ ಪ್ರಾರಂಭವಾಯಿತು. ಪದವಿಗಳನ್ನೂ ಶಾಲೆಗಳನ್ನೂ ಸಂಬಳವುಳ್ಳ, ಹಾಗೂ ಸಂಬಳವಿಲ್ಲದ ಎಲ್ಲ ಸರಕಾರೀ ನೌಕರಿಗಳನ್ನೂ ಬಿಡಬೇಕೆಂದು ಎಲ್ಲೆಡೆಯಲ್ಲಿಯೂ ಉಪದೇಶವು ಪ್ರಾರಂಭವಾಯಿತು. ವಿಜಾಪುರದಲ್ಲಿ ಕೆಲವು ವಕೀಲರು ವಕೀಲಿಯನ್ನು ಬಿಟ್ಟರು. ಈಗ ಮಾತ್ರ ನಾವು ಏನು ಮಾಡುವೆವೆಂಬ ಕಡೆಗೆ ಕಲ ಜನರ ಲಕ್ಷವು ಹೊರಳಹತ್ತಿತು. ಆದರೆ ನಾವು ಕ್ವಚಿತ್ತಾಗಿ ಮೋಸ ಹೋಗುವವರು. ಬ್ರಾಹ್ಮಣರಿಗೆ ಸರಕಾರದವರು ನೌಕರಿಯನ್ನು ಕೊಡುವದಿಲ್ಲವೆಂದು ತಿಳಿದು ನೌಕರಿಯನ್ನು ಬಿಟ್ಟುಕೊಡಿರೆಂದು ಬ್ರಾಹ್ಮಣರು ಉಪದೇಸಿಸುತ್ತಿರುವರೆಂದೂ, ಬ್ರಾಹ್ಮಣರೆಲ್ಲರೂ ಕಲಿತು ಸುಶೀಕ್ಷಿತರಾದರು; ಬ್ರಹ್ಮಣೇತರರು ಮಾತ್ರ ಕಲಿಯಬಾರದೆಂಬ ದುರುದ್ಧೇಶದಿಂದ ಸಾಲೆಗಳನು ಬಿಡಲಿಕ್ಕೆ ಹೇಳುತ್ತಿರುವರಾದರಿಂದ ಬ್ರಾಹ್ಮಣೇತರರು ಈ ಚಳವಳಿಯಲ್ಲಿ ಸೇರಿಕೊಳ್ಳದೆ ಸರಕಾರದ ಬಗಲು ಗೂಸುಗಳಾಗಿಯೇ ತಮ್ಮ ಉದ್ಧಾರನನ್ನು ಮಾಡಿಕೊಳ್ಳ ಬೇಕೆಂದೂ ನಾವು ನಮ್ಮ ಉಪದೇಶವನ್ನು ಆರಂಭಿಸಿದೆವು. ಸಂಬಳವಿಲ್ಲದೇ ಇರಲಿ; ಕೈಯಲ್ಲಿ ಬಂದ ನೌಕರಿಯನ್ನು ಕಳೆದುಕೊಳ್ಳುವವರಾರು? ಗಾಂಧೀ ಜನರು ಮಾತ್ರ ಹಳ್ಳಿ ಹಳ್ಳಿಗೆ ಹೋಗಿ ವ್ಯಾಖ್ಯಾನಗಳ ಸುಗ್ಗಿಯನ್ನೇ ಸುರು ಮಾಡಿದರು. ಇಂಥ, ದೊಡ್ಡ ಇಂಗ್ರೇಜಿ ಸರಕಾರಕ್ಕೂ ಅವರನ್ನು ಕಂಡರೆ ಅಂಜಿಕೆ ಯಾಗಹತ್ತಿತು. ಆದರೆ ಒಂದು ವರ್ಷದ ಒಳಗಾಗಿಯೇ ಗಾಂಧಿ ಚಳವಳಿಗೆ ಇಳಿಗಾಲದ ಕಳೆಯು ಬರಹತ್ತಿತು. ಕೆಲ ಜನ ಚಳವಳಿಗಾರ ವಕೀಲರ ಮೇಲೆ ಖಟ್ಲೆಯನ್ನು ಮಾಡಿದರು. ಅದರಲ್ಲಿ ಹಳ್ಳಿಗಳಲ್ಲಿಯ ಬ್ರಾಹ್ಮಣೇತರ ಜನರ ಸಾಕ್ಷಿಗಳಾದವು. ಸರಕಾರದವರ ಮನಸ್ಸಿನಂತೆ ಸಾಕ್ಷಿಯನ್ನು ಹೇಳಿ ಚಳವಳಿ ಜನರನ್ನು ಸೆರೆಮನೆಗಳಲ್ಲಿ ನೂಕುವ ಕಾರ್ಯದಲ್ಲಿ ನೆರವಾದುದಕ್ಕೆ ಕೆಲ ಬ್ರಾಹ್ಮಣೇತರರು ಸರಕಾರದ ಮೆಚ್ಚಿಗೆಗೆ ಪಾತ್ರರಾದರು. ಗಾಂಧಿ ಅನುಯಾಯಿಗಳ ವಿರುದ್ಧ ಹಳ್ಳಿ ಹಳ್ಳಿ ಗಳಲ್ಲಿಯೂ ತಾವೂ ಸಭೆಗೂಡಿಸಿ ಚಳವಳಿ ಜನರ ವಿರೋಧ ಮಾಡಬೇಕೆಂದು ಬ್ರಾಹ್ಮಣೇತರೆ ಜನರು ಒಂದು ಸಂಘವನ್ನು ಸ್ಥಾಪಿಸಿ ಅದಕ್ಕೆ ರಾಜನಿಷ್ಠ ಸಂಘವೆಂದು ಹೆಸರಿಟ್ಟರು. ಗೌಡರ ದೊಡ್ಡ ಪರಿಷತ್ತು ಕೂಡಿತು ಆ ಪರಿಷತ್ತಿಗೆ ಸ್ವತಃ ಕಲೆಕ್ಟರ ಸಾಹೇಬರೇ ಅಧ್ಯಕ್ಷರಾದರು. ಅರ್ಥಾತ್‌ ಮೇಲಿನ ಎಲ್ಲ ಕಾರ್ಯದಲ್ಲಿಯೂ ನಾನು ಪ್ರಾಮುಖ್ಯವಾಗಿ ಭಾಗಿಯಾಗಿದ್ದೆನು. ಇದ್ದಬಿದ್ದ ಜನರ ಬಾಯಿಯಲ್ಲಿ ಬಸನಗೌಡನ ಹೆಸರೇ ಹೆಸರು. ಕೆಲ ಜನರು ಒಮ್ಮೊಮ್ಮೆ ನನಗೆ ‘ಬಸವಂತರಾವ’ ಎಂದು ಸಹ ಕರೆಯಹತ್ತಿದರು. ಬ್ರಾಹ್ಮಣ ಜನರ ಫಜೀತಿಯು ಚೆನ್ನಾಗಿ ಆಯಿತು.

ಬ್ರಾಹ್ಮಣರನ್ನು ಫಜೀತಿ ಮಾಡಬೇಕೆಂದು ಒಬ್ಬ ದೊಡ್ಡ ಅಧಿಕಾರಸ್ಥನ ಸಲಹೆಯಿಂದ ಕೊಲ್ಹಾಪುರದ ಸತ್ಯಶೋಧಕರ ಒಂದು ನಾಟಕ ಮಾಡಿಸಲಾಯಿತು.

ಗಾಂಧಿಯು ಸೆರೆಯಾಳಾದ ಕೂಡಲೇ ಚಳವಳಿಯು ತನ್ನಿಂದ ತಾನೇ ಕಡಿಮೆಯಾಗಹತ್ತಿತು. ಆದುದರಿಂದ ನಮ್ಮಂತಹ ಜನರಿಗೆ ಏನೂ ಕೆಲಸವು ಉಳಿಯಲಿಲ್ಲ. ಆದರೂ ನಮ್ಮ ಜಿಲ್ಲೆಯ ಕಲೆಕ್ಟರರು ಕುರುಡರ ವಿಷಯವಾಗಿ ಬಹಳ ಕಾಳಜಿಯನ್ನು ತೆಗೆದುಕೊಳ್ಳುತ್ತಿದ್ದರು. ಕುರುಡರ ಫಂಡನ್ನು ಕೂಡಿಸುವ ಅವರ ಕಾರ್ಯದಲ್ಲಿ ನಾನು ಅವರಿಗೆ ಸ್ವಹಸ್ತ ಪರಹಸ್ತಗಳಿಂದ ನೆರವಾಗಲು ಉದ್ಯುಕ್ತನಾದೆನು. ನನ್ನ ಮೇಲೆ ಈ ಸಾಹೇಬರ ಪೂರ್ಣ ಕೃಪಾದೃಷ್ಟಿಯು ಇದೆ. ಇಲ್ಲಿಂದ ಅವರಿಗೆ ವರ್ಗವಾದರೂ ನನಗೆ ಇನ್ನೂ ಅವರಿಂದ ಪತ್ರಗಳು ಬರುತ್ತವೆ. ನನ್ನ ದೈವವೇ ದರಿದ್ರವಾಗಿದೆ. ಶ್ರೀ. ಚನ್ನ ಬಸವೇಶ್ವರನ ಕೃಪೆಯಿಂದ ಕುರುಡರ ಸಾಹೇಬ-ಅವರ ಹೆಸರು ಹೆಂಡರಸನ್ನ-ಇನ್ನೂ ವಿಜಾಪುರದ ಕಲೆಕ್ಟರರಾಗುಳಿದಿದ್ದರೆ ನಿಜವಾಗಿಯೂ ಇಷ್ಟರಲ್ಲಿ ನಾನು ರಾವಬಹಾದ್ದೂರನಾಗಿ ಬಿಡುತ್ತಿದ್ದೆನು.

ಅವರು ತೆಗೆದ ಪ್ರತಿಯೊಂದು ನಿಧಿಗೂ ನನ್ನ ನೆರವು ಇದೆ. ಅವರು ರೆಡ್‌ಕ್ರಾಸ್‌ವೆಂದು. ಸಾಹೇಬ ಜನರ ದಾಯಿಯರ ಸಲುವಾಗಿ ಒಂದು ಫಂಡನ್ನು ತೆಗೆದರು. ಅದರಲ್ಲಿ ನಾನು ಜೀವದ ಹಂಗು ದೊರೆದು ಪ್ರಯತ್ನ ಮಾಡಿದೆನು. ಖಾದಿಯ ಮೇಲೆಯೂ, ಗಾಂಧಿ ಟೊಪ್ಪಿಗೆಯ ಮೇಲೆಯೂ ಅವರು ಸಿಟ್ಟಾಗಿರುವರೆಂದು ತಿಳಿದ ಕೂಡಲೇ ನಾನು ಶುದ್ದ ಅಚ್ಚ ಪರದೇಶೀ ಬಟ್ಟೆಯನ್ನೇ ಧರಿಸಹತ್ತಿದೆನು. ಯಾಕಂದರೆ ಶುದ್ಧ ಸ್ವದೇಶೀ ಗಿರಣೀ ಅರಿವಿಯ ಮೇಲೆ ಸಹ ಸಾಹೇಬರ ಸಿಟ್ಟು ಅದೆಯೋ ಎನೋ ಯಾರಿಗೆ ಗೊತ್ತು?

