ಒಂದಾನೊಂದು ಊರಿನಲ್ಲಿ ಒಬ್ಬ ಕುಂಬಾರನಿದ್ದನು. ಅವನ ಹೆಸರು ಯುಧಿಷ್ಠಿರ. ಅವನು ಒಂದಾನೊಂದು ದಿನ ಬಹು ವೇಗವಾಗಿ ಓಡಿಬರುತ್ತಾ ಒಡೆದ ಮಡಕೆಯ ತುಂಡಿನ ಮೇಲೆ ಬಿದ್ದು ತಲೆಯನ್ನು ಒಡೆದುಕೊಂಡನು. ಮೈಯೆಲ್ಲಾ ರಕ್ತವಾಗಿ ಹೇಗೆ ಹೇಗೋ ಮನೆಗೆ ಬಂದು ಸೇರಿದನು. ಗಾಯಕ್ಕೆ ಎನೋ ಅಪಥ್ಯವಾಗಿ, ಅದು ಕೀವು ಕಟ್ಟಿಕೊಂಡು ವಾಸಿಯಾಗುವುದೇ ಅಸಾಧ್ಯವಾಗಿ, ಕೊನೆಗೆ ಹೇಗೆ ಹೇಗೋ ವಾಸಿಯಾಯಿತು.
ಒಂದು ಸಲ ಅವನಿದ್ದ ದೇಶದಲ್ಲೆ ಕ್ಷಾಮವು ಬರಲು, ಅವನು ದೇಶಾಂತರ ಹೋಗಿ ಒಬ್ಬ “ರಾಜನ ಬಳಿ ಸೇವಕನಾದನು. ಆ ರಾಜನು ಅವನ ಹಣೆಯಲ್ಲಿರುವ ಭಾರಿಯ ಕಲೆಯನ್ನು ನೋಡಿ “ಇವನು ವೀರಪುರುಷನಿರಬೇಕು. ಇವನ ಹಣೆಯ ಮೇಲಿನ ಕಲೆಯು ಮಖಾಮಖಿ ಯುದ್ಧಮಾಡಿದಾಗ ಆದದ್ದು ಇರಬೇಕು.” ಎಂದುಕೊಂಡು ಅವನಿಗೆ ಬೇಕಾದ ಮಾನ ಮರ್ಯಾದೆಗಳನ್ನು ಮಾಡಿ ರಾಜಪುತ್ರರ ಬಳಿ ಇಟ್ಟುಕೊಂಡಿದ್ದನು.
ಒ೦ದು ದಿನ ಅರಸನು ವೀರ ಸಂಭಾವನೆಯನ್ನು ಕೊಡಲು ಎಲ್ಲರನ್ನೂ ಕರೆಸಿದನು. ಆನೆ ಕುದುರೆ ಮೊದಲಾದುವುಗಳೂ ವೀರ ಪುರುಷರೂ ಬಂದು ನಿಂತಿದ್ದರು. ಆಗ ಅಗಸನು ಕುಂಬಾರನನ್ನು ಕರೆದು, “ಎಲೈ ರಾಜಪುತ್ರ, ನಿನ್ನ ಹೆಸರೇನು? ನೀನು ಯಾವ ಜಾತಿಯವನು? ಯಾವ ಯುದ್ಧದಲ್ಲಿ ಏಟು ತಿಂದು ನಿನಗೆ ಈ ಹಣೆಯು ಹೀಗಾಯಿತು?” ಎಂಡು ಕೇಳಿದನು. ಕುಂಬಾರನು “ದೇವ, ಇದು ಶಸ್ತ್ರದ ಗಾಯವಲ್ಲ. ಯುಧಿಸ್ಠಿರನೆಂಬ ಕುಂಬಾರನು ನಾನು. ನಮ್ಮ ಮನೆಯಲ್ಲಿ ಎಷ್ಟೋ ಓಡುಗಳು ಇದ್ದವು. ಒಂದು ದಿನ ನಾನು ಓಡಿಬರುತ್ತಾ ಒಂದು ಓಡಿನ ಮೇಲೆ ಬಿದ್ದೆನು. ಅದು ತಗಲಿ ಇಷ್ಟು ಗಾಯವಾಯಿತು” ಎಂದು
ಹೇಳಿದನು.
ರಾಜನು ಅದನ್ನು ಕೇಳಿ. “ಮೋಸವಾಯಿತು,” ಎಂದು ಕೊಂಡು ಮೊದಲು ಇವನನ್ನು ಹೊರಕ್ಕೆ ತಳ್ಳಿ ಎಂದನು. ಕುಂಬಾರನು, “ಅರಸಾ, ತಡೆ, ತಡೆ, ಯುದ್ಧ ಬರಲಿ, ನನ್ನ ಕೈ ತೋರಿಸುವೆನು.” ಎನ್ನಲು ಅರಸನು ಹೇಳಿದನು: “ಆಹಾ, ಅಲ್ಲವೇ? ನೀನು ಸರ್ವ ಗುಣ ಸಂಪನ್ನನು. ಆದರೂ ನಮಗೆ ಬೇಡ, ಕೇಳಲಿಲ್ಲವೇ?”
ಶೂರನೆ ಅಹುದು, ಸುಂದರನಹುದು, ಪಂಡಿತನಹುದು ॥
ಆದರು ಮಗನೆ, ನಿನ್ನವರಾನೆಯ ಕೊಂದವರಲ್ಲಾ ॥ ೨೦ ॥
ಕುಂಬಾರನು “ಅದು ಹೇಗೆ?” ಎನ್ನಲು : ಅರಸನು ಹೇಳಿದನು:-
*****
ನರಿಯ ಮರಿಯ ಕಥೆ ಓದಿ.