

ಪೀಠಿಕೆ
ದೇವತೆಗಳೆಲ್ಲರೂ ನಮ್ಮನ್ನು ಕಾಪಾಡಲಿ.
ನೀತಿಶಾಸ್ತ್ರವನ್ನು ಮಾಡಿದ ಮನು, ವಾಚಸ್ಪತಿ, ಶುಕ್ರ, ಪರಾಶರ, ವ್ಯಾಸ, ಚಾಣಕ್ಯ, ಮೊದಲಾದವರಿಗೆ ನಮಸ್ಕಾರವು.
ವಿಷ್ಣು ಶರ್‍ಮನು ಸಕಲ ಅರ್‍ಥ ಶಾಸ್ತ್ರದ ಸಾರವನ್ನೆಲ್ಲಾ ಚೆನ್ನಾಗಿ ಯೋಚನೆ ಮಾಡಿ, ಅದಷ್ಟನ್ನೂ ಈ ಐದುತಂತ್ರಗಳುಳ್ಳ ಮನೋಹರವಾದ ಶಾಸ್ತ್ರವನ್ನಾಗಿ ಮಾಡಿರುವನು .
ಕಥೆಯ ಮೊದಲು
‘ದಕ್ತಿಣದೇಶದಲ್ಲಿ ಮಹಿಲಾರೋಪ್ಯ ಎಂಬ ನಗರವೊಂದು ಉಂಟು. ಅಲ್ಲಿ ಅಮರಶಕ್ತಿಯೆಂಬ ರಾಜನು ಒಬ್ಬನು ಉಂಟು. ಆತನು ಯಾರು ಬಂದು ತನ್ನನ್ನು ಯಾಚಿಸಿದರೂ ಅವರಿಗೆ ಬೇಕಾದುದನ್ನು ಕೊಟ್ಟು ಕಲ್ಪವೃಕ್ಷ ಎನ್ನಿಸಿಕೊಂಡವನು. ಅನೇಕರು ರಾಜರು ಬಂದು ಆತನ ಪಾದಗಳಿಗೆ ನಮಸ್ಕಾರ ಮಾಡುವರು. ಆಗ ಅವರ ತಲೆಯಲ್ಲಿರುವ ಕಿರೀಟಗಳ ರತ್ನ ಕಾಂತಿಯು. ಆತನ ಪಾದಗಳ ಮೇಲೆಲ್ಲಾ ಹರಡುವುದು. ಆತನು ಎಲ್ಲಾ ವಿದ್ಯೆಗಳನ್ನು ಬಲ್ಲವನು.
ಆತನಿಗೆ ಮೂವರು ಮಕ್ಕಳು. ಬಹುಶಕ್ತಿ, ಉಗ್ರಶಕ್ತಿ, ಅನಂತ ಶಕ್ತಿ ಎಂದು ಅವರ ಹೆಸರು. ಅವರು ಬುದ್ಧಿಗೆಟ್ಟವರು ವಿವೇಕವಿಲ್ಲದವರು. ಅವರಿಗೆ ಓದು ಎಂದರೆ ಬೇಸರ. ಅದನ್ನು ಕಂಡು ಅವರ ತಂದೆಯು ಬಹಳ ಸಂಕಟಪಟ್ಟು ಮಂತ್ರಿಗಳನ್ನು ಕರೆಸಿಕೊಂಡು ಅವರಿಗೆ ಹೇಳಿದನು; “ಎಲೈ ಮಂತ್ರಿಗಳೇ ನಮ್ಮ ಮಕ್ಕಳು ವಿದ್ಯೆಯನ್ನು ಕಲಿಯದೆ ವಿವೇಕವೇ ಇಲ್ಲದವರಾಗಿರುವರು. ನೀವೂ ಇದನ್ನು ಬಲ್ಲಿರಿ! ಈ ಮಕ್ಕಳನ್ನು ಕಂಡು ನನಗೆ ಬೇಸರವಾಗಿರುವುದು; ಇಂತಹ ದೊಡ್ಡ ರಾಜ್ಯವೂ ನನಗೆ ಬೇಡವಾಗಿರುವುದು. ಕೇಳಿಲ್ಲವೇ?:-