ನನ್ನ ಉಡಿಗೆಯನ್ನು ನಾನು ಕೆಳಗಿನಂತೆ ಗೊತ್ತು ಮಾಡಿ ಬಿಟ್ಟಿದ್ದೇನೆ. ಯಾವಾಗಲೂ ಸಾಹೇಬ ಜನರ ಭೆಟ್ಟಿಗೆ ಹೋಗುವ ಪ್ರಸಂಗವು ನನಗೆ ಬರುವದರಿಂದ ನಾನು ಯಾವಾಗಲೂ ಬೂಟುಗಳನ್ನು ಹಾಕುತ್ತಲಿದ್ದೇನೆ. ನನ್ನ ಕಾಲುಚೀಲಗಳು ಒಳ್ಳೇ ಹಸರು ಬಣ್ಣದ್ದಿರುತ್ತವೆ. ಅವುಗಳನ್ನು ಏರಿಸಿ ಮೇಲೆ ಕಟ್ಟುವದು ನನಹೆ ವಿಶೇಷ ತೊಂದರೆಯೆನಿಸುತ್ತದೆ. ಆದ್ದರಿಂದ ಆ ಕಾಲುಚೀಲಗಳು ಸಡಿಲಾಗಿ ನನ್ನ ಕಾಲುಗಳಲ್ಲಿ ಹಾಗೇ ಬಡಿದಾಡುತ್ತಿರುತ್ತವೆ. ಮೇಲಿಂದ ಮೇಲೆ ನನಗೆ ಮೂತ್ರ ಬಾಧೆಯಾಗುವದರಿಂದ ನನಗೆ ವಾಟಲೋನ ಹಾಕಿಕೊಳ್ಳದೆ ಧೋತರವನ್ನೇ ಉಟ್ಟುಕೂಳ್ಳ ಬೇಕಾಗುತ್ತದೆ. ಈ ವಿಷಯವಾಗಿ ನನಗೆ ಅತ್ಯಂತ ಕೆಡಕೆನಿಸುತ್ತದೆ. ಮೈಯ್ಯಲ್ಲಿ ಒಂದು ಪೈರಣ, ಅದರ ಮೇಲೆ ಜಾಕೀಟು ಮತ್ತು ಕೋಟು ಹಾಕಿಕೊಳ್ಳುತ್ತೇನೆ. ಕೋಟು ಕರಿಯದು ಇರುತ್ತದೆ. ಅದು ಹೊಲಸಾದರೂ ಕಾಣಿಸುವದಿಲ್ಲ. ಆದರೆ ಪೈರಣವು ಮೇಲಿಂದ ಮೇಲೆ ಹೊಲಸಾಗುತ್ತದೆ. ಹೊಲಸಾದುದು ಸಾಹೇಬರ ಕಣ್ಣಿಗೆ ಬೀಳಬಾರದೆಂದು ತಿಳಿದು ನಾನು ಒಂದು ನಾಮೂನೆಯ (ಚೌಕೋನ) ಅರಿವೆಯನ್ನು ಕೊರಳಿಗೆ ಸುತ್ತುವೆನು. ಇದಕ್ಕೆ ಮಫ್ಲರವೆಂದು ಕರೆಯುತ್ತಾರೆ. ಈ ಉಡುಪಿನಿಂದ ನಾನು ಅತ್ಯಂತಸಂಭಾವಿತನಂತೆ ತೋರುತ್ತೇನೆ. ಇದಿಷ್ಟು ನನ್ನ ಉಡಿಗೆ.

ಗಾಂಧೀ ಚಳವಳಿಯು ನಿಂತುದರಿಂದ ನಾನು ಈಗ ನಿಶ್ಚಿಂತನಾಗಿದ್ದೇನೆ ಯಾಕಂದರೆ ಈ ಚಳವಳಿಯಲ್ಲಿ ನನ್ನ ಬೆಂಚ ಮ್ಯಾಜಿಸ್ಟ್ಏಟ ನೌಕರಿಯು ಹೋಗುತ್ತದೆಯೋ ಏನೋ ಎಂಬ ಭೀತಿಯು ಉಂಟಾಗಿತ್ತು. ಕುಚೇಷ್ಟೆಯಿಲ್ಲದೆ ಪ್ರತಿಷ್ಠೆಯು ಬೆಳೆಯಲಾರದೆಂಬ ತತ್ವವನ್ನು ನಾನು ಮನಗಂಡಿದ್ದೇನೆ. ಈ ತತ್ವದ ಪ್ರಕಾರದ ಮುನಿಸಿಪಾಲಿಟಿ ಲೋಕಲಬೋರ್ಡುಗಳ ಕಾರ್ಯದಲ್ಲಿ ವಿಶೇಷ ಮನಸ್ಸಿಡಹತ್ತಿದೆನು. ಈ ಸಂಸ್ಥೆಗಳ ಉಪಯೋಗವನ್ನು ನನ್ನ ಸ್ವಂತದ ಕೆಲಸದಲ್ಲಿ ಹೇಗೆ ಮಾಡಿಕೊಳ್ಳುತ್ತೇನೆಂಬುದನ್ನು ಅವುಗಳ ಸಹಾಯದಿಂದ ನನಗೆ ರಾವಸಾಹೇಬ ಪದವಿಯು ಸಿಗುವದು ಹೇಗೆ ಸಂಭವೀಯವಿದೆಯೆಂಬುದನ್ನೂ ಸವಿಸ್ತಾರವಾಗಿ ಮುಂದಿನ ಪತ್ರದಲ್ಲಿ ವರ್ಣಿಸುವನು.


ಮುನಸಿಪಾಲಿಟಿಯ ಪುರಾಣ

ಈ ಪತ್ರದಲ್ಲಿ ನಾನು ಮುನಸಿಪಾಲಿಟಿಯಲ್ಲಿ ಯಾವ ಕಾರ್ಯಗಳನ್ನು ಮಾಡಿದೆನೆಂಬುದನ್ನು ಉಲ್ಲೇಖಿಸುವೆನು. ಮುನಸಿಪಾಲಟಿಯ ಪುರಾಣವೆಂದರೆ ಮೆಂಬರ ಜನರ ಚುನಾವಣೆಯಿಂದ ಉಪಕಮೀಟಿಗಳ ಚುನಾವಣೆಯ ಪರ್ಯಂತ, ಚೀಫ ಆಫೀಸರನ ಪಗಾರ ಬಡತಿಯಿದ ಟೋಲ ನಾಕೆಯ ಕಾರಕೂನನ ನೇಮಣೂಕಿಯವರೆಗೆ, ಒಂದು ದೊಡ್ಡ ಎಂಜಿನ್ನಿನ ಖರೀದಿಯಿಂದ ಒಂದು ಕಸಬರಿಗೆಯ ಖರೀದಿಯವರೆಗೆ ಇವೆಲ್ಲವುಗಳು ಸಮಾವೇಶವಾತ್ತವೆ. ಇವೆಲ್ಲವುಗಳನ್ನು ಬರೆಯುತ್ತ ಹೋದರೆ ಕತ್ತೆ ಹೊರಲಾರದಷ್ಟು ಗೃಂಥವಾಗಬಹುದು. ಆದ್ದರಿಂದ ನನಗೆ ಸಂಬಂಧವಾಗಿ ಎಷ್ಟು ಹೇಳಬೇಕಾಗುವದೋ ಅಷ್ಟು ಹೇಳುವೆನು.

ನಾನು ಮುನಸಿಪಾಲಿಟಯ ಚುನಾವಣಿಯಲ್ಲಿ ಉಮೇದವಾರನಾಗಿ ನಿಂತು ಅನೇಕ ಯುಕ್ತಿ ಸಾಹಸಗಳಿಂದ ಆರಿಸಿ ಬಂದೆನು. ಈ ಕೆಲಸದಲ್ಲಿ ನಾನು ೨೦೦೦ ರೂಪಾಯಿ ಖರ್ಚು ಮಾಡಬೇಕಾಯಿತು. ಮುಂದೆ ಮೂರು ವರುಷಗಳಲ್ಲಿ ಇಷ್ಟು ರೂಪಾಯಿಗಳನ್ನು ಹೇಗಾದರೂ ಗಳಿಸಬಹುದೆಂದು ತಿಳಿದು ಇಷ್ಟು ಖರ್ಚು ಮಾಡಿದೆನು. ಆದರೆ ನನ್ನ ಆಪ್ತೇಷ್ಟರಲ್ಲಿ ಯಾರೂ ಮಕ್ತೆದಾರರಿಲ್ಲದ್ದರಿಂದಲೂ ಮತ್ತು ಮುನಸಿಪಾಲಿಟಿಯ ಕೆಲಸಕ್ಕಾಗಿ ಬಾಡಿಗೆಯನ್ನು ಕೊಡಲಿಕ್ಕೆ ಸ್ಪಂತ ಯಾವೂ ಮನೆಯಿಲ್ಲದ್ದರಿಂದಲೂ, ಮತ್ತು ನನ್ನ ದುರ್ದೈವದಿಂದ ಮುನಿಸಿಪಾಲಿಟಿಯಲ್ಲಿ ಯಾವ ದೊಡ್ಡ ಜವಾಬದಾರಿಯ ಕೆಲಸಗಳು ಸಿಗದ್ದರಿಂದಲೂ ಮೂರು ವರ್ಷಗಳಲ್ಲಿ ೫೦೦-೬೦೦ ರೂಪಾಯಿಗಳಿಗಿಂತ ಹೆಚ್ಚು ನನ್ನ ಪದರಿನಲ್ಲಿ ಬೀಳಲಿಲ್ಲ. ನನಗೆ ಮುನಸಿಪಾಲಿಟಿಯ ಬಗ್ಗೆ ಅನಾದರವು ಉತ್ಪನ್ನವಾಯಿತು. ಮುನಸಿಪಾಲಿಟಿಯ ಮೆಂಬರನಾಗಿ ೨೦-೨೫ ವರ್ಷಗಳ ವರಿಗೆ ತಮ್ಮ ಸಂಸಾರದ ಖರ್ಚನ್ನು ನಿರಾಯಾಸನಾಗಿ ಗಳಿಸುವವರನ್ನು ನೋಡಿದರೆ ನನ್ನ ಮನದಲ್ಲಿ ಅವರ ಬಗ್ಗೆ ಪೂಜ್ಯಬುದ್ಧಿಯು ಉತ್ಪನ್ನವಾಗುತ್ತದೆ. ಅಂಥ ಮೆಂಬರರೇ ಧನ್ಯ! ಅದು ಏನೇ ಇರಲಿ ಮೂರು ವರ್ಷಗಳಲ್ಲಿ ನನಗೆ ೨,೪೦೦ ರೂಪಾಯಿ ಹಾನಿಯಾದ್ದರಿಂದ ನಾನು ಮುನಸಿಪಾಲಿಟಿಯ ಚುನಾವಣಿಯ ಉಸಾಬರಿಯನ್ನು ಬಿಟ್ಟು ಬಿಟ್ಟೆನು. ಅದರೆ ಮುನಸಿಪಾಲಿಟಿಯಿಂದ ಹಣವನ್ನು ಗಳಿಸುವ ಯುಕ್ತಿಯನ್ನು ಯೋಚಿಸಿದೆನು.

