ಸಿಕ್ಕಿದ್ದು ಹೋಯಿತು
ಹೊಸಗನ್ನಡ ಪಂಚತಂತ್ರದಲ್ಲಿ “ಸಿಕ್ಕಿದ್ದು ಹೋಯಿತು” ಎಂಬ ಮೊದಲನೆಯ ತಂತ್ರವು.
ಮಾಡುತಿರುವ ಕಾರ್‍ಯದಲ್ಲಿ| ಬುದ್ದಿ ಲೋಪವಾಗದಿರಲು||
ನಿಜದಿ ವಿಪದ ದಾಂಟುವಂ | ಕಪಿಯು ಬದುಕಿ ಬಂದ ತೆರದೊಳು ||೧||
ಮೊಸಳೆಯ ಕಥೆ
ಆದು ಹೇಗೆಂದರೆ : “ಒಂದಾನೊಂದು. ಕಡಲ ದಡದಲ್ಲಿ ಒಂದು ದೊಡ್ಡ ನೇರಳೆಯ ಮರವುಂಟು. ಅದು ಸದಾಫಲವು ಎಂದರೆ ಯಾವಾಗಲೂ ಹಣ್ಣುಳ್ಳದು. ಅದರಲ್ಲಿ ರಕ್ತಮುಖನೆಂಬ ಕಪಿಯು ವಾಸಮಾಡಿಕೊಂಡಿತ್ತು. ಒಂದು ದಿವಸ ಕರಾಲಮುಖ ನೆಂಬ ಮೊಸಳೆಯು ಸಮುದ್ರದಿಂದ ಬಂದು ಅದೇ ಮರದ ಕೆಳಗೆ ಮಲಗಿತ್ತು. ಅದನ್ನು ಕಂಡು ಕಪಿಯು “ಎಲೈ, ನೀನು ನನಗೆ ಅತಿಥಿಯು. ಅದರಿಂದ ನಾನು ಕೊಡುವ ಅಮೃತದಂತಿರುವ ಈ ನೇರಳೆಯ ಹಣ್ಣುಗಳನ್ನು ತಿನ್ನು. ಕೇಳಿಲ್ಲವೆ:-
ಪ್ರಿಯನಾಗಲಿ ಅಪ್ರಿಯದಾಗಲಿ|
ಊಟದವೇಳೆಗೆ ಬಂದವನು||
ಪಂಡಿತನಾಗಲಿ ಮೂರ್‍ಖನೆ ಇರಲಿ|
ಅತಿಥಿಯು ಅವನಾಸ್ವರ್‍ಗಕೆ ಸೇತು ||೨||
ಅತಿಥಿಯು ಬಂದರೆ ಕೇಳದಿರು|
ಕುಲಗೋತ್ರದ ಸುದ್ದಿಗಳ ||
ವಿದ್ಯೆಯ ಶೀಲವನೇ ನೊಂದ|
ಹೇಳಿದನಾ ಮನು ಹೀಗೆ ||೩||
ದೂರದಿಂದ ದಣಿದು ಬಂದ|
ಅತಿಥಿಯನ್ನು ಪೂಜಿಸಲ್ಕೆ||
ತಪ್ಪದಾತ ಪಡೆವ ನೋಡು|
ಪರಮ ಗತಿಯನು ||೪||
ಅತಿಥಿ ಪೂಜೆ ಪಡೆಯದೆ |
ಹೊರಟು ಹೋದ ಮನೆಯನು ||
ದೇವ ದೇವರೆಲ್ಲರು
ಪಿತೃಗಳೊಡನೆ ಬಿಡುವರು ||೫||
ಎಂದು ಹೇಳಿ ಕಪಿಯು ಹಣ್ಣುಗಳನ್ನು ಕೊಟ್ಟಿತು. ಅದೂ ತಿಂದು ಆ ಕಪಿಯೊಡನೆ ಅಷ್ಟು ಹೊತ್ತು ಸುಖವಾಗಿದ್ದು ಮತ್ತೆ ಕಡಲಿಗೆ ಹೊರಟು ಹೋಯಿತು.
