Home / ಬಾಲ ಚಿಲುಮೆ / ಕಥೆ / ಲಂಬಕರ್ಣನ ಕಥೆ

ಲಂಬಕರ್ಣನ ಕಥೆ

ಒಂದಾನೊಂದು ಕಾಡಿನಲ್ಲಿ ಕರಾಲಕೇಸರನೆಂಬ ಸಿಂಹವೊಂದಿತ್ತು. ಅದಕ್ಕೆ ಧೂಸರಕನೆಂಬ ಒಂದು ನರಿಯು ಆಳಾಗಿ ಇತ್ತು. ಆ ಸಿಂಹವು ಒಮ್ಮೆ ಒಂದು ದೊಡ್ಡ ಕೊಂಬಿನ ಆನೆಯೊಡನೆ ಹೋರಾಡುವಾಗ ಕೊಂಬಿನ ಏಟು ಬಿದ್ದು ಗಾಯವಾಗಿ ಮೇಲಕ್ಕೇಳಲಾರದೆ ಬಿದು ಹೋಯಿತು. ಅದು ಹಾಗೆ ಬೇಟೆಮಾಡದೆ ಬಿದ್ದರಲು, ಧೂಸರಕನಿಗೆ ತಿನ್ನುವುದಕ್ಕೆ ಏನೂ ಸಿಕ್ಕದೆ ಹೋಯಿತು. ಆಗ ಅದು, “ಒಡೆಯ, ನನಗೆ ಹೊಟ್ಟಿ ಹಸಿವು. ಮೇಲಕ್ಕೆ ಏಳಲೂಲಾರೆ, ನಾನು ಏನು ಸೇವೆಯನ್ನು ಮಾಡಲಿ? ಎಂದು ಅತ್ತುಕೊಂಡಿತು. ಅದನ್ನು ಕೇಳಿ ಸಿಂಹವು “ಹೋಗು, ಯಾವುದಾದರೂ ಪ್ರಾಣಿಯನ್ನು ನೋಡಿ ಕೊಂಡು ಬಾ. ನಾನು ಹೀಗಿದ್ದರೂ ಬೇಟೆಯಾಡಿ ಕೊಡುವೆನು.” ಎಂದಿತು. ನರಿಯು ಆಗಲೆಂದು ಹೊರಟಿತು.
ನರಿಯು ಹುಡುಕುತ್ತಾ ಒಂದು ಹಳ್ಳಿಯ ಬಳಿಗೆ ಬಂತು. ಅಲ್ಲಿ ಲಂಬಕರ್ಣನೆಂಬ ಒಂದು ಕತ್ತೆಯು ಕೆರೆಯ ಬಳಿಯಲ್ಲಿ ಅಲ್ಲಲ್ಲಿ ಇದ್ದ ಒಂದೊಂದು ಗರಿಕೆಯನ್ನು ಮೇಯುತ್ತಾ ತಿರುಗುತ್ತಿತ್ತು. ಅದನ್ನು ಕಂಡು ಹತ್ತಿರ ಹೋಗಿ ಆ ನರಿಯು “ಮಾವ, ನನ್ನದೊಂದು ನಮಸ್ಕಾರವನ್ನು ಒಪ್ಪಿಸಿಕೊ. ನಿನ್ನನ್ನು ನೋಡಿ ಬಹಳ ದಿನವಾಯಿತು. ಇದೇಕೆ? ಹೀಗೆ ಬಡವಾಗಿರುನೆಯಲ್ಲ!” ಎಂದು ವಿನಯವಾಗಿ ಕೇಳಿತು. ಆ ಕತ್ತೆಯು “ಏನು ಹೇಳಲಿ, ಅಳಿಯ, ನಮ್ಮ ಅಗಸನಿಗೆ ದಯೆಯೆಂಬುದು ಕಿಂಚಿತ್ತೂ ಇಲ್ಲ. ಭಾರ ಬೇಕಾದಾಗ ಹೊರೆಸುತ್ತಾನೆ.ಹುಲ್ಲು ಮಾತ್ರ ಒಂದು ಹಿಡಿಯೂ ಹಾಕುವುದಿಲ್ಲ. ಈ ಧೂಳುಕವಿದಿರುವ ಹುಲ್ಲು ತಿಂದರುಂಟು, ಇಲ್ಲದಿದ್ದರೆ ಇಲ್ಲ. ಹೀಗಿರಲು ಮೈಯಲ್ಲಿ ಪುಷ್ಟಿ, ಎಲ್ಲಿಂದ ಬಂದೀತು?” ಎಂದು ಅತ್ತು ಕೊಂಡಿತು.
