Home / ಕವನ / ಅನುವಾದ / ಕನಕಾಂಗಿ

ಕನಕಾಂಗಿ

ಭಾವಗಳು, ರಾಗಗಳು, ಬಗೆಬಗೆಯ ಭೋಗಗಳು,
ಆವಾವುವಲೆಯುವುವು ಮನುಜನೆದೆಯ,
ಕಾಮರಾಯಂಗೆಲ್ಲ ಕುಲಪುರೋಹಿತರಾಗಿ
ಹೋಮಾಗ್ನಿಯನು ಬೀಸಿ ಕೆರಳಿಸುವುವು.
ನೆನೆನೆನೆದು ಮೈಮರೆತು ನಲಿಯುವೆನು ಮತ್ತೆಮ
ತ್ತನುಭವಿಸಿ ಆ ದಿನದ ಸುಖದ ಹೊತ್ತ,
ಅಂದು ಬೆಟ್ಟದ ತುದಿಯ ಮುರುಕುದೇಗುಲದಲ್ಲಿ
ತಂದು ವಿಧಿ ನನಗಿತ್ರ ಪ್ರೇಮನಿಧಿಯ!
ಸಂಜೆಬೆಳಕುಗಳೊಡನೆ ಸುಳಿದು ಮೆಲ್ಲನೆ ಬೆರೆದು
ರಂಜಿಸಿತು ನಾಲ್ದೆಸೆಗೆ ಬೆಳದಿಂಗಳು;
ಅವಳು ಇದ್ದಳು ಅಲ್ಲಿ, ನನ್ನ ಮೋಹದ ಹೆಣ್ಣು,
ನನ್ನಾಶೆ, ಕನಕಾಂಗಿ, ನನ್ನ ಜೀವ!
ಹಿರಿದ ಖಡವ ಪಿಡಿದ ವೀರಪುರುಷನದೊಂದು
ಕರಿಶಿಲೆಯ ವಿಗ್ರಹವ ನೆಮ್ಮಿನಿಂತು,
ಅಲುಗದೆಯೆ ನಾನು ಹಾಡಿದ ಪದವ ಕೇಳಿದಳು,
ತೊಲಗದೆಯೆ ತಂಗಿದ್ದ ಬೆಳಕಿನೊಳಗೆ.
ತನ್ನ ದಾಗೊಂದರಿಯಳವಳು ಕೊರಗೆಂಬುದನು.
ನನ್ನಾಸೆ, ಕನಕಾಂಗಿ, ನನ್ನ ಜೀವ!
ಅವಳಿಗೆನ್ನಲಿ ಮೆಚ್ಚು ಹೆಚ್ಚು, ನಾ ಹಾಡಿದರೆ
ಅವಳನೆದೆಗರಗಿಸುವ ಹಾಡುಗಳನು.
ಮೃದುವಾಗಿ ದುಃಖರಾಗವನ್ನೆತ್ತಿ ನುಡಿಸಿದೆನು,
ಮೃದುವಾಗಿ ಹಾಡಿದೆನು ಕರುಣಕಥೆಯ,
ಆ ಹಳೆಯ ಪಾಳುದೇಗುಲಕೆ ತಕ್ಕುದಿದೆಂಬ
ಮೋಹತಾಪವನೊರೆವ ಪ್ರೇಮಪದವ.
ಕೆನ್ನೆಯಲಿ ಕೆಂಪು ಬಿಳುಪನು ಸುಳಿಸಿ ಕೇಳಿದನು,
ಕಣ್ಣ ನಾಚಿಕೆಪಟ್ಟು ನೆಲದಲಿಟ್ಟು;
ತನ್ನ ಮುಖವನು ಬಿಡದೆ ನಾ ನೊಡದಿರಲಾರೆ
ನೆನ್ನುವುದ ತಾನೆಲ್ಲ ಬಲ್ಲಳವಳು.
ಹೇಳಿದೆನು ಖಡ್ಗವನು ಝಳಪಿಸುತ ರಣರಂಗ
ದಾಳುಗಳನುಡುಗಿಸುವ ವೀರನವನು
ಒತ್ತಿನರಸಿನ ಮಗನೊಲಿಸಲಾರದೆ ಮಿಡುಕಿ
ಹತ್ತು ವರುಷಗಳಿಂದ ಬೆಂದ ಪರಿಯ;
ಹೇಳಿದೆನು ಬಳಿಕವನು ನವೆದುಹೋದುದನಾಹ!
ಕೀಳುದನಿಯಲಿ, ಬೇತು, ಬಿಸುಸುಯುತ,
