ಚಿತ್ರ: ಅಪೂರ್ವ ಅಪರಿಮಿತ
ಚಿತ್ರ: ಅಪೂರ್ವ ಅಪರಿಮಿತ

ಪ್ರಿಯ ಸಖಿ,

ಶಾಲೆಯಲ್ಲಿ ಪಾಠ ಕಲಿಸುವವರನ್ನು ತಾವು ಶಿಕ್ಷಕರೆನ್ನುತ್ತೇವೆ. ಹಾಗೇ ಬದುಕಿನ ಪಾಠಗಳನ್ನು ಕಲಿಸುವವರು ಗುರುಗಳಾಗುತ್ತಾರೆ. ಹೀಗಾಗಿಯೇ ಶಿಕ್ಷಕರೆಲ್ಲರೂ ಗುರುಗಳಾಗಲು ಸಾಧ್ಯವಿಲ್ಲ. ಶಿಕ್ಷಕ, ಬುದ್ಧಿಗೆ ಕಸರತ್ತು ನೀಡುವ ಜ್ಞಾನವನ್ನು ತುಂಬುವ ವಿದ್ಯೆಯನ್ನು ಹೇಳಿಕೊಡುತ್ತಾನೆ. ಆದರೆ ಗುರು ಮನಸ್ಸನ್ನು ಅರಳಿಸುವ, ಆತ್ಮೋನ್ನತಿಯೆಡೆಗೆ ಕರೆದೊಯ್ಯುವ ವಿವೇಕವನ್ನು ಎಚ್ಚರಿಸುತ್ತಾನೆ. ಹೀಗಾಗಿಯೇ ಶಿಕ್ಷಕ ಹೇಳಿಕೊಟ್ಟ ಭೌತಶಾಸ್ತ್ರ, ಗಣಿತ, ಸಮಾಜಶಾಸ್ತ್ರ ನಮಗೆ ಮರೆತು ಹೋದರೂ ಗುರುಗಳು ಹೇಳಿಕೊಟ್ಟ ವಿವೇಕದ ಪಾಠ ಮರೆಯುವುದಿಲ್ಲ.

ಸಖಿ, ನೀನು ಯೋಚಿಸುತ್ತಿರಬಹುದು, ಬದುಕಿನ ಪಾಠ ಕಲಿಸುವ ಇಂತಹ ಗುರುಗಳು ಯಾರು ಎಂದು ನಿಜ, ಅಂತಹ ಆದರ್ಶ ಗುಣಗಳು ಎಲ್ಲ ವ್ಯಕ್ತಿಗಳಲ್ಲೂ ಇದೆ. ಆದರೆ ಅದನ್ನು ಕಾಣುವ ಕಣ್ಣು ನಮಗಿರಬೇಕು. ಆಗ…. ತನ್ನ ಕೆಲಸಕ್ಕೆ ಒಂದು ದಿನವೂ ಚಕ್ಕರ್ ಹೊಡೆಯದೇ ಸಮಯಕ್ಕೆ ಸರಿಯಾಗಿ ಬಂದು ಕಾಲೇಜಿನ ಬಾಗಿಲು ತೆರೆಯುವ ಕಾಲೇಜಿನ ಜವಾನ ಗಂಗಯ್ಯನ ಕರ್ತವ್ಯ ಪ್ರಜ್ಞೆ ಸಮಯ ಪರಿಪಾಲನೆಯಲ್ಲೂ ಗುರುವನ್ನು ಕಾಣಲು ಸಾಧ್ಯ.

