
ಕನ್ನಡಿಗರು ನಾವು ಕನ್ನಡಿಗರು;
ಕರ್ಣನಿಗೂ ಕಡಿಮೆ ಇರದ
ದಾನಶೂರರು ನಾವು ಕನ್ನಡಿಗರು!
ಧೀಮಂತರು ನಾವು ಕನ್ನಡಿಗರು
ಕಾವೇರಿಯ ಉಳಿಸಿಕೊಳದ
ಹೋದ ಶಕ್ತಿ ಗಳಿಸಿಕೊಳದ
ಮಾನ ಹೋದರೂನು ಮಾನ
ಉಳಿದುದಂತೆ ನಟಿಸುತಿರುವ
ಧೀಮಂತರು ನಾವು ಕನ್ನಡಿಗರು!
ಸ್ನೇಹಪರರು ನಾವು ಸ್ನೇಹಪರರು
ತಾಯ ಭಾಷೆ ಅಳಿದರೂನು
ನಮ್ಮ ತನವ ಮರೆತರೂನು
ಅನ್ಯರೊಡನೆ ಅನ್ಯಭಾಷೆ
ಆಡಿ ಕಲೆತು ನಲಿಯುವಂತ
ಸ್ನೇಹಪರರು ನಾವು ಕನ್ನಡಿಗರು!
ನೀತಿವಂತರು ನಾವು ಧರ್ಮಭೀರರು;
ನಮ್ಮ ತಾಯ್ಗೆ ನಮ್ಮ ಮೆಯ್ಗೆ
ಇರದಿರೇನು ತುಂಡು ಬಟ್ಟೆ
ಪರರ ತಾಯೆ ರೇಷ್ಮೆ ವಸ್ತ್ರ
ಉಡಿಸುತಲೀ ತಣಿಯುವಂತ
ನೀತಿವಂತರು ನಾವು ಕನ್ನಡಿಗರು!
*****


