ಹುಟ್ಟದವ ಸತ್ತವನು ಮೂರ್‍ಖನೆಂದು|
ಮಕ್ಕಳೊಳು ಮೂರ್‍ಜಾತಿ | ಮೂರೆಜಾತಿ ||
ಮೂರ್‍ಖನಳಿಸುವನು ಬದುಕಿರುವತನಕ |
ಮೊದಲಿನಿಬ್ಬರೆಮೇಲು ಮೂರ್‍ಖಗಿಂತ ||೧||
ಮಡದಿಮಕ್ಕಳ ಪಡೆಯದಿರೆ ಲೇಸು
ಆದ ಗರ್‍ಭವು ಜಾರುವುದೆ ಲೇಸು ||
ಆಗುತಲೆ ಮಗು ಹೋಗುವುದೆ ಲೇಸು |
ಆದ ಮಗು ಹೆಣ್ಣಾಗುವುದೆ ಲೇಸು ||೨||
ವಿದ್ಯೆಯೋದದೆ ಇರಲು ಮಗನೆಂದು ಆದವನು |
ರೂಪಗುಣ ಸಿರಿವಂತನಾದರೇನು ? ಹೋದರೇನು? ||೩||
ಕರುವನ್ನೂ ಹಾಕದೆ ಹಾಲನ್ನೂ ಕೊಡದೆ ಇರುವ ಹಸುವನ್ನು ಕಟ್ಟಿ ಕೊಂಡು ಮಾಡುವುದೇನು? ಹಾಗೆಯೇ ಮಗನು ವಿದ್ಯಾವಂತನೂ ತಾಯಿತಂದೆಗಳಲ್ಲಿ ಭಕ್ತಿ ಯುಳ್ಳವನೂ ಆಗದಿದ್ದರೆ, ಅವನಿಂದ ಆಗುವುದೇನು? ಮಗನು ಮೂರ್‍ಖನಾಗುವುದಕ್ಕಿಂತ ಸಾಯುವುದೇ ಲೇಸು.
ಗುಣವಂತರ ಗಣಿಸುವ ಎಡೆಯೊಳು |
ಗಣನೆಗೆ ಬಾರದ ಮಗನಿಂದೇನು? ||
ಅಂಥವ ಮಗನೆಂದಾಗುವುದಾದರೆ,|
ಮಡದಿಯು ಬಂಜೆಯೆ ಆದರೆ ತಪ್ಪೇನು? ||೪||
ಅದರಿಂದ, ಈ ಮಕ್ಕಳು ಬುದ್ಧಿನಂತರಾಗುವುದಕ್ಕೆ ಏನಾದರೂ ಉಪಾಯ ಮಾಡಿ. ನಮ್ಮ ಅರಮನೆಯಲ್ಲಿ ಐದುನೂರು ಜನ ಪಂಡಿತರು ಇರುವರು. ಅವರಲ್ಲಿ ಯಾರೂ ನಮ್ಮ ಆಸೆಯನ್ನು ಪೂರೈಸಿಕೊಡಲಾರರೇ? ವಿಚಾರಿಸಿ ನೋಡಿ” ಎಂದನು.
