ಅದೇ, ಆ ಹೂದೋಟದಲ್ಲಿ ನಿಂತ
ನಿನ್ನ ಪ್ರತಿಮೆಯ ನೋಡಿ
ಒಂದು ಎರಡು ಮೂರು ನಾಲ್ಕು
ಸುತ್ತು ಹೊಡೆದು
ಗಕ್ಕನೆ ನಿಂತಿತೊಂದು ಮಕಮಲ್ಲಿನ ಪಕ್ಷಿ

ಕನ್ನಡದ ನೀರು ಕುಡಿದ, ಕಾಳು ತಿಂದ
ಪಕ್ಷಿಯೇ ಇರಬೇಕದು
’ಕುವೆಂಪು’ ಎಂದಿತು
ಎನಾಶ್ಚರ್ಯ!

ಕುವೆಂಪುವಿನ ಹಸಿರುಕಾಡು ಸುತ್ತಿ
ನೀಲಿ ಬಾನಂಗಳದಿ ಹಾರಾಡಿ,
ದೇವರ ಋಜು ನೋಡಿದ್ದೇನೆ ಎನ್ನಬೇಕೆ?
ಮಹದಾಶ್ಚರ್ಯ !!

ರಾಮಾಯಣ ದರ್ಶನಂ
ಕಾನೂರು ಹೆಗ್ಗಡತಿ
ಪಕ್ಷಿಕಾಶಿಗಳ ಹೆಸರುದುರಿಸಿತು
ಪರಮಾಶ್ಚರ್ಯ !!!

’ನೀನಾವೂರಿನ ಪಕ್ಷಿ, ಇಲ್ಲಿಗೇಕೆ ಬಂದೆ
ಏನೇನ್ಮಾಡಬೇಕೆಂದೆ’ ಎಂದು
ನಾನೂ ಒಂದೆರಡು ಕಾಳು ಉದುರಿಸಿದೆ

ನನ್ನಪ್ಪ ಬೆಂಗಳೂರದ್ದು ಅಮ್ಮ ದಿಲ್ಲಿಯದ್ದು
ಅವರೂರೇ ನನ್ನೂರು ಅಂತು
ಕನ್ನಡಾಭಿಮಾನಿ ನನ್ನಪ್ಪ
ಅಮ್ಮನ ಮಾತು ಮೀರಿ
ನನ್ನೂ ಕಕೊಂಡು ಬಂತು
ಸ್ವಾಭಿಮಾನಿ ಅದು, ತನ್ನ ಮಾತೇ ಕಲಿಸ್ತು
ಕಾಡು ಮೇಡು ತೋರಿಸ್ತು

ಆಹಾಹಾ ! ಏನು ಚೆಂದ ಎಷ್ಟು ಸ್ವತಂತ್ರ
ನಾನೂ ಇದೇ ಕಾಡು, ಇದೇ ನಾಡಿನೆತ್ತರಕೆ
ಬೆಳೆಯುತ್ತೇನೆಂದುಲಿಯುತ
ಚಿಗುರು ಗರಿಗಳನು ತೀಡುತ
ಮತ್ತೆ ಮತ್ತೆ ಕುಣಿದು
ಕುಪ್ಪಳಿಸತೊಡಗಿತು ಮಕಮಲ್ಲಿನ ಪಕ್ಷಿ
*****
ಪುಸ್ತಕ: ಇರುವಿಕೆ