ಪ್ರತಿ ವರ್ಷ ನಮ್ಮ ಜಿಲ್ಲೆಯಲ್ಲಿ ಶೆರೆ, ಸಿಂದಿ ಗುತ್ತೆಗಳು ಲಿಲಾವು ಮಾಡಲ್ಪಡುವವು. ಆ ಸಮಯಕ್ಕೆ ಆ ಗುತ್ತೆಗಳನ್ನು ಹಿಡಿಯದಿದ್ದರೂ ಲಿಲಾವಿನಲ್ಲಿ ಹಣವನ್ನು ಏರಿಸಲಿಕ್ಕೆ ಕೆಲವು ಗೃಹಸ್ಥರು ಬರುತ್ತಾರೆ ಇದನ್ನು ನೋಡಿ ಆ ಗುತ್ತೆಗಳನ್ನು ಹಿಡಿಯಲಿಚ್ಛಿಸುವವರು ಬೆದರಿ ಲಿಲಾವಿನ ಹಣವನ್ನು ಹೆಚ್ಚಿಸಬಾರದೆಂದು ತಿಳಿದು ಅವರ ಕಿಸೆಯಲ್ಲಿ ೨೦೦-೪೦೦ ರೂಪಾಯಿಗಳನ್ನು ಹಾಕಿ ಅವರನ್ನು ಸಮ್ಮನೆ ಕೂಡಿಸುತ್ತಾರೆ. ಈ ಯುುಕ್ತಿಯು ಸರ್ವೋತ್ಕೃಷ್ಟ ವಾದದ್ದೆಂದು ತಿಳಿದು ನಾನೂ ಒಂದು ವಾರ್ಡಿನ ವತಿಯಿಂದ
ಮುನಸಿಪಾಲಿಟಯ ಉಮೇದವಾರನಾಗಿ ನಿಂತುಕೊಂಡೆನು. ಮತ್ತು ಅದೇ ವಾರ್ಡಿಗೆ ಮತ್ತೊಬ್ಬ ಉಮೇದವಾರನು ನಿಂತು ನನಗೆ ೨೦೦-೪೦೦ ರೂಪಾಯಿಗಳನ್ನು ಕೊಟ್ಟರೆ ತೀರಿತು. ಅವನ ವತಿಯಿಂದ ನಾನು ರಾಜಿನಾಮೆಯನ್ನು ಕೊಟ್ಟು ಬಿಡುತ್ತಿದ್ದೆನು. ಈ ರೀತಿಯಿಂದ ತಿಂಗಳೆರಡು ತಿಂಗಳ ನನ್ನ ಸಂಸಾರದ ಖರ್ಚು ಸಾಗಲಾರಂಭಿಸಿತು.

ನಾನು ಮುನಸಿಪಾಲಿಟಿಯ ಮೆಂಬರನಿರುವವರೆಗೆ ಸರಕಾರದ ಮರ್ಜಿಯನ್ನು ಸಂಪಾದಿಸಿಕೊಳ್ಳಲು ಯಾವ ಸಮಯವನ್ನು ನಾನು ಹೋಗಗೊಡಲಿಲ್ಲ. ವಿಜಾಪೂರಕ್ಕೆ ಬೂಟು ಪಾಟಲೋಣಗಳನ್ನು ಹಾಕಿ ಸಾಹೇಬರ ಟೊಪ್ಪಿಗೆಯನ್ನು ಹಾಕಿಕೊಂಡು ಯಾರಾದರೂ ಹಿಂದುವೇ ಇರಲಿ ಮುಸಲ್ಮಾನನಿರಲಿ ಅಥವಾ ಕ್ರಿಶ್ಚನನಿರಲಿ, ಹಿಂದುಸ್ತಾನದವನಿರಲಿ ಅಥವಾ ಪರದೇಶದವನಿರಲಿ ಯೋಗ್ಯನಿರಲಿ, ಅಥವಾ ಅಯೋಗ್ಯನಿರಲಿ, ಬಂದರೆ ತೀರಿತು. ಅವನಿಗೆಮಾನಪತ್ರವನ್ನರ್ಪಿಸುವ ಚಳವಳಿಯು ಸುರುವಾಯಿತು. ಮುನಸಿಪಾಲಿಟಿ ಯವರಂತೂ ಮಾನಪತ್ರವನ್ನು ಕೊಟ್ಟೇ ಕೊಡುವರು; ಇದಲ್ಲದೆ ಹೊಸದಾಗಿ ಜನ್ಮತಾಳಿದ ರಾಜನಿಷ್ಠ ಸಂಘ, ಪಾಟೀಲ ಸಂಘ ಮುಂತಾದ ಸಂಘಗಳ ವತಿಯಿಂದಾದರೂ ನಾನು ಬ್ರಾಹ್ಮಣೇತರ ಪುಢಾರಿಯೆಂದು ಹೋಗಿ ಸಾಹೇಬರಿಗೆ ಮಾನಪತ್ರವನ್ನು ಕೊಟ್ಟು ಧನ್ಯನಾಗುತ್ತಿದ್ದೆನು. ಒಂದೆರಡು ಮಾನ ಪತ್ರಗಳನ್ನು ಕನ್ನಡದಲ್ಲಿ ಬರೆಯುತ್ತಿದ್ದರು. ಅದನ್ನು ನನಗೆ ಓದಬೇಕಾದರೆ ಸಾಕು ಬೇಕಾಯಿತು. ಅವತ್ತಿನ ನನ್ನ ಸಿತಿ ರಾತ್ರಿ ೨-೪ ತಾಸುಗಳ ಪರ್ಯಂತ ಕೂತಲ್ಲಿಯೇ ಕೂತು ಅದನ್ನು ಪಾಠಮಾಡಿದೆನು. ಮುಂಜಾನೆಸ್ವಚ್ಛ ಮುಂಡಣ ಮಾಡಿಸಿಕೊಂಡು ಗಂಜಿ ವಸ್ತ್ರಗಳನ್ನು ಧರಿಸಿದೆನು. ವಸ್ತ್ರಗಳಿಗೆಲ್ಲ ಸುಗಂಧ ತೈಲನನ್ನು ಹಚ್ಚಿ, ಬಾಯಲ್ಲಿ ಒಂದು ಯಾಲಕ್ಕಿ ಮತ್ತು ಲವಂಗವನ್ನು ಹಾಕಿಕೊಂಡು ಅಂತರ್ಬಾಹ್ಯ ಸುವಾಸಿತನಾದೆನು. ಇಷ್ಟು ತಯಾರಿಯಲ್ಲಿದ್ದರೂ ಕೂಡ ಮಾನಪತ್ರವನ್ನು ಓದುವ ಕಾಲಕ್ಕೆ ಕೈಯು ಕಂಪಿಸುತ್ತಿತ್ತು. ಮಾನಪತ್ರನನ್ನು ಓದಿ ಕೆಳಗೆ ಕೂತ ಕೂಡಲೇ ಪ್ರಚಂಡವಾಗಿ ಚಪ್ಪಾಳೆಯನ್ನು ಬಾರಿಸಲಿಕ್ಕೆ ಹತ್ತಿದರು. ನಾನು ಧನ್ಯನಾದೆನು ಇದನ್ನು ನೋಡಲಿಕ್ಕೆ ನನ್ನ ಹಿರಿಯರು ಇಲ್ಲೆಂದು ತಿಳಕೊಂಡು ನನ್ನ ಕಣ್ಣಲ್ಲಿ ನೀರು ಸುರಿಯಲಿಕ್ಕೆ ಆರಂಭಿಸಿದವು. ಸಾಹೇಬರು ನನ್ನನ್ನು ತಮ್ಮ ಹತ್ತರ ಕರೆದು ನನಗೆ ಹಸ್ತಾಂದೋಲನವನನ್ನು ಮಾಡಿದರು. ನನ್ನ ಹಸ್ತದ ಭಾಗ್ಯವು ಉದಯಿಸಿತು. ಯಾವ ಬಲಹಸ್ತದಿಂದ ಸಾಹೇಬರ ಸ್ಪರ್ಶವಾಯಿತೋ ಆ ಕೈಯನ್ನು ಕಡಿದು ಅವರ ಪೂಜೆಯನ್ನು ದಿನಾಲು ಮಾಡಬೇಕೆಂದು ಅನಿಸಿತು. ಆದರೆ ಆ ಮೇಲೆ ಎಡಗೈಯಿಂದ ಹೊಗೆಸೊಪ್ಪುಗಳನ್ನು ಸೇದುವ ಕಾಲಕ್ಕೆ ಕಡ್ಡಿಗಳನ್ನು ಕೂರೆಯಲಿಕ್ಕೆ ಬಲಗೈಯು ಅಡಚಣೆ ಯಾಗಬಹುದೆಂದು, ಆ ಕೈಯನ್ನು ಹಾಗೆ ಅಲ್ಲಿಗೆ ಬಿಟ್ಟೆನು ಇರಲಿ. ಸತ್ಯವಾಗಿ ನಾನು ಮಾನಪತ್ರನನ್ನು ಓದಿದ ದಿವಸವೇ ರಾವಬಹಾದ್ದೂರನಾಗಬೇಕಾಗಿತ್ತು. ಆದರೆ ನನ್ನ ದೈವವು ಇನ್ನೂ ಉದಯಸಿಲ್ಲ.


