ಮಾನವನಾಗಿ ಹುಟ್ಟಿದ್ಮೇಲೆ ಕರ್ನಾಟಕ ನೋಡು
ಹೇಗೋ ಏನೋ ನಿನ್ನೀ ಜನ್ಮ ಪಾವನವ ಮಾಡು
ಕಣ್ಣಿದ್ದರು ಈ ಸುಂದರ ನಾಡನು ನೋಡದ ನಿನ ಬಾಳು
ಕಣ್ಣಿದ್ದರು ತಾ ಕುರುಡನಂತೆ ಆಗುವೆ ನೀ ಹಾಳು
ಪಂಪ ರನ್ನ ರಾಘವಾಂಕರ ಕಾವ್ಯದ ಸಿರಿ ಇಲ್ಲಿ
ಪೊನ್ನ ಜನ್ನ ಕುಮಾರವ್ಯಾಸರ ಹಿರಿಮೆಯ ಸೆಲೆಯಿಲ್ಲಿ
ಬೇಂದ್ರೆ ಮಾಸ್ತಿ ಕುವೆಂಪುರವರ ಕೃಷಿಯ ನೋಡಿಲ್ಲಿ
ಡಿ.ವಿ.ಜಿ.ಯ ಮಂಕುತಿಮ್ಮನ ಕಗ್ಗ ಕೇಳಿಲ್ಲ
ಪಟ್ಟದಕಲ್ಲು ಬೇಲೂರುಗಳ ವೈಭವ ನೋಡಿಲ್ಲಿ
ವಿಜಯನಗರ ವರ ಹಳೆಬೀಡುಗಳ ಕತೆಯ ಹಾಡಿಲ್ಲಿ
ಶ್ರವಣ ಬೆಳ್ಗೊಳ ಬೆಳವಲ ನಾಡಿನ ಚರಿತ್ರೆ ಕೇಳಿಲ್ಲಿ
ಎಲ್ಲಾ ಕೇಳಿ ಎಲ್ಲಾ ಮರೆತು ಮಾನವನಾಗಿಲ್ಲಿ
ವಿಷ್ಣುವರ್ಧನ ಪುಲಿಕೇಶಿಯರ ಪ್ರತಾಪ ಕೇಳಿಲ್ಲ
ವೀರ ವನಿತೆ ಚೆನ್ನಮ್ಮನ ಬಲು ಪ್ರೌಢಿಮೆ ಹಾಡಿಲ್ಲಿ
ನಾಟ್ಯ ವಿಶಾರದೆ ಶಾಂತಲೆಯ ಗೆಜ್ಜೆಯ ನದಿಯಲ್ಲಿ
ಸ್ವಾಭಿಮಾನದ ಕೆಚ್ಚೆದೆ ನೋಡಲು ಕೂಡಲೆ ಬಾ ಇಲ್ಲಿ
ತುಂಗಾಭದ್ರೆ ಕಾವೇರಿಯ ಹೊಳೆ ಜುಳು ಜುಳು ರವದಲ್ಲಿ
ಹರಿಯುತ ಕಂಡಿದೆ ಕನ್ನಡತಿಯ ಚೆಲುವಿನ ಕೊರಳಲ್ಲಿ
ಸಹ್ಯಾದ್ರಿಯ ನೆಲೆ ಮಲೆನಾಡಿನ ಮಲೆ ಮಕುಟಶ್ರಿಯಾಗಿ
ಭುವನೇಶ್ವರಿಯ ಮುಡಿಯನ್ನೇರಿ ಬೆಳಗಿದೆ ನೋಡಿಲ್ಲಿ
*****