
೧
ನೋಡಿಲ್ಲಿ ಕನ್ನಡದ ಸಾಹಿತ್ಯದುದ್ಯಾನ
ಸೊಂಪಾಗಿ ಬೆಳೆದಿಹುದು ಹತ್ತಾರು ಶತಮಾನ!
ಕವಿಕೃಷೀವಲರಿಲ್ಲಿ ಬೆಳೆದಿಹರು ಬಹುಕಾಲ
ಕಾವ್ಯತರುಗಣ ಕವನಲತೆ ಕುಂಜಗಳ ಜಾಲ
ಕನ್ನಡದ ನುಡಿ ಧೀರರಾಜರಾಶ್ರಯದಲ್ಲಿ
ಉನ್ನತಿಯ ಪಡೆದಿಹುದು ಉದ್ಯಾನ ಜಗದಲ್ಲಿ!
ಕಳೆಹುಟ್ಟಿ ಬೆಳೆದಿರಲು ಉದ್ಯಾನವನದಲ್ಲಿ
ವ್ಯಾಕರಣ ಕುಂಟೆಯನು ಹೂಡಿದರು ಕಳೆಯಲ್ಲಿ
ಛಂದಸ್ಸು ಹಲುಬೆಯನು ಹೊಡೆದಿಹರು ಹೊಲದಲ್ಲಿ
ಕಳೆಗಿಂತ ಬೆಳೆಮುಂದೆ ಹುಲುಸಾಯ್ತು ಎಲ್ಲೆಲ್ಲು!
ನೃಪತುಂಗ ಚಕ್ರೇಶ ಮಾಡಿದನು ದಾರಿಯನು
ಮುಂದೆ ಬರುವರಿಗೊಂದು `ಕವಿರಾಜಮಾರ್ಗ’ವನು
೨
ಅಲ್ಲಿಂದ ಕಾವ್ಯಸಸಿ ಹಾಲ್ತುಂಬಿ ಹುಲುಸಾಯ್ತು
ಜೈನಕವಿಗಣ ಸೇರಿ ಕೈನೀರ ನೆರೆದಾಯ್ತು
ಪಂಪರನ್ನರ ಪೊನ್ನಜನ್ನರ ಕೃಷಿಯನಾಡು
ಸೊಂಪು ಕಾವ್ಯದ ಬೆಳೆಗೆ ಇಂಬಾಯ್ತು ಈ ಬೀಡು
ಸಂಸ್ಕೃತದ ಪುಣ್ಯತರವಾಹಿನಿಯ ಹರಿಸಿದರು
ಸಾಹಿತ್ಯದುದ್ಯಾನ ತರುಲತೆಗೆ; ಬರಿಸಿದರು
ರಾಜರಾಜರನು ಘನದೇವದೇವರನಲ್ಲಿ
ವನಕೇಳಿ ಜಲಕೇಳಿಯಾಣೆ ಸಾಹಿತ್ಯದಲ್ಲಿ!
ಪಾಮರರು ನಿಂತಾಯ್ತು ಮುಳ್ಳು ಬೇಲಿಯ ಹಿಂದೆ
ಬಿಗುಮಾನ ಬಲವಾಯ್ತುು ಬಡಜನರ ಕಣ್ಮುಂದೆ!
೩
ಮುಂದೆ ಬಂದರು ವೀರಶೈವ ಕವಿಕೃಷೀವಲರು
ಹಂಪೆ ಹರಿಹರ ರಾಘವಾಂಕಾದಿ ಬುಧಜನರು
ಬೆಳೆಸಿದರು ಚಿರಭಕ್ತಿ ಕಾವ್ಯತರುಗಳನಿಲ್ಲಿ
ರಚಿಸಿದರು ನೀತಿಮಾರ್ಗವನು ಸಾಹಿತ್ಯದಲ್ಲಿ.
ಬಸವಣ್ಣ ಮಹದೇವಿ ಜಸವೆತ್ತ ಅಲ್ಲಮರು
ಲಾವಣ್ಯತರ ‘ವಚನ’ ಲತೆಗಳನು ಬೆಳೆಸಿದರು.
ಸಾಂಗತ್ಯ ಚೌಪದಿ ತ್ರಿಪದಿ ವರಷಟ್ಟದಿಯು
ಎಂದೆಂಬ ಕಾವ್ಯ ಸಸ್ಯಗಳಿಗಾಯ್ತು ಪಾತಿಯು.
೪
ವೀರನಾರಣ ರುದ್ರಭಟ್ಟಾರ್ಯ ಲಕ್ಷ್ಮೀಶ
ಕವಿಕೃಷೀವಲರಿಲ್ಲಿ ಪಡೆದ ಕವಿತಾವೇಶ
ಮೂಡಿಹುದು ಧೃವಕಾವ್ಯತರುವೃಂದ ರೂಪದಲಿ
ತಣಿಸುತ್ತ ರಸಿಕರನು ಕಾವ್ಯರಸಪಾನದಲಿ.
ಕನಕ ವಿಟ್ಟಲ ವ್ಯಾಸ ವರದಾಸಗಣವಿಲ್ಲಿ
ಭಕ್ತಿಲತೆಯನು ನೆಟ್ಟಿಹರು ತಣಿದು ಮನದಲ್ಲಿ.
೫
ಅಂದಿನಿಂ ಎಂದೆಂದು ಕನ್ನಡದ ರಾಜಗಣ
ಮಾಡಿಹುದು ಕನ್ನಡದ ಉದ್ಯಾನಕಾವರಣ.
ರಾಷ್ಟ್ರಕೂಟರು ಧೀರಚಾಲುಕ್ಯ ಹೊಯ್ಸಳರು
ವಿಜಯನಗರ ಸಾಮ್ರಾಜ್ಯ ಧುರಧೀರ ಭೂಪಾಲರು
ಮೈಸೂರು ಯದುವಂಶ ಮಹರಾಜ ಪುಂಗವರು
ಮನವಿಟ್ಟು ಮಾಡಿಹರು ಈ ನುಡಿಯ ಶೃಂಗಾರ.
ಕನ್ನಡದ ಉದ್ಯಾನ ವರ್ಧಿಸಲಿ ಇಳೆಯಲ್ಲಿ
ಕಾವ್ಯತರು ಕವನಲತೆ ಎಂದೆಂದು ಬೆಳೆದಿಲ್ಲಿ.
*****
