ಹೀಗೆಯೇ ದಿನವೂ ಅಗುತ್ತ ಬರಲು ಕಪಿಗೂ ಮೊಸಳೆಗೂ ಸ್ನೇಹವು ಬಲಿಯಿತು. ಅವೆರಡೂ ದಿನವೂ ಕುಳಿತು ಯಾವ ಯಾವದೇ ಶಾಸ್ತ್ರಗಳ ವಿಚಾರವಾಗಿ ಮಾತು ಆಡುವುವು. ಬೇಕಾದ ಹಾಗೆ ನೇರಿಳೆಯ ಹಣ್ಣನ್ನು ತಿನ್ನುವುವು. ಮೊಸಳೆಯು ತಾನು ತಿಂದು ಮಿಕ್ಕ ಹಣ್ಣುಗಳನ್ನು ಮನೆಗೆ ತೆಗೆದುಕೊಂಡು ಹೋಗಿ ತನ್ನ ಹೆಂಡತಿಗೂ ಕೊಡುವುದು. ಒಂದು ದಿವಸ ಮೊಸಳಮ್ಮನು ಮೊಸಳಪ್ಪ ನನ್ನ “ನಾಥ, ಅಮೃತದಂತಿರುವ ಈ ಹಣ್ಣುಗಳು ನಿನಗೆ ಎಲ್ಲಿ ಸಿಕ್ಕುತ್ತವೆ?” ಎಂದು ಕೇಳಿತು. ಮೊಸಳಪ್ಪನು “ಪ್ರಿಯೆ ನನಗೆ ಬಹಳ ಬೇಕಾದ ಸ್ನೇಹಿತನಾದ-ರಕ್ತ ಮುಖನೆಂಬ ವಾನರನಿರುವುದು. ಅದು ಈ ಹಣ್ಣುಗಳನ್ನು ಪ್ರೀತಿಯಿಂದ ಕೊಡುವುದು.” ಎಂದು ಹೇಳಿತು.
ಹಾಗಾದರೆ ಆ ಕಪಿಯು ಯಾವಾಗಲೂ ಇಂತಹ ಅಮೃತ ದಂತಹ ಹಣ್ಣುಗಳನ್ನೇ ತಿನ್ನುವುದೇನು? “ಹಾಗಾದರೆ ಅದರ ಎದೆಯೂ ಅಮೃತಮಯವೇ ಆಗಿರಬೇಕು. ಹೆಂಡತಿಯೆಂದು ನನ್ನಿಂದ ನಿನಗೆ ಏನಾದರೂ ಆಗಬೇಕು ಎನ್ನುವ ಹಾಗಿದ್ದರೆ, ಅದರ ಎದೆಯನ್ನು ತಂದುಕೊಡು. ಅದನ್ನು ತಿಂದು ನಾನು ಮುಪ್ಪು ಮರಣಗಳು ಇಲ್ಲದವಳಾಗಿ ನಿನ್ನೊಡನೆ ಸಂಸಾರಮಾಡಿಕೊಂಡಿರುವೆನು.”
“ಹಾಗೆಲ್ಲಾ ಎನ್ನಬಾರದು. ಆ ಕಪಿಯು ಈಗ ನಮಗೆ ಒಡಹುಟ್ಟಿಗಿಂತ ಹೆಚ್ಚಾಗಿರುವನು. ಜೊತೆಗೆ ಹಣ್ಣುಗಳನ್ನು ಕೊಡುವನು. ಅದರಿಂದ ಅವನನ್ನು ಕೊಲ್ಲುವುದಕ್ಕಾಗುವುದಿಲ್ಲ: ಕೊಲ್ಲ ಕೂಡದು. ಅದರಿಂದ ಈ ಕೆಟ್ಟಾಸೆಯನ್ನು ಬಿಡು. ಕೇಳಿಲ್ಲವೆ?
ತಾಯ ಮಗನಾದ ತಮ್ಮನೊಬ್ಬ|
ಒಳ್ಮಾತು ತಂದ ಅಣ್ಣನೊಬ್ಬ ||
ಆ ತಮ್ಮಗಿಂತ ಈಯಣ್ಣನೇ |
ಹೆಚ್ಚೆಂದು ಬಲ್ಲವರು ಒಪ್ಪುವರು ||೬||
“ನೀನು ಯಾವಾಗಲೂ ನನ್ನ ಮಾತನ್ನು ತಳ್ಳಿಹಾಕಿಲ್ಲ. ಅಂತಹ ನೀನು ಈಗ ಹೀಗೆ ಹೇಳುತ್ತಿರುವುದನ್ನು ನೋಡಿದರೆ ಅದು ವಾನರವಲ್ಲ: ವಾನರಿಯಾಗಿರಬೇಕು. ಆದರ ಮೇಲೆ ನಿನಗೆ ಮೋಹ ಬಂದಿದೆ. ಅದಕ್ಕಾಗಿಯೇ ನೀನು ಬೆಳಗಿನಿಂದ ಸಂಜೆಯವವರೆಗೂ ಅಲ್ಲಿಯೇ ಇರುತ್ತೀಯೆ. ನನಗೆ ತಿಳಿಯಿತು. ನೀನು ನನಗೆ ಮೋಸ ಮಾಡುತ್ತಿದ್ದೀಯೆ.”
ಮೊಸಳೆಯು ಹೆಂಡತಿಯ ಕಾಲಿಗೆ ಬಿದ್ದಿತು: ಅವಳನ್ನು ಮಗ್ಗುಲಲ್ಲಿ ಕುಳ್ಳಿರಿಸಿಕೊಂಡಿತು. ಕೋಪಗೊಂಡಿರುವ ಮಡದಿಯನ್ನು ಕೈ ಮುಗಿದು ಕೇಳಿಕೊಂಡಿತು. ಅದೂ ಕೋಪದಿಂದ ಕಣ್ಣಲ್ಲಿ ನೀರು ಸುರಿಸುತ್ತಾ “ನೀನು ಹೇಳುವುದು ನಿಜವಾಗಿದ್ದರೆ” ಆ ವಾನರಿಯಲ್ಲಿ ನಿನಗೆ ಮೋಹವದಿಲ್ಲದಿದ್ದರೆ, ಅದನ್ನು ಹಿಡಿದು ತರಬಾರದು? ಅದು ಗಂಡು ಕಪಿಯಾದರೆ ಅದಕೂ ನಿನಗೂ ಅದೆಂತಹ ಸ್ನೇಹ? ಅಷ್ಟೇನು? ಅದರ ಎದೆಯನ್ನು ನಾನು ತಿನ್ನಬೇಕು. ಇಲ್ಲದಿದ್ದರೆ ನಾನು ಹೀಗೆಯೇ ಇಲ್ಲೇ ಮಲಗಿ ಬಿಡುತ್ತೇನೆ. ತಿಂದರೆ ಅದನ್ನು ತಿನ್ನ ಬೇಕು: ಇಲ್ಲದಿದ್ದರೆ ಸತ್ತರೂ ಸರಿಯೇ!” ಎಂದು ಮೊಸಳಮ್ಮನು ಮಲಗಿಯೇ ಬಿಟ್ಟಿತು.
ಅದನ್ನು ಕಂಡು ಮೊಸಳೆಗೆ ಬಹು ಯೋಚನೆಯಾಯಿತು. “ಏನು ಮಾಡಲಿ? ಆ ಕಪಿಯನ್ನು ಕೊಲ್ಲುವುದು ಹೇಗೆ?” ಎಂದು ಬಹುವಾಗಿ ಯೋಚನೆಮಾಡಿ ಕೊನೆಗೆ ಕಪಿಯ ಬಳಿಗೇ ಹೋಯಿತು. ಕಪಿಯೂ ಬಹಳಹೊತ್ತು ಮಾಡಿಕೊಂಡು ಬಂದು ಎನೊ ಯೋಚನೆ ಯಲ್ಲಿರುವ ಆ ಮಿತ್ರನನ್ನು ಕಂಡು ವಿಶ್ವಾಸದಿಂದ ಕೇಳಿತು: “ಮಿತ್ರ, ಇದೇಕೆ ಇಷ್ಟು ಹೊತ್ತಾಯಿತು? ಈ ದಿನ ಏಕೆ ಹೀಗೆ ದುಗುಡದಲ್ಲಿರುವೆ? ಏಕೆ ಸಂತೋಷವಾಗಿ ಮಾತನಾಡದಿರುವೆ? ಏಕೆ ಸುಭಾಷಿತಗಳನ್ನು ಹೇಳುವುದಿಲ್ಲ?”
ಮೊಸಳೆಯ ಕಣ್ಣಿನಲ್ಲಿ ನೀರಿಟ್ಟುಕೊಂಡು ಹೇಳಿತು: “ಮಿತ್ರ, ಮನೆಯಲ್ಲಿ ‘ಮಡದಿಯು ಮನಸೋಇಚ್ಛೆ’ ಯಾಗಿ ಮಾತನಾಡಿ ಬಿಟ್ಟಳು. ನಿಷ್ಠುರ ಮಾಡಿಬಿಟ್ಟಳು. ಹೋಗು, ಕೃತಘ್ನ ನನಗೆ ಮೊಕವನ್ನು ತೋರಿಸಬೇಡ. ನಿನಗೆ ನಾಚಿಕೆಯಾಗುವುದಿಲ್ಲವೆ? ನಿನ್ನ ಮಿತ್ರನು ಕೊಟ್ಟದನ್ನು ತಿಂದು ತಿಂದು ಕುಳಿತಿರುವೆಯಲ್ಲ. ಅವನನ್ನು ಒಂದು ದಿನವಾದರೂ ಮನೆಗೆ ಊಟಕ್ಕೆ ಕರೆದೆಯಾ? ಇಂತಹ ನಿನಗೆ ನರಕವಲ್ಲದೆ ಬೇರೆ ಗತಿಯೂ ಉಂಟೆ? ಕೇಳಿಲ್ಲವೆ?
ಹಾರುವನ ಕೊಂದವ, ಹೆಂಡವನು ಕುಡಿದವ,
ವ್ರತವ ಬಿಟ್ಟವ, ಕದ್ದವ, ನೀಗುವರು ಪಾಪವ,
ಉಪಕಾರ ಮರೆತವ ನಿಜದಿ ನಾಶನ ಹೊಂದುವ ||೭||
ಅದರಿಂದ ಆ ನಮ್ಮ ಭಾವನನ್ನು ಈ ದಿನ ಮನೆಗೆ ಕರೆದು ಕೊಂಡು ಬಾ ಇಲ್ಲದಿದ್ದರೆ ನಿನ್ನನ್ನು ಕೊಂದು ನಾನೂ ಸಾಯುತ್ತೇನೆ ಎಂದಳು. ಅದರಿಂದ ಅದೇ ಮಾತನ್ನು ಯೋಚಿಸುತ್ತಾ ಬಂದೆನು. ಹೀಗೆ ನಿನಗಾಗಿ ಜಗಳವಾಡುತ್ತಾ ಇಷ್ಟು ಹೊತ್ತಾಯಿತು. ನೀನು ದೊಡ್ಡ ಮನಸ್ಸುಮಾಡಿ ನಮ್ಮ ಮನೆಗೆ ಬರಬೇಕು. ಅಲ್ಲಿ ನಿಮ್ಮ ಅತ್ತಿಗೆಯು ನಿನಗಾಗಿ ಕಾಲುಮಣೆಯನ್ನು ಹಾಕಿ, ಬಾಗಿಲಿನಲಿ ವಂದನ ಮಾಲೆ (ತೋರಣ) ಯನ್ನು ಕಟ್ಟಿ ನಿನಗೆ ಕೊಡಬೇಕೆಂದು ವಸ್ತ್ರ ಭೂಷಣಗಳನ್ನೆಲ್ಲಾ ಸಿದ್ಧ ಮಾಡಿಕೊಂಡು, ಬಂದಾನೇ ಎಂದು ಕುಳಿತಿದ್ದಾಳೆ.” ಎಂದಿತು.
ಕಪಿಯು ಹೇಳಿತು: ಮಿತ್ರ, ಅತ್ತಿಗೆಯು ಸರಿಯಾಗಿ ಹೇಳಿದಳು. ನಿಜ.
ಕೊಡುವುದು ಕೊಂಬುದು ಗುಟ್ಟಿನು ಪೇಳ್ವುದು ಕೇಳುವುದು ||
ಉಂಬುದು ಉಣಿಪುದು ಎಂಬಿವು ಪ್ರೀತಿಯ ಲಕ್ಷಣವು ||೮||
ಆದರೆ ಒಂದೇ ಕಷ್ಟ! ನಾವು ಕಾಡಿನವರು, ನೀವು ನೀರಿನವರು. ನೀರಿನಲ್ಲಿರುವ ನಿಮ್ಮ ಮನೆಗೆ ನಾವು ಬರುವುದೆಂತು? ಅದರಿಂದ ನೀನು ದೊಡ್ಡಮನಸ್ಸುಮಾಡಿ ಆಕೆಯನ್ನು ಇಲ್ಲಿಗೇ ಕರೆದು ಕೊಂಡುಬಾ. ನಾನು ಆಕೆಗೆ ನಮಸ್ಕಾರವ ಮಾಡಿ ಆಕೆಯ ಆಶೀರ್ವಾದವನ್ನು ಪಡೆಯುವದು.”
