ಲವಲವಿಕೆಯಲಿ ಮಿಂಚಿ
ಮುಚ್ಚಾಟವಾಡುತಿಹ ಬಹು ರೂಪಿಯೇ |
ಅಮೃತದಿರವೇ ನನ್ನ
ಮರೆವಿಲ್ಲದರಿವಿನಲಿ ಇಹೆ ಸೀಪಿಯೇ ||
ನೆಕ್ಕಿದೆನ್ನನು ನಿನ್ನ
ವಿದ್ಯುತ್ ಕಟಾಕ್ಷದಲಿ ಅಗ್ನಿರುಚಿಯೇ |
ನಿನ್ನ ಕುಲುಮೆಯ ಕಾವು
ಇಲ್ಲ ಇಲ್ಲದ ಠಾವು ನಿತ್ಯ ಶುಚಿಯೇ ||
ಕ್ಷಣವಿಲ್ಲದೀಕ್ಷಣವೆ
ಲವಮಾತ್ರ ಸ್ಪರ್ಶದಲಿ ನೀ ಹನಿಸುವೆ |
ಹಸಿರಿಸುವೆ ಕುಸುರಿಸುವೆ
ಮರಣ ಮರಣದ ಮಧ್ಯೆ ನೀ ಜನಿಸುವೆ ||
ಲಾವಣ್ಯದುರುಪಿನಲಿ
ಮನದ ಗಾಯವು ಮಾಯ್ದು ಗುರುತಾಯಿತು
ಏಸು ಮಾತನ್ನಾಡಿ
ಬಳಲಿದರು ಮೌನವೇ ಕುರಿತಾಯಿತು ||
ನಿನ್ನ ಲವದಲ್ಲಿ ರವ
ನವನವತೆಯಲಿ ಧ್ವನಿಸಿ ಛಂದವಾಯ್ತು |
ಕಲ್ಪಿಸಿದ ಕರುವಿನಲಿ
ಏನೊ ಎರಕವ ಹೊಯ್ದು ಅಂದವಾಯ್ತು |
*****

















