ಅಯ್ಯಪ್ಪಸಾಮಿ ಕಾಲು ಟಚ್ ಮಾಡಿದ್ದು ಓನ್ಲಿ ಪಬ್ಲಿಸಿಟಿಗಂತ ಯಾರನ್ನ ಬೇಕಾದರೂ ಟಚ್ ಮಾಡ್ತಾರೆ ಟಚ್ ಮಾಡ್ಕಂತಾರ್ ಬಿಡ್ರಿ. ಆದೇನ್ ರೋಗವೋ ಒಂದೊಂದು ದೇವಸ್ಥಾನ್ದಾಗೂ ಇಚಿತ್ರ ಪದ್ಧತಿಗಳನ್ನ ಕರ್ಮಠ ಬ್ರಾಂಬ್ರು ಮಾಡ್ಕೊಂಡು ಬಂದವ್ರೆ. ಮಂತ್ರಾಲಯ ಉಡುಪಿಗೋದ್ರೆ ಅಂಗಿ ಬಿಚ್ಚಿಸ್ತಾರೆ. ಧರ್ಮಸ್ಥಳ್ದಾಗೂ ಅಷ್ಟೆಯಾ. ಐದು ವರ್ಷದ ಮಕ್ಕಳಿಗೆ ನೋ ಎಂಟ್ರಿ! ಹಂಗೆ ಅಣ್ಣಪ್ಪ ಸಾಮಿ ಎಂಬ ಭೂತನ ದರುಶನಕ್ಕೆ ಹೆಣ್ಣು ಮಕ್ಕಳ್ಳ ಬಿಡಂಗಿಲ್ಲ. ಹೋದ್ರೋ ರಕ್ತಕಾರಿ ಸಾಯ್ತಾರೆ ಅನ್ನೋದ್ರಿಂದ ಯಾವ ಹೆಂಗಸರೂ ಅತ್ತಾ ಕಡೆ ತಲೆ ಹಾಕಲ್ಲ. ಗುರುವಾಯೂರಪ್ಪನ ಗುಡಿಯಾಗೂ ಬೇರೆ ಧರ್ಮದೋರ್ಗೆ ನೋ ಎಂಟ್ರಿ. ಕೇರಳದ ಜಾಯಮಾನದಾಗೆ ಪಲಂಬೂರು ರಾಜರಾಜೇಶ್ವರಿ ಗುಡಿಯಾಗೂ ನೋ ಎಂಟ್ರಿ. ಮೊನ್ನೆ ಅಲ್ಲೋಗಿ ಪೂಜೆ ಮಾಡಿಸಿದ ಮೀರಾ ಜಾಸ್ಮಿನ್ ಅಂಬೋ ನಟಿ ೨೦ ಸಾವಿರ ದಂಡ ಕಟ್ಟವಳೆ. ಈ ಅಯ್ಯಪ್ಪ ಸ್ವಾಮಿ ಎಂಬೋನು ಹರಿಹರರ ಕೂಡುವಳಿಯಿಂದ ಹುಟ್ಟಿದ ಕೂಸು ಬ್ರಹ್ಮಚಾರಿ. ಕಾರಣ ೧೦ ವರ್ಷದ ಬಾಲಕಿ ೫೦ ವರ್ಷದ ಹೊಸಾ ಮುದುಕೀರ್ಗೆ ಮಾತ್ರ ಎಂಟ್ರಿಯಂತೆ. ವಯಸ್ಸಿಗೆ ಬಂದ ಗರಲ್ಸ್, ಆಂಟಿಯರ್ನ ನೋಡಿದ್ರೆ ಬ್ರಹ್ಮಚರ್ಯ ಕೆಟ್ಟೋತದೆ ಅಂತ ಕರ್ಮಠ ಬಾಂಬ್ರು ತಂತ್ರಿಗಳು ಸೇರಿ ತಮ್ಮ ಮಾನಸಿಕ ರೋಗನೇ ದೇವ್ರಿಗೂ ಹತ್ತಿಸಿಬಿಟ್ಟಾರೆ. ಕೇರಳದಂತ ಇದ್ಯಾವಂತರು ಕಮ್ಯನಿಸ್ಟ್ ಮೈಂಡಿನೋರಿರೋ ಸ್ಟೇಟ್ ನಾಗೆ ಇಂತ ಮೂಢ ನಂಬಿಕೆನಾ? ಇವರ ಬುದ್ದಿಗೇನ್ ಗೆದ್ದಲು ಹಿಡಿತಾ ಸಿವ್ನೆ! ಪಾಪ, ಅಯ್ಯಪ್ಪಸಾಮಿಗೆ ಬರೀ ಗಂಡಸರು ಹಳೆ ಮುದುಕೀನ ನೋಡಿ ಏಟು ಬೇಜಾರಿರ್ಬೇಡ. ಅಂತದ್ರಾಗೆ ನಮ್ಮ ಥೈ ಥೈ ಬಂಗಾರಿ ಜಯಮಾಲಿ ಸಾಮೀತಾವ ಹೋಗಿ ಪಾದ ಟಚ್ ಮಾಡ್ದಾಗ ಸಾಮಿಗೇಟು ಖುಸಿ ಆಗಿರ್ಬೇಡ. ಸುಧಾಚಂದ್ರನ್ ಹೋಗಿ ಡ್ಯಾನ್ಸ್ ಮಾಡಿದಾಗ ಸಾಮಿಗೆ ಇನ್ನೇಟು ದಿಲ್ ಖುಸ್ ಆಗಿರ್ಬೇಡ. ನಂದೆಲ್ಲಿ ಅಂತ ಗಿರಿಜಾ ಲೋಕೇಸು ನಾನೂ ಹೋಗಿದ್ದೆ ಅಂತ ಈಗ ಅಂತಾವ್ಳೆ. ಯಾರನ್ನ ನಂಬಾನಾ ಯಾರನ್ನ ಬಿಡಾನ ? ಬ್ಯೂಟಿಪುಲ್ ಅಗಿರೋ ಕುಟ್ಟಿಗಳಿರೋ ಕೇರಳ್ದಾಗೆ ಇದ್ದೂ ತಂತ್ರಿಗಳ ಕುತಂತ್ರದಿಂದಾಗಿ ಮಲೆಯಾಳಿ ಸುಂದರಿಯರನ್ನೆ ನೋಡ್ದಂಗೆ ಕುಕ್ಕರಗಾಲಲಿ ಕುಂತ ಸಾಮಿ ಅದೇಟು ಕೊರಗಿರಬ್ಯಾಡ. ಯಾರಾರ ಅಯ್ಯಪ್ಪಗಾದ ಅನ್ಯಾಯದ ಬಗ್ಗೆ ಥಿಂಕ್ ಮಾಡಿದ್ದುಂಟಾ? ಹೇಳ್ರಿ?

ನಮ್ಮ ದೇಸ್ದಾಗೆ ಇಸ್ತ್ರೀಗೆ ಭಾಳ ಪೂಜ್ಯ ಭಾವ್ನೆ ಐತೆ. ದೇಸಕ್ಕೆ ಭಾರತಮಾತೆ ಅಂತೀವಿ. ನದಿಗಳಿಗೆಲ್ಲಾ ಗಂಗಾ ಯಮುನಾ ಕೃಷ್ಣೆ ಕಾವೇರಿ ಕಪಿಲೆ ತಂಗಭದ್ರೆ ಅಂತ್ಲೆ ಕರಿತೀವಿ. ಆದ್ರೆ ವರದಕ್ಷಿಣೆ ಆಶೆಗೆ ಬೆಂಕಿ ಹಾಕಿ ಸುಡ್ತೀವಿ. ಇನ್ನು ಬ್ರಾಂಬ್ರ ಪಾಲಿಗೆ ಹೆಣ್ಣು ಶೊದ್ರೆ. ದೇವರ ಪೂಜೆ ಮಾಡಂಗಿಲ್ಲ. ಮುಸ್ಲಿಮರ್ದಾಗೂ ಹೆಂಗ್ಸು ಮಸೀದಿಗೆ ಕಾಲಿಡಂಗಿಲ್ಲ. ಹೆಂಗಸರ್ಗೆ ೩೩% ಮೀಸಲು ಅಂಬೋ ಮಿಕ್ಸೆಡ್ ಸರ್ಕಾರ ಒಬ್ಬನೂ ಮಂತ್ರಿ ಮಾಡಲಿಲ್ಲ. ‘ಯತ್ರ ನಾರ್ಯಂತು ಪೂಜ್ಯತೆ ತತ್ರ ದೇವತಾ’ ಅಂಬೋ ದೇಸದಾಗೆ ಜಯಮಾಲಿ ಅಯ್ಯಪ್ಪಸಾಮಿ ಟಚ್ ಮಾಡಿದ್ದೇ ಅಪರಾಧವಾಗೇತ್ರಿ! ಪಾಪ ಆಕಿ ಗಂಡ ಪ್ರಭಾಕರಂಗೆ ರೋಗ ಹತ್ಕಂಡಾಗ ಹರಕೆ ಹೊತ್ತ ಜಯಮಾಲ ತನ್ನ ಹೆಸರ್ನಾಗೆ ಮಾಲೆ ಇರೋದ್ರಿಂದ ಮಾಲೆ ಹಾಕದಿದ್ದರೂ ಗಂಡನ್ನ ಬುಟ್ಟಿನಾಗ ಇಕ್ಕಂಡು ತೆಲೆಮ್ಯಾಲೆ ಹೊತ್ಕಂಡು ಹೊಗಿದ್ಳಂತ್ರಿ ಸಿನಿಮಾಸ್ಟಾರು ಪ್ರಭಾಕರ್ನ ನೋಡುತ್ಲು ಜನ ಮುತ್ಕಂತು, ಗದ್ದಲ ಶುರುವಾತು. ಅಲ್ಲಿದ್ದ ತಂತ್ರಿಗಳು ಕುತಂತ್ರ ಮಾಡಿ ಹಿಂದಲ ಡೋನಿಂದ ಸಾಮಿ ದರುಶನಕ್ಕೆ ಬಿಟ್ಟರಂತೆ ಅಂತ ಈಗ ಅಂತಾಳೆ ಜಯಮಾಲಿ! ಮೊದಲೇಟ್ಗೆ ಜನ ದಬ್ಬಿದರು ದೇವರ ಮ್ಯಾಗೆ ಬಿದ್ದೆ ಅದ್ರಾಗೆ ನಂದೇನು ಮಿಸ್ಟೇಕಿಲ್ಲ ಮಿಸ್ಟೇಕ್ ಮಾಡ್ಕಂಬ್ಯಾಡಿ ಅಂದೋಳೀಗ ತಂತ್ರಿಗಳ ಬುಡಕ್ಕೇ ಬಿಸಿ ಮುಟ್ಟಿಸವ್ಳೆ. ೧೯೮೭ ರಾಗೆ ನಂಗಿನ್ನೂ ೨೭ರ ಚುಮು ಚುಮು ಹರೆಯ ತನ್ನ ರೂಪಕ್ಕೆ ಮಳ್ಳಾಗಿ ತಂತ್ರಿಗಳು ಹಿಂದಲ ಡೋರ್ನಿಂದ ನನ್ನ ಬಿಟ್ಟರೆ ಅದ್ರಾಗೆ ನಂದೇನ್ ತಪ್ತೇತೆ ಅನ್ಲಿಕತ್ತಾಳೆ. ಮುಂದೆ ಇನ್ನೇನು ಸ್ಟೋರಿ ಕಟ್ತಾಳೋ ಅಯ್ಯಪ್ಪ ಸ್ವಾಮಿನೇ ಬಲ್ಲ! ಹಂಗ್ ನೋಡಿದ್ರೆ ಪಂಪಾನದಿಯಿಂದಾಚ್ಗೆ ಹರೇದ ಹೆಂಗಸ್ರಿಗೆ ನೋ ಎಂಟ್ರಿ. ಇನ್ನೂರು ಸೆಕ್ಯರಿಟಿ ಗಾರ್ಡ್ಸು ಪೋಲೀಸರು ಭಕ್ತ ಸಮೂಹದ ಕಣ್ತಪ್ಪಿಸಿ ಸ್ವಾಮಿತಾವ ಹೋಗೋದು