ಉರಿದುರಿದು ದಣಿದ ರವಿ

ಮರೆಯಾದ
ದಿನದ ದುಡಿಮೆಗೆ ತೆರೆ ಎಳೆದು ಹೋದ.

ಅಭಿಮುಖವಾದವು
ಯಾವಜ್ಜೀವ ಪಶು ಪಕ್ಷಿಗಳು
ಗೂಡುಗಳ ಕಡೆಗೆ.

ಕಣ್ಣು ತೆರೆದಳು ನಿಶೆ
ನಭವು ತುಂಬಿ ಹೋಯಿತು
ಮಲ್ಲಿಗೆ ಹೂವುಗಳಿಂದ.

ಕರೆಸಿದಳು ಮಾರುತನ
ನಿಯೋಜಿಸಿದಳು
ಬೀಸುತಿರು ಮೆಲ್ಲ ಮೆಲ್ಲಗೆಯೆಂದು.

ಗದ್ದರಿಸಿ ಕಳಿಸಿದಳು
ಗದ್ದಲ, ಗೌಜ, ಕಿಡಿಗೇಡಿ ಹುಡುಗನ
ಆಪ್ಯಾಯತೆಯ ಹೊದಿಕೆಯನ್ನು ಹೊದಿಸಿದಳು.

ಕೆಡವಿದಳು ಜಗವ ನಿದ್ದೆ ಕವಿಸಿ
ತಲೆ ಹೊಡೆದು ಹಾಕಿದಂತೆ
ಜಾರಿಸಿದಳು
ರಂಜನೀಯ
ಕನಸಿನಾ ಲೋಕಕೆ.

ಜೀವಗಳು ವಿಕಾರ ವಶವಾಗದಂತೆ
ಬಾಳು ಮುರಿದುಕೊಳ್ಳದಂತೆ
ಜೋಪಾನ ಮಾಡಿ
ಮುಂದಕೊಯ್ಯುವ
ನಿತ್ಯ ನೂತನ
ನಿಸರ್ಗದ ದಿವ್ಯೋಪಾಯವೇ… ನಿಶೆ.
*****