ಆವಕರ್ಮದಿ ವಿಧಿಯು ನಿರ್‍ಮಿಪ ದೇಹಗಳ ಕುಂಬಾರನೋಲ್ |
ಆವಕರ್ಮದಿ ಹರಿಯ ಹತ್ತವತಾರಗಳ ತಾ೦ತಾಳಿದಂ ||
ಆವಕರ್ಮದಿ ಹರನು ಜಗಸಂಹಾರಕರ ತಾಂ ನೆನಿವನೋ |
ನಾವು ಕರ್ಮಾಧೀನರೈ ನೇಸರನ ಗಗನದಿ ಚಲಿಪುದೂ || ೧ ||
ರಾಮನನು ಹದಿನಾಲ್ಕು ವರುಷವ ವನಕೆಯಟ್ಟಿತು ಕರ್ಮವು |
ಕಾಮನನು ಹರಕ್ರೊಧದಗ್ನಿಗೆ ಈಡುಮಾಡಿತು ಕರ್ಮವು ||
ವಾಮನನು ತಾ ಬಟುವು ವೇಷದಿ ಬಿಕ್ಕೆಬೇಡಿದ ಕರ್ಮದೋಳ್ |
ಕಾಮಧೇನುವು ಅಗ್ವುದದು ತಾ ರಾಮ ನಾಮವ ಜಪಿಸಲೂ || ೨ ||
ಕರ್ಮ ಭೂಮಿಯು ಜಗವು ನಿತ್ಯವು ಕರ್ಮದಿಂದಲೆ ಸುಖವು ಮನುಜಗೆ
ಧರ್ಮ ಬಿಡದಲೆ ಸರ್ವಕಾಲದಿ ಕರ್ಮವನ್ನು ಆಚರಿಸೆ ||
ಕರ್ಮಪಾಶವೆ ಬಿಸುಟಿ ನರತಾ ನಿತ್ಯ ಸುಖವನು ಪಡೆವಜಗದೊಳೂ |
ಮರ್ಮವಿದನೀ೦ ತಿಳಿದು ನಡೆದೊಡೆ ಸುಖಿಯು ನೀನಯ್ಯಾ || ೩ ||
ಕಂತುಪಿತತಾ ಕು೦ತಿ ಪುತ್ರಗೆ ಕಣದಿ ಪೇಳಿದ ಕರ್ಮದಾ |
ಕ೦ತೆಯನು ವಿಸ್ತರದಿ ನರನಿಗೆ ಹುರುಪುಗುಂದಿದ ಚಣದೊಳೆ ||
ಎಂತು ಕರ್ಮವು ನರಗೆ ಬಂಧನಕಾರಿಯಪ್ಪುದು ಜಗದೊಳೂ |
ಸಂತತಂ ಕರ್ಮದೊಳೆ ದೇಹಿಯು ಪಡೆವನಿಹ ಪರ ಸುಖಗಳಾ || ೪ ||
ಕರ್ಮಯೋಗಿಯು ಕರ್ಮಚಂದನ ಸುತನು ಮೋಹನ ಗಾ೦ಧಿಯು |
ಧರ್ಮದಿಂದಲೆ ನಡೆದು ಜಗದೊಳು ಕರ್ಮಮಹತಿಯ ಬೀರಿದ ||
ನರ್ಮಮಾಡಿದ ನಾ೦ಗ್ಲ ರಾಜ್ಯದ ಶಕಟನೆತ್ತರವನ್ನು ಕೆಡಹದೆ |
ಕರ್ಮ ಚಕ್ರವು ಭಾರತಾಂಬೆಗೆ ಭಾಗ್ಯಲಕುಮಿಯ ತೋರಿತು || ೫ ||
ದುಟ್ಟಗ್ರಹಗಳ ಕತದಿ ಕೆಮ್ಮನೆ ದುಟ್ಟನೋರ್ವನು ಶ್ರೇಷ್ಟ ಗಾಂಧಿಯ |