ಮಂತ್ರಿಗಳಲ್ಲಿ ಒಬ್ಬನು ಹೇಳಿದನು :- “ಅರಸಾ, ವ್ಯಾಕರಣ ಶಾಸ್ತ್ರವೊಂದನ್ನು ಓದಲು ಹನ್ನೆರಡುವರ್‍ಷಬೇಕು. ಅದಾದಮೇಲೆ ಮನು ಮೊದಲಾದವರು ಬರೆದಿರುವ ಅರ್‍ಥಶಾಸ್ತ್ರಗಳು, ಆಮೇಲೆ ಚಾಣಕ್ಯಾದಿಗಳು – ಬರೆದಿರುವ ಅರ್‍ಥಶಾಸ್ತ್ರ, ಅದರಮೇಲೆ ವಾತ್ಸ್ಯಾಯನಾದಿಗಳು ಬರೆದಿರುವ ಕಾಮಶಾಸ್ತ್ರ, ಹೀಗೆ ಧರ್‍ಮ, ಅರ್‍ಥ ಕಾಮಶಾಸ್ತ್ರಾದಿಗಳನ್ನು ಓದಿ ತಿಳಿದುಕೊಂಡರೆ ಅಗ ಮನಸ್ಸಿಗೆ ಜ್ಞಾನವು ಲಭಿಸುವುದು” ಎಂದನು. *
ಆಗ ಅಲ್ಲಿದ್ದ ಸುಮತಿಯೆಂಬ ಇನ್ನೊಬ್ಬ ಮಂತ್ರಿಯು ಹೇಳಿದನು: “ಮಾನವನು ಬದುಕಿರುವುದು ಕೆಲವು ಕಾಲಮಾತ್ರ. ಈ ಶಾಸ್ತ್ರಗಳಾದರೋ ಬಹಳಕಾಲ ಅಭ್ಯಾಸ ಮಾಡಬೇಕಾದವು. ಅದರಿಂದ ಈ ಶಾಸ್ತ್ರಗಳನ್ನೆಲ್ಲ ವಿಸ್ತಾರವಾಗಿ ಕಲಿಯಲು ಸಾಧ್ಯವಿಲ್ಲ”
* ಜೀವನದಲ್ಲಿ ನಾಲ್ಕು ಗುರಿಗಳು. ಮೊದಲನೆಯದು ಶಾಸ್ತ್ರವೂ ಹಿರಿಯರೂ ಹೇಳಿದಂತೆ ಬಾಳಿಕೊಂಡಿದ್ದು ಸದ್ಗತಿಯನ್ನು ಸಾಧಿಸುವುದು ಇದು ಧರ್‍ಮ. ಎರಡನೆಯದು ಲೋಕದಲ್ಲಿ ಗೌರವವನ್ನೂ ಹಣವನ್ನೂ ಸಂಪಾದಿಸುವುದು, ಇದು ಅರ್‍ಥ. ಮೂರನೆಯದು ಸಂಪಾದಿಸಿರುವುದನ್ನು ವಿವೇಕವಾಗಿ ವೆಚ್ಚಮಾಡಿ ಸುಖವಾಗಿರುವುದು: ಇದು ಕಾಮ. ಎಲ್ಲಕ್ಕಿಂತಲೂ ಹೆಚ್ಚಾಗಿರುವುದು ಒಂದು ಇದೆ ಎಂದು ನಂಬಿ, ಅದಕ್ಕಾಗಿ ಎಲ್ಲವನ್ನೂ ಬಿಟ್ಟು ಅದನ್ನೇ ಹಿಡಿಯುವುದು ಕೊನೆಯದು; ಇದುಮೋಕ್ಷ.
ಇದು ಒಂದೊಂದಕ್ಕೂ ಒಂದೊಂದು ಶಾಸ್ತ್ರವಿದೆ. ಮೋಕ್ಷ ಶಾಸ್ತ್ರವನ್ನು ವ್ಯಾಸರು ಬರೆದಿದ್ದಾರೆ.
ವಾಗಿ, ಇವರಿಗೆ ಕೊಂಚವಾದರೂ ತಿಳಿಯುವಂತೆ ಆ ಶಾಸ್ತ್ರಗಳನ್ನು ಚಿಕ್ಕುದು ಮಾಡಿ ಸಂಕ್ಷೇಪವಾಗಿ ಹೇಳಬೇಕು. ಕೇಳಿಲ್ಲವೆ?