ಇಂಪಾಸಿಬಲ್. ದೇವರ ಮಾನ ಕಳೀತಾ ಅವ್ಳೆ ಅಂತ ತಂತ್ರಿಗಳೀಗ ಬೊಂಬ್ಡಿ ಹೊಡಿಲಿಕತ್ತವೆ. ‘ಆಯ್ಯಪ್ಪಸಾಮಿ ಈಸ್ ಆಂಗ್ರಿ’ ಅಂತ ಇಂಟರ್ನೆಟ್ನಾಗೆ ಸುದ್ದಿ ಮಾಡ್ಯಾವೆ. ಹೆದಕಂಡ ಜಯಮಾಲಿ ‘ಸಾರಿ’ ಕೇಳಿ ಫ್ಯಾಕ್ಸ್ ಕಳಿಸವ್ಳೆ. ‘ಅಷ್ಟಮಂಗಲ ದೇವಪ್ರಶ್ನೆ’ ನಡೆಸಿದ ತಂತ್ರಿಗಳು ದೇವರ ಮನಸಿನಾಗಿದ್ದ ೨೦ ವರ್ಷದ ಹಿಂದೆ ಜಯಮಾಲಿ ಟಚಿಂಗ್ ಮಾಡಿದ ಸ್ಟೋರಿನಾ ಬಯಲು ಮಾಡಿ ಅಯ್ಯಪ್ಪಸ್ವಾಮಿ ಅಯ್ಯಯ್ಯಪ್ಪೋ ಅನ್ನಂಗೆ ಮಾಡವ್ರೆ. ಸುಂದರವಾದ ಕುಟ್ಟಿಯರನ್ನೇ ನೋಡದಂತೆ ಮಾಡಿದ ಪಾಪಿ ತಂತ್ರಿಗಳು ಜಯಮಾಲಿ ಟಚಿಂಗ್ನಿಂದಾಗಿ ಸ್ವಾಮಿ ಅಪವಿತ್ರವಾಗವ್ನೆ ಅಂತ ತಮ್ಮ ಕಡೆ ಪೋಲೀಸೋರ್ನ ಕಳಿಸಿದ್ರೂ ನೊ ಕಾಮೆಂಟ್ಸ್ ಅಂದವ್ಳೆ ಜಯಮಾಲಿ. ಸರ್ಕಾರವೇನಾದರೂ ಮೂಗು ತೂರಿಸಿದ್ರೆ ಮೂಗನ್ನೇ ಕುಯ್ತೀವಿ ಆನ್ಲಿಕತ್ತಾನೆ ಮುಜರಾಯಿ ಮಂತ್ರಿ ಸುಧಾಕರನ್. ನಮಗಿಂತ ಮೂರ್ಖರೂ ವಂಗ ನಾಡಿನಾಗೆ ಅದಾರೆ ಅಂದಂಗಾತು. ತಾಯಿಗೆ ಡಿಸೀಸ್ ಆದಾಗ ಹುಲಿ ಹಾಲಿಗಾಗಿ ಫಾರೆಸ್ಟ್ ಅಲೆದು ದೇವಲೋಕಕ್ಕೆ ನುಗ್ಗಿ ಮಹಿಷಿನ ಮರ್ಡರ್ ಮಾಡಿ ಹುಲಿ ಸವಾರಿ ಮಾಡ್ಕೊಂಡು ಬಂದ ಮಾತೃಪ್ರೇಮಿಗೆ, ಹೆಂಗಸರ ಮುಖ ನೋಡ್ಡಂಗೆ ಮಾಡಿದ ತಂತ್ರಿಗಳೀಗ ಶುದ್ಧ ಮಾಡ್ತೀವಿ ‘ಬ್ರಹ್ಮ ಕಲಸ
ಮಹೋತ್ಸವ’ ಮಾಡ್ತೀವಿ ಅಂತೆಲ್ಲಾ ತಮಟೆ ಹೊಡಿಲಿಕತ್ತಾರ. ಹೆಂಗಸ್ರಿಗೆ ನೋ‌ಎಂಟ್ರಿ ಅಂಬೋದು.
*****
( ದಿ. ೨೦.೦೭.೨೦೦೬)