ನಟ್ಟಿದನು ಯಮಸದಕೆ ಭಾರತ ಸೌಖ್ಯವನು ಕಿಡಿಸಿ ||
ಕೆಟ್ಟ ಜನಗಳು ಶ್ರೇಷ್ಠ ಪುರುಷರು ಪಟ್ಟಿ ಸಾಹಸವನ್ನು ಗಣಿಸದೆ |
ಬಿಟ್ಟು ಲಜ್ಜೆಯ ತುಚ್ಛ ಕಾರ್ಯಕೆ ಮನವನಳಿಸುವರೂ || ೬ ||
ಚಿಂತೆಮಾಡಿದಡೇನು ಲಭಿಪುದು ಶಾ೦ತ ಚಿತ್ತದಿ ಕೇಳು ನಭದೋಳು |
ನಿಂತು ಬೋಧಿಪ ಗಾಂಧಿಕರ್ಮವ ಮಾಡಿಮಡಿಯ೦ದೂ |
ಇಂತು ಬೋಧಿಪ ಗಾಂಧಿಮಂತ್ರವ ಪಠಿಸಿ ಭಾರತ ಪಡೆದುಧೈರ್ಯವ
ಕಂತು ಪಿತನಿಚ್ಛೆಯಲಿ ನಡೆಯುತೆ ಮುಂದೆಸಾರುವುದೂ || ೭ ||
ಇಂದು ನಮ್ಮಯದೈವಗತಿಯಿಂ ತುಂಡು ಹೊ೦ದಿತು ನಮ್ಮ ದೇಶವು |
ಹಿಂದು ಮುಸ್ಲಿಮರೊಂದು ಕೂಡದೆ ಕದನಗೈಯ್ಯುತಲಿ ||
ಎಂದಿಗೂ ವಡಗೂಡಿಬಂದಿಹ ಬಂಧುಗಳು ಹಗೆತನದಿ ಮಡಿದರು |
ಹಿ೦ದೆ ಯಾದುದ ಮರೆತು ಜನಗಳನೊ೦ದು ಗೂಡಿಪುದೂ || ೮ ||
ಚಂದ್ರ ಮಂಡಳದೊಳಗೆ ಹೊಳೆವಾ ಚ೦ದತಾರಕೆ ಗಾಂಧಿ ಜೋತಿಯ |
ಹೊಂದಿನಡೆವುದು ಮುಂದೆ ಕೈದೀವಟಿಗೆ ನಮಗಿರಲೂ ||
ಹಿಂದು ಮುಸ್ಲಿಮ ಕ್ರೈಸ್ತ ಬುದ್ದರು ಬ೦ಧುಗಳು ತಾವೆಂದು ತಿಳಿಯುತೆ |
ವಂದುಗೂಡಲು ಗಾ೦ಧಿಶಾ೦ತಿಯ ಹೊಂದಿ ನಲಿಯುವನೂ || ೯ ||
ನಡುಗುವಳು ಭೂಮಾತೆ ದುರುಳರ ತುಳಿತದಿಂದತಿಶಯದಿ ಜಗದೊಳು |
ಗುಡುಗು ಮಿಂಚಿನ ತೆರದಿ ಮುತ್ಸದ್ಧಿಗಳು ಸ್ವಾರ್ಥದಲಿ ||
ಬಿಡದೆ ಬುದ್ದಿಯ ಕಿಡಿಸಿವಿಶ್ವದಿ ರಾಷ್ಟ್ರರಾಷ್ಟ್ರದಿ ಒಡಕು ಬೀರುತೆ |
ಸುಡುವರೈ ಪೂರ್ವಜರುಗಳಿಸಿದ ಶಾಂತಿ ಸಾಮ್ರಾಜ್ಯಾ || ೧೦ ||