ಮೊಸಳೆಯು ಹೇಳಿತು: “ಗೆಳೆಯ, ಸಮುದ್ರ ಮಧ್ಯದಲ್ಲಿ ದೊಡ್ಡದಾಗಿ ಸೊಗಸಾದ ಒಂದು ಮರಳು ದಿಣ್ಣೆ ಯಿದೆ. ಅಲ್ಲಿ ನಮ್ಮ ಮನೆಯಿರುವುದು. ನನ್ನ ಬೆನ್ನಿನಮೇಲೆ ಕುಳಿತುಕೋ. ಸುಖವಾಗಿ, ನಿನಗೇನು, ಭಯವಿಲ್ಲದಂತೆ ಕರೆದುಕೊಂಡು ಹೋಗುವೆನು.
ಕಪಿಗೆ ಆ ಮಾತನ್ನು ಕೇಳಿ ಸಂತೋಷವಾಯಿತು. ಹಾಗಾದರೆ ತಡವೇಕೆ? ನಡೆ ಹೋಗೋಣ” ಎಂದು ಹಾರಿ ಅದರ ಬೆನ್ನಿನ ಮೇಲೆ ಕುಳಿತೇ ಬಿಟ್ಟಿತು. ಮೊಸಳೆಯು ನೀರಿಗಿಳಿದು ಮುಂದಕ್ಕೆ ನಡೆಯಿತು.
ಅಷ್ಟು ದೂರ ಹೋಗುವುದರೊಳಗಾಗಿ ಆ ಸಮುದ್ರದ ಅಲೆಗಳು ಅಪ್ಪಳಿಸಿದುವು. ಕಪಿಗೆ ಹೆದರಿಕೆಯಾಯಿತು. “ಅಣ್ಣ ಮೆಲ್ಲಮೆಲ್ಲಗೆ ಹೋಗು. ಈ ಅಲೆಗಳ ಏಟು ತಡೆಯಲಾರೆ. ನನ್ನ ಮೈಯೆಲ್ಲ ನೊಂದು ಹೋಯಿತು.” ಎಂದಿತು. ಅದನ್ನು ಹೇಳಿ ಮೊಸಳೆಯು ಯೋಚಿಸಿತು. ನಾವೀಗ ಆಳವಾದ ನೀರಿಗೆ ಬಂದಿರುವೆವು. ಇನ್ನು ಈ ಕಪಿಯು ಹಿಂತಿರುಗುವಂತಿಲ್ಲ. ಸಂಪೂರ್ಣವಾಗಿ ನನ್ನ ವಶವಾಗಿರುವುದು. ಅದರಿಂದ ಏಕೆ ಇದನ್ನು ಮನೆಗೆ ಕರೆದು ಕೊಂಡುಹೋಗುವುದು ಎಂಬುದನ್ನು ಹೇಳಿದರೂ ಚಿಂತೆಯಿಲ್ಲ” ಎಂದುಕೊಂಡು ಕಪಿಗೆ ಹೇಳಿತು. “ಮಿತ್ರ, ಈಗ ನಾವು ಹೋಗುತ್ತಿರುವ ಕೆಲಸವೇ ಬೇರೆ. ನನ್ನ ಹೆಂಡತಿಯು ನಿನ್ನನ್ನು ಕೊಲ್ಲ ಬೇಕೆಂದಿರುವಳು” ಎಂದಿತು.
ಕಪಿಯು ಕೇಳಿತು: “ಅಣ್ಣ, ನನ್ನನ್ನು ಕೊಲ್ಲುವುದಕ್ಕೆ ನಾನು ನಿನಗಾಗಲಿ, ನಿನ್ನ ಹೆಂಡತಿಗಾಗಲಿ ಏನೂ ಅಪರಾಧ ಮಾಡಿಲ್ಲವಲ್ಲ?”
