ಶಿಷ್ಯನೊಬ್ಬ ಗುರುವನ್ನು ಹುಡುಕಿಹೊರಟಿದ್ದ. ವನದಲ್ಲಿ ಬಂದಾಗ ದೊಡ್ಡ ವೃಕ್ಷಗಳನ್ನು ನೋಡಿದ. ಶಾಖೆ ಶಾಖೆಯಲ್ಲಿ ಗೊಂಚಲು ಗೊಂಚಲು ಎಲೆ, ಹೂ, ಕಾಯಿ, ಫಲಗಳು. ಕಾಂಡದಲ್ಲಿ ಅತೀವ ಧೃಡತೆ, ಬೇರಿನಲ್ಲಿ ಅಸಾಧ್ಯಬಿಗಿ, ಹಿಡಿತ, ಜೀವಸಂಚಾರ ಎಲ್ಲವನ್ನೂ ಗ್ರಹಿಸಿದ, ಅಗಾಧವಾದ ಸಂತಸದಿಂದ ನಮಿಸಿ “ವೃಕ್ಷಗುರುವೇ ನಮಃ ಎಂದು ಧ್ಯಾನ ಮಾಡಿ ಮುಂದೆ ನಡೆದ.”
ಹೋಗುವ ದಾರಿಯಲ್ಲಿ ಒಂದು ಬಿದಿರಿನ ತೋಪು ಸಿಕ್ಕಿತು. ಬಳಲಿದ್ದ ಶಿಷ್ಯ, ವಿರಮಿಸಲು ಬಿದಿರಿನ ತೋಪಿನಲ್ಲಿ ಕುಳಿತ. ಒಂದು ಚಿಕ್ಕ ಬಿದಿರನ್ನು ಮುರಿದು ಏಳು ರಂಧ್ರಮಾಡಿ ಊದತೊಡಗಿದ. ನಾದದ ಸಪ್ತ ಸ್ವರ ತರಂಗದಲ್ಲಿ ಮುಳುಗಿದ. ನಾದ ಬ್ರಹ್ಮನಲ್ಲಿ ಲೀನನಾಗಿ ನಮಿಸಿ ಮುಂದೆ ಸಾಗಿದ.
ಝುಳು ಝುಳು ಎಂದು ನದಿಯೊಂದು ಹರಿಯುತಿತ್ತು. ಬೆಟ್ಟ ಗುಡ್ಡ ಧುಮುಕಿ, ಕಣಿವೆ ಕಂದರ ದಾಟಿ ಬರುತ್ತಿದ್ದ ನದಿಯ ದಡದಲ್ಲೇ ನಡೆದು ಬಂದ ಶಿಷ್ಯ. ಬಾಯಾರಿ ಬಳಲಿರಲು ಬೊಗಸೆಯಲ್ಲಿ ನದಿಯ ನೀರನ್ನು ಕುಡಿದು “ದಾಹ ತೀರಿಸಿದ ಗುರುವೆ ನಿನಗೆ ನದಿಯೆ ನಮೋ” ಎಂದು ಮುನ್ನಡೆದ.
ಹಾಗೇ ಬರುತ್ತಾ, ಒಂದು ಬೆಟ್ಟದ ಎದುರಲ್ಲಿ ಬಂದು ನಿಂತ. ಹರಿದಾಡುತ್ತಿದ್ದ ಮನವನ್ನು ಬೆಟ್ಟದ ದೃಢತೆಯಲ್ಲಿ ನಿಲ್ಲಿಸಿ ಧ್ಯಾನಗೈದ. ತನ್ನ ಅಂತರಂಗದಲ್ಲಿ ಜ್ಯೋರ್ತಿಗುರುವನ್ನು ಕಂಡ. ಕಣ್ಣು ತೆರೆದಾಗ ಬೆಟ್ಟದಡಿ ವಾಸವಾಗಿದ್ದ ಗುರುಗಳು ಬಂದು
“ನೀ ಇಲ್ಲಿಗೇಕೆ ಬಂದಿರುವೆ?” ಎಂದು ಕೇಳಿದರು.
“ನಾನು ಗುರುವನ್ನು ಹುಡುಕಿ ಬಂದಿರುವೆ” ಎಂದ ಶಿಷ್ಯ.
“ನೀನು ಬರುವ ಹಾದಿಯಲ್ಲಿ ನೀ ಸಂಧಿಸಿದವರಾರು?” ಎಂದು ಕೇಳಿದರು ಗುರುಗಳು. “ವೃಕ್ಷಗುರು, ಬಿದಿರಕೊಳಲಗುರು, ನದಿಯಗುರು ಕೊನೆಗೆ ಇಲ್ಲಿ ಧ್ಯಾನದಲ್ಲಿ ಅಂತರಂಗದ ಜ್ಯೋತಿರ್ ಗುರವನ್ನು ಕಂಡೆ” ಎಂದು ಹೇಳಿದ ಶಿಷ್ಯ. ಬಹಿರಂಗದಲ್ಲಿರುವ ಗುರುವನ್ನು, ನಿನ್ನಲ್ಲೇ ಇರುವ ಅಂತರಂಗದ ಗುರುವನ್ನು ನೀ ಕಂಡು ಕೊಂಡ ಮೇಲೆ, ಸರ್ವಂಗುರುಮಯಂ ಜಗತ್ ಆಗಿರುವಾಗ ಮತ್ತೆ ಏಕೆ ಗುರವನ್ನು ಹುಡುಕಿ ಹೊರಟಿರುವೆ?” ಎಂದರು ಗುರುಗಳು. ಇದನ್ನು ಅರಿವಿಗೆ ತಂದ ಗುರುಗಳ ನುಡಿಗೆ ನಮಿಸಿ ಶಿಷ್ಯ ಮುನ್ನಡೆದ.
*****

