ಜಗವೆ ತಾನಾಗಿಹುದು ಪೂರ್ವದಿ ಕುರುಗಳಾಡಿದ ಯುದ್ಧಭೂಮಿಯು |
ಸೊಗಸಿನಿಂದಲಿ ಹರಿಯುಸಾರಥಿ ಗಾಂಧಿ ರೂಪದೊಳೂ ||
ಮೊಗವ ನೀಕ್ಷಿಪನರಗೆ ತಾನತಿ ಕರುಣೆಯಿಂ ಜವಹಿರಗೆ ಬೋಧಿಪ |
ಖಗದರೂಪದ ಗಾಂಧಿವಕ್ಕಿಯು ಕರ್ಮ ಮಹತಿಯನೂ || ೧೧ ||
ಹೊಂದಿಸ್ಫೂರ್ತಿಯ ಗಾಂಧಿಯಿಂ ಜವಹಿರನು ಸಮರದಿ ದೈರ್ಯದಿಂದಲಿ |
ಮುಂದೆ ನಡೆದಿಹ ದುಷ್ಟ ನಿಗ್ರಹ ಶಿಷ್ಟ ಪಾಲನೆಗೆ ||
ಇ೦ದು ಕಾಶ್ಮೀರ ಕದನದೊಳ್ಪಾಕಿಗಳು ನಮ್ಮೊಡೆ ಸಂಧಿಗೈಯ್ಯಲು |
ಬಂದು ತಮ್ಮಹ ಸ್ನೇಹ ಹಸ್ತ ನ ಮುಂದೆ ಚಾಚುವರೂ || ೧೨ ||
ರಾಜ ಸಾಗ್ರಣಿರಜವಿ ರಕ್ಕಸ ರಾಜಸೂತ್ರವ ಶೆಳೆದು ದೊರೆಯಿಂ |
ರಾಜ್ಯದೊಳ್ಕೊಲೆ ಸುಲಿಗೆ ಪಾತಕಗೈಯ್ಯಲಾಚಣದಿ ||
ರಾಜಕಾರಣ ಕುಶಲ ವಲ್ಲಭ ಮಂತ್ರಿ ಕಳುಹಿದ ಸೈನ್ಯ ನೆರವಿಗೆ |
ರಾಜ್ಯ ಸೂತ್ರವಕೊಂಡು ಜನತೆಗೆ ಶಾಂತಿಯನ್ನು ನೀಡಿದನೂ || ೧೩ ||
ರಾಜ್ಯ ಮುಕುಟನು ರಾಜಹಸದನು ರಾಜಕಾರ್ಯದಿ ನುರಿತಮುದುಕನು |
ರಾಜ್ಯ ಶಕಟದ ಭಾರವನು ತಾನೆಗಹಿ ನಿಂತಿಹನೂ ||
ರಾಜ್ಯ ಸಾಮ್ರಾಜ್ಯಗಳ ನಡುವಣ ಸ್ನೇಹಬೆಳಿಸಲುಜಾಳನೀಡುತೆ
ರಾಜ್ಯ ದೊಳ್ಳಾಂತಿಯನು ನೆಲಿಸಲು ಸತತ ದುಡಿಯುವನೂ || ೧೪ ||
ಅಜದ ನಜ್ಜನು ಬಿಜ್ಜೆ ಪ್ರವಹಣ ನಡೆಸುತಿರ್ಪನು ಸರುವದಿಶೆಯಲಿ |
ರಜವನವ ತಾನೆಂದು ಬಯಸನು ಕರ್ಮಗುಂಗಿನಲಿ ||
ಮಝರೆ ಮುದುಕನೆ ನಿನಗೆ ಮುಪ್ಪಿಲಿಹರೆಯುಬಂದಿದೆ ಗಾಂಧಿದಯೆಯಿಂ
ರಜತಧವಳದ ಕೀರ್ತಿ ಬೆಳಗಲಿ ನಿನ್ನ ಮೂಜಗದೀ || ೧೫ ||
