ಮಹಾಕವಿ ಕುಮಾರವ್ಯಾಸನಿಗೆ

ಶ್ರೀಮದಮಲ ವಚಃಪರಿಧಿಯಾ
ದೀ ಮಹಾಕೃತಿಯಿಂದೊಲವು ಮಿಗೆ
ವ್ಯೋಮದಲಿ ವಿಧು ವೇಡಿಸಿದ ಪರಿವೇಷದಿಂದೆರೆವ|
ಕೌಮುದಿಯೊಲೀ ಕನ್ನಡದೊಳಾ
ಸೀಮಮೆನೆ ನೆಲಸಿಹುದಿದಂ ನೆಗ
ಳ್ದಾ ಮಹಾಕವಿ ನಿನಗೆ ಕನಿಗಳ ಕವಿಯೆ ವಂದಿಸುವೆ ||೧||

ಮೊದಲ ಮಗನಾ ಶುಕನು ಭಾಗವ
ತದ ಪುರಾಣದೊಳದ್ದಿ ಕುರುಕುಲ
ಕದನದೀ ಕಥೆಯೊರೆದನಿಲ್ಲಕಟೆಂದು ಮನಮರುಗಿ|
ಪದೆಯಲನ್ಯ ಕುಮಾರನನು ವೇ
ದದ ಮಹಾಮುನಿ ಕನ್ನಡದ ಶಾ
ರದೆಯೆ ಕನ್ನಡವಕ್ಕಿಯೊಲು ಬೆಸಲಾದಳಲೆ ನಿನ್ನ? ||೨||

‘ಅಂದು ಕಂಡುದ ಕಾಣಿಸಿದೆ, ಬಳಿ
ಸಂದ ಕಬ್ಬಿಗರವರ ದೇಸಿಯ
ಚಂದದಿಂ ಕೇಳಿಸಿದರಲ್ಲದೆ ಕಾಣಿಸಿದರುಂಟೆ?’|
ಎಂದು ಲೋಕಕೆ ಭಾರತವ ಕಂ
ಡಂದದಿಂ ಕಾಣಿಸಲು ನಿನಗಣು
ಗಿಂದ ಸಂಜಯಗಿತ್ತ ದೃಷ್ಟಿಯ ನೀಡಿದನೆ ಮುನಿಪ? ||೩||

ಈಕ್ಷಿಸದೆ ಭಕ್ತಿಪ್ರಭೆಯ ವಿರ
ಜಾಕ್ಷಿಯಿಂ ೧ಕ್ರತುಪುರದೊಡೆಯನನ
ಧೋಕ್ಷಜನ ನೀ ವಿಶ್ವಕವಿಗವಗೆಂತು ಲಿಪಿಗಾರ?|
ಅಕ್ಷಯಂ ತವ ಕಂರಮದು! ವ್ಯಾ
ಚಕ್ಷಣಮಿದಾತನದೊ? ನಿನ್ನದೊ?
ಸಾಕ್ಷಿಯೆಮಗಿದು ವೀರನಾರಾಯಣನ ದರುಶನದ! ||೪||

ನಿನ್ನ ಹಿಂಗಬ್ಬಿಗರಿಗೂಡಿದ
ಕನ್ನಡದ ನುಡಿವೆಣ್ಣ ಮೊಲೆ ನಿನ
ಗಿನ್ನು ಸಾಲದೆನುತ್ತ ವಿಧಿ ಮುಂಬಗೆದು ನಿನ್ನುದಯಂ|
ಚನ್ನೆಯಿವಳಿಗೆ ಮೂರನೆಯ ಮೊಲೆ
ಯನ್ನವಾಯಿಸಲದರಿನೊದವಿದ
ಬಿನ್ನಣಮಿದೇಂ ನಿನ್ನ ನುಡಿಯ ನವೀನ ನಿವಡಿಕೆಗೆ? ||೫||

