ನಿನ್ನದೀ ಜಗ ನಿನಗೆ
ಬಲು ಸುಂದರ,
ಎದೆಯೊಲವವರಳಿಸೋ
ನೀ ಸಿರಿ ನೇಸರ ||ಪ||

ಅಂಬೆಗಾಲಿಗೆ ಮುನ್ನ
ಜಗದೊಡೆಯಯೊಡತಿಯಽ ಸೊಗಸು,
ಉರುಳು ಉರುಳತಲಲೆವ
ಕುಸ್ತಿ ಪಟ್ಟುಗಳಽ ಬಿರಿಸು ||೧||

ಕೈ ಕಾಲ ಬಡಿದಾಟ
ಚೆಲ್ವ ಚೆಲ್ಲಾಟವು,
ಅಸಮತೆಯನಳಿಸುವಽ
ಛಲದೊಲವಿನಾ ಠರಾವು ||೨||

ತೊದಲ್ನುಡಿಯ ಮಂಜುಳವು
ಕ್ಷೀರದಾ ನವನೀತ
ರವರವದಽ ಕಲವರವವು
ಸರಿಗಮದ ಗೀತ, ||೩||

ನಿನ್ನೊಡಲ ಹಸಿವೆಯದು
ಸ್ಪುರಿಸೆ ಕಣ್ಣೀರ ಮಾಲೆ,
ತುಂಬಿರೆ ತಾನೊಡಲು
ಗುಡಿಸಲೆದೆ ಸಂತಸದ ಲೀಲೆ ||೪||

ಕಿಂಕಿಣಿಯ ಧಿಮಿ ಧಿಮಿತ
ನಾಟ್ಯರಂಗೋಪರಂಗ,
ನುಡಿ ನುಡಿಯು ಗಿರಿ
ಶಿಖರ ಧಾರಾ ತರಂಗ ||೫||

ನೀ ನಡೆವ ಹಾದಿಯಲಿ
ಭಯವಿಲ್ಲ ನಿನಗೆ,
ನಿನ್ನ ಕಣ್ಣ ನೋಟದಲಿ
ನೇಹದಽ ಬೆಸುಗೆ ||೬||

ಅವರಿವರು ಇವರವರು
ಎಲ್ಲಾರು, ಒಂದೆ,
ಬುವಿ-ಬಾಂದಳದೆದೆಯ ಸತ್ಯತೆಗೆ
ನಿನ್ನಯಽ ಮುಂದೆ ||೭||

ಮನೆ ಮನೆಯ ಮನ ಮನದ
ಶ್ರೀಸೌಗಂಧ ನೀನು,
ಮತ ಮತದ ಪಥ ಹಿತಕೆಲ್ಲ
ನಿಜ ದೈವ ನೀನು ||೮||

ನಿನ್ನೀ ಚೈತನ್ಯದಲಿ
ನೀ ವಿಶ್ವಸಂಚಾರಿ,
ನಿನ್ನರಿವೆ ನನಗೆ ಗುರು
ಬಾಳ ಸಮರಸಕೆ ದಾರಿ ||೯||
*****