ಒಂದಾನೊಂದು ಕಾಡಿನಲ್ಲಿ ಸಿಂಹ ದಂಪತಿಗಳು ಇದ್ದವು. ಸಿಂಹಿಯು ಒಂದು ಸಲ “ಎರಡು ಮರಿಗಳನ್ನು ಈದಿತು. ಸಿಂಹವು ದಿನವೂ ಹೋಗಿ ಬೇಟೆಯಾಡಿ ಆ ತಾಯಿ ಮಕ್ಕಳಿಗೆ ಮಾಂಸವನ್ನು ತಂದುಕೊಡುತ್ತಿತ್ತು. ಒಂದು ದಿನ ಬೇಟೆಯಿಂದ ಬರುವಾಗ ಒಂದು ನರಿಯ ಎಳೆಯ ಮರಿಯು ಸಿಕ್ಕಲು, ಸಿಂಹವು ಅದನ್ನು ತಂದು ಹೆಂಡತಿಗೆ ಕೊಟ್ಟಿತು. ಸಿಂಹಿಯು ಅದನ್ನು ಕೊಲ್ಲದೆ, ಅದಕ್ಕೂ ಹಾಲು ಕೊಟ್ಟು ಸಾಕಿತು. ಆಮರಿಗಳೊಡನೆ ಅದೂ ಬೆಳೆಯಿತು.
ಅವು ಒ೦ದು ದಿನ ಅರಣ್ಯದಲ್ಲಿ ಅಲೆಯುತ್ತಿರುವಾಗ ಅವುಗಳ ಎದುರಿಗೆ ಒ೦ದು ಆನೆಯು ಬಂತು. ಸಿಂಹದ ಮರಿಗಳು ಅದನ್ನು ಕಂಡು ರೇಗಿ ಅದರ ಮೇಲೆ ಬೀಳಲು ಹೋದುವು. ನರಿಯ ಮರಿಯು “ಬೇಡ ಬೇಡ” ಎಂದು ತಡೆಯಿತು; ಅವು ನಿಲ್ಲದಿರಲು ತಾನು ಮನೆಯ ಕಡೆಗೆ “ಓಡಿತು. ಇದು ಓಡುತ್ತಲೂ ಅವು ಏನೋ ಎಂತೋ ಎಂದು ಅದರ ಹಿಂದೆಯೇ ಬಂದುಬಿಟ್ಟುವು. ಕೇಳಿಲ್ಲವೆ?
ಉತ್ಸಾಹಿ ಧೀರನಿಂದುತ್ಸಾಹ ಸೇನೆಗೆಲ್ಲ |
ಸೋತೊಬ್ಬನೋಡಲ್ಕೆ ಸೋತಂತೆ ಸೇನೆಯೆಲ್ಲ ॥೨೧॥
ಮನೆಗೆ ಬಂದಮೇಲೆ ಸಿಂಹದ ಮರಿಗಳೆರಡೂ ತಾಯಿ ಬಳಿಯಲ್ಲಿ “ಅಮ್ಮಾ, ಅಣ್ಣ ಈ ವೊತ್ತು ಹೆದರಿ ಓಡಿ ಬಂದುಬಿಟ್ಟ” ಎಂದು ಹಾಸ್ಯಮಾಡಿ ನಗುತ್ತ ನರಿಯ ಮರಿಯು ಮಾಡಿದುದನ್ನೆಲ್ಲಾ ಹೇಳಿದುವು. ಅದನ್ನು ಕೇಳಿ ನರಿಯ ಮರಿಗೆ ಕೋಪ ಬಂತು. ಅವರನ್ನು ಗದರಿಸಿಕೊಂಡು ಬಯ್ಯಿತು.
ಸಿಂಹಿಯು ನರಿಯ ಮರಿಯನ್ನು ಬೇರೆಯಾಗಿ ಕರೆದು “ಮಗು, ನೀನು ಹೀಗೆಲ್ಲ ಹಾರಾಡಬಾರದು. ನಿನ್ನ ತಮ್ಮಂದಿರು ಅವರು” ಎನ್ನಲು, ಅದು ಇನ್ನೂ ರೇಗಿ ಹಾರಾಡಿತು. “ನಾನೇನು ಇವರಿಗಿಂತ ಕಡಿಮೆಯೋ? ನನಗೆ ಶೌರ್ಯವಿಲ್ಲವೋ? ರೂಪವಿಲ್ಲವೋ? ವಿದ್ಯೆಯಿಲ್ಲವೋ? ನನ್ನನ್ನು ಇವರು ಏಕೆ ಹಾಸ್ಯ ಮಾಡುವುದು?” ಎಂದು ಕೂಗಿತು. ಆಗ ಸಿಂಹಿಯು ನಗುತ್ತ ಹೇಳಿತು:-“ನೀನು ಎಲ್ಲವೂ ಅಹುದು. ಅದರೂ ನಿನ್ನವರು ಆನೆಯನ್ನು ಕೊಂದವರಲ್ಲ. ನೀನು ನರಿಯ ಮಗನು. ನಾನು ನಿನ್ನನ್ನು ಕಾಪಾಡಿದೆ ಅಷ್ಟೆ? ನನ್ನ ಮರಿಗಳಿಗೆ ನೀನು ನರಿಯೆಂಬುದು ಇನ್ನೂ ತಿಳಿಯದು. ಈಗಲೇ ಹೊರಟು ಹೋಗಿ ನಿನ್ನವರ ಜೊತೆ ಸೇರಿಕೊ. ಇಲ್ಲದಿದ್ದರೆ ಇವರ ಏಟು ತಿಂದು ಸತ್ತೀಯೆ” ಎಂದು ಹೇಳಿ ಅದನ್ನು ಅಲ್ಲಿಂದ ಕಳುಹಿಸಿ ಕೊಟ್ಟಿತು.
ಅದರಂತೆಯೇ ನೀನೂ ಈ ರಾಜಪುತ್ರರು ನೀನು ಕುಂಬಾರನೆಂದು ತಿಳಿಯುವುದಕ್ಕಿಂತ ಮುಂಚೆಯೇ ಓಡಿಬಿಡು.ಇಲ್ಲವಾದರೆ ಇವರ ಕೈಗೆ ಸಿಕ್ಕಿ ಬದುಕವುದೇ ಕಷ್ಟವಾದೀತು.” ಎಂದು ಹೇಳಲು ಅವನೂ ಹೋಗಿ ಬದಕಿದನು.
“ಎಲೆ ಮೊಸಳೆ, ನೀನು ನಿಜವಾಗಿ ಮೂರ್ಖನು. ಹೆಂಗಸಿನ ಮಾತು ಕೇಳಿ ಕೆಟ್ಟೆ. ಕಥೆಯನ್ನು ಕೇಳಿಲ್ಲವೇ?
ಹೆಣ್ಣು ಮಾಡೆನೆ ಗಂಡು ಮಾಡನದೇನ?
ಕುದುರೆಯಿಲ್ಲದ ಅರಸು ಕೆನೆಯುವ ॥ ಪರ್ವ
ಕಾಲವೆನ್ನದೆ ಮಂತ್ರಿ ಬೋಳಿಪ ತಲೆಯನು ॥
ಮೊಸಳೆಯು ಅದು ಹೇಗೆ ಎನ್ನಲು ಕಪಿಯು ಹೇಳಿತು: –
*****
ಅರಸು ಮಂತ್ರಿಗಳ ಕಥೆ ಓದಿ