“ದಾರಿ ಎಲ್ಲಿದೆ? ಎಂದು ಕಳಕಳಿಯಿಂದ ಶಿಷ್ಯ, ಗುರುವಿನಲ್ಲಿ ಕೇಳಿದ.
“ಬಹಿರಂಗದಲ್ಲಿ ನಿಂತು ಸಾಗಿದ್ದರೆ ಶಿಷ್ಯಾ! ನೇರ ಅಂತರಂಗದ ಹಾದಿಗೆ ಹೋಗು. ಅಂತರಂಗದಲ್ಲಿ ದಾರಿ ಕವಲೊಡೆದರೆ, ನಿಲ್ಲು ಧ್ಯಾನದಲ್ಲಿ, ಕೊನೆಗೆ ಸೇರುವೆ ಸಮಷ್ಟಿಯ ದಾರಿಯಲ್ಲಿ”- ಎಂದರು ಗುರುಗಳು.
“ನನ್ನ ಮನದ ಅಂತರಂಗ ಬಹಿರಂಗಗಳಿಗೆ ಗೆರೆ ಹಾಕುವುದು ಹೇಗೆ ಗುರುವರ್ಯಾ?” ಎಂದ ಶಿಷ್ಯ.
“ಗೋಡೆ, ಗೆರೆ, ಬೇಲಿಗಳಿಗಿಂತ ಹೊಸಿಲು, ಸೇತುವೆ ಇಟ್ಟುಕೋ.
ಮೆಟ್ಟಿಲಿರಲಿ ಏರಿ ಇಳಿಯಲು ಅಂತರಂಗಕ್ಕೆ” ಎಂದರು ಗುರುಗಳು.
“ಈ ದಾರಿಗೆ ಬೆಳಕಾವುದು ಗುರುಗಳೇ? ಊರುಗೋಲಾವುದು?” ಎಂದ.
“ತಿಳಿವು, ಅರಿವು ಇವೇ ದಾರಿಯ ಹಣತೆಗಳು, ಪ್ರಜ್ಞೆಯೇ ಊರುಗೋಲು.”
“ಈ ದಾರಿಯ ಗುರಿ ಎಲ್ಲಿಯವರೆಗೆ? ಗುರುವೇ!”
“ಅದರ ಗುರಿ ಆನಂದದಲ್ಲಿ. ಅನಂತದಲ್ಲಿ. ವ್ಯಷ್ಟಿ ಸಮಷ್ಟಿಲೀನದಲ್ಲಿ. ಆತ್ಮ ವಿಶ್ವಾತ್ಮ ತಾದಾತ್ಮ್ಯದಲ್ಲಿ.”
“ನದಿಯು ಹರಿಯುವ ದಾರಿ ಸಾಗರಮಿಲನ ವಲ್ಲವೇ?” ಎಂದಾಗ ಶಿಷ್ಯನಿಗೆ ದಾರಿ, ದೃಷ್ಟಿ ಗೋಚರವಾಯಿತು ಗುರುಗಳ ನುಡಿ ಬೆಳಕಿನಲ್ಲಿ.
*****

















