
ಒರತೆಗಳು ಬೆರೆಯುವುವು ಹೊಳೆಯ ಬಳಿ ಸಂದು;
ಹೊಳೆ ಹರಿದು ಕಡಲಲ್ಲಿ ಕೂಡುವುವು ಬಂದು;
ಗಗನದೊಳು ಗಾಳಿಗಳು ಹಗಲೆಲ್ಲ ಬೆಂದು
ಸುಳಿಯುವುವು ಬಯಸಿಕೊಂಡೊಂದನೊಂದು,
ಧರಣಿಯೊಳಗಾವುದೂ ಒಂಟಿಯಿಹುದಿಲ್ಲ-
ಸೆಳೆವೊಂದು ದಿವ್ಯವಿಧಿಯಿಂದ ಜಗವೆಲ್ಲ
ಬೇರೆ ಇರಲಾರದೆಯೆ, ಮೀರದೆಯೆ, ಸೇರುವುವು;
ನೀನೇಕೆ ಬೇರೆ ಇರುವೆ? – ಎಲೆ ಚೆನ್ನೆ,
ನೀನೇಕೆ ಬೇರೆ ಇರುವೆ?
ಎಳಬಿಸಿಲು ನೆಲವನ್ನು ತಬ್ಬುವುದು ತೆಗೆದು;
ಮಳೆಮುಗಿಲ ಮುಟ್ಟುವುವು ಬೆಟ್ಟಗಳು ನೆಗೆದು;
ಬೆಳದಿಂಗಳಿಳಿತಂದು ಸೋಂಕುತಲೆ ಹೊಮ್ಮಿ
ಸೆಳೆದಲೆಗಳಪ್ಪುವುವು ಹಿಗ್ಗಿ ಚಿಮ್ಮಿ.
ಸೊಕ್ಕುವುವು ಹೂವುಗಳು ಬಿಂಕವನು ಬಿಟ್ಟು,
ಅಕ್ಕತಂಗಿಯರಂತೆ ಮುತ್ತುಗಳ ಕೊಟ್ಟು,
ಯಾರೆತ್ತ ಮುತ್ತುಗಳ ಬೀರಿಕೊಳಲೇನು ಫಲ,
ನೀನೆನಗೆ ಬೀರದಿರುವೆ – ಎಲೆ ಚೆನ್ನೆ
ನೀನೆನಗೆ ಬೀರದಿರುವೆ!
*****
SHELLY : Love’s Philosophy