“ಹಾಗಾದರೆ ಮಾವ, ಪಚ್ಚೆಯತುಂಡು ಎನ್ನುವ ಹಾಗಿರುವ ಗರಿಕೆ, ಒಂದು ನದಿಯ ತೀರದಲ್ಲಿದೆ. ನೀನು ಬಂದರೆ ನಾನೂ ಮುಗ್ಗುಲಲ್ಲಿಯೇ ಇರುತ್ತೇನೆ. ಇಬ್ಬರೂ ಮಾತುಕಥೆ ಆಡಿಕೊಂಡು ಸುಖವಾಗಿರಬಹುದು”
“ಅಯ್ಯೋ, ನೀನು ಹೇಳುವುದು ಸರಿ. ಆದರೂ ನಾವು ಊರಿನವರು. ಕಾಡಿನವರು ನಮನ್ನು ಕಂಡರೆ ಹೊಡೆದು ತಿನ್ನುವರು. ಹೀಗಿರಲು, ನಾವು ಅಲ್ಲಿಗೆ ಬಂದಿರುವುದು ಹೇಗೆ?”
“ಹಾಗಲ್ಲ. ಮಾವ, ನಾನಿಲ್ಲವೆ? ನಾನಿರುವಾಗ ಅಲ್ಲಿಗೆ ಬರುವ ಗಂಡಾದರೂ ಯಾವುದು? ಅಲ್ಲಿಗೆ ಇನ್ನು ಯಾರೂ ಬರುವ ಹಾಗಿಲ್ಲ. ಆಷ್ಟೇ ಅಲ್ಲ. ಅಗಸನ ಹತ್ತಿರ ಇರಲಾರದೆ ಬೇಸತ್ತು ಬಂದುಬಿಟ್ಟರುವ ಹೆಣ್ಣು ಕತ್ತೆಗಳೂ ಅಲ್ಲಿ ಮೂರು ಇವೆ. ಅವುತಿಂದು ತಿಂದು ಚೆನ್ನಾಗಿ ಕೊಬ್ಬಿವೆ. ಅವಕ್ಕೂ ಒಬ್ಬ ಗಂಡನು ಬೇಕು. ನೀನು ಬಂದರೆ ಅಲ್ಲಿಗೆ ಕರೆದುಕೊಂಡು ಹೋಗುವೆನು.
ಹೆಣ್ಣು ಎನ್ನುತ್ತಲೂ ಅದಕ್ಕೆ ಕಿವಿ ನೆಟ್ಟಗಾಯಿತು. “ಹಾಗಾದರೆ ನಡೆ. ಹೋಗೋಣ” ಎಂದು ಅದರ ಹಿಂದಯೇ ಹೊರಟೂ ಬಿಟ್ಟಿತು. ಅಷ್ಟಿಲ್ಲದೆ ಹೇಳಿದರೆ?
