ಅಹಾ! ನಿನ್ನ ಮೀಸಲು ಮುರಿಯದ ನಗೆಯೆ
ಸೂಸಲವಾಗಿಹ ನಗೆಯೆ!
ಅಂತರಗಂಗೆಯರಿಯದ ಗಂಗೆ-ನಿನ್ನ ನಗೆ.
ಅದೆ ನಿದ್ದೆಯಿಂದೆಚ್ಚತ್ತಾಗಿನ
ಇನ್ನೂ ಅರಳದಿದ್ದ ನಿನ್ನ ನಗೆಯು
ಏಳನೇಸರಿನ ಹೊಂಬಿಸಿಲ ಕಂದಿಸಿತು.
ನೀನು ಅಳುತಿರುವಾಗಲೆ
ತಲೆದೋರುವ ಮುಗುಳುನಗೆಯು
ಮಳೆಗಾಲ ಸಂಜೆಯ ಹೂಬಿಸಿಲ ಬಾಡಿಸಿತು.
ಮೆಚ್ಚು ಮಾಡಿ ಮೈಮರೆಯಿಸುವ
ನಿನ್ನ ಹುಚ್ಚುನಗೆಯು
ಮಾಗಿಯಿರುಳ ಬೆಳದಿಂಗಳ ಮರೆಯಿಸಿತು.
ನನ್ನ ಕಂಡು ಕುಣಿಕುಣಿದು
ಕೆಲೆಕೆಲೆವ ನಿನ್ನ ಅಟ್ಟಹಾಸವು
ಗಗನಕ್ಕೇರಿ ಗಲ್ಲಿಸಿ ತಾರೆಗಳನ್ನು ತುಳುಕಾಡಿಸಿತು.
ಆಹಾ! ವಾತ್ಸಲ್ಯದ ಮಸ್ತಕಮಣಿಯಾದ ನಗೆಯೆ!
ವ್ಯಸ್ತವ ಕರಗಿಸುವ ನಗೆಯೆ!
ಅಸ್ತವನರಿಯದ ಬೆಳ್ಳಿ-ನಿನ್ನ ನಗೆ.
*****

