ಮಾದರಿಯ ಮಹತ್ವಾಕಾಂಕ್ಷೆ

ಹೋದವಾರದಲ್ಲಿ ವಿಜಾಪುರಕ್ಕೆ ಮೇಹರಬಾನ ಕಮೀಶನರ ಸಾಹೇಬರು ಬಂದದ್ದರಿಂದ ನನಗೆ ಸ್ವಲ ಸಹಿತ ಅವಕಾಶವು ದೊರೆಯಲಿಲ್ಲ. ನಾನು ನನ್ನ ಎಲ್ಲ ವೇಳೆಯನ್ನು ಸಾಹೇಬರ ಭೆಟ್ಟಿಯಲ್ಲಿಯೂ ಅವರು ಹೋದಲ್ಲಿಗೆ ಅವರೊಡನೆ ಹೋಗಿಯೂ ಮತ್ತು ಅವರ ಸಂಗಡ ಫೋಟೋ ತೆಗೆಸಿಕೊಳ್ಳುವದರಲ್ಲಿಯ್ಕೂ ಕಳೆದೆನು. ಆದ್ದರಿಂದ ನನ್ನ ಆತ್ಮಚರಿತ್ರೆಯನ್ನು ಬರೆಯುವದರಲ್ಲಿ ನನಗೆ ವೇಳೆಯು ಸಿಗಲಿಲ್ಲ.

ನಾನು ನನ್ನ್ನ ಊರಲ್ಲಿದ್ದಾಗ್ಗೆ ತಾಲೂಕಾ ಲೋಕಲಬೋರ್ಡದ ಸಭಾಸದನಿದ್ದೆನು. ತಾಲೂಕಿನ ಜಮಾ ಖರ್ಚವು ಅಷ್ಟು ದೊಡ್ಡದಿಲ್ಲದ್ದರಿಂದ ಅದರಲ್ಲಿ ದೊಡ್ಡಸ್ತಿಕೆ ಹೊರತು ಎರಡನೆ ಯಾವ ದೃಷ್ಟಿಯಿಂದಲೂ ಲಾಭ ಇದ್ದಿಲ್ಲ. ಅಲ್ಲಿಂದ ತಾಲೂಕ ಲೋಕಲಬೋರ್ಡಿನ ಸಭಾಸದನಾಗುವದು ಕೆಳಗಿನ ತರಗತಿಯದೆಂದು ನನಗೆ ಅನಿಸಲಿಕ್ಕೆ ಹೆತ್ತಿತು. ಸಭಾಸದನಾದರೆ ಜಿಲ್ಲೆಯ ಲೋಕಲಬೋರ್ಡದ ಸಭಾಸದನಾಗಬೇಕೆಂಬ ಮಹತ್ವಾಕಾಂಕ್ಷೆಯಿಂದ ನಾನು ಅದರ ಸಲುವಾಗಿ ಜೋರಿನಿಂದ ಕೆಲಸ ಮಾಡಲಿಕ್ಕೆ ಪ್ರಾರಂಭಿಸಿದೆನು. ಮತದಾರ ಜನರಿಗೆ ಹಣವನ್ನು ಕೊಡುತ್ತ ಹೋದರೆ ಕೆಲಸವಾಗದೆಂದು ತಿಳಿದು ಮತ್ತೊಂದು ಯೋಜನೆ ಮಾಡಿದೆನು.

ವಿಜಾಪೂರದ ಸಮೀಪದಲ್ಲಿರುವ ಒಂದು ಸಣ್ಣ ಹಳ್ಳಿಯ ಮಠದಲ್ಲಿ ಒಬ್ಬ ಸ್ವಾಮಿಯು ಇರುತ್ತಿರುವನು. ನಿತ್ಯವೂ ಅವರ ಮಠದಲ್ಲಿ ಪುರಾಣವನ್ನು ಕೇಳುವದರ ಸಲುವಾಗಿ ದೊಡ್ಡ ದೊಡ್ಡ ಪ್ರಮುಖ ಜನರು ಬರತ್ತಿರುವರು. ನಾನಾದರೂ ಕೂಡ ಆ ಮಠಕ್ಕೆ ಹೋಗಿ ಬರುವ ಪರಿಪಾಠವನ್ನಿಟ್ಟೆನು. ನಾನು ಮಠಕ್ಕೆ ಹೋದ ಕೂಡಲೇ ಒಮ್ಮೆ ಸ್ವಾಮಿಗೆ ನಮಸ್ಕಾರ ಮಾಡುತ್ತಿದ್ದೆನು. ಮತ್ತು ತಿರುಗಿ ಬರುವ ಕಾಲಕ್ಕೆ ಸ್ವಾಮಿಗಳು ಸಾಕು ಅಂದರೂ ಕೂಡ ಹಾಗೆಯೇ ಸ್ವಾಮಿಗಳ ಪಾದಗಳ ಮೇಲೆ ನನ್ನ ಮಸ್ತಕವನ್ನು ಒಂದು ನಿಮಿಷದವರೆಗೆ ಇಡುತ್ತಿದ್ದೆನು. ನನ್ನ ಭಕ್ತಿಯಿಂದ ಸ್ವಾಮಿಗಳು ಚಕಿತರಾದರು. ಮತ್ತು ಉಳಿದ ಜನರಾದರೂ ಆಶ್ಚರ್ಯ ಚಕಿತರಾದರು.

ಒಂದು ದಿವಸ ಸ್ವಾಮಿಗಳು ಒಬ್ಬರೇ ಇದ್ದಾಗ ಹೋಗಿ ನಮಸ್ಕಾರ ಮಾಡಿ ದೀನ ಮುದ್ರೆಯಿಂದೆ ಅವರ ಕಡೆಗೆ ನೋಡಲಿಕ್ಕೆ ಹತ್ತಿದೆನು. ಮತ್ತು ಮಠದ ಉತ್ಸವಕ್ಕಾಗಿ ೨೦೦ ರೂಪಾಯಿ ಕೂಡುವೆನು. ಅದನ್ನು ನೀವು ಸ್ವೀಕಾರ ಮಾಡಬೇಕೆಂದು ಸ್ವಾಮಿಗಳಿಗೆ ಹೇಳಿದೆನು. ಸ್ವಾಮಿಗಳ ಮುಖ ಮುದ್ರೆಯು ಅರಳಿತು. ನನಗೆ ಅವರು ರೂಪಾಯಿಗಳನ್ನು ಕೇಳದೆ ನೀವು ಯಾಕೆ ಕೊಡುವಿರೆಂದು ವಿಚಾರಿಸಿದರು. ನಾನು ಲೋಕಲ್‌ ಬೋರ್ಡಿನ ಚುನಾವಣೆಗೆ ಮೇದ್ವಾರನಾಗಿ ನಿಂತಿರುವೆನು. ಚುನಾವಣಿಯಲ್ಲಿ ನಾನು ಉತ್ತೀರ್ಣನಾಗಬೇಕೆಂದು ತಿಳಿದುಕೊಂಡು ನಿಮ್ಮ ಚರಣಗಳಿಗೆ ಈ ರೂಪಾಯಿಗಳನ್ನು ಅರ್ಪಿಸಿರುವೆನೆಂದು ನಾನು ಅವರಿಗೆ ಹೇಳಿದೆನು. ಸ್ವಾಮಿಗಳು ಶ್ರೀ. ಚನ್ನಬಸವೇಶ್ವರನು ಯಶಕೊಡುವನೆಂದು ನನಗೆ ಆಶೀರ್ವದಿಸಿದರು. ಅಲ್ಲಿಂದ ನನ್ನ ಪ್ರಯತ್ನ ಆರಂಭವಾಯಿತು. ಪ್ರತಿಯೊಬ್ಬ ಮತದಾರನನ್ನು ಸ್ವಾಮಿಗಳ ಕಡೆಗೆ ಕರಕೊಂಡು ಹೋಗುತ್ತಿದ್ದೆನು. ಇಲ್ಲವೆ ಸ್ಪಾಮಿಗಳನ್ನೇ ಮತದಾರರ ಊರಿಗೆ ಒಯ್ಯುತ್ತಿದ್ದೆನು. ಮತದಾರರಿಗೆ ಸ್ವಾಮಿಗಳ ಪಾದವನ್ನು ಮುಟ್ಟಿ ಆಣೆ ಮಾಡಲಿಕ್ಕೆ ಹೇಳುತ್ತಿದ್ದನು. ಕೇವಲ ೨೦೦ ರೂಪಾಯಿಗಳನ್ನು ಮಠಕ್ಕೆ ಕೊಟ್ಟಿದ್ದರಿಂದ ಇಷ್ಟೇ ಖರ್ಚನಿಂದ ನಾನು ಲೋಕಲಬೋರ್ಡಿನ ಸಭಾಸದನಾದೆನು-

ನಮ್ಮ ಮತದಾರ ಜನರು ಅಂಧ ಶ್ರದ್ಧೆಯುಳ್ಳವರು. ಇದರ ಲಾಭ ನನಗೆ ಸಿಕ್ಕಿತು. ಸ್ವಾಮಿಗಳು ಹೇಳುವರೆಂದು ತಿಳಕೊಂಡು ಎಲ್ಲ ಜನರು ನನಗೆ ತಮ್ಮ ಮತಗಳನ್ನು ಕೊಟ್ಟರು. ಈ ತಮ್ಮ ಸ್ವಭಾವವನ್ನು ಯಾವದಾದರೊಂದು ಉತ್ತಮ ಕೆಲಸದಲ್ಲಿ ತೊಡಗಿಸಿದ್ದರೆ ಕ್ಷಣದಲ್ಲಿ ಅವರು ಉದ್ಧಾರವಾಗುತ್ತಿದ್ದರು. ಇರಲಿ. ಅವರ ಉದ್ಧಾರ ಗೊಡವೆಯು ನಮಗೇಕೆ? ನನ್ನ ಉದ್ಧಾರವಾದರೆ ತೀರಿತು.