ಹೆಣ್ಣನು ಬಿಟ್ಟರೆ ಸುಧೆ (ಅಮೃತ) ಯಿಲ್ಲ; ವಿಷವಿಲ್ಲ 
ಹೆಣ್ಣೊಲಿದರೆ ಅದೆ ಸುಧೆ ಮುನಿದರೆ ವಿಷವೈ ॥ 
ಮುಟ್ಟದೆ ನೋಡದೆ, ಕೇಳಿದ ಮಾತ್ರದೊಳೇ ॥ 
ಆಸೆಯು ಜನಿಪುದು ಅಚ್ಚರಿಯಿನ್ನುಂಟೆ ? ॥ ೧೭ ॥ 
ಕಾಮನು ಎತ್ತಿದ ಗೆಲುನಿನ ಬಾವುಟ | 
ಕಾಮನಿಯೆಂಬುದ ನೋಡಾ | ಅದು | 
ಸುಖಸುಖವೆಲ್ಲವ ಸಾಧಿಸಿ ಕೊಡುವುದು | 
ಇದು ಬೇಡೆಂಬುವ ನಿಜದಿಂ ಮೂಢಾ | 
ನೋಡವನಂ, ತಲೆಬೋಳನು, ನಗ್ನನು೧ | 
ಕೆಂಬಟ್ಟೆಯ ಜಟಿಲನು ೨ ಕಾಪಾಲಕನು.೩ ॥ ೧೮ ॥ 
೧ ಬಟ್ಟೆಯಿಲ್ಲದವನು ೨ ಜಟೆಗಳನ್ನು ಬೆಳಸಿದವನು ೩ ಓಡುಹಿಡಿದುಕೊಂಡು ತಿರುಪಕ್ಕೆ ಬರುವವನು
ನರಿಯು. ಕತ್ತೆಯನ್ನು ಆ ಮಾತು ಈ ಮಾತು ಆಡುತ್ತ ಸಿಂಹನ ಬಳಿಗೆ ಕರೆದು ತಂದಿತು. ಮೇಲಕ್ಕೆ ಏಳಲಾರದೆ ಬಿದ್ದಿದ್ದ ಸಿಂಹವು ಏಳುವುದರೊಳಗಾಗಿ, ಅದರ ಗರ್ಜನೆಗೇ ಹೆದರಿ ಕತ್ತೆಯು ಓಡಿಹೋಯಿತು. ಅದನ್ನು ಕಂಡು ನರಿಯು “ಆಹಾ ಏನು ಹೇಳಲೋ? ಹತ್ತಿರಕ್ಕೆ ಬಂದ ಒಂದು ಕತ್ತೆಯನ್ನು ಹೊಡೆಯಲಾರದೆ ಬಿಟ್ಟುಬಿಟ್ಟೆ. ಇನ್ನು ನೀನು ನಿಜವಾಗಿಯೂ ಆನೆಯ ಮೇಲೆ-ಬೀಳುವುದುಂಟೆ?” ಎಂದು ಕೋಪದಿಂದ ಹೀನಾಯವಾಗಿ ನುಡಿಯಿತು.
ಸಿಂಹವು ಪೆಚ್ಚು ಪೆಚ್ಚಾಗಿ ನಗುತ್ತ “ನಾನು ಸಿದ್ಧವಾಗಿರಲಿಲ್ಲ ನಾನು ರೇಗಿ ಮೇಲೆ ಬಿದ್ದರೆ ಆನೆಯು ಕೂಡ ಏಟು ತಡೆಯ ಬಲ್ಲುದೆ? ಏನೋ ಆಗಿಹೋಯಿತು” ಎಂದಿತು. ನರಿಯು “ಇನ್ನು ಒಮ್ಮೆ ಆ ಕತ್ತೆಯನ್ನು ಇಲ್ಲಿಗೆ ಕರೆದು ತರುವೆನು. ಈಗಲೇ ಸಿದ್ಧವಾಗಿರು.” ಎಂದು ಹೇಳಿ ಮತ್ತೆ ಕತ್ತೆಯನ್ನು ಹುಡುಕಿಕೊಂಡು ಹೋಯಿತು.
ಕತ್ತೆಯೂ ಬಹಳ ದೂರ ಹೋಗಿರಲಿಲ್ಲ. ಅಲ್ಲಿಯೇ ಹತ್ತಿರದಲ್ಲಿಯೇ ಇತ್ತು. ನರಿಯನ್ನು ಕಂಡು “ಅಯ್ಯಾ, ಒಳ್ಳೆಯ ಕೆಲಸ ಮಾಡಿದೆ, ಅಲ್ಲಿದ್ದ ಆ ಮೃಗವು ಯಾವುದು? ಹಾಗೆ ಅಬ್ಬರಿಸುತ್ತಾ ಪಂಜ (ಐದು ಉಗರು ಇರುವ ಕೈ) ಗಳಿಂದ ಹೊಡೆಯುವುದಕ್ಕೆ ಬಂದಿತ್ತಲ್ಲಾ? ಏನೋ ಅದೃಷ್ಟ ಬದುಕಿ ಬಂದೆ” ಎಂದಿತು.
