(ಒಂದು ಪ್ರಗಾಥ)
ಹೃದಯ ಕಂಪಿಸುತಿಹುದು ಆನಂದ ದೂರ್ಮಿಯಲಿ
ತುಂಬಿ ಮೈಮನವನ್ನು ಬಂಧಿಸಿಹುದು
ಇಹುದೆ ಇಂತಹ ಚೆಲುವು ಲೋಕದಲಿ ನಾಕದಲಿ
ನಿನ್ನವೊಲು, ಶ್ಯಾಮಲೆಯೆ, ಮಾಗಿದೊಲವು
ಹರಣಗಳ ನಯನದಲಿ ಅರಳಿಸುತ ನೋಡುವೆನು.
ಕಡಲನ್ನೆ ಕುಡಿಯುವೊಲು ದಿಟ್ಟಿಸುವೆನು.
ಹಗಲಿರುಳು ತೆರೆ ಸರಿಸಿ ಬಂದೆ ಮಂಥರೆ, ಮಧುರೆ
ನಿಮಿಷಾರ್ಧವೇ ನಿಂತು ನಡುವೆ ಮರೆಗೆ
ಆದರೆಲ್ಲೆಡೆ ನೀನು ಮಂತ್ರ ಮೌಕ್ತಿಕ ಜಲವ
ತೂರುತಿರೆ ದೇಶ ದಿಶೆ ಹೂ ಹಾಸಿಗೆ.
ಜರೆಯ ಮರೆಯಿತು ಗಿರಿಯು ಹೆರೆಯತಳೆದಿತು ತಿರೆಯು
ನನ್ನ ಕರಳೂ ಅರಳ ಗಮಗಮಿಸಿತು.
ಸ್ವರ್ಗಲೋಕದ ಮಾರ್ಗ ದುರ್ಗಮವೆ ಈ ಕ್ಷಣದಿ
ನಾಕವೇ ನಗುತಿರಲು ನಿನ್ನುಡಿಯಲಿ
ಚೆಲುವಿನಾ ಬಲೆಯಾಗಿ ಒಲವಿನಾ ಸೆಲೆಯಾಗಿ
ಮುಣ್ಣಿಗೂ ಬಣ್ಣನೆಯ ಲೀಲೆ ದೋರೆ
ನೆಲದಿ ನೆಲೆಯಾಗಿರುವ ನನ್ನ ನನ್ನಿಗಳೆಲ್ಲ
ನಿನ್ನ ತೇಜೋರಥದಿ ಸಾಗುತಿಹವು.
ಬಲ್ಲೆಯಾ ನನ್ನೆದೆಯ ಏಕತಾರಿಯ ಮೇಲೆ
ಅಸೆಮಿಡಿಯುವ ಭಗ್ನಗೀತಗಳನು
ಮನದ ಮಂಗಲವನ್ನು ಮೃತಿಗೊಳಿಸಿ ಜೀವನದ
ಹಸಿವೆಯನೆ ಬತ್ತಿಸುವ ರಾಗಗಳನು.
ಚೆಲುವಾಗಿ ಚಣವರಳಿ ಅಳಿದ ನನ್ನೊಲವಿನಲಿ
ನೆನಹು ನೋವಿಗೆ ನೀರನುಣಿಸುತಿಹುದು.
ಬಾನ್ನೆಲದ ಬೇಟಕ್ಕೆ ಬೆಳೆದ ಸಂಧ್ಯಾ ಕುವರಿ
ದಿನದಗ್ನಿತಪ ಹೂತ ಪುಣ್ಯ ನೀನು
ನೋವು ನನೆಕೊನೆಯೇರಿ ನಲಿವಾಯಿತೆನ್ನುವೊಲು
ಬಾಂಬಸಿರ ಕಿಚ್ಚಿ ನಿಂದೆದ್ದೆ ನೀನು.
ಪಡುವಣದ ಮಡುವಿನಲಿ ನೂರೆಸಳನೈದಿಲೆಯು
ಅರಳಿದೊಲು ಹರಿಸಿರುವೆ ಕಾಂತಿಯನ್ನು
ಸಾಂಧ್ಯ ಸುಂದರಿ ನಿನ್ನ ಸೊಬಗಿನಾರಾಧನೆಗೆ
ನನ್ನ ಮನವೇ ಬಾಗಿ ನಿಂತಿರುವುದು
ಕೋಟಲೆಯ ಕದಡನ್ನು ತಿಳಿದು ಪಾವನವಾಗಿ
ಆತುರದಿ ಕಲ್ಯಾಣ ಬಯಸುತಿಹುದು.
ಸೋತೆದೆಯ ಸರಸಿಯಲಿ ಅರಳಿರುವುದರವಿಂದ
ಶಾಂತಿಯಲಿ ತೋಷವನು ತಳೆದಿರುವುದು.
ಮರೆಯಾದೆಯಾ ದೇವಿ! ಮನವು ಮುಕುಲಿತವಾಯ್ತು
ತಿರೆಯು ಕಣ್ಣಿಂಗಿದೊಲು ಮುಗ್ಗುರಿಸಿತ್ತು.
ಆದರೂ ನಿಮಿಷದಲಿ ಜೀವನವನರಳಿಸಿದ
ನಿನ್ನ ಪ್ರೀತಿಯ ರೀತಿ ಅನೃತವೆಂತು?
ವಿಲಯ ತಾಳಲಯಕ್ಕೆ ಕುಣಿವ ಬಾಳಿನ ಕತೆಗೆ
ಅಮೃತ ಗತದ ರಸವು ತುಂಬಿಬಂತು.
*****


