ಈ ತರದ ಪ್ರಯತ್ನವನ್ನು ಈ ಸಾರೆ ಯಾದರೂ ಮಾಡಿದ್ದರಿಂದ ಜಿಲ್ಲಾ ಲೋಕಲ ಬೋರ್ಡದ ಸಭಾಸದನಾದೆನು. ಈ ಸಾರೆಯ ಬೋರ್ಡಿನ ಅಧ್ಯಕ್ಷರ ಚುನಾವಣಿಯ ಕಾಲಕ್ಕೆ ನನಗಾದರೂ ಕೂಡ ನಾಲ್ಕು ದುಡ್ಡುಗಳು ದೊರೆತವು. ನಾನು ಲೋಕಲ ಬೋರ್ಡದಲ್ಲಿದ್ದಾಗ್ಗೆ ನನ್ನ ಆಪ್ತ ಇಷ್ಟರಿಗೆ ಮೇಸ್ತ್ರಿ, ಮುಕಾದಮ ಮಾಸ್ತರ ಮುಂತಾದ ಹಲ ಕೆಲವು ದೊಡ್ಡ ದೊಡ್ಡ ಜಾಗಗಳು, ದೊರೆಯೆಲಿಕ್ಕೆ ಹತ್ತಿದವು. ಎಲ್ಲ ಕಡೆಯಲ್ಲಿಯೂ ಬಸವಂತ ರಾಯರ ಜಯಘೋಷವಾಗಲಿಕ್ಕೆ ಹತ್ತಿತು. ನಾನು ಲೋಕಲ ಬೋರ್ಡದ ಕಾಯಿದೆಯ ಅಭ್ಯಾಸ ಕ್ರಮವನ್ನಿಟ್ಟೆನು. ನೌಕರ ಜನರ ನೆಮಣೂಕಿಯಲ್ಲಿ ಮತ್ತು ಕಂತ್ರಾಟದಂಥ ಅನೇಕ ಕೆಲಸಗಳಲ್ಲಿ ಪ್ರಯತ್ನ ಮಾಡಿದರೆ ಬೇಕಾದಷ್ಟು ಹಣವು ದೊರೆಯಬಹುದೆಂದು ನನಗೆ ಅನಿಸಲಿಕ್ಕೆ ಹತ್ತಿತು. ಇದರ ಲಾಭವನ್ನು ನನ್ನ ಶಕ್ತ್ಯಾನುಸಾರ ಅನುಭವಿಸುತ್ತಿದ್ದೆನು. ಆದರೆ ಈಗ ನನ್ನ ಕೆಲಸವು ಯತಾಪ್ರಕಾರ ನಡೆದಿರುವದು, ಖರ್ಚಿನ ಅಡಚಣಿಯು ನನಗೆ ಯಾವ ತರದ್ದೂ ಇಲ್ಲ. ಆದರೆ ಪ್ರಕೃತಿಯ ಅಸ್ವಸ್ಥತೆಯು ನನಗೆ ಇರುವದು. ನನಗೆ ಈಗ ೫೦ ವರ್ಷಗಳಾದವು. ನಾನು ಈಗ ಮುಪ್ಪಿನವನಾಗಲಿಕ್ಕೆ ಹತ್ತಿದೆನು. ರಾವಸಾಹೇಬನಾಗುವದಕ್ಕಿಂತ ಪೂರ್ವದಲ್ಲಿಯೇ ನಾನು ಸಾಯುವೆನೆಂದು ನನಗೆ ಭೀತಿಯುಂಟಾಗಿರುವದು. ಶ್ರೀ. ಚನ್ನಬಸವೇಶ್ವರರ ಕೃಪೆಯಿಂದಾದರೂ ಮೃತವಾಗುವದಕ್ಕಿಂತ ಪೂರ್ವದಲ್ಲಿಯೇ ನಾನು ರಾವ ಸಾಹೇಬನಾದರೆ ಒಳ್ಳೇದು.


ದೃಶ್ಯ ಫಲವು ಕೈಸೇರಲೊಲ್ಲದು

ತಮ್ಮ ಅಡಿಗೆ ನಾನು ಆಗಾಗ್ಗೆ ಕಳುಹಿದ ಪತ್ರಗಳ ಮೇಲಿಂದ ತಮಗೂ ಮತ್ತು ತಮ್ಮ ವಾಚಕ ಗಣಕ್ಕೂ ನಾನು ರಾವಸಾಹೇಬ ಪದವಿಗೆ ಯೋಗ್ಯನಿದ್ದ ಬಗ್ಗೆ ತಿಳಿದಿರಲಿಕ್ಕೆ ಸಾಕು. ಈ ಒಂದು ಪದವಿಯ ಆಶೆಗೆ ಬಿದ್ದು ನಾನು ಎಷ್ಟೋ ಚಲೋ ಕೆಟ್ಟ ಕೆಲಸಗಳನ್ನು ಮಾಡಿದೆನು. ಆದರೆ ಅವುಗಳ ದೃಶ್ಯ ಫಲವು ಈ ವರೆಗೆ ನನ್ನ ಕೈಸೇರಲೊಲ್ಲದು. ಮಾಡುವದೇನು? ಮನಸ್ಸಿಗೆ ಬಹಳ ವ್ಯಸನವಾಗುತ್ತದೆ. ಬ್ರಿಟಿಶರ ರಾಜ್ಯದಲ್ಲಿ ನ್ಯಾಯವಿದೆ ಎಂದು ಹೇಳಲಿಕ್ಕೆ ಬಾರದಂತಾಗಿದೆ. ಕಾನೂನು ಮಂಡಲ ಸೇರಿ ಆರು ವರುಷದ ವರೆಗೆ ಬಾಯಿ ಬಿಚ್ಚದೆ ಕೇವಲ ಸರಕಾರಕ್ಕೆ ಅನುಕೂಲವಾಗಿ ಮತ ಕೊಟ್ಟವರಿಗೆ ‘ರಾವಸಾಹೇಬ’ ‘ರಾವಬಹಾದ್ದೂರ’ ಪದವಿಯು ದೊರೆಯುವದು. ಆದರೆ ಹಗಲಿರುಳು ಅಧಿಕಾರಿಗಳ ಮುಂದಿ ಕೈಜೋಡಿಸಿ ನಿಂತವರಿಗೆ ಯಾವ ಪದವಿಯು ದೊರೆಯುವದಿಲ್ಲವಲ್ಲ! ಈ ಸಂಗತಿಯ ಅರ್ಥವೇ ನನಗೆ ತಿಳಿಯದಂತೆ ಆಗಿದೆ.

ಸದ್ಯಕ್ಕೆ ನಮ್ಮ ಜಿಲ್ಹೆಯನ್ನು ಆಳುವ ಕಲೆಕ್ಟರ ಸಾಹೇಬರು ನಮ್ಮ ಜ್ಞಾತಿಬಾಂಧವರಿದ್ದು ಅವರ ಆಳಿಕೆಯಲ್ಲಿಯಾದರೂ ನನಗೆ ಪದವಿದಾನವಾಗುವದೆಂದು ಆಶೆ ಇತ್ತು. ನನ್ನದೂ ಕಲೆಕ್ಟರರದೂ ಬಹಳ ಸ್ನೇಹ, ಖಣಾನುಬಂಧವಿದೆ. ನಾನು ಅವರ ಭೆಟ್ಟಿಗೆ ಹೋದಾಗ್ಲೆ ಎಷ್ಟೋ ತಾಸುಗಳವರೆಗೆ ನನ್ನೊಡನೆ ಅವರು ಮಾತನಾಡುತ್ತಾರೆ. ಅವರ ಕೃಪೆಯಿಂದಾದರೂ ಈ ಸಾರೆ ನಾನು ಪದವಿಗೆ ಪಾತ್ರನಿದ್ದ ಬಗ್ಗೆ ತಿಳಿಸಿದ್ದರೆಂದು ಕೇಳಿದೆ. ನನ್ನ ದುರ್ದ್ವೈವದಿಂದ ಕಲೆಕ್ಟರ ಸಾಹೇಬರು ಸಾಹೇಬರಂತೆ, ಉಡುಪುಗಳನ್ನು ಧರಿಸಿದರೂ ದೇಶೀ ಸಾಹೇಬರಿದ್ದ ಮೂಲಕ, ಜಾತಿಯಿಂದ ಸಾಹೇಬರ ಶಿಫಾರಸದಂತೆ ಇವರ ಶಿಫಾರಸಕ್ಕೆ‌ ದೊಡ್ಡ ಸರಕಾರದಲ್ಲಿ ಮನ್ನಣೆ ಇಲ್ಲದ್ದನ್ನು ಮನಗಂಡೆನು. ಕಲೆಕ್ಟರ ಸಾಹೇಬರ ದಾರಿಬಿಟ್ಟು ಎತ್ತ ಹೋಗಬೇಕೆಂಬ ವಿಚಾರ ಮಾಡುವಾಗಲೇ ಮೇಹರಬಾನ ಕಮೀಶನರ ಸಾಹೇಬ ಬಹಾದ್ದೂರರವರ ಪಾದಧೂಳಿಯು ವಿಜಾಪುರದಲ್ಲಿ ಬಿತ್ತು. ಅವರ ಭೆಟ್ಟಿಯ ಸಲುವಾಗಿ ನಾನು ಹೊಸ ಪೊಷಾಕ ಮಾಡಿಸಿದೆ; ಬೂಟಿಗೆ ಅಚ್ಚಾದ ಕೊಬ್ರಾ ಬೂಟಪಾಲಿಸ ತಿಕ್ಕಿಸಿದೆ. ಬಿಳೆ ಮೀಶೆಗಳಿಗೆ ದಟ್ಟ ಕರೇ ಕಲಪು ಹಚ್ಚಲಿಕ್ಕೆ ನಾನು ಮರೆಯಲಿಲ್ಲ. ರಾಮಯ್ಯನನ್ನು ಕರೆತಂದು ಎದುರುಗಟ್ಟ ಮಾಡಿಸಿ ಸರ್ವ ತಯಾರಿ ಮಾಡಿಕೊಂಡು ಸಲಾಮ ಹೇಗೆ ಮಾಡಬೇಕು, ಅವರ ಮಾತು ತಿಳಿದಿದ್ದರೂ ಹೇಗೆ ನಗಬೇಕು ಇದನ್ನೆಲ್ಲ ಕೇಳಿಕೊಂಡು ಸಾಹೇಬರ ಭೆಟ್ಟಿಗೆ
ಹೋದೆ. ನನಗೆ ಇಂಗ್ರೇಜೀ ಬರದೇ ಇದ್ದ ಮೂಲಕ ಸಾಹೇಬರಿಗೆ ನನ್ನ ಭೆಟ್ಟಿಯ ಕಾರಣ ಕನ್ನಡದಲ್ಲಿ ಹೇಳಿಕೊಂಡು ಮತ್ತು ಬದಿಯಲ್ಲಿದ್ದ ಕಾರಕೂನನ ಕಡಯಿಂದ ಅದರ ಅರ್ಥವನ್ನು ಸಾಹೇಬರಿಗೆ ತಿಳಿಸಿದೆ. ‘ರಾವಸಾಹೇಬ’ ಪದವಿಯನ್ನು ದೊರಕಿಸಲಿಕ್ಕೆ ಬಂದಿದ್ದೇನೆಂದು ಕೇಳಿದ ಕೂಡಲೇ ಸಾಹೇಬ ಬಹಾದ್ದೂರವರು ಫೂಲ್‌, ಫೂಲ್‌ (Fool Fool) ಎಂದು ಒದರಿದ್ದರಿಂದ ಅವರಿಗೆ ಸಂತೋಷವಾಗಿದೆ ಎಂದು ತಿಳಿದೆ. ಹದಿನೆಂಟು ವರುಷದ ನನ್ನ ಮಗನು ಇಂಗ್ರೇಜಿ ಕಲಿಯುತ್ತಲಿದ್ದಾನೆ. ಅವನಿಗೆ ಆ ಶಬ್ದದ ಅರ್ಥವನ್ನು ಕೇಳಿದೆ. ಆದರೆ “ಫೂಲ ಇದರ ಅರ್ಥ”. ಮೂರ್ಖ ಅಂತ ತಿಳಿಯಿತು. ಅದರೂ ನನಗೆ “ರಾವಸಾಹೇಬ ಪದವಿ ದೊರಕಲಿಕ್ಕೆ ಅಡಿ ಆಗುವದಿಲ್ಲ. ‘ರಾವ ಸಾಹೇಬ ರಾವಬಹಾದ್ದೂರ ಅದವರೆಲ್ಲರೂ ಬಹುತರವಾಗಿ ನನ್ನ ವರ್ಗದಲ್ಲಿರುವದರಿಂದ ನಾನಾದರೂ ಅಡ್ಡಿ ಇಲ್ಲವೆಂದು ಸಮಾಧಾನ ಮಾಡಿಕೊಂಡೆ.