ಕಾವ್ಯಮಿದೊ ಜೀವಂತರಾ ಕೌ
ರವ್ಯರನುಗಂತವ್ಯಮಿದೊ? ಸು
ಶ್ರಾವ್ಯ ಪುಣ್ಯ ಚರಿತ್ರೆಯಿದೊ ಭಾರತದ ಯಾತ್ರೆಯಿದೊ? |
ಭವ್ಯರಿವರಾರಲ್ಲ? ಬಹುಮಂ
ತವ್ಯರಿವರೊಡನೆಮಗೆ ಕೆಳೆ ಕ
ರ್ತವ್ಯಮೆನಿಸುವುದವರವರ ಬಾಂಧವ್ಯಕೆದೆಸಿಲುಕಿ ||೬||

ರವಿಯ ಸಪ್ತಾಶ್ವಗಳ ಸಪ್ತ
ಚ್ಛವಿಯ ಸೇರುವೆ ಬಿಳಿಗಲೆತು ಲೋ
ಕವನು ಧವಳಿಸುವಂತೆ, ಕವನದಿ ನಿನ್ನ ಸವನಿಸಿದ |
ನವರಸದ ಸಂಯುಕ್ತಿಯದೊ ಮಾ
ಧವನ ನವವಿಧ ಭಕ್ತಿಯದೊ ಮನ
ದೆವೆದೆರಸಿ ಪುಳುಕಿಸುತಿದೆ ಸುಧಾಂಬುಧಿಯ ಮಧುರಿಮೆಗೆ! ||೭||

ಪ್ರಕಟಿಸಿದೆ ನೀನೈಹಿಕಾಮು
ಷ್ಮಿಕದ ನಡು ಪರುರವಿಸಿದೊಖ್ಖಾ
ಣಿಕೆಯ ಸೇತುವೊಲಿದರ ನುಡಿಗಟ್ಟಿನ ಸಗಾಢಿಕೆಯ |
ಅಕುಟಿಲದ ಸೊಬಗೆಮಗೆ ಬಗೆಗಾ
ಣಿಕೆಯ ಪಯಣದಿ ಸಂದಿಸುವ ನ
ನ್ನಿಕೆಯಿವರುಹವೆ ಸತ್ಯಸೌಂದರ್ಯಗಳನನ್ಯತೆಯ? ||೮||

ನಿಡುಗತೆಯೊ ಬಾನೆಡೆಯೊ? ಬೆಡಗಿನ
ನುಡಿಯ ಠೀವಿಯೊ ಗುಡುಗೊ ? ಬಣ್ಣದ
ಮಿಡುಕೊ ಮಿಸುಕುವ ಮಿಂಚೊ? ಕವಿತಾರಸವೊ ತನಿಮಳೆಯೊ? |
ತಡಿಯ ಹರಿವರ್ಥ ಪ್ರವಾಹವೊ?
ಮಡಲ್ವ ನಿರತೆಯೊ ಹಸುರ ನೆರತೆಯೊ?
ನಡೆನಲಿವ ಮನ್ಮನವೊ ಸೋಗೆಯೊ ನಿನ್ನ ಕಾವ್ಯದಲಿ? ||೯||

ಹೊತ್ತಿಸುತ ಸುರಿಮುಗಿಲ ಹಗಲಲಿ
ಬತ್ತಿಯೆಯ್ದರ ಸೊಡರ, ಸಯ್ಪೆದೆ
ಯೊತ್ತ ಕೇಳುತ ಲೇಸ ಸಂಚಿಸೆ ನೆರೆದರಿಗೆ ನಿನ್ನ |
ಹೊತ್ತಗೆಯ ಹಾಡುವಿನಮರ್ಥವ
ಬಿತ್ತರಿಸುವಿನಮಳ್ತಿಯಲಿ ಕಿವಿ
ಯಿತ್ತು ಕೇಳ್ದುದನೆನಗೆ ಕೇಳಿಪುದಿನ್ನೆಳೆಯ ನೆನವು! ||೧೦||

ಪಂಪನಲಿ ಬನವಾಸಿದೇಶದ
ಸೊಂಪ, ರನ್ನನೊಳಾ ಚಳುಕ್ಯರ
ಲಂಪ, ಲಕ್ಷ್ಮ್ಮೀಶನಲಿ ಪಂಪೆಯನಾಳ್ದವರ ಪೆಂಪ |
ಆಂಪಡೇನಿನ್ನಖಿಲ ಕನ್ನಡ
ದಿಂಪು ನಿನ್ನ ಈ ಭಾರತಿದಿ ಮೆ
ಯ್ಯಂ ಪಡೆವೊಲೇಂ ನೆಳಲನಿಕ್ಕಿತೆ ಬೇರೆ ಭಾರತದಿ? ||೧೧||

