ಕೆಂಪು ಉಡುಪಿನ ಚೆಲುವೆಯ
ಕುಡಿ ನೋಟದ ಗಾಳಕೆ ಸಿಲುಕದವರಾರು?
ಈ ಬೇರಿಗೆ ಕೆಂಪಂಚಿನ ಸೀರೆ
ಸರೆಗು ಸೋಕಿದರು ಸಾಕು ಕೊನರುವುದು

ಕೆಂಪು ಅಧರಲಿ ನಗೆ ಮಿಂಚಿದರೆ
ಮಲೆನಾಡಿನ ಚಳಿಯಲ್ಲೂ
ಮೈ ಬಿಸಿಯೇರತೊಡಗುವುದು

ಮನಕ್ಕೊಪ್ಪುವ ರಕ್ತವರ್ಣದ ಧಿರಿಸು
ಧರಿಸಿದ ಅಂದಗಾತಿ ಕಂಡರೆ ಬೋಲ್ಡ್
ಪರ್ಸನಲ್ಲಿದ್ದ ಧನ ಕನಕಾದಿಗಳೆಲ್ಲ
ನೀರೆಯ ಮೇಲೆ ನೀರಿನಂತೆ ಸುರಿಯಲಾರನೇ

ಕೆಂಪೆಂದರೆ ರಕ್ತ, ರಕ್ತವೆಂದರೆ ಅಪಾಯ
ಕೆಂಪು ಅಪಾಯ ಹೆಣ್ಣು ಅಪಾಯ
ಅಪಾಯ ಗುಣಿಸು ಅಪಾಯ ಆಗ್ಬಿಟ್ಟರೆ

ಬೆಂಕಿ ಚಂಡು
ಮುಟ್ಟ ಹೋದರೆ ಸುಡದಿದ್ದೀತೆ
ಕೆಂಪೇ ಹಾಗೆ ಕಂಪಿಸದಿದ್ದೀತೆ ಹೃದಯ

ಕೆಂಪು ಮೆಣಸಿನ ಘಾಟಿದ್ದ ಹಾಗೆ
ತಿಂದಷ್ಟು ಖಾರವೇ
ಆದರೂ ತೀರದು ತಿನ್ನುವ ಬಯಕೆ
ಮತ್ತಷ್ಟು ಸೆಳೆತಕ್ಕೊಳಗಾಗುವುದು

ಕೆಂಪು ಅರಿವೆ ತೊಟ್ಟವರ
ಬಿಡದೆ ಗೂಳಿ ಬರುವುದು ಅಟ್ಟಿಸಿ
ಕಂಪನವೇ ಕೆಂಪು ಕೆಂಪೆಂದರೆ?
ಕೆಂಪು ಕಂಪನಕೆ ದಾರಿ
*****