ಅದನ್ನು ಕೇಳಿ ನರಿಯು ಬಿದ್ದು ಬಿದ್ದು ನಕ್ಕಿತು: “ಅಯ್ಯೋ, ಮಾವ, ಏನು ಹೇಳಲಿ! ಆ ಹೆಣ್ಣುಕತ್ತೆ ನಿನ್ನನ್ನು ಕಂಡು ಆಲಿಂಗಿಸಬೇಕೆಂದು ಸಂಭ್ರಮದಿಂದ ಬಂದರೆ ನೀನದನ್ನು ಕಂಡು ಹೆದರಿ ಓಡಿಬಂದೆ. ಈಗತಾನೇ ಏನು? ಅದು ನೀನು ಬಂದು ಮದುವೆ ಯಾದರೆ ಸಮ. ಇಲ್ಲದಿದ್ದರೆ ಪ್ರಾಣ ಬಿಡುವೆನೆಂದು ಕುಳಿತಿದೆ. ನೀನು ಬರದಿದ್ದರೆ, ಪಾಪ, ಆ ಪ್ರಾಣಿಯು ನಿಜವಾಗಿ ನೀರಿನಲ್ಲಿಯೋ ಬೆಂಕಿಯಲ್ಲಿಯೋ, ಬಿದ್ದು ಪ್ರಾಣಬಿಡುವುದು. ನಿನಗೆ ಸ್ತ್ರೀ ಹತ್ಯ  ತಪ್ಪದೆ ಬರುವುದು. ಇಷ್ಟರ ಮೇಲೆ ನಿನ್ನಿಷ್ಟ” ಎಂದಿತು.
“ಹಾಗಾದರೆ ಏನು ಮಾಡಬೇಕು ಎನ್ನುತ್ತೀಯೆ?”
“ಮಾಡುವುದೇನು? ಹೋಗಿ ಮದುವೆ ಮಾಡಿಕೊಂಡು ಸುಖವಾಗಿರುವುದು. ಅಥವಾ ಅದು ಸತ್ತರೆ ಸಾಯಲಿ ಎಂದಿದ್ದು ಸ್ತ್ರೀ ಹತ್ಯೆ ಕಟ್ಟಿಕೊಳ್ಳುವುದು.”
ಕತ್ತೆಯು ಒಂದು ಗಳಿಗೆ ಯೋಚನೆಮಾಡಿ, ಮತ್ತೆ ನರಿಯ ಜೊತೆಯಲ್ಲಿ ಹೊರಟಿತು. ದೈವ ಗತಿಯನ್ನು ಯಾರು ಮೀರುವರು? ಕೇಳಿಲ್ಲವೆ?
ನೀಚಕರ್ಮ ಮಾಡಲಾರು ಸಿದ್ಧರು?
ತಿಳಿದರೇನು? ದೈವ ಮೋಸ ಮಾಳ್ಬುದು ॥
ಕತ್ತೆಯು ಹೋಗುವ ವೇಳೆಗೆ ಸಿದ್ಧವಾಗಿದ್ದ ಸಿಂಹವು ಅದನ್ನು ಒಂದೇ ಏಟಿಗೆ ಹೊಡೆದು ಹಾಕಿತು. “ಇದನ್ನು ಕಾಯ್ದು ಕೊಂಡಿರು. ನಾನು ನದಿಗೆ ಹೋಗಿ ಸ್ನಾನ ಮಾಡಿ ದೇವರ ಪೂಜೆ ತರ್ಪಣ೪ ಗಳನ್ನು ಮಾಡಿಕೊಂಡು ತಿನ್ನುವೆನು. ನಾ ತಿಂದ ಮೇಲೆ ನೀನೂ ತಿನ್ನುವೆಯಂತೆ!” ಎಂದು ಅದಕ್ಕೆ ನರಿಯನ್ನು ಕಾವಲಿಟ್ಟು ತಾನು ಹೋಯಿತು.
…………………..
