ಕಾಡಿಗೆ ಹೋದೆನು ಕನಸಿನಲಿ
ಒಯ್ದಿತು ನನ್ನನು ಪಟ್ಟೆಹುಲಿ
ಸೊಂಡಿಲಿನಲಿ ತಣ್ಣೀರನು ತಂದು
ಆನೆಯು ಜಳಕವ ಮಾಡಿಸಿತು
ಮರಗಳು ನೀಡಿದ ಹಣ್ಣುಗಳನ್ನು
ಸಿಂಹವು ಊಡಿಸಿತು.
ಹಂಸಗಳೆಲ್ಲಾ ಹಾಸಿಗೆ ಮಾಡಿ
ಹಕ್ಕಿಗಳೆಲ್ಲಾ ಹಾಡನು ಹಾಡಿ
ಹೊಲಗಳು ಕತೆಯನು ಹೇಳಿದವು
ನಿಮ್ಮೂರಿನ ಮಳೆ ಬೆಳೆ ಹೇಗೆಂದು
ನರಿಗಳು ಕೇಳಿದವು
ಗಾಳಿಯ ಹಾಕಿತು ನವಿಲಿನ ಹಿಂಡು
ಇದನೆಲ್ಲಾ ನನ್ನಪ್ಪನು ಕಂಡು
ಕೈಯಲಿ ಛಡಿಯನು ಹಿಡಿದೇ ಬಂದು
“ನನ್ನನು ಕೇಳದೆ ಯಾತಕೆ ಬಂದೆ ?
ಎಂದಬ್ಬರಿಸಲು ಹೆದರಿಕೆಯಿಂದೆ
ಪ್ರಾಣಿಗಳೆಲ್ಲಾ ಓಡಿದವು
ದೂರದಿ ಗವಿಯಲಿ ಸುಮ್ಮನೆ ನಿಂತು
ಅಪ್ಪನ ನೋಡಿದವು
ಬೆನ್ನಿಗೆ ಛಡಿಗಳು ಬೀಳಲು ಅಯ್ಯೋ
ಅಯ್ಯೋ ಎಂದತ್ತೆ
ಎಚ್ಚರವಾಯಿತು. ಆಪ್ಪನು ಇಲ್ಲ!
ಕಾಡಿಗೆ ಹೋಗಲು ಆಗಲೆ ಇಲ್ಲ
ಎಂದೆಂದೂ ಮತ್ತೆ.
*****

