ಬಿಳಿಮರಪ್ಪಗಳೆಲ್ಲ ಪ್ರೇಮದಿ ಬಿಡಲು ಭಾರತ ರಾಜ್ಯ ಸೂತ್ರವ |
ಕರಿಯನಪ್ಪನು ಕೊಡಗಿನವ ಸೇನೆಗಳ ಕಡಿವಾಣಾ ||
ವಲೆದು ಕೈಯ್ಯೊಳು ಧರಿಸಿ ನಡೆಸುವ ಸೇನೆಸಾಗರವೆಂಟುದಿಶೆಯಲಿ |
ಒಲವು ಕುಗ್ಗದೆ ಭೂಜಲಾಕಾಶದಲಿ ಮೆರೆಯುವನು || ೧೬ ||
ಮೇಟಿಯಣ್ಣನ ದೈವ ತೆರೆಯಿತು ರಾಟಿಚಕ್ರವ ತಿರುವಿ ಬಿಡುವಿಲಿ |
ಕೋಟಿಜನಕಾಹಾರವನು ನೀ೦ ಬೆಳೆದು ಕೊಡಬೇಕು ||
ರಾಟಿಸೂತ್ರದಿ ನೂಲು ತೆಗೆಯುತೆ ಮಾಟ ಮಗ್ಗದಿ ನೇಯ್ದು ವಸ್ತ್ರವ |
ಥಾಟಿನಿ೦ದಲಿ ಮೆರಿಸೊ ನಿನ್ನಯ ದೇಶಬಾಂಧವರ || ೧೭ ||
ಸಿಂದಿ ಶೆರೆಮೊದಲಾದ ಮಾದಕವಿ೦ದು ಶಾಸನಬ೦ದು ಕೆಡಹುದು |
ಬ೦ದ ದುಡ್ಡಿಲಿ ಸುಖದ ಬಾಳುವೆ ಜನತೆಗೈಯ್ಯುವುದು ||
ಅಂದ ಚಂದದ ವಸ್ತ್ರ ಮೋಹದಿ ದುಂದು ಮಾಡದೆಹಣವನುಳಿಸುತೆ |
ಚಂದದ ಬಾಳುವೆಯು ನಮ್ಮದು ಮು೦ದೆ ಜಗದೊಳಗೇ || ೧೮ ||
ನಮ್ಮದಿದ್ದಿತು ಉಚ್ಚ ಸಂಸ್ಕೃತಿ ನಮ್ಮನಾಡಿದು ದೇವಬೀಡಿದು |
ನಮ್ಮದನು ನಾವ್ಬಿಟ್ಟು, ಹೆರವರ ಮೊಹಕೊಳಗಾಗಿ ||
ನಮ್ಮದಲ್ಲದ ಬಯಸಿ ಕುಣಿದೆವು ನಮ್ಮ ಸಂಸ್ಕೃತಿ ನಾವು ಮರೆತೆವು |
ನಮ್ಮ ನಾಡಿಗೆ ಶ್ರೇಯತರುವದು ನಮ್ಮದೆಂದೆಂದೂ || ೧೯ ||
ನಮ್ಮನಾಯಕ ಬಾಪು ಗಾ೦ಧಿಯ ಕಮ್ಮತತ್ವವ ಜಗದಿಬೀರಲು |
ನಮ್ಮನಿಮ್ಮೆಂಬಗಳ ಭೇದವು ಅಳಿದು ಹೋಗುವದೂ ||
ಬೊಮ್ಮ ನಿರ್ಮಿತ ವಿಶ್ವವೆಲ್ಲವು ಹೆಮ್ಮೆಯಿಂಮೆರೆದಪುದು ಸಂತತ |
ನಮ್ಮದಿದು ಮಾನವ ಕುಟುಂಬವು ನಿತ್ಯಶಾಶ್ವತವೂ ||೨೦||
*****

