ಸಕ್ಕದದ ಭಾರತದಿ ಕೊಳುಗುಳ
ದೆಕ್ಕತುಳದೊಳೆ ಭೇರಿ ಮೊಳಗುವೊ
ಡಕ್ಕಜವಿದೇಂ ನಿನ್ನ ಕಬ್ಬದಿ ತುದಿಮೊದಲ್ವರೆಗೆ |
ಧಕ್ಕಡದ ಕನ್ನಡದ ರವಣೆಯೊ?
ಸೊಕ್ಕು ಭಟರುರವಣೆಯ ಢವಣೆಯೊ?
ಮಿಕ್ಕ ಕವಿಗಳ ಕುಣಿಸಿ ನಗುವೀ ಹೊಸ ಬಜಾವಣೆಯೊ? ||೧೨||

ಕನ್ನಡದ ನುಡಿದೇಗುಲದಿ ಸಂ
ಪನ್ನಮಿಹ ಶ್ರೀಕೃಷ್ಣಮೂರುತಿ
ಯನ್ನಿರೀಕ್ಷಿಸುವೊಡನೆ ಲಕ್ಷ್ಮೀಶನದು ನಿನ್ನದಿವು |
ನನ್ನ ಕಣ್ಮನದಿಂದ ಭಕ್ತಿಯ
ಜಾನ್ನವಿಯ ಸರಿವರಿಸಲಿವರೊಳ
ಗಿನ್ನರಿಯೆ ಮಿಗಿಲಾತನೆರಕವೊ ನಿನ್ನ ಕೆತ್ತಿಗೆಯೊ? ||೧೩||

ಕುರುಪತಿಯ ಮರಣಾಂತ ಛಲದಲಿ
ಮರುಳನಹ ಕವಿ ರನ್ನನವನಲಿ
ಮರಸಿದೊಲು ತನ್ನಯ ಕಥಾನಾಯಕನನನಿಲಜನ |
ಇರದೆ ಕರ್ಣನ ಜೋಳವಾಳಿಯೊ
ನಿರತಿಶಯ ಚಾಗವೊ ಮನಂಬುಗೆ,
ಮರೆತಡೇಂ ನೀ ನರನನಂದಂದಿನನ ತನಯನಲಿ? ||೧೪||

ಕಾಳುಗೆಡೆವರೆ ನಿನ್ನ ಕೃಷ್ಣೆಯ
ನೇಳಿಸದೆ ಗಂಡುಡುಗಿದಾ ಗಂ
ಡಾಳುಗಳ ತೆರಪುಂಟೆ ಧರುಮದ ಬಾಳ್ಗೆ? ಕುರುಕುಲದ |
ಕಾಳರಾತ್ರಿಯೆ ? ಇರುಳಿನಲ್ಲದೆ
ನಾಳೆ ಮೂಡಿತೆ? ಶಿಖಿಜೆ ಗಡ ಪಾಂ
ಚಾಳಿ ಗಿರಿಜೆಯೊಲರ್ಧನಾರಿ ರಣಾಗ್ರ ಸಹಕಾರಿ! ||೧೫॥

ಸಹಜವೇನ್ನುಡಿದಡೆ ತುರಾರಿಸಿ
ಯಹಿತರಾ ಕೌರವರು ನಿನಗೆಂ
ದಹಹ ಧರ್ಮದ ಪಕ್ಷಪಾತವನಾವ ಗುಣಿಯೊಲ್ಲ? |
ಕಹುಕಿಗಳ ಕೌಳಿಕವ ಹಳಿದೊಡೆ,
ಸಹಸದಲಿ ಪಗೆಯುಂಟೆ? ಬೇವಿನ
ಕಹಿಯ ಕಯ್ಪೆನೆ ಗುಣಕೆ ಕಯ್ಪೆಯೆ ? ಗುಣಕೆ ಮಚ್ಚರವೆ? ||೧೬||