“ಇಲ್ಲ. ನೀನೇನೂ ಅಪರಾಧಮಾಡಿಲ್ಲ. ಅದರೆ ನನ್ನ ಹೆಂಡತಿಗೆ ನಿನ್ನ ಎದೆಯನ್ನು ತಿನ್ನಬೇಕು ಎನ್ನಿಸಿದೆ. ಅಮೃತದಂತಹ ಹಣ್ಣುಗಳನ್ನು ತಿಂದು ತಿಂದು ನಿನ್ನ ಎದೆಯೆಲ್ಲಾ ಅಮೃತ ಕಲಶವಾಗಿ ಹೋಗಿದೆ… ಅದನು ತಿನ್ನಬೇಕು ಎಂದು ಅವಳ ಆಸೆ. ಅದಕ್ಕಾಗಿ ನಿನ್ನನ್ನು ಕರೆದುಕೊಂಡು ಹೋಗುತ್ತಿರುವುದು.”
“ಅಯ್ಯೋ! ಇಷ್ಟೇನೆ? ಈ ಮಾತು ಆಗಲೇ ಅಲ್ಲಿಯೇ ಹೇಳ ಬಾರದಾಗಿತ್ತೇ? ನನ್ನ ಎದೆಯನ್ನು ನಾನು ಇಲ್ಲಿಗೆ ತರಲಿಲ್ಲ. ಅಲ್ಲಿಯೇ ನೇರಿಳೆಯ ಮರದ ಪೊಟ್ಟರೆಯಲ್ಲಿ ಭದ್ರವಾಗಿಟ್ಟಿದ್ದೇನೆ. ಸಂತೋಷವಾಗಿ ಅದನ್ನು ಅತ್ತಿಗೆಗೆ ಒಪ್ಪಿಸುತ್ತೇನೆ. ಎದೆಯೇ ಇಲ್ಲದ ನನ್ನನ್ನು ಇಷ್ಟುದೂರ ಹೊತ್ತು ತಂದೆಯಲ್ಲ ಮತ್ತೆ?”
ಮೊಂಕು ಮೊಸಳೆಯು ಅದನ್ನು ಕೇಳಿ ಮೋಸಹೋಯಿತು : “ಹಾಗೇನು? ಸದ್ಯಕ್ಕೆ ಬದುಕಿದೆ. ಆ ಕೆಟ್ಟ ಹೆಣ್ಣು ನಿನ್ನ ಎದೆಯನ್ನು ತಿನ್ನುವವರೆಗೂ ಮೇಲಕ್ಕೆ ಏಳುವುದೇ ಇಲ್ಲ ಎಂದು ಮಲಗಿ ಬಿಟ್ಟಿದ್ದಾಳೆ. ಪುಣ್ಯಾತ್ಮ, ನಡೆ, ನಿನ್ನನ್ನು ನೇರಿಳೆಯ ಮರದ ಹತ್ತಿರಕ್ಕೆ ಕರೆದುಕೊಂಡು ಹೋಗುತ್ತೇನೆ. ಆ ಎದೆಯನ್ನು ಕೊಡು ಎಂದು ಹಿಂತಿರುಗಿ ತೀರಕ್ಕೆ ಬಂತು. ಕಪಿಯೂ ಕೂಡ ತೀರಕ್ಕೆ ಬರುವವರೆಗೂ ಯಾವಯಾವದೋ ಹರಟೆಗಳನ್ನು ಹರಟುತ್ತಿದ್ದು, ತೀರಕ್ಕೆ ಬರುತ್ತಲೂ ಛಂಗನೆ ಹಾರಿ ಮರವನ್ನು ಏರಿಕೊಂಡು “ಅಬ್ಬ, ಉಳಿಯಿತು. ಪ್ರಾಣ. ಕೇಳಿಲ್ಲವೆ?
ವಿಶ್ವಾಸವಿಲ್ಲದನ ನಂಬದಿರು |
ನಂಬದಿರು ವಿಶ್ವಾಸವಿದ್ದವನನೂ ||
ವಿಶ್ವಾಸವಿದ್ದಯೆಡೆಯಿಂದ ಭಯ |
ಹುಟ್ಟಿದರೆ ಆಗುವುದು ಸರ್‍ವನಾಶ ||೯||
ನಾನು ಈ ದಿನ ಮತ್ತೆ ಹುಟ್ಟಿ ಬಂದಂತಾಯಿತು.” ಎಂದು ಏನೇನೋ ಯೋಚಿಸಿಕೊಳ್ಳುತ್ತ ಕುಳಿತಿರಲು ಮೊಸಳೆಯು “ಮಿತ್ರ ಎಲ್ಲಿ ಆ ಎದೆಯನ್ನು ಕೊಡು ಮತ್ತೆ, ನಿಮ್ಮ ಅತ್ತಿಗೆಯು ಅದನ್ನು ತಿಂದು ಬದುಕಲಿ” ಎಂದಿತು.