ಇನ್ನೊಬ್ಬನೊಲುಮೆಯನು ನಾನು ಹಾಡಿದ ಬಗೆಯ
ನನ್ನೊಲುಮೆಬೇಗೆಯನು ತೆರೆದರುಹಿತು.
ಕೆನ್ನೆಯಲಿ ಕೆಂಪು ಬಿಳುಪನು ಸುಳಿಸಿ ಕೇಳಿದಳು,
ಕಣ್ಣ ನಾಚಿಕೆಪಟ್ಟು ನೆಲದಲಿಟ್ಟು;
ಬಿಡದೆ ಮುಖವನೆ ನೋಡಿ, ಮುದ್ದ ಕಣ್ಣಲಿ ಬೇಡಿ,
ನಿಡುಸುಯ್ದು ನುಡಿವೆನ್ನ ಮನ್ನಿಸಿದಳು.
ಮರಳಿ ಮುಂದಕೆ ಕಥೆಯ ಹೇಳಿದೆನು-ದೊರೆಮಗಳು
ಜರೆದು ನಿಷ್ಕರುಣದಲಿ ನೂಕಿಬಿಡಲು,
ಅಡವಿಯೊಳಗಾ ವೀರಚೆನ್ನಿಗನು ಹುಚ್ಚು ಹಿಡಿ
ದೆಡೆಬಿಡದೆ ಹಗಲಿರುಳು ತೊಳಲಿದುದನು.
ಒಮ್ಮೆ ಹುಲಿ ಕೆಡೆದಿರುವ ಗಿರಿಯ ಗುಹೆಯೆಡೆಯಲ್ಲಿ,
ಒಮ್ಮೆ ಕತ್ತಲೆ ಕವಿದ ಮೆಳೆಗಳಲ್ಲಿ
ಒಮ್ಮೆ ಬಿಸಿಲೊರಗಿರುವ ಹಸುರು ಕಣಿವೆಗಳಲ್ಲಿ,
ಬಿಮ್ಮನಲ್ಲಲ್ಲೆದ್ದು, ಬಂದು ಬಂದು,
ಅವನ ಕಣ್ಣೆದಿರಾಗಿ ನಿಲ್ಲುವುದು, ನೋಡುವುದು
ನವಕಲಾವೈಭವದ ರೂಪವೊಂದು!
ಅದನಟ್ಟಿಕೊಳ್ಳುವನು – “ಹೋಹೋ! ರಾಕ್ಷಸಿ” ಎಂದು
ಬೆದರಿಕೊಳ್ಳುವನಕಟ ಆ ವೀರನು.
ಮಾಡುತಿಹುದೇನೆಂದು ತಿಳಿಯದೆಯೆ, ಅವನೊಮ್ಮೆ
ಕಾಡಕಳ್ಳರ ಪಡೆಯ ನಡುವೆ ನೆಗೆದು,
ಅವರು ಹಿಡಿದೆಳೆತಂದ ಹೆಣ್ಣೊಂದ ಸಲಹಿದನು;
ಅವಳೆ ಆ ಕಲ್ಲೆದೆಯ ದೊರೆಯ ಮಗಳು!
ಆಗ ಮನಗರಗಿದಳು; ಆಗ ಕಂಬನಿಗೆರೆದ
ಳಾಗ ಬೇಡಿದಳೆನ್ನ ಮನ್ನಿಸೆಂದು;
ತಂದು ಗವಿಯಲ್ಲಿರಿಸಿ, ಆರೈಕೆ ಮಾಡಿದಳು
ಎಂದೋ ಬಿರಿದೆದೆಯ ಹೊಂದಿಸುವೆನೆಂದು.
ನಲ್ಲೆಯೊಲುಮೆಯ ಮಾತು, ಸಲ್ಲಸಲ್ಲುತ ಸೋತು,
ಮೆಲ್ಲಮೆಲ್ಲನೆ ಹುಚ್ಚು ತೊಲಗಿಹೋಯ್ತು;
ತೊಲಗಿಹೋಯ್ತದರೊಡನೆ ಹಣ್ಣೆಲೆಯ ಮೇಲೊರಗಿ,
ನಲುಗಿ ಬಲುನೊಂದಿದ್ದ ಜೀವದುಸಿರು.
ಮರಣಕಾಲದ ಮಾತ ಹೇಳತೊಡಗಿದೆನಾಹ!
ಕರುಣದಲಿ ಕುಸಿದುಹೋಯ್ತೆನ್ನ ಕೊರಳು;
ಜಾರಿ ಬಿದ್ದುದು ವೀಣೆ; ನನ್ನ ಬೆಡಗಿಯ ಹೃದಯ
ಮಾರಿ ಕುದಿಕುದಿದುಕ್ಕಿ ಸುರಿದುಹೋಯ್ತು.
