ಎಲ್ಲಿ ನೋಡಲಲ್ಲಿ ಕಣ್ಣು
ಕಾಣುತಿಹೆದು ಕೆಮ್ಮಣ್ಣು!
ಸುತ್ತ ಮುತ್ತ ನೋಡು ಮಿತ್ರ
ಪ್ರಕೃತಿಯಾ ಕೃತಿ ವಿಚಿತ್ರ!
ತನ್ನ ರೂಪ ತಾನೆ ನೋಡಿ
ಮೆಚ್ಚಿ ಮೋದದಿಂದ ಹಾಡಿ
ಸುರಿಸುತಿಹಳೊ ಪ್ರಕೃತಿಮಾತೆ
ಕಣ್ಣನೀರನೆಂಬೊಲೊರತೆ-
ಯೊಂದು ನೋಡು ಬೀಳುತಿಹುದು!
ನೊರೆಯ ನಗೆಯು ಏಳುತಿಹುದು!
ಇದೋ! ನುಣುಪುಕಲ್ಲ ನಲ್ಲ
ಮುತ್ತನಿಡಲು ನಿಲಲು ಗಲ್ಲ
ತಿರುಗಿಸಿದೊಲು, ಕೊಂಚ ಬಳುಕಿ,
ಅದರ ಆಸೆ ಮುರಿಯಲಳುಕಿ
ಮತ್ತೆ ಬಂಡೆಯನೇ ತಬ್ಬಿ-
ತೆನ್ನೆ ಬಳಸಿರುವುದು ಉಬ್ಬಿ!
ಇದರ ಗಾನವೆಷ್ಟು ಇಂಪು!
ಹಾ! ಕೊರೆವುದಿದರ ತಂಪು!
“ಆ ಮಂಜುಗಡ್ಡೆಯು
ಬಿಸಿಯು” ಎಂಬಸಡ್ಜೆಯು!
ಕೆಳಗೆ ಕಮರಿಯಾಳದಲ್ಲಿ-
ಅಲ್ಲ-ಪಾತಾಳದಲ್ಲಿ
ಕೊಂಚ ನೋಡು!
ಬಗ್ಗಿ ನೋಡು!
ಪ್ರಕೃತಿಯೆಂತು ವಿವಿಧ ವರ್ಣ
ಮೇಳದಿಂದರೊಂದವರ್ಣ-
ನೀಯಮಾದ ಚಿತ್ರವನ್ನು
ರಚಿಸುತಿಹಳು! ರಾಸಿ ಹೊನ್ನು
ಸುರಿದರೂ ಇಂಥ ಚಿತ್ರ
ದೊರೆವುದೇನು ನೋಡು ಮಿತ್ರ!
ಅದೋ! ಅಲ್ಲಿ ದೂರದಲ್ಲಿ
ಭೂಮಿ ಬಾನು ಸೇರುವಲ್ಲಿ
ಹೊಂಬಿಸಿಲಿಗೆ ಮಂಜಕೂಡಿ
ಪ್ರಕೃತಿಯೊಡನೆ ಸ್ಪರ್ಧೆ ಹೂಡಿ
ಸಪ್ತವರ್ಣಧನುವನೆಂತು
ಧರಿಸುತಿರುವನಹಾ ಕಂತು!
ಇತ್ತ ಕೆಳಗೆ ನಮ್ಮ ಎದುರು
ರಾಸಿ ಕೆಂಪು ಬಣ್ಣದದಿರು
ಕಾಣುತಿಹುದು ಚುಕ್ಕಿಯಂತೆ
ಸುತ್ತಲಿರಲು ಹಸಿರ ಸಂತೆ!
“ಚೆಲುವೆ ವಸುಂಧರೆಯ ನೆತ್ತಿ-
ಯೊಳಗಿಹುದೋ ಒಂದು ಮತ್ತಿ
ಪಚ್ಚೆಹಸಿರ ಸೀರೆಯುಟ್ಟ
ತಿರೆಯ ಹೆಣ್ಣ ಮೂಗಬೊಟ್ಟ-
ನಾಳಿ ಮೆರೆಯುತಿರುವ ಕೆಂಪೊ
ಕುಂಕುಮದ ಬೊಟ್ಟ ಕೆಂಪೊ”
ಎಂದು ಮನವು ಭ್ರಮಿಪುದು
ಪ್ರಕೃತಿಗಿಂತು ನಮಿಪುದು!
ಅದಂತಿರಲಿ ಇತ್ತ ಬಂದು
ಕಾಲನೆಂತೊ ಕಿತ್ತು ತಂದು
ಸೊಬಗ ಮಡಿಲನೆಂತೊ ಬಿಟ್ಟು
ಮೌನವನ್ನು ಬೀಳ್ಕೊಟ್ಟು
ಯಂತ್ರ ಜಗದಿ ಮನವಿಡು
ಮೂಗ ಮೇಲೆ ಬೆರಳಿಡು!
ಸಮುದ್ರದೊಳೆ ಮರೆಯಾಗುವ ಹಡಗೊಲು
ಬೆಳಗೊಳು ಕ್ಷೀಣಿಪ ನಕ್ಷತ್ರದವವೊಲು
ರೈಲ ಹಿಂದಿರುವ ಕೆಂಬೆಳಕಿರುಳೊಳು
ಮೆಲುಮೆಲ್ಲನೆಯೇ ನಶಿಸುವ ತೆರದೊಳು
ಬಾನಿಗಳೆಲ್ಲಾ ತೆರಳಿದವು
ಅದಿರನು ಸುರಿಯುತ ಮರಳಿದವು!
ಸೋಲುವೆ ಬಾಯೊಳೆ ಬಣ್ಣಿಸಲೆಳಸಿ!
ಏನುಪಯೋಗವು ಉಹಪಮೆಯ ಬೆಳಸಿ?
ಇತ್ತ ಬುವಿಯ ಬಸಿರ ಬಗೆಯೆ
ಚೆಲುವನೆಲ್ಲ ಕಿತ್ತೊಗೆಯೆ
ರಕ್ತ ಬಸಿಯುತಿರುವುದು
ಎನ್ನೆ ಕುಸಿಯುತಿರುವುದು
ಕೆಮ್ಮಣ್ಣು ರಾಸಿಯಾಗಿ
ಕಣ್ಣಿರಲು ರೋಸಿಹೋಗಿ
ಅಯ್ಯೊ! ನಾನೆಂಥ ಮರುಳ
ಆ ತೊರೆಯ ಹಾಡ ತಿರುಳ
ಕೊಂಚವೂ ತಿಳಿಯದೆ
ಪ್ರಕೃತಿ ಸುರಿವ ದುಃಖ ಬಾಷ್ಪ-
ವನ್ನೆ ಆನಂದ ಬಾಷ್ಪ-
ವೆಂದು ಏನು ತಿಳಿಯದೆ,
ಇದರ ತಂಪು
ಸಾವ ತಂಪು
ಎಂಬುದನ್ನೆ ತಿಳಿಯದೆ
ಏನೇನೊ ಗಳಹಿದೆ!
ಇಂತು ಮನವು ವಿವಿಧ ಭಾವ-
ಗಳಿಗೆ ಇಂಬನೀಯುತಿರೆ
ಬೆಟ್ಟವಿಳಿಯುತಿದ್ದೆ ವಾವು
ರೈಲೆಮಗೇ ಕಾಯುತಿರೆ!
*****

