ಕೊನೆಮೊದಲಿಲ್ಲದೆ ಶಾಸ್ತ್ರವಪಾರ|
ಆಯುವು ಅಲ್ಪ, ಅಡ್ಡಿಯು ಬಹಳ ||
ಹಂಸವು ನೀರಿಂ ಹಾಲನು ಕೊಂಬಂತೆ |
ಶಾಸ್ತ್ರದ ಸಾರವನದೆರಿಂ ಕೊಳ್ಳೈ ||೫||
ನಮ್ಮ ಅರಮನೆಯಲ್ಲಿ ವಿಷ್ಣು ವರ್‍ಮನೆಂಬ ಒಬ್ಬ ಬ್ರಾಹ್ಮಣ ನುಂಟು. ಆತನು ಎಲ್ಲಾ ಶಾಸ್ತ್ರಗಳನ್ನೂ ಬಲ್ಲವನು. ಜೊತೆಗೆ ಅತನ ಬಳಿ ಓದಿದವರೆಲ್ಲ ವಿದ್ಯಾವಂತರಾಗಿರುವರು. ಅದರಿಂದ ಆತನಿಗೆ ರಾಜಪುತ್ರರನ್ನು ಒಪ್ಪಿಸೋಣ. ಆತನು ಇವರನ್ನು ಆದಷ್ಟು ಬೇಗ ವಿದ್ಯಾವಂತರನ್ನು ಮಾಡುವನು.”
ರಾಜನಿಗೆ ಸುಮತಿಯ ಮಾತು ಹಿಡಿಯಿತು: ವಿಷ್ಣುಶರ್‍ಮನನ್ನು ಬರಮಾಡಿಕೊಂಡನು : ಆತನಿಗೆ ಎಲ್ಲವನ್ನೂ ಹೇಳಿ, ಕೊಂಡನು : ಎಲೈ ಭಗವಂತನೇ (ದೊಡ್ಡವರನ್ನು ಭಗನಂತನೆಂದು ಕರೆಯುವುದು ವಾಡಿಕೆ.) ಈ ನನ್ನ ಮಕ್ಕಳನ್ನು ಆದಷ್ಟು ಬೇಗ ಅರ್ಥಶಾಸ್ತ್ರದಲ್ಲಿ ಇವರನ್ನು ಬಿಟ್ಟರೆ ಇನ್ನಿಲ್ಲ ಎಂಬಂತೆ ಮಾಡಿಕೂಡಬೇಕು. ಇದು ತಾವು ನನಗೆ ಮಾಡುವ ಅನುಗ್ರಹವು: ತಾವು ಇಷ್ಟು ಉಪಕಾರಮಾಡಿದರೆ ನಾನು ತಮಗೆ ಒಂದುನೂರು ಗ್ರಾಮಗಳನ್ನು ಮಾನ್ಯವಾಗಿ ಕೊಡುವೆನು” ಎಂದು ಕೈ ಮುಗಿದನು.
