ನಿನ್ನ ನೆರಳಲ್ಲಿ ಜಡೆ ಬಿಚ್ಚಿ
ಹರಡಿ ಹಾಸಿದ ಕರಿ ಮೋಡಗಳು
ಪಾದದ ತುಂಬ ಬಿಳಿ ಪಲಕು
ಎದೆಯ ಹರವಿನಲಿ ಅಂವ ಸೂಸಿದ ಗಂಧಗಾಳಿ.

ಕಡು ಹಸಿರು ಹಾಸಿದ ಒಡಲು
ಮೊಗ್ಗು ಬರಿದು ಘನ ಬೆಳೆದೆ
ಗರ್ಭ ಪರಿಮಳ ಒಂದಾದ ದಾಂಪತ್ಯ
ಹಳದಿ ವರ್ಣದ ಕನಸು ಕೇಸರ ಸೂರ್ಯೋದಯ.

ಎಲೆ ಚಿಗುರಿ ಹಾಸಿ ಗುಲಾಬಿ ಮೈತುಂಬ
ಕಸುಕಾವು ಗೆದ್ದಲು ಜಾಣದ ಬೊಡ್ಡೆ ಅರಳಿ
ಒಳಗೊಳಗೆ ಇಳಿದ ಮಧುರ ಪಾನಕ
ರಸಿಕ ಮನಮುದ ಹರಡಿದ ಚಂದ್ರೋದಯ.

ಎದೆಯೊಳಗೆ ತಲ್ಲಣಿಸಿದ ಘಮ ನಿಶೆ
ಪದ ಹಾಡಿದ ಚಿಕ್ಕೆಗಳು ಜೋಕಾಲಿ ಜೀಕಿ
ಅಮರಿಕೊಂಡ ಸರಸ ಕ್ಷಣಗಳು ಅರಳಿ
ಅಂಗಳದಲಿ ಅರಳಿದ ಸುಂದರ ಬನ.
*****

ಕಸ್ತೂರಿ ಬಾಯರಿ

Latest posts by ಕಸ್ತೂರಿ ಬಾಯರಿ (see all)