ಸಾಲವಾಗಿ ತೆಗೆದುಕೊಂಡು ಹೋಗಿದ್ದ ಹತ್ತು ರೂಪಾಯಿಯನ್ನು ಹೇಳಿದ ದಿನ ಸರಿಯಾಗಿ ಹಿಂತಿರುಗಿಸುವ ಜಾಡಮಾಲಿಯ ಪ್ರಾಮಾಣಿಕತೆಯಲ್ಲೂ ಗುರುವನ್ನು ಕಾಣಲು ಸಾಧ್ಯ. ತನ್ನ ಶೋಷಣೆಯ ವಿರುದ್ಧ ಸದಾ ಹೋರಾಡುವ ಕೆಲಸದಾಳು ಮೇರಿಯಮ್ಮನ ಅಂತ್ಯದಲ್ಲೂ ಗುರುವನ್ನು ಕಾಣಲು ಸಾಧ್ಯ. ನೀನು ಮಾತ್ರ ಸುಳ್ಳು ಹೇಳಬಹುದು. ನಾನು ಮಾತ್ರ ಹೇಳಬಾರದು ಎನ್ನುತ್ತೀಯಲ್ಲಾ ? ಎಂದು ಮುಗ್ಧವಾಗಿ ಪ್ರಶ್ನಿಸುವ ಮಗುವಿನ ಸತ್ಯದ ಮಾತಿನಲ್ಲೂ ಗುರುವನ್ನು ಕಾಣಲು ಸಾಧ್ಯ. ನಾವು ಗಡಿಬಿಡಿಯಲ್ಲಿ ಹೆಚ್ಚಾಗಿ ಕೊಟ್ಟಿದ್ದ ಹಣವನ್ನು ಹಿಂತಿರುಗಿಸುವ ತರಕಾರಿ ಮಾರುವವನ ಪ್ರಾಮಾಣಿಕತೆಯಲ್ಲೂ ಗುರುವನ್ನು ಕಾಣಲು ಸಾಧ್ಯ.

ಈ ಕಾಲದಲ್ಲಿ ನಮಗೆ ಯಾವ ಆದರ್ಶ ವ್ಯಕ್ತಿಯೂ ಕಾಣಸಿಗುವುದಿಲ್ಲ ಎಂದು ಗೊಣಗುತ್ತಿರುತ್ತೇವೆ. ಆದರೆ ತಮ್ಮ ಸಣ್ಣ ಸಣ್ಣ ಕೆಲಸದಲ್ಲೂ ಆದರ್ಶ ಗುಣಗಳನ್ನು ಹೊಂದಿರುವ ನಮಗೆ ನಿತ್ಯ ಪಾಠ ಕಲಿಸುವ ಗುರುಗಳು ನೂರಾರು ಜನರು ಕಾಣಸಿಗುತ್ತಾರೆ. ಅವರನ್ನು ಗುರುಗಳೆಂದು ನಾವು ಪೂಜಿಸಬೇಕಿಲ್ಲ. ಆದರೆ ಅವರಿಂದ ಬದುಕಿನ ಪಾಠಗಳನ್ನೂ, ನೈತಿಕ ಮೌಲ್ಯಗಳನ್ನೂ, ವಿವೇಕವನ್ನೂ, ವೈಚಾರಿಕ ಪ್ರಜ್ಞೆಯನ್ನು ಕಲಿತು, ಬೆಳೆಸಿಕೊಂಡು, ರೂಢಿಸಿಕೊಂಡರೆ ಅದಕ್ಕಿಂತ ಸಾರ್ಥಕತೆ ಬೇರೇನಿದೆ ?

ಸಖಿ, ಸಣ್ಣ ವ್ಯಕ್ತಿಗಳಲ್ಲೂ, ಸಣ್ಣ ಸಂಗತಿಗಳಲ್ಲೂ, ಸಣ್ಣ ಘಟನೆಗಳಲ್ಲೂ ನಾವು ಸದಾ ಗುರುಗಳನ್ನು ಕಾಣಬಹುದು ಪಾಠಗಳನ್ನು ಕಲಿಯಬಹುದು. ಇಂತಹ ಗುರುಗಳನ್ನು ಕಾಣಲು ಮನಸ್ಸನ್ನು ಇಂದಿನಿಂದಲೇ ತೆರೆದಿಡೋಣ ಆಲ್ಲವೇ ? ನಿನ್ನ ಬದುಕಿನಲ್ಲೂ ಇಂತಹ ಗುರುಗಳು ಅನೇಕರಿರಬಹುದಲ್ಲವೇ ? ನೆನಪಾದರೆ ಮರೆಯದೇ ತಿಳಿಸು.
*****