ವಿಷ್ಣುಶರ್‍ಮನು ಹೇಳಿದನು: “ದೇವ, ನಾನು ಮಾಡುವ ಪ್ರಮಾಣವನ್ನು ಕೇಳೋಣವಾಗಲಿ. ತಾವು ಒಂದು ನೂರು ಗ್ರಾಮಗಳನ್ನು ಕೊಡುವೆನೆಂದರೂ ನಾನು ವಿದ್ಯೆಯನ್ನು ಮಾರುವುದಿಲ್ಲ. ಆದರೂ ಈ ತಮ್ಮ ಮಕ್ಕಳನ್ನು ಆರೇ ತಿಂಗಳಲ್ಲಿ ನೀತಿಶಾಸ್ತ್ರದಲ್ಲಿ ನಿಪುಣರನ್ನು ಮಾಡುವೆನು: ಹಾಗೆ ಮಾಡದಿದ್ದರೆ ನನ್ನ ಹೆಸರನ್ನು ಬಿಟ್ಟು ಬೇರೆ ಹೆಸರನ್ನು ಇಡಿ. ಅಷ್ಟೇನು? ನನ್ನ ಸಿಂಹಘರ್‍ಜನೆಯನ್ನು ಕೇಳಿರಿ ನಾನು ಹಣದ ಮೇಲಿನ ಆಸೆಯಿಂದ ಹೇಳುತ್ತಿಲ್ಲ. ನನಗೆ ಈಗ ಎಂಭತ್ತುವರ್‍ಷ ವಯಸ್ಸು. ‘ನನಗೆ ಎಲ್ಲಾ ಇಂದ್ರಿಯಗಳೂ ಬತ್ತಿಹೋಗಿವೆ. ನನಗೆ ಹಣದಿಂದ ಆಗಬೇಕಾದುದೇನು? ಆದರೂ, ತಮ್ಮ ಕೋರಿಕೆಯು ನೆರವೇರಲೆಂದು ಇದೊಂದು ವಿನೋದವನ್ನು ತೋರುವೆನು. ಶಾರದಾದೇವಿಯು ಮೆಚ್ಚಿಕೊಳ್ಳಲಿ. ಇವೊತ್ತು ಯಾವ ದಿವಸ ಎಂಬುದನ್ನು ಗುರುತುಹಚ್ಚಿಕೊಳ್ಳಿ. ಇನ್ನು ಆರು ತಿಂಗಳೊಳಗಾಗಿ ತಮ್ಮ ಮಕ್ಕಳನ್ನು ನೀತಿಶಾಸ್ತ್ರ ನಿಪುಣರನ್ನಾಗಿ ಮಾಡದಿದ್ದರೆ, ತಾವು ಮತ್ತೆ ನನ್ನ ಮುಖವನ್ನು ನೋಡಬೇಕಾಗಿಲ್ಲ.”
ರಾಜನಿಗೆ ಆಶ್ಚರ್‍ಯವಾಯಿತು “ಈ ಬ್ರಾಹ್ಮಣನು ಅಸಾಧ್ಯವಾದುದನ್ನು ಮಾಡುವೆನೆಂದು ಪ್ರತಿಜ್ಞೆ ಮಾಡುತ್ತಿರುವನು. ಇದನ್ನು ನಂಬುವುದೂ ಕಷ್ಟವಾಗಿದೆಯಲ್ಲ!” ಎಂದು ವಿಸ್ಮಯಪಡುತ್ತ ಮಂತ್ರಿಗಳೊಡನೆ ಆಲೋಚನೆಮಾಡಿ, ಸಂತೋಷವಾಗಿ ಮಕ್ಕಳನ್ನು ಆತನಿಗೆ ಒಪ್ಪಿಸಿ ನೆಮ್ಮದಿಯನ್ನು ಹೊಂದಿದನು. ವಿಷ್ಣುಶರ್‍ಮನೂ ಅವರನ್ನು ಕರೆದುಕೊಂಡು ಬಂದು ಒಂದು ಶುಭದಿನದಲ್ಲಿ ಗಣಪತಿ ಶಾರದೆ, ಗುರುಗಳನ್ನು ಪೂಜೆಮಾಡಿ ವಿದ್ಯೆಯನ್ನು ಕಲಿಸಲು ಆರಂಭಿಸಿದನು. ಮೊದಮೊದಲು ಅವರು ಓದಿಗೆ ಒಗ್ಗಲಿಲ್ಲ. ಹೊಸದಾಗಿ ಹಿಡಿದುತಂದು ಕಂಭಕ್ಕೆ ಕಟ್ಟಿದ ಕಾಡಾನೆಯಂತೆ ಒದ್ದಾಡಿದರು. ಕಡಿವಾಣಕ್ಕೆ ಸಿಕ್ಕಿಕೊಂಡ ತುಂಟಕುದುರೆಯಂತೆ ಕುಣಿದಾಡಿದರು. ಆಗ ವಿಷ್ಣುಶರ್ಮನು ಇರಲಿ ಎಂದು ಅವರಿಗೆ ಒಂದು ಕಥೆಯನ್ನು ಹೇಳಿದನು:
