ನಾನಿನ್ನೂ ಪಡ್ಡೆ ಹುಡುಗನಾಗಿದ್ದಾಗ ಅನುಭವಿಸಿದ ಕಥೆ ಇದು. ರೋಮಾಂಚನವೆಸಿದರೂ ಸತ್ಯತೆಯ ಕವಚವನ್ನಂತೂ ಹೊಂದಿದೆ. ನಮ್ಮಾವ ಅಂದರೆ ನಮ್ಮಕ್ಕನ ಗಂಡ ಮದುವೆಯಾದ ಹೊಸತರಲ್ಲಿ ಮುನಿಸಿಕೊಂಡು ಊರು ಬಿಟ್ಟು ಹೋಗಿದ್ದ. ಎಲ್ಲಾ ಕಡೆ ಹುಡುಕಿದರೂ ಸಿಗಲಿಲ್ಲ. ಕೊನೆಗೊಂದಿನ ಬಾಂಬೆಯಿಂದ ಬಂದ ವ್ಯಕ್ತಿಯೊಬ್ಬರು ಅಲ್ಲಿ ಒಂದು ಫ್ಯಾಕ್ಟರಿಯಲ್ಲಿ ನಿಮ್ಮಾವ ಕೆಲ್ಸ ಮಾಡ್ತಿದ್ದಾನೆ ಅಂದ್ರು. ಹೇಗಾದ್ರೂ ಮಾಡಿ ಅವರ ಸಂಸಾರ ಸರಿ ಮಾಡೋ ಜವಾಬ್ದಾರಿ ನನ್ ತಲೆ ಮೇಲಿತ್ತು. ಆಗತಾನೆ ನಾನು ಎಸ್‌ಎಸ್‌ಎಲ್‍ಸಿ ಪಾಸ್ ಮಾಡಿದ್ದೆ. ಅಲ್ಲಿಯವರಿಗೆ
ನಮ್ಮ ಬೀದೀಲಿ ಅಷ್ಟು ಓದಿದವ್ನೆ ನಾನಾಗಿದ್ದೆ. ಹೀಗಾಗಿ ಬಹಳ ಡಿಮ್ಯಾಂಡ್ನಲ್ಲಿದ್ದೆ. ಆಗಲೇ ಸ್ವಲ್ಪ ಶಹರು ಹೊಸ ಹೊಸ ಮಾತುಕತೆಗಳತ್ತ ಬುದ್ದಿ ವಾಲ್ತಾ ಇತ್ತು. ಹೀಗಾಗಿ ನನ್ನನ್ನೇ ನಮ್ಮಮ್ಮ ಬಾಂಬೆಗೆ ಕಳಿಸಿದ್ರು.

ಅಂತೂ ಒಂದು ಹಗಲು, ಒಂದು ರಾತ್ರಿ ಕಳೆಯುತ್ತಲೇ ಬಾಂಬೆಯ ‘ಬೋರಿ ಬಂದರ್’ ಸ್ಟೇಷನ್ ಬಂತು. ವಿಳಾಸವನ್ನು ಹಿಡಿದು ಕೆಳಗಿಳಿದೆ. ಅಲ್ಲಿ ಬರಿ ಹಿಂದಿ ಮಾತನಾಡುವ ಜನ. ಹಿಂದಿ ಎಂದರೆ ಮೇರಾ ನಾಮ್ ಕ್ಯಾ, ತೇರಾ ನಾಮ್ ಕ್ಯಾ ಎನ್ನುವಷ್ಟರಲ್ಲಿಯೇ ತಿಣುಕಾಡುತ್ತಿದ್ದೆ. ಸನ್ನೆ ಮತ್ತು ಒಂದೊಂದು ಶಬ್ದಗಳ ಸಹಾಯದಿಂದ ತಡವರಿಸುತ್ತಾ ಅಡ್ರಸ್ ತೋರಿಸುತ್ತ ಆಟೋ ಮೂಲಕ ನಮ್ಮಾವ ಕೆಲಸ ಮಾಡೋ ಫ್ಯಾಕ್ಟರಿ ತಲುಪಿದೆ. ಫ್ಯಾಕ್ಟರಿಯಲ್ಲಿ ಉತ್ತರ ಕರ್ನಾಟಕದ ಜನಾನೆ ಹೆಚ್ಚಾಗಿದ್ದದ್ರಿಂದ ನನ್ನ ಮುಖ (ಕಚ್ಚೆಪಂಚೆ) ಜುಬ್ಬ, ಟೋಪಿ, ಭಾಷೆಗಳಿಂದ ನನ್ನನ್ನು ಕರ್ನಾಟಕ ಅದರಲ್ಲೂ ಬಿಜಾಪುರ ಜಿಲ್ಲೆಯನೆಂದು ಪತ್ತೆಹಚ್ಚಿದರು. (ತಮಾಷೆ ಎಂದರೆ ಕಾಲೇಜಿನಲ್ಲಿಯೂ ನಾನು ಜುಬ್ಬಾ, ಪಂಚೆ, ಟೋಪಿಗಳನ್ನು ಹಾಕುತ್ತಿದ್ದೆ. ಅದು ಅಂದು ಅಲ್ಲಿಯ ಗೌರವಾನ್ವಿತ ಉಡುಪಾಗಿತ್ತು). ನನ್ನನ್ನು ಕನ್ನಡದಲ್ಲೇ ‘ನೀ ಯಾವೂರಾಂವ್ ತಮ್ಮಾ?’ ಎಂದು ಕೇಳಿದ ಜನಕ್ಕೆ ನನ್ನ ಹಕ್ಕಿ ಕಥೆಯನ್ನು ವಿವರಿಸುತ್ತಿದ್ದೆ. ಅವ್ರು ನಮ್ಮ ಜಿಲ್ಲೆಯ ಹುಡುಗನೆ ಎಂದು ಊಟ ಮಾಡಿಸಿ, ಮತ್ತೊಂದು ವಿಳಾಸ ಕೊಟ್ಟು ಹೇಳಿದ್ರು ‘ನೋಡು ತಮ್ಮ ನಿಮ್ಮಾವ ಈ ವಿಳಾಸದ ಜಾಗಕ್ಕೆ ಹೋದ್ರೆ ಸಿಗ್ತಾನೆ. ನಾವು ಅಲ್ಲಿಗೆ ಬರಂಗಿಲ್ಲ. ನೀನು ಹೋಗಿ ಬಾ’ ಅಂದ್ರೂ. ಅಲ್ಲಿಯವರೆಗೆ ನಿಜವಾದ ಬಾಂಬೆಯ ವಿರಾಟ ಸ್ವರೂಪವನ್ನೇ ನೋಡಿರಲಿಲ್ಲ. ಗಗನ ಮಹಲುಗಳು, ಲಂಗ, ಲುಂಗಿ ಅಂಗಿಯಲ್ಲೇ ಸಪ್ತವರ್ಣಗಳಲ್ಲಿ ತಿರುಗುವ ಹುಡುಗರೆಂದು ಭ್ರಮಿಸುವ ಹುಡುಗಿಯರು. ಹುಡುಗಿಯರಂತಹ ರೀತಿ-ರಿವಾಜಿನ ಹುಡುಗರು. ಮೂಲಂಗಿ ಪ್ಯಾಂಟು ಹ್ಯಾಟು, ಜಟಕಾ-ಬಸ್ಸು, ಬಸ್ಸು-ಬೈಕು, ಕಾರು-ರೈಲುಗಳಲ್ಲಿ ಪ್ರವಾಹದಂತೆ ಜನ ಉಕ್ಕಿ ಹರಿಯುತ್ತಿದ್ದರು. ವಿದ್ಯುತ್ ಬೆಳಕಿನಲ್ಲಿ ಮೈ ಝುಂಗುಡುವ ಸಂಗೀತ! ಫ್ಯಾಷನ್ ಪ್ರಪಂಚದಲ್ಲಿ ಲೋಲಾಡುವ, ತೇಲಾಡುವ ಕೆಂಪು, ಕಪ್ಪು, ಬಿಳಿ ಮೂತಿಗಳ ಜನ! ಈ ಜಂಜಾಟದ ಭಯಂಕರ ಬಾಂಬೆ ನೋಡಿದ ನನಗೆ ವಿಶ್ವವೇ ದರ್ಶನವಾದಂತಾಯ್ತು. ಆಗಲೇ ಪರಕೀಯನಂತೆ, ಹುಚ್ಚನಂತೆ, ನನ್ನನ್ನು ಯಾವುದೋ ಭಯ ಆವರಿಸಿತು. ಆಗಲೇ ಊರು ಬಿಟ್ಟು ೨-೩ ದಿನಗಳಾದ್ದರಿಂದ ಸರಿಯಾಗಿ ಊಟವಿಲ್ಲದೇ ವಿಶ್ರಾಂತಿ ಇಲ್ಲದೆ, ಜೋಲು ಮುಖವಾಗಿ, ಬಟ್ಟೆ ಕೊಳಕಾಗಿ, ಡಲ್ಲಾಗಿ ಮಾವನ ಹುಡುಕಾಟದಲ್ಲಿ ನಿಜವಾದ ಹುಚ್ಚನೇ ಆಗಿದ್ದೆ. ಅಲ್ಲಿಯ ಮೇಲ್ವರ್ಗದ ಜನಕ್ಕೆ ನನ್ನ ಡ್ರೆಸ್ಸು, ಮುಖ, ನಡಿಗೆ, ವರಸೆ ನೋಡಿ ನಾನು ಹುಚ್ಚನಂತೆ ಕಂಡಿರಬೇಕು.

ನಾನು ಆಟೋದವರಿಗೆ ವಿಳಾಸ ತೋರಿಸುತ್ತಲಿದ್ದೆ. ಕೆಲವರಂತೂ ನನ್ನನ್ನು ಬೆಗ್ಗರ್ ಎಂದೇ ತೀರ್ಮಾನಿಸಿ ‘ಅರೆ ಜವರೇ ಜಂಗಲ್ ಮ್ಯಾನ್’ ಎಂದು ನೂಕಿ ಮುಂದೆ ನಡೆಯುತ್ತಿದ್ದರೆ. ಈಗ ನಾನು ಇಲ್ಲಿ ನಿಜವಾದ ಬೆಗ್ಗರ್ ಆಗಿ ಸಾಯೋದು ಗ್ಯಾರಂಟಿ ಎಂದು ತೀರ್ಮಾನಿಸಿದೆ. ಅಂತೂ ಒಂದು ಮುರುಕಲು ಟಾಂಗ ಕಂಡಿತು. ಒಬ್ಬ ಮುದುಕ ಮೂಳೆ ಚಕ್ಕಳವಾದ ಕುದುರೆಯನ್ನು ಟಾಂಗಕ್ಕೆ ಕಟ್ಟಿದ್ದ. ಕೊನೆಗೆ ಇಂಥವ್ರಾದ್ರೂ ಸರಿಯಾಗಿ ವಿಳಾಸದ ಸ್ಥಳಕ್ಕೆ ಕರೆದೊಯ್ಯಬಹುದೆಂದು ನಿರೀಕ್ಷಿಸಿ ವಿಳಾಸ ತೋರಿಸಿದೆ. ಮುದುಕ ನನ್ನನ್ನೊಮ್ಮೆ ದಿಟ್ಟಿಸಿ ನೋಡಿ ‘ಇಲ್ಲಿಗ್ಯಾಕೆ ಬಂದೆ ತಮ್ಮ?’ ಎಂದು ಕನ್ನಡದಲ್ಲಿ ಪ್ರಶ್ನಿಸಿದ. ನನಗೆ ಮರುಭೂಮಿಯಲ್ಲಿ ನೀರು ಸಿಕ್ಕಂತಾಯಿತು. ನನ್ನ ಉದೇಶವನ್ನೆಲ್ಲಾ ವಿವರಿಸಿದೆ. ಆತ ಬೆಳಗಾವಿ ಜಿಲೆಯವನೆಂದು ತಿಳಿಯಿತು. ನನ್ನಿಂದ ಮೂರು ರೂಪಾಯಿ ಪಡೆದು ಟಾಂಗದಲ್ಲಿ ‘ಬೈಟೋ ತಮ್ಮಾ’ ಎಂದ. ಟಾಂಗದಲ್ಲಿ ಕೂತೆ. ಅನೇಕ ತಿರುವು ರಸ್ತೆಗಳನ್ನು ದಾಟಿ ವೃತ್ತಗಳನ್ನು ಬಳಸಿ ಕೊನೆಗೆ ಗಲ್ಲಿಯೊಂದರ ಮುಂದೆ ಬಂದು ನಿಂತಿತು. ಅಲ್ಲಿ ಕನ್ನಡಿಗ ಮುದುಕ ನನ್ನನ್ನು ಇಳಿಸಿ ‘ಇದೇ ಜಾಗ ಮುಂದಕ್ಕೆ ಹೋಗಿ ವಿಳಾಸ ತೋರ್ಸು, ಮನೆ ತೋರಿಸುತ್ತಾರೆ’ ಎಂದು ಜಾಗ ಖಾಲಿ ಮಾಡಿದ.