ಅರಿಯೆವಣಮಿನ್ನಕಟ ನಿನ್ನನು
ಕುರಿತ ಹದನವನೇಂ ವಶಿಷ್ಠನ
ಮರೆಯರುಂಧತಿಯಂತೆ ಕಾವ್ಯವೆ ನಿನ್ನ ಮರಸಿದುದೆ? |
ಕಿರಿದೆನದೆ ಕಂಡಗೆ ಚಿರಾಯುವ
ನೊರೆವರಂತೆಮಗವಟಯಿಸಿ ತವ
ಚರಿತವಂ ಪೊರೆಯಳೆ ಚರಿತ್ರವಿಧಾತ್ರಿ ಕನ್ನಡವ? ||೧೭||

ಯಾವ ರಾಯನ ನಾಡೊಳಿರ್ದೆಯೊ,
ಯಾವ ಕಾಲದಿ ಬಾಳಿದೆಯೊ, ಮ
ತ್ತಾವ ಕಾವ್ಯವ ರಚಿಸಿದೆಯೊ ನೀನೊಬ್ಬನದನರಿವೆ, |
ಏವರಂ ಭಾರತದ ಕೇಳಿಕೆ
ಯೇವರಂ ಕನ್ನಡದ ಬಾಳಿಕೆ
ಯಾವರಂ ನೀ ಬಾಳ್ದೆಯೆಂದಿದನೊಬ್ಬ ನೀನರಿಯೆ ||೧೮||

ಅರಸರೊಲಿದೇಂ ನಿನಗೆ ಕಾರ್ತ
ಸ್ವರದ ಕಂಕಣ ತೊಡಸಿದರೆ ನಾ
ನರಿಯೆ, ನಿನಗಿಂದೊಂದೆ ಸತ್ತಿಗೆಯಾಗಿ ಕನ್ನಡದ|
ಸರಸರಿದೊ ನಿನ್ನನು ಯಶೋವಿ
ಷ್ಟರದಿ ಕುಳ್ಳಿರಿಪಂದು ನಿನ್ನಡಿ
ಗೆರಗುತೀ ಹುಲು ಪದ್ಯದಂದುಗೆ ಚಾಚುತಿಂತೆರೆವೆ- ||೧೯||

ಬಚ್ಚಿದಳೆ ಕನ್ನಡದ ಭಾರತಿ?
ಮುಚ್ಚುವಳೆ ಮಧುಮಧುರ ಕಂಠವ
ನೆಚ್ಚರಿಸಳೇನಚ್ಚರಿಯ ಕನ್ನಡದ ಕಚ್ಛಪಿಯ? |
ಬೆಚ್ಚಿದಿಂತೆಮುಗಳಿಯದೆಮ ನ
ಮ್ಮಚ್ಚ ಕನ್ನಡವೆಂದು ನಚ್ಚಿಸ
ಲುಚ್ಚ ಕವಿಗಳ ತವರೊಳವತರಿಸಾತ್ಮದೀಧಿತಿಯ! ||೨೦||

ಮಂಗಳಂ ನಿನ್ನೊರೆದ ಕಬ್ಬಕೆ,
ಮಂಗಳಂ ಕಿವಿಮನದ ಹಬ್ಬಕೆ,
ಮಂಗಳಂ ಕನ್ನಡದ ಭಾಮಿನಿ ಮನದಿನಿಯ ನಿನಗೆ |
ಮಂಗಳಂ ನಿನ್ನಮರ ಮೂರ್ತಿಗೆ,
ಮಂಗಳಂ ನಿನ್ನಜರ ಕೀರ್ತಿಗೆ,
ಮಂಗಳಂ ನಿನಗೊಲಿದ ಗದುಗಿನ ವೀರ ನರಯಣಗೆ ||೨೧||
*****
೧ ಕ್ರತುಪುರ ಎಂದಕೆ ಧಾರವಾಡ ಜಿಲ್ಲೆಯಲ್ಲಿರುವ ಗದಗು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕನ್ನಡಿಗರು ನಾವು
Next post ಭಯಂಕರ ರೋಗ ಸಾರ್‍ಸ್‌ಗೆ ಮದ್ದು

ಸಣ್ಣ ಕತೆ

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…