ಎಷ್ಟೋ ಗುಪ್ತ ರೋಗಗಳು ನನ್ನಲ್ಲಿ ಮನೆಮಾಡಿಕೊಂಡಿರುವದರಿಂದ ನನಗೆ ಈ ಪದವಿಯು ಆದಷ್ಟು ತೀವ್ರ ದೊರೆಯಬೇಕಾಗಿದೆ. ಯಾಕಂದರೆ ಓಮ್ಮಿಂದೊಮ್ಮೆಲೇ ಎದಿಬೇನೆಯಿಂದ ಕೈಲಾಸಕ್ಕೆ ಎಲ್ಲಿ ತೆರಳುವೆನೋ ಎಂಬ ಬಲವಾದ ಶಂಕೆಯು ನನ್ನಲ್ಲಿ ಹುಟ್ಟಿದೆ. ಆದ್ದರಿಂದ ಟಾಂಗಾದಲ್ಲಿ ತಿರುಗಾಡುತ್ತೇನೆ ಹತ್ತರ ಔಷಧದ ಬಾಟ್ಲಿಯನ್ನು ಇಟ್ಟುಕೊಂಡಿರುತ್ತೇನೆ. ಇಷ್ಟಾಗಿ ಶಿವನ ಮನಸ್ಸಿನಲ್ಲಿ ನನ್ನನ್ನು ಕೈಲಾಸಕ್ಕೆ ಅಟ್ಟಬೇಕೆಂದು ಇದ್ದರೆ ನನ್ನದೇನು ಉಪಾಯವಿದೆ. ಕಳೆದ ನಾಲ್ಕಾರು ವರುಷಗಳಿಂದ ಹೊಲಗಳು ಬೆಳೆದಿಲ್ಲ. ಹೊಲಗಳು ಒತ್ತೀ ಬಿದ್ದಿವೆ. ಅಡತಿ ಅಂಗಡಿ ದಿವಾಳಿ ಹೊರಡುವ ಪ್ರಸಂಗ ಬಂದಿದೆ. ನಾನು ಮೆಂಬರನಿದ್ದ ಮೂಲಕ ಕೈ ಮೇಲೆ ಹೊಟ್ಟಿ ತುಂಬಿಕೊಳ್ಳುತ್ತೇನೆ. ಈ ಕಾಲದಲ್ಲಿ ನಾನು ದೇಹವಿಡುವದು ಯೋಗ್ಯವೆ. ಆದರೆ ‘ರಾವಸಾಹೇ’ ಪದವಿ ಇಲ್ಲದೆ ಸಾಯಬೇಕಾಗುವದರಿಂದ ಬಹಳ ವ್ಯಸನ ಪಡುತ್ತೇನೆ. ಸರಕಾರದವರು ಪದವೀದಾನ ಸಮಾರಂಭದಲ್ಲಿ ಸಹ ಕೃಪಣತನ ಮಾಡುತ್ತಾರೆ. ಎಲ್ಲಮ್ಮನ ಪ್ರಸಾದದಂತೆ ಪ್ರತಿವಾರ ಪದವೀದಾನ ಮಾಡುವದರಿಂದ ಸರಕಾರದವರದೇನೂ ಹಾನಿ ಇರುವದಿಲ್ಲ. ಈ ವಾರದಲ್ಲಿ ನನಗೆ ಪದವಿ ದೂರೆಯದೇ ಹೋದರೆ ನನ್ನ ಗತಿ ನೆಟ್ಟಗಿಲ್ಲ. ನಿಮ್ಮ ಪತ್ರದ್ವಾರಾ ನಾನು ಸರಕಾರಕ್ಕೆ ಒಂದು ರೀತಿಯಿಂದ ನೋಟೀಸು ಕೊಡುತ್ತೇನೆ. ನಾನು ‘ರಾವಸಾಹೇಬ’ ‘ರಾವಸಾಹೇಬ’ ಅಂತ ಪ್ರಾಣ ಬಿಟ್ಟರೆ ಅದಕ್ಕೆ ಸರಕಾರದವರೇ ಹೂಣೆಗಾರರು.

ಸಂಪಾದಕ ಮಹಾಶಯರೇ, ಈ ಪತ್ರ, ಕೊನೆಯದು. ತಾವು ನನ್ನ ದೂರನ್ನು ಜನರ ಮುಂದೆ ಮತ್ತು ಸರಕಾರದವರ ಮುಂದೆ ಇಡಲಿಕ್ಕೆ ಅವಕಾಶ ಕೊಟ್ಟ ಬಗ್ಯೆ ನಾನು ಬಹಳ ಖುಣಿಯಾಗಿದ್ದೇನೆ. ನಾನು ಬೇರೆ ಕಡೆಗೆ ಕಳಿಸಿದ್ದರೆ ದುಡ್ಡು ಬೇಡುತ್ತಿದ್ದರು.


ಅಪಾರವಾದ ಅನರ್ಥ

ವಿಜಾಪೂರ ಪಟ್ಟಣದಲ್ಲಿ ಅಬಾಲ ವೃದ್ಧರಿಗೂ ಗೊತ್ತಿಂದ್ದಧ ರಾಜ ಶ್ರೀ.
ಬಸವಂತರಾಯಾ ಇವರ ಆಕಸ್ಮಿಕ ಮರಣದಿಂದ ನಮಗಾದ ದುಃಖದಷ್ಟೇ
ನಮ್ಮ ವಾಚಕರಿಗೂ ಆಗಿರುವದರೆಂಬದರಲ್ಲಿ ಸಂದೇಹವಿಲ್ಲ. ಅವರ ಮರಣದ
ಸಂಗತಿಯಾದರೂ ಅವರ ಚರಿತ್ರದಂತೆ ಬೋಧ ಪ್ರದವಿರುವದರಿಂದ ಅದನ್ನು
ಅವರ ಮಗನ ಶಬ್ದದಲ್ಲಿ ಕೆಳಗೆ ಕೊಡುತ್ತೇವೆ.

ರಾ. ಕರ್ನಾಟಕ ವೈಭವದ ಸಂಪಾದಕರಿಗೆ

ವಿ. ವಿ. ನಮ್ಮ ತಂದೆಯಾದ ಶ್ರೀಮಂತ ಬಸವಂತರಾಯಾ ತಿಮ್ಮಣ ಗೌಡಾ ಪಾಟೀಲ ಇರುವ ಊರು ಹುಚನೂರು ಆನರರಿ ಬೆಂಚ ಮಾಜಿಸ್ಟ್ರೇಟ ಮೊದಲನೇ ವರ್ಗ, ಮೆಂಬರ ಜಿಲ್ಹಾ ಲೋಕಲಬೋರ್ಡ, ಬ್ಲಾಯಿಂಡ ರಿಲೀಫ ಅಸೋಸಿಯಶೇನ, ಉಪಾಧ್ಯಕ್ಷ ಜಿಲ್ಹಾ ಪಾಟೀಲ ಸಂಘ, ಅಧ್ಯಕ್ಷ ಬ್ರಾಹ್ಮಣೇತರ ಸಂಘ, ಅಗ್ಗದ ನಾಯಿದ (ಆನರರಿ ಆರ್ಗನಾಯಿಝರ) ಸಹಕಾರೀ ಸಂಘ ಕಾರ್ಯದರ್ಶಿ ತಾಲೂಕ ಡೆವಲಪ್‌ಮೆಂಟ ಆಸೋತಿಯೇಶನ್‌ ವಗೈರೆ ಇವರು ತಾರೀಖು ೨೫ನೇ ಮಾರ್ಚ ದಿವಸ ಬಿಳಿಗ್ಗೆ ೮ ಘಂಟೆಗೆ ಶಿವನ ಕಡೆಯಿಂದ ಆಜ್ಞಾ, ಬಂದದ್ದರಿಂದ ಕೈಲಾಸಕ್ಕೆ ತೆರಳಿದರು. ಸುಮಾರು ಒಂದು ತಿಂಗಳಿಂದ ಅವರ ಪ್ರಕೃತಿಯು ಚನ್ನಾಗಿದ್ದಿಲ್ಲ. ಯಾವದೋ ಒಂದು ವಸ್ತುವಿನ ಸಲುವಾಗಿ ಹೃದ್ರೋಗವು ಉಂಟಾಗಿತ್ತು. ಮುನಸಿಪಾಲಟಿ ಮತ್ತು ಲೋಕಲಬೋರ್ಡದವರು ಮಹಾತ್ಮಾ ಗಾಂಧಿಯವರಿಗೆ ಮಾನಪತ್ರ ಕೊಡಬೇಕೆಂದು ಠರಾವು ಪಾಸು ಮಾಡಿದ್ದರಿಂದ ಅವರ ಎದೆಗೆ ಧಕ್ಕೆ ತಗಲಿತೆಂದು ತೋರುತ್ತದೆ. ಸಾಯುವವರೆಗೆ ಅವರು ಎಚ್ಚರವಿದ್ದರು. ಸಾಯುವದಕ್ಕಿಂತ ೫ ಮಿನಿಟು ಮೊದಲು ನನ್ನನ್ನೂ ನನ್ನ ತಾಯಂದಿರನ್ನೂ ಕರೆದು ಮೃತ್ಯುಪತ್ರದಲ್ಲಿ ಬರೆದಂತೆ ನಡೆಯಲಿಕ್ಕೆ ಆಜ್ಞಾಪಿಸಿದರು. ನಾವು ಅಳುತ್ತ ನಿಂತಿರುವಾಗ ರಾವಸಾಹೇಬ, ರಾವಸಾಹೇಬ ಅನ್ನುತ್ತ ಪ್ರಾಣಬಿಟ್ಟರು. ಮೃತ್ಯುಪತ್ರವನ್ನು ಒಂದು ಪಾಕೀಟನಲ್ಲಿ ಹಾಕಿ ಇಟ್ಟಿದ್ದರು. ಅವರ ಹೇಳಿಕೆಯ ಪ್ರಕಾರ ಆ ಮೃತ್ಯುಪತ್ರವನ್ನು ಪ್ರಸಿದ್ಧ ಮಾಡುವ ಕುರಿತು ನಿಮ್ಮ ಕಡೆಗೆ ಕಳಿಸುತ್ತಿದ್ದೇನೆ. ತಾವು ಅದನ್ನು ಪ್ರಸಿದ್ಧ ಮಾಡುವಿರೆಂದು ಆಶಿಸುತ್ತೇನೆ.

