ಇದು ಅಖಂಡ ಇರು ಅಖಂಡ
ಅಖಂಡ!
ಖಂಡನ ಮಂಡನ ಬರಿ ವಾಗ್ದಂಡನ
ಇರುವುದನರಿ, ಅರಿದೊಲು ಹರಿ
ಈ ಪರಿ ಪರಿಪೂರ್ಣ
ವ್ಯಾಕರಣದ ಪ್ರಕ್ರಿಯೆಯೋ
ಬರಿ ಮಾತಿನ ಚೂರ್ಣ
ತರ್ಕದ ಯುಕ್ತಿಯ ಕುಹಕವು
ಅವಿವೇಕದಜೀರ್ಣ
ಸಮದಂಡಿಗೆ ಒಳಹೊರಗೂ
ಆಗುವದುತ್ತೀರ್ಣ.
ಮನದಾ ಮಂಡಿಗೆಯಿಂದಲೆ ಆದೀತೆ ಪ್ರಸ್ತ?
ಪ್ರಾಣದ ನಿತ್ರಾಣದ ಪರಿ ಎಂದಿಗು ಸಂತ್ರಸ್ತ.
ಹೊಸ ಬೆಳಕಿಗೆ ಹೂಸ ಬದಕೂ, ಹೊಸ ಹೊಸದೇ ಹೊಸದು
ಹೊಸ ಚಿಗುರಿಗೆ ನೆಲೆಯಾಗಲಿ ತರಗನು ಬಿಡು ಎಸೆದು.
ಬರಡಲ್ಲವು ಕೊರಡಲ್ಲವು ಸ್ಥಾಣುವಿನಾಸ್ಥಾನಾ
ಹೊಸದನು ಕಾಣುವ ಕಣ್ಣಿಗೆ ಹಾಕಿದೆ ಅಂಜನವು
ಹೊರಬಣ್ಣದ ಬೆಡಗೇತಕೆ ಮುಸುಕಿನ ರಂಜನವು.
ಜೀವನ ಸಂಗೀತಕ್ಕಿದೆ ಬಹು ತಾನ ವಿತಾನಾ.
*****

