ಅವನ ಅಗಲುವಿಕೆ ನನಗೆ ನಿರಾಸೆ ತಂದರೂ ನನ್ನ ಗುರಿ ಮುಟ್ಟಬೇಕಾದ್ದರಿಂದ ವಿಳಾಸವನ್ನು ಅಂಗೈಯಲ್ಲಿಟ್ಟುಕೊಂಡು ಮುಂದೆ ಮುಂದೆ ನಡೆದೆ. ಉದ್ದನೆಯ ಗಲ್ಲಿ, ೨-೨ ಅಂತಸ್ತಿನ ರಂಗಾದ ಮಹಡಿಗಳು ಎದುರಾದವು. ಗ್ಲಾಸಿನಲ್ಲಿ ಬೆತ್ತಲೆ ಚಿತ್ರಗಳು, ನಿಮಿಷಕ್ಕೊಂದುಬಾರಿ ಅರೆ ಬೆತ್ತಲೆ ಹುಡುಗಿಯರ ದರ್ಶನ! ವಯಸ್ಸಾಗಿದ್ದರೂ ತಮ್ಮ ಸುಕ್ಕುಗಟ್ಟಿದ ಗಲ್ಲಗಳಿಗೆ ಸ್ನೋ ಪೌಡರ್ ಮೆತ್ತಿದ್ದ ಹೆಣ್ಣುಗಳು! ಅದೇ ಪ್ರಾಯಕ್ಕೆ ಕಾಲಿಡುತ್ತಿರುವ ಪೋರಿಯರು. ಎಲ್ಲರದೂ ಒಂದೇ ಗುರಿ. ಒಂದೇ ದೃಷ್ಟಿ! ಅವರ ಒನಪು ವೈಯ್ಯಾರ, ಮೋಡಿಗಳಿಗೆ ಎಂತಹ ನರಸತ್ತವನೂ ಕುಣಿಯಬಹುದು. ಇದೆಲ್ಲವನ್ನೂ ನೋಡಿದ ನನಗೆ ಗಾಭರಿಯಾಯ್ತು. ನಾನು ಭೂಲೋಕದಲ್ಲಿದ್ದೇನೋ ಅಥವಾ ಇಂದ್ರಲೋಕದಲ್ಲಿದ್ದೀನೋ ಎಂದು ಅನುಮಾನ ಬಂದಿತ್ತು. ದಿನನಿತ್ಯ ತಲೆ ತುಂಬ ಸೆರಗು ಹೊದ್ದು, ನೆಲ ಸವರಿದಂತೆ ಸೀರೆಯುಟ್ಟ ಹೆಣ್ಣುಗಳನ್ನೇ ನಮ್ಮಲ್ಲಿ ನೋಡಿದ್ದ ನನಗೆ ಇದು ಮೊಡಿಯೋ, ಮಾಯೆಯೋ ಅನ್ನಿಸಿತು. ಒಂದಿನ ಒಬ್ಬ ಕಚ್ಚೆ ಹರುಕ ಸ್ನೇಹಿತ ಹೇಳಿದ ಮಾತು ಜ್ಞಾಪಕಕ್ಕೆ ಬಂತು. ಕೆಂಪು ದೀಪದಲ್ಲಿಯ ಸಂತೆಯಲ್ಲಿ ಕೊಡು ಕೊಳ್ಳುವ ವ್ಯವಾಹಾರದ ಸ್ಥಳವೇ ಇದೆಂದು ಖಚಿತವಾಗಿ ತಿಳಿದು ನನ್ನ ದಿಕ್ಕೇ ತಪ್ಪೋಗಿ ಆಪತ್ತು ಬಂದೀತಲ್ಲಪ್ಪಾ? ಎಂದು ಹೆದರಿದೆ. ಆಗಲೇ ನನ್ನನ್ನು