ತಮ್ಮ ಕೃಪಾಭಿಲಾಷಿ
ಬಸಲಿಂಗರಾವ ಬಸವಂತರಾಯಾ ಬಿರಾದಾರ ಪಾಟೀಲ

ಮೃತ್ಯುಪತ್ರ

ಮೃತ್ಯುಪತ್ರ ಬೇಸ್ಮಿ ಬಸವಂತರಾಯಾ ಬಿನ್ನ ತಿಮ್ಮಣಗವಡಾ ಪಾಟೀಲ ಸಾ. ಹುಚನೂರ ಹಲ್ಲಿವಸ್ತಿ ವಿಜಾಪುರ ಜಾತಿ ಲಿಂಗಾಯತರಡ್ಡೀ ವಯ ೫೫, ಧಂದೆ ವ್ಯಾಪಾರ, ಮುಖ್ಯತಃ ಬೆಂಚ ಮ್ಯಾಜಿಸ್ಟ್ರೇಟ, ಹೀಗೆ ಮೃತ್ಯುಪತ್ರ ಬರೆದಿರುತ್ತೇನೆ. ನಾನು ರಾವಸಾಹೇಬನಾಗದ್ದರಿಂದ ನನ್ನ ರೋಗವು ಹೆಚ್ಚಾಗಿ ಕ್ಷೀಣವಾಗಹತ್ತಿದ್ದೇನೆ. ಯಾವಾಗ ಕೈಲಾಸಕ್ಕೆ ಹೋಗುವೆನೆಂಬದು ನಿಯಮವಿಲ್ಲ. ನನ್ನ ಮರಣದ ನಂತರ ನನ್ನ ಆಸ್ತಿಯ ಸಲುವಾಗಿ ಕೋರ್ಟ ಕಚೇರಿಗೆ ಹೋಗುವ ಪ್ರಸಂಗ ಬರಬಾರದು. ಮತ್ತು ನನ್ನ ಆಯುಷ್ಯದಿಂದ ನನ್ನ ಮಕ್ಕಳು ಬೋಧ ತೆಗೆದುಕೊಳ್ಳಬೇಕೆಂದು ಈ ಮೃತ್ಯು ಪತ್ರವನ್ನು ಬರಿದಿಡುತ್ತೇನೆ.

ಪದವಿ ಮತ್ತು ಸರ್ಟಿಫಿಕೇಟ

ನಾನು ಪದವಿ ಸಲುವಾಗಿ ಬಹಳ ಪ್ರಯತ್ನ ಮಾಡಿದೆನು. ಆದರೆ ಆ ಪದವಿಯು ವೇಳೆಗೆ ಬರಲಿಲ್ಲ. ತಥಾಪಿ ನಾನು ಕೈಲಾಸ ವಾಸಿಯಾದ ಎಂಟು ದಿವಸಗಳಲ್ಲಿ ರಾವಸಾಹೇಬ ಪದವಿಯು ಸಿಕ್ಕರೆ ನನ್ನನ್ನು ಸಮಾಧಿಯ ಹೊರಗೆ ತೆಗೆದು ನನ್ನ ಕೊರಳೊಳಗೆ ಆ ಪದಕವನ್ನು ಕಟ್ಟಬೇಕು. ಒಂದು ವೇಳೆ ೮ ದಿವಸಗಳೊಳಗೆ ಬರದಿದ್ದರೆ ವಿಜಾಪುರ ಶಹರದಲ್ಲಿರುವ ಹೆಣ್ಣು ಹುಡುಗರ ಸಾಲೆ ಫೌಜದಾರ ಕಚೇರಿ ಲಾಯಬ್ರರಿ ಇವುಗಳ ಮಧ್ಯದಲ್ಲಿರುವ ಕಂದೀಲ ಕಂಬಕ್ಕೆ ತೂಗಹಾಕಬೇಕ್ಕು ನನ್ನ ಮರಣದಿಂದ ಒಂದು ವರುಷದ ವರೆಗೆ ಕಲೆಕ್ಟರ ಸಾಹೇಬರಿಗೆ ಊರೊಳಗಿನ ಚಾಡಿ ಹೇಳುತ್ತಾರೋ ಮತ್ತು ಕಲೆಕ್ಟರ ಸಾಹೇಬರು ಆ ವಿಷಯವಾಗಿ ಸರ್ಟಿಫಿಕೇಟ ಕೊಡುತ್ತಾರೋ ಅವನಿಗೆ ಈ ರಾವಸಾಹೇಬ ಪದವಿಯನ್ನು ಕೊಡಬೇಕು. ವಾರಲೋನ, ರಿಕ್ರುಟ ಫಂಡು, ಕುರುಡರ ಫಂಡು, ಮೊದಲಾದ ಅನೇಕ ಕೃತ್ಯಗಳನ್ನು ಮಾಡಿದ್ದರಿಂದ ಸಾಹೇಬ ಜನರು ನನಗೆ ಎಂಟು ಸರ್ಟಿಫಿಕೇಟ ಕೊಟ್ಟಿರುತ್ತಾರೆ. ನನ್ನ ಮಗನಿಗೆ ಅವುಗಳ ಉಪಯೋಗವಿಲ್ಲ ಅವುಗಳನ್ನು ಜಿಲ್ಹಾ ಲೋಕಲ ಬೋರ್ಡದ ಸರಕಾರ ನಿಯುಕ್ತ ಒಬ್ಬ ಹಿಂದೀ ಮತ್ತು ಮುಸಲ್ಮಾನ ಸಭಾಸದರಲ್ಲಿ ಹಂಚಿ ಕೊಡಬೇಕು. ನಾನು ಎಷ್ಟೋ ಸಾಹೇಬರ ಕೂಡ ಫೋಟೊ ತೆಗೆಸಿಕೊಂಡ ಪ್ರತಿಗಳಿರುತ್ತವೆ. ಅವುಗಳನ್ನು ಶೆಪರ್ಡ ಹಾಲದಲ್ಲಿ ನನ್ನ ಸ್ಮರಣಾರ್ಥ ತೂಗಹಾಕಬೇಕು. ಎಲ್ಲ ಫೋಟೊಗಳನ್ನು ಏಕತ್ರ ಮಾಡುವದರಿಂದ ಜಿಲ್ಹೆಯೊಳಗಿನ ರಾಜನಿಷ್ಠ ಜನರ ಯಾದಿಯನ್ನು ಮಾಡಲಿಕ್ಕೆ ಉಪಯೋಗ ಬೀಳುವದು.

ನನ್ನ ಪದಕ ಮತ್ತು ಸರ್ಟಿಫಿಕೇಟಗಳು ಎಷ್ಟು ಮಹತ್ವದ್ದಿರುತ್ತವೆಯೋ ಅಷ್ಟೇ ನನ್ನ ಪೋಷಾಕವಾದರೂ ಮಹತ್ವದ್ದಿರುತ್ತದೆ. ನನ್ನ ಕೋಟ ಪಾಟಲೋಣ ನನ್ನ ಹುಡುಗನಿಗೆ ನಿರುಪಯೋಗಿ ಇರುತ್ತವೆ. ಆದರೆ ಬಹಳ ಹಣವನ್ನು ವೆಚ್ಚ ಮಾಡಿ ತಯಾರ ಮಾಡಿಸಿದ ಅರಿವೆಗಳನ್ನು ವೃರ್ಥವಾಗಿ ಚಲ್ಲುವದು ಯೋಗ್ಯವಲ್ಲ. ನನ್ನ ಎಲ್ಲ ಪೋಷಾಕ ಮುನಸವಾಲಿಟಿಯಲ್ಲಿಡತಕ್ಕದ್ದು. ಮತ್ತು ದೊಡ್ಡ ದೊಡ್ಡ ಸಾಹೇಬರಿಗೆ ಮುನಸಿಪಾಲಿಟಿಯವರು ಮಾನಪತ್ರ ಕೊಡುವಾಗ ಮುನಸಿಪಾಲಿಟಿಯ ಬಡ ಮೆಂಬರರಿಗೆ ಚಲೋ ಪೋಷಾಕ ಮಾಡಿಸುವದಾಗುವದಿಲ್ಲ. ಆದ್ದರಿಂದ ಅಂಥ ಬಡ ಮೆಂಬರರಿಗೆ ನನ್ನ ಪೋಷಾಕವನ್ನು ಬಾಡಗಿಯಿಂದ ಕೊಟ್ಟು ಆ ಬಾಡಗಿ ಹಣವನ್ನು ಮುನಸಿಪಾಲಿಟಿಯ ಸಭೆಯು ನಡೆದಾಗ ಮೆಂಬರರಿಗೆ ಬೀಡಿ, ಕಡ್ಡಿ, ಚುಟ್ಟಾ ಮೊದಲಾದವುಗಳನ್ನು ಪೂರೈಸುವದಕ್ಕೆ ಉಪಯೋಗಿಸಬೇಕೆಂದು ಇಚ್ಛೆ ಇರುತ್ತದೆ. ಈ ಇಚ್ಛೆಯನ್ನು ಶ್ರೀ. ಚನ್ನಬಸವೇಶ್ವರನು ಸಮರ್ಧನಿದ್ದಾನೆ.

