ಬಿರುಗಾಳಿ ಬೀಸುತಿರೆ ಸಾಗರದ ವೀಚಿಗಳ
ಏರಿಳಿತದಂತೆನ್ನ ಮನಶ್ಶರಧಿ
ಯಲೆದ್ದೆದ್ದು ಬೀಳುತಿವೆ ಬಹುರಭಸದಾಶಾ
ತರಂಗಗಳು ಕ್ಷಣಕ್ಷಣಕೆ ದೇವ! ೧
ಹಿರಿತನವು ಬೇಕೆಂಬ ದೂರದಾಶಾವೀಚಿ
ಯೊಮ್ಮೆ ಬಂದು ಸೋಕುವುದು ಹೃದಯವನು
ಸಿರಿಯರಸ ನಾನಾಗಬೇಕೆಂಬ ಬಯಲಾಸೆ
ತೆರೆಬಂದು ಮುಸುಕುವುದು ಮೇಲಿಂದಲೆ. ೨
ಮಾನ್ಯತೆಯ ಶಿಖರಾಗ್ರದಲಿ ಮೆರೆಯಬೇಕೆಂಬ
ಹಿರಿಯಾಸೆ ಗಣ್ಯತೆಯ ತೂಗುಮಂಚ
ದಲಿ ನಲಿಯಬೇಕೆಂಬ ಮನದಾಸೆ ಜತೆ ಸೇರಿ
ಬರುತಿಹವು ಒಮ್ಮೊಮ್ಮೆ! ಸರ್ವೇಶನೆ! ೩
ಹಿರಿತನವು ಸಿರಿತನವು ಮಾನ್ಯತೆಯು ಗಣ್ಯತೆಯು
ಜೀವನದ ಬಾಹ್ಯಾವಸ್ಥೆಗಳು ದೇವ!
ನೋಡಿದರೆ ನಿಜಸುಖದ ಆಗರಗಳಲ್ಲಲ್ಲ!!
ತೋರುತಿಹ ಹಗಲುಗನಸುಗಳು ದೇವ! ೪
ಹೃದಯದೌರ್ಬಲ್ಯವನು ಕಿತ್ತೆಸೆದು, ತುಂಬೆನಗೆ
ನೀತಿ-ಧೈರ್ಯವನು; ಶಾಂತತೆಯ ಕೊಟ್ಟು
ಕವಿತಾವನಿನೋದವನು ನೀಡಿ `ಎಲೆಮರೆಯ ಕಾ
ಯಂತೆ’ ಜೀವನವನನುಗೊಳಿಸು ದೇವಾ! ೫
“ಗಾಳಿಗೊಡ್ಡಿದ ಸೊಡರಿನಂದದಲಿ” ಚಂಚಲವು
ಭೋಗ ಭಾಗ್ಯಗಳಿಲ್ಲ! ಆತ್ಮೋನ್ನತಿ
ಮಾರ್ಗವನು ತೋರುತ್ತ ಶಾಂತತೆಯ ಬೀಜವನು
ಬಿತ್ತೆನ್ನ ಹೃದಯದಲಿ ದೇವೇಶ! ೬
*****

