ಸೆರೆಯಾದ ನರಿಯ ಕಥೆ
ಒಂದು “ಅಡವಿಯಲ್ಲಿ ಒಂದು ನರಿ. ಅದು ಹಸಿದು ಆಹಾರವನ್ನು ಹುಡುಕಿಕೊಂಡು ತಿರುಗುತ್ತಿತ್ತು. ಅಲ್ಲಿ ಒಂದು ಮೂಲೆಯಲ್ಲಿ ಒಂದು ಎತ್ತು ಸತ್ತುಬಿದ್ದಿತ್ತು. ನರಿಯು ಅದನ್ನು ಕಂಡು ಅದರ ಹಿಂದಿನಿಂದ ಹೊಟ್ಟೆಯೊಳಕ್ಕೆ ನುಗ್ಗಿ ಅಲ್ಲಿದ್ದುದನ್ನು ತಿನ್ನುತ್ತ ನಿಂತು ಬಿಟ್ಟಿತು. ಆ ಹೆಣವು ಅಲ್ಲಿಯೇ ಒಣಗಿ ಹೊರಗೆ ಹೋಗುವುದಕ್ಕೆ ಇದ್ದ ತೂತು ಮಚ್ಚಿಹೋಗಿ ಅದಕ್ಕೆ ಅಲ್ಲಿಯೇ ಸೆರೆಯಾಯಿತು.
ಆ ವೇಳೆಗೆ ಕೆಲವರು ಬೇಡರು ಬೇಟೆಗೆಂದು ನಾಯಿಗಳೊಡನೆ ಅಲ್ಲಿಗೆ ಬಂದು ಆ ಭಾರಿಯ ಎತ್ತನ್ನು ಕಂಡು ಅದರ ಚರ್‍ಮಕ್ಕಾಗಿ ಅದನ್ನು ಕತ್ತರಿಸಬೇಕು ಎಂದು ಹೊರಟರು. ಆಗ ಒಳಗಿದ್ದ ನರಿಯು “ಕೆಟ್ಟೆನು, ಏನಾದರೂ ಉಪಾಯ ಮಾಡಬೇಕು” ಎಂದುಕೊಂಡು ಕೂಗಿತು: “ಅಯ್ಯೋ, ಪಾಪಿಗಳಿರಾ, ನಾನೊಬ್ಬ ತಾಪಸನು, ಕಾರಣಾಂತರದಿಂದ ಇಲ್ಲಿರುವೆನು. ನೀವು ಈ ಪಶುವಿನ ಪೃಷ್ಟಕ್ಕೆ ಬಿಸಿ ನೀರು ತಂದು ಎರೆದು ದೂರಹೋಗಿ ನಿಂತು ನಮಗೆ ದಾರಿ ಕೂಡ ಬೇಕು. ಇಲ್ಲದಿದ್ದರೆ ಶಾಪ ಕೊಡುವೆನು” ಎನಲು, ಅವರು-ಹೆದರಿ, ಹಾಗೆಯೇ ಮಾಡಿದರು.
ಆದರೂ ನರಿಗೆ ಹೊರಗೆಹೋಗುವುದಕ್ಕೆ ನಾಯಿಗಳಿವೆಯಿಂದು ದಿಗಿಲು. ಅದರಿಂದ ಮತ್ತೆ “ಎಲೈ ಮ್ಲೇಚ್ಛರೆ, ನಾವು ವೇಷಾಂತರದಲ್ಲಿರುವೆವು. ಅದರಿಂದ ನಿಮ್ಮ ಈ ನಾಯಿಗಳನ್ನು ಹಿಡಿದುಕೊಳ್ಳಿ” ಎಂದಿತು. ಅವರು ಅಪ್ಪಣೆಯೆಂದು ಹಾಗೆಯೇ ಮಾಡಲು, ಆ ನರಿಯು ಎತ್ತಿನ ಹಿಂಭಾಗದಿಂದ ಹೊರಟುಹೋಗಿ ಗುಡ್ಡವನ್ನು ಸೇರಿ ಕೊಂಡಿತು.