ಅದನ್ನು ಕೇಳಿ ಕಪಿಗೆ ಕೋಪ ಬಂತು. ಜೊತೆಯಲ್ಲಿ ಅದರ ಮೊಂಕುತನವನ್ನು ಕಂಡು ನಗುವೂ ಬಂತು. “ಮೂರ್‍ಖ, ವಿಶ್ವಾಸಘಾತುಕ, ಎದೆಯನ್ನು ತೆಗೆದಿಡುವುದು ಯಾರಿಗಾದರೂ ಸಾಧ್ಯವೆ? ಹೋಗು, ಹೋಗು, ಇನ್ನು ಮುಂದೆ ಇತ್ತಕಡೆ ಬಂದು ಗಿಂದೀಯೆ? ಪರೀಕ್ಷೆಮಾಡಿ ಕಳ್ಳನೆಂದು ತಿಳಿದವನನ್ನು ಮತ್ತೆ ನಂಬುವುದು ಎಂದರೆ ಯಮನನ್ನೇ ಬಾಯೆಂದು ಹೇಳಿಕಳುಹಿಸಿದಂತೆ” ಎಂದು ಚೆನ್ನಾಗಿ ಛೀಮಾರಿ ಹಾಕಿತು.
ಮೊಸಳೆಗೆ ಅದನ್ನು ಕೇಳಿ ತನ್ನ ತಪ್ಪು ತಿಳಿಯಿತು: “ನಾನು ಈ ಕೋಡಗಕ್ಕೆ ನನ್ನ ಮನಸ್ಸಿನಲ್ಲಿ ಇದ್ದುದನ್ನು ಹೇಳಬಾರದಾಗಿತ್ತು, ನಾನು ಮೂಢನಾದೆ ಮೋಸಹೋದೆ. ಆದರೂ ಇದಕ್ಕೆ ನಂಬುಗೆಯು ಹುಟ್ಟುವಂತೆ ಏನಾದರೂ ಮಾಡಬೇಕು.” ಎಂದು ಮತ್ತೆ ಹೇಳಿತು. “ಮಿತ್ರ, ನಾನು ಹಾಸ್ಯಕ್ಕೆ ಆಡಿದ ಮಾತೇ ನಿಜವೆಂದು ಕೊಂಡೆಯಲ್ಲಾ? ನನ್ನ ಹೆಂಡತಿಗೆ ನಿನ್ನ ಎದೆಯಿಂದ ಆಗಬೇಕಾದ ಪ್ರಯೋಜನವಾದರೂ ಏನು? ನೀನು ಅತಿಥಿಯಾಗಿ ನಮ್ಮ ಮನೆಗೆ ಬಾ. ನಿಮ್ಮ ಅತ್ತಿಗೆಯು ನಿನ್ನ ಹಾದಿಯನ್ನು ಎದುರು ನೋಡುತ್ತಿರುವಳು” ಎಂದಿತು.
ಕಪಿಗೆ ಇನ್ನೂ ರೇಗಿತು : “ದುಷ್ಟ, ಹೋಗು ಹೋಗು. ನಾನು ಬರುವುದಿಲ್ಲ.” ಕೇಳಿಲ್ಲವೆ?
ಹಸಿದವನು ಮಾಡದಾ ಪಾಪವುಂಟೆ?
ನಿರ್‍ಧನನು ಆದವಗೆ ಕರುಣವುಂಟೆ?
ಹೋಗು ಹೋಗೆಲೆ ಹೆಣ್ಣೆ ತಿರುಗಿ ಹೋಗು,
ಗಂಗದತ್ತನು ಮತ್ತೆ ಬರುವುದುಂಟೆ ||೧೦||
ಮೊಸಳೆಯು “ಅದೇನು” ಎಂದು ಕೇಳಿತು. ಕಪಿಯು ಹೇಳಿತು:-
*****
ಮುಂದುವರೆಯುವುದು



