ನೋಡುತ್ತಿದ್ದ ಲಲನಾಂಗೆಯರು ‘ಆವೋ ಭಯ್ಯ ಆವೋ ರಾಜಾ ಅಚ್ಚಮಾಲ್ ಹೈ ಅಚ್ಚ ಚೀಜ್ ಹೈ’ ಎಂದು ತೊನೆಯುತ್ತ ಸೆರಗು ಬಿಸಿ ಒತ್ತರಿಸಿಕೊಂಡು ಹೋಗಲಾರಂಭಿಸಿದರು. ನನ್ನನ್ನು ಪೂರ್ತಿಯಾಗಿ ಅವರು ಹಳ್ಳಿಗಮಾರ್, ಗಿರಾಕಿ, ಚೆನ್ನಾಗಿ ಹಿಂಡಬೇಕೆಂದು ತೀರ್ಮಾನಿಸಿದರು.

ಒಮ್ಮೊಮ್ಮೆ ಇವರ ಮಾದಕ ನೋಟ, ವೈಯಾರ, ಸೌಂದರ್ಯ ನೋಡಿ ವಯಸ್ಸಿಗೆ ಸಹಜವಾಗಿ ರೋಮಾಂಚನಗೊಂಡೆ. ಅವರು ನನ್ನನ್ನು ಮಾಯಾ ಲೋಕಕ್ಕೆ ಕುದುರೆ ಮೇಲೆ ಕರ್‍ಕೋಂಡು ಹೋಗ್ತಿದ್ದಾರೆ, ಎಂದು ಕನಸುಕಂಡೆ. ಉದ್ರೇಕಗೊಂಡೆ, ತಕ್ಷಣ ‘ಮಂಗ ನನ್ ಮಗನೆ ನೀ ಇಲೇಗ್ಯಾಕ ಬಂದಿ? ಉದ್ದೇಶ ಏನು? ಎಂದು ಯಾರೋ ಚಪ್ಪಲಿ ತಗೊಂಡು ಬೆನ್ನ ಮೇಲೆ ಬಾರಿಸಿದಂತಾಯ್ತು. ವಾಸ್ತವ ಲೋಕಕ್ಕೆ ಬಂದು ನನ್ನನ್ನು ನಾನೇ ಶಪಿಸಿಕೊಂಡೆ. ಮತ್ತೆ ಸನ್ಯಾಸಿನಿಯಂತೆ ಮುಂದೆ ಸಾಗಿದೆ. ಮತ್ತದೇ ಗೋಳು ಪ್ರಾರಂಭವಾಯಿತು. ಮತ್ತೆ ಮೈದಾನದವರ ಕಂಡಾಪಟ್ಟೆ ಸ್ವಾಗತಗಳು ಪ್ರಾರಂಭವಾದವು. ಸ್ವಾಗತಕ್ಕಿಂತ ಬಲಾತ್ಕಾರವೆಂದರೆ ಅಡ್ಡಿ ಇಲ್ಲ. ಒಂದು ಕಡೆ ಮಾವನ ಚಿಂತೆ, ಮತ್ತೊಂದು ಕಡೆ ಈ ಪಾತರದವರ ಕಾಟ! ಇನ್ನೊಂದು ಕಡೆ ನಾನು ಮೋಸ ಹೋದೆನೆಂಬ ಭಯಗಳು! ನನ್ನನ್ನು ಅಪ್ಪಳಿಸುತ್ತಲೇ ಇದ್ದವು. ಅಳು ಬಂತು. ಮುಸಿ ಮುಸಿ ಅತ್ತುಬಿಟ್ಟೆ. ಅಷ್ಟರಲ್ಲಿ ಆ ಕಾಲ್ ಗರ್‍ಲ್‍ಗಳು ಕಣ್ಣು ಮಿಟಕಾಯಿಸಿ ಬರಸೆಳೆದು ಹೋದ ಒಂದು ಮನೆಯೊಳಗಿನಿಂದ ಒಬ್ಬ ನಡು ವಯಸ್ಸಿನ ಹೆಂಗಸು ನನ್ನ ಹತ್ತಿರ ಬಂದಳು. ಬಲಾಢ್ಯ ವ್ಯಕ್ತಿತ್ವ ಹೆಪ್ಪುಗಟ್ಟಿದ ರೂಪ, ಯೌವನ ಬಾಡಿದ್ದರೂ ಕೃತ್ರಿಮತೆ ಸೊಗಡಿನಿಂದಾಗಿ ಚಂದುಳ್ಳಿಯಂತಿದ್ದಳು. ಆಕೆ ಬರುವುದನ್ನು ಕಂಡ ನಾನು ಈಕೆ ಈ ಸಲ ನನ್ನನ್ನು ಅನಾಮತ್ತಾಗಿ ಎತ್ತಿಕೊಂಡು ಹೋಗಬಹುದೆಂದು ಭೀತಿಗೊಂಡೆ. ಹತ್ತಿರ ಬಂದವಳೆ ಅನುಕಂಪದ ಧ್ವನಿಯಲ್ಲಿ ‘ಯಾವೂರು ತಮ್ಮ ನಿಂದೂ?’ ಎಂದು ಕನ್ನಡದಲ್ಲೇ ಕೇಳಿದಳು. ಕೊನೆಗೂ ಇಲ್ಲೊಬ್ಬಳು ಕನ್ನಡತಿ ಸಿಕ್ಕಳು ಎಂದು ಖುಷಿಗೊಂಡೆ. ಅವಳ ಮುಖ ನೋಡಿದಾಗ ಎತ್ತಿಕೊಂಡು ಹೋಗಲಾರಳೆಂದೆನಿಸಿ, ನನ್ನ ವೃತ್ತಾಂತವನ್ನೆಲ್ಲಾ ಸಾರಿದೆ. ಆಗ ಆಕೆ ‘ಹೌದೇನೋ ತಮ್ಮ ಬಾಹಂಗಾರ ಮನೆಯೊಳಗ’ ಎಂದಳು. ಹಿಂಬಾಲಿಸಿದೆ. ಪಲ್ಲಂಗಿನ ಮೇಲೆ ಕೂಡ್ರಿಸಿದಳು. ತಿಂಡಿ ತರ್‍ಸಿಕೊಟ್ಟು ‘ನೋಡು ತಮ್ಮಾ ನಿಮ್ಮಾವ ನಿನ್ನೆ ನಮ್ಮ ಹಂತ್ಯಾಕನೇ ಇದ್ದ. ಊರಿಗೆ ಹೋಗಿ ಬರ್‍ತೀನಿ ಅಂತ ಹೋದವನು ಇನ್ನೂ ಬಂದಿಲ್ಲ’ ಎಂದು ಜಮಖಾನ ಹಾಸಿ ಗಲ್ಲಿಯ ಪಕ್ಕದಲ್ಲಿ ಕೂಡ್ರಿಸಿದಳು. ಹೌದು ಆಕೆ ಗರವಾಲಿ ಆಗಿದ್ದಳು. ಅವಳ ಕೈ ಕೆಳಗೆ ಹತ್ತಾರು ಜನ ಸೀನಿಯರ್, ಜೂನಿಯರ್, ಪಾತರದವರಿದ್ದರು. ಆಕ್ಷಣದಲ್ಲಿ ೪-೫ ಸುಂದರ ತರಾವರಿ ಹುಡುಗಿಯರು ನನ್ನೆದುರಿಗೆ ತುಟಿ ಕಚ್ಚುತ್ತಾ, ಕಣ್ಣು ಮಿಟಕಾಯಿಸುತ್ತ, ಸೆರಗು ಜಾರಿಸುತ್ತ, ಆಹ್ವಾನಕ್ಕೆ ನಿಂತರು. ಕೂಡಲೇ ಒಡತಿ ‘ಏಯ್ ಇವ್ನು ಗಿರಾಕಿ ಅಲ್ಲ ನಮ್ಮ ಸಂಬಂಧಿಕ ಹುಡುಗ ಹೊಗ್ರೆ…’
ಎಂದು ಗದರಿಸಿದಳು. ಅವರು ಬಂದ ದಾರಿಗೆ ಸುಂಕವಿಲ್ಲವೆಂಬಂತೆ ಹೋದರು.