ಈ ಕಥೆಯನ್ನು ಕೇಳಿ ರಾಜಕುಮಾರರು ಇಂತಹ ಇನ್ನೊಂದು ಕಥೆಯನ್ನು ಹೇಳಿ ಎಂದು ಬಲವಂತಮಾಡಿದರು. ಆಗ ಈ ಹುಡುಗರನ್ನು ದಾರಿಗೆ ತರಲು ಇದೇ ಸರಿಯಾದ ಹಾದಿಯೆಂದು “ಹಾಗಾದರೆ, ನೀವು ಈ ಕಥೆಯನ್ನು ಮತ್ತೆ ಹೇಳಿ. ನಿಮಗೆ ಇಂತಹ ಕಥೆಗಳನ್ನು, ಬೇಕಾದಷ್ಟು ಹೇಳುವೆನು” ಎಂದನು. ಅವರೂ ಆಗಲೆಂದು ಮೂವರೂ ಸೇರಿಕೊಂಡು ಒಬ್ಬರಿಗೊಬ್ಬರು ಹೇಳಿಕೊಂಡು ಕಥೆಯನ್ನು ಚೆನ್ನಾಗಿ ಗಟ್ಟಿಮಾಡಿಕೊಂಡು ಬಂದು ಹೇಳಿದರು. ವಿಷ್ಣು ಶರ್‍ಮನು ಇನ್ನು ಚಿಂತೆಯಿಲ್ಲ; ಗೆದ್ದಂತಾಯಿತು” ಎಂದು ನೀತಿ ಶಾಸ್ತ್ರದ ಸಾರವನ್ನೆಲ್ಲಾ, ನೋಡದೆ ಮಾಡಿದರೆ, ಸಿಕ್ಕಿದ್ದು ಹೋಯಿತು, ಒಡೆಯುವುದು, ಸಾಧಿಸುವುದು, ಕಟ್ಟುವುದು, ಎಂಬ ಐದು ತಂತ್ರಗಳನ್ನಾಗಿ ರಚಿಸಿ, ಅವರಿಗೆ ಕಥೆಗಳಾಗಿಯೇ ಅದಷ್ಟನ್ನೂ ಹೇಳಿದನು. ಅವರೂ ಅದನ್ನು ಚೆನ್ನಾಗಿ ಕಲಿತು, ಆರು ತಿಂಗಳಲ್ಲಿ ನೀತಿಶಾಸ್ತ್ರದಲ್ಲಿ ನಿಪುಣರಾದರು. ಅಂದಿನಿಂದಲೂ ಈ ಪಂಚತಂತ್ರವೆಂಬ ಈ ನೀತಿಶಾಸ್ತ್ರವು ಬಾಲಕರಿಗಾಗಿಯೇ ಭೂಮಿಯಲ್ಲಿ ಮೆರೆಯುತ್ತಿರುವುದು. ಇದರ ವಿಚಾರವಾಗಿ ಬಹುವಾಗಿ ಹೇಳಲೇಕೆ?
ತಪ್ಪದೆ ನಿತ್ಯವು ಓದಿದರಿದನು |
ನೀತಿಯಶಾಸ್ತ್ರವನಿದಕೇಳಿದರು ||
ಸೋಲೆಂಬುದ ತಾನವಗಿಲ್ಲ ||
ಇಂದ್ರನೆ ಬಂದರು ಭಯವಿಲ್ಲ ||೬||
ಇಂತಿದು ಪೂರ್ವ ಪೀಠಿಕೆಯು
*****