ಮನವ ದೇಹವನಲೆವ ಚಿಮುಗೆಗಳೊಂದಾಗಿ
ಘನಸಹಜದಂಗನೆಯ ಕೆರಳಿಸಿದುವು:-
ಸವಿಯ ವೀಣಾಗಾನ, ಕನಿಕರದ ಪ್ರೇಮಕಥೆ,
ಕವಿದ ಕಂಪಿನ ಸಿರಿಯ ಹೊಳೆವ ಸಂಜೆ;
ಆಶೆಗಳು; ಆಶೆಯನು ಕನಲಿಸುವ ವಿಘ್ನಗಳು;
ಆಶೆಯೊಳಗಡಗಿಹೋಗುವ ಭಯಗಳು;
ಬಹುಕಾಲ ಮನಸಿನಲೆ ಮರಸಿದ್ದು ಬೆಳಸಿದ್ದ,
ಬಹುಕಾಲ ಬೆಳಸಿದ್ದ ವಾಂಛಿತಗಳು.
ಮೇರೆಮೀರುವ ಕರುಣ ಹರ್ಷ ಪ್ರೇಮಗಳೊಡನೆ
ಹೋರಿದಳು ಹೊಸಹೆಣ್ಣು ಲಜ್ಜೆಯಿಂದ;
ಮಲ್ಲಿಗೆಯ ಬಿರಿಮುಗುಳಮೇಲೆ ಬರುವೆಲರಂತೆ
ಮೆಲ್ಲನುಲಿದಳು ಕಡೆಗೆ ನನ್ನ ಹೆಸರ.
ನಿಡುಸುಯ್ಲಿಗುಬ್ಬಿದೆದೆಯನು ಮುಸುಕಿ, ಒಕ್ಕಡೆಗೆ
ನಡೆದು ಹದುಗಿದಳೆನಗೆ ಕಾಣದಂತೆ;
ತಿರುಗಿ ಹಾಗೆಯೆ ತಾನೆ ನೆಟ್ಟನೆನ್ನಯ ಬಳಿಗೆ
ಹರಿದುಬಂದಳು ಹನಿಯ ಕಣ್ಣ ಚೆನ್ನೆ.
ಮೆತ್ತನೆಯ ತೋಳಿನೊಳಗರೆಬಳಸಿಕೊಂಡೆನ್ನ
ನೆತ್ತಿದಳು ತನ್ನೆದೆಗೆ, ಅಳುಕಿ ಬಳುಕಿ;
ತಲೆಯ ಹಿಂದಕೆ ಸರಿದು, ಕತ್ತೆತ್ತಿ, ನೋಟವನು
ನಿಲಿಸಿದಳು ನಾಟಿದಂತೆನ್ನ ಮುಖದಿ.
ಒಂದು ಕಡೆ, ಅದು ಮೋಹ; ಒಂದು ಕಡೆ, ಸಂದೇಹ;
ಒಂದು ಕಡೆ, ಲಜ್ಜೆಯೇ ಬಲ್ಲ ಬೆಡಗು;
ಕಣ್ಣಿನಲಿ ಕಾಣದಯೆ, ಸೋಕಿನಿಂದಲೆ ತಿಳಿಯ
ಲೆನ್ನ ಹೃದಯದ ಪದರನೆಂಬ ಚದುರು.
ಬಿಡಿಸಿದೆನು ಭೀತಿಯನು, ನೆಡಿಸಿದೆನು ಶಾಂತಿಯನು,
ನುಡಿಸಿದೆನು ಹೆಮ್ಮೆಯಲಿ ಹಳೆಯೊಲವನು;
ಪಡೆದೆ ನಾನಿಂತೆನ್ನ ಮಡದಿ ಕನಕಾಂಗಿಯನು,
ಕಡುಚೆಲುವು ಹೊಳೆದೆಸೆವ ನವವಧುವನು.
*****
COLERIDGE (1772-1834) : Love
Tagged:

Leave a Reply

Your email address will not be published. Required fields are marked *

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...