ಇದೆಲ್ಲಾ ನೋಡಿ ನನಗೆ ಮರುಭೂಮಿಯಲ್ಲಿಯೂ ಸಹ ತಿಳಿನೀರು ಇರುತಲ್ಲಾ ಎಂದು ಮನಸ್ಸಿನಲ್ಲಿಯೇ ಉದ್ಗರಿಸಿಕೊಂಡೆ. ಗರವಾಲಿ ನನ್ನ ದಯನೀಯ ಸ್ಥಿತಿಯನ್ನು ಕಂಡು ಅದೇನನ್ನಿಸಿತೋ, ನನಗೆ ಜಳಕ ಮಾಡಿಸಿ, ನನ್ನನ್ನು ತಮ್ಮಂತೆ ನೋಡಿಕೊಂಡು ಮಾನವೀಯತೆಯಿಂದ ಕಾಪಾಡಿ ಮರುದಿನ ನನ್ನ ಕೈಗೆ ೫೦ ರೂಪಾಯಿ ಇಟ್ಟು ಬೀಳ್ಕೊಟ್ಟಳು. ಕಟುಕರ ಮನೆಗೆ ಹೋದ ಕುರಿ ಕಟುಕನ ಔದಾರ್ಯದಿಂದ ಜೀವ ಪಡೆದಂತಾಯ್ತು. ಕೆಂಪು ದೀಪದಲ್ಲಿ ಹಣಕ್ಕೋಸ್ಕರ ಮೈದಾನ ಮಾಡುವ ಹೆಣ್ಣುಗಳಲ್ಲಿಯೂ ಒಮ್ಮೊಮ್ಮೆ ಸಾತ್ವಿಕ ಗಣಗಳಿರುತ್ತವೆ, ಎಂದು  ಖಚಿತಪಡಿಸಿಕೊಂಡೆ. ಹಣ, ರಕ್ತವನೇ ಹೀರುತ್ತಿರುವ ಇಂದಿನ ಭವ ವ್ಯವಸ್ಥೆಯಲ್ಲಿ ಇಂತಹ ಸಾತ್ವಿಕ ಗುಣದ ಸೂಳೆಯರು ಲಾಕೋ ಮೆ ಏಕ್ ಎಂದರೆ ತಪ್ಪಿಲ್ಲ ಅಲ್ಲವೇ? ಎಂದುಕೊಳ್ಳುತ್ತ ಊರಿನೆಡೆಗೆ ಮರಳಿದೆ.
*****

ಅನುಭವಗಳು ಆನಂದವಾಗಿದ್ದರೆ,
ಸ್ವರ್ಗಿಯ ಸ್ಪರ್ಶವಾಗುತ್ತವೆ.
ಕಹಿಯಾಗಿದ್ದರೆ,
ಕಡಲಿನ ಒಡಲಲ್ಲಿಯ
ಬೆಂಕಿಯಂತಾಗುತ್ತವೆ.