೪ ವಂಶದ ಹಿರಿಯರಿಗೆ, ಪಿತೃಗಳು ಅವರ ಹೆಸರಿನಲ್ಲಿ ಎಳ್ಳು ನೀರೂ ಬಿಡುವುದು ತರ್ಪಣ. ಇದನ್ನು ದೇವರಪೂಜೆಯಂತೆ ನಿತ್ಯವೂ ಮಾಡಬೇಕು. ಮನುಷ್ಯನು ಹುಟ್ಟುವಾಗ ದೇವತೆಗಳು ಋಷಿಗಳು, ಪಿತೃಗಳು ಸಹಾಯಮಾಡುವರು. ಅದರಿಂದ ಅವರ ಆ ಸಾಲವನ್ನು ಪ್ರತಿಯೊಬ್ಬನೂ ತೀರಿಸಬೇಕು, ಜಪ ಹೋಮ ಪೂಜೆಗಳಿಂದ ದೇವತೆಗಳಸಾಲವು ತೀರುವುದು.
ಇತ್ತ ನರಿಯು ಚಪಲದಿಂದ ಆ ಕತ್ತೆಯ ಕಿವಿಗಳನ್ನೂ ಎದೆಯನ್ನೂ ತಿಂದು ಬಿಟ್ಟಿತು. ಸಿಂಹವು ಬಂದು. “ಇದೇನು ಹೀಗೆ ಮಾಡಿದೆ? ನಾನು ನಿನ್ನ ಎಂಜಲನ್ನು ತಿನ್ನಬೇಕೋ?” ಎಂದು ಅಬ್ಬರಿಸಲು, ನರಿಯು, “ಒಡೆಯ, ಹಾಗಲ್ಲ. ಈ ಕತ್ತೆಗೆ ಮೊದಲೇ ಕಿವಿಯೂ ಎದೆಯೂ ಇರಲಿಲ್ಲ. ಹಾಗೆ ಇದ್ದಿದ್ದರೆ ನಿನ್ನ ಅರ್ಭಟವನ್ನು ಕೇಳಿಯೂ ನಿನಗೆ ಹೆದರಿಯೂ ಮತ್ತೆ ನನ್ನ ಮಾತು ಕೇಳಿ ಇಲ್ಲಿಗೆ ಬರುತ್ತಿತ್ತೆ?” ಎಂದು ಕೇಳಿತು. ಸಿಂಹವೂ ಸರಿಸರಿಯೆಂದು ಅದನ್ನು ತಾನಷ್ಟು ತಿಂದು ನರಿಗೂ ಅಷ್ಟು ಕೊಟ್ಟಿತು.
ಅದರಿಂದ “ಮತ್ತೆ, ಸೋತು ಮಾತಿಗೆ ಬಂದು ಸತ್ತಿತು” ಎಂದು ಹೇಳಿದೆನು. ನೀನು ಮೂರ್ಖ, ಮೋಸಗಾರ, ಅಷ್ಟೇ ಅಲ್ಲ ನೀನು ಯುಧಿಷ್ಠಿರನಂತೆ ಜಂಭಕ್ಕೆ ಸತ್ಯ ನುಡಿದು ಕೆಟ್ಟೆ. ಕೇಳಿಲ್ಲವೆ?
ಲಾಭವ ಮರೆತು, ಜಂಭದಿ ಬೆರೆತು| 
ಸತ್ಯವನುಡಿದರೆ ಫಲವೇನಾಯ್ತು ||
ಆ, ಯುಧಿಷ್ಠಿರನಿಗೆ ಆದಂತೆ | ಇದ್ದಾಪದವಿಯು ತಪ್ಪೀತು ||೧೯||
ಮೊಸಳೆಯು ಕೇಳಿತು: “ಅದು ಹೇಗೆ?” ಕಪಿಯು
ಹೇಳಿತು :-
—–
ಶಾಸ್ತ್ರಗಳನ್ನು ಓದಿ ಇತರರಿಗೆ ಹೇಳುವುದರಿಂದ ಋಷಿಗಳ ಸಾಲವು ತೀರುವುದು. ಧರ್ಮ ಪುತ್ರನನ್ನು ಪಡೆದರೆ ಪಿತೃಗಳ ಸಾಲವು ತೀರುವುದು.
*****
ಯುಧಿಷ್ಠಿರನ ಕಥೆ ಓದಿ
Tagged:

Leave a Reply

Your email address will not be published. Required fields are marked *

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...