ನನ್ನ ಹೆಂಡಂದಿರು

ಮನೆಯ ಸಂಬಂಧಿ ಬರೆಯಬೇಕಾದರೆ ನನ್ನ ಕ್ಕೆ ನಡಗುತ್ತದೆ. ಇಬ್ಬರು ಹೆಂಡಂದಿರನ್ನು ಮಾಡಿಕೊಂಡದ್ದರಿಂದ ಮನೆಯಲ್ಲಿಯ ಜಗಳವನ್ನು ತೀರಿಸುವದರಲ್ಲಿ ನನ್ನ ವೇಳೆಯು ಹೋಗಹತ್ತಿತ್ತು. ನನ್ನ ಮೊದಲನೇ ಹೆಂಡತಿಯ ಹೆಸರು ಯಲ್ಲಿ. ಎರಡನೇ ಹೆಂಡತಿಯ ಹೆಸರು ಪಾರ್ವತಿ. ಯಲ್ಲಿಯ ಹೊಟ್ಟಿಯಿಂದ ಒಬ್ಬ ಮಗನಿದ್ದಾನೆ. ಆದರೆ ನನ್ನಂತೆ ನಾಲ್ಕು ಜನ ಸಂಭಾವಿತರ ಆಗ್ರಹದಿಂದ ಮತ್ತು ಸ್ವಾಮಿಗಳ ಅಜ್ಞೆಯ ಮೇರೆಗೆ ಪಾರ್ವತಿಯನ್ನು ಉಡಕಿ ಮಾಡಿಕೊಂಡೆನು. ಆಕೆಯಿಂದಲೂ ಒಬ್ಬ ಮಗನಿದ್ದಾನೆ. ನಾನು ಜೀವಂತ ಇದ್ದಾಗ ಹೇಗಾದರೂ ಮಾಡಿ ಹೆಂಡಂದಿರ ಜಗಳವನ್ನು ಮುರಿಯುತ್ತಿದ್ದೆನು. ಆದರೆ ನಾನು ಸತ್ತ ಮೇಲೆ ಅವರೀರ್ವರು ಟಗರಿನಂತೆ ಹೊಡೆದಾಡುವರೆಂದು ನನಗೆ ಪೂರ್ಣ ಮನವರಿಕೆ ಅದೆ. ಪಾರ್ವತಿ ತರುಣ ಇದ್ದು ಸುಂದರ ಇದ್ದಾಳೆ. ಆಕೆಯನ್ನು ಉಡಕಿ ಮಾಡಿಕೊಳ್ಳಲಿಕ್ಕೆ ಯಾರಾದರೂ ಒಪ್ಪಬಹುದು. ನಾನು ಸತ್ತ ಮೇಲೆ ಯಲ್ಲಿಯ ಗೂಡ ಹೊಡದಾದುತ್ತ ಅನಾಚಾರಿಯಾಗಿ ನನ್ನ ಮನೆಯಲ್ಲಿರುವದಕ್ಕಿಂತ ಯೋಗ್ಯಎರಡನೇದವನನ್ನು ಉಡಕಿ ಮಾಡಿಕೊಂಡು ಹೋಗುವದು ಚಲೋದು. ನನ್ನ ಮರಣದ ನಂತರ ಆಕೆಯು ಒಂದು ವರುಷದೊಳಗೆ ಉಡಕಿ ಮಾಡಿಕೊಂಡು ಹೋದರೆ ಆಕೆಗೆ ಕುಪ್ಪಸ ಸೀರೆಯ ಸಲುವಾಗಿ ಪ್ರತಿ ತಿಂಗಳ ನಾಲ್ಕು ರೂಪಾಯಿ ಆಕೆಗೆ ಕೊಡಬೇಕು. ಆಕೆಯು ಉಡಕಿ ಮಾಡಿಕೊಂಡು ಹೋಗದಿದ್ದರೆ ಕೆಳಗಿನ ಪ್ರಕಾರ ವ್ಯವಸ್ಥಾ ಮಾಡಬೇಕು.

ದರವರ್ಷ ಪ್ರತಿಯೊಬ್ಬಳಿಗೆ ನಾಲ್ಕು ಚೀಲ ಜೋಳ ಕೊಡಬೇಕು. ಮತ್ತು ಪ್ರತಿಯೊಬ್ಬರಿಗೆ ಒಂದೊಂದು ಎಮ್ಮೆ ಕೊಡಬೇಕು. ಎಮ್ಮೆಯ ಕಿಮ್ಮತ್ತು ನೂರು ರೂಪಾಯಿ ಬಿದ್ದರೂ ಚಿಂತೆಯಿಲ್ಲ ಆ ಎಮ್ಮೆಯ ಹಾಲು ಮೊಸರು ಮಾರಿಕೊಂಡು ಅವರು ಉಪಜೀವನ ಮಾಡಿಕೊಳ್ಳುತಕ್ಕದ್ದು. ಅವರಿಗೆ ಹೊತ್ತು ಹೋಗುವ ಸಲುವಾಗಿ ಒಂದೊಂದು ರಾಟಿ ಕೊಡಬೇಕು. ರಾಟಿಯಿಂದ ಅವರಿಬ್ಬರು ನೂಲು ತೆಗೆಯಹತ್ತಿದರೆ ನನ್ನ ಆಸ್ತಿಯೊಳಗಿಂದ ಅವರಿಗೆ ಒಂದೊಂದು ಮಣ ಆರಳಿ ಕೊಡಬೇಕು. ನನ್ನ ಹೆಂಡರು ವಿಜಾಪೂರ ಬಿಟ್ಟು ಹುಚನೂರೊಳಗೆ ಹೋಗಿ ಇದ್ದರೆ ಮಾತ್ರ ಅವರಿಗೆ ಈ ಪ್ರಕಾರ ಕೊಡಬೇಕು ಇಲ್ಲದಿದ್ದರೆ ಏನೂ ಕೊಡಬಾರದು. ಅವರ ಮೈ ಮೇಲೆ ಇದ್ದ ವಸ್ತ್ರ ಒಡವೆಗಳ ಮಾಲಕರು ಅವರೆ ಇದ್ದಾರೆ. ತಮ್ಮ ಮನಸ್ಸಿಗೆ ಬಂದಂತೆ ಅವರು ಅವುಗಳ ವ್ಯವಸ್ಥೆ ಮಾಡಿಕೊಳ್ಳಬಹುದು. ಸಾಯುವವರೆಗೆ ಅವುಗಳನ್ನು ಇಟ್ಟಿಕೊಳ್ಳಬೇಕೆಂದು ನನ್ನ ಶಿಫಾರಸ ಅದೆ. ಆಭರಣಗಳು ಹೋದವೆಂದರೆ ಮುಪ್ಪಿನಲ್ಲಿ ಅವರನ್ನು ಯಾರೂ ಕೇಳುವದಿಲ್ಲ. ಇರಲಿ, ಒಬ್ಬ ಹೆಂಡತಿ ಜೀವಂತ ಇರಲಿಕ್ಕೆ ಎರಡನೇ ಹೆಂಡತಿಯನ್ನು ಮದುವೆ ಅಥವಾ ಉಡಕಿಯನ್ನು ಮಾಡಿಕೊಳ್ಳಬಾರದಿಂದು ನನ್ನ ಅನುಭವದಿಂದ ಬರೆದಿಡುತ್ತೇನೆ. ಇಬ್ಬರ ಹೆಂಡರೆ ಮೂಲಕ ನನಗೆ ತೀವ್ರ ಮರಣ ಬಂದಿತೆಂದು ನನಗೆ ಅನಿಸುತ್ತದೆ. ನನ್ನ ರೋಗ ಅವರಿಗೆ ಹತ್ತಲಿ. ಅಥವಾ ಅವರ ರೋಗ ನನಗೆ ಅಂಟಿಕೊಳ್ಳಲಿ. ನಾನು ಮಾತ್ರ ತೀವ್ರ ಮುಪ್ಪಾದೆನು. ಈ ಪ್ರಕಾರ ಹೆಂಡಂದಿರ ವ್ಯವಸ್ಥಾ ಮಾಡಿದ್ದೀನೆ.

ಮಕ್ಕಳು
ನಾನು ನಿಮಗಾಗಿ ಏನನ್ನೂ ಮಾಡಿಲ್ಲ. ಮನೆಮಾರುಗಳನ್ನು ಹಾಳು ಮಾಡಿಕೊಂಡು, ರಾವಸಾಹೇಬ ಪದವಿಯ ಅಮೌಲ್ಯಜ್ಞಾನ ನಿಧಿಯನ್ನು ನಿಮಗಾಗಿ ಇಟ್ಟಿದ್ದೇನೆ. ನನ್ನ ಸಹವಾಸದಿಂದ ನನ್ನ ಚಲೋ ಕೆಟ್ಟ ವ್ಯಸನಗಳು ನಿಮ್ಮ ಸ್ಪಾಧೀನವಾಗಿವೆ. ಸಾಲಕ್ಕಾಗಿ ಆಸ್ತಿಯನ್ನು ಮಾರಿ ಉಳಿದುದರಲ್ಲಿ ಸಮನಾಗಿ ಹಂಚಿಕೊಳ್ಳಬೇಕು. ಬಸಲಿಂಗರಾಯನು ಆಡತಿಯ ಅಂಗಡಿಯನ್ನೂ ಇನ್ನೊಬ್ಬನು ಹೊಲಮನೆಗಳನ್ನೂ ತೆಗೆದುಕೊಂಡು ಹುಚನೂರಲ್ಲಿ ಇರಬೇಕು- ನನ್ನ ಕೊನೆಯ ಇಚ್ಛೆಯು ಇಷ್ಟೆ. ನೀವು ಮಾತ್ರ ಈ ರಾವ ಸಾಹೇಬಕೀ ಮಬ್ಬಿಗೆ ಬೀಳಬಾರದೆಂದೂ ಈ ನನ್ನ ಅದ್ಭುತವಾದ ರಾವಸಾಹೇಬಕಿ ಚರಿತ್ರೆಯನ್ನು ಮುದ್ರಿಸಿ ತರುಣರಲ್ಲಿ ಪುಕ್ಕಟೆಯಾಗಿ ಹಂಚಬೇಕು.

ತಮ್ಮ
ಬಸವಂತರಾಯ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ರುಚಿಯನೆಲ್ಲಿ ಹುಡುಕುವಿರಿ? ದುಡಿದುಂಬ ಹಸಿವಿಲ್ಲದಿರೆ?
Next post ಪಾಶ

ಸಣ್ಣ ಕತೆ

 • ಮೋಟರ ಮಹಮ್ಮದ

  ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

 • ಸಾವು

  ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

 • ಗಂಗೆ ಅಳೆದ ಗಂಗಮ್ಮ

  ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

 • ದೇವರು

  ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

 • ಎದಗೆ ಬಿದ್ದ ಕತೆ

  ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

cheap jordans|wholesale air max|wholesale jordans|wholesale jewelry|wholesale jerseys