ಕಾರಿರುಳ ಗವಿಯಲ್ಲಿ ಎಲ್ಲಿಂದಲೋ ಒಂದು
ಕಿರಣ ಒಳಹೊಕ್ಕಂತೆ, ನನ್ನ ಜೀವನದಲ್ಲಿ
ನಿನ್ನ ಎಳೆತನದ ನಗು ತುಂಬಿ ತೂರುತ ಬಂದು
ಬೆಳಗಿತ್ತು ಎದೆಯನ್ನು, ಹೃದಯದುಮ್ಮಳದಲ್ಲಿ,
ಆನಂದದೆಲರಿನಲಿ, ಕಳೆದ ಕಾಲದ ಕಳೆದ
ದುಸ್ವಪ್ನಗಳನೆಲ್ಲ ಮರೆತು ನಾ ಕುಣಿದಿದ್ದೆ.
ಮುಂದೆ ಇಂತೇ ಇಹುದು, ನೀನೆ ಬಾಳಿನ ಹಸದ,
ಎನುತ, ಆ ಅರೆಗಳಿಗೆ ಒಲವ ಹೂ ಮುಡಿದಿದ್ದೆ !
ಸ್ವಪ್ನ ನಾಚುತ ಹಗಲೊಳವಿತಂತೆ, ನೀನೋಡಿ
ಸಾವಿನಲಿ ಮರೆಯಾದೆ ! ನಿನ್ನ ರೂಪದಲಾನು
ಯುಗ ಯುಗಗಳೇಕಾಂತ ಮನಕೆ ಮಾಡಿದ ಮೋಡಿ
ಬೆಳಕನರಕವ ಹೊಯ್ದು, ನನ್ನ ಜೀವವೆ ನೀನು
ಎಂದಿದ್ದೆ – ನನ್ನ ಉಷೆ – ಬಿಸಿಲುಗೋಲಿನ ಹಾಗೆ
ಅರ್ಧ ಕ್ಷಣ ನೀನಾದೆ! ಕತ್ತಲೇ ಉಳಿದ ಬಗೆ?
*****